Monday, 28th October 2024

Rangaswamy Mookanahalli Column: ಸ್ವಾತಂತ್ರ್ಯವೇ ಜಗತ್ತಿನಲ್ಲಿ ಬೆಲೆ ಬಾಳುವ ಆಸ್ತಿ !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ನೀವು ಹೆಣ್ಣು, ಗಂಡು, ಟೆಕ್ಕಿ, ಪತ್ರಕರ್ತ ಇತ್ಯಾದಿ ಯಾರೇ ಆಗಿರಿ, ನೀವು ದಕ್ಷರಾಗಿದ್ದರೆ ಸಾಕು ಜಗತ್ತಿನಲ್ಲಿ ಕೆಲಸ ಬಹಳಷ್ಟಿದೆ. ಅಲ್ಲದೆ, ಕೆಲಸ ಎಂದರೆ ಬೇರೆಯವರಿಗೆ ದುಡಿಯುವುದು ಎನ್ನುವ ಕಾನ್ಸೆಪ್ಟ್ ಇಂದಿಗೆ ಹಳತಾಗಿದೆ. ನಮ್ಮಲ್ಲಿ ಶಕ್ತಿಯಿದ್ದರೆ ಸಾಕು, ಕುಳಿತ ಜಾಗದಿಂದಲೇ ಕೆಲಸ ಮಾಡಿ ಜಗತ್ತೇ ನಿಬ್ಬೆರಗಾಗುವ ಮಟ್ಟಕ್ಕೆ ನಾವು ಬೆಳೆಯಬಹುದು.

ಬಿಗ್-4’ ಎಂದೇ ಕರೆಯಲ್ಪಡುವ ನಾಲ್ಕು ದೊಡ್ಡ ಅಕೌಂಟಿಂಗ್ ಫರ್ಮ್‌ಗಳಲ್ಲಿ Ernst & Young (EY) ಕೂಡ
ಒಂದು. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ 26 ಹರೆಯದ ಆನ್ನ ಸೆಬಾಸ್ಟಿಯನ್ ಸಾವು ಕಾರ್ಪೊರೇಟ್ ವಲಯದಲ್ಲಿನ ಕೆಲಸದ ಒತ್ತಡದ ಬಗ್ಗೆ ಇರುವ ಆಕ್ರೋಶವನ್ನು ಹೊರಹಾಕಲು ಒಂದು ಸಂದರ್ಭವಾಗಿದೆ. ಲಕ್ಷಾಂತರ ಜನರು ಪರ-
ವಿರೋಧದ ಅನಿಸಿಕೆಗಳನ್ನು ಲಿಂಕ್ಡ್‌ಇನ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಭಾರತ ಅದೆಷ್ಟು ದೊಡ್ಡ ದೇಶ ನೋಡಿ, ಇನ್ನೂ 26ರ ಹರೆಯದ ಆನ್ನ ಸೆಬಾಸ್ಟಿಯನ್ ಸಾವಿನ ವಿಷಯ ತಣ್ಣಗಾ ಗುವ ಮೊದಲೇ, ಚೆನ್ನೈನಲ್ಲಿ 38 ವರ್ಷದ ಟೆಕ್ಕಿಯೊಬ್ಬರು ಇಲೆಕ್ಟ್ರಿಕ್ ವೈರನ್ನು ಕತ್ತಿಗೆ ಬಿಗಿದುಕೊಂಡು ಇಲ್ಲಿನ ಆಟಕ್ಕೆ ವಿದಾಯ ಹೇಳಿದ್ದಾರೆ. ಕಳೆದ 15 ವರ್ಷದಿಂದ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕೇಯನ್ ಎನ್ನುವ ಟೆಕ್ಕಿ ಕಳೆದ 2 ತಿಂಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಸುದ್ದಿ ಕೂಡ ಬಿತ್ತರವಾಗಿದೆ.

ಮೊದಲ ಸುದ್ದಿಯಲ್ಲಿ, ಕೆಲಸಕ್ಕೆ ಸೇರಿ ಕೆಲವೇ ತಿಂಗಳುಗಳಲ್ಲಿ ಒತ್ತಡ ತಾಳಲಾರದೆ ಬದುಕಿಗೆ ‘ಕ್ವಿಟ್’ ಹೇಳಿದ
ವಿಷಯವಿದ್ದರೆ, ಹದಿನೈದು ವರ್ಷ ನಿಭಾಯಿಸಿದ್ದ ಕೆಲಸದಲ್ಲಿ ಹೊಸ ಒತ್ತಡ ತಾಳಲಾಗದೆ ಬದುಕನ್ನು ಕೊನೆ ಗಾಣಿಸಿಗೊಂಡ ವಿಷಯ ಎರಡನೇ ಸುದ್ದಿಯಲ್ಲಿದೆ. ನಮ್ಮದು ಭಾವುಕ ಸಮಾಜ. ರಸ್ತೆ ಅಪಘಾತದಲ್ಲಿ ತಪ್ಪು ಸೈಕಲ್ ಸವಾರನದ್ದೇ ಆಗಿದ್ದರೂ, ಪೆಟ್ಟು ಬೀಳುವುದು ಮಾತ್ರ ಕಾರನ್ನು ಚಲಾಯಿಸಿದ ವ್ಯಕ್ತಿಗೇ! ಏಕೆಂದರೆ, ನಮ್ಮ ಸಮಾಜ ದಲ್ಲಿ ‘ಹಣ ಮಾಡುವುದು, ಸಾಹುಕಾರರಾಗುವುದು’ ಎನ್ನುವುದನ್ನು ಮೋಸ, ವಂಚನೆಗೆ ಸರಿಸಮಾನವಾಗಿ ಕಾಣಲಾಗುತ್ತದೆ.

ಇಷ್ಟು ಓದಿದ ನಂತರ, ನಾನು ಕಾರ್ಪೊರೇಟ್ ವಲಯವನ್ನು, ಸಾಹುಕಾರರನ್ನು ಬೆಂಬಲಿಸಿ ಈ ಲೇಖನವನ್ನು ಬರೆಯಲು ಹೊರಟಿದ್ದೇನೆ ಎನ್ನುವ ತೀರ್ಮಾನಕ್ಕೆ ಬರಬೇಡಿ, ಪ್ಲೀಸ್. ನಾಣ್ಯಕ್ಕೆ ಎರಡು ಮುಖ ಇರುತ್ತದೆಯಲ್ಲವೇ? ಥೇಟ್ ಹಾಗೆ ಎಲ್ಲಾ ವಿಷಯದಲ್ಲೂ ಒಂದಕ್ಕಿಂತ ಹೆಚ್ಚಿನ ಆಯಾಮಗಳು ಇದ್ದೇ ಇರುತ್ತವೆ. ಭಾವುಕತೆಯಿಂದ
ಕಾರ್ಪೊರೇಟ್ ವಲಯವನ್ನು ಮಾತ್ರ ದೂಷಿಸಿ ಪ್ರಯೋಜನವಿಲ್ಲ.

ಕೆಲಸಗಾರರು ಸಾಮಾನ್ಯವಾಗಿ ದೂರುವುದೇನು ಗೊತ್ತಾ- ಕೆಲಸದ ವೇಳೆ 10 ರಿಂದ 12 ಗಂಟೆ ಆಗುತ್ತದೆ, ವರ್ಕ್ ಲೈಫ್ ಬ್ಯಾಲೆನ್ಸ್ ಇಲ್ಲ ಎನ್ನುವುದು. ಇದಕ್ಕೆ ಕಾರಣರಾರು? ಇದೇ ಕೆಲಸಗಾರರು ಎನ್ನು‌ವುದನ್ನು ಮರೆಯಬಾರದು. ಬ್ಯಾಚುಲರ್ ಸಮಯದಲ್ಲಿ ಮನೆಗೆ ಹೋಗಿ ಏನು ಮಾಡುವುದು? ಆಫೀಸ್‌ನಲ್ಲಿ ಕುಳಿತರೆ ಫ್ರೀ ವೈ-ಫೈ, ಸ್ನ್ಯಾಕ್ಸ್,
ತಣ್ಣನೆಯ ಎ.ಸಿ. ಎನ್ನುವ ಕಾರಣಕ್ಕೆ 8 ಗಂಟೆಯ ಕೆಲಸವನ್ನು 12 ಗಂಟೆಯವರೆಗೆ ಲಂಬಿಸಿಕೊಂಡಿದ್ದು ಇವರೇ ಅಲ್ಲವೇ? ಇದರ ಜತೆಗೆ, ‘ಇಂದಿಗೂ 12 ತಾಸು ದುಡಿಯುತ್ತಿದ್ದೇವೆ’ ಎಂದು ಹೇಳುವ ಎಲ್ಲರನ್ನೂ ಆತ್ಮಸಾಕ್ಷಿಯಾಗಿ ಪೂರ್ಣ 12 ಗಂಟೆ ಕೆಲಸ ಮಾಡಿದ್ದೀರಾ? ಎಂದು ಪ್ರಶ್ನಿಸಿಕೊಂಡು ಉತ್ತರ ಹೇಳಲು ಹೇಳಿ.

ನಮ್ಮದು ಭಾವುಕ ಸಮಾಜವಾಗಿರುವುದರ ಜತೆಜತೆಗೆ ಸೋಗಲಾಡಿ ಸಮಾಜವೂ ಹೌದು. ಯಾವುದನ್ನೂ ನೇರವಾಗಿ ಎದುರಿಸಿ ಮಾತನಾಡುವ ದಾಷ್ಟಿಕತೆಯನ್ನು ಅದು ಬೆಳೆಸಿಕೊಂಡಿಲ್ಲ. ‘ನೀವು ಹೇಳಿದ ಕೆಲಸವನ್ನು 8 ಗಂಟೆಯಲ್ಲಿ ಮಾಡಿ ಮುಗಿಸಿದ್ದೇನೆ, ಹೆಚ್ಚಿನ ಅವಧಿ ಇಲ್ಲಿರಲು ಸಾಧ್ಯವಿಲ್ಲ’ ಎಂದು ಹೇಳಲು ಅದೇಕೆ ಧೈರ್ಯವಿಲ್ಲ? ನೀವು ನಿಮ್ಮ ಕೆಲಸದಲ್ಲಿ ದಕ್ಷರಾಗಿದ್ದರೆ ಸಾಕು, ನಿಮ್ಮನ್ನು ಕೆಲಸದಿಂದ ತೆಗೆಯುವ ಮಾತು ದೂರ; ಸಂಸ್ಥೆಯು ನಿಮ್ಮನ್ನು ಆಸ್ತಿ ಎಂದು ಪರಿಗಣಿಸಿ ಪೂಜಿಸುತ್ತದೆ. ಇದರ ಬಗ್ಗೆ ಸಂಶಯ ಬೇಡ. ಇದಕ್ಕೆ ಪೂರಕವಾಗಿ ಒಂದು ಅಂಶವನ್ನು ಹೇಳುತ್ತೇನೆ.

ಜಪಾನ್ ನಂತರ ಅತಿ ಹೆಚ್ಚು ಕುಶಲಿ, ನಿಪುಣ ಕೆಲಸಗಾರರ ಕೊರತೆ ಇರುವುದು ಭಾರತದಲ್ಲಿ! ಕೆಲಸವಿಲ್ಲ, ಜಾಬ್ ಕ್ರಿಯೇಷನ್ ಆಗುತ್ತಿಲ್ಲ ಎನ್ನುವ ಸುದ್ದಿಯ ನಡುವೆ ನಿಮಗೆ ಗೊತ್ತಿರಲಿ- ಲಕ್ಷಾಂತರ ಹುದ್ದೆಗಳಿಗೆ ಸರಿಯಾದ ಕ್ಯಾಂಡಿ ಡೇಟ್ ಸಿಗುತ್ತಿಲ್ಲ ಎನ್ನುವ ಸುದ್ದಿ ಸದ್ದು ಮಾಡುವುದಿಲ್ಲ. ನೀವು ಯಾರೇ ಆಗಿರಿ, ಅಂದರೆ ಹೆಣ್ಣು, ಗಂಡು, ಟೆಕ್ಕಿ, ಪತ್ರಕರ್ತ ಇತ್ಯಾದಿ, ನೀವು ದಕ್ಷರಾಗಿದ್ದರೆ ಸಾಕು ಜಗತ್ತಿನಲ್ಲಿ ಕೆಲಸ ಬಹಳಷ್ಟಿದೆ. ಅಲ್ಲದೆ, ಕೆಲಸ ಎಂದರೆ ಬೇರೆಯ ವರಿಗೆ ದುಡಿಯುವುದು ಎನ್ನುವ ಕಾನ್ಸೆಪ್ಟ್ ಇಂದಿಗೆ ಹಳತಾಗಿದೆ. ನಮ್ಮಲ್ಲಿ ಶಕ್ತಿಯಿದ್ದರೆ ಸಾಕು, ಕುಳಿತ ಜಾಗದಿಂದ, ಕೈಲಿರುವ ಸಂಪನ್ಮೂಲ ಬಳಸಿಕೊಂಡು, ಜಗತ್ತೇ ನಿಬ್ಬೆರಗಾಗಿ ನಮ್ಮನ್ನು ನೋಡುವ ಮಟ್ಟಕ್ಕೆ ನಾವು ಬೆಳೆಯ ಬಹುದು, ಇರಲಿ. ಕಾರ್ಪೊರೇಟ್ ಸಂಸ್ಥೆಗಳವರು ಸುಭಗರೇ? ಈ ಎಪಿಸೋಡ್‌ಗಳಲ್ಲಿ ಅವರ ಪಾತ್ರ ಏನೂ ಇಲ್ಲವೇ? ಎಂದರೆ, ಸಾರಾಸಗಟಾಗಿ ಅವರಿಗೆ ಕ್ಲೀನ್ ಚಿಟ್ ನೀಡಲು ಬರುವುದಿಲ್ಲ.

ದಿನದ 24 ತಾಸು, ವರ್ಷದ 365 ದಿನವೂ ಕೆಲಸವು ನಿಲ್ಲದೆ ಸಾಗುವಷ್ಟು ವರ್ಕ್ ಫೋರ್ಸ್ ನಮ್ಮ ಬಳಿ ಇದೆ (ಇದನ್ನು ಕಾರ್ಪೊರೇಟ್ ಪರಿಭಾಷೆಯಲ್ಲಿ ‘ಹೆಡ್‌ಕೌಂಟ್’ ಎನ್ನಲಾಗುತ್ತದೆ) ಎನ್ನುವ ಲೆಕ್ಕವನ್ನು ಮುಂದಿಟ್ಟು ಬೇಕಾದ ಪ್ರಾಜೆಕ್ಟ್‌ಗಳನ್ನು ಅವರು ಗುತ್ತಿಗೆಗೆ ಹಿಡಿಯುತ್ತಾರೆ. ವ್ಯಾಪಾರ ಅಂದ ಮೇಲೆ ಲಾಭ-ನಷ್ಟದ ಲೆಕ್ಕಾಚಾರವೇ ಮುಖ್ಯವಾಗುತ್ತದೆ. ಅವರಿಗೆ ನೀವೊಬ್ಬ ಹೆಡ್‌ಕೌಂಟ್ ಅಷ್ಟೇ. ಹೊಸ ಉದ್ಯೋಗಿಗಳಲ್ಲಿ ಕೆಲವರಿಗೆ, ತಾವು ಬೆಸ್ಟ್ ಎಂದು ತೋರಿಸಿಕೊಳ್ಳುವ ಆತುರ. ಕಾರ್ಪೊರೇಟ್ ಜಗತ್ತಿನ ಪಟ್ಟುಗಳ ಲವಲೇಶ ಜ್ಞಾನವೂ ಇಲ್ಲದೆ ತಮ್ಮ 100 ಪ್ರತಿಶತ ಶಕ್ತಿಯನ್ನು ಪ್ರದರ್ಶನ ಮಾಡುತ್ತಾರೆ.

ಕಾರ್ಪೊರೇಟ್ ಅಂತಲ್ಲ, ಎಲ್ಲೆಡೆಯೂ ನೀವು ಎಷ್ಟು ನೀಡುತ್ತೀರಿ ಅದಕ್ಕಿಂತ ಒಂದಷ್ಟು ಅಂಶ ಹೆಚ್ಚು ಬಯಸು ವುದು ಸಹಜ. ಹೀಗಾಗಿ ಹೊಸ ಕೆಲಸಗಾರರು ಬೇಗ ಒತ್ತಡಕ್ಕೆ ಸಿಲುಕುತ್ತಾರೆ. 15 ವರ್ಷ ನುರಿತ ಕೆಲಸಗಾರರನ್ನೂ ಒತ್ತಡ ಬಿಡುವುದಿಲ್ಲ, ಏಕೆಂದರೆ ಈ ವೇಳೆಗೆ ಪ್ರಾಜೆಕ್ಟ್‌ನಿಂದ ಪ್ರಾಜೆಕ್ಟ್ ಮುಗಿಸುತ್ತ ವರ್ಷಗಳನ್ನು ಸವೆಸಿರುವ ಅವರಿಗೆ ‘ಈ ಪ್ರಾಜೆಕ್ಟ್ ಹೊರತುಪಡಿಸಿ ನಮ್ಮ ಜ್ಞಾನ ಸೊನ್ನೆ’ ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಕೆಲಸದಿಂದ ತೆಗೆದರೆ? ಮುಂದಿನ ಪ್ರಾಜೆಕ್ಟ್ ಸಿಗದಿದ್ದರೆ? ಎಂಬ ಆತಂಕ ಸೇರಿದಂತೆ ಜಗತ್ತಿನಲ್ಲಿ ಆಗುತ್ತಿರುವ ತಲ್ಲಣಗಳನ್ನು ಕಂಡು ಅವರ ಮನಸ್ಸು ಮುದುಡಿಹೋಗುತ್ತದೆ.

ಮನೆ ಮತ್ತು ಕಾರಿನ ಇಎಂಐ, ಮಕ್ಕಳ ಫೀಸು ಎಲ್ಲವೂ ಕಣ್ಮುಂದೆ ಬಂದು, ಕೆಲಸ ಉಳಿದರೆ ಸಾಕು ಎನ್ನುವ ಹಂತಕ್ಕೆ ಮನಸ್ಸು ಬರುತ್ತದೆ. ಹೀಗಾಗಿ ಸಂಸ್ಥೆ ಹೇಳಿದ್ದಕ್ಕೆಲ್ಲಾ ‘ಯೆಸ್ ಬಾಸ್’ ಎನ್ನಲು ಶುರುಮಾಡುತ್ತಾರೆ. ಇಂಥ ಜನರನ್ನು ಕಾರ್ಪೊರೇಟ್ ಸಂಸ್ಥೆಗಳು ಚೆನ್ನಾಗಿ ದುಡಿಸಿಕೊಳ್ಳುತ್ತವೆ. ಇವರ ದೌರ್ಬಲ್ಯವೇ ಅವಕ್ಕೆ ಬಂಡವಾಳ! ಆದರೆ ಅದೇ ವೇಗದಲ್ಲಿ ಎಷ್ಟು ದಿನ ದುಡಿಯಲು ಸಾಧ್ಯ? ಹೀಗಾಗಿ ಬ್ರೇಕ್‌ಡೌನ್ ಆಗುವುದು ಸಹಜ.

ಇನ್ನೇನು ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ (ಎಐ), ‘ಮಷೀನ್ ಲರ್ನಿಂಗ್ (ಎಂಎಲ್) ಮುಂತಾದವು ಜನರ ಕೆಲಸ ವನ್ನು ಕಿತ್ತುಕೊಳ್ಳಲು ಬರುತ್ತಿವೆ ಎನ್ನುವ ಸಂದರ್ಭದಲ್ಲಿ, ನಾವು ಕೆಲಸದ ಒತ್ತಡದ ಬಗ್ಗೆ, ಅದರ ನಿರ್ವಹಣೆ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತದಂಥ ಅತಿದೊಡ್ಡ ದೇಶದಲ್ಲಿ ವಿಷಯ ಯಾವುದೇ ಇರಲಿ, ಅದಕ್ಕೊಂದು ಫ್ರೇಮ್‌ ವರ್ಕ್ ಇಲ್ಲದಿರುವುದು ಅತಿದೊಡ್ಡ ವಿಪರ್ಯಾಸ. ಯುರೋಪಿನ ಬಹುತೇಕ ದೇಶಗಳು ‘ವಾರದಲ್ಲಿ 4 ದಿನ ಮಾತ್ರ ಕೆಲಸ’ ಎನ್ನುವ ಪಾಲಿಸಿ ಕಡೆಗೆ ಹೊರಳುತ್ತಿದ್ದರೆ, ನಾವು ಮಾತ್ರ ‘ಶನಿವಾರ- ಭಾನುವಾರ ಕೂಡ ಕೆಲಸ ಮಾಡಬೇಕು’ ಎನ್ನುವ ಮನಸ್ಥಿತಿಯಲ್ಲಿದ್ದೇವೆ.

ಯುರೋಪ್‌ನಲ್ಲಿನ ನನ್ನ 18 ವರ್ಷದ ಕಾರ್ಯಾವಽಯಲ್ಲಿ ಸೋಮವಾರದಿಂದ ಶುಕ್ರವಾರ ಮಧ್ಯಾಹ್ನದವರೆಗೆ ಮಾತ್ರ ಕೆಲಸ, ಉಳಿದ ಎರಡೂವರೆ ದಿನ ರಜಾ. ಇದೀಗ ಸೋಮವಾರದಿಂದ ಗುರುವಾರದವರೆಗೆ ಮಾತ್ರ ಕೆಲಸ ಮಾಡುವ ಪರಿಪಾಠ ಕೂಡ ಹೆಚ್ಚಾಗುತ್ತಿದೆ. ಬದುಕನ್ನ ಹೇಗೆ ಬೇಕಾದರೂ ಕಟ್ಟಿಕೊಳ್ಳಬಹುದು, ಅದು ನಮ್ಮ ಕೈಲಿದೆ. ಭವಿಷ್ಯದ ಬಗ್ಗೆ ಉದ್ವೇಗ, ಸಹಜವಾಗಿ ಆವರಿಸುವ ಸೋಲಿನ ಭಯ ಇವು ನಮಗೆ ಬೇಕಾದ ಬದುಕನ್ನ ಕಟ್ಟಿಕೊಳ್ಳಲು ಇರುವ ದೊಡ್ಡ ಅಡಚಣೆಗಳು. ಸೋಲು -ಗೆಲುವಿನ ಆಚೆಗೆ ಬದುಕನ್ನ ನಿರ್ಲಿಪ್ತತೆಯಿಂದ
ನೋಡುವ ಅಭ್ಯಾಸ ಮಾಡಿಕೊಂಡರೆ, ನಮಗೇನು ಬೇಕೋ ಅದು ಸಿಗುತ್ತದೆ.

Most people seek after what they do not possess and are thus enslaved by the very things they want to acquire ಎಂಬುದೊಂದು ಮಾತಿದೆ. ಅಂದರೆ, ಏನಿಲ್ಲವೋ ಅದನ್ನು ಪಡೆದೇ ತೀರಬೇಕು ಅನ್ನುವ ಹಠಕ್ಕೆ ಬಿದ್ದು, ಏನನ್ನು ಪಡೆಯಬೇಕು ಅಂತ ಇರುತ್ತಾರೋ ಅದರ ದಾಸರಾಗುತ್ತಾರೆ. ಇದು ಕೂಡ ತಪ್ಪು. ಇವೆರಡರ ನಡುವಿನ ಗೆರೆಯಿದೆಯಲ್ಲ ಅದು ತುಂಬಾ ಸಣ್ಣದು; ಹೇಗೆಂದರೆ, ಚೂರು ಲಯತಪ್ಪಿದರೆ ಆತ್ಮಸಮ್ಮಾನವೇ ಅಹಂಕಾರ ವೆನಿಸುವ ಹಾಗೆ.

ಗಮನಿಸಿ ನೋಡಿ, ‘ನಮಗದು ಬೇಕು’ ಎನ್ನುವುದು ಎಂದಿಗೂ ವ್ಯಸನವಾಗಬಾರದು. ಬದುಕಿಗೊಂದು ಸ್ಪಷ್ಟ ಗುರಿ ಬೇಕೇ ಬೇಕು. ಹೀಗಾಗಬೇಕು ಎನ್ನುವ ನಿಖರತೆ ಕೂಡ ಬೇಕು. ಆ ‘ಬೇಕು’ವನ್ನು ಪಡೆದುಕೊಳ್ಳುವ ಕಡೆಗೆ ದಿಟ್ಟ ಹೆಜ್ಜೆ ಇಡುತ್ತಿರಬೇಕು. ಆ ಗುರಿ ಅಥವಾ ಬೇಕು ಎನ್ನುವುದು ಎಂದಿಗೂ ನಮ್ಮ ನಿದ್ದೆಯನ್ನು ಕದಿಯಬಾರದು. ಬೇಕು
ಎನ್ನುವುದು ಸದಾ ಸುಪ್ತಮನಸ್ಸಿನಲ್ಲಿರಬೇಕು, ಅದನ್ನ ಪಡೆದುಕೊಳ್ಳಲು ಬೇಕಾದ ಪ್ರಯತ್ನಗಳು ಕೂಡ ನಿಲ್ಲಬಾ ರದು. ಅದೇ ಸಮಯದಲ್ಲಿ ಅದು ಭಾರವಾಗಿ, ಆ ಭಾರದ ಹೊರೆಗೆ ನಾವು ಕುಗ್ಗುವಂತಾಗಬಾರದು. ಬಹುತೇಕರು ಇವೆರಡರ ಮಧ್ಯೆ ಇರುವ ಈ ಪುಟಾಣಿ ವ್ಯತ್ಯಾಸವನ್ನು ಗುರುತಿಸಲಾಗದೆ ಕುಸಿಯುತ್ತಾರೆ. ಹೀಗಾಗಿ ಬದುಕಿನ ಉದ್ದೇಶ ಸೋಲುತ್ತದೆ.

ಹಾಗೊಮ್ಮೆ ನಾವು ಅಂದುಕೊಂಡಿದ್ದು ಕಾರ್ಯರೂಪಕ್ಕೆ ಬರದೇಹೋದರೆ? ಜಗತ್ತಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮರುದಿನ ಜಗತ್ತಿನ ಎಲ್ಲಾ ವ್ಯಾಪಾರ-ವಹಿವಾಟುಗಳು ಎಂದಿನಂತೆ ನಡೆಯುತ್ತವೆ. ಹೀಗಾಗಿ ಸೋಲಿಗೆ ಅಳುತ್ತಾ ಕುಳಿತರೆ ನಮಗೇ ನಷ್ಟ. ಅದಕ್ಕಿಂತ ಉತ್ತಮ ಬದುಕು ನಮ್ಮದಾಗಬಹುದು! ಒಂದಷ್ಟು ತಾಳ್ಮೆ, ಚಿಟಿಕೆ ಸಂಯಮ, ಬೊಗಸೆ ತುಂಬಾ ಆತ್ಮವಿಶ್ವಾಸ, ಮುಖದ ತುಂಬಾ ನಗುವಿದ್ದರೆ, ಬಯಸಿದ ಬದುಕನ್ನು ಕಟ್ಟಿಕೊಳ್ಳುವ ಹಾದಿ ಅಷ್ಟೇನೂ ಕಷ್ಟವಲ್ಲ ಎನ್ನುವುದು ಅರಿವಿಗೆ ಬರುತ್ತದೆ.

ಜಗತ್ತಿನಲ್ಲಿ 3 ವರ್ಗದ ಜನರನ್ನ ಕಾಣಬಹುದು. ಕೆಲವರು ಏನಾದರೂ ಸಾಧಿಸುತ್ತಾರೆ. ಇನ್ನು ಕೆಲವರು ಸಾಧಿಸು ವವರನ್ನ/ಸಾಧಿಸುವುದನ್ನ ನೋಡುತ್ತಾರೆ. ಇನ್ನೊಂದು ವರ್ಗದ ಜನರು ಎಲ್ಲಾ ಆದ ಮೇಲೆ ‘ಏನಾಯ್ತು?’ ಎಂದು ಕೇಳುತ್ತಾರೆ. ಈ ಯಾವ ವರ್ಗಕ್ಕೂ ಸೇರದ ಇನ್ನೊಂದು ಪ್ರಭೇದವಿದೆ. ಮಾಡಿದ ಎಲ್ಲಾ ಕೆಲಸಗಳಲ್ಲಿ ತಪ್ಪು
ಹುಡುಕುವುದು, ತಮ್ಮ ಅಭಿಪ್ರಾಯವನ್ನ ಹೇರಲು ನೋಡುವುದು, ಕೊನೆಗೆ ಕಿಚಾಯಿಸುವುದಕ್ಕೆ, ವೈಯಕ್ತಿಕ ನಿಂದನೆಗೆ ಇಳಿಯುವುದು ಇಂಥ ಪ್ರಭೇದದ ಕೆಲಸ. ಆದರೆ, ಕೆಲಸದ ಮಧ್ಯೆಯ ಇಂಥ ನಿಂದನೆಗಳಿಗೆ ಕಿವುಡರಾಗಿ, ಪ್ಲೀಸ್!

ಬಯಸಿದ ಬದುಕನ್ನು ಕಟ್ಟಿಕೊಳ್ಳಲು ಇದು ಅತ್ಯವಶ್ಯಕ. ಕೆಲವೊಂದು ವಿಷಯಗಳನ್ನ ಗಣನೆಗೆ ತೆಗೆದುಕೊಳ್ಳ ದಿರುವುದು ಮೇಲು. ಎಲ್ಲಕ್ಕಿಂತ ಮುಖ್ಯವಾಗಿ ಇರುವುದೊಂದೇ ಬದುಕು, ನಮ್ಮ ಬದುಕು. ಅದನ್ನು ಇತರರ ಕೈಗೆ ಕೊಡುವುದು, ಅರ್ಧದಲ್ಲಿ ನಿಲ್ಲಿಸಿ ಹೋಗುವುದು ಮಾತ್ರ ಬೇಡ.

ಇದನ್ನೂ ಓದಿ: Rangaswamy Mookanahalli column: ಮನಿ-ಮ್ಯಾಟರ್‌: ಹೆಣ್‌ ಮಕ್ಳೇ ಸ್ಟ್ರಾಂಗು ಗುರು!