ರಾಮರಥ-೧೨
ಯಗಟಿ ರಘು ನಾಡಿಗ್
naadigru@gmail.com
ಲಂಕಾ ಯುದ್ಧದಲ್ಲಿ ರಾವಣನ ಸಂಹಾರವಾದ ನಂತರ ರಾಮ-ಸೀತೆ ಅಯೋಧ್ಯೆಗೆ ಮರಳುತ್ತಾರೆ. ಆದರೆ ಹನುಮಂತ ಮಾತ್ರ ತನ್ನ ಮೂಲನೆಲೆ ಕಿಷ್ಕಿಂಧೆಗೆ ತೆರಳುವುದಿಲ್ಲ; ತಾನೂ ಅಯೋಧ್ಯೆಗೆ ಬಂದು ಲಕ್ಷ್ಮಣ-ಭರತ-ಶತ್ರುಘ್ನರ ಸಾಂಗತ್ಯದಲ್ಲಿ ಶ್ರೀರಾಮನ ಸೇವೆ-ನಾಮಸ್ಮರಣೆ ಮಾಡಿಕೊಂಡಿರುವುದು ಹನುಮನ ಬಯಕೆಯಾಗಿರುತ್ತದೆ.
ಅಷ್ಟು ಹೊತ್ತಿಗಾಗಲೇ ಅವನ ಸ್ವಾಮಿಭಕ್ತಿ ಅರಿತಿದ್ದ ರಾಮನೂ ಇದಕ್ಕೆ ನಿರಾಕರಿಸದೆ ಜತೆಗೆ ಬರಲು ಹನುಮನಿಗೆ ಅನುಮತಿಸುತ್ತಾನೆ. ಅವನ ಅಬೋಧ
ಕಂಗಳಲ್ಲಿ ರಾಮನೆಡೆಗೆ ಭಕ್ತಿ ಮತ್ತು ಪ್ರೀತಿ ತುಳುಕುವುದನ್ನು ಕಂಡ ಸೀತೆ, ಹನುಮನೆಡೆಗೆ ಮಮಕಾರ-ವಾತ್ಸಲ್ಯ ಹರಿಸಿ ಅವನನ್ನು ಸ್ವಂತ ಮಗನಂತೆ ಪರಿಭಾವಿಸುತ್ತಾಳೆ. ಹೀಗೆ ‘ರಾಮ ಕುಟುಂಬ’ದಲ್ಲಿ ಒಬ್ಬನಾಗಿಬಿಡುವ ಹನುಮನಿಗೆ ಅಯೋಧ್ಯೆಯ ಅರಮನೆಯಲ್ಲಿ ಬೇಕೆಂದರಲ್ಲಿ ತಿರುಗಾಡುವ ಸ್ವಾತಂತ್ರ್ಯ ವಿರುತ್ತದೆ- ರಾಮ ಮತ್ತು ಸೀತೆಯರ ಖಾಸಗಿ ಕೋಣೆಯನ್ನೂ ಒಳಗೊಂಡು!
ಒಂದು ಮುಂಜಾನೆ ಹನುಮ ವಾಡಿಕೆಯಂತೆ ಸೀತಾ-ರಾಮರ ಅಂತಃಪುರ ಪ್ರವೇಶಿಸಿದಾಗ, ಸೀತೆ ಕನ್ನಡಿಯ ಮುಂದೆ ಕುಳಿತು ಅಲಂಕಾರ ಮಾಡಿಕೊಳ್ಳು
ತ್ತಿರುತ್ತಾಳೆ. ಕಪಿಕುಲದ ಹನುಮನಿಗೆ ಇವೆಲ್ಲ ಹೊಸದು; ಹೀಗಾಗಿ ಬೆರಗಿನಿಂದಲೇ ಆ ಪರಿಯನ್ನು ಕಣ್ತುಂಬಿಕೊಳ್ಳುತ್ತಿರುತ್ತಾನೆ. ಅಲಂಕಾರದ ಒಂದು ಭಾಗವಾಗಿ ಸೀತೆ ತನ್ನ ಹಣೆಗೆ ಮತ್ತು ಮಾಂಗಲ್ಯಕ್ಕೆ ಸಿಂಧೂರ ಹಚ್ಚಿಕೊಳ್ಳುವುದು ಕಂಡಾಗಲಂತೂ ಆತನ ಕುತೂಹಲ ಇಮ್ಮಡಿಯಾಗಿ, ‘ತಾಯೇ, ನೀವು ಹೀಗೆ ಹಣೆಗೆ, ಸರದ ಪದಕಕ್ಕೆ ಬಣ್ಣ ಹಚ್ಚಿಕೊಂಡಿದ್ದೇಕೆ? ಇದರಿಂದೇನು ಪ್ರಯೋಜನ?’ ಎಂದು ಅಮಾಯಕವಾಗಿ ಪ್ರಶ್ನಿಸಿಯೇಬಿಡುತ್ತಾನೆ!
ತನ್ನ ಮಾತಿನಲ್ಲಿ ‘ಸರದ ಪದಕ’ ಮತ್ತು ‘ಬಣ್ಣ’ ಎಂಬ ಪದ ಬಳಸಿದ ಹನುಮಂತನ ಮುಗ್ಧತೆಗೆ ಮಾರುಹೋಗುವ ಸೀತೆ, ‘ಹೀಗೆ ಹಣೆಗೆ ಮತ್ತು ಮಾಂಗಲ್ಯಕ್ಕೆ ಸಿಂಧೂರ ಹಚ್ಚಿಕೊಳ್ಳುವುದು ಸುಮಂಗಲಿಯರ ಸಂಕೇತ’ ಎಂದಷ್ಟೇ ಉತ್ತರಿಸಿ ಸುಮ್ಮನಾಗಬಹುದಿತ್ತು. ಆದರೆ ಆಕೆ, ‘ಹೀಗೆ ಸಿಂಧೂರ ಹಚ್ಚಿಕೊಂಡರೆ, ಪತಿಗೆ ದೀರ್ಘಾಯುಷ್ಯ-ಆರೋಗ್ಯ-ಸಮೃದ್ಧಿ ಪ್ರಾಪ್ತವಾಗುತ್ತವೆ. ಯಾ ರನ್ನು ಗಮನದಲ್ಲಿರಿಸಿ ಹೀಗೆ ಸಿಂಧೂರ ಹಚ್ಚಿಕೊಳ್ಳುತ್ತೇವೋ ಅವರ ಮೇಲಿನ ಪ್ರೀತಿ-ಭಕ್ತಿ ಮತ್ತಷ್ಟು
ಹೆಚ್ಚಾಗುತ್ತವೆ’ ಎಂದು ಹನುಮನೆಡೆಗೆ ನೋಡುತ್ತಾಳೆ ತುಂಟ ಕಂಗಳಿಂದ!
ಈ ಮಾತು ಕೇಳುತ್ತಿದ್ದಂತೆ ಅರೆಕ್ಷಣ ಯೋಚಿಸುವ ಹನುಮ, ‘ಇಲ್ಲೇ ಹೋಗಿ ಬರುತ್ತೇನೆ ತಾಯೇ…’ ಎಂದು ಅಲ್ಲಿಂದ ಹೊರಟುಬಿಡುತ್ತಾನೆ. ಕೆಲ ಹೊತ್ತಿನ ನಂತರ ಅಂತಃಪುರಕ್ಕೆ ಆಗಮಿಸುವ ರಾಮ ಸುತ್ತಮುತ್ತಲೂ ಹುಡುಕುತ್ತಿರುವುದನ್ನು ಕಂಡು ಸೀತೆ, ‘ಯಾರನ್ನು ಹುಡುಕುತ್ತಿದ್ದೀರಿ?’ ಎಂದು ಹೇಳುತ್ತಾಳೆ. ಆಗ ರಾಮ, ‘ಹನುಮ ಎಲ್ಲಿ, ಬಹಳ ಹೊತ್ತಿನಿಂದ ಕಾಣುತ್ತಿಲ್ಲವಲ್ಲಾ?’ ಎಂದು ಸಹಜ ಕಾತರದಲ್ಲೇ ಕೇಳುತ್ತಾನೆ. ಆಗ ಹಿಂದಿನಿಂದ, ‘ಇದೋ ಬಂದೆ ಸ್ವಾಮೀ…’ ಎಂಬ ಕೂಗು
ಕೇಳುತ್ತದೆ. ದನಿ ಬಂದತ್ತ ಸೀತಾ-ರಾಮರು ತಿರುಗಿದಾಗ, ಅಲ್ಲಿಗೆ ‘ಟಣ್ಣನೆ’ ಜಿಗಿಯುತ್ತಾನೆ ಹನುಮ. ಅವನ ಅವತಾರ ಕಂಡು ರಾಮ-ಸೀತೆಯರು ಬೆಕ್ಕಸ ಬೆರಗಾಗುತ್ತಾರೆ.
ಕಾರಣ, ತನ್ನ ದೇಹದ ಅಡಿಯಿಂದ ಮುಡಿವರೆಗೆ, ಬಾಲವನ್ನೂ ಬಿಡದಂತೆ ಸಿಂಧೂರ ಪೂಸಿಕೊಂಡು ಬಂದಿರುತ್ತಾನೆ ಹನುಮ! ಆಗ ರಾಮ, ‘ಹನುಮಾ, ಇದೇನೋ ನಿನ್ನ ಅವತಾರ? ಮೈಗೆಲ್ಲಾ ಯಾಕಪ್ಪಾ ಹೀಗೆ ಸಿಂಧೂರ ಬಳಿದುಕೊಂಡಿರುವೆ?’ ಎಂದು ಆಶ್ಚರ್ಯಚಕಿತ ಸ್ವರದಲ್ಲೇ ಕೇಳಿದಾಗ ಹನುಮ ನಡುಬಾಗಿಸಿ ಕೈಮುಗಿದು, ‘ಪ್ರಭೂ, ಅಮ್ಮ ಸೀತಮ್ಮ ಹಣೆಯ ಮೇಲಿಟ್ಟುಕೊಳ್ಳುವ ಚಿಟಿಕೆ ಸಿಂಧೂರದಿಂದ ನಿಮಗೆ ದೀರ್ಘಾಯುಷ್ಯ-ಆರೋಗ್ಯ-ಸಮೃದ್ಧಿ ದಕ್ಕುತ್ತವೆ, ನಿಮ್ಮೆಡೆಗಿನ ಪ್ರೀತಿ-ಭಕ್ತಿ ಹೆಚ್ಚಾಗುತ್ತವೆ ಅಂತಾದರೆ, ನನ್ನಿಡೀ ದೇಹವನ್ನೇ ಸಿಂಧೂರದಲ್ಲಿ ಮುಳುಗಿಸಿರುವೆ. ಹೀಗಾಗಿ ನಿಮಗೊದಗುವ ಸುಪರಿಣಾಮ ಎಷ್ಟೊಂದು ಪಟ್ಟು ಜಾಸ್ತಿಯಾಗುತ್ತೆ ಅಲ್ಲವೇ?’ ಎಂದು ನುಡಿದು ಕಣ್ಣನ್ನು ಪಿಳಿಪಿಳಿ ಮಾಡುತ್ತಾನೆ.
ಈ ಮಾತು ಕೇಳಿ ಸೀತೆ ಗದ್ಗದಿತಳಾಗುತ್ತಾಳೆ, ರಾಮ ಭಾವುಕನಾಗುತ್ತಾನೆ. ಹನುಮನಿಗೆ ತನ್ನ ಮೇಲಿರುವುದು ಅದೆಂಥಾ ಪರಾಕಾಷ್ಠೆಯ ಪ್ರೀತಿ-ಭಕ್ತಿ ಎಂಬುದನ್ನು ಅರಿಯುವ ರಾಮ ಸಂತಸದಿಂದ ಅವನನ್ನು ಬಿಗಿದಪ್ಪಿ, ‘ನಿನ್ನನ್ನು ಸಿಂಧೂರದಿಂದ ಅರ್ಚಿಸುವವರಿಗೆ, ಈ ರಾಮನ ಆಶೀರ್ವಾದ ಮತ್ತು ನಿನ್ನ ಅನುಗ್ರಹ ಎರಡೂ ದಕ್ಕುವಂತಾಗಲಿ. ಶನಿವಾರ ಅಥವಾ ಮಂಗಳವಾರ ನಿನಗೆ ಸಿಂಧೂರ ಅರ್ಪಿಸುವ ಭಕ್ತರಿಗೆ ಬದುಕಿನಲ್ಲಿ ಅತೀವ ಸಂತಸ-ಸಮೃದ್ಧಿ ಸಿಗುವಂತಾಗಲಿ’ ಎಂದು ಆಶೀರ್ವದಿಸುತ್ತಾನೆ. ಅಂದಿನಿಂದ ಭಕ್ತರು ಹನುಮಂತನನ್ನು ಸಿಂಧೂರದಿಂದ ಪೂಜಿಸುವುದು ವಾಡಿಕೆಯಾಗಿದೆ.
ಈಗಲೂ ಬಹುತೇಕ ದೇಗುಲಗಳಲ್ಲಿ ಹನುಮನ ವಿಗ್ರಹಗಳಿಗೆ ಸಿಂಧೂರದಿಂದ ಅಲಂಕರಿಸುವುದು, ಮನೆಗಳಲ್ಲಿ ತಂದಿಟ್ಟುಕೊಳ್ಳುವ ಹಾಗೂ ವಾಹನಗಳಲ್ಲಿ ತೂಗಾಡಿಸುವ (ಹಾರುವ ಭಂಗಿಯಲ್ಲಿನ) ಹನುಮನ ಮೂರ್ತಿಗಳು ಸಿಂಧೂರವರ್ಣದಲ್ಲೇ ಇರುವುದಕ್ಕೆ ಇದೇ ಕಾರಣ! ರಾಮಾಯಣದಲ್ಲಿ ಎಲೆಮರೆಯ ಕಾಯಿಯಂತೆ ಇರುವುದು ಲಕ್ಷ್ಮಣನ ಪತ್ನಿ ಊರ್ಮಿಳೆಯ ಪಾತ್ರ. ಆದರೆ, ರಾಮ-ಸೀತೆ-ಲಕ್ಷ್ಮಣರ ವನವಾಸ ಸುಸೂತ್ರವಾಗುವುದಕ್ಕೆ, ತರುವಾಯ ರಾವಣನ ಜತೆಗಿನ ಯುದ್ಧದಲ್ಲಿ ಜಯ ಸಿಗುವುದಕ್ಕೆ ಊರ್ಮಿಳೆಯ ಮಹತ್ತರ ತ್ಯಾಗದ ಕೊಡುಗೆಯಿದೆ.
ಹೀಗಾಗಿ ಅವಳಿಗೊಮ್ಮೆ ‘ಉಘೇ ಉಘೇ’ ಎನ್ನಲೇಬೇಕು. ಕಾರಣ, ‘ಅನ್ ಕಂಡಿಷನಲ್ ಲವ್’ ಅಥವಾ ‘ಬೇಷರತ್ತಿನ ಪ್ರೀತಿ’ಯ ಕಡಲಾಗಿದ್ದವಳು ಊರ್ಮಿಳೆ.
ಸೀತಾ ಸ್ವಯಂವರಕ್ಕೆ ಜನಕನ ಆಸ್ಥಾನಕ್ಕೆ ತೆರಳುವ ರಾಮ, ಅಲ್ಲಿ ಒಡ್ಡಿದ್ದ ಪಂಥದಂತೆ ಶಿವನ ಧನಸ್ಸನ್ನು ಎತ್ತಿ ಹೆದೆಯೇರಿಸಿ, ಸೀತೆಯನ್ನು ಗೆದ್ದಿದ್ದು ನಿಮಗೆ ಗೊತ್ತಿರುವಂಥದ್ದೇ. ತರುವಾಯ, ದಶರಥನಿಗೆ ಇನ್ನೂ ಮೂವರು ಗಂಡುಮಕ್ಕಳಿರುವ ಸಂಗತಿ ಜನಕನಿಗೆ ಗೊತ್ತಾಗಿ, ಅವರಿಗೆ ತನ್ನ ಮೂವರು ಹೆಣ್ಣುಮಕ್ಕಳನ್ನು ಧಾರೆಯೆರೆಯಲು ನಿರ್ಧರಿಸುತ್ತಾನೆ. ಹೀಗೆ ರಾಮನ ಸೋದರ ಲಕ್ಷ್ಮಣನನ್ನು ವರಿಸಿದವಳೇ ಊರ್ಮಿಳೆ. ಅಕ್ಕ ಸೀತೆಯನ್ನು ಅರೆಕ್ಷಣವೂ ಬಿಟ್ಟಿರಲಾರದ ಈಕೆಗೆ ದೈವಾನುಗ್ರಹದಿಂದಾಗಿ ಆ ಅನುಬಂಧ ಮುಂದುವರಿಯುತ್ತದೆ, ಅತ್ತೆ-ಮಾವನ ಮನೆಯಲ್ಲಿ!
ಆದರೆ ಲಕ್ಷ್ಮಣ ಮತ್ತು ತನ್ನ ನಡುವಿನ ಅನುರಾಗದ ಕ್ಷಣಗಳಿಗೆ ಸದ್ಯದಲ್ಲೇ ಸಂಚಕಾರ ಒದಗಲಿದೆ ಎಂಬುದು ಊರ್ಮಿಳೆಗೆ ಗೊತ್ತಿರುವುದಿಲ್ಲ. ಕೈಕೇಯಿ-ಮಂಥರೆಯರ ಸಂಚಿಗೆ ಬಲಿಯಾಗಿ ರಾಮ-ಸೀತೆ ವನವಾಸಕ್ಕೆ ಹೊರಟಾಗ, ಅಣ್ಣನನ್ನು ಬಿಟ್ಟಿರಲಾಗದ ಲಕ್ಷ್ಮಣ ಅವನೊಟ್ಟಿಗೆ ಹೊರಡುತ್ತಾನೆ. ಸಹಜವಾಗಿಯೇ ಊರ್ಮಿಳೆಯೂ ವನವಾಸಕ್ಕೆ ಜತೆ ಯಾಗಲು ಸನ್ನದ್ಧಳಾದಾಗ ಲಕ್ಷ್ಮಣ ಅವಳನ್ನು ತಡೆಯುತ್ತಾನೆ. ಊರ್ಮಿಳೆಯ ಕಂಗಳಲ್ಲಿ ಪ್ರಶ್ನಾರ್ಥಕ ಚಿಹ್ನೆ ಮತ್ತು ವಿರಹದ
ಕಣ್ಣೀರು. ಅದನ್ನು ಗ್ರಹಿಸುವ ಲಕ್ಷ್ಮಣ ಅವಳನ್ನು ಸಮಾಧಾನಿಸುವ ದನಿಯಲ್ಲಿ, ‘ಪ್ರಿಯೆ ಊರ್ಮಿಳೇ, ೧೪ ವರ್ಷ ವನವಾಸದುದ್ದಕ್ಕೂ ನಾನು ಅಣ್ಣ-ಅತ್ತಿಗೆಯರನ್ನು ದಿನ-ರಾತ್ರಿ ಕಾಯ ಬೇಕಿದೆ, ಹೀಗಾಗಿ ಮಲಗಿ ನಿದ್ರಿಸುವಂತಿಲ್ಲ.
ನಾನು ಬರುವ ತನಕ ನೀನು ಇಲ್ಲೇ ಇದ್ದು, ನಮ್ಮ ಅಪ್ಪ-ಅಮ್ಮಂದಿರ ಸೇವೆ ಮಾಡಿಕೊಂಡಿರಬೇಕು. ಇದುವೇ ನೀನು ನನ್ನಲ್ಲಿ ತೋರಬಹುದಾದ ಅನುರಾಗ’ ಎನ್ನುತ್ತಾನೆ. ಲಕ್ಷ್ಮಣನಲ್ಲಿ ಕೆನೆಗಟ್ಟಿದ್ದ ಭ್ರಾತೃಪ್ರೇಮವನ್ನು ಗ್ರಹಿಸುವ ಊರ್ಮಿಳೆ, ಅದರ ನೆರವೇರಿಕೆಗಾಗಿ ತನ್ನ ಮತ್ತು ಲಕ್ಷ್ಮಣನ ದಾಂಪತ್ಯದ ಕ್ಷಣಗಳನ್ನು ತ್ಯಾಗ
ಮಾಡಲು ಕಟಿಬದ್ಧಳಾಗುತ್ತಾಳೆ. ಹಾಗೇ ಒಮ್ಮೆ ಕಲ್ಪಿಸಿಕೊಳ್ಳಿ, ನವತಾರುಣ್ಯ ಉಕ್ಕುತ್ತಿರುವ, ರಾಜವಂಶದ ಸುಖಭೋಗಗಳನ್ನು ಉಂಡಿದ್ದ ಊರ್ಮಿಳೆ, ತನ್ನ ವಯೋಸಹಜ ಅನುರಾಗದ ಕ್ಷಣಗಳಿಂದ ದೂರವುಳಿಯಬೇಕಾಗಿ ಬರುತ್ತದೆ, ಅದೂ ೧೪ ವರ್ಷಗಳವರೆಗೆ!
ಅದಕ್ಕೆ ಸಂತಸದಿಂದಲೇ ಒಪ್ಪುವ ಊರ್ಮಿಳೆ, ತನ್ಮೂಲಕ ಪ್ರೀತಿ ಮತ್ತು ತ್ಯಾಗಗಳಿಗೆ ಪರ್ಯಾಯಪದವೇ ಆಗಿಬಿಡುತ್ತಾಳೆ. ಈ ತ್ಯಾಗವನ್ನು ಅಳೆಯಲು ಅದ್ಯಾವ
ಅಳತೆಗೋಲಿದೆ ನಮ್ಮ ವ್ಯವಸ್ಥೆಯಲ್ಲಿ?! ರಾಮ-ಸೀತೆಯರು ಲಕ್ಷ್ಮಣನ ಪಾಲಿಗೆ ‘ಅಣ್ಣ-ಅತ್ತಿಗೆ’ ಮಾತ್ರವೇ ಆಗಿರಲಿಲ್ಲ, ಅಕ್ಷರಶಃ ಆತನ ಎರಡು ಕಣ್ಣುಗಳೇ ಆಗಿದ್ದರು. ಈ ಕಣ್ಣುಗಳನ್ನು ‘ಕಣ್ಣಲ್ಲಿ ಕಣ್ಣಿಟ್ಟು’ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯ ನೊಗ ಲಕ್ಷ್ಮಣನ ಹೆಗಲೇರಿತ್ತು. ಹೀಗಾಗಿ ವನವಾಸದ ಮೊದಲ ದಿನವೇ ಅವರಿಬ್ಬರಿಗೆ ಕೈಯಾರೆ ಪರ್ಣಕುಟಿ ನಿರ್ಮಿಸುವ ಲಕ್ಷ್ಮಣ, ಅವರಿಬ್ಬರೂ ಅದರಲ್ಲಿ ವಿರಮಿಸುವಾಗ/ನಿದ್ರಿಸುವಾಗ ಹೊರಗೆ ನಿಂತು ಕಾಯಲು ಕಟಿಬದ್ಧನಾಗುತ್ತಾನೆ.
ರಾತ್ರಿಯ ವೇಳೆಯೂ ನಿದ್ರಿಸದ ಬದ್ಧತೆ ಅವನದಾಗಿರುತ್ತದೆ. ಇದನ್ನು ಗಮನಿಸಿದ ನಿದ್ರಾದೇವಿ, ಹೇಗಾದರೂ ಮಾಡಿ ಲಕ್ಷ್ಮಣನ ಈ ಸಂಕಲ್ಪ ಮುರಿಯಲೆಂದು ಅವನಿಗೆ ಗಾಢನಿದ್ರೆ ಬರಿಸಲು ಇನ್ನಿಲ್ಲದಂತೆ ಹೆಣಗಿದರೂ, ಲಕ್ಷ್ಮಣನ ನಿಷ್ಠೆಯ ಮುಂದೆ ಸೋಲುತ್ತಾಳೆ. ಕೊನೆಯ ಯತ್ನವಾಗಿ ಅವನ ಮುಂದೆ ಪ್ರತ್ಯಕ್ಷಳಾಗಿ, ‘ನಿದ್ರೆಯಿಲ್ಲದಿದ್ದರೆ ಆರೋಗ್ಯ ಹಾಳು, ಸ್ವಲ್ಪವಾದರೂ ನಿದ್ರಿಸು; ನಿನ್ನ ಕರ್ತವ್ಯದಿಂದ ಕೆಲಕಾಲ ವಿಮುಖನಾದರೆ ಏನೂ ತೊಂದರೆಯಿಲ್ಲ’ ಎಂದು ಮನವೊಲಿಸಲು ಯತ್ನಿಸುತ್ತಾಳೆ ನಿದ್ರಾದೇವಿ. ಆದರೆ ಲಕ್ಷ್ಮಣ ಬಡಪೆಟ್ಟಿಗೆ ಮಣಿಯುವುದಿಲ್ಲ. ಅವನ ನಿಷ್ಠೆಗೆ ಕರಗುವ ನಿದ್ರಾದೇವಿ ವರವೊಂದನ್ನು ಬೇಡುವಂತೆ ಸೂಚಿಸಿದಾಗ
ಲಕ್ಷ್ಮಣ, ‘ವನವಾಸದ ೧೪ ವರ್ಷ ಮುಗಿಯುವವರೆಗೆ ನನಗೆ ನಿದ್ರೆ ಬಾರದಂತೆ ಅನುಗ್ರಹಿಸು ತಾಯೇ’ ಎಂದು ಕೋರುತ್ತಾನೆ.
ಆಗ ನಿದ್ರಾದೇವಿ, ‘ಹಾಗೆಂದು ವರ ನೀಡಬಲ್ಲೆ; ಆದರೆ ನಿನ್ನ ಪಾಲಿನ ಆ ೧೪ ವರ್ಷಗಳ ನಿದ್ರೆಯನ್ನು ಮತ್ತೊಬ್ಬರು ಮಾಡಿದರೆ ಮಾತ್ರ ಅದು ಸಾಧ್ಯ’ ಎಂದು ಷರತ್ತು ಹಾಕುತ್ತಾಳೆ. ಆಗ ಲಕ್ಷ್ಮಣ ಇದರಲ್ಲಿ ಸಹಭಾಗಿಯಾಗುವಂತೆ ಊರ್ಮಿಳೆಯನ್ನು ಕೋರಲು ನಿದ್ರಾದೇವಿಯಲ್ಲಿ ಕೇಳಿಕೊಳ್ಳುತ್ತಾನೆ. ಅಂತೆಯೇ ಆದಾಗ, ಊರ್ಮಿಳೆ ಸಂತಸದಿಂದಲೇ ಒಪ್ಪುತ್ತಾಳೆ. ವರದ ಪ್ರಭಾವದಿಂದಾಗಿ ಆಕೆ ಒಮ್ಮೆಯೂ ಎಚ್ಚರಗೊಳ್ಳದಂತೆ ನಿರಂತರ ೧೪ ವರ್ಷ ಅರಮನೆಯಲ್ಲಿ ಮಲಗಿದ್ದ ರಿಂದಲೇ, ಇತ್ತ ಲಕ್ಷ್ಮಣ ವನವಾಸದ ಅವಽಯಲ್ಲಿ ಮತ್ತು ಯುದ್ಧಕಾಲದಲ್ಲಿ ನಿರಂತರ ಎಚ್ಚರದಿಂದಿರಲು ಸಾಧ್ಯವಾಗುತ್ತದೆ. ಲಕ್ಷ್ಮಣ ಮತ್ತು ಊರ್ಮಿಳೆಯರಲ್ಲಿ ಹರಳುಗಟ್ಟಿದ್ದ ನಿರ್ವ್ಯಾಜ ಪ್ರೇಮ, ಅದರ ಹಿಂದಿದ್ದ ತ್ಯಾಗ ಮನೋಭಾವ ಎಂಥದು ನೋಡಿದಿರಾ!
ಈ ಕಥನ ಓದಿದ ಕೆಲವರು, ‘ಹೀಗೆ ವರದಲ್ಲಿ ಸಹಭಾಗಿಯಾಗಿದ್ದಕ್ಕೆ ಊರ್ಮಿಳೆಗೆ ಭರ್ಜರಿ ಪ್ರಯೋಜನವೇ ಆಯಿತಲ್ಲಾ? ರಾಜ ಪರಿವಾರದಲ್ಲಿ ಯಾರ ಸೇವೆಯನ್ನೂ ಮಾಡದೆ ೧೪ ವರ್ಷ ಗಡದ್ದಾಗಿ ನಿದ್ರೆ ಹೊಡೆಯುವ ಸೌಭಾಗ್ಯ ಸಿಕ್ಕಿತಲ್ಲಾ?!’ ಎಂದು ಕೊಂಕು ನುಡಿಯುವುದಿದೆ. ಆದರೆ ವಾಸ್ತವ ಬೇರೆಯೇ
ಇದೆ: ರಾಮ-ರಾವಣರ ಯುದ್ಧದಲ್ಲಿ ಪಾಲ್ಗೊಂಡ ಮಹಾರಥಿಗಳಲ್ಲಿ ರಾವಣನ ಮಗ ಇಂದ್ರಜಿತುವೂ ಒಬ್ಬ. ನಿದ್ರೆಯನ್ನು ಗೆದ್ದಿರುವವನಿಂದ ಮಾತ್ರವೇ ತನಗೆ ಸಾವು ಬರುವಂಥ, ಇನ್ಯಾರೂ ತನ್ನ ಕೂದಲೂ ಕೊಂಕಿಸಲಾಗದಂಥ ವರವನ್ನು ಪಡೆದಿರುತ್ತಾನೆ ಈ ಇಂದ್ರಜಿತು! ಊರ್ಮಿಳೆ ಹಾಗೆ ೧೪ ವರ್ಷ ನಿದ್ರಿಸಿದ್ದರಿಂದಲೇ ಲಕ್ಷ್ಮಣ ನಿದ್ರೆಯನ್ನು ಗೆಲ್ಲಲು ಸಾಧ್ಯವಾಗುತ್ತದೆ ಮತ್ತು ಇಂದ್ರಜಿತುವಿಗೆ ದಕ್ಕಿದ್ದ ವರದಲ್ಲಿ ಪೂರ್ವ ನಿಗದಿಯಾಗಿದ್ದಂತೆ ಅವನ್ನು ಕೊಲ್ಲಲು ಲಕ್ಷ್ಮಣನಿಗೆ ಅದೇ ಶಕ್ತಿಯನ್ನು ತುಂಬುತ್ತದೆ.
ಇಲ್ಲದಿದ್ದರೆ ಇಂದ್ರಜಿತುವಿನ ಸಾವು ಅಸಾಧ್ಯವಾಗಿತ್ತು ಮತ್ತು ಅವನಿಂದಾಗಿ ರಾಮನ ಪಡೆಯಲ್ಲಿನ ಮತ್ತಷ್ಟು ವೀರಯೋಧರಿಗೆ ಪ್ರಾಣಕಂಟಕ ಒದಗುವ ಸಾಧ್ಯತೆ ಯಿತ್ತು. ಅಂಥ ಸಂಚಕಾರವನ್ನು ಹೊಡೆದೋಡಿಸಿ ಇಂದ್ರಜಿತುವನ್ನು ಯಮಪುರಿಗೆ ಅಟ್ಟಲು ಅನುವುಮಾಡಿಕೊಟ್ಟಿದ್ದು ಲಕ್ಷ್ಮಣನ ಸೋದರ ವಾತ್ಸಲ್ಯ, ಬದ್ಧತೆ ಮತ್ತು ಅದಕ್ಕೆ ಒತ್ತಾಸೆಯಾಗಿ ನಿಂತ ಊರ್ಮಿಳೆಯ ತ್ಯಾಗ ಮತ್ತು ಅನುರಾಗ.
(ಲೇಖಕರು ಪತ್ರಕರ್ತರು)