ರಾಮ ವೈಭವ
ಅರುಣ್ ಡಿ.ಎಸ್
ಶ್ರೀರಾಮರು ವಿನಯವಂತಿಕೆ, ಪಿತೃವಾಕ್ಯ ಪರಿಪಾಲನೆ, ಸಜ್ಜನರ ರಕ್ಷಣೆ ಇವೇ ಮೊದಲಾದ ಸದ್ಗುಣಗಳಿಂದಾಗಿ ಪತಿತ-ಪಾವನರಾದಿಯಾಗಿ ಎಲ್ಲರಿಂದಲೂ ಆರಾಧಿಸಲ್ಪಟ್ಟ ಮರ್ಯಾದಾ ಪುರುಷೋತ್ತಮರು. ರಾಮರ ಆದರ್ಶಗಳು ನಮ್ಮಲ್ಲಿ, ನಮ್ಮ ಮಕ್ಕಳಲ್ಲಿ ರಕ್ತಗತವಾಗ ಬೇಕೆಂಬುದು ಸನಾತನ ಸಂಸ್ಕೃತಿಯ ಅಪೇಕ್ಷೆ.
ನಾನು ಚಿಕ್ಕವನಿದ್ದಾಗಿನಿಂದಲೂ, ನಮ್ಮ ತಂದೆ ಶ್ರೀ ಡಿ.ಎಚ್.ಶಂಕರಮೂರ್ತಿಯವರು ನಮ್ಮ ಮನೆಯ ಪಡಸಾಲೆಯಲ್ಲಿ ನಡೆಸುತ್ತಿದ್ದ ಮತ್ತು ರಾಜ್ಯಾ ದ್ಯಂತ ಭಾಗವಹಿಸುತ್ತಿದ್ದ ಸಭೆಗಳಲ್ಲಿ, ಜನಸಂಘದ ಪ್ರಾರಂಭದ ದಿನಗಳಿಂದಲೂ, ಲಕ್ಷಾಂತರ ಜನರ ಮನೆ-ಮನಗಳಲ್ಲಿ ಪುನರಾವರ್ತನೆ ಗೊಳ್ಳುತ್ತಿದ್ದ ಪ್ರಮುಖ ವಿಷಯವೆಂದರೆ- ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರ ಮಂದಿರ ನಿರ್ಮಾಣವಾಗಬೇಕು ಎಂಬುದು.
ನಾನು ಮತ್ತು ನನ್ನ ಓರಗೆಯ ಲಕ್ಷಾಂತರ ದೇಶವಾಸಿಗಳು, ದೇಶಪ್ರೇಮಿಗಳು ರಾಮಮಂದಿರದ ಪ್ರತಿ ಹೋರಾಟದ ದಿನಗಳನ್ನು, ಕರಸೇವೆ-ರಥಯಾತ್ರೆ ಗಳನ್ನು, ನ್ಯಾಯಾಲಯದಲ್ಲಾಗುತ್ತಿದ್ದ ಪ್ರತಿ ಬೆಳವಣಿಗೆಗಳನ್ನು ನೋಡುತ್ತಾ ರಾಮ ಮಂದಿರದ ಕನಸಿಗೆ ಇಂಬು ನೀಡುತ್ತಿದ್ದೆವು. ‘ಗೋಲಿ-ದಂಡಾ ಖಾಯೇಂಗೆ, ಮಂದಿರ್ ವಹೀ ಬನಾಯೇಂಗೇ’, ‘ಪ್ರಭು ಶ್ರೀರಾಮರ ಮೇಲಾಣೆ, ಮಂದಿರವನಲ್ಲೇ ಕಟ್ಟುವೆವು’, ‘ರಕ್ತದ ಕಣಕಣ ಕೂಗುತಿದೆ, ಹಿಂದೂ ಹಿಂದೂ ಎನ್ನುತಿದೆ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತ, ಈ ಹೋರಾಟದಲ್ಲಾದ ಚಿಕ್ಕ ಗೆಲುವುಗಳನ್ನು ಸಂಭ್ರಮಿಸುತ್ತಲೇ ನಾವು ಬೆಳೆದಿದ್ದು. ರಾಮಮಂದಿರ ನಿರ್ಮಾಣ ನಮ್ಮ ಬದುಕಿನ ಅವಿಭಾಜ್ಯ ಅಂಗ, ನಮ್ಮ ಹಿರಿಯರ ಕನಸು, ಧರ್ಮದ ವಿಜಯ ಪತಾಕೆ.
ಹಿಂದೂಗಳನ್ನು ಒಗ್ಗೂಡಿಸಲು, ರಾಷ್ಟ್ರದ ಸಾಮರಸ್ಯದ ಸಂಕೇತವಾಗಿ ಪ್ರಭು ರಾಮರು ವಿರಾಜಮಾನರಾಗುತ್ತಿರುವ ಅಮೋಘ ಕ್ಷಣಗಳಿಗೆ ನಾವು ಸಾಕ್ಷಿಯಾಗುತ್ತಿರುವುದು ನಮ್ಮ ಬಹುಜನ್ಮದ ಪೂಜಾಫಲವೆಂದರೆ ಅತಿಶಯೋಕ್ತಿಯಲ್ಲ. ಸಾಂಸ್ಕೃತಿಕ ರಾಷ್ಟ್ರದ ಪರಿಕಲ್ಪನೆಯ ದೃಷ್ಟಿಯಲ್ಲಿ ಭಾರತವು
ಅಂದೂ ಇಂದೂ ಹಿಂದೂ ರಾಷ್ಟ್ರವೇ ಆಗಿದೆ. ಇದು, ಆ ದೇವರನ್ನು ಪೂಜಿಸುವ ಜನರೆಷ್ಟಿದ್ದಾರೆ, ಆ ಗ್ರಂಥವನ್ನು ಆರಾಧಿಸುವ ಜನರೆಷ್ಟಿದ್ದಾರೆ ಎಂಬ ಆಧಾರದಲ್ಲಿ ಅಲ್ಲ; ಬದಲಾಗಿ, ಈ ನೆಲದ ಮೇಲೆ ಹೃದಯದಾಳದಲ್ಲಿ ಹೊತ್ತು ಕೊಂಡಿರುವ ಭಾವನೆಯ ಕಾರಣಕ್ಕೆ. ರಾಮ ಭಾರತದಲ್ಲೇ ಹುಟ್ಟಿ-ಆಡಿ-ಬೆಳೆದ, ಲಂಕೆಯ ತನಕ ನಡೆದು ಸಾಗಿ ಯುದ್ಧ ಗೆದ್ದು ಬಂದ. ರಾಮ-ರಾಮಾಯಣ ಹೀಗೆ ಭಾರತವನ್ನು ಪೀಳಿಗೆಯಿಂದ ಪೀಳಿಗೆಗಳ ಕಾಲ ಜೋಡಿಸುತ್ತ ಹರಿದು ಬಂದು, ಈ ನೆಲದ ಸಂಸ್ಕೃತಿಯಾಗಿ ಅರಳಿ ನಿಂತಿವೆ.
ನಮ್ಮಲ್ಲಿಯ ವೇಷ-ಭಾಷೆ, ನಂಬಿಕೆ, ಪೂಜಾಪದ್ಧತಿ, ಆಚಾರ – ವಿಚಾರ ಭಿನ್ನವಾಗಿರಬಹುದು; ಆದರೆ ಇವೆಲ್ಲದರ ಅಂತರಾಳದಲ್ಲಿ ಭಾರತವನ್ನು ಜೋಡಿಸುವ ಸಂಸ್ಕೃತಿ ಒಂದೇ ಆಗಿದೆ. ನಾವು ಪೂಜಿಸುವ ಕ್ರಮ ಬೇರೆ ಬೇರೆಯಾಗಿರಬಹುದು, ಆದರೆ ನಮ್ಮ ಹಣೆಯಲ್ಲಿ ಮಿನುಗುವ ಕುಂಕುಮದ ಪರಿಶುದ್ಧತೆಯಲ್ಲಿ ಸಮಾನತೆಯಿದೆ. ಪ್ರಭು ಶ್ರೀರಾಮರು ತಮ್ಮ ದಿವ್ಯಪ್ರಭೆ, ವಿನಯವಂತಿಕೆ, ಪಿತೃವಾಕ್ಯ ಪರಿಪಾಲನೆ, ಸಜ್ಜನರ ರಕ್ಷಣೆ ಇವೇ ಮೊದಲಾದ
ಸದ್ಗುಣಗಳಿಂದಾಗಿ ಪಂಡಿತ-ಪಾಮರ, ಪತಿತ-ಪಾವನರಾದಿಯಾಗಿ ಎಲ್ಲರಿಂದಲೂ ಆರಾಧಿಸಲ್ಪಟ್ಟ ಮರ್ಯಾದಾ ಪುರುಷೋತ್ತಮರು. ರಾಮರ ಆದರ್ಶ ಗುಣಗಳು ನಮ್ಮಲ್ಲಿ, ನಮ್ಮ ಮಕ್ಕಳಲ್ಲಿ ರಕ್ತಗತವಾಗಬೇಕೆಂಬುದು ಸನಾತನ ಸಂಸ್ಕೃತಿಯ ಅಪೇಕ್ಷೆ; ಹೀಗಾಗಿಯೇ ನಮಗೆ ಬಾಲ್ಯದಿಂದಲೂ ರಾಮಾ ಯಣ, ರಾಮಕಥೆ, ರಾಮಭಜನೆಗಳನ್ನು ಹಿರಿಯರು ಹೇಳಿಕೊಡುತ್ತಾ ಬಂದಿದ್ದಾರೆ.
ತಮ್ಮ ಆಚರಣೆಯಲ್ಲಿ ತಾವು ತೊಡಗಿಕೊಂಡು, ಇತರರ ಆಚರಣೆಯನ್ನೂ ಗೌರವಿಸಿ ಬದುಕುತ್ತಿರುವವರ ನಡುವೆ ಒಗ್ಗಟ್ಟು ಮೂಡಬಾರದೆಂಬುದು ಕೆಲವು ಸ್ವಾರ್ಥಿ ರಾಜಕಾರಣಿಗಳ, ಮತಾಂತರಿಗಳ, ಭಯೋತ್ಪಾದಕರ ಮತ್ತು ಭಾರತೀಯ ಅಸ್ಮಿತೆಗೆ ಧಕ್ಕೆ ತರಲು ಯತ್ನಿಸುವ ಅತೃಪ್ತ ಆತ್ಮಗಳ ಮೂಲೋದ್ದೇಶ. ಎಲ್ಲದರಲ್ಲೂ ಕೆಡುಕನ್ನೇ ಹುಡುಕುವ ಇವರೆಲ್ಲ, ಹಿಂದೂ ಸಮಾಜವನ್ನು ಜಾತಿ-ಕುಲ-ಭಾಷೆಯ ಆಧಾರದ ಮೇಲೆ, ಉತ್ತರ-ದಕ್ಷಿಣ
ವೆಂಬ ಆಧಾರದ ಮೇಲೆ ಒಡೆಯುತ್ತಲೇ ತಮ್ಮ ವ್ಯವಹಾರವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ, ಅಧಿಕಾರ ಪಡೆದಿದ್ದಾರೆ; ಮತ್ತೆ ಮತ್ತೆ ಹಿಂದೂ ಸಮಾಜ ವನ್ನು ಒಡೆದಿದ್ದಾರೆ, ಗೆದ್ದು ಗದ್ದುಗೆಯಲ್ಲಿ ಕೂತು ನಕ್ಕಿದ್ದಾರೆ, ಹಿಂದೂಗಳನ್ನು ಅವಮಾನಿಸಿದ್ದಾರೆ.
ಅಸಂಖ್ಯಾತ ಹಿಂದೂಗಳ ಅನವರತ ಹೋರಾಟದ ಫಲವಾಗಿ, ಭಾರತದ ಅಸ್ಮಿತೆಯ ಪ್ರತೀಕವಾದ ರಾಮಮಂದಿರ ಲೋಕಾರ್ಪಣೆಗೊಂಡು ಪ್ರಭು ರಾಮರು ಲೋಕಕ್ಕೆ ಮಂಗಳವುಂಟುಮಾಡಲು ವಿರಾಜಮಾನರಾಗುವ ಶುಭ ಮುಹೂರ್ತದಲ್ಲಿ, ಹಿಂದೂ ಧರ್ಮದ ಒಗ್ಗಟ್ಟನ್ನು ಸಹಿಸದ ಕೆಲವು ಮತಾಂಧರು, ಬ್ರಿಟಿಷರ ಒಡೆದು ಆಳುವ ನೀತಿಯನ್ನು ಕರಗತ ಮಾಡಿಕೊಂಡಿರುವ ದುರುಳರು, ರಾಮ ಮಂದಿರವು ಕೆಲವೇ ಜಾತಿಗೆ ಸೇರಿದ್ದೆಂಬ ವದಂತಿ ಹಬ್ಬಿಸುತ್ತಿದ್ದಾರೆ.
ಹಿಂದೂಗಳೇ, ಎದೆತಟ್ಟಿ ಗಟ್ಟಿಯಾಗಿ ಹೇಳುವ ಬನ್ನಿ- ‘ನಮ್ಮ ರಾಮ ಎಲ್ಲರ ರಾಮ, ಭಕ್ತಿಯಿಂದ ಕರೆದರೆ ಭವ ಬಂಧನವ ತೊಳೆದು ಹರಸುವ ರಾಮ’ ಅಂತ. ದುರುಳರ ಅಪಸ್ವರ-ಅಪಪ್ರಚಾರಗಳ ನಡುವೆಯೂ ರಾಮನ ಸೇವೆಗೆ ಅಣಿಯಾಗುತ್ತಿರುವ ರಾಮಮಂದಿರವನ್ನು ವಿಶ್ವವೇ ಬೆರಗಿನಿಂದ ನೋಡಬೇಕೆಂದು ಅಹರ್ನಿಶಿ ದುಡಿಯುತ್ತಿರುವ ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರು, ಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ತೋರಿರುವ ಸಾಮರಸ್ಯದ ಸಂಕೇತಗಳು ರಾಮರ ಆದರ್ಶಗಳ ಅಭಿವ್ಯಕ್ತಿಯೆಂದರೆ ಅತಿಶಯೋಕ್ತಿಯಲ್ಲ.
ರಾಮಮಂದಿರ ನಿರ್ಮಾಣದಲ್ಲಿ ಹಿಂದೂ ಧರ್ಮದ ಎಲ್ಲಾ ವರ್ಗದವರಿಗೂ ಸೂಕ್ತ ಪ್ರಾತಿನಿಧ್ಯ ನೀಡಿದ್ದಾರೆ. ನಿರ್ಮಾಣ ಸಂಬಂಧಿತ ಟ್ರಸ್ಟ್ ಸ್ಥಾಪಿಸುವ ಕ್ಯಾಬಿನೆಟ್ ನಿರ್ಧಾರವನ್ನು ಘೋಷಿಸಿ, ೧೫ ಸದಸ್ಯರನ್ನೊಳಗೊಂಡ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ಒಬ್ಬರು ದಲಿತರಿಗೆ ಸ್ಥಾನ ಕಡ್ಡಾಯವಾಗಿರುವಂತೆ ನೀತಿ ರೂಪಿಸಿದ್ದಾರೆ. ನಿರ್ಮಾಣ ಮತ್ತು ನಂತರದ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುವ ಟ್ರಸ್ಟ್‌ಗೆ ದಲಿತರಾದ ಕಾಮೇಶ್ವರ್ ಚೌಪಾಲ್ ಅವರನ್ನು ಸೇರಿಸಲಾಗಿದೆ. ಇದಲ್ಲದೆ, ಸಮಾಜದ ಎಲ್ಲ ವರ್ಗದ ಅರ್ಚಕರಿಗೆ ತರಬೇತಿ ನೀಡುವ ಕೇಂದ್ರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ‘ಒಂದು ಸುಳ್ಳನ್ನು ನೂರು ಸಲ ಕಿರುಚಿದರೆ, ಅಮಾಯಕರು ಅದನ್ನೇ ಸತ್ಯವೆಂದು ಭಾವಿಸುತ್ತಾರೆ’ ಎಂಬುದನ್ನರಿತಿರುವ ದುರುಳರು, ಬಾಯಿಗೆ ಬಂದಂತೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.
ರಾಮಮಂದಿರ ನಿರ್ಮಾಣದಿಂದ ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮೂಡಬಹುದೆಂಬ ಆತಂಕದಿಂದ ಇವರು ಹತಾಶೆಯಲ್ಲಿ ಪ್ರಲಾಪಿಸುತ್ತಿದ್ದಾರೆ. ‘ಮಂದಿರ ಉದ್ಘಾಟನೆಯಾದರೆ ಗೋಧ್ರಾ ಮಾದರಿ ಹತ್ಯಾಕಾಂಡವಾಗುತ್ತದೆ, ಹಿಂದೂ ರಾಷ್ಟ್ರವಾದರೆ ದೇಶ ದಿವಾಳಿಯಾಗುತ್ತದೆ, ಸನಾತನ ಧರ್ಮದ ಅಸ್ತಿತ್ವವೇ ಸುಳ್ಳು’ ಹೀಗೆ ಹಿಂದೂ ಧರ್ಮವನ್ನು ಹೀಯಾಳಿಸುವುದನ್ನೇ ದಂಧೆ ಮಾಡಿಕೊಂಡಿದ್ದಾರೆ. ಹಿಂದೂ ವಿರೋಽಗಳನ್ನು ಅತಿಯಾಗಿ ಓಲೈಸುವ, ೩೦ ವರ್ಷಗಳ ನಂತರ ಕರಸೇವಕರನ್ನು ಬಂಧಿಸುವ, ಹನುಮಂತನ ಜನ್ಮವನ್ನೇ ಪ್ರಶ್ನಿಸುವ ಮನಸ್ಥಿತಿಯವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?!
ಹಿಂದೂ ಸಮಾಜ ಛಿದ್ರವಾದರೆ ಇವರ ರಾಜಕೀಯ ಸ್ಥಾನಮಾನಗಳು ಭದ್ರವಾಗುತ್ತವೆ.
‘ಹಿಂದೂ ವಿರೋಧಿಗಳು ಒಗ್ಗಟ್ಟಾಗಿರಬೇಕು, ಹಿಂದೂಗಳಲ್ಲಿ ಸದಾ ಒಂದಲ್ಲಾ ಒಂದು ವಿಷಯಕ್ಕೆ ಬಿಕ್ಕಟ್ಟು ಮೂಡಿರಬೇಕು. ಹಿಂದೂಗಳು ಆಸ್ತಿ-
ಅಂತಸ್ತು, ಜಾತಿ-ಮತ-ಪಂಥ ಇನ್ನೂ ಅನೇಕ ವಿಷಯಗಳಿಗೆ ಹೊಡೆದಾಡುತ್ತಿರಬೇಕು. ನಮ್ಮ ವೋಟ್‌ಬ್ಯಾಂಕ್ ರಾಜಕೀಯಕ್ಕೆ ಸಹಾಯವಾಗುವ ಕೆಲವು ಪಂಗಡಗಳನ್ನು ಓಲೈಕೆ ಮಾಡಿಕೊಂಡು ಚುನಾವಣಾ ಸಮೀಕರಣವನ್ನು ಗೆಲ್ಲಬೇಕು’ ಎಂಬುದು ಇಂಥವರ ಲೆಕ್ಕಾಚಾರ. ಹುಲು ಮಾನವರ ಇಂಥ
ರಾಜಕೀಯ ಲೆಕ್ಕಾಚಾರಗಳು ಸಾವಿರ ವಿದ್ದರೂ, ತಾವು ಯಾರಿಂದ ಪ್ರತಿಷ್ಠಾಪನೆಗೊಳ್ಳಬೇಕೆಂದು ನಿರ್ಧರಿಸುವುದು ಸ್ವತಃ ಮರ್ಯಾದಾ ಪುರುಷೋತ್ತಮ ಶ್ರೀರಾಮರಲ್ಲವೇ? ಅಂತೆಯೇ, ಎಲ್ಲರ ಮನದಲ್ಲಿ ವಿರಾಜಮಾನರಾಗಿರುವ, ರಾಜ ರಾಮರಂತೆ ಪ್ರಜೆಗಳಿಗಾಗಿ ಅನವರತ ದುಡಿಯುವ ಭಾರತದ ಸುಪುತ್ರ ನಿಂದ ಅವರು ಮತ್ತೊಮ್ಮೆ ವೈಭವದಿಂದ ಪ್ರತಿಷ್ಠಾಪನೆಗೊಳ್ಳಲಿದ್ದಾರೆ. ನಮ್ಮ ಹಿರಿಯರು ಕಂಡ ರಾಮ ಮಂದಿರದ ಕನಸು ನನಸಾಗುತ್ತಿದೆ. ರಾಮರು ಸ್ವಕ್ಷೇತ್ರಕ್ಕೆ ವೈಭವದಿಂದ ಮರಳುತ್ತಿದ್ದಾರೆ.
ಹಿಂದೂಗಳಲ್ಲಿಯೇ ಬಿಕ್ಕಟ್ಟನ್ನು ತಂದಿಟ್ಟು ಹೆಜ್ಜೆಹೆಜ್ಜೆಗೂ ಹಿಂದೂಗಳನ್ನು ಹಿಂಸಿಸುವ ಮತ್ತು ಹಿಂದೂ ಸಮಾಜವನ್ನು ಒಡೆಯಲು ಕಟಿಬದ್ಧರಾಗಿ ನಿಂತಿರುವ ದುರುಳರಲ್ಲಿ ಅಡಗಿರುವ ರಾವಣನನ್ನು ಕೊಲ್ಲಲು, ಹಿಂದೂ ಸಮಾಜದ ಒಗ್ಗಟ್ಟೇ ಅತಿದೊಡ್ಡ ರಾಮಬಾಣ. ನಮ್ಮ ಎದೆಯಲ್ಲಿರುವ ರಾಮ
ನಮ್ಮ ಒಗ್ಗಟ್ಟಿಗೆ ಸಾಕ್ಷಿಯಾಗಲಿ, ಹಿಂದೂ ಸಮಾಜಕ್ಕೆ ಮಂಗಳವಾಗಲಿ. ಈ ಪುಣ್ಯಭೂಮಿ ಮತ್ತೊಮ್ಮೆ ರಾಮ ರಾಜ್ಯವನ್ನು ನೋಡುವಂತಾಗಲಿ.
(ಲೇಖಕರು ವಿಧಾನ ಪರಿಷತ್ ಸದಸ್ಯರು)