Friday, 13th December 2024

ಸುರಿವ ಮಳೆ ತಂದ ಸಂಕದ ನೆನಪು

ಶಶಾಂಕಣ

shashidhara.halady@gmail.com

ಮತ್ತೆ ಮಳೆಯಾಗುತ್ತಿದೆ, ಮಳೆಗಾಲದ ನೆನಪುಗಳು ಮನಸ್ಸಿನ ತುಂಬಾ ತುಂಬಿ, ಒಂದು ರೀತಿಯ ಆಪ್ತ ನೆನಪುಗಳನ್ನು ಮೂಡಿಸುತ್ತಿವೆ. ಮಳೆ ಎಂದರೆ
ಹಾಗೆಯೇ ತಾನೆ; ಅದರಲ್ಲೂ, ನಮ್ಮೂರಿನ ಮಳೆ ಎಂದರೆ ನಮಗೆ ಇನ್ನಷ್ಟು ಇಷ್ಟ! (ನಿಮಗೆ ನಿಮ್ಮೂರಿನ ಮಳೆ ಇಷ್ಟ ಇರಬಹುದಲ್ಲವೆ?) ಒಮ್ಮೆ ಆರಂಭ
ಗೊಂಡರೆ, ವಾರಗಟ್ಟಲೆ ಮಳೆ ಬರುವ ಊರು ನಮ್ಮದು.

ಜೂನ್‌ನಿಂದ ಸೆಪ್ಟೆಂಬರ್ ತನಕ ಆಗಾಗ, ಮಳೆ ಬೀಳುತ್ತಾ, ಮನೆ ಸುತ್ತಲಿನ ಜಗತ್ತನ್ನು ನೀರಿನಿಂದ ತುಂಬಿ ಬಿಡುವ ಹಳ್ಳಿ ನಮ್ಮದು. ನಮ್ಮ ಹಳ್ಳಿ ಮನೆಯ ಸುತ್ತಲೂ ಸುರಿವ ಮಳೆಯನ್ನು ದೂರ ಸಾಗಿಸಲು ಇರುವ ಪ್ರಾಕೃತಿಕ ನಿರ್ಮಿತಿಗಳೇ ತೋಡುಗಳು ಮತ್ತು ಪುಟ್ಟ ಹೊಳೆಗಳು. ಆ ತೋಡಿನಲ್ಲಿ ರಭಸವಾಗಿ ಹರಿಯುವ ನೀರು. ಅದನ್ನು ದಾಟಬೇಕಾದರೆ, ನಮಗೆ ಅಗತ್ಯವಾಗಿ ಬೇಕು ‘ಸಂಕ’! ಶಾಲೆಗೆ ಹೋಗಲು ಸಹ ಸಂಕ ದಾಟ ಬೇಕು, ಗಂಟಿ ಮೇಯಿಸಲು ಗುಡ್ಡೆ ಹೋಗಲು ಸಹ ಸಂಕ ದಾಟಬೇಕು.

ಹಳ್ಳಿಯ ಜನರು ಉಪ್ಪು, ಮೆಣಸು ತರಲು ಪೇಟೆಗೆ ಹೋಗಲು ಸಹ ಸಂಕ ದಾಟಿಯೇ ಹೋಗಬೇಕು. ಏನಿದು ಸಂಕ? ಮಳೆ ಬಂದಾಗ ಹೆಚ್ಚು ಬಳಕೆಯಾ ಗುವ, ಬೇರೆ ಸಮಯದಲ್ಲೂ ಆಗಾಗ ಮಾತಿನಲ್ಲಿ ನುಸುಳುವ ಒಂದು ಪದ ಎಂದರೆ ‘ಸಂಕ’. ನಮ್ಮ ಹಳ್ಳಿಯ ಸುತ್ತಮುತ್ತಲೂ ಜನರಾಡುವ ಭಾಷೆಯಲ್ಲಿ ಸಂಕ ಎಂದರೆ, ತೋಡು ಅಥವಾ ಪುಟ್ಟ ಹೊಳೆಯನ್ನು ದಾಟಲು ಎರಡೂ ದಡಗಳಿಗೆ ಅಡ್ಡಲಾಗಿ ಹಾಕುವ ಮರದ ಕಾಂಡ. ಒಂದೆರಡು ಅಡಿ ಅಗಲದ ತೋಡಿನಿಂದ ಹಿಡಿದು, ಹದಿನೈದು ಇಪ್ಪತ್ತು ಅಡಿ ಅಗಲದ ಸಣ್ಣ ಹೊಳೆಗೆ (ದೊಡ್ಡ ತೋಡು) ಅಡ್ಡಲಾಗಿ ಸಹ ಇಂತಹ ಮರದ ಕಾಂಡವನ್ನು ಹಾಕುತ್ತಾರೆ; ತೋಡಿನ ಅಗಲ ತೀರಾ ಜಾಸ್ತಿ ಎನಿಸಿದಾಗ, ಹೆಚ್ಚು ಭದ್ರತೆಗಾಗಿ ಎರಡು ಮರಗಳನ್ನು ಒಟ್ಟೊಟ್ಟಿಗೆ ಎರಡೂ ದಡದ ಅಗಲಕ್ಕೆ ಮಲಗಿಸಿರುತ್ತಿದ್ದರು.

ಅದನ್ನು ‘ಸಾರ’  ಎನ್ನುವುದುಂಟು. ನೆರೆ ಬಂದಾಗ ಕೆಳಗಿನ ತೋಡಿನಲ್ಲಿ ರಭಸದಿಂದ ಹರಿಯುವ ನೀರು; ಮಳೆ ಕಡಿಮೆಯಾದರೂ, ಸುಮಾರು ನವೆಂಬರ್ ತಿಂಗಳಿನ ತನಕವೂ ಹೆಚ್ಚಿನ ತೋಡುಗಳಲ್ಲಿ ನೀರಿರುವುದ ರಿಂದಾಗಿ, ನಮ್ಮೂರಿನ ಜನರು ಓಡಾಡಲು ಸಂಕವು ಅಗತ್ಯ ಬೇಕೇ ಬೇಕು. ಮತ್ತು ಇದನ್ನು ದಾಟಲು ಒಂದು ಮಟ್ಟದ ಕೌಶಲವೂ ಅಗತ್ಯ! ಆ ಕೌಶಲವನ್ನು ರೂಢಿಸಿಕೊಳ್ಳದೇ ಇದ್ದರೆ, ಸಂಕದ ಮೇಲೆ ನಡೆಯುವಾಗ ಜಾರಿ ಬಿದ್ದು, ತೋಡಿನಲ್ಲಿ ರಭಸ ವಾಗಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆಯೂ ಉಂಟು.

‘ಸಂಕದ ಮೇಲಿನ ನಡಿಗೆ’ ಎಂದರೆ, ಕೆಳಗೆ ಹರಿಯುತ್ತಿರುವ ನೀರಿಗೆ ಬೀಳದೇ, ಅದರ ರಭಸ ಕಂಡು ಬೆದರದೇ, ಬ್ಯಾಲೆನ್ಸ್ ಮಾಡಿಕೊಂಡು ಆ ಏಕೈಕ ಮರದ ಕಾಂಡದ ಮೇಲೆ ನಡೆಯುವುದು! ನನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಸಮಯದಲ್ಲಿ ಸಂಕಕ್ಕೂ ನನಗೂ ಅನುದಿನದ ನಂಟು. ನಮ್ಮ ಮನೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಗೋರಾಜೆ ಶಾಲೆಗೆ ನನ್ನದು ಪ್ರತಿ ದಿನ ಚಾರಣ : ಅದು ಒಂದು ಕಿರಿಯ ಪ್ರಾಥಮಿಕ ಶಾಲೆ. ಪ್ರತಿದಿನವೂ ಆ ಶಾಲೆಗೆ ಹೋಗುವಾಗ, ನಾನು ಹನ್ನೆರಡು ಬಾರಿ ಮರದ ಸಂಕವನ್ನು ದಾಟಬೇಕಿತ್ತು!

ಹನ್ನೆರಡು ಬಾರಿ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಿತ್ತೇ ಎಂದು ಮೂಗಿಗೆ ಬೆರೆಳೇರಿಸಬೇಡಿ. ಆ ಶಾಲೆಗೆ ಹೋಗುವ ದಾರಿಯಲ್ಲಿ ಮೂರು ತೋಡು (ಹಳ್ಳ)ಗಳಿದ್ದವು. ಒಂದು ದೊಡ್ಡ ತೋಡು, ಇನ್ನೆರಡು ಸಣ್ಣ ತೋಡುಗಳು. ಅವನ್ನು ದಾಟಲು ತಲಾ ಒಂದೊಂದು ಮರದ ಸಂಕ. ಬೆಳಗ್ಗೆ ಮೂರು
ಬಾರಿ, ಮಧ್ಯಾಹ್ನ ಊಟಕ್ಕೆ ಬರುವಾಗ ಮೂರು ಬಾರಿ, ಊಟ ಮುಗಿಸಿ ಹೋಗುವಾಗ ಮೂರು ಬಾರಿ, ಸಂಜೆ ವಾಪಸ್ ಬರುವಾಗ ಮತ್ತೆ ಮೂರು ಬಾರಿ ಸಂಕದ ಮೇಲೆ ನಡೆದು ಶಾಲೆಗೆ ಹೋಗುತ್ತಿದ್ದೆವು.

ನಮ್ಮ ಮನೆಯ ಎದುರಿನ ಅಗೇಡಿ ಅಂಚಿನಲ್ಲಿ ಸುಮಾರು ನೂರು ಮೀಟರ್ ನಡೆದು, ಬಲಭಾಗದಲ್ಲಿ ಸಿಗುವ ತೋಡಿನ ಅಂಚಿನಲ್ಲೇ, ಮುಂಡುಕನ
ಹಿಂಡಲುಗಳ ಪಕ್ಕದಲ್ಲೇ ತುಸು ದೂರ ಸಾಗಿದ ನಂತರ, ಆ ತೋಡನ್ನೇ ದಾಟಿ ನಡೆಯಬೇಕಾದ ಅನಿವಾರ್ಯತೆ; ಇಲ್ಲೇ ಎದುರಾಗುವುದು ಶಾಲಾ
ದಾರಿಯ ಮೊದಲ ಸಂಕ. ಮಳೆಗಾಲದಲ್ಲೋ, ಈ ತೋಡಿನಲ್ಲಿ ಕೆಂಪನೆಯ ನೀರು! ಒಮ್ಮೊಮ್ಮೆ ನಾಲ್ಕಾರು ದಿನ ಎಡೆಬಿಡದೆ ಮಳೆ ಸುರಿವ ಹಳ್ಳಿ ನಮ್ಮದು; ಅಂತಹ ದಿನಗಳಲ್ಲಿ ರಭಸವಾಗಿ ಹರಿಯುವ ನೀರನ್ನು ಆ ತೋಡಿನಲ್ಲಿ ನೋಡುವುದೇ ಒಂದು ವಿಶಿಷ್ಟ ಅನುಭವ; ಸುಳಿ ಸುಳಿ ಸುತ್ತುತ್ತಾ
ಹರಿಯುವ ಆ ಕೆಂಪನೆಯ ನೀರನ್ನು ನೋಡುತ್ತಲೇ ಶಾಲೆಗೆ ಹೋಗುತ್ತಿದ್ದೆವು. ಆದರೆ ಈ ತೋಡು ಸಾಕಷ್ಟು ದೊಡ್ಡದು, ಮಕ್ಕಳು ಅಕಸ್ಮಾತ್ ಜಾರಿ
ಬಿದ್ದರೆ ಕೊಚ್ಚಿ ಹೋಗುವಷ್ಟು ನೀರು ಒಮ್ಮೊಮ್ಮೆ ಅದರಲ್ಲಿ ಹರಿಯುತ್ತಿತ್ತು. ಆ ನೀರಿನ ರಭಸವನ್ನೇ ನೋಡುತ್ತಾ, ಸಂಕದ ಮೇಲೆ ನಡೆದರೆ ಕಾಲುಜಾರಿ
ಬೀಳುವುದೇ ಸೈ. ಆ ನೀರಿನ ಭಯದಿಂದ ದೂರಾಗಲು ಜತೆಗಾರರು ಒಂದು ಉಪಾಯ ಹೇಳಿಕೊಡುತ್ತಿದ್ದರು ‘ನೀರನ್ನು ಕಾಂಬುಕಾಗ, ಮರದ ಸಂಕವನ್ನು
ಮಾತ್ರ ಕಂಡಕಂಡ್ ನಡಿಕ್.

ಆಗ ಹೆದ್ರಿಕೆ ಆತಿಲ್ಲೆ’. ನಮ್ಮ ಮನೆಯಿಂದ ಸುಮಾರು ಇನ್ನೂರು ಮೀಟರ್ ದೂರದಲ್ಲಿದ್ದ ಈ ಸಂಕವನ್ನು ದಾಟುವಾಗ ಕೆಳಗಿನ ತೋಡಿಗೆ ಒಮ್ಮೆ ನಾನು ಬಿದ್ದಿದ್ದೆ! ಸುಮಾರು ಹದಿನೈದು ಅಡಿ ಅಗಲದ ತೋಡು ಅದು; ಎರಡೂ ದಡಗಳನ್ನು ಜೋಡಿಸಿರುವ ಮರದ ಸಂಕದ ಉದ್ದ ಸುಮಾರು ಇಪ್ಪತ್ತು ಅಡಿ. ಒಂದೇ ಮರ ಹಾಕಿದರೆ ದಾಟಲು ಕಷ್ಟವಾಗುತ್ತದೆ ಎಂದು ಎರಡು ಮರಗಳನ್ನು ಜೋಡಿಸಿದ್ದರು; ಅದರಲ್ಲೊಂದು ಮರ ಓರೆ ಕೋರೆಯಾಗಿತ್ತು. ಆಗಸ್ಟ್ ತಿಂಗಳಿನ ಒಂದು ದಿನ, ಆ ಸಂಕವನ್ನು ಬಹುಪಾಲು ದಾಟಿ, ಇನ್ನೇನು ಕೊನೆಯ ಮೂರು ಅಡಿ ಹೆಜ್ಜೆ ಹಾಕಿ ಆಚೆ ದಡ ಸೇರಬೇಕು ಎನ್ನುವಷ್ಟರಲ್ಲಿ, ಎರಡು ಮರಗಳ ನಡುವಿನ ಸಂದಿಯಲ್ಲಿ ಸಿಕ್ಕಿಕೊಂಡ ನನ್ನ ಕಾಲು ಎಡವಿತು!

ಜಾರಿ ತೋಡಿಗೆ ಬಿದ್ದೆ; ಸುಮಾರು ಆರು ಅಡಿ ಆಳ; ಹೆಚ್ಚಿನ ಏಟಾಗುವ ಸಂಭವ ಇರಲಿಲ್ಲ; ಆ ಸಮಯದಲ್ಲಿ ತೋಡಿನಲ್ಲಿ ಹೆಚ್ಚು ನೀರು ಇರಲಿಲ್ಲ – ಬಿದ್ದ ರಭಸಕ್ಕೆ ಹಾಕಿದ್ದ ಅಂಗಿ ಚಡ್ಡಿ ಒದ್ದೆಯಾಯಿತು; ಕೈಲಿದ್ದ ಪುಸ್ತಕಗಳು ನೀರಿನಲ್ಲಿ ಸ್ನಾನ ಮಾಡಿದವು. ಆಚೆ ದಡಕ್ಕೆ ಒತ್ತಿಕೊಂಡಂತೆ ಒಂದು ಮನೆ; ಅಲ್ಲಿನ ಮಕ್ಕಳು ಸಹ ನನ್ನ ಜತೆಯಲ್ಲೇ ಶಾಲೆಗೆ ಹೋಗುವವರು – ಅವರ ತಾಯಿ ಲಕ್ಷ್ಮಮ್ಮ ಎಂಬುವವರು ಓಡಿ ಬಂದು, ತೋಡಿನಿಂದ ಎದ್ದು ಮೇಲೆ ಬರಲು ಸಹಾಯ ಮಾಡಿ, ಅವರ ಮನೆಗೆ ಕರೆದುಕೊಂಡು ಹೋದರು.

‘ಬಿದ್ದದ್ದಕ್ಕೆ ಗಾಯ ಎಂತ ಆಗಿಲ್ಲ ಅಲ್ದಾ? ಜಾಸ್ತಿ ನೀರಿರಲಿಲ್ಲ, ಒಳ್ಳೆದಾಯಿತು. ಇರಲಿ.. ನೀನು ಯಾವ ಕಾಲು ಎಡವಿ ಬಿದ್ದದ್ದು?’ ಎಂದು ಕೇಳಿದರು. ‘ಬಲಗಾಲು’ ಎಂದೆ. ‘ಓ, ಹಾಗಾದರೆ ನಿನಗೆ ಇವತ್ತು ಒಂದು ಒಳ್ಳೆಯ ಸುದ್ದಿ ಇರತ್. ಬಿದ್ದಿದ್ದೂ ಒಳ್ಳೆಯದಕ್ಕೇ… ನೀ ಏನೂ ಬೇಜಾರ್ ಮಾಡ್ಕಂಬುದೇ ಬೇಡ’ ಎಂದು ಹುರಿದುಂಬಿಸಿದರು – ಬಿದ್ದ ನೋವನ್ನು ಮರೆಸುವ, ಸಕಾರಾತ್ಮಕ ಪ್ರೋತ್ಸಾಹದ ಮಾತುಗಳು ಅವು. ಆ ಮೊದಲ ಸಂಕವನ್ನು ದಾಟಿದ ತಕ್ಷಣ ಒಂದಷ್ಟು ಮಕ್ಕಿಗದ್ದೆಗಳು, ನಂತರ ದಟ್ಟವಾಗಿ ಬೆಳೆದ ಹಕ್ಕಲು, ಗುಡ್ಡೆದಾರಿ. ಆ ಗುಡ್ಡೆಯನ್ನು ಇಳಿಯುವಾಗಇನ್ನೊಂದು ಮರದ ಸಂಕ – ಈ ತೋಡಿನ ಅಗಲ ಕಡಿಮೆ.

ಆದರೆ ಸಂಕ ಇಳಿಜಾರಾಗಿತ್ತು – ದಾಟು ವಾಗ ಸಣ್ಣಗೆ ಬೆದರುವಂತೆ ಮಾಡುತ್ತಿತ್ತು. ಆ ಸಂಕ ದಾಟಿದ ನಂತರ ಒಂದು ಬತ್ತದ ಗದ್ದೆ, ಅದರ ಅಂಚಿನಲ್ಲೇ ಸಾಗಿ ಎಡಕ್ಕೆ ತಿರುವಿದಾಗ, ಇನ್ನೊಂದು ತೋಡು ಎದುರಾಗುತ್ತದೆ. ಅದನ್ನು ದಾಟಲು ನಾಲ್ಕಾರು ಅಡಕೆ ಮರದ ದಬ್ಬೆಗಳನ್ನು ಜೋಡಿಸಿರುತ್ತಿದ್ದರು. ಅಷ್ಟೇನೂ ಅಗಲವಿಲ್ಲದ ತೋಡು ಅದು. ನಡೆಯುವಾಗ ಭಯ ಇರಲಿಲ್ಲ. ಆದರೆ, ಆ ತೋಡಿ ನುದ್ದಕ್ಕೂ ಎರಡೂ ಕಡೆ ಬೆಳೆದಿದ್ದ ಮುಂಡುಕನ
ಮುಳ್ಳುಗಳು ಮೈಗೆ ತಾಗದಂತೆ ನಡೆಯುವ ಜಾಗ್ರತೆ ವಹಿಸಬೇಕಿತ್ತು.

ಬೆಳಗ್ಗೆ ಎದ್ದು ಈ ಮೂರು ಸಂಕಗಳನ್ನು ದಾಟಿ, ಹಾಡಿ ಗುಡ್ಡಗಳಲ್ಲಿ ನಡೆದು ಗೋರಾಜಿ ಶಾಲೆ ತಲುಪಿದ ನಂತರ ಅಧ್ಯಯನ ಶುರು! ಆ ಏಕೋ ಪಾಧ್ಯಾಯ, ಏಕ ಕೊಠಡಿಯ, ಗುಡಿಸಲು ಶಾಲೆಯಲ್ಲಿ ನಮ್ಮೆಲ್ಲರ ವಿದ್ಯಾಭ್ಯಾಸ. ಅಲ್ಲಿದ್ದದ್ದು ನಾಲ್ಕು ತರಗತಿಗಳು ಮಾತ್ರ; ಎಲ್ಲಕ್ಕೂ ಸೇರಿ ಒಂದೇ
ಕೊಠಡಿ; ಮಣ್ಣಿನ ನೆಲ; ಪುಟ್ಟ ಪುಟ್ಟ ಮರದ ಬೆಂಚು ಗಳು. ಮಧ್ಯಾಹ್ನ ಊಟದ ಸಮಯವಾದ ಕೂಡಲೆ, ಅದೇ ದಾರಿಯಲ್ಲಿ ವಾಪಸು ಮನೆಗೆ; ನಮ್ಮ
ಅಮ್ಮಮ್ಮ ಪ್ರೀತಿಯಿಂದ ಬಡಿಸುತ್ತಿದ್ದ ಬಿಸಿ ಬಿಸಿ ಅನ್ನವನ್ನು ಬೇಗನೆ ತಿಂದು, ಪುನಃ ಅದೇ ದಾರಿ ಹಿಡಿದು ನಡಿಗೆ; ಸಂಜೆ ಶಾಲೆ ಬಿಟ್ಟ ನಂತರ, ಅದೇ
ದಾರಿಯಲ್ಲಿ, ಮೂರು ಸಂಕಗಳನ್ನು ದಾಟಿ ಮನೆಗೆ ವಾಪಸು.

ದಾರಿಯುದ್ದಕ್ಕೂ ಹಕ್ಕಲು, ಹಾಡಿ, ಗುಡ್ಡೆ, ಗೋವೆಮರಗಳು ಬೆಳೆದಿದ್ದ ಮಕ್ಕಿಗದ್ದೆಯ ಅಂಚು, ಅಲ್ಲಲ್ಲಿ ಬೃಹದಾಕಾರದ ಕಾಟುಮಾವಿನ ಮರಗಳು,
ಕೆಲವು ಕಡೆ ದಟ್ಟ ಹಾಡಿ, ಆ ಹಾಡಿಯಲ್ಲಿ ಸಂಚರಿ ಸುವ ಹಕ್ಕಿಗಳು, ಮಂಗಗಳು, ಹಕ್ಕಲಿನ ಮರಗಳ ಮೇಲೆ ಓತಿಕ್ಯಾತಗಳ ಆಟ, ಅವುಗಳಿಗೆ ಕಲ್ಲೆಸೆಯುವ
ಶಾಲಾ ಮಕ್ಕಳು – ಇವೆಲ್ಲವೂ ಗೋರಾಜೆ ಶಾಲೆಯ ಅನುಭವಗಳಲ್ಲಿ ಸೇರಿ ಹೋಗಿವೆ. ಕರಡ ಬೆಳೆಯುತ್ತಿದ್ದ ಪುಟ್ಟ ಮೈದಾನದಲ್ಲಿ, ನಾಲ್ಕಾರು ಕಾಸಾನು ಮರಗಳ ನೆರಳಿನಲ್ಲಿ, ಒಂದು ಕಡೆ ಹಕ್ಕಲು, ಇನ್ನೊಂದು ಕಡೆ ಗದ್ದೆಗಳಿರುವ ಭೂ ಪ್ರದೇಶದಲ್ಲಿದ್ದ ಗೋರಾಜೆ ಶಾಲೆಯಲ್ಲಿ ನಾಲ್ಕನೆಯ ಇಯತ್ತೆ ಪಾಸು ಮಾಡಿ, ಐದನೆಯ ತರಗತಿಗೆ ಹಾಲಾಡಿ ಶಾಲೆಗೆ ಸೇರಿದೆ. ಮೂರು ಕಿ.ಮೀ. ದೂರದಲ್ಲಿದ್ದ ಆ ಶಾಲೆಗೆ ಸಾಗಲು ಮೂರು ದಾರಿ ಗಳಿದ್ದು, ಎಲ್ಲಾ ದಾರಿಗಳ ಲ್ಲೂ ಸಂಕ ದಾಟುವುದು ಅನಿವಾರ್ಯ.

ಆಗೆಲ್ಲಾ, ಅಡ್ಡವಾಗಿ ಹರಿಯುತ್ತಿದ್ದ ತೋಡುಗಳಲ್ಲಿ ನೀರಿನಾಟ ನೋಡುವುದು, ತೋಡಿನ ನೀರನ್ನೇ ಆಶ್ರಯಿಸಿದ್ದ ಕಪ್ಪೆ, ಮೀನು, ಕೊಕ್ಕರೆ, ಮಿಂಚುಳ್ಳಿ, ಒಳ್ಳೆ ಹಾವುಗಳನ್ನು ನೋಡುವುದು ಮೊದಲಾದ ವಿವಿಧ ಅನುಭವಗಳನ್ನು ಈ ದಾರಿಗಳು ಕೊಡುತ್ತಿದ್ದವು. ನಾವು ಆಗ ಸಾಮಾನ್ಯವಾಗಿ ಅನುಸರಿಸುತ್ತಿದ್ದ
ದಾರಿ ಮೊದಲಿಗೆ ನಮ್ಮ ಮನೆ ಎದುರಿನ ಅರ್ಧ ಕಿ. ಮೀ. ಉದ್ದನೆಯ ಬೈಲುದಾರಿಯಲ್ಲಿ ಸಾಗುತ್ತಿತ್ತು. ನಂತರ, ಅದರ ತುದಿಯಲ್ಲಿರುವ ತೋಡನ್ನು ದಾಟಿ
ಹಾಡಿದಾರಿಯನ್ನು ಅನುಸರಿಸಬೇಕಿತ್ತು. ಈ ತೋಡನ್ನು ದಾಟಲು ಮರದ ‘ಸಾರ’ ಇತ್ತು. ಸುಮಾರು ಎರಡು ಅಡಿ ಉದ್ದದ ಹಲಗೆಯ ಚೂರು ಗಳನ್ನು ಎರಡು ಮರದ ಮೋಪುಗಳಿಗೆ ಭದ್ರವಾಗಿ ಜೋಡಿಸಿ ಮಾಡಲಾಗಿದ್ದ ಈ ಸಾರದ ಮೇಲಿನ ನಡಿಗೆ ಸಾಕಷ್ಟು ಸುರಕ್ಷಿತ. ಒಂದೇ ಮರದ ಕಾಂಡದಿಂದ ಮಾಡಿದ ಸಂಕದ ಮೇಲಿನ ನಡಿಗೆಗಿಂತ, ಮರದ ಸಾರದ ಮೇಲಿನ ನಡಿಗೆ ಎಷ್ಟೋ ಉತ್ತಮ.

ನಮ್ಮ ಮನೆಯ ಎದುರಿನಿಂದಲೇ ಹರಿದು ಬರುವ ದೊಡ್ಡ ತೋಡು, ಅರ್ಧ ಕಿ.ಮೀ. ದೂರದ ಈ ಭಾಗಕ್ಕೆ ಬರುವಾಗ ಇನ್ನಷ್ಟು ಮೈದುಂಬಿಕೊಂಡಿ
ರುವುದರಿಂದಲೇ ಇರಬೇಕು, ಜನರ ಅನುಕೂಲಕ್ಕಾಗಿ ಇಲ್ಲಿ ಮರದ ಸಾರವನ್ನು ಪಂಚಾಯತ್ ವತಿಯಿಂದಲೇ ಮಾಡಿಸುತ್ತಿದ್ದರು. ಮಳೆಗಾಲದಲ್ಲಿ
ಒಮ್ಮೊಮ್ಮೆ ಆ ತೋಡಿನಲ್ಲಿ ನೆರೆ ಬಂದಾಗ, ನಾವೆಲ್ಲಾ ಮಕ್ಕಳು ಆ ಮರದ ಸಾರದ ಮೇಲೆ ನಿಂತು ಕೆಂಪನೆಯ ನೀರನ್ನು, ಅದು ರಭಸದಿಂದ ಹರಿಯುವ ಶೈಲಿಯನ್ನು ನೋಡುತ್ತಿದ್ದುದುಂಟು.

ಇದೇ ದಾರಿಯಲ್ಲಿ ಮುಂದುವರಿದು, ಹಂದಿ ಕೊಡ್ಲು ಹಾಡಿಯನ್ನು ದಾಟಿ ಇನ್ನೇನು ಮುಖ್ಯ ರಸ್ತೆಯ ಹತ್ತಿರ ಬಂದು ತಲುಪುತ್ತಿದ್ದೇವೆ ಎನ್ನುವಷ್ಟರಲ್ಲಿ ಒಂದು ತೋಡು ಎದುರಾಗುತ್ತಿತ್ತು. ಇದನ್ನು ದಾಟಲು ಒಂದು ದಪ್ಪನೆಯ ಮರದ ಕಾಂಡವನ್ನು ಹಾಕಿರುತ್ತಿದ್ದರು. ಆದರೆ, ಆ ತೋಡಿನ ಒಂದು
ದಡಕ್ಕೂ ಇನ್ನೊಂದು ದಡಕ್ಕೂ ಎತ್ತರದ ವ್ಯತ್ಯಾಸ ಇದ್ದುದರಿಂದ, ಈ ಸಂಕವು ತುಸು ಇಳಿಜಾರಾಗಿತ್ತು; ಆ ಇಳಿಜಾರಿನ ಸಂಕವನ್ನು ತುಸು ಜಾಗ್ರತೆ ಯಿಂದಲೇ ದಾಟಬೇಕಿತ್ತು.

ನಮ್ಮ ಶಾಲೆಗೆ ಹೋಗಲು ಇನ್ನೊಂದು ದಾರಿ ಯಿತ್ತು; ವಾಸ್ತವವಾಗಿ ಈ ದಾರಿಯಲ್ಲಿ ನಡೆದು ಹೋದರೆ, ಸುಮಾರು ಅರ್ಧ ಕಿ.ಮೀ. ಕಡಿಮೆ ದೂರ. ಆದರೆ, ದಾರಿಯುದ್ದಕ್ಕೂ ಗುಡ್ಡ, ಕಾಡು, ತುಸು ನಿರ್ಜನ ಪ್ರದೇಶ; ನಂತರ ವಿಶಾಲವಾದ ಬತ್ತದ ಬಯಲಿದ್ದ ‘ಹೆರಬೈಲಿ’ನಲ್ಲಿ ಆ ದಾರಿ ಸಾಗುತ್ತಿತ್ತು. ಅಲ್ಲೊಂದು ಪುಟ್ಟ ಹೊಳೆ. ಅದನ್ನು ದಾಟಲು ಒಂದೇ ಮರದ ಕಾಂಡದ ಸಂಕ. ಸುಮಾರು ಇಪತ್ತೈದು ಅಡಿ ಅಗಲದ ಆ ಸಣ್ಣ ಹೊಳೆ ಯುಲ್ಲಿ ಸದಾ ಕಾಲ ನೀರು; ಮಳೆಗಾಲದಲ್ಲಿ ತುಂಬಾ ನೀರು, ಚಳಿಗಾಲದಲ್ಲಿ ಹದವಾದ ನೀರು, ಬೇಸಗೆಯಲ್ಲಿ ತುಸು ನೀರು. ಅಲ್ಲಿನ ಉದ್ದನೆಯ ಸಂಕವನ್ನು ದಾಟಲು, ಮಕ್ಕಳಿಗೆ ನಿಜವಾಗಿಯೂ ತುಸು ಭಯ. ಒಂದೇ ಆ ಮರದ ಸಂಕದ ಮೇಲೆ ಜಾಗ್ರತೆಯಿಂದ ನಡೆಯುತ್ತಾ, ಮಧ್ಯ ಭಾಗ ತಲುಪಿದಾಕ್ಷಣ ಅದು ಸಣ್ಣಗೆ ಅಲುಗಾಡಲು ಆರಂಭವಾಗುತ್ತಿತ್ತು!

ಆಧಾರಕ್ಕೆಂದು ಅದಕ್ಕೊಂದು ಮರದ ಕೈಪಿಡಿಯನ್ನು ಆಗಾಗ ಜೋಡಿಸುತ್ತಿದ್ದರು. ಆದರೆ ಅದು ಹೆಚ್ಚಿನ ಅವಽಯಲ್ಲಿ ಬಿದ್ದು ಹೋಗಿರುತ್ತಿದ್ದುದೇ ಜಾಸ್ತಿ. ಆದ್ದರಿಂದ ಆ ಸಂಕದ ಮೇಲಿನ ನಡಿಗೆ ಎಂದರೆ, ಮಕ್ಕಳಿಗಂತೂ ಹಗ್ಗದ ಮೇಲಿನ ನಡಿಗೆ. ಸಣ್ಣ ಮಕ್ಕಳು ಅದನ್ನು ದಾಟುವಾಗ ದೊಡ್ಡ ಮಕ್ಕಳು ಕೈ ಹಿಡಿದುಕೊಳ್ಳಲೇಬೇಕಿತ್ತು. ಮಳೆಗಾಲದಲ್ಲಿ ಆ ತೋಡಿನಲ್ಲಿ ತುಂಬಾ ನೀರು ಇರುತ್ತಿದ್ದುದರಿಂದ, ಯಾವುದೇ ಕಾರಣಕ್ಕೂ ಆ ದಾರಿಯಲ್ಲಿ ಹೋಗಬಾರ ದೆಂದು ಮನೆಯವರು ತಾಕೀತು ಮಾಡುತ್ತಿದ್ದರು. ಚಳಿಗಾಲ ಮತ್ತು ಬೇಸಗೆ ಯಲ್ಲಿ ಒಮ್ಮೊಮ್ಮೆ ಹೋಗುತ್ತಿದ್ದೆವು; ಸಣ್ಣಗೆ ಅಲುಗಾಡುತ್ತಿದ್ದ ಆ ಹೆರಬೈಲು ಸಂಕದ ಮೇಲಿನ ನಡಿಗೆ ಯನ್ನು ನೆನಪಿಸಿಕೊಂಡರೆ ಈಗಲೂ ಅಂಗೈ ಹಿಂದಿನ ರೋಮ ನೆಟ್ಟಗೆ ನಿಲ್ಲುತ್ತದೆ – ಸಂಕದ ಮೇಲಿನ ನಡಿಗೆಯ ರೋಚಕತೆ ಯನ್ನು ಮತ್ತೊಮ್ಮೆ ಅನುಭವಿಸಿದಂತಾಗುತ್ತದೆ.