ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ನಾವ್ಯಾರು ಎಂಬುದನ್ನು ನಮ್ಮ ಬುದ್ಧಿಶಕ್ತಿ ತಿಳಿಸುತ್ತದೆ. ಬುದ್ಧಿಶಕ್ತಿಯ ಪೂರ್ಣವಾದ ಬಳಕೆ, ಸದ್ಬಳಕೆ ಮಾಡಿ ಕೊಳ್ಳಲು ಬೇಕಾದ ಪ್ರಥಮ ಅಂಶವೆಂದರೆ ನೆಗಟಿವ್ ಮನಸ್ಥಿತಿಯ ಜನರಿಂದ ದೂರವಿರುವುದು. ನೀವೇನೇ ಮಾಡಿ, ಅದರಲ್ಲಿ ಒಂದು ತಪ್ಪು ಹುಡುಕಲು ಕೆಲವರು ಕುಳಿತಿರುತ್ತಾರೆ. ಇನ್ನೊಂದು ವರ್ಗದವರು, ನಿಮ್ಮ ಕರ್ತವ್ಯಪಥ ದಿಂದ ನೀವು ದೂರವಾಗುವಂತೆ ಮಾಡಿ, ಹೀಯಾಳಿಸಿ, ಮೂದಲಿಸಿ, ಕಾಲುಕೆರೆದು ಜಗಳವಾಡಿ ನಿಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ.
ಒಂದು ಸಮಾಜ ಎಂದ ಮೇಲೆ ಎಲ್ಲಾ ರೀತಿಯ ಜನರನ್ನೂ ನಾವು ಕಾಣಬಹುದು. ಹಿಂದೆ ಈ ರೀತಿಯ ಸನ್ನಿವೇಶ ಗಳನ್ನು ಸೃಷ್ಟಿಸುತ್ತಿದ್ದವರು ಯಾರು ಗೊತ್ತೇ? ನಮ್ಮ ತೀರಾ ಹತ್ತಿರದಲ್ಲಿದ್ದವರು, ಪರಿಚಯಸ್ಥರು. ಇವತ್ತಿಗೆ ಇಂಥವರ ಜತೆಗೆ, ಸೋಷಿಯಲ್ ಮೀಡಿಯಾ ಎನ್ನುವ ಸಮುದ್ರದಲ್ಲಿ ಅನೇಕರು ಹುಟ್ಟಿಕೊಂಡಿದ್ದಾರೆ. ಇವರಿಗೆ ತಾವೇನು ಮಾಡಿದೆವು ಎಂಬುದರ ಬಗ್ಗೆ ಗಮನವೇ ಇರುವುದಿಲ್ಲ.
ಇಂಥವರ ಕಣ್ಣೆಲ್ಲಾ ಇತರರ ಮೇಲೇ! ಇತರರು ಏನು ಮಾಡುತ್ತಿದ್ದಾರೆ? ಅವರ ಕಾಲು ಎಳೆಯುವುದು ಹೇಗೆ? ಎನ್ನುವ ಸಣ್ಣ ಚಿಂತನೆಗಳಲ್ಲೇ ಮುಳುಗಿರುತ್ತಾರೆ! ಯಾರೆಲ್ಲಾ ನಮ್ಮ ಶಕ್ತಿಯನ್ನು ಹೀರುತ್ತಿದ್ದಾರೆ, ನಮ್ಮ ಕೆಲಸಕ್ಕೆ ಅಡ್ಡಿಯಾಗುತ್ತಿದ್ದಾರೆ ಅನಿಸುತ್ತದೋ, ಅಂಥವರನ್ನು ಮುಲಾಜಿಲ್ಲದೆ ದೂರವಿಡುವುದು ಉನ್ನತಿಯ ಕಡೆಗಿನ ಮೊದಲ ಹೆಜ್ಜೆ. ಗಮನಿಸಿ ನೋಡಿ, ಅದು ಕೇವಲ ವ್ಯಕ್ತಿಯಾಗಿರಬೇಕು ಎಂದೇನಿಲ್ಲ. ಇಂದಿನ ದಿನದಲ್ಲಿನ ಬಹು ದೊಡ್ಡ ಅಡಚಣೆ ಸೋಷಿಯಲ್ ಮೀಡಿಯಾ. ಅಂದಮಾತ್ರಕ್ಕೆ ‘ಸೋಷಿಯಲ್ ಮೀಡಿಯಾ ತಪ್ಪು, ಅದರಲ್ಲಿ ನಾವು ಸಮಯ ಕಳೆಯಬಾರದು’ ಎಂದಲ್ಲ; ಎಷ್ಟು ಸಮಯ ಬಳಸುತ್ತಿದ್ದೇವೆ? ಮತ್ತು ಏಕೆ? ಹೇಗೆ? ಎನ್ನುವುದು ಪ್ರಮುಖ ಪಾತ್ರ ವಹಿಸುತ್ತದೆ.
ಇದರ ಜತೆಗೆ, ಹಿಂದೆ ನಾವು ಆಗೊಮ್ಮೆ ಈಗೊಮ್ಮೆ ಉಪವಾಸ ಮಾಡುತ್ತಿದ್ದ ಹಾಗೆ, ಸೋಷಿಯಲ್ ಮೀಡಿಯಾದಿಂದ ಒಂದಷ್ಟು ಸಮಯ ದೂರವಿರುವುದು ಕೂಡ ಒಳ್ಳೆಯದು. ನಾವು ಅಂದುಕೊಂಡ ಕೆಲಸಕ್ಕೆ ಅಡ್ಡಿಮಾಡುವ, ಅದನ್ನು ನಿಧಾನಗೊಳಿಸುವ ಎಲ್ಲವೂ ನಮ್ಮ ಶಕ್ತಿಹೀರುವ ವಸ್ತುಗಳು ಅಥವಾ ವ್ಯಕ್ತಿಗಳು ಎಂಬುದನ್ನು ಮರೆಯ ಬಾರದು.
ತಂತ್ರಜ್ಞಾನ ಅಭಿವೃದ್ಧಿಯಾದಂತೆ ನಮಗೆ ದಕ್ಕುತ್ತಿರುವ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಝೀ ಮುಂತಾದ ಮನರಂಜನೆ ಒದಗಿಸುವ ‘ಸರ್ವೀಸ್ ಪ್ರೊವೈಡರ್’ ವ್ಯವಸ್ಥೆಗಳು ಕೂಡ ನಮ್ಮ ಶಕ್ತಿ, ಸಮಯ ಹೀರುವ ವಸ್ತು ಗಳಾಗಿವೆ. ಇವುಗಳನ್ನು ಪೂರ್ಣ ತ್ಯಜಿಸಬೇಕು ಎಂಬುದು ಇಂದಿನ ಕಾಲಘಟ್ಟದಲ್ಲಿ ಹಾಸ್ಯಾಸ್ಪದ ಎನಿಸುತ್ತದೆ; ಆದರೆ ಇವುಗಳ ಬಳಕೆಯನ್ನು ಮಿತಿಯಲ್ಲಿಡಬೇಕು ಎನ್ನುವುದು ಸಾರಾಂಶ. ಸೋಷಿಯಲ್ ಮೀಡಿಯಾ ಬಳಕೆಯ
ಇನ್ನೊಂದು ದೊಡ್ಡ ನ್ಯೂನತೆಯೆಂದರೆ, ನಮ್ಮ ಅನಿಸಿಕೆ ಯಾವುದೇ ಇರಲಿ ಅದು ಒಂದಷ್ಟು ಜನಕ್ಕೆ ಇಷ್ಟವಾಗುವು ದಿಲ್ಲ. ‘ಅದು ಅವನ ಅನಿಸಿಕೆ’ ಎಂದು ಜನರೂ ಸುಮ್ಮನಿರುವುದಿಲ್ಲ, ಮನಸ್ಸಿಗೆ ಬಂದ ರೀತಿಯಲ್ಲಿ, ಅವರವರ ಸಂಸ್ಕಾರಕ್ಕೆ ತಕ್ಕಂತೆ ಅದಕ್ಕೆ ರಿಯಾಕ್ಟ್ ಮಾಡಲು ಶುರುಮಾಡುತ್ತಾರೆ.
ಬೇಡವೆಂದರೂ ಇಂಥ ಕಾಮೆಂಟ್, ಅನಿಸಿಕೆಗಳು ಕಣ್ಣಿಗೆ ಬೀಳುತ್ತವೆ. ಒಳ್ಳೆಯದನ್ನು ಸೃಷ್ಟಿಸುವ ಕೆಲಸಕ್ಕೆ ಇವು ಒಂದಷ್ಟು ಬ್ರೇಕ್ ಹಾಕುತ್ತವೆ. ಹೀಗಾಗಿ ಏನಾದರೂ ಹೆಚ್ಚಿನದನ್ನು ಸಾಧಿಸುವ ಮನಸ್ಸುಳ್ಳವರು, ಶಕ್ತಿ ಹೀರುವ ವ್ಯಕ್ತಿ ಮತ್ತು ವಸ್ತುಗಳಿಂದ ಖಂಡಿತ ದೂರವಿರಬೇಕು. ಉಳಿದವರು? ಅವರು ದೂರವಿರಬಾರದೇ? ನಿಜ ಹೇಳಬೇಕೆಂದರೆ ನೆಗಟಿವ್ ಎನರ್ಜಿಯಿಂದ ಎಲ್ಲರೂ ದೂರವಿರಬೇಕು.
ನಾವು ಮಾಡುವ ಕೆಲಸದ ಮೇಲೆ ಗಮನವನ್ನು ಉಳಿಸಿಕೊಳ್ಳಬೇಕೆಂದರೆ, ನಮ್ಮ ಶಕ್ತಿ ಹೀರುವ ಜನರಿಂದ ದೂರವಿರ ಬೇಕು. ಸೋಷಿಯಲ್ ಮೀಡಿಯಾದಲ್ಲಿ ‘ಬ್ಲಾಕ್’, ‘ಅನ್ ಫಾಲೋ’ ಆಯ್ಕೆಗಳಿವೆ, ಅವನ್ನು ಬಳಸಬಹುದು. ಕಾಲ ಕಾಲಕ್ಕೆ ಅಲ್ಲಿಂದಲೂ ಒಂದಷ್ಟು ಬ್ರೇಕ್ ತೆಗೆದುಕೊಳ್ಳಬೇಕು.
Energy and persistence conquer all things ಎಂದಿದ್ದಾನೆ ಬೆಂಜಮಿನ್ ಫ್ರಾಂಕ್ಲಿನ್; ಅಂದರೆ, ಶಕ್ತಿ ಮತ್ತು ನಿಲ್ಲದ ಓಟಕ್ಕೆ ಎಲ್ಲವನ್ನೂ ಗೆಲ್ಲುವ ಶಕ್ತಿಯಿದೆ ಎಂದರ್ಥ. ಇವುಗಳ ಪೈಕಿ ಒಂದರಲ್ಲಿ ವ್ಯತ್ಯಯವಾದರೂ, ಅಂದುಕೊಂಡ ಫಲಿತಾಂಶ ಸಿದ್ಧಿಸುವುದಿಲ್ಲ. ಪ್ರತಿಯೊಂದು ಕಾಲಘಟ್ಟದಲ್ಲೂ ಗೆಲುವಿನ ರಸ್ತೆಯಲ್ಲಿ ಒಂದಲ್ಲ ಹತ್ತು ಅಡಚಣೆಗಳು ಇದ್ದವು. ಇಂದಿಗೆ ಅಡಚಣೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.
ಹೀಗಾಗಿ ಅವುಗಳನ್ನು ಮೀರಿ ಮನಸ್ಸು ಮತ್ತು ಶಕ್ತಿಯನ್ನು ಕೇಂದ್ರೀಕರಿಸುವ ಅವಶ್ಯಕತೆ ಹೆಚ್ಚಾಗಿದೆ. ಜಗತ್ತು ಪೂಜಿಸುವುದು ಶಕ್ತಿಯನ್ನು, ಗೆದ್ದವನನ್ನು! ಚರಿತ್ರೆಯಲ್ಲಿ ಕೊನೆಗೂ ದಾಖಲಾಗುವುದು ಸಾಧಕ ಮಾತ್ರ. ಅವನನ್ನು ದಾರಿ ತಪ್ಪಿಸಲು, ಅವನ ಶಕ್ತಿ ಹೀರಲು ಪ್ರಯತ್ನಪಟ್ಟವರನ್ನು ಜಗತ್ತು, ಚರಿತ್ರೆ ಎಂದಿಗೂ ನೆನಪಿನಲ್ಲಿಟ್ಟು ಕೊಳ್ಳುವು ದಿಲ್ಲ. ಹೀಗಾಗಿ ಈ ಕೆಳಗಿನ ಸೂಚನೆಗಳನ್ನು ಪಾಲಿಸಿ: ವ್ಯಾಕುಲತೆ, ಅಡಚಣೆಗಳಿಂದ ಆದಷ್ಟೂ ದೂರವಿರಿ. ಶಕ್ತಿ ಹೀರುವ, ನೆಗಟಿವ್ ಮನಸ್ಥಿತಿಯ ಜನರಿಂದ ದೂರವಿರಿ. ಸೋಷಿಯಲ್ ಮೀಡಿಯಾದಲ್ಲಿ ಕಳೆಯುವ ಸಮಯದ ಬಗ್ಗೆ ಗಮನವಿರಲಿ. ಸಮಾಜ, ಇತಿಹಾಸ ನೆನಪಲ್ಲಿಟ್ಟುಕೊಳ್ಳುವುದು ಕೇವಲ ಗೆದ್ದವರನ್ನು, ಸಾಧಕರನ್ನು ಎನ್ನುವುದು ನೆನಪಿರಲಿ. ಜೀವವಿರುವ ಅಥವಾ ಇಲ್ಲದಿರುವ ಯಾವೆಲ್ಲಾ ವಸ್ತು ಅಥವಾ ವ್ಯಕ್ತಿಗಳು ಸಾಧನೆಯ ಹಾದಿಯಲ್ಲಿ ಅಡ್ಡಬರುತ್ತವೋ, ಅವನ್ನು ವಿಷದಂತೆ ದೂರವಿಡಿ.
ಇವೆಲ್ಲದರ ಜತೆಗೆ, ‘ನಾನ್ಯಾರು?’ ಎನ್ನುವುದನ್ನೂ ತಿಳಿದುಕೊಳ್ಳಬೇಕಿದೆ. ನಾನ್ಯಾರು? ನನಗೇನು ಬೇಕು? ಎಂಬುದರ ಅವಲೋಕನವಾಗಬೇಕು. ಇಲ್ಲಿಗೆ ಬಂದಿರು ವುದರಲ್ಲಿ ನನ್ನ ಪಾತ್ರವಿಲ್ಲ, ಆದರೆ ಭಗವಂತ ಕರುಣಿಸಿರುವ ಸಮಯ ವನ್ನು ಸರಿಯಾಗಿ ವ್ಯಯಮಾಡಬೇಕಿದೆ. ಹೀಗೆ ಸಮಯವನ್ನು ಸರಿಯಾಗಿ ದುಡಿಸಿಕೊಂಡು ಸಮಾಜಕ್ಕೂ, ಕುಟುಂಬಕ್ಕೂ, ನಮಗೂ ಏನಾದರೂ ವ್ಯತ್ಯಾಸ/ಬದಲಾವಣೆ ತೋರುವ ಕೆಲಸ ಮಾಡಿ ಹೋಗಬೇಕೆಂದರೆ,
ಮೊದಲಿಗೆ ‘ನಾನ್ಯಾರು?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು.
ಉದ್ದೇಶ ವೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ, ಕೆಳಗಿನ ಒಂದಷ್ಟು ಪ್ರಶ್ನೆಗಳಿಗೆ ನೀವೇ ಸಮಾಧಾನ ದಿಂದ ಉತ್ತರಿಸಿಕೊಂಡು, ಪ್ರತಿಯೊಂದು ಸರಿಯುತ್ತರಕ್ಕೂ ನೀವೇ ಒಂದೊಂದು ಅಂಕವನ್ನು ಕೊಟ್ಟುಕೊಳ್ಳುತ್ತಾ ಬನ್ನಿ. ನೆನಪಿರಲಿ, ಇಲ್ಲಿ ನಾವು ಯಾರನ್ನೂ ಓಲೈಸುವ ಅವಶ್ಯಕತೆಯಿಲ್ಲ, ನಮಗೆ ನಾವು ಮೋಸಮಾಡಿಕೊಳ್ಳುವ ಅವಶ್ಯಕತೆ ಖಂಡಿತ ಇಲ್ಲ. ಹಾಗೊಮ್ಮೆ ನಮಗೆ ನಾವೇ ಮೋಸ ಮಾಡಿಕೊಂಡರೆ, ಅದಕ್ಕಿಂತ ಮಹಾಪಾಪ ಬೇರೊಂದಿಲ್ಲ.
ಬದುಕಲ್ಲಿ ಏನಾಗಬೇಕು? ನನ್ನ ಕನಸೇನು? ಬದುಕಿನ ಉದ್ದೇಶವೇನು? ಹಣಗಳಿಕೆ? ಉತ್ತಮ ಬದುಕು? ಪ್ರಸಿದ್ಧ ರಾಗುವುದು? ಡಾಕ್ಟರ್, ಎಂಜಿನಿ ಯರ್, ಅಕೌಂಟೆಂಟ್, ಕ್ರೀಡಾಪಟು?… ಪಟ್ಟಿ ದೊಡ್ಡದು. ಏನಾಗಬೇಕು ಎನ್ನುವುದರ ನಿಖರತೆ ಇರಲಿ. ಸಂಶಯವಿದ್ದ ಪಕ್ಷದಲ್ಲಿ ಒಂದಕ್ಕಿಂತ ಹೆಚ್ಚು ಆಯ್ಕೆಯನ್ನು ಇಟ್ಟುಕೊಳ್ಳಿ.
ಜೀವನವನ್ನು ಹುರಿದುಂಬಿಸುವ/ಮೋಟಿವೇಟ್ ಮಾಡುವ ಅಂಶ ಯಾವುದು? ಜೀವನದ ಭರವಸೆಯನ್ನು ಕುಗ್ಗಿಸುವ ಅಂಶ ಯಾವುದು? ಕಳೆದ ವರ್ಷದಲ್ಲಿ ನಿಮ್ಮ ದೊಡ್ಡ ಗೆಲುವು ಯಾವುದು? (ಬೇರೆಯವರ ಗೆಲುವಿನ ಜತೆಗೆ ಹೋಲಿಕೆ ಬೇಡ, ಕೇವಲ ನಿಮ್ಮ ಬದುಕಿನ ಅಂಶವನ್ನಷ್ಟೇ ಗಮನಿಸಿ).
ಕಳೆದ ವರ್ಷದಲ್ಲಿನ ದೊಡ್ಡ ಸೋಲು, ಅವಮಾನ ಯಾವುದಾದರೂ ಇದ್ದರೆ ಅದಾವುದು? ಅದರಿಂದ ನೀವೇನು ಪಾಠ ಕಲಿತಿರಿ? ಕಳೆದ 12 ತಿಂಗಳಲ್ಲಿ ನಿಮಗೆ ಅತ್ಯಂತ ಖುಷಿ ನೀಡಿದ ದಿನ ಯಾವುದು? ಬೇಸರದ ದಿನ ಯಾವುದು? ಮತ್ತು ಏಕೆ? ಅಲ್ಲಿಂದ ಕಲಿತಿದ್ದೇನು? ನೀವು ಬೇರೆಯವರನ್ನು ಓಲೈಸಲು ಪ್ರಯತ್ನ ಮಾಡುತ್ತೀರಾ? ಹೌದಾದರೆ ಯಾವ ಮಟ್ಟದವರೆಗೆ ಓಲೈಕೆಗೆ ಇಳಿಯುತ್ತೀರಿ? ನಿಮ್ಮನ್ನು ನೀವು ಓಲೈಸಿಕೊಳ್ಳುವುದು, ಸಂತೈಸಿಕೊಳ್ಳುವುದು ಮಾಡುತ್ತೀರಾ? ಜಗತ್ತಿನ ಮುಂದೆ ಸೋಗು ಹಾಕುತ್ತೀರಾ, ಅಂದರೆ, ಜಗತ್ತಿಗೊಂದು ಮುಖವನ್ನು ಬಳಸುತ್ತೀರಾ?
ಇಲ್ಲಿಯವರೆಗಿನ ಜೀವಿತಾವಧಿಯಲ್ಲಿ ನಿಮ್ಮ ಸಾಧನೆಯೇನು? ಯಾವ ಓದು, ಕೆಲಸ ನಿಮಗೆ ಅತೀವ ಆನಂದವನ್ನು ನೀಡುತ್ತದೆ? ಕಳೆದ 5 ವರ್ಷದ ಹಿಂದಿನ ನಿಮಗೂ, ಇಂದಿನ ನಿಮಗೂ ಏನಾದರೂ ವ್ಯತ್ಯಾಸವಿದೆಯೇ? ನಿಮ್ಮ ಹಳೆಯ ‘ನಿಮ್ಮನ್ನು’ ನೋಡಿ ನಿಮಗೆ ಏನನ್ನಿಸುತ್ತದೆ? ಯಾವ ಕೆಲಸವನ್ನು ತಕ್ಷಣ ಮಾಡುತ್ತೀರ? ಯಾವ ಕೆಲಸ ವನ್ನು ಮುಂದೂಡುತ್ತೀರ? ಮತ್ತು ಏಕೆ? ನಿಮ್ಮ ಬಗ್ಗೆ ನಿಮಗಿರುವ ಕಲ್ಪನೆಯೇನು? ನಿಮ್ಮಲ್ಲಿ ನಿಮಗೆ ತಿದ್ದಿಕೊಳ್ಳ ಬೇಕು ಅನ್ನಿಸಿದ ಗುಣ ಯಾವುದು? ನಿಮ್ಮಲ್ಲಿ ಉತ್ತಮ ಗುಣವೊಂದಿದೆ ಅನ್ನಿಸಿದ್ದರೆ ಅದ್ಯಾವುದು? ನಿಮ್ಮ ಉತ್ಸಾಹ, ದಕ್ಷತೆಯ ಮಟ್ಟವೇನು? ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಟ್ಟಿದ್ದೀರಾ? ನಿಮ್ಮಲ್ಲಿರುವ ಅತಿದೊಡ್ಡ ಭಯ ಯಾವುದು ಮತ್ತು ಏಕೆ? ಅದರಿಂದ ಹೊರಬರಲು ಪ್ರಯತ್ನ ಪಟ್ಟಿದ್ದೀರಾ? ನಿಮ್ಮ ಭಯವನ್ನು ಎದುರಿಸಿ ದ್ದೀರಾ? ಇಂದಿನ ನಿಮ್ಮ ಬದುಕು ನಿಮಗೆ ಸಂತೋಷವನ್ನು ನೀಡುತ್ತಿದೆಯೇ? ಬದುಕಿನ ಕೊನೆಯ ಘಟ್ಟದಲ್ಲಿ ನಿಮ್ಮನ್ನು ನೀವು ಹೇಗೆ ಕಾಣಲು ಇಷ್ಟಪಡುತ್ತೀರಿ? ಹೀಗೆ ಇನ್ನಷ್ಟು ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಬಹುದು. ಆದರೆ ಅತ್ಯಂತ ಮುಖ್ಯವಾಗಿ ಬೇಕಾಗುವ ಮಾಹಿತಿಯನ್ನು ಮೇಲಿನ ಪ್ರಶ್ನೆಗಳು ಕವರ್ ಮಾಡುತ್ತವೆ.
ಹೀಗಾಗಿ ಇವುಗಳಿಗೆ ಪ್ರಾಮಾಣಿಕವಾಗಿ ಉತ್ತರವನ್ನು ನೀಡಿಕೊಂಡು, ಅವುಗಳ ಮೌಲ್ಯಮಾಪನವನ್ನೂ ನೀವೇ ಮಾಡಿಕೊಳ್ಳಬೇಕಿದೆ. 20ರಲ್ಲಿ 10ಕ್ಕಿಂತ ಕಡಿಮೆ ಅಂಕ ಬಂದರೆ ತಕ್ಷಣ ಕಾರ್ಯತತ್ಪರರಾಗಿ. 15ಕ್ಕೂ ಹೆಚ್ಚು ಅಂಕ ಬಂದರೆ ನೀವು ಸರಿದಾರಿಯಲ್ಲಿದ್ದೀರಿ ಎಂದರ್ಥ.
15ಕ್ಕೂ ಮೇಲ್ಪಟ್ಟು 20 ಅಂಕ ಬಂದರೆ, ನಿಮ್ಮದು ಅತ್ಯುತ್ತಮ ಬದುಕು. ನೆನಪಿರಲಿ, ಪ್ರಾಮಾಣಿಕತೆ ಎನ್ನುವುದು ತೋರ್ಪ ಡಿಕೆಯ ವಸ್ತುವಲ್ಲ. ಮೇಲಿನ ಪ್ರಶ್ನೆಗಳಿಗೆ ಅತ್ಯಂತ ಪ್ರಾಮಾಣಿಕತೆಯಿಂದ ಉತ್ತರಿಸಿಕೊಳ್ಳಿ. ಈ ಉತ್ತರ
ಗಳನ್ನು ನೀವು ಯಾರಿಗೂ ಹೇಳುವ ಅವಶ್ಯಕತೆಯಿಲ್ಲ.
ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಪ್ರಾಮಾಣಿಕತೆಯಿರಲಿ. ನಾವು ಇನ್ನೊಂದು ವರ್ಷವನ್ನು ಕೂಡ ಕಳೆದು, ಹೊಸ ವರ್ಷವನ್ನು ಸ್ವಾಗತಿಸುವ ಹಂತಕ್ಕೆ ಬಂದು ನಿಂತಿದ್ದೇವೆ. ಈ ಸಮಯದಲ್ಲಿ ನಮ್ಮ ಕಳೆದ ದಿನಗಳ ಅವಲೋಕನ ಮಾಡಿಕೊಳ್ಳಬೇಕಾದ್ದು ಅಗತ್ಯ; ನಡೆಯುತ್ತಿರುವ ದಾರಿ ಸರಿಯಾಗಿದ್ದರೆ ಓಕೆ, ಇಲ್ಲವಾದಲ್ಲಿ ಅದಕ್ಕೆ ಬೇಕಾದ ಬದಲಾವಣೆ ಮಾಡಿಕೊಳ್ಳುವುದು, ಮುಂಬರುವ ವರ್ಷವನ್ನು ಇನ್ನಷ್ಟು ಸದ್ಬಳಕೆ ಮಾಡಿಕೊಳ್ಳುವುದು ಅವಶ್ಯವಾಗಿ ಮಾಡಬೇಕಾಗಿರುವ ಕೆಲಸ.
ಆ ನಿಟ್ಟಿನಲ್ಲಿ ಈ ಲೇಖನ ಒಂದು ಪ್ರತಿಶತ ನಿಮ್ಮ ಮನಸ್ಸನ್ನು ಪ್ರೇರೇಪಿಸಿದ್ದೇ ಆದರೆ, ಅದಕ್ಕಿಂತ ಸಾರ್ಥಕತೆ ಇನ್ನೊಂದಿಲ್ಲ.
ಇದನ್ನೂ ಓದಿ: Rangaswamy Mookanahalli Column