Thursday, 21st November 2024

ಇನ್ನೆಷ್ಟು ತಲೆ ಉರುಳಬೇಕು ರಾಮಾ ?

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಈಗ ವ್ಯವಸ್ಥೆಯ ಮುಂದಿರುವುದು ಒಂದೇ: ಇನ್ನೊಂದು ಸಾವು ವ್ಯರ್ಥವಾಗಿಸಬಾರದು. ವ್ಯಕ್ತಿಯ ಸಾವಿಗಿಂತ ಆತನ ಸಾವಿನ ಸಾವೇ ದೊಡ್ಡ ದುರಂತ. ಇದಕ್ಕೆ ಕಾರಣವಾದ ವ್ಯಕ್ತಿಗಳಾಚೆಯ ವ್ಯವಸ್ಥೆ ಬುಡ ಸಮೇತ ಕೀಳಬೇಕು ಮತ್ತು ಅದು ಇನ್ನೆಂದೂ ಚಿಗುರದಂತೆ ನೋಡಿಕೊಳ್ಳಬೇಕು.

ಆಸಾವಿಗೆ ನಾಲ್ಕು ದಿನವಾಯಿತು. ಎಂಟೂವರೆ ಸಾವಿರ ಮೈಲಿ ದೂರದ ಬದುಕಿನ ಎಲ್ಲ ದೈನಂದಿನ ಕೆಲಸದ ನಡುವೆಯೂ ಕ್ಷಣಕ್ಕೊಮ್ಮೆ ಒತ್ತರಿಸಿ ಬಂದು ಕಾಡುತ್ತಿದೆ ಆ ಸಾವು, ಆ ಮುಖ. ಆತನೇನು ಸಂಬಂಧಿಯೂ ಅಲ್ಲ, ಸ್ನೇಹಿತನೂ ಅಲ್ಲ. ಸಾವಿನ ನಂತರವೇ ಕೇಳಿದ
ಹೆಸರು, ನೋಡಿದ ಮುಖ ಅವನದು. ಇಷ್ಟಕ್ಕೂ ಈ ಜಗತ್ತಿನಲ್ಲಿ ಪ್ರತೀ ದಿನ ನಡೆಯುವ ಮರ್ಡರ್‌ಗಳ ಸಂಖ್ಯೆಗೇನು ಕಮ್ಮಿ ಇದೆಯೇ? ಅದೇಕೆ ಈ ಸಾವು ಮಾತ್ರ ಇಷ್ಟು ಕಾಡುತ್ತಿದೆ? ಈ ಸುದ್ದಿ ಬಂದು ಮುಟ್ಟಿದ್ದು ಒಂದು ವಾಟ್ಸ್ಯಾಪ್ ಗುಂಪಿನಲ್ಲಿ – ಆ ಘಟನೆ ಯಾದ ಕೆಲವೇ ನಿಮಿಷದಲ್ಲಿ.

ಆ ವಿಡಿಯೋದಲ್ಲಿ ಹುಡುಗ ಇನ್ನೂ ಬದುಕಿದ್ದ. ಇಂತಹ ವಿಡಿಯೋ ವಾಟ್ಸಾಪ್‌ನಲ್ಲಿ ಬಂದರೆ ನೋಡಲು ಮನಸ್ಸು ಬೇಡವೆನ್ನುತ್ತದೆ. ಇದಾದ ಸ್ವಲ್ಪ ಹೊತ್ತಿನ ಆತ ಕೊನೆಯುಸಿರೆಳೆದ ಎಂಬ ಸುದ್ದಿ ಕೂಡ ಅಲ್ಲಿಯೇ ಬಂತು. ಅಲ್ಲಿಂದ ಮುಂದೆ ಕನ್ನಡ ಟಿವಿ ಚಾನೆಲ್ ನೋಡಲು ಮನಸ್ಸೇ ಆಗುತ್ತಿಲ್ಲ. ಟಿವಿ ಹಚ್ಚಿದರೆ ಮತ್ತದೇ ರಾಜಕಾರಣಿಗಳ ದೊಂಬರಾಟ – ಹೇಳಿಕೆ, ಖಂಡನೆ. ಮತ್ತಿನ್ನೇನು ಇರಲು ಸಾಧ್ಯ? ಸಾಮಾಜಿಕ ಜಾಲತಾಣದಲ್ಲಿಯೂ ಆ ಹುಡುಗನ ಸಾವೇ ಆವರಿಸಿದೆ.

ಇದೆಲ್ಲದರಿಂದ ದೂರವಿದ್ದುಬಿಡಬೇಕು ಅನ್ನಿಸಿದ್ದಿದೆ. ಅದೊಂದು ಹತಾಶೆಯಿಂದ ಹುಟ್ಟಿದ ವೈರಾಗ್ಯ. ಹಾಗಂತ ಇದೇನು ಸ್ಮಶಾನ ವೈರಾಗ್ಯದಂತೆ ಇಂದು ನಿನ್ನೆ ಹುಟ್ಟಿ ನಾಳೆ ಮಾಯವಾಗುವಂಥದ್ದಲ್ಲ. ಅದೆಷ್ಟೋ ವರ್ಷದ ಇತಿಹಾಸ ಈ ಜುಗುಪ್ಸೆಗಿದೆ. ಸ್ವಾತಂತ್ರ್ಯದ ನಂತರದ ಸಾಲು ಸಾಲು ಹಿಂದೂ ನರ ಮೇಧದ ಬಗ್ಗೆ ತಿಳಿದಾಗ, ಹೊನ್ನಾವರದ ಶೆಟ್ಟಿಕೇರಿ ಕೆರೆಯಲ್ಲಿ ಪರೇಶ್ ಮೇಸ್ತ ಹೆಣವಾಗಿ ತೇಲಿದಾಗ, ಗುಜರಾತಿನ ಕಿಶನ್ ಬಾರ್ವಾಡ್, ಕಲ್ಮೇಶ ತಿವಾರಿ, ರೂಪೇಶ್ ಪಾಂಡೆ ಹೀಗೆ ಎಷ್ಟು ಹೆಸರು ಸಾಲಿನಲ್ಲಿ ಹೇಳೋದು. ಅತ್ತ ಪಶ್ಚಿಮ ಬಂಗಾಳದಲ್ಲಿ – ಇತ್ತ ಕೇರಳದ ಕಾಸರ ಗೋಡಿನಲ್ಲಿ, ನಮ್ಮದೇ ಮಂಗಳೂರಿನಲ್ಲಿ.

ಸತ್ತವರ ಹೆಸರು ಸಂಖ್ಯೆಯಾದಾಗ ಆಗುವ ನೋವಿನಲ್ಲಿ ಹುಟ್ಟುವ ಹತಾಶೆಯದು. ಸಾವಿಗಿಂತ ಇನ್ನಷ್ಟು ತೀಕ್ಷ್ಣವಾಗಿ ವೇದನೆ ಕೊಡುವ
ವಿಚಾರ ಈ ರೀತಿ ಧರ್ಮ, ಸಂಸ್ಕೃತಿಯನ್ನು ತನ್ನ ಹೆಗಲ ಮೇಲೆ ಹೊರಲು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಲು ಹೋಗಿ ಅನ್ಯಾಯವಾಗಿ ಸಾಯುವ ಜೀವಗಳು ಕ್ರಮೇಣ, ದಿನಗಳೆದಂತೆ ಅವರೇ ತಪ್ಪಿತಸ್ಥರು ಎನ್ನುವ ನೆರೇಟಿವ್ ಬಿಲ್ಡಪ್ ಆಗಲು ಶುರುವಾದಾಗ. ಈ ದಾಟಿ ಯನ್ನು ಮುಖ್ಯ ವಾಹಿನಿಗಳು – ರಾಷ್ಟ್ರೀಯ ಪತ್ರಿಕೆಗಳು ಬಿಂಬಿಸಲು ಶುರುಮಾಡಿದಾಗ. ಇವರೆಲ್ಲ ಹೀಗಿತ್ತಂತೆ – ವಿಷಯವೇ ಬೇರೆಯಂತೆ – ವೈಯಕ್ತಿಕ ದ್ವೇಷವಂತೆ ಎಂಬಿತ್ಯಾದಿಯನ್ನು ಸುಪ್ತ ವಾಗಿ ಜನರಿಗೆ ಫೀಡ್ ಮಾಡಲು ಶುರುಮಾಡಿದಾಗ.

ಹರ್ಷನ ವಿಚಾರದಲ್ಲಿಯೇ ನೋಡಿ, ದೇಶದಲ್ಲಿ ದೊಡ್ಡ ಹೆಸರುಳ್ಳ ಇಂಗ್ಲಿಷ್ ಪತ್ರಿಕೆಯೊಂದು ‘ಪೊಲೀಸರು ಹರ್ಷನ ಹಿಂದಿನ ಅಪರಾಧ ಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ’ ಎಂಬ ಒಂದು ವಿವರವಾದ ಸುದ್ದಿಯೊಂದನ್ನು ಪ್ರಕಟಿಸಿದೆ. ಇರಬಹುದು ಮತ್ತು ಅದು ಕೂಡ ತನಿಖೆಯಾಗಲಿ. ಕಾನೂನು ಕೊಲೆಯ ಮೋಟಿವ್ ಅನ್ನು ಕಂಡುಹಿಡಿಯಲೇಬೇಕು. ಆದರೆ ಅಂಗೈ ಹುಣ್ಣಿನಂತಿರುವ ಮೋಟಿವ್ ಇದ್ದಾಗ ಅಂದು ವೈಯಕ್ತಿಕ ದ್ವೇಷವನ್ನೇ ಪ್ರೈಮ್ ಮೋಟಿವ್ ಎಂದು ಸಾಧಿಸಲು ವ್ಯವಸ್ಥೆ ಹವಣಿಸುವುದಿದೆಯಲ್ಲ ಅದು ಈ ಎಲ್ಲ ಕೊಲೆಗಳ ಘೋರತೆ.

ಈ ರೀತಿ ಧರ್ಮದ ಕಾರಣಕ್ಕೆ ಎಷ್ಟೋ ಕೊಲೆಗಳಾಗಿವೆ? ಅಲ್ಲ ಆಮೇಲೇನಾಯ್ತು ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಇನ್ನೊಂದು ಇಂತಹ ಘಟನೆಯಾಗುವವರೆಗೆ. ಆಮೇಲೆ ಹೆಸರಷ್ಟೇ ಬದಲು – ಪ್ರಶ್ನೆ ಅದೇ. ಅದೆಲ್ಲದಕ್ಕಿಂತ ಇಂತಹ ಕೊಲೆಯೊಂದು ಊರಿನ ಮಧ್ಯೆ, ಜನ ಓಡಾಡುವ ಜಾಗದಲ್ಲಿಯೇ – ಆ ಊರಿಗೆ ಊರೇ ಎಚ್ಚರವಿರುವಾಗ ನಡೆಯುತ್ತದೆಯಲ್ಲ! ಅಂತಹ ಹಂತಕರ ಧೈರ್ಯಕ್ಕೆ, ಧಾಡಸೀ ತನಕ್ಕೆ ಎಡೆ ಮಾಡಿಕೊಡುವ ಸಮಾಜ ನಿರ್ಮಾಣವಾಗಿದ್ದನ್ನು ಪ್ರಶ್ನಿಸಬಾರದೇಕೆ? ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಗಡಿಯಲ್ಲಿ ಬಿಟ್ಟರೆ ದೇಶದ ಒಳಕ್ಕೆ ಯಾವುದೇ ಬಾಂಬ, ಅಥವಾ ಭಯೋತ್ಪಾದಕ ದಾಳಿಗಳಾಗಲಿಲ್ಲ ಎನ್ನುವುದು ನಿಮಗೆಲ್ಲ ಗೊತ್ತು.

ಅಷ್ಟಕ್ಕೂ ಇಲ್ಲಿ ಭಯೋತ್ಪಾದನೆ ಎಂದರೇನು? ಅದರ ಅರ್ಥವನ್ನು ನಿಮಗೆ ಹೇಳಬೇಕಿಲ್ಲ. ಧರ್ಮದ ಕಾರಣಕ್ಕೆ ಕೊಲ್ಲುವುದೇ ಭಯೋತ್ಪಾ ದನೆ – ಇದು ಜನಸಾಮಾನ್ಯರ ಅರ್ಥ. ಈಗ ಒಂದು ದಶಕದಿಂದೀಚೆ ಒಂದನ್ನು ನೀವು ಸೂಕ್ಷ್ಮದಲ್ಲಿ ಗ್ರಹಿಸಬಹುದು. ಅದೆಂದರೆ
ಭಯೋ ತ್ಪಾದನೆಯನ್ನು ಭಯೋತ್ಪಾದನೆ ಎಂದು ಕರೆಯಲು ಹಿಂದೇಟು ಹಾಕುವ ರಾಜಕಾರಣಿಗಳನ್ನು, ವ್ಯವಸ್ಥೆಯನ್ನು. 2008 ಬೆಂಗಳೂರಿನ ಸರಣಿ ಬಾಂಬ್ ಸ್ಫೋವಾದಾಗ ಅಂದಿನ ಅಧ್ಯಕ್ಷೆ ಪ್ರತಿಭಾ ಪಾಟೀಲ, ಪ್ರಧಾನಿ ಮನಮೋಹನ್ ಸಿಂಗ್ ಆದಿಯಾಗಿ ಮುಖ್ಯಮಂತ್ರಿಯವರೆಗೆ ಎಲ್ಲರೂ ಖಂಡಿಸುತ್ತೇವೆ – ತನಿಖೆ ಮಾಡುತ್ತೇವೆ ಎಂಬ ಹೇಳಿಕೆ ಕೊಟ್ಟಿದ್ದರು.

ಅದ್ಯಾರಿಗೂ ಇದು ಭಯೋತ್ಪಾದಕರ ಚಟುವಟಿಕೆ ಎನ್ನುವ ಧೈರ್ಯ ಇರಲಿಲ್ಲ. ನನಗೆ ನೆನಪಿದ್ದಂತೆ – ಅಂದು ಇದು ಭಯೋತ್ಪಾದನೆ ಎಂದು ಹೇಳುವ ಧೈರ್ಯ ತೋರಿದ್ದು ತಮಿಳುನಾಡಿನ ಜೆ. ಜಯಲಲಿತಾ ಮಾತ್ರ. ಇಂತಹ ಸ್ಥಿತಿ ನಮ್ಮ ದೇಶದ್ದಷ್ಟೇ ಅಲ್ಲ – ಇದೇ ನಡವಳಿಕೆ ಇಂಗ್ಲೆಂಡಿನಲ್ಲೂ ಕಾಣಬಹುದು. ಅಮೆರಿಕದಲ್ಲೂ ಕಾಣಬಹುದು. ಒಬಾಮಾ ಅಧ್ಯಕ್ಷರಾಗಿದ್ದಾಗ – 2015 ರಲ್ಲಿ ಸೈಯದ್ ಫಾರೂಕ್ ಎಂಬ ಪಾಕಿಸ್ತಾನೀ ಮೂಲದ ಅಮೇರಿಕನ್ ಹದಿನಾಲ್ಕು ಜನರನ್ನು ಮನಸೋ ಇಚ್ಛೆ ಗುಂಡು ಹಾರಿಸಿ ಕೊಂದಿದ್ದ. ಒಬಾಮ ಇದನ್ನು ಭಯೋತ್ಪಾದನೆ, ಉಗ್ರ ಕೆಲಸ ಎಂದು ಹೇಳಲು ಹತ್ತು ದಿನ ತೆಗೆದುಕೊಂಡರು.

ಅದು ಕೂಡ ದೇಶವಿಡೀ ಟೀಕಿಸಿದ ನಂತರ. ಅದಕ್ಕಿಂತ ಮೊದಲೇ ಇದು ಧರ್ಮದ ಕಾರಣಕ್ಕೇ ನಡೆಸಿದ ಉಗ್ರ ದಾಳಿ ಎಂದು ಎಲ್ಲರಿಗೂ ತಿಳಿದಾಗಿತ್ತು. ಇಂದು ಭಯೋತ್ಪಾದನೆ ಎನ್ನುವ ಶಬ್ದದ ಸಾರ್ವತ್ರಿಕ ಅರ್ಥವನ್ನು ಎಲ್ಲರೂ ಒಂದೇ ಅರ್ಥದಲ್ಲಿ ಒಪ್ಪಬೇಕು. ಇದು ಸಮಾಜಕ್ಕೆ ಅತ್ಯಂತ ಅವಶ್ಯಕ ಕೂಡ ಹೌದು. ನಮ್ಮಲ್ಲಿ ಪೊಟಾ, ಮೋಕಾ ಮೊದಲಾದ ಅದೆಷ್ಟೋ ಕಾನೂನುಗಳಿವೆಯಲ್ಲ. ಅದ್ಯಾವುದೂ ಸರಕಾರ ಒಂದು ಘಟನೆಯನ್ನು ಭಯೋತ್ಪಾದನೆ ಎಂದು ಒಪ್ಪಿಕೊಳ್ಳುವವರೆಗೆ ಲಾಗೂ ಆಗುವುದಿಲ್ಲ. ಆ ಕಾರಣಕ್ಕೆ ಇದು ಮುಖ್ಯ ವಾಗುತ್ತದೆ. ಧರ್ಮದ ಹೆಸರಿನಲ್ಲಿ ಭಯವನ್ನು ಹುಟ್ಟಿ ಹಾಕುವುದು, ಕೊಲ್ಲುವುದು ಎಲ್ಲವೂ ಭಯೋತ್ಪಾದನೆ.

ಭಾರತದ ಮಟ್ಟಿಗೆ ಅಲ್ಲಿಂದಿಲ್ಲಿಯವರೆಗೂ ನಾಜೂಕಯ್ಯನ ನಡೆ, ಮತ ಬ್ಯಾಂಕ್ ರಾಜಕಾರಣವೇ ಇದೆಲ್ಲ ಅವಾಂತರಗಳಿಗೆ ಕಾರಣ ವಾದದ್ದು. ಇತಿಹಾಸ ನೋಡಿದರೆ ಹಿಂದೂ ಧರ್ಮದವರೆಂಬ ಕಾರಣಕ್ಕೆ ನಡೆದ ನರಮೇಧ ಒಂದೆರಡಲ್ಲ. ಸ್ವಾತಂತ್ರ್ಯದ ನಂತರ ಪಾಕಿಸ್ತಾನದಲ್ಲಿ ಹಿಂದುಗಳೆಂಬ ಒಂದೇ ಕಾರಣಕ್ಕೆ ನಡೆದ ನರಮೇಧದ ಲೆಕ್ಕವಿಟ್ಟವರು ಯಾರು? ಮಿರ್‌ಪುರದಲ್ಲಿ 1947ರ ನವೆಂಬರಿನ ಎರಡೇ ದಿನದಲ್ಲಿ ಬರೋಬ್ಬರಿ 20 ಸಾವಿರ ಹಿಂದೂ ಮತ್ತು ಸಿಖ್ಖರ ನರಮೇಧವಾಯಿತು. ಹಿಂದಿನ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ದಾಳಿಯಲ್ಲಿ 1650 ಮನೆಗಳನ್ನು, 343 ದೇವಸ್ಥಾನಗಳನ್ನು ಸುಡಲಾಯಿತು. ಅಲ್ಲಿ ಸತ್ತವರ ಸಂಖ್ಯೆ ಹೊರಜಗತ್ತಿಗೆ ಬರಲೇ ಇಲ್ಲ. ಜಗತ್ತಿನ ಅತಿಹೆಚ್ಚು ಹಿಂದುಗಳಿರುವ ಭಾರತ, ಹಿಂದೂ ವೋಟಿನಿಂದಲೇ ಆರಿಸಿ ಬಂದ ಸರಕಾರ ಇಂತಹ ಒಂದು ನರಮೇಧವನ್ನು ಗಟ್ಟಿಯಾಗಿ ಖಂಡಿಸಲೇ ಇಲ್ಲವಲ್ಲ!

ಇಂತಹ ಘಟನೆಯಾದಾಗ ಭಾರತವೇ ಸೊತ್ತದಿದ್ದರೆ ಹಿಂದೂಗಳ ಬಗ್ಗೆ ಮಾತನಾಡುವವರಾದರೂ ಯಾರು? ಸ್ವಾತಂತ್ರ್ಯಕ್ಕಿಂತ ಮೊದಲು ನಡೆದ ಹಿಂದೂ ನರಮೇಧದ ಇತಿಹಾಸವನ್ನು ಅತ್ಯಂತ ಬುದ್ಧಿವಂತಿಕೆಯಿಂದ ಬ್ರಿಟಿಷರು ಅಳಿಸಿಯೇ ಹೋಗಿದ್ದಾರೆ. ಬಹುಷಃ
ಆಗಲೇ ಪ್ರಯತ್ನ ಪಟ್ಟಿದ್ದರೆ ಇಂಥದ್ದೊಂದು, ಜರ್ಮನಿಯ ನಾಜಿಗಳ ನರಮೇಧವನ್ನು ಹಿಂದಿಕ್ಕುವ ಇತಿಹಾಸ ದಾಖಲಿಸಬಹುದಿತ್ತು. ಹಿಂದೂ ನರಮೇಧವನ್ನು ಅಂದಾಜಿಸುವ https://hindugenocide.com/ ನ ಲೆಕ್ಕದ ಪ್ರಕಾರ ಇಲ್ಲಿಯವರೆಗೆ ಸುಮಾರು 44 ಕೋಟಿ ಹಿಂದುಗಳನ್ನು ಹಿಂದುಗಳೆಂಬ ಒಂದೇ ಕಾರಣಕ್ಕೆ ಕೊಲ್ಲಲಾಗಿದೆ.

ಅದೊಂದು ಅಂದಾಜಿನ ಲೆಕ್ಕವೇ ಇರಬಹುದು. ಅದರ ಅರ್ಧದಷ್ಟು ಮಾತ್ರ ಸತ್ಯವೆಂದುಕೊಂಡರೂ – ಅದು 22 ಕೋಟಿ. ಜಗತ್ತು
ಕಂಡ ಅತ್ಯಂತ ಘೋರ ನರಮೇಧ ಎಂದೇ ಹೇಳುವ ಹಿಟ್ಲರ್ ನ ನಾಜಿ ಸರಕಾರ ನಡೆಸಿದ ನರಮೇಧದಲ್ಲಿ ಸತ್ತ ಯಹೂದಿಗಳ ಸಂಖ್ಯೆ 60 ಲಕ್ಷ. ಸಾವಿನ ಸಂಖ್ಯೆಯ ತುಲನೆ ಸರಿಯಲ್ಲವೆನ್ನುವ ಅರಿವಿದೆ. ಹೋಲಿಕೆ ಮಾಡದಿದ್ದರೆ ಇತಿಹಾಸದಲ್ಲಾದ ಪ್ರಮಾದದ ಪ್ರಮಾಣ ಅರಿವಾಗುವುದಾದರೂ ಹೇಗೆ? ಇಂದು ಸನಾತನಿಗಳಿಗೆ ದೇಶವೇ ಇಲ್ಲದಂತಾಗಿರುವುದು ದುರಂತ. ಅದಕ್ಕಿಂತ ದೊಡ್ಡ ದುರಂತವೆಂದರೆ ಭಾರತದಲ್ಲಿಯೇ ಹಿಂದೂ ಎಂಬ ಕಾರಣಕ್ಕೆ ಕೊಲ್ಲಲ್ಪಡುವುದು ಇಂದಿಗೂ ಮುಂದುವರಿದಿರುವುದು. ಹರ್ಷ ನ ತಾಯಿಯ ಗೋಳಿನ
ವಿಡಿಯೋ ತುಣುಕೊಂದನ್ನು ನೋಡಿದೆ.

ಅದೆಂತಹ ಹೃದಯವಿದ್ರಾವಕ ದ್ರಶ್ಯ ಅದು. ಇದಕ್ಕಿಂತ ಹೃದಯ ಒಡೆಯುವ ಸಮಯ ಆ ತಾಯಿಗೆ ಮುಂದೊಂದು ದಿನ ಕಾದಿದೆ. ಅದು ಇನ್ನೊಂದು ಹರ್ಷನಂತಹ ಹುಡುಗನೇ ಸತ್ತಾಗ ಮತ್ತು ಆಕೆಯ ಮುಂದೆ ಇಂತಹುದೇ ಇನ್ನೊಬ್ಬ ತಾಯಿಯ ಜೊತೆ ಘಟಿಸಿದಾಗ. ಮಗನ ಸಾವಿಗಿಂತ ಆ ಸಾವು ವ್ಯರ್ಥವಾಯಿತು ಎನ್ನುವ ದುಃಖ ಇನ್ನಷ್ಟು ದೊಡ್ಡದು. ಮಗನ ಸಾವಿಗಿಂತ – ಮಗ ಹೊತ್ತ ಆದರ್ಶವನ್ನೇ ಹೊತ್ತು
ಇನ್ನೊಬ್ಬ ಸಾಯುವುದಿದೆಯಲ್ಲ, ಅದು ಆ ಸಾವನ್ನು ಇನ್ನಷ್ಟು ಭೀಕರವಾಗಿಸುತ್ತದೆ.

ಕೊಲೆಗಿಂತ ಹೆಚ್ಚಿಗೆ ಕಾಡುವುದು ಅದರ ಸುತ್ತ ಸೋತ ವ್ಯವಸ್ಥೆಯನ್ನು ಕಾಣುವಾಗ, ಹರ್ಷನ ಶರೀರವನ್ನು ಒಯ್ಯುವಾಗ ಕಲ್ಲು ಎಸೆಯು ವಷ್ಟು ಧೈರ್ಯ ತೋರಿಸುವ, ಇಂತಹ ಸ್ಥಿತಿಯಲ್ಲಿ ಕೂಡ ಕೊಂದವರೇ ಪೊಲೀಸರ ಎದುರೇ ಮಚ್ಚು, ಲಾಂಗುಗಳನ್ನು ಹಿಡಿದು ಬಂದು ನಿಲ್ಲುವ ದ್ರಶ್ಯ ಕಂಡಾಗ, ಪೊಲೀಸರು ನಿಸ್ಸಹಾಯಕರಾಗಿ ಅವರನ್ನು ಹಿಡಿದು ಬಾರಿಸಿ ಒಳಗೆ ಹಾಕದೇ – ದೂರ ಹೋಗಿ ಎಂದು ಓಡಿಸುವ ದ್ರಶ್ಯ ಕಂಡಾಗ, ಚಕ್ರವರ್ತಿ ಸೂಲಿಬೆಲೆಯಂಥವರು ಸರಕಾರಕ್ಕೆ ತಾಕತ್ತಿಲ್ಲ ಎಂದಾಗ ಅದು ಹೌದೆನ್ನಿಸುವಾಗ, ಎಂಪಿಗಳಾದ ಪ್ರತಾಪ್ ಸಿಂಹ, ತೇಜಸ್ವಿ ಅವರ ಧೈರ್ಯಕ್ಕಿಂತ ಅವರು ಇಂತಹ ಹೇಳಿಕೆ ನೀಡುವ ಸ್ಥಿತಿ ನಿರ್ಮಾಣವಾದದ್ದು ಗೋಚರವಾಗುವಾಗ.

ಈಗ ವ್ಯವಸ್ಥೆಯ ಮುಂದಿರುವುದು ಒಂದೇ: ಇನ್ನೊಂದು ಸಾವು ವ್ಯರ್ಥವಾಗಿಸಬಾರದು. ವ್ಯಕ್ತಿಯ ಸಾವಿಗಿಂತ ಆತನ ಸಾವಿನ ಸಾವೇ ದೊಡ್ಡ ದುರಂತ. ಇದಕ್ಕೆ ಕಾರಣವಾದ ವ್ಯಕ್ತಿ ಗಳಾಚೆಯ ವ್ಯವಸ್ಥೆ ಬುಡ ಸಮೇತ ಕೀಳಬೇಕು ಮತ್ತು ಅದು ಇನ್ನೆಂದೂ ಚಿಗುರದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಹರ್ಷನ ಆತ್ಮಕ್ಕೆ ಶಾಂತಿ ಸಿಗಬಹುದೇ ವಿನಃ ಕೊಂದ ನಾಲ್ಕು ಮಂದಿಯನ್ನು ಗಲ್ಲಿಗೇರಿಸುವು ದರಿಂದಲೂ ಅಲ್ಲ, ಅವರ ಕುಟುಂಬಕ್ಕೆ ಲಕ್ಷೋಪಾದಿಯಾಗಿ ಪರಿಹಾರ ಕೊಟ್ಟಾಗಲೂ ಅಲ್ಲ. ಯಾವುದು ಪರಿಹಾರ ಎನ್ನುವುದೇ ಈಗಿರುವ ಪ್ರಶ್ನೆ ಮತ್ತು ಅದಕ್ಕೆ ಉತ್ತರ.