Sunday, 15th December 2024

ಯೇಸುಬೆಟ್ಟದಲ್ಲಿದ್ದ ಜಾತ್ಯತೀತತೆ ರಾಮಮಂದಿರಕ್ಕೇಕಿಲ್ಲ ?

ವೀಕೆಂಡ್ ವಿತ್‌ ಮೋಹನ್

camohanbn@gmail.com

ಕರ್ನಾಟಕದ ಜನತೆ ಕಳೆದ ಕೆಲವು ವರ್ಷಗಳಿಂದ ಓಲೈಕೆಯ ರಾಜಕಾರಣದ ಪರಮಾವಧಿಯನ್ನು ಪ್ರತಿನಿತ್ಯ ಕಾಣುತ್ತಿದೆ. ಆ ಮಟ್ಟಕ್ಕೆ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಪಕ್ಷಗಳು ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರ ಬೆನ್ನ ಹಿಂದೆ ಬಿದ್ದಿವೆ. ಕಾಂಗ್ರೆಸಿನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಕೆಲ ದಿನಗಳ ಹಿಂದೆ ಕೇವಲ ಅಲ್ಪ ಸಂಖ್ಯಾತರಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆಂಬ ಹೇಳಿಕೆ ನೀಡಿದ್ದರು.

ಚುನಾವಣೆ ಬಂತೆಂದರೆ ಸಾಕು ಸಾಫ್ಟ್ ಹಿಂದುತ್ವದ ರಾಜಕಾರಣ ಮಾಡುವ ಈ ಎರಡೂ ಪಕ್ಷಗಳಿಗೆ ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರೆಂದರೆ ಎಲ್ಲಿಲ್ಲದ ಓಲೈಕೆ. ಈ ಎರಡೂ ಸಮುದಾಯದ ಮತದಾನದ ಪ್ರಮಾಣ ಸದಾಕಾಲ ಶೇ ೮೦ ದಾಟುವು ದನ್ನರಿತಿರುವ ಈ ಎರಡೂ ಪಕ್ಷಗಳು ಅವರ ಬೆನ್ನು ಕೆರೆಯಲು ಸದಾ ಸಿದ್ಧರಾಗಿ ನಿಂತಿರುತ್ತವೆ. ದೇವೇಗೌಡರ ಮುಸಲ್ಮಾನರ ಓಲೈಕೆಯ ಪರಮಾವಧಿ ಯಾವ ಮಟ್ಟಕ್ಕಿಳಿದಿತ್ತೆಂದರೆ ಕಳೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಹಿರಂಗವಾಗಿಯೇ ತಾವು ಮುಂದಿನ ಜನ್ಮದಲ್ಲಿ ಮುಸಲ್ಮಾನ ನಾಗಿ ಹುಟ್ಟುವ ಬಯಕೆ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್‌ನ ಪರಮೇಶ್ವರ್ ಈ ಜನ್ಮದಲ್ಲಿಯೇ ಮುಸಲ್ಮಾನ್ ಧರ್ಮಕ್ಕೆ ಮತಾಂತರವಾಗುವ ಅವಕಾಶವಿದ್ದು, ತಡಮಾಡ ಬೇಡಿ ಎಂದು ಹೇಳಿದ್ದರು. ಆದರೆ ದೇವೇಗೌಡರು ಎಷ್ಟೇ ಓಲೈಕೆ ಮಾಡಿ ದರೂ ಮುಸಲ್ಮಾನರು ಜಾತ್ಯತೀತ ಜನತಾದಳದ ಕೈ ಹಿಡಿಯಲಿಲ್ಲ. ಯಾವಾಗ ಸಿದ್ದರಾಮಯ್ಯ ಜಮೀರ್ ಅಹ್ಮದ್ ಖಾನ್‌ನನ್ನು ಕಾಂಗ್ರೆಸಿಗೆ ಆಪರೇಷನ್ ಮಾಡಿ ಕರೆತಂದರೋ ಜನತಾದಳದ ಮುಸ್ಲಿಂ ವೋಟುಗಳು ಅವರ ಜತೆಯಲ್ಲಿಯೇ ಕಾಂಗ್ರೆಸಿಗೆ ಬಂದುಬಿಟ್ಟವು. ಇಸ್ಲಾಮಿಕ್ ಮೂಲಭೂತವಾದಿಗಳ ಪಾಲಿಗೆ ದೇವರಂತೆ ಕಾಣುವ ಜಮೀರ್ ಖಾನ್, ಸರಕಾರೀ ಅಧಿಕಾರಿಗಳ ಮೇಲೆ ಕೈ ಮಾಡಿದ ಪಿಎಫ್ ಐ ಪುಂಡರಿಗೆ ಪರಪ್ಪನ ಅಗ್ರಹಾರದ ಜೈಲಿನ ಮುಂದೆ ರತ್ನಗಂಬಳಿ ಹಾಸಿ ಸ್ವಾಗತ ಕೋರಿದ್ದರು.

ಇನ್ನು ಕುಮಾರಸ್ವಾಮಿಯ ಓಲೈಕೆ ರಾಜಕಾರಣವನ್ನೂ ಬೆತ್ತಲೆಗೊಳಿಸುವ ಹಲವು ಉದಾಹರಣೆಗಳಿವೆ. ಕೇಂದ್ರ ಸರಕಾರ ಪಿಎಫ್ಐ ಅನ್ನು ನಿಷೇಧಿಸಿದಾಗ, ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಂಘಟನೆಯನ್ನೇ ಯಾಕೆ ನಿಷೇಧಿಸಬೇಕೆಂಬ ಹೇಳಿಕೆ ನೀಡುವ ಮೂಲಕ ಮುಸಲ್ಮಾನರ ಓಲೈಕೆಗೆ ಮುಂದಾಗಿದ್ದರು. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಮುನೇಶ್ವರ ಬೆಟ್ಟವನ್ನು ‘ಏಸು ಬೆಟ್ಟ’ಮಾಡ ಹೊರಟಾಗ ಮಾತನಾಡದ ದೇವೇಗೌಡರು ಮತ್ತು ಕುಮಾರಣ್ಣ ಈಗ ರಾಮನಗರದಲ್ಲಿ
ರಾಮಮಂದಿರ ಕಟ್ಟುತ್ತೇವೆಂದು ಹೇಳಿದಾಗ ಸೆಟೆದು ನಿಂತಿದ್ದಾರೆ.

ತನ್ನ ಪಕ್ಷದ ಇಟಲಿಯ ನಾಯಕಿಯನ್ನು ಮೆಚ್ಚಿಸಲು ಡಿ.ಕೆ.ಶಿವಕುಮಾರ್, ಹಿಂದೂಗಳು ಪೂಜಿಸುವ ಹೊಲದ ಮುನೇಶ್ವರ ನನ್ನೇ ನಿರ್ನಾಮ ಮಾಡಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಲು ಹೊರಟಿದ್ದು ಕ್ರಿಶ್ಚಿಯನ್ ಮಿಷನರಿಗಳನ್ನು ಓಲೈಸಿ ಕ್ರಿಶ್ಚಿಯನ್ ಮತ ಬ್ಯಾಂಕನ್ನು ಭದ್ರ ಮಾಡಿಕೊಳ್ಳಲು. ಅತ್ತ ತಮ್ಮನ್ನು ತಾವು ದಲಿತ ನಾಯಕನೆಂದು ಹೇಳಿಕೊಂಡು ಸದಾ ಸುಳ್ಳು ಹೇಳುವ ಪ್ರಿಯಾಂಕ ಖರ್ಗೆ, ‘ಮತಾಂತರ ನಿಷೇಧ ಕಾಯಿದೆಯನ್ನು ವಿರೋಧಿಸುತ್ತಾರೆ.

ತಾವು ಅಧಿಕಾರಕ್ಕೆ ಬಂದರೆ ಈ ಕಾಯಿದೆಯನ್ನು ವಾಪಸ್ ಪಡೆಯುತ್ತೇವೆಂದು ಹೇಳುವ ಮೂಲಕ ಎಗ್ಗಿಲ್ಲದೇ ರಾಜ್ಯದಲ್ಲಿ ನಡೆಯುತ್ತಿರುವ ಮತಾಂತರಕ್ಕೆ ಅಭಯ ನೀಡುತ್ತಾರೆ. ಕ್ರಿಶ್ಚಿಯನ್ ಮತಗಳನ್ನು ಕ್ರೋಡೀಕರಿಸಲು ದಲಿತರನ್ನು ಬಲಿಕೊಡುವ ಮಟ್ಟಕ್ಕೆ ಕಾಂಗ್ರೆಸ್ ಓಲೈಕೆಯ ರಾಜಕಾರಣ ಮಾಡುತ್ತಲಿದೆ. ರಾಮನಗರದ ಹೆಸರಿನಲ್ಲಿ ‘ರಾಮ’ನಿದ್ದಾನೆ, ಅಲ್ಲಿ ರಾಮದೇವರ ಬೆಟ್ಟವಿದೆ, ರೇವಣ ಸಿದ್ದೇಶ್ವರನ ಬೆಟ್ಟವಿದೆ. ಇಂತಹ ಐತಿಹಾಸಿಕ ಸ್ಥಳದಲ್ಲಿ ರಾಮಚಂದ್ರನ ಬೃಹತ್ ದೇವಸ್ಥಾನ ನಿರ್ಮಾಣ ವಾಗುವುದು ಜಾತ್ಯತೀತ ಜನತಾದಳ ಹಾಗೂ ಕಾಂಗ್ರೆಸಿಗೆ ಕೋಮುವಾದವಾಗಿ ಕಾಣುತ್ತದೆ.

ಒಕ್ಕಲಿಗರನ್ನು ಗುತ್ತಿಗೆಗೆ ತೆಗೆದುಕೊಂಡವರಂತೆ ಬೀಗುವ ಕುಮಾರಸ್ವಾಮಿಗೆ ಮಂಡ್ಯದ ಜನ 2019ರಲ್ಲಿ ಸರಿಯಾದ
ಪಾಠ ಕಲಿಸಿದ್ದರು. ಸ್ವತಃ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಗೆ ತಮ್ಮ ಮಗನನ್ನು ಸಂಸತ್ ಚುನಾವಣೆಯಲ್ಲಿ
ಮಂಡ್ಯದಿಂದ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸರಕಾರದ ಇಡೀ ಯಂತ್ರವೇ ತನ್ನ ಕೈಯಲ್ಲಿದ್ದರೂ ಮಂಡ್ಯದ ಸ್ವಾಭಿ
ಮಾನಿ ಜನ, ಕುಮಾರಸ್ವಾಮಿಯ ನಾಟಕಕ್ಕೆ ಸೊಪ್ಪು ಹಾಕಲಿಲ್ಲ.

ಜಿಲ್ಲೆಯಲ್ಲಿ ಏಳು ಶಾಸಕರಿದ್ದರೂ ಹೀನಾಯವಾಗಿ ನಿಖಿಲ್ ಕುಮಾರಸ್ವಾಮಿ ಸೋಲಬೇಕಾಯಿತು. ಮೇಕೆದಾಟು ಯೋಜನೆಯ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗುತ್ತಿದ್ದರೆ ತನ್ನನ್ನು ತಾನು ಮಣ್ಣಿನ ಮಗನೆಂದು ಹೇಳಿಕೊಳ್ಳುವ ಕುಮಾರಣ್ಣ, ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜತೆಗೆ ಕೈ ಕುಲುಕಿ ಕಿಲಕಿಲ ನಗುತ್ತಿರುತ್ತಾರೆ. ಅತ್ತ ತೆಲಂಗಾಣದ ಮುಖ್ಯಮಂತ್ರಿ ಚಂದ್ರ ಶೇಖರ್ ರಾವ್, ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿಸಬಿಡಿ ಎಂದು ನಾಲಿಗೆ ಸಡಿಲಿಸಿದರೆ, ಇತ್ತ ಸ್ವಯಂ ಘೋಷಿತ ಮಣ್ಣಿನ ಮಗ ಕುಮಾರಣ್ಣನ ಖಾಸಗೀ ವಿಮಾನದಲ್ಲಿ ತನ್ನ ಶಾಸಕರನ್ನು ಕರೆದುಕೊಂಡು ಆತನ ರಾಷ್ಟ್ರೀಯ ಪಕ್ಷದ ಉದ್ಘಾ ಟನೆಗೆ ಹೋಗುತ್ತಾರೆ.

ಕರ್ನಾಟಕ ರಾಜ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇರದ, ಸದಾ ತನ್ನ ಕುಟುಂಬದ ಬಗ್ಗೆ ಕಾಳಜಿ ಇಟ್ಟುಕೊಂಡು ರಾಜಕೀಯವನ್ನೇ ಕುಟುಂಬ ಮಾಡಿಕೊಂಡಿರುವ ಜಾತ್ಯತೀತ ಜನತಾದಳದ ಅಪ್ಪ-ಮಕ್ಕಳು ‘ಪದ್ಮನಾಭನಗರ’ದ ಡೈನಿಂಗ್ ಟೇಬಲ್ ಬಿಟ್ಟು ಹೊರಬರುವುದಿಲ್ಲ. ಕನಕಪುರದಲ್ಲಿ ಡಿಕೆಶಿ, ಯೇಸುವಿನ ಪ್ರತಿಮೆ ಸ್ಥಾಪಿಸಲು ಹೊರಟಾಗ ಕಲ್ಲಡ್ಕ ಪ್ರಭಾಕರ್ ಭಟ್ಟರ ನೇತೃತ್ವದಲ್ಲಿ ‘ಕನಕಪುರ ಚಲೋ’ ಪ್ರತಿಭಟನೆ ನಡೆಸಲಾಯಿತು. ಮಣ್ಣಿನ ಮಗ ದೇವೇಗೌಡರು ಅಂದು ಡಿಕೆಶಿ ಪರವಾಗಿ ನಿಂತು ಮುನೇಶ್ವರ ಬೆಟ್ಟವನ್ನು ಯೇಸುಬೆಟ್ಟವನ್ನಾಗಿಸಲು ಸಮ್ಮತಿ ಸೂಚಿಸಿದ್ದರು.

ದೇವೇಗೌಡರ ಕ್ರಿಶ್ಚಿಯನ್ನರ ಮೇಲಿನ ಪ್ರೀತಿಯನ್ನು ನೆನಪಿಸಲು ಮತ್ತೊಂದು ಘಟನೆ ಕಣ್ಣಮುಂದೆ ಬರುತ್ತದೆ. ಗುಜರಾತಿನಲ್ಲಿ ಚರ್ಚಿನ ಪಾದ್ರಿಗಳು ಚುನಾವಣೆಯ ಸಂದರ್ಭದಲ್ಲಿ ಬಹಿರಂಗ ಪತ್ರವೊಂದನ್ನು ಬರೆದು ಜಾತ್ಯತೀತತೆಗೆ ಬೆಂಬಲ ನೀಡುವ ಪಕ್ಷಕ್ಕೆ ಮತ ನೀಡುವಂತೆ ಕೋರಿದ್ದರು. ಇದನ್ನು ಖಂಡಿಸಿದ ಉಡುಪಿ ಪೇಜಾವರ ಶ್ರಿಗಳ ಕ್ರಮವನ್ನು ದೇವೇಗೌಡರು ವಿರೋಧಿಸಿದ್ದರು. ಅಂದು ಯೇಸುವಿನ ಹೆಸರಿನಲ್ಲಿ ನೀಡಿದ್ದ ಜಾತ್ಯತೀತ ಪರ ಈ ಹೇಳಿಕೆ, ಇಂದು ರಾಮನಗರದಲ್ಲಿ ಸಚಿವ ಅಶ್ವತ್ಥ ನಾರಾಯಣ್ ರಾಮಮಂದಿರ ಸ್ಥಾಪಿಸಲು ಮುಂದಾದಾಗ ನೆನಪಾಗುವುದೇ ಇಲ್ಲವೇ? ಅವರಿಗೂ ರಾಮನಗರಕ್ಕೂ ಏನು ಸಂಬಂಧವೆಂಬಂತೆ ಮಾತನಾಡುತ್ತಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಜಾತ್ಯತೀತತೆಯೆಂದರೆ ಕೇವಲ ಮುಸಲ್ಮಾನ್ ಹಾಗೂ ಕ್ರಿಶ್ಚಿಯನ್ನರ ಓಲೈಕೆ ಮಾತ್ರ. ರಾಜಮಹಾರಾಜರ ಕಾಲದಲ್ಲಿ ನೂರಾರು ಎಕರೆಯಷ್ಟು ಭೂಮಿಯನ್ನು ಬೆಂಗಳೂರು ನಗರದ ಮದ್ಯ ಭಾಗದಲ್ಲಿ ಕ್ರಿಶ್ಚಿಯನ್ ಮಿಶನರಿಗಳಿಗೆ ನೀಡಲಾಗಿದೆ, ದೇವಸ್ಥಾನಗಳ ಬಳಿ ಮಿಷನರಿಗಳ ಬಳಿ ಇರುವ ಕಾಲು ಭಾಗದಷ್ಟು ಭೂಮಿ ಬೆಂಗಳೂರು
ನಗರದಲ್ಲಿಲ್ಲ.ಸೇವೆಯ ಹೆಸರಿನಲ್ಲಿ ಮದರ್ ತೆರೇಸಾ ನಡೆಸಿದ ಮತಾಂತರವನ್ನು ಇತಿಹಾಸದ ಪುಟಗಳಲ್ಲಿ ಸಂಪೂರ್ಣವಾಗಿ
ಮುಚ್ಚಿಹಾಕಿದ ಕಾಂಗ್ರೆಸ್ ಪಕ್ಷ, ಇಂದಿಗೂ ಇಟಲಿಯಮ್ಮನನ್ನು ಓಲೈಸಲು ಅತ್ಯಂತ ಕೀಳು ಮಟ್ಟದ ಓಲೈಕೆ ರಾಜಕಾರಣ
ಮಾಡಿಕೊಂಡು ಬರುತ್ತಿದೆ.

ಒಕ್ಕಲಿಗರನ್ನು ಗುತ್ತಿಗೆಗೆ ತೆಗೆದುಕೊಂಡವರಂತೆ ಮಾತನಾಡುವ ಕುಮಾರಸ್ವಾಮಿಯವರು ಹಳೇ ಮೈಸೂರು ಭಾಗದಲ್ಲಿ ಎಗ್ಗಿಲ್ಲದೆ ಒಕ್ಕಲಿಗರ ಮೇಲೆ ನಡೆಯುತ್ತಿರುವ ಮತಾಂತರದ ದೌರ್ಜನ್ಯದ ಬಗ್ಗೆ ಇದುವರೆಗೂ ತುಟಿ ಬಿಚ್ಚಿಲ್ಲ. ಭಾರತೀಯ ಜನತಾ ಪಕ್ಷದ ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿಯನ್ನೇ ಮತಾಂತರಿಗಳು ಬಿಟ್ಟಿರಲಿಲ್ಲ. ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ತಮ್ಮ ಕಚೇರಿಯಲ್ಲಿ ಆಯುಧಪೂಜೆಯಂದು ಗಣೇಶನ ಪಟದ ಜತೆಯಲ್ಲಿ ಯೇಸುಕ್ರಿಸ್ತನ ಪಟವನ್ನಿರಿಸಿ
ಜಾತ್ಯತೀತತೆಯನ್ನು ಮೆರೆದಿದ್ದರು.ಆದರೆ ಅದೇ ಶಾಸಕಿ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಯೇಸು ಕ್ರಿಸ್ತನ ಪಕ್ಕದಲ್ಲಿ
ಗಣೇಶನ ಪಟವನ್ನಿಡಲಿಲ್ಲ. ಕಾಂಗ್ರೆಸಿನವರ ಡೋಂ ಜಾತ್ಯತೀತತೆಗೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇಕೇ?
ಜಾತ್ಯತೀತತೆಯ ಹೆಸರಿನಲ್ಲಿ ಕ್ರೂರಿ, ಮತಾಂಧ, ಹೇಡಿ ಟಿಪ್ಪು ಸುಲ್ತಾನನ ಜಯಂತಿಯನ್ನು ವಿಧಾನಸೌಧದ ಬ್ಯಾಂಕೆಟ್ ಹಾಲಿನಲ್ಲಿ ಆಚರಿಸಿದಾಗ ಸಂವಿಧಾನದಲ್ಲಿನ ಜಾತ್ಯತೀತತೆ ಕಾಂಗ್ರೆಸಿನವರಿಗೆ ಎದ್ದು ಕಾಣುತ್ತದೆ.

ಮೈಸೂರಿನಲ್ಲಿ ೧೦೦ ಅಡಿ ಎತ್ತರದ ಟಿಪ್ಪು ಸುಲ್ತಾನನ ಪ್ರತಿಮೆ ನಿರ್ಮಾಣ ಮಾಡುವುದಾಗಿ ಕಾಂಗ್ರೆಸಿನ ಶಾಸಕ ತನ್ವಿರ್ ಸೇಠ್ ಹೇಳಿದಾಗ ತುಟಿಬಿಚ್ಚದ ಜಾತ್ಯತೀತವಾದಿಗಳು ರಾಮನಗರ ದಲ್ಲಿ ರಾಮನ ದೇವಸ್ಥಾನ ನಿರ್ಮಾಣ ಮಾಡುತ್ತೇವೆಂದು
ಹೇಳಿದಾಗ ಬೀದಿಗಿಳಿದುಬಿಡುತ್ತಾರೆ. ಮೈಸೂರಿಗೂ ಟಿಪ್ಪು ಸುಲ್ತಾನನಿಗೂ ಇಲ್ಲದ ಸಂಬಂಧದ ಬಗ್ಗೆ ಗಟ್ಟಿಯಾಗಿ ಮಾತನಾಡುವವರು, ಡಾ. ಅಶ್ವಥನಾರಾಯಣರಿಗೂ ರಾಮ ಮಂದಿರಕ್ಕೂ ಯಾವ ಸಂಬಂಧವೆಂದು ಕೇಳುತ್ತಾರೆ ? ಅತ್ತ
ಡಿ.ಕೆ.ಶಿವಕುಮಾರ್ ತನ್ನನ್ನು ತಾನು ಬಂಡೆಯೆಂದು ಹೇಳಿಕೊಂಡು ತಿರುಗಿದರೂ, ಕನಕಪುರದಾಚೆಗೆ ರಾಮನಗರ ಜಿಲ್ಲೆ
ಯಲ್ಲಿ ಒಂದು ಸೀಟನ್ನು ಗೆಲ್ಲಲಿಕ್ಕಾಗಲಿಲ್ಲ.

ದೇಶದಾದ್ಯಂತ ತನ್ನ ಪಕ್ಷದ ನಾಯಕರುಗಳ ಪ್ರತಿಮೆಗಳನ್ನು ನಿರ್ಮಿಸುವುದನ್ನೇ ಕಾಯಕ ಮಾಡಿಕೊಂಡಿರುವ ಕಾಂಗ್ರೆಸಿಗೆ ಜಾತ್ಯತೀತ ಪದದ ನೈಜ ಅರ್ಥ ತಿಳಿದಿಲ್ಲ. ಕಾಂಗ್ರೆಸಿನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್, ಪಾರ್ಟ್ ಟೈಮ್ ಹಿಂದೂ ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸುತ್ತಾರೆ.ಚುನಾವಣೆ ಬಂತೆಂದರೆ ಸಾಕು ಹಿಂದೂ ದೇವರುಗಳ ಜಪ ಮಾಡುವ ಕಾಂಗ್ರೆಸ್ಸಿಗರಿಗೆ ಬಹುಸಂಖ್ಯಾತ ಹಿಂದೂಗಳ ಭಾವನೆಗಳ ಅರಿವಿಲ್ಲ.

ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದವರಿಂದ ರಾಮನಗರದಲ್ಲಿ ನಿರ್ಮಾಣವಾಗುವ ರಾಮಮಂದಿರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಬಾಯಿಮಾತಿಗೆ ರಾಮಮಂದಿರ ಕಟ್ಟಲು ತಕರಾರಿಲ್ಲವೆಂದು ಹೇಳಿದರೂ, ಸಂಪೂರ್ಣ ಸಹಕಾರ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡುವುದಿಲ್ಲ ಇನ್ನು ಮೂರು ಜಿಲ್ಲೆಳಲ್ಲಿ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಜಾತ್ಯತೀತ ಜನತಾದಳವನ್ನು ಪ್ರಾದೇಶಿಕ ಪಕ್ಷವೆನ್ನುವ ಬದಲು ‘ಉಪ ಪ್ರಾದೇಶಿಕ ಪಕ್ಷ’ವೆಂದರೆ ಸೂಕ್ತ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಿಣುಕು ಹುಳುವಿನಂತೆ ಮಿಣಿ ಮಿಣಿಯಾಗಿ ಎದ್ದುಬರುವ ಕುಮಾರ ಸ್ವಾಮಿಯವರಿಗೆ ಕ್ರಿಶ್ಚಿಯನ್ನರು ಹಾಗು ಮುಸಲ್ಮಾನರ ಮೇಲೆ ಎಲ್ಲಿಲ್ಲದ ಪ್ರೀತಿ.

ಕಾಮಿಡಿ ಪೀಸ್ ಸಿ.ಎಂ.ಇಬ್ರಾಹಿಂರನ್ನು ರಾಜ್ಯಾಧ್ಯಕ್ಷನನ್ನಾಗಿಸುವ ಮೂಲಕ ಕಳೆದುಕೊಂಡಿರುವ ಮುಸಲ್ಮಾನರ ವೋಟನ್ನು ವಾಪಸ್ ಪಡೆಯುವ ಪ್ರಯತ್ನಕ್ಕೆ ಕುಮಾರಸ್ವಾಮಿ ಕೈ ಹಾಕಿದ್ದಾರೆ. ಕುಮಾರಸ್ವಾಮಿಯವರ ಹೊಗಳುಭಟರಾಗಿರುವ ಇಬ್ರಾಹಿಂ, ಪಕ್ಷದ ಬಗ್ಗೆ ಮಾತನಾಡುವುದಕ್ಕಿಂತ ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಬಕೆಟ್ ಹಿಡಿಯುವು ದರಲ್ಲಿಯೇ ಸದಾ ನಿರತರಾಗಿರುತ್ತಾರೆ. ಇವರ ಅಧ್ಯಕ್ಷಗಿರಿ ತುಂಬಾ ದಿವಸ ಉಳಿಯುವುದಿಲ್ಲ. ಆ ಪಕ್ಷದಲ್ಲಿ ಹೇಳಲಿಕ್ಕಷ್ಟೇ ಅಧ್ಯಕ್ಷರ ಹುದ್ದೆ.

ನಿರ್ಧಾರಗಳೆಲ್ಲವೂ ಪದ್ಮ ನಾಭನಗರದ ಡೈನಿಂಗ್ ಟೇಬಲ್ ಮೇಲೆ ನಡೆಯುವುದು. ಮುಸಲ್ಮಾನರ ಅಭಿವೃದ್ಧಿಯ ಯೋಚನೆ ಇವರಿಗಿಲ್ಲ, ಕೇವಲ ತಾವು ಕಳೆದುಕೊಂಡಿರುವ ಮತಬ್ಯಾಂಕಿಗಾಗಿ ಈ ಗಿಮಿಕ್ ಮಾಡಿದ್ದಾರೆ. ರಾಮನಗರದ ಜನ ರಾಮನ ಜಪದಲ್ಲಿ ಮುಳುಗಿ, ಜಾತ್ಯತೀತ ಜನತಾದಳವನ್ನು ಮುಳುಗಿಸುತ್ತಾ ರೆಂಬ ಭಯ ಕುಮಾರಸ್ವಾಮಿಗೆ ಕಾಡುತ್ತಿರುವುದು ಸುಳ್ಳಲ್ಲ.

ಏಸುವಿನ ಪ್ರತಿಮೆ ನಿರ್ಮಾಣಕ್ಕೆ ಎಲ್ಲಿಲ್ಲದ ಆಸಕ್ತಿ ತೋರಿದ್ದ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳದ ನಾಯಕರು,
ರಾಮಚಂದ್ರನ ದೇವಸ್ಥಾನ ನಿರ್ಮಾಣಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಪರಿಕಲ್ಪನೆ
ಯನ್ನು ಸ್ವಾತಂತ್ರ್ಯಾ ನಂತರವೂ ಮಿಷನರಿಗಳ ಮೂಲಕ ಭಾರತದಲ್ಲಿ ಕಾಂಗ್ರೆಸ್ ಮುಂದುವರಿಸಿಕೊಂಡು ಬರುತ್ತಿದೆ. ಇಂದು ಇಟಲಿಯ ಮೇಡಂ, ಬ್ರಿಟಿಷರ ಕಲ್ಪನೆಯನ್ನು ಸಾಕಾರಗೊಳಿಸುತ್ತಿzರೆ. ಅವರ ಭಂಟನಾಗಿ ಡಿ.ಕೆ.ಶಿವಕುಮಾರ್ ರಾಮನಗರ ದಲ್ಲಿ ಈ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.

ಇವರಿಗೆ ಸಾಥ್ ನೀಡಲು ಜಾತ್ಯತೀತ ಜನತಾದಳ ಪಕ್ಷ ಜಾತ್ಯತೀತೆಯ ಹೆಸರಿನ ಗಾಳವನ್ನು ಉರುಳಿಸಿ ಅವರ ‘ಬಿ’ಟೀಮ್ ನಂತೆ ಕೆಲಸ ಮಾಡುತ್ತಿದ್ದೆ.