Thursday, 12th December 2024

ವರುಣನ ನರ್ತನಕ್ಕೆ ಬಾಯ್ತೆರೆದ ಭೂದೇವಿ

ಮಳೆ-ನಾಡು

ವಿನುತಾ ಹೆಗಡೆ

ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ೧೯೦ ರಷ್ಟು ಊರುಗಳು ಮಳೆಗಾಲದಲ್ಲಿ ಅಪಾಯದ ಅಂಚು ತಲುಪುತ್ತವೆ. ಪಶ್ಚಿಮಘಟ್ಟ ಪ್ರದೇಶ ಇಳಿಜಾರು ಹಾಗೂ ಗುಡ್ಡಗಾಡು ಹೊಂದಿದ್ದರಿಂದ ನೈಸರ್ಗಿಕ ವಿಕೋಪಕ್ಕೆ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ, ಮಣ್ಣು ತೆರವು, ಮರಗಿಡಗಳ ತೆರವು ಇವೆಲ್ಲವೂ ಭೂತಾಯಿ ಮುನಿಸಿಗೆ ಕಾರಣವಾಗಿ, ಮಳೆರಾಯನ ಜತೆಗೆ ಆಪತ್ತಿಗೆ ಮುನ್ನುಡಿ ಬರೆಯುತ್ತದೆ.

ಇನ್ನೂ ಮಾಸಿರದ ಹಳೆಯ ಕಹಿ ನೆನಪು. ಉತ್ತರಕನ್ನಡ ಜಿಲ್ಲೆಯ ಕಳಚೆ ಎಂಬ ಪುಟ್ಟ ಊರು ಕೊಚ್ಚಿ ಹೋದ ಕರಾಳ ನೆರಳಿನ ಹಿಂದೆಯೇ ಶಿರೂರಿನ ಸ್ಮಶಾನ ಮೌನದ ನೋವು. ಮಲೆನಾಡೇ ಹಾಗೇ. ಪ್ರಕೃತಿ ತನ್ನ ರಕ್ಷಿಸಿದರೆ ಅದು ನಮ್ಮ ರಕ್ಷಿಸುತ್ತದೆ ಎನ್ನುವುದಕ್ಕೆ ಇದೇ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶ ಸಂದೇಶ ಸಾರಿದೆ. ಅದೆಷ್ಟು ಯೋಜನೆಗಳು ಜಿಲ್ಲೆಯ ಒಡಲನ್ನು ನುಂಗಿದ್ದವೋ ಅದೆಲ್ಲದಕ್ಕೂ ಪ್ರಾಯಶ್ಚಿತವಾಗಿ ಇದೀಗ ಭೂ ಒಡಲೇ ನಮ್ಮ ನುಂಗುತ್ತಿದೆ. ವರುಣ ಅಬ್ಬರಿಸಿದ್ದಾನೆ, ತಾಯಿ ಕುಸಿಯುತ್ತಿದ್ದಾಳೆ. ಮಹಾ ಮಳೆಗೆ ಜನಜೀವನವೇ ಅಲ್ಲೋಲಕಲ್ಲೋಲವಾಗಿದೆ.

ನೋವಿನ ಮಂದ್ರತೆಗೆ ಇಲ್ಲಿ ಯಾರೂ ಅಳತೆ ಇಡುವುದಕ್ಕೇ ಸಾಧ್ಯವಾಗುತ್ತಿಲ್ಲ. ಎಲ್ಲವನ್ನೂ ನಿಭಾಯಿಸಬೇಕಿದ್ದ ಜಿಲ್ಲಾಡಳಿತಕ್ಕೂ ಭಯ ಹುಟ್ಟಿಸುವಂತೆ ಮಳೆ, ಮಣ್ಣು ಎರಡೂ ಎರಗಿ ಅಬ್ಬರಿಸುತ್ತಿವೆ. ನಾಯಿ ಸಾಕಿದ ಅಜ್ಜಿಯೊಬ್ಬಳು ಮಾಯವಾಗೇ ಬಿಟ್ಟಳು. ನಾಯಿ ಆ ಅಜ್ಜಿಗಾಗಿ ಹುಡುಕಾಟ ನಡೆಸುತ್ತಲೇ ಇದೆ. ಆಕೆ ಜೀವನದಲ್ಲಿ ನಾಯಿಗೆ ವಿಶೇಷ ಪ್ರೀತಿ ಕೊಟ್ಟಿದ್ದಳು. ಭೀಕರ ದುರಂತದಲ್ಲಿ ಕಾಣೆಯಾದ ಅಜ್ಜಿಯ ಹುಡುಕಾಟ ನಡೆಸಿದ ನಾಯಿಯ ಮೌನ ರೋಧ ವರ್ಣಿಸುವುದೇ ಕಷ್ಟ. ಅಂತೆಯೇ ಆ ಅಜ್ಜಿಯ ಮಗ ಕೂಡಾ. ಅಮ್ಮನಿಲ್ಲದ ತಬ್ಬಲಿಯಾಗಿ ಕಣ್ಣಿರಿಡುತ್ತಿದ್ದ.

ತಾಯಿಯೊಬ್ಬಳೇ ಮಕ್ಕಳಿಗೆ ಎಲ್ಲವೂ ಆಗಬಲ್ಲಲು. ತಾಯಿ ಇಲ್ಲದವರಿಗೆ ಆ ನೋವಿನ ಅರಿವಿರಲು ಸಾಧ್ಯ. ಆದರೆ ಆತನ ನೋವು ಧಾರಾಕಾರವಾಗಿ ಸುರಿವ ಮಳೆಗೆ ಕಾಣಿಸಲೇ ಇಲ್ಲ. ಮಳೆಯೂ ಅಷ್ಟೇ ಇನ್ನಷ್ಟು ಧೋ ಎಂದು ಸುರಿಯುತ್ತಲೇ ಇತ್ತು. ಆದರೆ ಗುಡ್ಡ ಕುಸಿತದ ಭೀಕರ ಸನ್ನಿವೇಶಕ್ಕೆ ಅವರೆಲ್ಲ ಕಾಣೆಯಾಗೇ ಬಿಟ್ಟರು. ಅವರ ಬರುವಿಕೆಗೆ, ಅವರ ಕಾಣುವಿಕೆಗೆ ಈ ನಾಯಿ ಮಾತ್ರ ಕಾಯುತ್ತಲೇ ಇತ್ತು. ದಿನವೆಲ್ಲ ಹುಡುಕಾಟ ನಡೆಸುತ್ತಲೇ ತನ್ನದೇ ಭಾಷೆಯಲ್ಲಿ ವಿಚಿತ್ರವಾಗಿ ಕೂಗುತ್ತ ಅಳುತ್ತಲೇ ಇತ್ತು. ಆ ಪುಟ್ಟ ಬಾಲೆಯ ಮೃತದೇಹ ಸಿಕ್ಕ ಬಳಿಕ ಆ ನಾಯಿಯ ಮೌನ ಅಸಹನೀಯ.

ಆ ದೃಶ್ಯ ಎಂತ ಕ್ರೂರಿಗಾದರೂ ಕಣ್ಣಿರು ಬರುವಂತೆ ಮಾಡಿತ್ತು. ಇದೊಂದೇ ಅಲ್ಲ ಪ್ರಕೃತಿ ಮುನಿಸಿನ ಕರಾಳ ಕಥೆ. ಪುಟ್ಟ, ಸುಂದರ ಸಂಸಾರ. ಬದುಕಿನ ಚೀಲ ತುಂಬಲು ಸಣ್ಣದೊಂದು ಅಂಗಡಿ. ಮಕ್ಕಳ ಕನಸಿನ ಆಸೆಗೆ ಬಣ್ಣ ಹಚ್ಚಲು ದಿನವಿಡೀ ದುಡಿವ ಆ ಕುಟುಂಬಕ್ಕೆ ಭೂತಾಯಿ ಕೆನ್ನಾಲಿಗೆ ತಾಗಿಸಿಯೇ ಬಿಟ್ಟಳು. ಅಲ್ಲಿಗೆ ಇಡೀ ಕುಟುಂಬದ ಅಂತ್ಯವಾಯ್ತು. ಛೇ..ಇದೆಂತ ಹೃದಯವಿದ್ರಾವಕ ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಮತ್ತೆ ಕಾಣಸಿಗುವ ಮೃತ ದೇಹಗಳು..ಅಬ್ಬಾ.. ಬರೋಬ್ಬರಿ ಆರು ಮೃತದೇಹಗಳು ಸಿಕ್ಕಿವೆ. ಇನ್ನೂ ಅದೆಷ್ಟೂ ಕನಸು ತುಂಬಿದ ಜೀವಗಳು ಮಣ್ಣಡಿಯಲ್ಲಿವೆಯೋ ತಿಳಿದಿಲ್ಲ.

ಪ್ರಕೃತಿಯ ಮುನಿಸಿಗೆ ವಿಷಾದವಿದೆ. ಅದೆಷ್ಟೋ ಆಸೆಗಳ ಹೊತ್ತ ಪುಟ್ಟ ಕಂದಮ್ಮನನ್ನ ಜಗತ್ತಿನ ಅರಿವು ಮೂಡುವ ಮೊದಲೇ ಒಡಲೊಳಗೆ ತುಂಬಿಕೊಂಡ ಭೂದೇವಿ ಜಲ ಅಲೆಗೆ ನೂಕಿದೆ. ಅಪ್ಪ, ಅಮ್ಮನ ಜತೆಗೆ ಸಹೋದರ ನೊಡಗೂಡಿಯೇ ಹಾರಿದ ಪ್ರಾಣ ಪಕ್ಷಿ ಇನ್ನು ನೆನಪು ಮಾತ್ರ. ಜೀವನದ ನೊಗ ಹೊತ್ತು ಲಾರಿ ಹತ್ತಿದವರ, ಬದುಕಿನ ಓಟದಲ್ಲಿ ಚಲಿಸುತ್ತಿರುವವರ, ತಮ್ಮ ಬದುಕಿಗಾಗಿ ಬೇರೆಯವರಿಗೆ ಅನ್ನವಿಕ್ಕುವ, ಪೂಜನೀಯ ಗೋವನ್ನು ಪ್ರೀತಿಯಿಂದ ಸಾಕಿದ್ದು ಅದರೊಟ್ಟಿಗೇ ಕೊಚ್ಚಿ ಹೋದವರ, ನೀರಿನ ಪ್ರವಾಹಕ್ಕೆ ಸೆಳೆದೊಯ್ದ ವೃದ್ಧೆಯ ಬದುಕಿನ ಅಂತ್ಯ ಅಬ್ಬಾ….ಹೇಳುತ್ತ ಸಾಗಿದರೇ ನನಗೇ ಬರೆಯಲಾಗದಷ್ಟು
ಹಿಂಸೆ, ನೋವು ನನ್ನೊಡಲ ಕಲಕುತ್ತದೆ. ಆದರೆ ಇದೆಲ್ಲವೂ ಉತ್ತರ ಕನ್ನಡ ಜಿಲ್ಲೆಯ ಶಿರೂರಲ್ಲಿ ನಡೆದೇ ಹೋಯ್ತು.

ಅಮ್ಮ ಎನ್ನುವುದೇ ಅದಮ್ಯ ಚೇತನ. ಆಕೆ ನೀರಿಗೆ ಬಲಿಯಾಗಿದ್ದರೂ ಆಕೆಯ ಸೀರೆ ಅಂಚು ಹಿಡಿದು ಉಮ್ಮಳಿಸುವ ದುಖಃದಲ್ಲಿರುವ ಮಗನ ಯಾತನೆ ಯಾರಿಗೆ
ಅರ್ಥವಾದೀತ. ಪ್ರೀತಿಯಿಂದ ದಿನವೂ ಅನ್ನ ಹಾಕಿ, ತಲೆ ನೇವರಿಸಿ, ಅಕ್ಕರೆ ತೋರಿದ ಮನೆಯ ಎಲ್ಲರೂ ನಾಪತ್ತೆಯಾದಾಗ ಬರೀ ಮಣ್ಣಿನರಾಶಿ, ನೀರ ಹರಿವಲ್ಲಿ
ತನ್ನ ಮನೆಯವರಿಗಾಗಿ ಹುಡುಕಾಟ ನಡೆಸುತ್ತಿರುವ ನಾಯಿಪಾಡು ಯಾರಿಗೆ ತಿಳಿದೀತು…ಬದುಕು ನಶ್ವರ. ಯಾವ ಸಮಯದಲ್ಲಿ ಪ್ರಕೃತಿಯ ಯಾವ ಮುನಿಸಿಗೆ
ಯಾರು ಬಲಿಯಾದಾರು ಅರ್ಥವಾಗುವುದಿಲ್ಲ. ಅದರಲ್ಲೂ ಮನೆನಾಡಿನ ಮಳೆ ಯಾರನ್ನು ಸೆಳೆದೊಯ್ಯುತ್ತದೆ ಎನ್ನುವ ಅರಿವೂ ನಮಗಿಲ್ಲ.

ಯಾರೋ ಹೇಳುತ್ತಿದ್ದರು, ಟ್ಯಾಂಕರ್ ಲಾರಿ ನಾಪತ್ತೆಯಾಗಿದೆಯಂತೆ. ಅದೇನು ಕೀ ಬಂಚೇ, ಕಳೆದು ಹೋಗಲು, ನಾಪತ್ತೆಯಾಗಲು? ಆದರೆ ಇದೇ ಹೇಳುತ್ತದೆ
ಯಾವ ಪ್ರಮಾಣದಲ್ಲಿ ಮಣ್ಣು, ನೀರಿನಿಂದ ಅನಾಹುತ ನಡೆದಿದೆ ಎಂಬುದಾಗಿ. ಲಾರಿಗೆ ಲಾರಿಯೇ ನಾಪತ್ತೆಯಾಗುವಷ್ಟರ ಮಟ್ಟಿಗೆ ಗುಡ್ಡದ ರಸ್ತೆಯ ಮೇಲೆ
ಉರುಳಿ, ನದಿ ನೀರನ್ನೂ ಆಚೆ ದಡಕ್ಕೆ ಸೋಕಿ ಇನ್ನಿಲ್ಲದ ಅವಾಂತರಕ್ಕೆ ತಾನು ಮುನ್ನುಡಿ ಬರೆದೇ ಬಿಟ್ಟಿತು.

ಪ್ರಕೃತಿ ಮುನಿದರೆ ಏನೆಲ್ಲ ಆಗಬಹುದು ಎನ್ನುವುದಕ್ಕೆ ನಾವೆಲ್ಲ ಸಾಕ್ಷಿಯಾಗಿ, ಮೌನವಾಗಿ ನಿಂತಿದ್ದೇವೆ. ವರಣುನಿಗೂ ಕೇಳಿಲ್ಲ ನಮ್ಮ ಮೌನದ ಪರಿ ಭೂದೇವಿಗೂ
ನಿಂತಲ್ಲಿ ನಿಲ್ಲಲಾಗದೇ ಕುಸಿಯುತ್ತಿದ್ದಾಳೆ. ವರುಣನ ಆಟಕ್ಕೆ ಭೂದೇವಿ ತಾನೂ ಕೈಜೋಡಿಸಿದ್ದಾಳೆ. ಆಕೆಗೂ ಇದ್ದಿರಬಹುದು ನಮ್ಮೆಲ್ಲರ ಮೇಲೆ ಕೋಪ, ತಾಪ. ತನ್ನ ಇರುವಿಕೆಕೆ ಧಕ್ಕೆ ತಂದವರ ಮೇಲೆ ದ್ವೇಷ, ಮುನಿಸು. ನದಿಗೂ ಇರಬಹುದು ತನ್ನೊಡಲ ಕೊಳಚೆಯಾಗಿಸಿದವರ ಮೇಲೆ ಅಪಾರ ಕೆಂಡ. ಅದೆಲ್ಲದರ ಪರಿಣಾಮವಾಗಿ ಇಂದು ಇಬ್ಬರೂ ಜತೆಗೂಡಿ ತಮ್ಮ ಮುನಿಸನ್ನು ತೀರಿಸಿಕೊಳ್ಳುತ್ತಿದ್ದಾರೆ. ನಾವೇ ಎಚ್ಚರ ವಹಿಸಬೇಕಿತ್ತು, ನಾವೇ ಅರಿತು ಕೊಳ್ಳಬೇಕಿತ್ತು, ನಾವೇ ನಮ್ಮ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಿತ್ತು. ಆಗುವ ಅನಾಹುತಕ್ಕೆ ಎಂದೋ ಸೂಚನೆ ಸಿಕ್ಕಿತ್ತು. ಆಗಬಹುದಾದ ಅನಾಹುತಗಳ ತಡೆಯಲು ಮನುಷ್ಯರ ಪ್ರಯತ್ನೆವೇ ಮುಖ್ಯವಾಗಿತ್ತು. ಆದರೆ ಅದನ್ನು ಯಾರೊಬ್ಬರೂ ಅರಿತುಕೊಳ್ಳಲಿಲ್ಲ.

ಭೂಮಿಯನ್ನು ಗಟ್ಟಿಗೊಳಿಸಿಕೊಂಡು ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದ ದೊಡ್ಡ ದೊಡ್ಡ ಕಲ್ಲು ಬಂಡೆಗಳ ಉರುಳಿಸಿ, ಬೇರು ಬಿಟ್ಟು ಮರಗಳ ಕಿತ್ತೆಸೆದು, ನಾವೇ ರಾಜಾರೋಷವಾಗಿ ಓಡಾಡಲು ಹೆದ್ದಾರಿ ಮಾಡಿಕೊಂಡೆವು. ಅದರ ಪರಿಣಾಮವಾಗಿ ಇಂದು ಇಬ್ಬರೂ ಮುನಿಸು ತೋರಿದ್ದಾರೆ. ಧರೆಗೆ ಧರೆಯೇ ಮರಗಳ ಸಹಿತ
ರಸ್ತೆಗೆ ಬಂದಿದೆ, ಮನೆಗಳ ಮೇಲೆ ಉರುಳಿದೆ. ಇದ್ದ ಬಂಡೆಗಳು, ಮರಗಳು ಇದ್ದಹಾಗೆಯೇ ಇದ್ದಿದ್ದರೆ ಪ್ರಕೃತಿ ಮುನಿಸು ತೋರುತ್ತಿರಲಿಲ್ಲವೇನೋ. ಯಾರೂ ಮಾಡಿದ ತಪ್ಪಿಗೆ ಯಾರೂ ಶಿಕ್ಷೆ ಅನುಭವಿಸಬೇಕು ಎನ್ನುವ ಸಣ್ಣ ಆತಂಕ ಕಾಡಿದರೂ ನಾವು ಎಚ್ಚರ ವಹಸಿಸಬೇಕು ನಮ್ಮ ಪ್ರಕೃತಿ ರಕ್ಷಣೆಗೆ, ಮಲೆನಾಡ ರಕ್ಷಣೆಗೆ, ಕಾಡು ಗುಡ್ಡಗಳ ಉಳಿವಿಗೆ.

ಅಮ್ಮಾ ಹಸಿವು ಎನ್ನುವ ಮಗು, ಹಾಲು ಕಾಯಿಸಲೂ ಒಲೆ ಹಚ್ಚುವಂತಿಲ್ಲ. ನದಿಯಲ್ಲಿ ತೇಲಿದ ಗ್ಯಾಸ್ ಟ್ಯಾಂಕರ್ ಸೋರಿಕೆಯಾದರೇ ಬದುಕೇ ಮುಳುಗೀತು. ಹಸಿದ ಹೊಟ್ಟೆಗೆ ಏನಾದರೂ ನೀಡೋಣವೆಂದರೆ ಏನಿಲ್ಲ. ಎಲ್ಲವೂ ಮಳೆರಾಯನ ಮುನಿಸಿಗೆ ಬಲಿ. ಊರಾಚೆ ಹೋಗಲು ನದಿನೀರಿನಿಂದ, ಮಳೆ ನೀರಿನಿಂದ ದಿಗ್ಬಂಧನ ಛೇ ಜೀವನ ಅದೇನಾಯಿತು? ಹಸಿದ ಮುಗುವಿನಿಂತ ಹೆಚ್ಚು ಸಂಕಟ, ಒಡಲ ಬೆಂಕಿ ಅಮ್ಮನ ಮನದೊಳಗೆ. ಇಂಥ ಸ್ಥಿತಿ ಬರಲು ಕಾರಣವಾದ ಯಾರಿಗೆ ಹಾಕಬೇಕಿದೆ ಶಾಪ? ದೇವರೇ ಎಂದು ಮೊರೆ ಇಡುವುದೊಂದು ಬಿಟ್ಟು ಇನ್ನೇನು ಬಾಕಿ ಇರಲಿಲ್ಲ. ಕಾಳಜಿ ಕೇಂದ್ರಕ್ಕೆ ಹೋಗಲೂ ಸಹ ದಾರಿ ಇಲ್ಲ.
ಕಾಳಜಿ ತೋರುವವರು ಬರದ ಸ್ಥಿತಿ.. ಇಂಥ ಅದೆಷ್ಟೋ ಕಥೆಗಳಿಗೆ ನೀರೆರೆದು ಪೋಶಿಸಿಕೊಂಡಿದ್ದು ಇದೇ ಗಂಗಾವಳಿ ನದಿ.

ಉತ್ತರ ಕನ್ನಡ ಜಿಲ್ಲೆಯ ಚಿತ್ರಣವೇ ವಿಚಿತ್ರ. ಮಲೆನಾಡು, ಬಯಲುಸೀಮೆ, ಕರಾವಳಿ ಇವೆಲ್ಲವೂ ಇದೆ. ಬಯಲು ಸೀಮೆ ಭಾಗದಲ್ಲಿ ವಿಪರೀತ ಮಳೆಯಾದರೆ
ಮನೆಗಳು ನೀರಲ್ಲಿ ಮುಳುತ್ತವೆ, ಬೀಳುತ್ತವೆ. ಮಲೆನಾಡಲ್ಲಿ ಮಳೆಯಾದರೆ ಹೆಚ್ಚಾಗಿ ಗುಡ್ಡ ಕುಸಿತವಾಗುತ್ತದೆ. ಇನ್ನು ಕರಾವಳಿ ಭಾಗದಲ್ಲಿ ಮಳೆಯಾಗದೇ ಮಲೆನಾಡ ಭಾಗದಲ್ಲಿ ಮಳೆಯಾದರೂ ಸಾಕು ಕರಾವಳಿಗೆ ಇಳಿದು ಕರಾವಳಿ ಭಾಗವನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ. ಅಲ್ಲದೇ ಕರಾವಳಿ ಭಾಗ ಮತ್ತು ಮಲೆನಾಡು ಭಾಗದಲ್ಲಿ ಮಳೆ ಸುರಿದಾಗ ಇಂಥ ಅನಾಹುತಗಳು ಸಂಭವಿಸುತ್ತವೆ.

ಇಷ್ಟು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಇದು ಅತಿ ಹೆಚ್ಚಿನ ಪ್ರಮಾಣದ ಗುಡ್ಡ ಕುಸಿತ ಆಗಿವೆ. ಜಿಲ್ಲೆಯ ಶೇ.೩೪ ರಷ್ಟು ಪ್ರದೇಶ ಮಣ್ಣು ಕುಸಿಯುವಷ್ಟು
ಸಡಿಲವಾಗಿದೆ ಎಂಬುದು ಅಧ್ಯಯನಕಾರರ ಅಂಬೋಣ. ಈ ಜಿಲ್ಲೆಯಲ್ಲಿ ಒಂದು ಸ್ಥಳ ಸರಿ ಮಾಡುವಷ್ಟರಲ್ಲಿ ಮಾರನೇ ವರ್ಷ ಮತ್ತೊಂದು ಸಡಿಲಗೊಂಡು
ಕುಸಿಯುವಷ್ಟು ಸೂಕ್ಷ್ಮವಾಗಿವೆ. ಇದರ ಬಗ್ಗೆ ಇನ್ನಷ್ಟು ಎಚ್ಚರಿಕೆ, ಕ್ರಮ ಅಗತ್ಯವಾಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಗುಡ್ಡ ಕುಸಿತದಿಂದಲೇ ೫೩ ಜನ ಸತ್ತಿದ್ದಾರೆ. ೨೦೧೮ ಒಂದೇ ವರ್ಷದಲ್ಲಿ ೨೬ ಜನ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆಂದು ವರದಿ ಹೇಳಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಅವಘಡಗಳಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ರಾಜ್ಯ ನಾಯಕರು ಬಂದಿಲ್ಲ, ಸ್ಥಳ ಪರಿಶಿಲನೆಯನ್ನೂ ಮಾಡಿಲ್ಲ.

ಉತ್ತರ ಕನ್ನಡ ಜಿಲ್ಲೆ ಸದಾಕಾಲ ಅನ್ಯಾಯಕ್ಕೊಳಗಾಗಿಯೇ, ಅಭಿವೃದ್ಧಿಯ ಹೆಸರಲ್ಲಿ ತುಳಿಸಿಕೊಂಡೇ ಬದುಕಿಯೂ ಸತ್ತಂತಿರಬೇಕೆ ಎನ್ನುವ ಪ್ರಶ್ನೆ ಹಲವರದ್ದಾ ಗಿದ್ದು, ಎರಡು ವರ್ಷದ ಹಿಂದೆ ಗುಡ್ಡ ಕುಸಿತದಿಂದ ನೂರು ವರ್ಷಗಳ ಹಿಂದಕ್ಕೆ ಸಾಗಿದ ಕಳಚೆ ಊರಿಗೆ, ಜನರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಮಳೆಗಾಲದ ಹೊತ್ತಿಗೆ ಈ ಜಿಲ್ಲೆಗೆ ವಿಶೇಷ ಅನುದಾನ, ವಿಶೇಷ ಸೌಲಭ್ಯ, ಸೌಕರ್ಯಗಳ ನೀಡುವ ಅಗತ್ಯತೆ ಇದೆ. ಸತ್ತಮೇಲಿನ ಹಣಕ್ಕಿಂತ ಬದುಕಿರುವಾಗಲೇ ಹಣ ನೀಡಿಯಾದರೂ ಸೂಕ್ತ ಕ್ರಮವಾಗಬೇಕು ಎನ್ನುವುದು ಕಳಕಳಿಯ ಕಾಳಜಿ.

(ಲೇಖಕರು: ಪತ್ರಕರ್ತೆ)

೦೦