Sunday, 24th November 2024

Rangaswamy Mookanahalli Column: ಜಾಗತಿಕವಾಗಿ ತೈಲ ಬೆಲೆ ಕುಸಿದರೂ ಅದರ ಲಾಭ ಮಾತ್ರ ನಮಗಿಲ್ಲ!

Rangaswamy Mookanahalli Column

ಭಾರತದಂತ ಅತ್ಯಂತ ದೊಡ್ಡ ಮತ್ತು ಜನಭರಿತ ದೇಶದಲ್ಲಿ ಏನೇ ಮಾಡಿದರೂ ಅದರಿಂದ ಲಾಭ ಪಡೆಯುವರ ಸಂಖ್ಯೆ ಮತ್ತು ನಷ್ಟ ಹೊಂದುವರ ಸಂಖ್ಯೆ ಕೂಡ ದೊಡ್ಡದಾಗೇ ಇರುತ್ತದೆ . ಸಮಾಜದ ಒಂದು ವರ್ಗ ಸರಕಾರದ ನಿರ್ಧಾರ ಯಾವುದೇ ಇರಲಿ ಅದರಿಂದ ತೊಂದರೆಗೆ ಒಳಾಗುತ್ತದೆ . ಇನ್ನೊಂದು ವರ್ಗ ಅದೇ ನಿರ್ಧಾರದಿಂದ ಖುಷಿ ಪಡುತ್ತದೆ . ದೇಶದ ಎಲ್ಲಾ ಜನತೆಗೂ ಏಕ ಕಾಲದಲ್ಲಿ ಒಳಿತಾಗುವ ನಿರ್ಧಾರ ಮಾಡುವುದು ಸರಕಾರ ಯಾವುದೇ ಇರಲಿ ಭಾರತದಂತ ದೇಶದಲ್ಲಿ ಕಷ್ಟ ಸಾಧ್ಯ . ಸದ್ಯದ ಬ್ಯಾಂಕ್ ಇಂಟರೆಸ್ಟ್ ರೇಟ್ ಅದಕ್ಕೊಂದು ಅತ್ಯುತ್ತಮ ಉದಾಹರಣೆ . 2014ರಲ್ಲಿ ಹೊಸ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ಸಮಯದಲ್ಲಿ ಇದ್ದ ರೆಪೋ ರೇಟ್ 8 ಪ್ರತಿಶತ . ಅಂದಿನಿಂದ ರೆಪೋ ರೇಟ್ ಕುಸಿತ ಕಾಣಲು ಶುರುವಾಗಿ 4 ಪ್ರತಿಶತ ಕಂಡಿತು . ಹೀಗೆ ಬಡ್ಡಿ ದರ ಹೆಚ್ಚು ಕಡಿಮೆಯಾಗುವುದರಿಂದ, ಹಣದುಬ್ಬರದಲ್ಲಿ ಏರುಪೇರಾಗುತ್ತದೆ , ಇದರಿಂದ ಏನಾಗುತ್ತದೆ ? ಎನ್ನುವುದನ್ನ ತಿಳಿದುಕೊಳ್ಳೋಣ . ಅದಕ್ಕೂ ಮುಂಚೆ ಹೀಗೆ ಬಡ್ಡಿ ದರ ಹೆಚ್ಚು -ಕಡಿಮೆ ಯಾಗಲು ಕಾರಣವಾದ ಹಣದುಬ್ಬರ ಎಂದರೇನು ಮತ್ತು ರೆಪೋ ರೇಟ್ ಎಂದರೇನು ಎನ್ನುವುದನ್ನ ಕೂಡ ತಿಳಿದುಕೊಂಡರೆ ಬಡ್ಡಿ ದರದ ಏರುಪೇರಾಟದ ಲಾಭ ನಷ್ಟಗಳ ಅರಿಯಲು ಸಹಾಯಕವಾಗುತ್ತದೆ (Rangaswamy Mookanahalli Column).

ಹಣದುಬ್ಬರ ಅಥವಾ ಜನ ಸಾಮಾನ್ಯನ ಭಾಷೆಯಲ್ಲಿ ಇನ್‌ಫ್ಲೇಷನ್‌ ಎಂದರೆ ವಸ್ತುವಿನ ಬೆಲೆಯಲ್ಲಿ ಸತತ ಏರಿಕೆ ಕಾಣುವುದು. ಅಂದರೆ ಉದಾಹರಣೆ ನೋಡಿ ವರ್ಷದ ಹಿಂದೆ ಒಂದು ಕೆಜಿ ಅಕ್ಕಿಯ ಬೆಲೆ ನಲವತ್ತು ರೂಪಾಯಿ ಆದರೆ ಅದೇ ಅಕ್ಕಿಯನ್ನ ಇಂದು ಕೊಳ್ಳಲು ಹೋದರೆ ನಲವತ್ತೈದು ರೂಪಾಯಿ. ಹೀಗೆ ವಸ್ತುವಿನ ಬೆಲೆ ಸಮಯದಿಂದ ಸಮಯಕ್ಕೆ ಏರುಗತಿ ಕಂಡರೆ ಅದನ್ನ ಹಣದುಬ್ಬರ ಎನ್ನುತ್ತವೆ. ಇದಕ್ಕೆ ವಿರುದ್ಧವಾಗಿ ವಸ್ತುವಿನ ಬೆಲೆ ವರ್ಷದಿಂದ ವರ್ಷಕ್ಕೆ ಕುಸಿತ ಕಂಡರೆ ಅದನ್ನ ಡಿಫ್ಲೇಷನ್ ಎನ್ನುತ್ತೇವೆ. ಗಮನಿಸಿ ಬೆಲೆಯೇರಿಕೆ ಅಥವಾ ಇಳಿಕೆ ಎನ್ನುವುದು ಮನುಷ್ಯನ ದೇಹದಲ್ಲಿ ಸಕ್ಕರೆ ಅಂಶ ಇದ್ದಂತೆ. ಅತ್ಯಂತ ಕಡಿಮೆಯಾದರೂ ಅಪಾಯ, ಹೆಚ್ಚಾದರೂ ಅಪಾಯ ತಪ್ಪಿದ್ದಲ್ಲ . ಹೀಗಾಗಿ ಇದನ್ನ ಒಂದು ಹಂತದಲ್ಲಿ ಹಿಡಿತದಲ್ಲಿ ಇಡುವ ಅವಶ್ಯಕತೆಯಿದೆ. ಹೀಗೆ ಸಮಾಜದಲ್ಲಿ ವಸ್ತುಗಳ ಬೆಲೆ ತೀರಾ ಏರುಪೇರಾಗದಂತೆ ತಡೆಯಲು ಆರ್‌ಬಿಐ ಬಳಸುವ ಅಸ್ತ್ರ ರೆಪೋ ರೇಟ್. ಇದನ್ನ ನೀವು ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಬಳಸುವ ಇನ್ಸುಲಿನ್ ಗೆ ಹೋಲಿಸಬಹದು.

ರೆಪೋ ರೇಟ್ ಎಂದರೆ ಸೆಂಟ್ರಲ್ ಬ್ಯಾಂಕ್ ಅಂದರೆ ಆರ್‌ಬಿಐ ತನ್ನ ಬಳಿಯಿರುವ ಹಣವನ್ನ ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವಾಗ ಅವಕ್ಕೆ ವಿಧಿಸುವ ಬಡ್ಡಿ ದರ. ಗಮನಿಸಿ ಇದು ದೇಶದ ಅತಿ ದೊಡ್ಡ ಮತ್ತು ಇತರ ಬ್ಯಾಂಕ್‌ಗಳ ನೆಡವಳಿಕೆ ಗಮನಿಸುವ ಬ್ಯಾಂಕು ಇತರ ಬ್ಯಾಂಕುಗಳಿಗೆ ಸಾಲ ನೀಡುವ ಹಣದ ಮೇಲೆ ವಿಧಿಸುವ ಬಡ್ಡಿ ಇಲ್ಲಿ ಸಾಮಾನ್ಯ ಗ್ರಾಹಕನ ಪ್ರವೇಶವಿಲ್ಲ. ಉದಾಹರಣೆ ನೋಡಿ. ಆರ್‌ಬಿಐ ತನ್ನ ಬಳಿ ಇದ್ದ ಸಾವಿರ ರೂಪಾಯಿಯನ್ನ ಎಸ್‌ಬಿಐ ಬ್ಯಾಂಕಿಗೆ ಸಾಲ ನೀಡುತ್ತದೆ ಹಾಗೂ ಅದರ ಮೇಲೆ ಬಡ್ಡಿ ವಿಧಿಸುತ್ತದೆ . ಹೀಗೆ ಆರ್‌ಬಿಐ ಇತರ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ರೇಟ್ ಎನ್ನುತ್ತಾರೆ. ಬ್ಯಾಂಕ್ ತನ್ನ ಸಾಮಾನ್ಯ ಗ್ರಾಹಕನಿಗೆ ವಿಧಿಸುವ ಬಡ್ಡಿ ದರ ರೆಪೋ ರೇಟ್ ಗಿಂತ ಹೆಚ್ಚಾಗಿರುತ್ತದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆಯೇನೂ ಆಕಾಶ ಮುಟ್ಟಿಲ್ಲ. ಆದರೂ ನಮ್ಮಲ್ಲಿ ತೈಲದ ಬೆಲೆ ಅತ್ಯಂತ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುತ್ತಿರುವ ತೆರಿಗೆ. ಇನ್ನೊಂದು ಪ್ರಮುಖ ಕಾರಣ ಭಾರತ ತನಗೆ 100 ಲೀಟರ್ ತೈಲ ಬೇಕಿದ್ದರೆ ಅದರ 15 ಪ್ರತಿಶತ ಮಾತ್ರ ತಾನೇ ಉತ್ಪಾದಿಸಿಕೊಳ್ಳುವ ತಾಕತ್ತು ಹೊಂದಿದೆ. ಉಳಿದ 85 ಪ್ರತಿಶತ ತೈಲಕ್ಕೆ ನಾವು ಬೇರೆ ದೇಶಗಳನ್ನ ಅವಲಂಬಿಸಿದ್ದೇವೆ. ಮೂರನೆಯ ಪ್ರಮುಖ ಕಾರಣ ನಾವು ವೆನಿಜುಯೆಲಾ ಮತ್ತು ಇರಾನ್ಗಳಿಂದ ತೈಲವನ್ನ ಕೊಳ್ಳುವುದು ನಿಲ್ಲಿಸಿರುವುದು. ಅಮೇರಿಕಾ ದೇಶವು ಈ ಎರಡೂ ದೇಶಗಳ ಮೇಲೆ ದಿಗ್ಬಂಧನ ಏರಿರುವ ಕಾರಣ ನಾವು ಈ ಎರಡೂ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿಲ್ಲ. 2019ಕ್ಕೂ ಮೊದಲು ನಮ್ಮ ತೈಲದ ಬಹುಪಾಲು ಇರಾನ್ ಮತ್ತು ವೆನಿಜುಯೆಲಾ ದೇಶಗಳಿಂದ ಬರುತ್ತಿತ್ತು. ಇವೆರೆಡೂ ದೇಶದ ತೈಲ ಬೆಲೆ ಜಗತ್ತಿನ ಇತರ ದೇಶಗಳಿಗಿಂತ ಕಡಿಮೆಯಿದೆ. ಇರಾನ್ ದೇಶವಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನೀವು ನಮ್ಮ ತೈಲಕ್ಕೆ ಬದಲಾಗಿ ಭಾರತೀಯ ರೂಪಾಯಿಯಲ್ಲಿ ಹಣವನ್ನ ಸಂದಾಯ ಮಾಡಬಹದು ಎಂದಿತ್ತು. ಒಂದಷ್ಟು ಹಣ ಸಂದಾಯ ಕೂಡ ರೂಪಾಯಿಯಲ್ಲಿ ಆಗಿತ್ತು. ಅಂದಿಗೆ ಇದೊಂದು ಜಾಗತಿಕ ಮಟ್ಟದಲ್ಲಿ ಹುಬ್ಬೇರಿಸುವ ವಿಷಯವಾಗಿತ್ತು. ಇಂದು ಜಾಗತಿಕ ರಾಜಕೀಯವೆಲ್ಲಾ ಇನ್ನಿಲ್ಲದ ಬದಲಾವಣೆ ಪಡೆದುಕೊಂಡಿದೆ.ಇಂದಿಗೆ ಇವೆರೆಡೂ ದೇಶಗಳಿಂದ ಬರುವ ತೈಲ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಗಮನಿಸಿ ಇದೊಂದು ಚೈನ್ ರಿಯಾಕ್ಷನ್. ತೈಲ ಬೆಲೆ ಹೆಚ್ಚಾದ ತಕ್ಷಣ ಟ್ರಾನ್ಸ್‌ಪೋರ್ಟ್‌ ಬೆಲೆ ಹೆಚ್ಚಾಗುತ್ತದೆ . ಹೀಗಾಗಿ ಸಹಜವಾಗೇ ಎಲ್ಲಾ ಸರಕುಗಳ ಬೆಲೆ ಹೆಚ್ಚಾಗುತ್ತದೆ .ಇದಕ್ಕೆ ಕಾರಣ ತೈಲ ಬೆಲೆಯನ್ನ ನಿಗದಿ ಮಾಡುವುದು ಡಾಲರ್‌ನಲ್ಲಿ. ಈ ಡಾಲರ್‌ಗೆ ಏಕೆ ಇಷ್ಟೊಂದು ಬೇಡಿಕೆ ? ಅದರ ಮೇಲೇಕೆ ಇಷ್ಟೊಂದು ನಂಬಿಕೆ ? ಉದಾಹರಣೆ ನೋಡಿ ಒಬ್ಬ ಕನ್ನಡಿಗ ಮತ್ತು ಒಬ್ಬ ಮಲೆಯಾಳಿ ಮಾತಿಗೆ ಕೂತರೆ ಕನ್ನಡಬಾರದ ಮಲೆಯಾಳಿ, ಮಲೆಯಾಳಂ ಬಾರದ ಕನ್ನಡಿಗ ಸಂವಹನಕ್ಕೆ ಏನು ಮಾಡಬೇಕು ? ಇಂಗ್ಲಿಷ್ ಭಾಷೆಯನ್ನ ಸಾಮಾನ್ಯ ಸಂವಹನ ಮಾಧ್ಯಮವಾಗಿ ಬಳಸಬೇಕು ಅಲ್ಲವೇ ? ಹಾಗೆಯೇ ಭಾರತದ ರುಪಾಯಿಯ ಮೌಲ್ಯ ಜಗತ್ತಿನ ಇತರ ದೇಶಗಳ ಕರೆನ್ಸಿ ಮೌಲ್ಯವನ್ನ ನಿಖರವಾಗಿ ಅಳೆಯಲು ನಂಬಿಕೆಯ ಕೊರತೆ ಹೆಚ್ಚಾಗಿದೆ. ಹೀಗಾಗಿ ಅಮೆರಿಕನ್ ಡಾಲರ್ನನ್ನು ಸಾಮಾನ್ಯ ವಿನಿಮಯ ಕರೆನ್ಸಿಯಾಗಿ ಜಗತ್ತು ಬಳಸುತ್ತಿದೆ .ಹೀಗೆ ಡಾಲರ್ ಮತ್ತು ತೈಲ ಬೆಲೆ ಹೆಚ್ಚುತ್ತಾ ಹೋಗಿ ನಮ್ಮಲಿ ಹಣದುಬ್ಬರ ಹೆಚ್ಚಾದರೆ ಪರಿಸ್ಥಿತಿ ಕೈ ಮೀರಿ ಹೋಗದಂತೆ ನೋಡಿಕೊಳ್ಳಲು ಆರ್‌ಬಿಐ ಮಧ್ಯ ಪ್ರವೇಶಿಸುತ್ತದೆ. ಇದು ಸರಿ ಅಥವಾ ತಪ್ಪು ಎಂದು ನಿಖರವಾಗಿ ಹೇಳಲು ಬರುವುದಿಲ್ಲ .

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 69/70 ಡಾಲರ್ ಕಳೆದ 20 ದಿನಕ್ಕೂ ಹೆಚ್ಚು ದಿನಗಳ ಕಾಲ ಚಾಲ್ತಿಯಲ್ಲಿತ್ತು. ನಮ್ಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಅಂತರರಾಷ್ಟ್ರೀಯ ತೈಲ ಬೆಲೆಯೊಂದಿಗೆ ತಳುಕು ಹಾಕಲಾಗಿದೆ. ಈ ಕಾರಣದಿಂದ ಜಾಗತಿಕವಾಗಿ ತೈಲ ಬೆಲೆ ಹೆಚ್ಚಾದರೆ ಸಾಕು ಅದೇ ದಿನ ಮಧ್ಯರಾತ್ರಿಯಿಂದ ಹೆಚ್ಚಾದ ತೈಲ ಬೆಲೆಯನ್ನು ನಾವು ತೆರಬೇಕಾಗುತ್ತದೆ. ಆದರೆ ಕಳೆದ 20 ದಿನಗಳಿಂದ ಜಾಗತಿಕವಾಗಿ ತೈಲ ಬೆಲೆ ಕುಸಿದಿದೆ. ಆದರೆ ಭಾರತದ ಪ್ರಜೆಗಳಿಗೆ ಮಾತ್ರ ಅದರ ವರ್ಗಾವಣೆ ಆಗಿಲ್ಲ. ಅಂದರೆ ಜಾಗತಿಕವಾಗಿ ಬೆಲೆ ಹೆಚ್ಚಾದ ಮರುಗಳಿಗೆ ಅದನ್ನು ನಮ್ಮ ಮೇಲೆ ಹೊರಿಸಲಾಗುತ್ತದೆ. ಅದೇ ಕಡಿಮೆಯಾದಾಗ ೨೦ ದಿನದ ಮೇಲಾದರೂ ನಾವು ಮಾತ್ರ ಅದೇ ಬೆಲೆಯನ್ನು ಕೊಡುತ್ತಿದ್ದೇವೆ. ಕಳೆದ 20 ದಿನದಿಂದ ನಾವು ಕನಿಷ್ಠ 4/6 ರೂಪಾಯಿ ಲೀಟರಿಗೆ ಕಡಿಮೆ ಹಣವನ್ನು ಕೊಡಬೇಕಾಗಿತ್ತು. ಜಾಗತಿಕವಾಗಿ ನಾವು ತೈಲ ಬಳಕೆಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ . ಆ ಲೆಕ್ಕಾಚಾರದಲ್ಲಿ ನೋಡುವುದಾದರೆ ಕಳೆದ 20 ದಿನದಲ್ಲಿ ಸರಕಾರ ಏನೂ ಮಾಡದೆ ಗಳಿಸಿದ ಹಣದ ಲೆಕ್ಕ ಸಾವಿರಾರು ಕೋಟಿಗಳಲ್ಲಿ ಆಗುತ್ತದೆ.

ಇದರ ಬಗ್ಗೆ ರಾಜ್ಯ ಸರಕಾರಗಳು ಕೂಡ ಮಾತನಾಡುತ್ತಿಲ್ಲ . ಏಕೆಂದರೆ ತೈಲ ಬೆಲೆಯಲ್ಲಿ ಕಡಿಮೆಯಾದರೆ ಅವರಿಗೆ ತೆರಿಗೆ ಮೂಲಕ ಬರುವ ಆದಾಯದಲ್ಲಿ ಕಡಿಮೆಯಾಗುತ್ತದೆ. ನಮ್ಮದು ಅದೆಷ್ಟು ದೊಡ್ಡ ದೇಶ ಎಂದರೆ ಈ ತೆರಿಗೆ ಲೆಕ್ಕಾಚಾರವೂ ನೂರಾರು ಕೋಟಿಗಳಲ್ಲಿ ಇರುತ್ತದೆ. ಈ ಮಧ್ಯೆ ನಾವು ಪ್ರಜೆಗಳು ಸುಮ್ಮನೆ ಅವರು ಹೇಳಿದ ಬೆಲೆ ನೀಡದೆ ಬೇರೆ ದಾರಿಯಿಲ್ಲ ಎನ್ನುವಂತಾಗಿದೆ.

ಭಾರತದಲ್ಲಿ ವಾಸಿಸುತ್ತಿರುವ ನಮಗೆ ಇಲ್ಲಿನ ಕಥೆಯ ಸಾರ ಯಾವುದೇ ಪತ್ರಿಕೆಯನ್ನ ಓದದೇ, ಯಾವುದೇ ಹೊಸ ವಿಶ್ಲೇಷಣೆಗಳನ್ನ ಮಾಡದೆ ಅಲ್ಪಸ್ವಲ್ಪ ಖಂಡಿತ ಗೊತ್ತಿರುತ್ತದೆ. ದಿನ ನಿತ್ಯದ ಬದುಕಿನಲ್ಲಿ ನಾವೆಲ್ಲಾ ಇದಕ್ಕೆ ಸಾಕ್ಷಿಯಾಗಿರುತ್ತೇವೆ. ಭಾರತದಲ್ಲಿ ಕೂಡ ಆಹಾರ ಪದಾರ್ಥಗಳ ಮೇಲಿನ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಇದು ಮಧ್ಯಮ ಮತ್ತು ಬಡ ಮಧ್ಯಮ ವರ್ಗಕ್ಕೆ ಅಪಾರವಾದ ಪೆಟ್ಟು ನೀಡಿದೆ. ಕೇಂದ್ರ ಸರಕಾರ ತೈಲದ ಬೆಲೆಯನ್ನು ಇಳಿಸದೆ ಇರುವುದು ನಿಜಕ್ಕೂ ಖೇದಕರ. ಇನ್ನು ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ಹಬ್ಬಗಳ ಸಾಲು, ಜೊತೆಗೆ ಮಳೆ ಮತ್ತು ಚಳಿ ಕೂಡ ಜೊತೆಯಾಗಿ ಹಣ್ಣು ಮತ್ತು ತರಕಾರಿಗಳ ಬೆಲೆಯನ್ನ ಗಗನಕ್ಕೇರುತ್ತವೆ. ಈ ಸಮಯದಲ್ಲಿ ಜಾಗತಿಕವಾಗಿ ಕಡಿಮೆಯಾಗಿರುವ ತೈಲ ಬೆಲೆಯ ಲಾಭವನ್ನು ಜನ ಸಾಮಾನ್ಯನಿಗೆ ವರ್ಗಾಯಿಸಿದ್ದರೆ ಅಷ್ಟರ ಮಟ್ಟಿಗೆ ಹಬ್ಬದ ತಿಂಗಳುಗಳು ಹೆಚ್ಚಿದ ಖರ್ಚನ್ನು ಸರಿದೂಗಿಸಲು ಒಂದಷ್ಟು ಸಹಾಯವಾಗುತ್ತಿತ್ತು. ತೈಲ ಬೆಲೆ ಜಾಗತಿಕ ಮಟ್ಟದಲ್ಲಿ ಕಡಿಮೆಯಾದಗ ನಮಗೂ ಕೂಡ ಕಡಿಮೆಯಾಗುತ್ತದೆ ಎನ್ನುವ ಮಾತು ಪೂರ್ಣ ಸತ್ಯವಲ್ಲ ಎನ್ನುವುದನ್ನ ಅನುಭವದಿಂದ ಕಲಿತ್ತಿದ್ದೇವೆ. ಈಗಿನ ಸನ್ನಿವೇಶ ಅದನ್ನು ಇನ್ನಷ್ಟು ಪುಷ್ಟಿಕರಿಸಿದೆ.

ಹೋಗುವ ಮುನ್ನ: ಹಣದುಬ್ಬರ ಎನ್ನುವುದು ಇಂದು ಜಾಗತಿಕ ಸಮಸ್ಯೆ. ಈ ಸಮಸ್ಯೆಗೆ ಬೇಗ ಪರಿಹಾರ ಕಂಡುಕೊಳ್ಳಬೇಕು. ಬೆಲೆ ಹೆಚ್ಚಾಯ್ತು ಎಂದು ವೇತನ ಹೆಚ್ಚಳ , ವೇತನ ಹೆಚ್ಚಾಯ್ತು ಎಂದು ಬೆಲೆ ಏರಿಕೆ , ಈ ರೀತಿಯ ಆಟದಲ್ಲಿ ಜಗತ್ತಿನ ಒಂದು ವರ್ಗ ಒಪ್ಪತ್ತಿನ ಊಟವನ್ನ ಕೂಡ ಕೊಳ್ಳಲಾಗದ ಸ್ಥಿತಿಗೆ ಬಂದು ಬಿಡುತ್ತದೆ. ಸಾಂಘಿಕ ಪ್ರಯತ್ನದಿಂದ ಎಲ್ಲವೂ ಸಾಧ್ಯ.ಇವತ್ತು ಮತ್ತೆ ಜಗತ್ತು ಪೂರ್ತಿ ಇನ್ನೊಂದು ಹೊಸ ಬೆಲೆಯೇರಿಕೆಗೆ ಸಿದ್ಧವಾಗುತ್ತಿದೆ. ಪ್ರಜೆಗಳ ಆದಾಯದಲ್ಲಿ ಅಂತಹ ಹೆಚ್ಚಿನ ಬದಲಾವಣೆ ಖಂಡಿತ ಆಗಿಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ಹೊಸ ರೀತಿಯ ಬದಲಾವಣೆಗಳು ಆಗುತ್ತಿವೆ. ಇಂತಹ ಬದಲಾವಣೆಗಳು ಭಾರತದ ಮೇಲೂ ಆಗುತ್ತದೆ. ಹಣ ಗಳಿಸುವುದು ಮತ್ತು ಉಳಿಸುವುದು ಕಷ್ಟವಾಗುತ್ತದೆ. ಆದರೆ ಯಾವುದೇ ಹೊಸ ವ್ಯಾಪಾರ , ಉದ್ದಿಮೆ ತೆರೆದರೆ ಅದರಿಂದ ಹೇಗಾದರೂ ಬದುಕು ಕಟ್ಟಿಕೊಳ್ಳಬಹುದು ಎನ್ನುವ ನಂಬಿಕೆ ಕೂಡ ಕಮರಿ ಹೋಗುತ್ತಿದೆ. ಜಗತ್ತು ಇಂದು ಒಡೆದ ಮನೆ. ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು ? ಎನ್ನುವುದು ಪ್ರಶ್ನೆ. ಇವೆಲ್ಲವುಗಳ ನಡುವೆ ಸೊರಗುವುದು ಮಾತ್ರ ಜನ ಸಾಮಾನ್ಯ.

ಈ ಸುದ್ದಿಯನ್ನೂ ಓದಿ: Rangaswamy Mookanahalli column: ಮನಿ-ಮ್ಯಾಟರ್‌: ಹೆಣ್‌ ಮಕ್ಳೇ ಸ್ಟ್ರಾಂಗು ಗುರು!