ವರ್ಷ ಋತು
ಬಸವರಾಜ ಶಿವಪ್ಪ ಶಿರಂಗಾವಿ
ಭಾರತದಲ್ಲಿ ಶೇ. ೭೦ರಷ್ಟು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜೀವನಾಧಾರವಾಗಿರುವ ಕೃಷಿ ಕ್ಷೇತ್ರದ ಸುಧಾರಣೆಗೆ ಮಳೆಯ ಅವಶ್ಯಕತೆ ತುಂಬಾ ಇದೆ. ಮಳೆಯನ್ನು ನಿಯತವಾಗಿ ಪಡೆಯಲು ಅಸಂಖ್ಯಾತ ಗಿಡ-ಮರಗಳನ್ನು ನೆಟ್ಟು ಪೋಷಿಸಿ ಉಳಿಸುವ ಮಹತ್ಕಾರ್ಯವನ್ನು ಮಾಡಲೇಬೇಕಾಗಿದೆ.
ನೀರು ಪ್ರತಿಯೊಂದು ಪ್ರಾಣಿ ಮತ್ತು ಸಸ್ಯಕ್ಕೆ ಅತ್ಯವಶ್ಯವಾಗಿ ಬೇಕಿರುವ ವಸ್ತು. ಈ ಭೂಮಿ ಮೇಲಿನ ಪ್ರತಿ ಜೀವಿಗೂ ಸಾಕಾಗು ವಷ್ಟು ನೀರನ್ನು ಪರಮಾತ್ಮ ಕರುಣಿಸಿದ್ದಾನೆ. ಆದರೆ ಇಂದು ಮನುಷ್ಯನ ಕರಾಳತೆ-ಕಪಟತನದಿಂದಾಗಿ ಪರಿಸರ ಹಾಳಾಗು ತ್ತಿರುವ ಪರಿಣಾಮ ಈ ಅಮೂಲ್ಯವಸ್ತು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ಶುದ್ಧನೀರನ್ನು ಖರೀದಿಸಿ ಉಪಯೋಗಿಸಬೇಕಾಗಿ ಬಂದಿರುವುದು ದುರಂತ.
ಹಲವು ಪ್ರಕಾರದ ನೀರುಗಳಲ್ಲಿ ಮಳೆನೀರು ಮಾತ್ರವೇ ಅತ್ಯಂತ ಪವಿತ್ರ, ಶಕ್ತಿಯುತ ಮತ್ತು ಶುದ್ಧ ಎನಿಸಿಕೊಂಡಿದೆ. ‘ಮಳೆಯೆಂಬುದು ಮಾಯಾಂಗನೆ’ ಎನಿಸಿದರೂ, ಪ್ರತಿಯೊಂದು ಜೀವರಾಶಿಯೂ ಆರೋಗ್ಯಯುತವಾಗಿ ಬದುಕಲು ಮತ್ತು ಪರಿಸರದ ಸ್ವಚ್ಛತೆ-ಸಂರಕ್ಷಣೆಗೆ ಮಳೆಯ ಅವಶ್ಯಕತೆ ಇದ್ದೇ ಇದೆ. ನಿರೀಕ್ಷೆಯಂತೆ ಇಳೆಗೆ ಮಳೆ ಬಾರದಿದ್ದರೆ ಅನಾರೋಗ್ಯ, ಅನಾಹುತ, ಅರಾಜಕತೆ ಮತ್ತು ಅಪರಾಧ ಕಟ್ಟಿಟ್ಟಬುತ್ತಿ. ಮಳೆಯು ಅನಿಶ್ಚಿತವಾದರೂ ಅದರ ಅವಲಂಬನೆ ಮಾತ್ರ ಸದಾಕಾಲ ಬೆಟ್ಟದಷ್ಟಿರು ತ್ತದೆ.
ಆದರೆ ಮಳೆಯ ಬರುವಿಕೆಗೆ ಅನುಸರಿಸಬೇಕಾದ ಮಾನದಂಡಗಳ ಪಾಲನೆಯ ವಿಷಯದಲ್ಲಿ ಮಾತ್ರ ಎಲ್ಲರದ್ದೂ ಶೂನ್ಯ ಸಂಪಾದನೆಯಾದರೆ, ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಸರಕಾರಿ ಆಡಳಿತ ಯಂತ್ರವು ಕೈಚೆಲ್ಲಿ ಕುಳಿತಿದೆ. ಕೃಷಿ, ಆರ್ಥಿಕ, ಸಾಮಾಜಿಕ, ರಾಜಕೀಯ, ಔದ್ಯೋಗಿಕ ಹೀಗೆ ವಿಶ್ವದ ಎಲ್ಲ ಕ್ಷೇತ್ರಗಳು ನಿಸರ್ಗವನ್ನೇ ಅವಲಂಬಿಸಿರುವುದು ಸುಳ್ಳೇನಲ್ಲ. ನಿಸರ್ಗದಲ್ಲಾಗುವ ಏರುಪೇರು ಗಳಿಂದ ಈ ಎಲ್ಲ ಕ್ಷೇತ್ರಗಳು ಒಮ್ಮೆಲೇ ನಷ್ಟವನ್ನು ಅನುಭವಿಸುತ್ತವೆ ಎಂಬುದು ಜಗಜ್ಜಾಹೀರು. ಹೀಗೆ ವಿಶ್ವದ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗೆ ಕಾರಣವಾಗಿರುವ ನಿಸರ್ಗದ ಸಂರಕ್ಷಣೆಗೆ ಬಹುತೇಕರು ದೃಢಮನಸ್ಸಿನಿಂದ
ಸಿದ್ಧರಾಗದಿರುವುದು ದುರಂತ.
Read E-Paper click here
ಪ್ರಚಾರ ಗಿಟ್ಟಿಸಲು ಕಾಗದದಲ್ಲಿ ಮಾತ್ರ ಕಾಟಾಚಾರಕ್ಕೆ ಪರಿಸರ ಸಂರಕ್ಷಣೆಯಾಗುತ್ತಿದೆ. ಹೀಗಾಗಿ ನಿಸರ್ಗವು ನಿತ್ಯಸ್ನೇಹಿಯಾಗಿರದೆ
ವಿರೋಧಿಯಾಗುತ್ತ ಅನಿಶ್ಚಿತತೆಯ ಪರಮಾವಧಿಯನ್ನು ತಲುಪುತ್ತಿದೆ. ಕರ್ನಾಟಕದಲ್ಲಿಂದು ಭೀಕರ ಬರಗಾಲವಾದರೆ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ತೀವ್ರ ಪ್ರವಾಹದಂಥ ನೈಸರ್ಗಿಕ ವಿಕೋಪಗಳನ್ನು ಕಾಣುತ್ತಿದ್ದೇವೆ. ಭಾರತವು ಸಮಶೀ ತೋಷ್ಣ ವಲಯದಲ್ಲಿದ್ದರೂ ಪ್ರಕೃತಿ ವಿಕೋಪಗಳು ಪದೇಪದೆ ಸಂಭವಿಸುತ್ತಿವೆ. ಇಷ್ಟಾದರೂ ಮಾನವ ಬುದ್ಧಿ ಕಲಿಯದಿರು ವುದು ಕಳವಳಕಾರಿ.
ವಿಜ್ಞಾನ-ತಂತ್ರಜ್ಞಾನಗಳಿಂದು ಸಾಕಷ್ಟು ಮುಂದುವರಿದಿದ್ದರೂ, ವಿಶ್ವದೆಲ್ಲೆಡೆ ಪರಿಣಾಮಕಾರಿಯಾಗಿ ಮಳೆಯನ್ನು ಹಿಡಿದಿಟ್ಟು ಕೊಳ್ಳಲು ಮತ್ತು ಬೇಕೆಂದಾಗ ಕರೆತರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ನಿಸರ್ಗದ ಪ್ರಯೋಜನ ಸರಿಯಾಗಿ ದಕ್ಕಬೇಕೆಂದರೆ ಪರಿಸರದ ಸಂರಕ್ಷಣೆಯು ಅಷ್ಟೇ ಪ್ರಮುಖ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಕೃತಿಯ ಸಂರಕ್ಷಣೆ ತಪ್ಪಿದಾಗ ಸಂಭವಿಸುವ ಹಾಹಾಕಾರಕ್ಕೆ ಎಷ್ಟೇ ಹಣ ವ್ಯಯಿಸಿದರೂ ಪರಿಹಾರ ಮಾತ್ರ ಅಸಾಧ್ಯವಾಗುತ್ತದೆ.
ಕೃಷಿಕ್ಷೇತ್ರವು ಕಾಲಕಾಲದ ಹವಾಮಾನ ಮತ್ತು ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ. ಮಳೆ ನೀರಿನಲ್ಲಿ ಸಕಲ ಖನಿಜಗಳು ಹೇರಳವಾಗಿರುವುದರಿಂದ ಕೃಷಿಯ ಸುಸ್ಥಿರ ಬೆಳವಣಿಗೆ ಸಾಧ್ಯವಾಗುತ್ತದೆ;ಆದರೆ ಸರಿಯಾಗಿ ಮತ್ತು ಸಾಮೂಹಿಕವಾಗಿ ನಿಸರ್ಗ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಕೃಷಿಯ ಬೆಳವಣಿಗೆಯೂ ಅಸಾಧ್ಯ ಎಂಬುದನ್ನು ಮರೆಯಬಾರದು. ನಿಸರ್ಗದ ಕುರಿತಾದ ಕಾಳಜಿಯ ಕೊರತೆಯಿಂದಾಗಿ ವಿಶ್ವದ ಹಲವು ಭಾಗಗಳಲ್ಲಿ ಬಹುವಾರ್ಷಿಕ ಬೆಳೆಗಳು ಮಾಯವಾಗುವ ಅಪಾಯವಿದೆ.
ನಮ್ಮ ಪೂರ್ವಜರು ಮಳೆಗಾಲದ ಅವಧಿಯನ್ನು ಋತುಮಾನಕ್ಕನುಗುಣವಾಗಿ ಒಂದು ನಿರ್ದಿಷ್ಟ ಅವಧಿಗೆ ಸೀಮಿತಗೊಳಿಸಿ ದ್ದರು. ನಮ್ಮ ದೇಶದಲ್ಲಿ ಆಗಿಹೋದ ಸಂತ-ಮಹಾಂತರು, ಸಾಧು-ಸ್ವಾಮಿಗಳು, ಋಷಿ- ಮುನಿಗಳು ಶ್ರೇಷ್ಠ ಕೃಷಿಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದ ಪರಿಣಾಮ ಭಾರತವು ಶತಮಾನಗಳಾಚೆ ಸುಭಿಕ್ಷೆಯ ನಾಡಾಗಿತ್ತು. ಹಿಂದಿನ ಕಾಲದಲ್ಲಿದ್ದ ಕೃಷಿಯು ಸಂಪೂರ್ಣವಾಗಿ ರಾಸಾಯನಿಕರಹಿತವಾಗಿತ್ತು ಮತ್ತು ನಿಸರ್ಗನಾಶವನ್ನು ತಡೆಯಲು ವಿಶೇಷ ಒತ್ತು
ನೀಡಲಾಗಿತ್ತು. ಹೀಗಾಗಿ ಮಳೆಗಾಲ ಸೇರಿದಂತೆ ಇನ್ನಿತರ ಕಾಲಗಳು ಋತುಮಾನಕ್ಕನುಗುಣವಾಗಿ ನಿಗದಿ ಪಡಿಸಿದ ಅವಧಿಯಲ್ಲಿಯೇ ಸಂಭವಿಸುತ್ತಿದ್ದವು.
ಆದರೆ ಪ್ರಸ್ತುತ ಭಾರತದಲ್ಲಿ ಮಳೆ ಎಂಬುದು ಅನಿಶ್ಚಿತವಾಗಿದೆ. ಕಾರಣ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಮರಗಳ
ಮಾರಣಹೋಮ, ಅರಣ್ಯ ನಾಶ, ಪರಿಸರ ನಾಶ, ರಾಸಾಯನಿಕಗಳ ಯಥೇಚ್ಛ ಬಳಕೆ ಮುಂತಾದ ನಿಸರ್ಗ ವಿರೋಧಿ ಚಟುವಟಿಕೆಗಳಿಂದ ಪ್ರಕೃತಿಯು ಮುನಿಸಿಕೊಳ್ಳುತ್ತಿದೆ. ಇಂಥ ಬೆಳವಣಿಗೆಗಳಿಂದಾಗಿ ಹವಾಮಾನ ಸಂಬಂಧಿತ ನಿಖರ ಮುನ್ಸೂಚನೆಯು ಹವಾಮಾನತಜ್ಞರ ಅಂದಾಜಿಗೂ ನಿಲುಕುತ್ತಿಲ್ಲ.
ಇವೆಲ್ಲದರ ಪರಿಣಾಮ, ೫,೦೦೦ ವರ್ಷಗಳ ಇತಿಹಾಸ ಹೊಂದಿರುವ ಮತ್ತು ವಿಶ್ವಕ್ಕೆ ಕೃಷಿಪಾಠ ಹೇಳಿಕೊಟ್ಟಿರುವ ಭಾರತದ ಕೃಷಿಕ್ಷೇತ್ರವು, ಬಹುತೇಕ ಕೃಷಿಕರ ಪಾಲಿಗೆ ನಷ್ಟದ ಅನುಭವವನ್ನು ನೀಡುವಂತಾಗಿದೆ. ಇದು ಭಾರತೀಯರ ದುರ್ದೈವವೇ ಸರಿ. ಇಂದು ನಾವು ಚೆಲ್ಲುತ್ತಿರುವಷ್ಟು ಪ್ಲಾಸ್ಟಿಕ್ ಹಾಗೂ ಕಸವನ್ನು ಹಿಂದೆ ನಮ್ಮ ಪೂರ್ವಜರೂ ಚೆಲ್ಲಿದ್ದಿದ್ದರೆ, ಇಂದಿನ ಪೀಳಿಗೆಗೆ ಬದುಕಲೂ ಕಷ್ಟವಾಗುತ್ತಿತ್ತು. ‘ಹಾಗಾದರೆ ಸದ್ಯ ನಮ್ಮ ನಡುವೆ ವ್ಯಾಪಿಸಿರುವ ಪ್ಲಾಸ್ಟಿಕ್ ಸಾಮ್ರಾಜ್ಯವನ್ನು ಗಮನಿಸಿದಲ್ಲಿ
ಮುಂದಿನ ತಲೆಮಾರಿನ ಗತಿಯೇನು?’ ಎಂದು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕಿದೆ.
ಕೃಷಿಪ್ರಧಾನ ರಾಷ್ಟ್ರವಾಗಿರುವ ಭಾರತದಲ್ಲಿ ಶೇ. ೭೦ರಷ್ಟು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೃಷಿಯೇ ಜೀವನಾಧಾರ ವಾಗಿರುವುದರಿಂದ ಕೃಷಿ ಕ್ಷೇತ್ರದ ಸುಧಾರಣೆಗೆ ಮಳೆಯ ಅವಶ್ಯಕತೆ ತುಂಬಾ ಇದೆ. ಮಳೆಯೆಂಬ ಜೀವಸೆಲೆಯನ್ನು ನಿಯತವಾಗಿ ಪಡೆಯಲು ಸೂಕ್ತ ಸ್ಥಳಗಳಲ್ಲಿ ಅಸಂಖ್ಯಾತ ಗಿಡ-ಮರಗಳನ್ನು ನೆಡುವ, ಕಡ್ಡಾಯವಾಗಿ ಅವನ್ನು ಪೋಷಿಸಿ ಬೆಳೆಸುವ ಮತ್ತು
ಉಳಿಸುವ ಮಹತ್ಕಾರ್ಯವನ್ನು ನಾವೆಲ್ಲ ಮಾಡಲೇಬೇಕಾಗಿದೆ.
ತಪ್ಪಿದರೆ, ಭವಿಷ್ಯದಲ್ಲಿ ಭಾರಿ ಅನಾಹುತ ಕಟ್ಟಿಟ್ಟಬುತ್ತಿ. ಈಗಾಗಲೇ ಭಾರತದ ವಿವಿಧೆಡೆ ಕಂಡರಿಯದಷ್ಟು ತಾಪಮಾನದ ಏರಿಕೆ, ಮಂಜುಗಡ್ಡೆಗಳ ಕರಗುವಿಕೆ, ವಿಪರೀತ ಮಳೆ-ಗಾಳಿ-ಚಳಿ, ತೀವ್ರ ಪ್ರವಾಹ ಮತ್ತು ಭೀಕರ ಬರಗಾಲ ಅಪ್ಪಳಿಸುತ್ತಿರುವು ದನ್ನು ಕಾಣುತ್ತಿದ್ದೇವೆ. ನಿಸರ್ಗದ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವ ಮಾನವ-ಚಟುವಟಿಕೆಗಳೇ ಇದಕ್ಕೆಲ್ಲ ಕಾರಣ. ಅಭಿವೃದ್ಧಿ-ಆಧುನಿಕತೆಗಳ ಅನುಷ್ಠಾನವು ಪ್ರಕೃತಿಯ ಸಮತೋಲನ-ಸಂರಕ್ಷಣೆಯೊಂದಿಗೆ ನಡೆದರೆ ಮಾತ್ರವೇ ಇಂಥ ಪ್ರಕೃತಿ-ವಿಕೋಪಗಳು ತಪ್ಪಿ ಜೀವಿಗಳ ಬದುಕು ಹಸನಾಗುತ್ತದೆ.
ಮಿಕ್ಕೆಲ್ಲ ಪ್ರಾಣಿ-ಪಕ್ಷಿಗಳು ತಮ್ಮ ಬದುಕಿಗೆ ಸರಿಹೊಂದುವ ಪ್ರದೇಶಗಳಿಗೆ ತೆರಳಿ ಬದುಕುತ್ತವೆ; ಆದರೆ ಮನುಷ್ಯ ಮಾತ್ರ ನಿರ್ದಿಷ್ಟ
ಸ್ಥಳದಲ್ಲಿಯೇ ಬದುಕಬೇಕು ಎಂದು ಬಯಸುವುದರಿಂದ ಅಲ್ಲಿನ ಪ್ರಕೃತಿಯನ್ನು ತನಗಿಷ್ಟ ಬಂದಂತೆ ಬದಲಾಯಿಸುತ್ತಾನೆ. ಇದರಿಂದುಂಟಾಗುವ ಪ್ರಕೃತಿ-ವಿಕೋಪಕ್ಕೆ ಅವನೇ ಹೊಣೆಯಾಗುತ್ತಾನೆ. ಆದ್ದರಿಂದಲೇ ಪ್ರಕೃತಿ- ವಿಕೋಪಗಳು ಮನುಷ್ಯರಿಗೆ ಮಾತ್ರವೇ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ.
ಕೃಷಿಕ್ಷೇತ್ರದ ಅಭಿವೃದ್ಧಿಯಲ್ಲಿ ವಿಶ್ವದಲ್ಲೇ ಮಂಚೂಣಿಯಲ್ಲಿರುವ ಇಸ್ರೇಲ್, ಕಾಲಿ-ರ್ನಿಯಾ, ಚೀನಾದಂಥ ಪ್ರದೇಶಗಳಲ್ಲಿ ಅವಶ್ಯವಿದ್ದಾಗ ಮಳೆ ಬರುವಷ್ಟರ ಮಟ್ಟಿಗೆ ನಿಸರ್ಗವು ಕೃಷಿಗೆ ಸಾಥ್ ಕೊಡುತ್ತಿದೆ. ನೆರೆಯ ಶ್ರೀಲಂಕಾದಲ್ಲೂ ಅವಶ್ಯವೆನಿಸಿದಾಗ ಮಳೆ ಬರುವಷ್ಟರ ಮಟ್ಟಿಗೆ ಪ್ರಕೃತಿಯು ಶ್ರೀಮಂತ ಪರಂಪರೆಯಿದೆ. ಕಾರಣ ಈ ದೇಶಗಳಲ್ಲಿ ಕೃಷಿಗೆ ಪೂರಕವಾಗಿರುವ ಸರಕಾರದ ಗಟ್ಟಿ ನಿರ್ಧಾರಗಳು ಹಾಗೂ ಗಿಡ-ಮರಗಳ ಸಂರಕ್ಷಣೆಗೆ ಚಾಲ್ತಿಯಲ್ಲಿರುವ ಕಠಿಣ ಕಾನೂನುಗಳು. ಈ ದೇಶಗಳಲ್ಲಿ ಒಂದು ಮರ ಕಡಿದರೆ, ಮಾನವಹತ್ಯೆ ಮಾಡಿದರೆ ನೀಡುವ ಶಿಕ್ಷೆಗೆ ಸಮನಾದ ಶಿಕ್ಷೆ ವಿಧಿಸುತ್ತಾರೆ. ವಿವಿಧ ರೂಪದ ೧೨೭ ಹವಾಮಾನ ವಲಯಗಳನ್ನು ಹೊಂದಿರುವ ಭಾರತದಲ್ಲಿ ಇಂಥ ಕಾನೂನುಗಳ ಅವಶ್ಯಕತೆಯಿದೆ.
ಏಕೆಂದರೆ, ಭಾರತವು ಕೃಷಿಗೆ ಅವಶ್ಯವಿರುವ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದರೂ ಅವುಗಳ ಸಮರ್ಪಕ ಬಳಕೆಯ
ಕೊರತೆ ಹಾಗೂ ನಿಸರ್ಗದ ಮೇಲೆ ಮಾನವನಿಂದಾಗುವ ಘೋರಕೃತ್ಯಗಳಿಂದಾಗಿ ನಿರೀಕ್ಷಿತ ಕೃಷಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ.
ಸದ್ಯ ರಾಜ್ಯದೆಲ್ಲೆಡೆ ಮಳೆಗಾಲವು ಬಿರುಸಿನಿಂದ ಪ್ರಾರಂಭವಾಗಬೇಕಿತ್ತು, ಬೇಸಿಗೆಯ ಒಣಹವೆಯಿಂದ ಬಳಲಿದವರು ಮಳೆಗಾಲದ ತಂಪುಹವೆ ನೀಡುವ ಮುದ ಮತ್ತು ಹಸಿರುಸಿರಿಯನ್ನು ಅನುಭವಿಸುವ ಸಮಯ ಬರಬೇಕಿತ್ತು. ಆದರೆ ಇದು ಸಾಧ್ಯವಾಗದಿರುವುದು ಆಘಾತಕಾರಿ ಬೆಳವಣಿಗೆ. ಮಳೆಯ ಕೊರತೆಯಿಂದಾಗಿ ಅಣೆಕಟ್ಟುಗಳಲ್ಲಿರುವ ನೀರು ಕೆಲವೇ ದಿನಗಳಲ್ಲಿ
ಖಾಲಿಯಾಗುವ ಅಪಾಯವಿದೆ. ನಿಸರ್ಗವೇ ಕೈಚೆಲ್ಲಿದಾಗ ಸರಕಾರವು ಕೈಗೊಳ್ಳುವ ಕ್ರಮಗಳು ಶಾಶ್ವತ ಪರಿಹಾರವನ್ನು ನೀಡುವುದಿಲ್ಲ.
ಪ್ರತಿಯೊಂದು ಜೀವಿಯ ಸುಂದರ ಹಾಗೂ ಆಹ್ಲಾದಕರ ಬದುಕಿಗಾಗಿ ನಿಯತವಾದ ಮಳೆ ಅವಶ್ಯವಿದೆ. ಮುನಿಸಿಕೊಂಡಿರುವ ಮಳೆಯನ್ನು ಒಲಿಸಿಕೊಳ್ಳಲು ಪ್ರತಿಯೊಬ್ಬರೂ ಜಾಗೃತರಾಗಬೇಕು. ನಿಸರ್ಗದ ಅಭಿವೃದ್ಧಿಗಾಗಿ ಜೀವಿತಾವಧಿಯ ಬಹುಪಾಲು
ಸಮಯವನ್ನು ಧಾರೆ ಎರೆಯಬೇಕು. ನಿಸರ್ಗದಲ್ಲಿನ ಸಸ್ಯ ಸಂಪತ್ತನ್ನು ಕಬಳಿಸದೆ ಕೇವಲ ನೋಡಿ ಆನಂದಿಸಬೇಕು. ತಪ್ಪಿದರೆ, ಭವಿಷ್ಯದಲ್ಲಿ ಜೀವಸಂಕುಲವೆ ಶಾಶ್ವತ ಅಪಾಯದ ಕೂಪದಲ್ಲಿ ಸಿಲುಕಿ ನರಳಾಡಬಹುದು. ಎಚ್ಚರ!