Friday, 22nd November 2024

ರಾಜೇಂದ್ರ ಭಟ್‌ ಅಂಕಣ: ಕೃತಕ ಬುದ್ಧಿಮತ್ತೆ (AI) – ನೈತಿಕತೆ, ಅನೈತಿಕತೆಗಳ ನಡುವೆ

ai

ಸ್ಫೂರ್ತಿಪಥ ಅಂಕಣ: AI ಕ್ರಾಂತಿಯು ಈಗಲೇ ಆರಂಭವಾಗಿದೆ, ಸ್ವಾಗತ ಮಾಡಲು ಸಿದ್ಧರಾಗಿ!

Rajendra Bhat K
  • ರಾಜೇಂದ್ರ ಭಟ್ ಕೆ.

AI: 18ನೆಯ ಶತಮಾನದಲ್ಲಿ ಜಗತ್ತಿನಾದ್ಯಂತ ಕೈಗಾರಿಕಾ ಕ್ರಾಂತಿಯು ಆರಂಭ ಆಗಿತ್ತು. ಇದು ಜಗತ್ತನ್ನು ಬಹಳ ಮುಂದಕ್ಕೆ ತೆಗೆದುಕೊಂಡು ಹೋಯಿತು. ಆದರೆ ಅದರಿಂದ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಾಯಿತು ಅನ್ನೋದು ನಮ್ಮ ಗಮನಕ್ಕೆ ತಡವಾಗಿ ಬಂದಿತು!

20ನೇ ಶತಮಾನದಲ್ಲಿ ಆಯಿತು ಇಂಟರ್ನೆಟ್ ಕ್ರಾಂತಿ!

20ನೆಯ ಶತಮಾನದಲ್ಲಿ ಕೊನೆಯ ಭಾಗದಲ್ಲಿ ಆರಂಭವಾದ ಇಂಟರ್ನೆಟ್ ಕ್ರಾಂತಿಯು ಇಡೀ ಜಗತ್ತನ್ನು ಕಿರಿದು ಮಾಡಿತು! ಮೊಬೈಲಿನಂತಹ ಸಂವಹನ ಮಾಧ್ಯಮಗಳು ಪ್ರಭಾವಶಾಲಿ ಆಗಿ ಸಮಾಜವನ್ನು ತಲುಪಿದವು. ಉಪಗ್ರಹ ಆಧಾರಿತ ನೇರಪ್ರಸಾರ ಕಾರ್ಯಕ್ರಮಗಳು ಇಂದು ಶಿಕ್ಷಣ, ಮನರಂಜನೆ, ಆರೋಗ್ಯ ಮತ್ತು ಕೃಷಿಕ್ಷೇತ್ರಗಳಲ್ಲಿ ಮಾಡುತ್ತಿರುವ ಕ್ರಾಂತಿಕಾರಕ ಬದಲಾವಣೆಗಳನ್ನು ಗಮನಿಸಿದಾಗ ಅದು ಇಡೀ ಜಗತ್ತನ್ನು ತಲುಪಿ ಆಗಿದೆ. ಅದರ ಪರಿಣಾಮಗಳು ಇಂದು ನಮ್ಮ ಕಣ್ಣ ಮುಂದಿವೆ!

21ನೆಯ ಶತಮಾನ – ಖಂಡಿತವಾಗಿಯೂ AI ಯುಗ!

AI (Artificial intelligence) ಆರಂಭ ಹೇಗಾಯಿತು? ಎಲ್ಲಾಯಿತು? ಎಂದು ನಾವು ಸಂಶೋಧನೆಗೆ ಇಳಿಯುವ ಮೊದಲೇ ಅದು ದಾಪುಗಾಲು ಹಾಕಿಕೊಂಡು ಜಗತ್ತನ್ನು ಆಕ್ರಮಿಸಿ ಆಗಿದೆ! ಇಂದು ಇಡೀ ಜಗತ್ತಿನ ಎಲ್ಲ ವಿವಿಗಳು AI ಬಗ್ಗೆ ಇಂದು ಗಟ್ಟಿಯಾಗಿ ಮಾತಾಡಲು ಆರಂಭ ಮಾಡಿವೆ. ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಾಲ್ಕು ವರ್ಷಗಳ AI ಕೋರ್ಸ್ ಆರಂಭವಾಗಿ ಫುಲ್ ಅಡ್ಮಿಷನ್ ಆಗಿ ಆಗಿದೆ!

ರೋಬೋಟ್ ಸಿನೆಮಾ ನೆನಪಿದೆಯೇ?

2010ರ ಬ್ಲಾಕ್ ಬಸ್ಟರ್ ಆದ ರೋಬೋಟ್ ಸಿನೆಮಾದಲ್ಲಿ ಒಂದು ಅದ್ಭುತ ದೃಶ್ಯವು ಬರುತ್ತದೆ. ವಸೀಗರನ್ ಎಂಬ ವಿಜ್ಞಾನಿಯು ವಿನ್ಯಾಸ ಮಾಡಿದ ರೋಬೋಟನಲ್ಲಿ ಆತನ ನಿಯಂತ್ರಣ ಮೀರಿ ಅದರಲ್ಲಿ ಭಾವನೆಗಳು ಪ್ಲಾಂಟ್ ಆಗುತ್ತವೆ. ಒಂದು ಸಂದರ್ಭ ಆ ರೋಬೋಟ್ ತನ್ನ ಬುದ್ಧಿಮತ್ತೆಯನ್ನು ಉಪಯೋಗ ಮಾಡಿ ಒಂದು ಕ್ರಿಟಿಕಲ್ ಸರ್ಜರಿ ಮಾಡಿ ಮುಗಿಸುತ್ತದೆ! ಆಗ ವೈದ್ಯಕೀಯ ವಿದ್ಯಾರ್ಥಿನಿಯಾದ ಐಶ್ವರ್ಯಾ ರೈ ಉತ್ಕಟ ಖುಷಿಯನ್ನು ತಡೆದುಕೊಳ್ಳಲು ಆಗದೇ ರೋಬೋಟ್ ಕೆನ್ನೆಗೆ ಒಂದು ಮುತ್ತು ಒತ್ತಿಬಿಡುತ್ತಾಳೆ. ಮುಂದೆ ಏನೆಲ್ಲ ಆಯಿತು ಎಂಬುದನ್ನು ನೀವು ಸಿನೆಮಾದಲ್ಲಿ ನೋಡಿದ್ದೀರಿ!

ಮಾನವನ ಮೆದುಳಿಗೆ ಕನೆಕ್ಟ್ ಆದ ತಂತ್ರಜ್ಞಾನ!

ಈ AI ಕೂಡ ಹಾಗೆಯೇ! ಅದು ಮಾನವನ ಮೆದುಳಿಗೆ ನೇರವಾಗಿ ಕನೆಕ್ಟ್ ಆಗಿರುವ ತಂತ್ರಜ್ಞಾನ ಎಂದು ನನಗೆ ಅರ್ಥ ಆಗಿದೆ. ಅದರಿಂದ ಇದುವರೆಗೆ ಎಕ್ಸಪ್ಲೋರ್ ಆಗದೆ ಇರುವ ನಮ್ಮ ಮೆದುಳಿನ ಸಾಮರ್ಥ್ಯಗಳನ್ನು ಅದು ಹೊರಗೆಳೆಯಲು ಹೊರಟಿದೆ! ಇನ್ನೊಂದು ಅರ್ಥದಲ್ಲಿ ಅದು ಮಾನವನ ಮೆದುಳಿನ ಆಗಾಧ ಸಾಮರ್ಥ್ಯದ ಜೊತೆಗೆ ಸ್ಪರ್ಧೆಗೆ ಹೊರಟಿದೆ. 2030ರ ಹೊತ್ತಿಗೆ ಮನುಷ್ಯನ ಬುದ್ಧಿಮತ್ತೆಯನ್ನು ಮೀರಿಸುವ ಕಂಪ್ಯೂಟರಗಳು ಮಾರುಕಟ್ಟೆಗೆ ಬರಲಿವೆ ಎಂದು ವಿಜ್ಞಾನಿಗಳು ಹೇಳಿರುವುದು ನಮಗೆ, ನಿಮಗೆ ಅಪಾಯದ ಗಂಟೆ ಆಗಲಿದೆ!

ಕಂಪ್ಯೂಟರಗೆ ಮೆದುಳು ಇದೆ, ಆದರೆ ಹೃದಯ ಎಲ್ಲಿಂದ ಬರಬೇಕು?

ಜಗತ್ತಿನಲ್ಲಿ ಕಂಪ್ಯೂಟರ್ ಹೊಸದಾಗಿ ಪರಿಚಯ ಆದಾಗ ನಮಗೆ ವಿಜ್ಞಾನಿಗಳು ಹೇಳಿದ್ದು ಏನೆಂದರೆ ಅದು ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ, ಆದರೆ ಅದಕ್ಕೆ ಕಮಾಂಡ್ ನಾವೇ ಕೊಡಬೇಕು ಎಂದು! ಆದರೆ ಈಗ ತಮಗೆ ತಾವೇ ಕಮಾಂಡ್ ಕೊಟ್ಟುಕೊಳ್ಳುವ ಮೆಶೀನಗಳು ಬಂದಿವೆ. ಅವುಗಳನ್ನು ಮಾನವ ನಿಯಂತ್ರಣ ಮಾಡುವುದು ಹೇಗೆ?

ಮೊದಲೇ ಪ್ರೋಗ್ರಾಮಿಂಗ್ ಆದ ಪಾಠಗಳನ್ನು ತರಗತಿಯಲ್ಲಿ ಒಪ್ಪಿಸುವ ರೋಬೋಟ್ ಶಿಕ್ಷಕರು ಯಾವಾಗಲೋ ಬಂದಾಗಿತ್ತು. ಈಗ ತನಗೆ ಬೇಕಾದ ಪಾಠವನ್ನು ತಾವೇ ಆರಿಸಿಕೊಂಡು ತಾವೇ ಪ್ರೋಗ್ರಾಮಿಂಗ್ ಮಾಡಿಕೊಂಡು ಪಾಠ ಮಾಡುವ ರೊಬೊಟಗಳು ನಮ್ಮ ಮನೆಯ ಬಾಗಿಲಿಗೆ ಬಂದಾಗಿವೆ. ಮುಂದೆ? ಗೊತ್ತಿಲ್ಲ!

ಬಾಯಲ್ಲಿ ನಾವು ಹೇಳಿದ್ದನ್ನು ಧ್ವನಿಯ ಮೂಲಕ ಗೃಹಿಸಿಕೊಂಡು ಟೈಪ್ ಮಾಡುವ ಸಾಫ್ಟ್ ವೇರ್ ಯಾವಾಗಲೋ ಬಂದಿತ್ತು. ಆದರೆ ಈಗ ಮೆದುಳಿನಲ್ಲಿ ಆಗುವ ಕಂಪನಗಳನ್ನು ಆಧಾರವಾಗಿಟ್ಟುಕೊಂಡು ಅದನ್ನು ಅರ್ಥ ಮಾಡಿಕೊಂಡು ಟೈಪಿಸುವ ಸಾಫ್ಟವೇರಗಳು ಬರ್ತಾ ಇವೆ ಅಂದರೆ ಬೆಚ್ಚಿಬೀಳಬೇಡಿ!

AI ಯುಗದಲ್ಲಿ ಎಲ್ಲವೂ ಸಾಧ್ಯವಿದೆ!

ಕೃಷಿ, ವೈದ್ಯಕೀಯ, ಶಿಕ್ಷಣ, ಮನರಂಜನೆ, ಸಂವಹನ, ಜ್ಞಾನ ಸಂಗ್ರಹ ಈ ಎಲ್ಲ ಕ್ಷೇತ್ರಗಳಲ್ಲಿ AI ಕ್ರಾಂತಿಯು ಈಗಲೇ ಆರಂಭವಾಗಿದೆ.

೧) ನೀವು 4G ಅಥವಾ 6G ಮೊಬೈಲಿನಲ್ಲಿ ಒಂದು ಕಾಮಿಡಿ ವಿಡಿಯೋ ನೋಡಲು ತೊಡಗಿದರೆ ಅದು ಮತ್ತೆ ಮತ್ತೆ ಕಾಮಿಡಿ ವಿಡಿಯೋಗಳನ್ನು ತಂದು ನಿಮಗೆ ಒಪ್ಪಿಸುತ್ತ ಹೋಗುತ್ತದೆ! ನೀವು ಯಕ್ಷಗಾನದ ಒಂದು ವಿಡಿಯೋ ನೋಡಲು ತೊಡಗಿದರೆ ಅದು ಮತ್ತೆ ಮತ್ತೆ ಯಕ್ಷಗಾನದ ವಿಡಿಯೋ ತಂದು ನಿಮಗೆ ಕೊಡುತ್ತದೆ! ಮೊಬೈಲ್ ಯಂತ್ರಕ್ಕೆ ನಿಮ್ಮ ಮೆದುಳು ರೀಡ್ ಮಾಡುವ ಪವರ್ ಹೇಗೆ ಬಂತು ಎಂದು ಯೋಚನೆ ಮಾಡಿ!

೨) ಮನಸ್ಸು ಮಾಡಿದರೆ AI ಮೂಲಕ ಒಂದೆರಡು ಘಂಟೆಗಳಲ್ಲಿ ಒಂದು ಪುಸ್ತಕವನ್ನು ಬರೆದು ಮುಗಿಸಬಹುದು! ಒಂದು ವಾರದ ಅವಧಿಯಲ್ಲಿ 7 ಪುಸ್ತಕ ಬರೆದು ಮುಗಿಸುವ ತಂತ್ರಜ್ಞಾನ ಬಂದಿದೆ ಎನ್ನುತ್ತಾರೆ ವಿಜ್ಞಾನಿಗಳು!

೩) AI ಅದ್ಭುತ ಕಲ್ಪನೆಯನ್ನು ಉತ್ತೇಜನ ಮಾಡುತ್ತದೆ. ಒಂದು ಪದವನ್ನು ಹಿಡಿದುಕೊಂಡು ಒಂದು ಕತೆಯನ್ನೇ ಪೋಣಿಸುವ ಶಕ್ತಿ ಯಂತ್ರಗಳಿಗೆ ಬಂದಿದೆ! ಅದೇ ಕಥೆಯನ್ನು ನಿಮ್ಮದೇ ಧ್ವನಿಯಲ್ಲಿ ಹೆಣೆದು, ಎಡಿಟ್ ಮಾಡಿ, ಮಕ್ಕಳಿಗೆ ಒಪ್ಪಿಸುವ ಕೆಲಸಗಳನ್ನು ಯಂತ್ರಗಳು ಮಾಡುತ್ತವೆ!

೪) ಮೈಸೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಬದಲಿಗೆ AI ಕ್ಯಾಮೆರಾಗಳು ಬಂದಿವೆ! ಇದು ಮುಂದೆ ಇಡೀ ಭಾರತವನ್ನು
ವ್ಯಾಪಿಸಲು ಕೆಲವೇ ತಿಂಗಳು ಸಾಕು. ಅಂದರೆ ಇನ್ನು ಮುಂದೆ ಟ್ರಾಫಿಕ್ ಪೊಲೀಸರ ಮೇಲಿನ ಒತ್ತಡವು ಕಡಿಮೆಯಾಗಲಿದೆ!

೫) ವೈದ್ಯಕೀಯರಂಗದಲ್ಲಿ AI ಕ್ರಾಂತಿಯನ್ನೇ ಮಾಡ್ತಾ ಇದೆ. ವಿಶೇಷವಾಗಿ ಕೃತಕ ಅಂಗಾಂಗ ಜೋಡಿಸಿದವರಿಗೆ ಅದು ಒಳ್ಳೆಯ ಫಲಿತಾಂಶವನ್ನು ಕೊಡಲಿದೆ. AI ಬಳಕೆಯಿಂದ ಮಾನವನ ಸರಾಸರಿ ಜೀವಿತಾವಧಿ ಕೂಡ ಹೆಚ್ಚಲಿದೆ.

೬) ಗರ್ಭದಲ್ಲಿ ಇರುವ ಮಗುವಿನ ಮೇಲೆ AI ಪ್ರಯೋಗಗಳನ್ನು ಮಾಡಿ ಹುಟ್ಟಲಿರುವ ಮಗುವಿನ ಎತ್ತರ, ತೂಕ ಮತ್ತು ಬುದ್ಧಿವಂತಿಕೆಗಳನ್ನು ಕೂಡ ನಿರ್ಧರಿಸುವ ತಂತ್ರಜ್ಞಾನ ಬರಲಿದೆ!

ಇದಿಷ್ಟೇ ಅಲ್ಲ, ಇನ್ನೂ ಸಾವಿರಾರು ಪ್ರಭಾವಗಳು ಇವೆ!

AI ಮುಂದಿನ ದಶಕಗಳಲ್ಲಿ ವಿವಿಧ ರಂಗಗಳಲ್ಲಿ ಕ್ರಾಂತಿಕಾರಕ ವಿದ್ಯಮಾನಗಳನ್ನು ಸೃಷ್ಟಿ ಮಾಡಲಿದೆ ಅನ್ನುತ್ತಾರೆ ವಿಜ್ಞಾನಿಗಳು. ಅದರಲ್ಲಿ ನೈತಿಕ ಆದದ್ದು ಯಾವುದು? ಅನೈತಿಕ ಯಾವುದು ಎಂದು ನಾವು ತರ್ಕಿಸಿ ಉತ್ತರ ಪಡೆಯುವ ಮೊದಲು AI ಇಡೀ ಜಗತ್ತನ್ನು ಸುತ್ತಿಕೊಂಡು ಬಂದಾಗಿರುತ್ತದೆ. ಉದಾಹರಣೆಗೆ ಎಲ್ಲ ಹೆತ್ತವರು ತಮ್ಮ ಮಗು ಇಷ್ಟೇ IQ ಹೊಂದಿರಬೇಕು ಎಂದು ನಿರ್ಧಾರ ತೆಗೆದುಕೊಂಡು ಹೊರಟರೆ ಅಥವಾ ಇದೇ ಬಣ್ಣ, ಇಷ್ಟೇ ಎತ್ತರ, ಇಷ್ಟೇ ತೂಕ ಇರುವ ಮಗು ಬೇಕೆಂದು ಹೊರಟರೆ ಸಮಾಜ ಹೇಗಿರಬಹುದು?

ಅದರ ಜೊತೆಗೆ 2022 -23ರ ವರ್ಷದ ಅವಧಿಯಲ್ಲಿ AI ಆಧಾರಿತವಾದ ಅಪರಾಧಗಳ ಪ್ರಮಾಣವು ಜಗತ್ತನ್ನು 1278% ಪಟ್ಟು ಹೆಚ್ಚಾಗಿದೆ ಎನ್ನುವಾಗ ನಾವು ಬೆಚ್ಚಿಬೀಳದೆ ಇರಲು ಸಾಧ್ಯವೇ?

ಯೋಚಿಸಿ ಮತ್ತು ನಿರ್ಧರಿಸಿ!

ಇದನ್ನೂ ಓದಿ: Inspiration: ರಾಜೇಂದ್ರ ಭಟ್‌ ಅಂಕಣ: ಆಧುನಿಕ ಜಗತ್ತಿನ 30 ಮಹಾ ತಪ್ಪುಗಳು