Sunday, 15th December 2024

ಇವರು ರಾಜ್ಯಸಭಾ ಸದಸ್ಯರಾಗಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದರು !

ಇದೇ ಅಂತರಂಗ ಸುದ್ದಿ

vbhat@me.com

ಇಂದು, ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಸರಕಾರದ ಹಸ್ತಕ್ಷೇಪ ಮತ್ತು ಅವುಗಳ ಮೇಲೆ ರಾಜಕೀಯ ನಿಯಂತ್ರಣವನ್ನು ಬೀರುವ ಪ್ರಯತ್ನಗಳು ಹೊಸದೇನಲ್ಲ ಎಂಬುದನ್ನು ಇತಿಹಾಸದ ಪುಟಗಳು ಹೇಳುತ್ತವೆ. ಚುನಾವಣೆ ಹೊಸ್ತಿಲಲ್ಲಿರುವಾಗ, ಹಾಲಿ ನ್ಯಾಯಾ ಧೀಶರು ತಮ್ಮ ಕಪ್ಪು ಕೋಟು ಕಳಚಿ, ರಾಜಕೀಯ ಪಕ್ಷದ ಪಡಸಾಲೆಯಲ್ಲಿ ನಿಂತು ಬಿಳಿ ಬಟ್ಟೆ ತೊಟ್ಟರೆ ಸಂದೇಹಗಳು ಮೂಡುವುದು ಸಹಜ. ಬೇರೆ ವೃತ್ತಿಯಲ್ಲಿರುವವರ ಸಕ್ರಿಯ ರಾಜಕಾರಣ ಪ್ರವೇಶಕ್ಕೂ, ಹಾಲಿ ನ್ಯಾಯಾಧೀಶರು ರಾಜಕೀಯ ಸೇರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಲೋಕಸಭಾ ಚುನಾವಣೆ ಘೋಷಣೆಯಾಗುವುದಕ್ಕಿಂತ ಎರಡು ವಾರಗಳ ಮೊದಲು, ಕೋಲ್ಕೊತಾ ಹೈಕೋರ್ಟಿನ ನ್ಯಾಯಾಧೀಶರಾದ ಅಭಿಜಿತ್ ಗಂಗೋ
ಪಾಧ್ಯಾಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಯನ್ನು ಸೇರಿದರಷ್ಟೇ. ಹೈಕೋರ್ಟಿನ ನ್ಯಾಯಾಧೀಶರೊಬ್ಬರು ಸೇವೆಯಲ್ಲಿ ಇರುವಾಗ, ತಮ್ಮ ಹುದ್ದೆಯನ್ನು ತೊರೆದು ರಾಜಕೀಯ ಪಕ್ಷವನ್ನು ಸೇರಿದ್ದು ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇದು ಅವರು ಈಗಾಗಲೇ ನೀಡಿದ ತೀರ್ಪಿನ ಸಾಚಾತನವನ್ನು ಪ್ರಶ್ನಿಸುವಂತಾಗಿದೆ.

ಸಾಮಾನ್ಯವಾಗಿ ಹೈಕೋರ್ಟಿನ ಮತ್ತು ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಾಧೀಶರು ನಿವೃತ್ತರಾದ ಬಳಿಕ, ಅಧಿಕಾರಾರೂಢ ಪಕ್ಷದ ಕೃಪಾಕಟಾಕ್ಷದಿಂದ ಒಳ್ಳೆಯ ಹುದ್ದೆಗಳನ್ನು ಪಡೆದು (ಹೊಡೆದು)ಕೊಂಡರೂ ಒಂದಷ್ಟು ಗುಮಾನಿ, ಗುಸುಗುಸು ಆಗದೇ ಹೋಗುವುದಿಲ್ಲ. ಆದರೆ
ಚುನಾವಣೆ ಹೊಸ್ತಿಲಲ್ಲಿರುವಾಗ, ಹಾಲಿ ನ್ಯಾಯಾಧೀಶರು ತಮ್ಮ ಕಪ್ಪುಕೋಟು ಕಳಚಿ, ರಾಜಕೀಯ ಪಕ್ಷದ ಪಡಸಾಲೆಯಲ್ಲಿ ನಿಂತು ಬಿಳಿ ಬಟ್ಟೆ ತೊಟ್ಟರೆ ಸಂದೇಹಗಳು ಮೂಡುವುದು ಸಹಜ.

ಹೀಗಾಗಿ ಅಭಿಜಿತ್ ಗಂಗೋಪಾಧ್ಯಾಯ ಅವರ ನಡೆ ವಿವಾದಕ್ಕೆ, ಚರ್ಚೆಗೆ ಗುರಿಯಾಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಬೇರೆ ವೃತ್ತಿಯಲ್ಲಿರುವವರ ಸಕ್ರಿಯ ರಾಜಕಾರಣ ಪ್ರವೇಶಕ್ಕೂ, ಹಾಲಿ ನ್ಯಾಯಾಧೀಶರು ರಾಜಕೀಯ ಸೇರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನ್ಯಾಯಪೀಠದಲ್ಲಿ ಕುಳಿತವರು ನಿಷ್ಪಕ್ಷಪಾತವಾಗಿ, ಕಾನೂನಿನ ಪ್ರಕಾರ ನಡೆಯುತ್ತಾರೆ ಎಂಬ ವಿಶ್ವಾಸ, ಭರವಸೆ ಜನರಲ್ಲಿರುತ್ತದೆ. ಆದರೆ ಹೈಕೋರ್ಟಿನ ನ್ಯಾಯಾಧೀಶರ ಇಂಥ ನಡೆ ನಮ್ಮ ನ್ಯಾಯವ್ಯವಸ್ಥೆಯ ಮೇಲೆಯೇ ಸಂಶಯ ಕವಿಯುವಂತೆ ಮಾಡುತ್ತದೆ. ಬಿಜೆಪಿ ಸೇರಿದ ಅಭಿಜಿತ್ ಗಂಗೋಪಾಧ್ಯಾಯ ಈಗಾಗಲೇ ನೀಡಿದ ತೀರ್ಪು ಗಳನ್ನು ಪರಾಮರ್ಶೆಗೊಳಪಡಿಸುವ ಅಗತ್ಯವಿದೆ ಎಂದು ಅನೇಕ ರಾಜಕಾರಣಿಗಳು ಮತ್ತು ನ್ಯಾಯವೇತ್ತರು ದನಿಗೂಡಿಸಿರುವುದು ಸರಿಯಾಗಿಯೇ ಇದೆ.

ಉನ್ನತ ಹುದ್ದೆಯಲ್ಲಿ ಕುಳಿತ ಕೆಲವರ ನಡೆ, ಇಡೀ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಅಲುಗಾಡಿಸಿಬಿಡುತ್ತದೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾ ಧೀಶರು ನಿವೃತ್ತ ರಾಗುತ್ತಿದ್ದಂತೆ, ರಾಯಭಾರಿಗಳಾಗುವುದು, ಮಹತ್ವದ ಆಯೋಗಗಳ ಅಧ್ಯಕ್ಷರಾಗುವುದು, ಸಮಿತಿಗಳ ನೇತೃತ್ವವಹಿಸುವುದು, ಸದಸ್ಯ ರಾಗುವುದು, ರಾಜ್ಯಸಭೆ ಸದಸ್ಯರಾಗುವುದು ಹೊಸತೇನಲ್ಲ. ಇಂಥ ನೇಮಕ ಕೇಂದ್ರದಲ್ಲಿರುವ ಪಕ್ಷದ ಸರಕಾರಕ್ಕೆ ಮಾಡಿದ ಉಪಕಾರದ ಋಣಸಂದಾಯ ಎಂದು ಯಾರಾದರೂ ಭಾವಿಸಿದರೆ ತಪ್ಪೇನಿಲ್ಲ. ಎಲ್ಲ ಪಕ್ಷಗಳ ಸರಕಾರಗಳೂ ಕಾಲಕಾಲಕ್ಕೆ ಇಂಥ ನೇಮಕಗಳನ್ನು ಮಾಡುತ್ತಾ ಕೆಟ್ಟ ಸಂಪ್ರದಾಯ ವನ್ನು ಯಥಾಶಕ್ತಿ ಮುಂದುವರಿಸಿಕೊಂಡು ಹೋಗುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ವಿದ್ಯಮಾನ ವಂತೂ ಅಲ್ಲವೇ ಅಲ್ಲ.

ಹಾಲಿ ನ್ಯಾಯಮೂರ್ತಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪಕ್ಷ ಸೇರಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದವರ ಪೈಕಿ ಅಭಿಜಿತ್ ಗಂಗೋಪಾಧ್ಯಾಯ ಅವರೇ ಮೊದಲಿಗರಲ್ಲ, ಕೊನೆಯವರೂ ಅಲ್ಲ. ಈ ಕೆಟ್ಟ ಸಂಪ್ರದಾಯಕ್ಕೆ ಅರ್ಧ ಶತಮಾನದ ಇತಿಹಾಸವಿದೆ. ನೀವು ಕೋಕಾ ಸುಬ್ಬಾ ರಾವ್ ಹೆಸರನ್ನು ಕೇಳಿರಬಹುದು. ಅವರು ಸುಪ್ರೀಂ ಕೋರ್ಟಿನ ಒಂಬತ್ತನೇ (೧೯೬೬-೧೯೬೭) ಮುಖ್ಯ ನ್ಯಾಯಮೂರ್ತಿಗಳಾಗಿದ್ದರು (ಅವರು ಅವಿಭಜಿತ ಆಂಧ್ರಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದರು). ಸಿವಿಲ್ ಲಿಬರ್ಟಿಯ ಪ್ರಬಲ ಪ್ರತಿಪಾದಕರಾಗಿದ್ದ ಸುಬ್ಬಾ ರಾವ್, ನಿವೃತ್ತಿಗೆ ಮೂರು ತಿಂಗಳ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಅವರ ರಾಜೀನಾಮೆ ಅಚ್ಚರಿಯನ್ನುಂಟುಮಾಡಿತ್ತು.

ನಂತರ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷ ಗಳ ಅಭ್ಯರ್ಥಿಯಾಗಿ ಝಕೀರ್ ಹುಸೇನ್ ಅವರ ವಿರುದ್ಧ ಸ್ಪರ್ಧಿಸಿ ಸೋತುಹೋದರು. ಆ ದಿನಗಳಲ್ಲಿ ಸುಬ್ಬಾ ರಾವ್ ನಡೆ ತೀವ್ರ ಟೀಕೆಗೆ ತುತ್ತಾಗಿತ್ತು. ನ್ಯಾಯಮೂರ್ತಿಗಳ ನಡೆ ಚರ್ಚೆಯ ಮುನ್ನೆಲೆಗೆ ಬಂದಾಗ, ನನಗೆ ನೆನಪಾಗುವವರು ಬಹರುಲ್ ಇಸ್ಲಾಂ. ಸಾಮಾನ್ಯವಾಗಿ ನ್ಯಾಯಮೂರ್ತಿಗಳು ಸೇವೆಯಲ್ಲಿದ್ದಾಗ ಅಥವಾ ನಿವೃತ್ತರಾದ ಬಳಿಕ ರಾಜಕಾರಣಿಗಳಿಂದ ಉಪಕೃತರಾಗುವುದು ಸಹಜ. ಆದರೆ
ಬಹರುಲ್ ಇಸ್ಲಾಂ ಅವರದ್ದು ವಿಚಿತ್ರ ಕೇಸು.೧೯೫೧ರಲ್ಲೇ ಇಸ್ಲಾಂ ಹೈಕೋರ್ಟಿನಲ್ಲಿ ವಕೀಲರಾಗಿ, ೧೯೫೮ರಲ್ಲಿ ಸುಪ್ರೀಂ ಕೋರ್ಟಿನ ವಕೀಲರಾಗಿ ವೃತ್ತಿಯನ್ನು ಆರಂಭಿಸಿದರು. ವಕೀಲರಾಗಿರುವಾಗಲೇ ಅವರು ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರಾಗಿದ್ದರು.

೧೯೬೨ ರಲ್ಲಿ ಸ್ವತಃ ಪ್ರಧಾನಿ ನೆಹರು ಅವರೇ, ಇಸ್ಲಾಂ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರು. ಅದಾದ ಬಳಿಕ ಅವರ ಪುತ್ರಿ ಇಂದಿರಾ ಗಾಂಧಿಯವರು ಮತ್ತೊಮ್ಮೆ ಅಂದರೆ ೧೯೬೮ರಲ್ಲಿ ಎರಡನೇ ಬಾರಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮುಂದುವರಿಸಿದರು. ವಿಷಯ ಇದಲ್ಲ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾಗಿ ಹತ್ತು ವರ್ಷ ಸಕ್ರಿಯರಾಗಿದ್ದ ಇಸ್ಲಾಂ ಅವರ ಅವಧಿ ಮುಗಿಯುತ್ತಿದ್ದಂತೆ, ೧೯೭೨ರಲ್ಲಿ ಅವರನ್ನು ಅಸ್ಸಾಂ ಮತ್ತು ನಾಗಾಲ್ಯಾಂಡ್ ಹೈಕೋರ್ಟಿನ ನ್ಯಾಯಾರ್ಧಿಶರನ್ನಾಗಿ ನೇಮಿಸಲಾಯಿತು.

ಕಾಂಗ್ರೆಸ್ಸಿನ ಸಕ್ರಿಯ ರಾಜಕಾರಣಿಯೊಬ್ಬರನ್ನು ನ್ಯಾಯಾಧೀಶರಾಗಿ ನೇಮಿಸಿದ್ದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿತು. ಆದರೆ ಇಂದಿರಾ ಗಾಂಧಿಯವರನ್ನು ಪ್ರಶ್ನಿಸುವವರಾದರೂ ಯಾರು? ಅದಾಗಿ ಏಳು ವರ್ಷಗಳ ಬಳಿಕ ಅವರನ್ನು ಅಸ್ಸಾಂ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಾ ಧೀಶರಾಗಿ ನೇಮಕ ಮಾಡಲಾಯಿತು. ನಾಲ್ಕು ತಿಂಗಳ ನಂತರ ಇಸ್ಲಾಂ ಅದೇ ಹೈಕೋರ್ಟಿನ ಪೂರ್ಣಪ್ರಮಾಣದ ಮುಖ್ಯ ನ್ಯಾಯಾಧೀಶರಾಗಿ,
೧೯೮೦ರಲ್ಲಿ ನಿವೃತ್ತರಾದರು. ಸಾಮಾನ್ಯವಾಗಿ ನ್ಯಾಯಾಧೀಶರಾದವರು ನಿವೃತ್ತರಾದ ನಂತರ ಅವರಿಗೆ ಕೋರ್ಟಿನ ವ್ಯಾಪ್ತಿಯ ಹೊರಗಿನ ಹೊಣೆಗಾರಿಕೆ ಗಳನ್ನು ನೀಡುವುದು ಸಾಮಾನ್ಯ. ಆದರೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾದ ಒಂಬತ್ತು ತಿಂಗಳ ಬಳಿಕ ಇಸ್ಲಾಂ ಅವರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು!

ಅಂದರೆ ನಿವೃತ್ತ ಜಡ್ಜ್ ರೊಬ್ಬರನ್ನು ಸುಪ್ರೀಂ ಕೋರ್ಟಿನ ಜಡ್ಜ್ ಆಗಿ ನೇಮಿಸಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಎರಡನೇ ಪ್ರಸಂಗ. ಈ ಹಿಂದೆ ೧೯೬೦ರಲ್ಲಿ ಜವಾಹರಲಾಲ್ ನೆಹರು ಸರಕಾರ ಹೈಕೋರ್ಟ್‌ನಿಂದ ನಿವೃತ್ತರಾಗಿದ್ದ ಎನ್. ರಾಜಗೋಪಾಲ ಅಯ್ಯಂಗಾರ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸಿತ್ತು. ಆಗ ಕೊಲಿಜಿಯಂ ವ್ಯವಸ್ಥೆ ಇರಲಿಲ್ಲ. ಸರಕಾರವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶ ರನ್ನು ನೇಮಿಸುತ್ತಿತ್ತು. ನ್ಯಾಯಾಧೀಶರ ನೇಮಕದಲ್ಲಿ ಅನುಸ ರಿಸಬೇಕಾದ ಎಲ್ಲ ನಿಯಮಗಳನ್ನು ಇಸ್ಲಾಂ ವಿಷಯದಲ್ಲಿ ಗಾಳಿಗೆ ತೂರಲಾಗಿತ್ತು.

ಇಸ್ಲಾಂ ಕತೆ ಇಲ್ಲಿಗೇ ಮುಗಿಯಲಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಮೂರು ವರ್ಷಗಳನ್ನು ಪೂರೈಸಿದಾಗ, ನ್ಯಾಯಮೂರ್ತಿ ಬಹರುಲ್ ಇಸ್ಲಾಂ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರು. ಅಸ್ಸಾಮಿನ ಬಾರ್ಪೇಟಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧೆಗಿಳಿದರು. ಆದರೆ ಚುನಾವಣೆ ಮುಂದೂಡಲ್ಪಟ್ಟಿದ್ದರಿಂದ ಅವರಿಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಅವರನ್ನು ಅಸ್ಸಾಂ ಮುಖ್ಯಮಂತ್ರಿ ಮಾಡಲು ಚರ್ಚೆ ನಡೆದಿತ್ತು. ಆದರೇನಂತೆ, ಮೂರು ತಿಂಗಳಲ್ಲಿ ಇಸ್ಲಾಂ ಅವರು ರಾಜ್ಯಸಭಾಸದಸ್ಯರಾಗಿ ನೇಮಕಗೊಂಡರು. ಜೀವನದಲ್ಲಿ ಒಮ್ಮೆಯಾದರೂ ಕೇಂದ್ರ ಸಚಿವರಾಗಬೇಕು ಎಂಬ ಅವರ ಕನಸು ಈಡೇರಲೇ ಇಲ್ಲ.

ಒಂದು ವೇಳೆ ಲೋಕಸಭಾ ಚುನಾವಣೆ ನಡೆದಿದ್ದರೆ, ಇಸ್ಲಾಂ ಆರಿಸಿ ಬರುತ್ತಿದ್ದರು. ಆರಿಸಿ ಬಂದಿದ್ದರೆ ಮಂತ್ರಿಯೋ, ಮುಖ್ಯಮಂತ್ರಿಯೋ ಆಗುತ್ತಿದ್ದರು. ದೇಶದ ಶಾಸಕಾಂಗ ಮತ್ತು ನ್ಯಾಯಾಂಗ ಚರಿತ್ರೆಯಲ್ಲಿ ಜಸ್ಟೀಸ್ ಬಹರುಲ್ ಇಸ್ಲಾಂ ಅವರಂಥ ಇನ್ನೊಬ್ಬ ವ್ಯಕ್ತಿ ಸಿಗಲಿಕ್ಕಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಯಾಗಿ, ಮುಖ್ಯ ನ್ಯಾಯಮೂರ್ತಿಯಾಗಿ ಮತ್ತು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿರುವಾಗಲೇ ಅವರು ಪ್ರಧಾನಿಯವರನ್ನು ಭೇಟಿ ಮಾಡುತ್ತಿದ್ದರು. ಇಂದಿರಾ ಗಾಂಧಿಯವರ ಕಾಲಿಗೆ ಬೀಳುತ್ತಿದ್ದರು. ಇಂದಿರಾ ಗಾಂಧಿ ಮುಂದೆ ಇವರು ಕುಳಿತುಕೊಳ್ಳುತ್ತಿರಲಿಲ್ಲ. ಅಂಥ ನ್ಯಾಯ, ವಿನಯ, ವಿಧೇಯತೆ! ಕುಳಿತುಕೊಳ್ಳುವಂತೆ ಪ್ರಧಾನಿ ಹೇಳಿದರೂ ಹಲ್ಲುಗಿಂಜುತ್ತಾ ನಿಂತಿರುತ್ತಿದ್ದರು. ಅವರು ಪ್ರಧಾನಿಯವರ ಭೇಟಿಗೆ ಬಂದಾಗಲೆಲ್ಲ ಕೈಯಲ್ಲೊಂದು ಅಪ್ಲಿಕೇಶನ್ ಇರುತ್ತಿತ್ತು. ಜಸ್ಟೀಸ್ ಇಸ್ಲಾಂ ಹೇಳಿದ ಯಾವ ಕೆಲಸಕ್ಕೂ ಇಂದಿರಾ ಇಲ್ಲವೆನ್ನುತ್ತಿರಲಿಲ್ಲ.

ಜಸ್ಟೀಸ್ ಇಸ್ಲಾಂ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇಮಕವಾದಾಗ ಇಡೀ ನ್ಯಾಯಾಂಗ ಬೆಚ್ಚಿಬಿದ್ದಿತ್ತು. ಈಗಾಗಲೇ ನಿವೃತ್ತರಾದವರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನಾಗಿ ನೇಮಿಸುವುದು ಹೇಗೆ ಸಾಧ್ಯ ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು. ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ದ್ದಾಗ, ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಹಗರಣದಲ್ಲಿ ಸಿಲುಕಿಹಾಕಿಕೊಂಡಿದ್ದ ಬಿಹಾರದ ಅಂದಿನ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರನ್ನು
ನಕಲಿ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಿಂದ ಖುಲಾಸೆ ಗೊಳಿಸಿ ಬಚಾವ್ ಮಾಡಿದ್ದರು.

ಜಸ್ಟೀಸ್ ಇಸ್ಲಾಂ ನೀಡಿದ ಈ ತೀರ್ಪು, ಎಲ್ಲರ ಹುಬ್ಬೇರುವಂತೆ ಮಾಡಿತ್ತು. ನಿವ್ರತ್ತರಾದವರನ್ನು ಸುಪ್ರೀಂ ಕೋರ್ಟ್ ಜಡ್ಜ್ ಮಾಡಿದ್ದೇ ಆ ಉದ್ದೇಶ ಕ್ಕಾಗಿತ್ತು. ತಮ್ಮ ಮೇಲಿಟ್ಟ ವಿಶ್ವಾಸಕ್ಕೆ ಪೂರಕವಾಗಿ ಜಸ್ಟೀಸ್ ಇಸ್ಲಾಂ ನಡೆದುಕೊಂಡರು. ಅವರು ರಾಜಕಾರಣದಲ್ಲಿರಲಿ, ನ್ಯಾಯಾಂಗದ ಅಂಗವಾಗಿ ರಲಿ, ಕಾಂಗ್ರೆಸ್ ಪಕ್ಷ ಅವರ ಬೆಂಬಲಕ್ಕೆ ಸದಾ ನಿಂತಿತ್ತು. ಅವರೂ ತಮ್ಮ ನಿಷ್ಠೆಯನ್ನು ಕಾಂಗ್ರೆಸ್ಸಿಗೆ ಮುಡಿಪಾಗಿಟ್ಟಿದ್ದರು. ಇಂದು, ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಸರಕಾರದ ಹಸ್ತಕ್ಷೇಪ ಮತ್ತು ಅವುಗಳ ಮೇಲೆ ರಾಜಕೀಯ ನಿಯಂತ್ರಣವನ್ನು ಬೀರುವ ಪ್ರಯತ್ನಗಳು ಹೊಸದೇನಲ್ಲ ಎಂಬುದನ್ನು ಇತಿಹಾಸದ ಈ ಪುಟಗಳು ಹೇಳುತ್ತವೆ.

ಶಾಸಕಾಂಗ ಮತ್ತು ನ್ಯಾಯಾಂಗ
ನ್ಯಾಯಾಧೀಶರು ರಾಜಕಾರಣಿಗಳಾಗುತ್ತಾರೆ ಮತ್ತು ನಾಯಕರು ನ್ಯಾಯಾಧೀಶರಾಗುತ್ತಾರೆ ಎಂಬುದಕ್ಕೆ ಜಸ್ಟೀಸ್ ಬಹರುಲ್ ಇಸ್ಲಾಂ ಮೊದಲನೆ ಯವರೂ ಅಲ್ಲ, ಕೊನೆಯವರೂ ಅಲ್ಲ. ಭಾರತದ ನ್ಯಾಯ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ (ಪೂರ್ಣ ಹೆಸರು ವೈದ್ಯನಾಥ ಪುರಂ ರಾಮ ಅಯ್ಯರ್ ಕೃಷ್ಣ ಅಯ್ಯರ್) ಬಹು ದೊಡ್ಡ ಹೆಸರು. ಅವರು ದೇಶದ ನ್ಯಾಯಾಂಗ ಕ್ರಿಯಾವಾದದ ಪ್ರವರ್ತಕರು. ದೇಶದಲ್ಲಿ ಕಾನೂನು
ನೆರವು (legal-aid) ಚಳವಳಿಯ ಪ್ರತಿಪಾದಕರು. ಕೃಷ್ಣ ಅಯ್ಯರ್ ಅವರು ರಾಜಕೀಯ ಮತ್ತು ನ್ಯಾಯಾಲಯದ ಜಟಿಲತೆಗೆ ಮತ್ತೊಂದು ನಿದರ್ಶನ.

ಕಾರಣ ಅವರು ನ್ಯಾಯಾಧೀಶರಾಗುವ ಮುನ್ನ ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದರು. ಅಯ್ಯರ್ ಅವರು ೧೯೫೨ರಲ್ಲಿ ಮದ್ರಾಸ್ ವಿಧಾನಸಭೆಗೆ ಕುತುಪರಂಬದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದರು. ೧೯೫೭ರಲ್ಲಿ, ಅಯ್ಯರ್ ಸ್ವತಂತ್ರ ಅಭ್ಯರ್ಥಿಯಾಗಿ ತಲಶ್ಶೇರಿ ಕ್ಷೇತ್ರದಿಂದ ಮತ್ತೊಮ್ಮೆ ಚುನಾವಣೆಗೆ ನಿಂತರು. ಅವರನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಬೆಂಬಲಿಸಿತು. ೧೯೫೭ ಮತ್ತು ೧೯೫೯ರ ನಡುವೆ ಅವರು ಇಎಂಎಸ್ ನಂಬೂ ದಿರಿಪಾಡ್ ನೇತೃತ್ವದ ಸರಕಾರದಲ್ಲಿ ಗೃಹ, ಕಾನೂನು, ಜೈಲು, ವಿದ್ಯುತ್, ನೀರಾವರಿ, ಸಮಾಜ ಕಲ್ಯಾಣ ಮತ್ತು ಒಳನಾಡು ನೀರಾವರಿ ಖಾತೆಗಳ ಸಚಿವ ರಾಗಿದ್ದರು. ೧೯೬೫ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು ಹೋದರು.

೧೯೬೮ರಲ್ಲಿ ಕೃಷ್ಣ ಅಯ್ಯರ್ ಅವರು ಕೇರಳ ಹೈಕೋರ್ಟ್ ನ್ಯಾಯಾಧೀಶರಾದರು. ತಮ್ಮ ರಾಜಕೀಯ ಪ್ರಭಾವದ ಲಾಭವನ್ನು ಪಡೆದು ಐದು ವರ್ಷಗಳ ನಂತರ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದರು. ಸಾಮಾನ್ಯವಾಗಿ, ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುವ ಮೊದಲು, ಕನಿಷ್ಠ ೧೦ ವರ್ಷಗಳನ್ನು ಹೈಕೋರ್ಟ್‌ಗಳಲ್ಲಿ ಕಳೆಯಬೇಕಾಗುತ್ತದೆ. ಆದರೆ ಅದಕ್ಕಿಂತ ಅರ್ಧ ಅವಧಿಯಲ್ಲಿ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ ಪಡೆದಿದ್ದರು.

’ರಾಜಕೀಯವಿಲ್ಲದೇ ಕಾನೂನು ಕುರುಡು ಮತ್ತು ಕಾನೂನು ಇಲ್ಲದೇ ರಾಜಕೀಯ ಕಿವುಡ’ ಎಂದು ಕಾನೂನು ಮತ್ತು ರಾಜಕೀಯದ ನಡುವಿನ ಈ ಸಂಬಂಧವನ್ನು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರೇ ಬಣ್ಣಿಸಿದ್ದಾರೆ.

ಫೈಲನ್ನು ಎಗರಿಸಿಕೊಂಡು ಹೋದರು!

೧೯೮೦ರ ಜನವರಿ ತಿಂಗಳ ಒಂದು ಚುಮುಚುಮು ಚಳಿಯಲ್ಲಿ ದಿಲ್ಲಿಯಲ್ಲಿ ಸ್ಕಾಲರ್ ಎನಿಸಿಕೊಂಡ ಅಮೆರಿಕದ ಮಧ್ಯ ವಯಸ್ಕರೊಬ್ಬರು ಭಾರತದ ಸುಪ್ರೀಂ ಕೋರ್ಟಿನ ಐವರು ನ್ಯಾಯ ಮೂರ್ತಿಗಳನ್ನು ಭೇಟಿ ಮಾಡಿದರು. ಅವರ ಹೆಸರು ಜಾರ್ಜ್ ಎಚ್.ಗಡ್ಬೋಯಿಸ್. ಅವರು ‘ಲಾ ಅಂಡ್ ಸೊಸೈಟಿ ರಿವ್ಯೂ’ ಮತ್ತು ‘ಇಕನಾಮಿಕ್ ಮತ್ತು ಪೊಲಿಟಿಕಲ್ ವೀಕ್ಲಿ’ ಸೇರಿದಂತೆ ಹಲವು ಪ್ರಸಿದ್ಧ ನಿಯತಕಾಲಿಕಗಳಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಬರೆದಿದ್ದಾರೆ.

ನ್ಯಾಯಾಧೀಶರು ತಮ್ಮ ಸಹೋದ್ಯೋಗಿ ನ್ಯಾಯಾಧೀಶರ ಬಗ್ಗೆ ಏನು ಭಾವಿಸಿದ್ದಾರೆ, ಕೋರ್ಟಿನ ಒಳಗಿನ ಕಾರ್ಯವಿಧಾನ, ರಾಜಕೀಯ, ಸರಕಾರ ದೊಂದಿಗಿನ ಅವರ ಒಡನಾಟ, ನ್ಯಾಯಾಧೀಶರ ನೇಮಕ ಪ್ರಕ್ರಿಯೆ ಸೇರಿದಂತೆ ಅನೇಕ ವಿಷಯಗಳ ಕುರಿತು ಅವರು ಭೇಟಿಯಾದ ನ್ಯಾಯಾಧೀಶರು ಗಡ್ಬೋಯಿಸ್‌ಗೆ ಬೆರಗು ಗೊಳಿಸುವ ವಿವರಗಳನ್ನು ನೀಡಿದರು. ಅದು ಕೇವಲ ಆರಂಭ.

ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಗಡ್ಬೋಯಿಸ್ ಇನ್ನೆರಡು ಸಲ ಭಾರತಕ್ಕೆ ಆಗಮಿಸಿದರು. ಸುಮಾರು ೧೧೬ ವ್ಯಕ್ತಿಗಳನ್ನು ಸಂದರ್ಶಿಸಿದರು. ಆ ಪೈಕಿ ಅರವತ್ತಾರು ಮಂದಿ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಿದ್ದರು. ಹದಿನಾರು ಮುಖ್ಯನ್ಯಾಯಮೂರ್ತಿಗಳಿದ್ದರು. ಉಳಿದವರ ಪೈಕಿ ಹಿರಿಯ ವಕೀಲರು, ರಾಜಕಾರಣಿಗಳು, ಕೋರ್ಟಿ ನ ಹಿರಿಯ ಸಿಬ್ಬಂದಿ, ನಿಧನರಾದ ನ್ಯಾಯಾಧೀಶರ ಸಂಬಂಧಿಕರು ಸಹ ಇದ್ದರು. ಪ್ರತಿ ಸಂದರ್ಶನವು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಏಕಾಂತ ಜಗತ್ತಿನ ಆಕರ್ಷಕ ನೋಟದ ಮೇಲೆ ಬೆಳಕು ಚೆಲ್ಲುವಂತಿತ್ತು.

ಉದಾಹರಣೆಗೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎಸ್.ಸಿ. ರಾಯ್ ಅವರ ಪತ್ನಿ ಗಡ್ಬೋಯಿಸ್ ಅವರಿಗೆ, ತಮ್ಮ ಪತಿಯನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಿದ ನಂತರ, ಅಲಹಾಬಾದ್ ನಲ್ಲಿರುವ ತಮ್ಮ ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಕಾನೂನು ಕೆಲಸಗಳನ್ನು ನೋಡಿಕೊಳ್ಳುವಂತೆ ಪ್ರಧಾನಿ ಇಂದಿರಾ ಗಾಂಧಿ ಕೇಳಿಕೊಂಡಿದ್ದರು ಎಂದು ತಿಳಿಸಿದರು. ನೇಮಕವಾದ ಸ್ವಲ್ಪ ಸಮಯದ ನಂತರ, ಆ ನ್ಯಾಯಾದೀಶರು ತಮ್ಮ ಕಚೇರಿಯಲ್ಲಿ ನಿಧನರಾದಾಗ, ಕೆಲವೇ ಕ್ಷಣಗಳಲ್ಲಿ ಕೆಲವರು ಅವರ ಮನೆಗೆ ಧಾವಿಸಿ ಬಂದರು. ಬಂದವರೇ ಆ ಫೈಲುಗಳಿಗಾಗಿ ತಡಕಾಡತೊಡಗಿದರು. ಅವುಗಳಲ್ಲಿ ಏನಿದೆಯೆಂಬುದು ಯಾರಿಗೂ ತಿಳಿಯಬಾರದೆಂದು ಎಲ್ಲ ಫೈಲ್‌ಗಳನ್ನು ಅನಾಮತ್ತಾಗಿ ಎತ್ತಿಕೊಂಡು ಪರಾರಿಯಾದರು. ಆ ಕಾಗದಪತ್ರಗಳನ್ನು ಎತ್ತಿಕೊಂಡು ಹೋದವರು ಪ್ರಧಾನಿಯವರ ನಿಕಟವರ್ತಿಗಳೇ ಆಗಿದ್ದರು!

ಈ ವಿಷಯವನ್ನು ವಕೀಲ ಮತ್ತು ಲೇಖಕ ಅಭಿನವ ಚಂದ್ರಚೂಡ (ಸುಪ್ರೀಂ ಕೋರ್ಟಿನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮಗ) Supreme Whispers: Conversations with judges of the Supreme Court of India ಕೃತಿಯಲ್ಲಿ ಬರೆದಿದ್ದಾರೆ.