Saturday, 14th December 2024

Rajendra Bhat Column: ‘ನನಗೆ ಸಮಯ ಕೊಡು’ ಎಂದು ಆ ಮಹಾ ಗಣಿತಜ್ಞ ಸಾಯುವ ಮೊದಲು ದೇವರನ್ನು ಬೇಡಿಕೊಂಡದ್ದು ಯಾಕೆ?

Everest Galois

ಸ್ಫೂರ್ತಿಪಥ ಅಂಕಣ: ಆ ಅದ್ಭುತ ಗಣಿತಜ್ಞನು 21ನೇ ವರ್ಷಕ್ಕೆ ಉಸಿರು ಚೆಲ್ಲಿದ್ದೇಕೆ?

rajendra bhat
  • ರಾಜೇಂದ್ರ ಭಟ್ ಕೆ.

Rajendra Bhat Column: ಫ್ರಾನ್ಸ್ ದೇಶದ ಅತ್ಯಂತ ಪ್ರತಿಭಾವಂತ ಗಣಿತಜ್ಞನ (Mathematician) ಬದುಕು ದುರಂತವಾದದ್ದು ಯಾಕೆ? ಆತನ ಕಥೆಯನ್ನು ಓದುತ್ತಾ ಹೋಗಿ.

ಅವನ ಹೆಸರು ಎವರೆಸ್ಟ್ ಗಾಲ್ವಾ (Everest Galois). ಆತನು ಬದುಕಿದ್ದು 21 ವರ್ಷ ಮಾತ್ರ. ಆದರೆ ಅಷ್ಟರಲ್ಲಿ ಆತ ತಾನೆಷ್ಟು ಪ್ರತಿಭಾವಂತ ಎಂದು ಸಾಬೀತು ಮಾಡಿ ಆಗಿತ್ತು.

ಆತನ ಬಾಲ್ಯದ ಒಂದು ಘಟನೆ…

ಬಾಲ್ಯದಲ್ಲಿ ಅವನು ಒಂದನೇ ತರಗತಿಯಲ್ಲಿ ಓದುತ್ತಿದ್ದಾಗ ತುಂಬಾನೇ ತಂಟೆ ಮಾಡುತ್ತಿದ್ದನು. ಅದನ್ನು ಸಹಿಸಿಕೊಳ್ಳಲು ಆಗದೇ ಅವನ ಟೀಚರ್ ಅವನನ್ನು ಎದುರು ಕರೆದು ಒಂದರಿಂದ ಹತ್ತರವರೆಗೆ ಬರೆದು ಕೂಡಿಸಲು ಹೇಳಿದ್ದರು. ಆತ ಅರ್ಧ ನಿಮಿಷದ ಒಳಗೆ ಉತ್ತರ ಮಾಡಿಕೊಂಡು ಬಂದು 55 ಟೀಚರ್ ಎಂದು ಕಿರುಚಿದ್ದ!

ಸೋಲಲು ಒಪ್ಪದ ಟೀಚರ್ ಮುಂದೆ ಆತನಿಗೆ ಒಂದರಿಂದ ನೂರರವರೆಗೆ ಕೂಡಿಸುವ ಟಾಸ್ಕ್ ನೀಡಿದರು. ಆಗಲೂ ಅವನಿಗೆ ಅರ್ಧ ನಿಮಿಷ ಸಾಕಾಯಿತು. ಉತ್ತರ 5050 ಟೀಚರ್ ಎಂದವನು ಈ ಬಾರಿ ಕಿರುಚಿದ್ದ! ಅದನ್ನು ಕೂಡಿಸಲು ಆ ಟೀಚರಗೆ ತುಂಬಾ ಹೊತ್ತು ತಗುಲಿತ್ತು. ಕೊನೆಗೆ ತನ್ನ ಇಗೋವನ್ನು ಮರೆತು ಟೀಚರ್ ‘ಹೇಗೆ ಮಾಡಿದ್ಯೋ ಹುಡುಗಾ?’ಎಂದು ಕೇಳಿದ್ದರು.

ನೀವೆಲ್ಲ ಕೂಡಿಸುವ ಹಾಗೆ ನಾನು ಮಾಡಲೇ ಇಲ್ಲ!

ಆತ ನಗುತ್ತಾ ‘ ಟೀಚರ್, ನೀವೆಲ್ಲ ಕೂಡಿಸುವ ಹಾಗೆ ನಾನು ಕೂಡಿಸಲೇ ಇಲ್ಲ. ನೀವು 1+2=3, 3+3=6, 6+4=10…..ಹೀಗೆ ಕೂಡಿಸುತ್ತೀರಿ. ನಾನು ಹಾಗೆ ಕೂಡಿಸಲೇ ಇಲ್ಲ.

1+10=11, 2+9=11, 3+8=11….ಹೀಗೆ 11ರ 5 ಜೋಡಿಗಳು ಅಂದರೆ 55 ಆಗಲೇ ಬೇಕು!

ಅದೇ ರೀತಿ ಒಂದರಿಂದ ನೂರು ಕೂಡಿಸುವಾಗ 1+100=101, 2+99=101, 3+108=101…..ಹೀಗೆ 101ರ 50 ಜೋಡಿಗಳು ಅಂದರೆ 5050 ಆಗಲೇಬೇಕು ಎಂದು ಆ ಒಂದನೇ ತರಗತಿಯ ಹುಡುಗ ಸವಾಲು ಹಾಕಿದ್ದ! ಆತನೇ ಎವರೆಸ್ಟ್.

350 ವರ್ಷಗಳಿಂದ ಪರಿಹಾರ ಸಿಗದೇ ಇದ್ದ ಗಣಿತ ಸಮಸ್ಯೆಯನ್ನು ಅವನು 18ನೇ ವರ್ಷಕ್ಕೆ ಬಿಡಿಸಿ ಮುಗಿಸಿದ್ದನು!

ಅಂತಹ ಮೇರು ಪ್ರತಿಭೆಯ ಬದುಕು ದುರಂತ ಆಯ್ತು. ಯಾಕೆ?

ಆತನ ಬದುಕು ದುರಂತವನ್ನು ಕಾಣಲು ಕಾರಣವೇನು? ಆತನು ಕ್ರಾಂತಿಕಾರಕವಾದ ಭಾಷಣವನ್ನು ಮಾಡಿ ಫ್ರಾನ್ಸ್ ಸರಕಾರವನ್ನು ಟೀಕೆ ಮಾಡುತ್ತಿದ್ದನು. ಸರಕಾರದ ವಿರುದ್ಧ ಭಾಷಣ ಮಾಡಿ ಜನರನ್ನು ಒಗ್ಗೂಡಿಸುತ್ತಿದ್ದನು. ಇದನ್ನು ಸಹಿಸಿಕೊಳ್ಳದ ಅಲ್ಲಿನ ಸರಕಾರವು ಅವನನ್ನು ಶೂಟ್ ಮಾಡಲು ಆಜ್ಞೆ ಹೊರಡಿಸಿತು. ಅಲ್ಲಿನ ಪೊಲೀಸರು ಆತನನ್ನು ಯಾವ ಕರುಣೆಯೂ ಇಲ್ಲದೆ ಶೂಟ್ ಮಾಡಿ ಬಿಸಾಡಿದರು. ಅವರಿಗೆ ಯಾರಿಗೂ ಆತನ ಪ್ರತಿಭೆಯ ಪರಿಚಯವೇ ಇರಲಿಲ್ಲ! ಸರಕಾರಕ್ಕೂ ಆತನ ಗಣಿತ ಸಾಧನೆಯ ಬಗ್ಗೆ ಏನೂ ಗೊತ್ತಿರಲಿಲ್ಲ!

ಆತ ಆಸ್ಪತ್ರೆಯ ಬೆಡ್ ಮೇಲೆ ತನ್ನ ಕೊನೆಯ ಉಸಿರನ್ನು ಎಳೆಯುತ್ತಿದ್ದ. ಪಲ್ಸ್ ನಿಧಾನ ಆಗುತ್ತಿತ್ತು. ಹೃದಯ ಬಡಿತವು ತುಂಬ ಮಂದವಾಗಿ ಕೇಳುತ್ತಿತ್ತು. ವೈದ್ಯರು ಆತನನ್ನು ಪರೀಕ್ಷೆ ಮಾಡಿ ನಾಳೆ ಬೆಳಿಗ್ಗೆ ಒಳಗೆ ಸಾಯ್ತಿಯಾ. ನಿನ್ನ ಕೊನೆಯ ಆಸೆ ಏನು? ಎಂದು ಕೇಳಿದರು.

ಆತನು ‘ ನನಗೆ ಪೆನ್ ಮತ್ತು ಪೇಪರ್ ಬೇಕು, ನನಗೆ ತುಂಬಾ ಬರೆಯುವ ಕೆಲಸ ಇದೆ’ ಎಂದು ಹೇಳಿದನು! ಅವನಿಗೆ ಆಸ್ಪತ್ರೆಯ ಸಿಬ್ಬಂದಿ ಪೇಪರ್ ಮತ್ತು ಪೆನ್ನು ತಂದುಕೊಟ್ಟರು. ಆತ ತಲೆದಿಂಬಿಗೆ ಒರಗಿ ಕೂತು ತಲೆತಗ್ಗಿಸಿ ಬರೆಯಲು ಆರಂಭ ಮಾಡಿದನು. ಮೈ ತುಂಬಾ ನೋವು ತುಂಬಿತ್ತು. ಗುಂಡು ಹೊರತೆಗೆಯಲು ಆಗುತ್ತಿರಲಿಲ್ಲ. ನಿಧಾನಕ್ಕೆ ಕಣ್ಣು ಮಂಜಾಗುತ್ತಿತ್ತು. ಆದರೂ ಮೈಯ್ಯಲ್ಲಿ ಆವೇಶ ಬಂದಂತೆ ಅವನು ಬರೆಯುತ್ತಾ ಹೋದನು. ಬೆಳಿಗ್ಗೆ ಡಾಕ್ಟರ್ ಬಂದು ನೋಡಿದಾಗ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಆದರೆ ರಕ್ತದಲ್ಲಿ ಮುಳುಗಿಹೋಗಿದ್ದ 23 ಪುಟಗಳ ಟಿಪ್ಪಣಿಯು ಅವನ ಹಾಸಿಗೆಯಲ್ಲಿ ದೊರೆಯಿತು.

ಅವನೇನು ಬರೆದಿದ್ದನು ಗೊತ್ತಾ?

ಡಾಕ್ಟರ್ ಆ ರಕ್ತದಲ್ಲಿ ಮುಳುಗಿದ್ದ ಆ ಪತ್ರವನ್ನು ಎತ್ತಿ ಓದಲು ಆರಂಭಿಸಿದರು. ಅವರಿಗೆ ಈಗ ನಿಜವಾಗಿಯೂ ಶಾಕ್ ಆಗಿತ್ತು ಏಕೆಂದರೆ ಆ 21 ವರ್ಷದ ಹುಡುಗನು ಸಾಯುವ ಮೊದಲು ತನ್ನ ತಲೆಯಲ್ಲಿ ಅಪೂರ್ಣವಾಗಿದ್ದ ಗಣಿತದ ಪ್ರಮೇಯಗಳನ್ನು ಬರೆಯುತ್ತಾ ಹೋಗಿದ್ದ! ಮತ್ತು ಅವುಗಳನ್ನು ಮುಂದೆ ಯಾರಾದ್ರೂ ಪೂರ್ತಿ ಮಾಡಲಿ ಎಂದು ಕೂಡ ಬರೆದಿದ್ದ! ಅದರ ಜೊತೆಗೆ ಮಾರ್ಜಿನ್ ಉದ್ದಕ್ಕೂ ‘ ನನಗೆ ಸಮಯ ಕೊಡು ದೇವರೇ, ಸಮಯ ಕೊಡು ದೇವರೇ ‘ ಎಂದು ಬರೆಯುತ್ತಾ ಹೋಗಿದ್ದ!

ಅಂತಹ ಗ್ರೇಟ್ ಗಣಿತದ ಮೇರು ಪ್ರತಿಭೆಗೆ ನಮ್ಮೆಲ್ಲರ ಶ್ರದ್ಧಾಂಜಲಿ ಇರಲಿ.