ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ವಿದೇಶಕ್ಕೆ ಹೋಗಬೇಕು ಎನ್ನುವ ವ್ಯಾಮೋಹ ಯಾರಿಗಿಲ್ಲ ಹೇಳಿ? ಅದು ತಪ್ಪಂತೂ ಅಲ್ಲವೇ ಅಲ್ಲ. ಕೆಲವರು ಕೇವಲ ಪ್ರವಾಸಿಗರಾಗಿ ಹೋಗಿ ಬರಲು ಇಷ್ಟಪಟ್ಟರೆ, ಇನ್ನು ಹಲವರು ಅಲ್ಲಿ ನೆಲೆಸಬೇಕು ಎನ್ನುವ ಇಚ್ಛೆಯನ್ನ ಹೊಂದಿರುತ್ತಾರೆ. ಕೆಲವರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಗಳಿಗೆ ತೆರಳಿ ನಂತರ ಅಲ್ಲಿ ನೆಲೆ ಕಂಡುಕೊಳ್ಳುವ ಬಯಕೆಯನ್ನ ಕೂಡ ಹೊಂದಿರುತ್ತಾರೆ.
ಇನ್ನಷ್ಟು ಮಂದಿ ಕೆಲಸದ ಮೇಲೆ ಅಲ್ಲಿಗೆ ಹೋಗಿರುತ್ತಾರೆ. ಭಾರತೀಯ ಸಂಸ್ಥೆಗಳು ವಿದೇಶಕ್ಕೆ ಕೆಲಸದ ನಿಮಿತ್ತ ಕೂಡ ತಮ್ಮ ನೌಕರರನ್ನ ಕಳಿಸುತ್ತವೆ. ಹೀಗೆ ಯಾವುದಕ್ಕೂ ಸಿಲುಕದ ಒಂದಷ್ಟು ಜನ ‘ವರ್ಕ್ ಪರ್ಮಿಟ್’ ಪಡೆದು ವಿದೇಶಗಳನ್ನು ಸೇರುವ ಆಸೆಯನ್ನ ಕೂಡ ಹೊಂದಿರುತ್ತಾರೆ. ಹೀಗೆ ಬೇರೆಯವರ ಹೆಚ್ಚಿನ ಸಹಾಯವಿಲ್ಲದೆ ತಮ್ಮ ಪ್ರತಿಭೆ, ವಯಸ್ಸು ಮತ್ತು ವಿದ್ಯಾರ್ಹತೆಯನ್ನ ಮೂಲವನ್ನಾಗಿಸಿಕೊಂಡು ಇದ್ದುದರಲ್ಲಿ ಸುಲಭವಾಗಿ ಸೇರಬಹು ದಾದ ದೇಶವೆಂದರೆ ಅದು ನಿರ್ವಿವಾದವಾಗಿ ಕೆನಡಾ.
ಕೆನಡಾ ಎನ್ನುವ ಈ ದೇಶ ನಿಂತಿರುವುದು ವಲಸಿಗರಿಂದ! ಹಾಗೆ ನೋಡಲು ಹೋದರೆ ಈ ದೇಶವನ್ನು ಕಟ್ಟಿರುವುದು ವಲಸಿಗರು! ವಿದ್ಯಾಭ್ಯಾಸಕ್ಕೆ ಮತ್ತು ಕೆಲಸಕ್ಕೆ ಎಂದು ಕೆನಡಾ ಸೇರುವ ಭಾರತೀಯರ ಸಂಖ್ಯೆ ಅಸಂಖ್ಯ. ಕೆನಡಾ
ದೇಶದ ಉದ್ದಗಲಕ್ಕೂ ಕಾಣಸಿಗುವ ಭಾರತೀಯರು ಇದಕ್ಕೆ ಸಾಕ್ಷಿ. ದಶಕಗಳ ಹಿಂದೆ ಇಲ್ಲಿ ಭಾರತೀಯರು ಎಂದರೆ ಕೇವಲ ಪಂಜಾಬಿಗಳು ಎನ್ನುವ ಸ್ಥಿತಿಯಿತ್ತು. ಇದೀಗ ಆ ವ್ಯಾಖ್ಯೆ ಕೂಡ ಬದಲಾಗಿದೆ. ಭಾರತದ ಎಲ್ಲಾ ರಾಜ್ಯ ಗಳಿಂದ ಕೆನಡಾ ದೇಶಕ್ಕೆ ವಲಸೆ ಹೋಗುವುದು ಇಂದಿಗೆ ಸಾಮಾನ್ಯವಾಗಿದೆ.
ಬಹಳಷ್ಟು ಜನ ಕೆನಡಾಕ್ಕೆ ಹೋಗುವುದು ಎಂದರೆ ಸ್ವರ್ಗಕ್ಕೆ ಹೋದಂತೆ, ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಕ್ಕಂತೆ ಇತ್ಯಾದಿ ಭ್ರಮೆಗಳನ್ನ ಹೊಂದಿದ್ದಾರೆ. ಅಂಥ ಅನೇಕ ಭ್ರಮೆ ಮತ್ತು ಮಿಥ್ಯೆಗಳನ್ನ ದೂರ ಮಾಡುವುದು ಈ ಬರಹದ
ಉದ್ದೇಶ. ಇದನ್ನ ಋಣಾತ್ಮಕವಾಗಿ ನೋಡದೆ, ಧನಾತ್ಮಕವಾಗಿ ವಿಶ್ಲೇಷಿಸಿ, ಸರಿ-ತಪ್ಪುಗಳ ತುಲನೆಯ ನಂತರ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ನೆನಪಿರಲಿ, ವ್ಯಕ್ತಿಯಿಂದ ವ್ಯಕ್ತಿಗೆ ಸನ್ನಿವೇಶಗಳು ಬದಲಾಗುತ್ತವೆ. ಹೀಗಾಗಿ ಇದನ್ನ ‘ಇದಮಿತ್ಥಂ’ ಎನ್ನುವಂತೆ ತೆಗೆದುಕೊಳ್ಳುವ ಅವಶ್ಯಕತೆ ಕೂಡ ಇಲ್ಲ. ಕೆನಡಾಕ್ಕೆ (ಅಥವಾ ಇನ್ನಿತರ ವಿದೇಶ ಗಳಿಗೆ) ಹೋಗುವ ಮುನ್ನ ಮುಂದೆ ನೀಡಲಾಗಿರುವ ಒಂದಷ್ಟು ಅಂಶಗಳನ್ನ ಗಮನಿಸಬೇಕಾದ ಅವಶ್ಯ ಕತೆಯಿದೆ: ವಿದೇಶದಲ್ಲಿ ಎಲ್ಲವೂ ಅಚ್ಚುಕಟ್ಟಾಗಿ, ವ್ಯವಸ್ಥಿತ ವಾಗಿರುತ್ತದೆ ಇದರಲ್ಲಿ ಬಹುಪಾಲು ಸತ್ಯಾಂಶವಿದ್ದರೂ ಪೂರ್ಣ ವಾಗಿ ನಂಬುವಂತಿಲ್ಲ.
ಇಲ್ಲಿ ಕೂಡ ಜಗತ್ತಿನ ಎಡೆಯಂತೆ ಇರುವುದು ಅದೇ ಮನುಷ್ಯರು. ಮನುಷ್ಯ ಇದ್ದ ಕಡೆಯಲ್ಲಿ ಇರಬಹುದಾದ ಅವ್ಯವಸ್ಥೆ, ಆಸೆ, ಪ್ರಲೋಭನೆ, ಮೋಸ ಇದ್ದೇ ಇರುತ್ತದೆ. ಹಾಗೆ ನೋಡಲು ಹೋದರೆ ಹೊಸ ವ್ಯವಸ್ಥೆಗೆ ಒಗ್ಗಿ ಕೊಳ್ಳಲು ಮತ್ತು ಅಲ್ಲಿನ ಖರ್ಚಿಗೆ ತಕ್ಕ ಆದಾಯ ಬರುವ ಕೆಲಸ ಹುಡುಕಿಕೊಳ್ಳುವುದೇ ದೊಡ್ಡ ಸವಾಲು.
ಬದುಕಿನ ವೆಚ್ಚ ಇಲ್ಲಿ ದುಬಾರಿ: ಬಹುತೇಕರು ಮಾಡುವ ಸಾಮಾನ್ಯ ತಪ್ಪು, ಕೇವಲ ಆದಾಯವನ್ನ ಲೆಕ್ಕ ಹಾಕುವುದು. ಭಾರತದ ರುಪಾಯಿಯಲ್ಲಿ ಇಷ್ಟು ಆದಾಯ ಎಂದು ಹೇಳಿ ಖುಷಿ ಪಡುವವರ ಸಂಖ್ಯೆಯೂ
ಅಸಂಖ್ಯ. ಆದರೆ ನೆನಪಿರಲಿ, ಅಲ್ಲಿನ ಆದಾಯ ಅಲ್ಲಿನ ಖರ್ಚಿಗೆ ತಕ್ಕಂತೆ ಹೊಂದಿಕೊಂಡಿರುತ್ತದೆ.
ಹೀಗಾಗಿ ಕೇವಲ ಆದಾಯವನ್ನ ಲೆಕ್ಕ ಹಾಕದೆ ಖರ್ಚಿನ ಲೆಕ್ಕಾಚಾರ ಕೂಡ ಹಾಕಬೇಕು. ಎಲ್ಲವನ್ನೂ ಕಳೆದು ಉಳಿಸಿದ್ದು ಎಷ್ಟು? ಎನ್ನುವುದನ್ನ ನೋಡಬೇಕು. ಭಾರತ ಬಿಟ್ಟು ಬೇರೆಡೆಗೆ ಹೋಗುವುದಕ್ಕೆ ಸಿಗುತ್ತಿರುವ ಲಾಭಾಂಶ
ಸರಿಯಿದೆಯೇ? ಅಂದರೆ ಪಡುತ್ತಿರುವ ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದೆಯೇ ಎನ್ನುವುದನ್ನ ಗಮನಿಸಬೇಕು.
ಟ್ಯಾP ಎನ್ನುವ ಪೆಡಂಭೂತವನ್ನ ಗಣನೆಗೆ ತೆಗೆದುಕೊಳ್ಳಬೇಕು: ಭಾರತದಲ್ಲಿ ವ್ಯಕ್ತಿಯೊಬ್ಬರ ಆದಾಯದ
ಮೇಲೆ 30 ಪ್ರತಿಶತ ಆದಾಯ ತೆರಿಗೆಯಿದೆ. 15 ಲಕ್ಷಕ್ಕೂ ಕಡಿಮೆ ಆದಾಯದ ಮೇಲೆ ಅಷ್ಟೇನೂ ಒತ್ತಡವಿಲ್ಲ. ಕೆನಡಾ ದೇಶದಲ್ಲಿ ಹಾಗಲ್ಲ, ನೀವು ಹೆಚ್ಚು ಹಣ ದುಡಿದಷ್ಟೂ ಹೆಚ್ಚು ತೆರಿಗೆಯನ್ನ ನೀಡಬೇಕಾಗುತ್ತದೆ. ಇದು 30ರಿಂದ 50 ಪ್ರತಿಶತದವರೆಗೆ ಹೋಗುತ್ತದೆ. ಹೀಗಾಗಿ ನೀವು ತೀರಾ ಉನ್ನತ ಹುದ್ದೆಗೆ ಹೋಗುವ ಮುನ್ನ ಯೋಚಿಸಬೇಕಾಗುತ್ತದೆ. ಕೆಲವೊಮ್ಮೆ ನಿಮ್ಮ ಆದಾಯದ 50 ಪ್ರತಿಶತ ತೆರಿಗೆಯ ರೂಪದಲ್ಲಿ ಸರಕಾರಕ್ಕೆ ನೀಡಬೇಕಾಗುತ್ತದೆ.
ನೈಸರ್ಗಿಕ ವಿಕೋಪಗಳಿಗೆ ಸಿದ್ಧರಿರಬೇಕು: ಕೆನಡಾ ಎನ್ನುವ ದೇಶ ಚಳಿಯಿಂದ ಬಳಲುತ್ತದೆ. ತೀವ್ರ ಹಿಮಪಾತ, ಶೀತಗಾಳಿ ಇವುಗಳಿಂದ ಇದು ಹೈರಾಣಾಗಿದೆ. ಹಾಗೆ ನೋಡಲು ಹೋದರೆ ಅತ್ಯಂತ ವಿಶಾಲವಾದ ಈ ದೇಶದಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವುದರ ಕಾರಣ ಕೂಡ ಈ ವಾತಾವರಣವೇ. ಮನುಷ್ಯರು ವಾಸಿಸಲು ಯೋಗ್ಯವಲ್ಲದ ಪ್ರದೇಶವಾಗಿರುವ ಕಾರಣ ಇಲ್ಲಿ ಜನಸಂಖ್ಯೆ ಬಹಳ ಕಡಿಮೆ. ನಿತ್ಯ ಮನೆಯ ಮುಂದಿನ ಹಿಮವನ್ನ ಬಾಚುವುದರಲ್ಲಿ ಬೆನ್ನಮೂಳೆ ಮುರಿಯದಿದ್ದರೆ ಅದೇ ಅದೃಷ್ಟ.
ಒಂಟಿತನ ಎನ್ನುವ ನೋವಿಗೆ ಸಿದ್ಧರಿರಬೇಕು: ಇಲ್ಲಿ ಸಾಕಷ್ಟು ಜನರಿದ್ದರೂ ಅವರ ಮಧ್ಯೆ ಒಂಟಿ ಎನ್ನುವ ಭಾವನೆ ಬರುವುದನ್ನ ತಪ್ಪಿಸಲಾಗುವುದಿಲ್ಲ. ಎಲ್ಲವೂ ಇದ್ದು ಏನೂ ಇಲ್ಲದ ಸನ್ನಿವೇಶ ಸೃಷ್ಟಿಯಾಗಿರುತ್ತದೆ. ಎಲ್ಲರಿಗೂ ಅವರದೇ ಆದ ಬದುಕು ಮತ್ತು ಒತ್ತಡ ಇರುವ ಕಾರಣ ಯಾರಿಗೆ ಯಾರೂ ಇಲ್ಲ ಎನ್ನುವ ಮಾತು
ಇಲ್ಲಿ ಸತ್ಯ ಎನಿಸ ತೊಡಗುತ್ತದೆ. ಚಳಿಗಾಲದಲ್ಲಿ ಇದರ ಸಮಸ್ಯೆ ದುಪಟ್ಟು.
ಕುಸಿಯುತ್ತಿರುವ ಮೂಲಭೂತ ವ್ಯವಸ್ಥೆ: ಕೆನಡಾ ದಶಕದ ಹಿಂದಿನ ಆಕರ್ಷಣೆ ಉಳಿಸಿಕೊಂಡಿಲ್ಲ. ಅದಕ್ಕೆ ಕಾರಣ ಒಂದೇ ಸಮನೆ ಹೆಚ್ಚಾಗುತ್ತಿರುವ ವಲಸೆ, ಜನಸಂಖ್ಯೆ. ಭಾರತದಲ್ಲಿ ಎಡೆ ಜನಸಂದಣಿ ನೋಡಿ ಬೇಸತ್ತು ಕೆನಡಾಗೆ ಹೋದವರಿಗೆ ಅಚ್ಚರಿ ಕಾದಿರುತ್ತದೆ. ಏಕೆಂದರೆ ಇಲ್ಲಿಯೂ ಜನಸಂದಣಿ ಕಾಣಬಹುದು. ಎಲ್ಲರಿಗೂ ನಗರದ ವಾಸಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕೆಲಸಗಳು ಸುಲಭವಾಗಿ ಸಿಗುವುದಿಲ್ಲ, ಸಿಕ್ಕರೂ ಅದು ಬಯಸಿ ಹೋದ ಕೆಲಸವಾಗಿರುವುದಿಲ್ಲ. ಜನದಟ್ಟಣೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನ ಸರಕಾರ ನಿರ್ಮಿಸಿಲ್ಲ.
ಬದಲಾಗುತ್ತಿದೆ ಮೆಡಿಕಲ್ ಕ್ಷೇತ್ರ: ಜನಸಂಖ್ಯೆಗೆ ತಕ್ಕಂತೆ ಆಸ್ಪತ್ರೆಗಳು ಹೆಚ್ಚಾಗಿಲ್ಲ, ವೈದ್ಯರು ಮತ್ತಿತರ ಸೇವಾ ಸಿಬ್ಬಂದಿ ನೇಮಕವಾಗಿಲ್ಲ, ಹೀಗಾಗಿ ಇರುವ ವ್ಯವಸ್ಥೆಯ ಮೇಲೆ ಇನ್ನಿಲ್ಲದ ಒತ್ತಡ ಬಿದ್ದಿದೆ. ಒತ್ತಡ ತಡೆದು ಕೊಳ್ಳಲು ಆಗದೆ ಇರುವ ಸಿಬ್ಬಂದಿ ಕೆಲಸ ಬಿಟ್ಟು ಬೇರೆಡೆ ಹೋಗುವ ಕೆಲಸ ಮಾಡುತ್ತಿದ್ದಾರೆ. ಸಣ್ಣ ಪುಟ್ಟ ನೆಗಡಿ, ಕೆಮ್ಮಿಗೂ ವಾರ ಕಳೆದರೂ ವೈದ್ಯರ ಬಳಿ ಸಮಯ ಸಿಗುವುದಿಲ್ಲ. ಹಾಗೆ ನೋಡಿದರೆ ಇದು ಕೆನಡಾದ ಸಮಸ್ಯೆ ಮಾತ್ರವಲ್ಲ, ಪೂರ್ಣ ಯುರೋಪು ಕೂಡ ಈ ಸಮಸ್ಯೆಯಿಂದ ಬಳಲುತ್ತಿದೆ.
ಮೂಗಿಗಿಂತ ಮೂಗುತಿ ಭಾರ: ವಿದ್ಯಾರ್ಥಿಗಳಾಗಿ ಇಲ್ಲಿ ಬಂದವರು ಖರ್ಚಿಗಾಗಿ, ವಿದ್ಯಾಭ್ಯಾಸಕ್ಕಾಗಿ ಸಾಲ
ಮಾಡುವುದು ತೀರಾ ಸಹಜ. ಆ ಸಾಲವನ್ನ ಮತ್ತು ಅದರ ಮೇಲಿನ ಬಡ್ಡಿಯನ್ನ ಕಟ್ಟುವುದರಲ್ಲಿ, ತಾವು ಬಯಸಿದ ಕೆಲಸ ಸಿಗುವವರೆಗಿನ 3/4 ವರ್ಷದ ಸಂಘರ್ಷದ ಕಥೆ ಬೇರೆಯ ರೀತಿಯದು. ಕೆಲಸ ಸಿಕ್ಕ ನಂತರ ಮುಗಿಯಿತು
ಎನ್ನುವಂತಿಲ್ಲ, ಇಂದಿನ ಅಸ್ಥಿರ ಸಮಾಜದಲ್ಲಿ ಯಾವುದನ್ನೂ ಹೆಚ್ಚು ವೇಳೆ ಸಂಭ್ರಮಿಸಲು ಬಾರದು. ಯಾವ ದೇಶದಲ್ಲಿ ಉತ್ತಮ ಬದುಕಿದೆ ಎಂದು ಹುಡುಕುತ್ತ ಹೋಗುತ್ತೇವೆ. ಅಲ್ಲಿನ ಸೌಂದರ್ಯ ಇತ್ಯಾದಿಗಳನ್ನ ಆಸ್ವಾದಿ ಸುವ ಬದಲು, ಸಾಲದಿಂದ ಹೊರಬರುವುದರಲ್ಲಿ ಜೀವನ ಕಳೆದುಹೋಗುತ್ತದೆ. ಬಾಲ ದೇಹವನ್ನ ಅಡಿಸುವ ದೈನೇಸಿ ಸ್ಥಿತಿಗೆ ಬದುಕು ತಂದು ನಿಲ್ಲಿಸಿ ಬಿಡುತ್ತದೆ. ವಿದೇಶದಲ್ಲಿ ‘ಸೆಟಲ್’ ಎನ್ನುವ ಬಹುತೇಕರು ಮರಳಿ ಭಾರತಕ್ಕೆ ಬಾರದೆ ಇರಲು ಇದು ಒಂದು ಅತಿದೊಡ್ಡ ಕಾರಣ.
ಎಡೆ ದುಡಿಯುವ ಸ್ವಾತಂತ್ರ್ಯ ಕೂಡ ಇಲ್ಲ: ಕೆನಡಾ ದೇಶದ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆ ಬಹಳ ಹೆಚ್ಚು, ಅಂದರೆ ದಟ್ಟಣೆ ಬಹಳ ಹೆಚ್ಚು, ಕೆಲವು ಕಡೆ ಜನರೇ ಇರುವುದಿಲ್ಲ. ಹೀಗಾಗಿ ವಲಸೆ ಹೋಗಬಯಸುವವರನ್ನ ಮೊದಲಿಗೆ ಇಂಥ ನಗರಗಳಲ್ಲಿ ಮಾತ್ರ ಜೀವಿಸಲು ಸಾಧ್ಯ ಎನ್ನುವ ನಿಬಂಧನೆಯ ಮೇಲೆ ವರ್ಕ್ ಪರ್ಮಿಟ್
ನೀಡಲಾಗುತ್ತದೆ. ಇದರರ್ಥ ನಮೂದಿಸಿರುವ ಪ್ರಾಂತ್ಯದಲ್ಲಿ ಬಿಟ್ಟು ಬೇರೆಡೆ ಕೆಲಸ ಮಾಡಲು ಬರುವುದಿಲ್ಲ. ಒಂದಷ್ಟು ವರ್ಷದ ನಂತರ ಎಲ್ಲಿ ಬೇಕಾದರೂ ಕೆಲಸ ಮಾಡುವ ಪರ್ಮಿಟ್ ಪಡೆದುಕೊಳ್ಳಬೇಕಾಗುತ್ತದೆ. ವಿದೇಶಕ್ಕೆ
ಹೋಗಬೇಕೆನ್ನುವ ಆತುರದಲ್ಲಿ ಸರಿಯಾಗಿ ಪರಾಮರ್ಶೆ ಮಾಡದೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ.
ನಮ್ಮ ದೊಡ್ಡ ಶತ್ರು ನಮ್ಮವರೇ ಆಗಿರುತ್ತಾರೆ: ಜಗತ್ತಿನ ಎಡೆ ರೇಸಿಸಂ ಎನ್ನುವ ಪಿಡುಗಿದೆ. ಕೆಲವು ದೇಶಗಳಲ್ಲಿ ಇದು ಕಣ್ಣಿಗೆ ಕಾಣುವಂತಿದ್ದರೆ ಕೆಲವು ಕಡೆ ಇದು ಗುಪ್ತವಾಗಿರುತ್ತದೆ. ಪ್ರವಾಸಿಗರ ಕಣ್ಣಿಗೆ ಕಾಣದಿರಬಹುದು, ಆದರೆ ಅಲ್ಲಿ ಜೀವಿಸಲು ಶುರುಮಾಡಿದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಇದರ ಅನುಭವ ಪಡೆಯುತ್ತಾರೆ. ಕೆನಡಾ ದಂಥ ವಲಸಿಗರಿಂದಲೇ ಕಟ್ಟಲ್ಪಟ್ಟ ದೇಶದಲ್ಲಿ 2-3ದಶಕದ ಹಿಂದೆ ನೆಲೆ ಕಂಡುಕೊಂಡ ಭಾರತೀಯರೇ, ಹೊಸ ಭಾರತೀಯ ವಲಸಿಗರನ್ನ ಕೀಳಾಗಿ ಕಾಣುತ್ತಾರೆ. ಇದು ಕೂಡ ಸಣ್ಣ ಭಾರತವಾಗಿದೆ, ಇಲ್ಲಿಯೂ ಭಾಷೆ, ಧರ್ಮ, ಜಾತಿಯ ಆಧಾರದಲ್ಲಿ ಭಾರತೀಯರು ಹಂಚಿ ಹೋಗಿದ್ದಾರೆ. ಭಾರತ ಬಿಟ್ಟರೂ ಬದುಕು ಬದಲಾಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ವಿದೇಶಗಳಿಗೆ ಹೆಚ್ಚಿನ ವ್ಯಾಸಂಗಕ್ಕೆ ಹೋಗಿರುವ ಹೊಸ ತಲೆಮಾರಿನ ಹುಡುಗರು ಮುಲಾ ಜಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಅಲ್ಲಿ ಆಗುತ್ತಿರುವ ಬವಣೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಒಂದು ತಲೆಮಾರು ಹಿಂದೆ ವಿದೇಶಕ್ಕೆ ಹೋದವರು ಅಲ್ಲಿನ ನ್ಯೂನತೆಗಳ ಬಗ್ಗೆ ಹೇಳಿದರೆ ಅವರ ಏನೋ ದೋಷವಿದೆ ಎನ್ನುವಂತೆ ಸಮಾಜ ನೋಡುತ್ತಿತ್ತು. ಇಂದಿಗೆ ಸಮಾಜ ಬದಲಾಗಿದೆ. ಭಾರತದಲ್ಲಿ ಕೂಡ ಅವಕಾಶಗಳಿವೆ. ಜತೆಗೆ ಬದುಕು ಕಟ್ಟಿಕೊಳ್ಳಲು ಗುದ್ದಾಟ ಮಾಡುವುದಾದರೆ ಅದು ನಮ್ಮ ನೆಲದಲ್ಲಿ ಆದರೆ ಎಷ್ಟೋ ಮೇಲು ಎನ್ನುವ ಸಾಮಾನ್ಯ ಜ್ಞಾನ ಕೂಡ ಜನತೆಯಲ್ಲಿ ಹೆಚ್ಚಾಗಿದೆ. ವಿದೇಶಕ್ಕೆ ಹೋಗಿ ನೆಲೆಸಬೇಕು ಎನ್ನುವವರ ಮನಸ್ಸಿನಲ್ಲಿ ಒಂದಷ್ಟು ಸುಂದರ ಕಲ್ಪನೆಗಳಿರುತ್ತವೆ.
ವಿದೇಶ ತಲುಪಿಬಿಟ್ಟರೆ ಎಲ್ಲಾ ಸಮಸ್ಯೆಗಳೂ ಮಾಯ ಎನ್ನುವುದು ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಬದುಕು ಎಡೆ ಅದರದೇ ಆದ ಸವಾಲುಗಳನ್ನ ಒಡ್ಡುತ್ತದೆ. ಅದು ಎಲ್ಲಿಯೂ ಸುಲಭವಲ್ಲ. ಯಾವುದೂ ಸುಲಭವಾಗಿ
ಸಿಕ್ಕುವುದಿಲ್ಲ, ಎಲ್ಲಕ್ಕೂ ಏನನ್ನೋ ವಸೂಲಿ ಮಾಡಿಕೊಂಡಿರುತ್ತದೆ. ಎಲ್ಲವನ್ನೂ ಮೆಟ್ಟಿ ಅಲ್ಲಿ ನೆಲೆ ಕಂಡುಕೊಂಡ ನಂತರ ಮುಂದಿನ ಜನಾಂಗದ ಇನ್ನಷ್ಟು ಸಮಸ್ಯೆಗಳು ಎದುರಾಗುತ್ತವೆ. ಸಮಸ್ಯೆಗಳನ್ನ ಎದುರಿಸುವುದೊಂದೇ ದಾರಿ, ಅದಕ್ಕೆ ಬೆನ್ನು ತೋರಿಸಲು ಆಗುವುದಿಲ್ಲ. ಭಾರತವಾದರೂ, ಕೆನಡಾ ಅಥವಾ ಇನ್ನಾವ ದೇಶವಾದರೂ ಇದೇ ಸರಿಯಾದ ದಾರಿ.
ಇದನ್ನೂ ಓದಿ: Rangaswamy Mookanahally column: ವಾತಾವರಣ ಬದಲಾವಣೆಯೂ ವ್ಯಾಪಾರ !