Tuesday, 19th November 2024

Rangaswamy Mookanahally column: ಸನ್ನದ್ಧವಾಗಿರುವುದು ನಮ್ಮ ಕೈಲಿದೆ !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಅಪಾಯವು ಬದುಕಿನ ಅವಿಭಾಜ್ಯ ಅಂಗ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಅಪಾಯವಿಲ್ಲದ ಯಾವುದೇ ಸಮಯ, ಕೆಲಸ ಈ ಭೂಮಿಯ ಮೇಲಿಲ್ಲ. ಭದ್ರತೆ, ಸ್ಥಿರತೆ ಎನ್ನುವುದು ಮಾನಸಿಕ ಸ್ಥಿತಿಗಳು, ಅದನ್ನು ನಾವು ಕಂಡುಕೊಳ್ಳಬೇಕು. ಬಾಹ್ಯ ಕಾರಣಗಳು ಅವನ್ನು ಪ್ರೋತ್ಸಾಹಿಸುವ ಮಟ್ಟಕ್ಕೆ ಬಿಡಬಾರದು. ಅಪಾಯವನ್ನು ಒಪ್ಪಿಕೊಂಡು ಅಪ್ಪಿಕೊಂಡು ಮುಂದುವರಿಯುವುದರಲ್ಲಿ ಜಾಣತನವಿದೆ.

ನಾವು ಮನೆ ಬಿಟ್ಟ ತಕ್ಷಣ, ಮನೆಯಲ್ಲಿ ಕುಳಿತಿದ್ದಾಗ, ಕೆಲಸದ ಜಾಗದಲ್ಲಿ, ಪ್ರಯಾಣದ ವೇಳೆ ಹೀಗೆ ಎಲ್ಲಾ ಕಡೆ ಎಲ್ಲಾ ಸಮಯದಲ್ಲೂ ಅಪಾಯ
ಇದ್ದೇ ಇರುತ್ತದೆ. ಅಪಾಯ ಎಂದು ಸುಮ್ಮನೆ ಕೂರುವುದಕ್ಕಿಂತ ದೊಡ್ಡ ಅಪಾಯ ಬೇರೇನಿದ್ದೀತು ಅಲ್ವಾ? ನೀವು ನಮ್ಮ ದೇಶದ ವ್ಯಾಪಾರಿ
ಸಮುದಾಯವನ್ನು ಗಮನಿಸಿ ನೋಡಿ. ಸಿಂಧಿಗಳು, ಮಾರ್ವಾಡಿಗಳು, ಗುಜರಾತಿಗಳು ತಮ್ಮ ನೆಲವನ್ನು ಬಿಟ್ಟು ಸಾವಿರಾರು ಮೈಲಿ ಪ್ರಯಾಣ ಮಾಡುತ್ತಾರೆ. ವಲಸೆ ಹೋಗುತ್ತಾರೆ. ಬೇರೆಡೆ ನೆಲೆಸುತ್ತಾರೆ.

ಅಲ್ಲಿನ ಭಾಷೆ , ರೀತಿ-ರಿವಾಜು ಕಲಿಯುತ್ತಾರೆ, ತಮ್ಮದನ್ನೂ ಉಳಿಸಿಕೊಂಡು ನಡೆಯುತ್ತಾರೆ. ದೂರದ ಅಮೆರಿಕದಲ್ಲಿ ಹೆಚ್ಚು ಓದಿರದ ಗುಜರಾತಿ
ಗಳಿಗೆ ಉತ್ತಮ ಕೆಲಸ ಸಿಕ್ಕುತ್ತಿರಲಿಲ್ಲ, ಹೀಗಾಗಿ ಅವರು ಹೋಟೆಲ್‌ನಲ್ಲಿ ಕೆಲಸ ಮಾಡಲು ಶುರು ಮಾಡಿದರು. ಇಂದಿಗೆ ಹೋಟೆಲ್ ಬಿಸಿನೆಸ್‌ನಲ್ಲಿ
ಅವರದ್ದೇ ಕಾರುಬಾರು. ವಜ್ರದ ವ್ಯಾಪಾರದಲ್ಲಿ ಕೂಡ ಇದೇ ಕಥೆ, ಸಣ್ಣ ಪುಟ್ಟ ಪುಡಿಯನ್ನು ಕೊಳ್ಳಲು ಶುರುಮಾಡಿದ ಗುಜರಾತಿಗಳು ಇಂದು
ಬೆಲ್ಜಿಯಂ ದೇಶವನ್ನು ಹಿಂದಿಕ್ಕಿ ವಜ್ರದ ವ್ಯಾಪಾರ ದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಓಮನ್ ದೇಶದಲ್ಲಿ ‘ಮೊದಲ ಹಿಂದೂ ಶೇಕ್’ ಎಂದು ಹೆಸರು ಪಡೆದುಕೊಂಡ ರಾಮ್ಜೀ ಕಥೆಯೂ ರೋಚಕವಾಗಿದೆ. ಇಂದು ನಾವು ಯಶಸ್ವಿ ಎಂದು ಯಾರನ್ನು ನೋಡಿದರೂ ಅವರೆ ಅಪಾಯವನ್ನು ಒಪ್ಪಿಕೊಂಡವರೇ; ಅಪಾಯದ ಬಗ್ಗೆ ಅವರ ಜಡ್ಜ್ ಮೆಂಟ್ ಸರಿಯಾಗಿತ್ತು ಅಷ್ಟೇ. ಉಳಿದವರ ಜಡ್ಜ್ ಮೆಂಟ್‌ನಲ್ಲಿ ವ್ಯತ್ಯಾಸವಾದ ಕಾರಣ ಅವರು ಯಶಸ್ವಿ ಅಥವಾ ಶ್ರೀಮಂತ ಎನ್ನಿಸಿಕೊಳ್ಳುವುದರಲ್ಲಿ ಎಡವಿರುತ್ತಾರೆ. ಮುಖ್ಯವಾಗಿ ನಾವು ಅಪಾಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಎಲ್ಲಕ್ಕೂ ಮುಖ್ಯ ವಾಗಿ ನಾವು ಯಾವುದೇ ವೆಂಚರ್ ತೆಗೆದುಕೊಂಡರೂ ಅದರಲ್ಲಿ ಒಂದಷ್ಟು ಅಪಾಯಗಳು ಇದ್ದೇ ಇರುತ್ತವೆ. ಅದ್ಯಾವುದು ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.

ಅಪಾಯ ಎಂದರೇನು ಗೊತ್ತಾ? ನಾವು ಮಾಡುವ ಯಾವುದೇ ಕೆಲಸದ ಫಲಿತಾಂಶ ಅಂದರೆ ‘ಔಟ್‌ಕಮ್’ ಮೇಲೆ ಯಾವುದೇ ಹಿಡಿತ ಇಲ್ಲದಿರು
ವುದು. ಲಾಭ ಅಥವಾ ನಷ್ಟ ಯಾವುದು ಉತ್ಪತ್ತಿ ಯಾಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಈಗ ಹೇಳಿ ನಾವೆಲ್ಲರೂ ಜೀವಿಸುತ್ತಿರುವುದೇ ಅಪಾಯದಲ್ಲಿ ಅಲ್ವಾ? ಹೀಗಾಗಿ ಅಪಾಯಕ್ಕೆ ಹೆದರುವ ಅವಶ್ಯಕತೆಯಿಲ್ಲ. ಅದರ ಬಗ್ಗೆ ಹೆಚ್ಚು ಮಾಹಿತಿ ಯನ್ನು ತಿಳಿದುಕೊಂಡು ಸನ್ನದ್ಧರಾಗಬೇಕು.

ಬೇಸಿಕ್ ರಿಸ್ಕ್: ನಾವ್ಯಾರೇ ಆಗಿರಲಿ ಮೂಲಭೂತ ಅಪಾಯ ಅಥವಾ ಬೇಸಿಕ್ ರಿಸ್ಕ್ ಇದ್ದೇ ಇರುತ್ತದೆ. ಇದರಿಂದ ದೂರವಾಗಲು ಸಾಧ್ಯವಿಲ್ಲ.
ಉದಾಹರಣೆಗೆ ಅನಿರೀಕ್ಷಿತ ಅಪಘಾತಗಳು, ಸಾವು, ನೈಸರ್ಗಿಕ ವಿಕೋಪಗಳು. ನಾವು ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳದೆ ಸುಮ್ಮನೆ
ಕುಳಿತಿದ್ದರೂ ತಲೆಯ ಮೇಲೆ ಸುತ್ತುವ ಫ್ಯಾನ್ ಮುರಿದುಬೀಳುವ ಸಾಧ್ಯತೆಯನ್ನು ಅಲ್ಲಗಳೆಯಲು ಬರುವುದಿಲ್ಲ.

ವ್ಯಾಪಾರದಲ್ಲಿರಲಿ, ವೇತನಕ್ಕೆ ದುಡಿಯುವ ಕೆಲಸಗಾರನಾಗಿರಲಿ, ಮಗುವಾಗಿರಲಿ, ಹೆಣ್ಣಾಗಿರಲಿ ಅಥವಾ ಗಂಡಾಗಿರಲಿ, ಕೆಲವೊಂದು ಅಪಾಯಗಳು ಎಲ್ಲರಿಗೂ ಅನ್ವಯವಾಗುತ್ತವೆ.

ಫೈನಾನ್ಷಿಯಲ್ ರಿಸ್ಕ್: ಇದರಲ್ಲಿ ಎರಡು ವಿಧ- ಸಿಸ್ಟಮ್ಯಾಟಿಕ್ ಮತ್ತು ಅನ್-ಸಿಸ್ಟಮ್ಯಾಟಿಕ್. ಹಣ ಕಾಸು ಅಪಾಯ ಅಥವಾ ಫೈನಾನ್ಷಿಯಲ್ ರಿಸ್ಕ್ ಎನ್ನುವುದು ಕೂಡ ಜೀವನದ ಭಾಗ. ಅಪಾಯ ಬೇಡ ಎಂದು ಬ್ಯಾಂಕಿನಲ್ಲಿಟ್ಟ ಹಣಕ್ಕೂ ಇಂದು ಗ್ಯಾರಂಟಿಯಿಲ್ಲ. ಬ್ಯಾಂಕ್ ಮುಳುಗಿದರೆ ನಮಗೆ ಸಿಗುವುದು ಐದು ಲಕ್ಷದ ವಿಮೆ ಮಾತ್ರ. ಅಲ್ಲಿಗೆ ನಾವಿಟ್ಟಿರುವ ಹೆಚ್ಚುವರಿ ಹಣ ಅಪಾಯದಲ್ಲಿದೆ ಎಂದೇ ಅರ್ಥ. ಸಿಸ್ಟಮ್ಯಾಟಿಕ್ ರಿಸ್ಕ್ ಎಂದರೆ ಸಮಾಜದಲ್ಲಿ ಒಟ್ಟಾರೆ ಕುಸಿತ ಅಥವಾ ಬಿಕ್ಕಟ್ಟು ಉಂಟಾಗುವುದು ಎಂದರ್ಥ. ಅನ್- ಸಿಸ್ಟಮ್ಯಾಟಿಕ್ ರಿಸ್ಕ್ ಎಂದರೆ ಸಮಾಜದ ಇತರ
ವಲಯಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಣೆ ಆಗುತ್ತಿದ್ದು ನಾವು ಹೂಡಿಕೆ ಮಾಡಿದ ವಲಯದಲ್ಲಿ ಮಾತ್ರ ಅಪಾಯ ಎದು
ರಾಗಿರುತ್ತದೆ ಎಂದರ್ಥ. ಯಾವುದೇ ವ್ಯಾಪಾರ ಶುರುಮಾಡಿದರೂ ಈ ರಿಸ್ಕ್ ಇದ್ದೇ ಇರುತ್ತದೆ. ರಿಸ್ಕ್ ಅನಾಲಿಸಿಸ್ ಬಹಳ ಮುಖ್ಯವಾಗುತ್ತದೆ. ನಮ್ಮ ಬಳಿ ಎಷ್ಟು ಹಣವಿದೆ, ಎಷ್ಟು ಅಪಾಯವನ್ನು ಎದುರಿಸುವ ಕ್ಷಮತೆಯಿದೆ ಎನ್ನುವುದು ಒಂದು ಹಂತವಾದರೆ, ಎಲ್ಲಿಯವರೆಗೆ ನಾವು ಅಪಾಯ ವನ್ನು ಸ್ವೀಕರಿಸಲು ಸಿದ್ಧ ಎನ್ನುವುದು ಇನ್ನೊಂದು ಹಂತವಾಗುತ್ತದೆ. ಅಪಾಯ ತಡೆದುಕೊಳ್ಳುವ ಶಕ್ತಿ ಬೇರೆ ಮನಸ್ಥಿತಿ ಬೇರೆ, ಇದನ್ನು ಅರ್ಥ ಮಾಡಿಕೊಳ್ಳಬೇಕು.

ಸಿನೆಸ್ ರಿಸ್ಕ್: ಹಣಕಾಸು ಅಥವಾ ಫೈನಾನ್ಷಿಯಲ್ ರಿಸ್ಕ್ ನಂತರದ ದೊಡ್ಡ ರಿಸ್ಕ್ ಬಿಸಿನೆಸ್ ರಿಸ್ಕ್. ವ್ಯಾಪಾರ ಎಂದರೆ ಕೇವಲ ಹಣಕಾಸು
ಹೊಂದಿಸುವುದು ಮಾತ್ರವಲ್ಲ. ಅದರ ಜತೆಗೆ ವ್ಯಾಪಾರವನ್ನು ನಡೆಸಲು ಹಲವು ಹತ್ತು ಆಯಾ ಮಗಳಲ್ಲಿ ಪರಿಣತಿ ಬೇಕಾಗುತ್ತದೆ. ಹೋಟೆಲ್ ಉದ್ಯಮವನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಿ. ಬಂಡವಾಳ ಹಾಕಿ ಹೋಟೆಲ್ ತೆರೆಯುವುದು ಬಹಳ ಸುಲಭದ ಕೆಲಸ. ಆದರೆ ಅದನ್ನು
ಲಾಭದಾಯಕವಾಗಿ ನಡೆಸುವುದು ಕಷ್ಟದ ಕೆಲಸ. ಏಕೆಂದರೆ ಮೊದಲಿಗೆ ಇಲ್ಲಿ ಬೇಕಾಗುವ ಕೆಲಸ ಗಾರರ ಕೊರತೆ, ಕೆಲಸಗಾರರು ಸಿಕ್ಕರೂ ಅವರಲ್ಲಿ ಕ್ಷಮತೆ ಇರಬೇಕಾದದ್ದು, ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ವರ್ಷಾನುಗಟ್ಟಲೆ ಅದೇ ಶುಚಿ-ರುಚಿ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಇದೇ ರೀತಿ ಯಾವುದೇ ವ್ಯಾಪಾರವಾದರೂ ಅದರಲ್ಲಿ ಒಂದಷ್ಟು ಸವಾಲುಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಅವುಗಳನ್ನು ಎದುರಿಸಿ ಗೆದ್ದ ವನು ಮಾತ್ರ ಶ್ರೀಮಂತನಾಗಲು ಸಾಧ್ಯ.

ಕ್ರೆಡಿಟ್ ರಿಸ್ಕ್: ವ್ಯಾಪಾರ ಅಂದಮೇಲೆ ಅದಕ್ಕೆ ಬಂಡವಾಳ ಬೇಕು. ವ್ಯಾಪಾರ ಮಾತ್ರವೇ ಅಲ್ಲ, ಇಂದಿನ ಜಗತ್ತಿನಲ್ಲಿ ಎಲ್ಲದಕ್ಕೂ ಹಣ ಬೇಕು. ಸ್ವಂತ ಹಣವಿದ್ದರೆ ಪರವಾಗಿಲ್ಲ, ಇಲ್ಲದಿದ್ದ ಪಕ್ಷದಲ್ಲಿ ಬಂಡವಾಳವನ್ನು ಹೂಡಿಕೆದಾರರಿಂದ ತಂದಿರುತ್ತೇವೆ. ಅವರಿಗೆ ತಿಂಗಳಿಗೆ ಅಥವಾ ವರ್ಷಕ್ಕೆ ಹಣ ವನ್ನು ಬಡ್ಡಿಯ ರೂಪದಲ್ಲಿ ನೀಡಬೇಕಾಗುತ್ತದೆ. ಬ್ಯಾಂಕ್ ಮೂಲಕ ತಂದ ಹಣಕ್ಕೂ ಬಡ್ಡಿ ನೀಡಬೇಕಾಗುತ್ತದೆ. ಈ ರೀತಿ ಬಡ್ಡಿ ಮತ್ತು ಅಸಲು ತೀರಿಸುವಲ್ಲಿ ವಿಫಲರಾಗುವ ಅಪಾಯವನ್ನು ಕ್ರೆಡಿಟ್ ರಿಸ್ಕ್ ಎನ್ನಲಾಗುತ್ತದೆ. ಇದು ಕೂಡ ಸಾಮಾನ್ಯ. ಹೂಡಿಕೆಗೆ ಮುನ್ನ ಇದನ್ನು ಕೂಡ ಅವಲೋಕಿಸುವ ಅವಶ್ಯಕತೆಯಿದೆ.

ದೇಶಗಳಲ್ಲಿ ಆಗುವ ಅಪಾಯ: ಇಸ್ರೇಲ್ -ಗಾಜಾ ಯುದ್ಧವಿರಬಹುದು ಅಥವಾ ಉಕ್ರೇನ್ -ರಷ್ಯಾ ಯುದ್ಧವಿರಬಹುದು, ಆ ದೇಶಗಳಲ್ಲಿ ಹೂಡಿಕೆ ಮಾಡಿರುವ ಸಂಸ್ಥೆಗಳ ಗತಿಯೇನು? ವರ್ಷಾನುಗಟ್ಟಲೆ ಗಳಿಸಿದ್ದ ಆದಾಯವೆ ಒಂದೆರಡು ತಿಂಗಳಲ್ಲಿ ಕರಗಿಹೋಗುತ್ತದೆ. ದೇಶದ ಆಂತರಿಕ ಬದಲಾವಣೆಗಳು ಕೂಡ ಈ ನಿಟ್ಟಿನಲ್ಲಿ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳು ಹೇರಳವಾಗಿರುತ್ತವೆ. ಯುದ್ಧ ಎನ್ನುವುದು ಕೊನೆಯ ಪರಿಣಾಮ. ಅದನ್ನು ಮೀರಿ ಕೂಡ ಸರಕಾರಗಳು ಮಾಡುವ ಸಣ್ಣಪುಟ್ಟ ಬದಲಾವಣೆಗಳು ದೊಡ್ಡ ಮಟ್ಟದ ಅಪಾಯವನ್ನು ತರಬಲ್ಲವು.
ಇದರ ಬಗ್ಗೆ ಮಾಹಿತಿ ಇರಬೇಕು.

ವಿದೇಶಿ ವಿನಿಮಯದಲ್ಲಿನ ಬದಲಾವಣೆ ಅಪಾಯ: ಇಂಪೋರ್ಟ್-ಎಕ್ಸ್‌ಪೋರ್ಟ್ ವ್ಯಾಪಾರದಲ್ಲಿ ತೊಡಗಿರುವ ಸಂಸ್ಥೆಗಳ ಮೇಲೆ, ವಿನಿಮಯ ದರದಲ್ಲಿ ಆಗುವ ಬದಲಾವಣೆ ನೇರ ವಾಗಿ ಪರಿಣಾಮವನ್ನು ಬೀರುತ್ತದೆ. ಉಳಿದಂತೆ ಕೂಡ ಪರೋಕ್ಷವಾಗಿ ಪರಿಣಾಮಗಳು ಇದ್ದೇ ಇರುತ್ತವೆ.

ಇಂಟರೆಸ್ಟ್ ರೇಟ್ ರಿಸ್ಕ್: ಬಡ್ಡಿ ದರದಲ್ಲಿ ಆಗುವ ಬದಲಾವಣೆಗಳು ಸಂಸ್ಥೆಯ ಅಳಿವು-ಉಳಿವನ್ನು ನಿರ್ಧರಿಸುವ ಮಟ್ಟದಲ್ಲಿರುತ್ತವೆ. ‘ಡೆಟ್’
ಚೀಪ್ ಇದ್ದಾಗ ತೆಗೆದುಕೊಂಡ ನಿರ್ಧಾರಗಳು ‘ಡೆಟ್ ರೇಟ್’ ಏರುತ್ತ ಹೋದಂತೆ ಮುಳುವಾಗ ಬಲ್ಲವು. ಹೀಗಾಗಿ ಬಡ್ಡಿ ದರ ಕಡಿಮೆಯಿದೆ ಎಂದು
ಆತುರದಲ್ಲಿ ಕೆಲಸಕ್ಕೆ ಕೈ ಹಾಕುವ ಮೊದಲು ಮುಂದಾಗುವ ಬದಲಾವಣೆಗಳನ್ನು ಕೂಡ ಗಮನಿಸಬೇಕು.

ಪೊಲಿಟಿಕಲ್ ರಿಸ್ಕ್: ರಾಜಕೀಯ ಸ್ಥಿರತೆಯು ದೇಶದ ಆಮೂಲಾಗ್ರ ಬದಲಾವಣೆಗೆ, ಅಭಿವೃದ್ಧಿಗೆ ಕಾರಣವಾಗುತ್ತದೆ. ಯಾವ ದೇಶದಲ್ಲಿ ರಾಜಕೀಯ ಸ್ಥಿರತೆ ಇರುವುದಿಲ್ಲವೋ ಅ ಅರಾಜಕತೆ ತಾಂಡವವಾಡುತ್ತದೆ. ಉದಾಹರಣೆಗೆ ದೂರ ಹೋಗುವುದು ಬೇಡ, ಪಕ್ಕದ ಪಾಕಿಸ್ತಾನ ವನ್ನು ಒಮ್ಮೆ ನೋಡಿ ಸಾಕು. ಆ ದೇಶ ದಿವಾಳಿಯ ಅಂಚಿಗೆ ಬಂದು ನಿಂತಿರುವುದು ರಾಜಕೀಯ ಅಸ್ಥಿರತೆಯ ಕಾರಣದಿಂದ. ಎಲ್ಲಿ ವ್ಯಾಪಾರ ಮಾಡುತ್ತಿದ್ದೇವೆ ಎನ್ನುವುದರ ಆಧಾರದ ಮೇಲೆ ಮತ್ತು ಅಲ್ಲಿನ ರಾಜಕೀಯ ಪರಿಸ್ಥಿಗಳ ಮೇಲೆ ನಿಗಾ ಇರಬೇಕು.

ಲಿಕ್ವಿಡಿಟಿ ರಿಸ್ಕ್: ವ್ಯಾಪಾರ ಅಂದ ಮೇಲೆ ಡಿಮಾಂಡ್ ಹೆಚ್ಚಾದ ಸಮಯದಲ್ಲಿ ಅಥವಾ ಹೆಚ್ಚಾಗುತ್ತದೆ ಎನ್ನುವ ಆಶಾಭಾವದಲ್ಲಿ ಹೆಚ್ಚು
ಪದಾರ್ಥವನ್ನು ತಯಾರಿಸುವುದು ಸಹಜ. ಅನೇಕ ಕಾರಣಗಳಿಂದ ಹೆಚ್ಚಿನ ಪದಾರ್ಥ ವ್ಯಾಪಾರವಾಗದೆ ಉಳಿದರೆ ಅದು ಇನ್ವೆಂಟರಿ, ಸ್ಟಾಕ್ ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ಲಾಭವೆಲ್ಲ, ಇನ್ವೆಂಟರಿಯಲ್ಲಿ ಮತ್ತು ‘ಡೆಟಾರ್ಸ್’ ರೂಪದಲ್ಲಿ ಕುಳಿತಿರುತ್ತದೆ. ಪರಿಣಾಮವಾಗಿ, ಅವಶ್ಯಕವಾಗಿ ಬೇಕಾಗುವ ಖರ್ಚುಗಳಿಗೆ ಹಣ ಇರುವುದಿಲ್ಲ. ಇದಕ್ಕೆ ಲಿಕ್ವಿಡಿಟಿ ರಿಸ್ಕ್ ಎನ್ನಲಾಗುತ್ತದೆ. ಇದು ಕೂಡ ಸಂಸ್ಥೆಯ ಅಳಿವು-ಉಳಿವುಗಳನ್ನು ನಿರ್ಧರಿಸುತ್ತದೆ.

ಮಾಡೆಲ್ ರಿಸ್ಕ್: ನಮ್ಮ ವ್ಯಾಪಾರದ ಮಾದರಿಯಲ್ಲಿ ಅಪಾಯ ಎದುರಾಗುವ ಸಾಧ್ಯತೆ ಕೂಡ ಇರುತ್ತದೆ. ಉದಾಹರಣೆಗೆ ರಾಮೇಶ್ವರಂ ಎನ್ನುವ
ಹೋಟೆಲ್ ನೋಡಿ. ಅದು ಪ್ರಸಿದ್ಧವಾದ ಮರು ಗಳಿಗೆ ಅದೇ ಮಾಡೆಲ್ ಬಳಸಿಕೊಂಡು ಹತ್ತಾರು ಹೋಟೆಲ್‌ಗಳು ತಲೆ ಎತ್ತಿವೆ. ಇಂಥ ಸಮಯ ದಲ್ಲಿ ವ್ಯಾಪಾರದಲ್ಲಿ ಪೈಪೋಟಿ ಹೆಚ್ಚಾಗುತ್ತದೆ. ನಿಧಾನ ವಾಗಿ ಹಿಂದಿನ ಪ್ರಸಿದ್ಧಿ ಕಡಿಮೆಯಾಗುತ್ತ ಹೋಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ‘ಇದೊಂದು ಓವರ್ ರೇಟೆಡ್ ಹೋಟೆಲ್’ ಎನ್ನಲು ಶುರುಮಾಡಿದ್ದಾರೆ.

ರಾಮೇಶ್ವರಂ ಒಂದು ಉದಾಹರಣೆ ಮಾತ್ರ. ಭಾರತದಲ್ಲಿ ನಕಲು ಮಾಡುವವರ ಸಂಖ್ಯೆ ಬಹಳ ಹೆಚ್ಚು. ಅಲ್ಲದೆ ಒರಿಜಿನಲ್ ಅನ್ನು ಮೀರಿಸುವ ಮಟ್ಟಿಗೆ ಇಂಪ್ರೊ ವೈಸ್ ಮಾಡಿಕೊಂಡು ನಕಲು ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ನಮ್ಮ ಮಾಡೆಲ್ ಅನ್ನು ಮತ್ತೊಬ್ಬರು ನಕಲು ಮಾಡಲಾಗದಂತೆ ಕೊನೇಪಕ್ಷ ಒಂದಷ್ಟು ವಿಶಿಷ್ಟ ಅಂಶಗಳಾದರೂ ಇರಬೇಕು.

ರೆಪ್ಯೂಟೇಷನ್ ರಿಸ್ಕ್: ಭಾರತದಂಥ ಭಾವುಕ ದೇಶದಲ್ಲಿ ಇದು ಎಲ್ಲಕ್ಕಿಂತ ದೊಡ್ಡ ಅಪಾಯ. ಗೆದ್ದಾಗ ಎಲ್ಲರೂ ನಮ್ಮವರೇ, ಸೋತಾಗ ನೀನ್ಯಾರು ಎನ್ನುವುದು ಇಲ್ಲಿನ ಸಂಪ್ರದಾಯ. ಹೀಗಾಗಿ ಸೋಲಿನ ಭಯ, ಜನ ಏನೆಂದುಕೊಂಡಾರು? ಎನ್ನುವ ಭಯ, ಅದರಿಂದ ಉಂಟಾಗುವ
ಅಪಾಯಗಳು ಕೂಡ ಸಿರಿವಂತಿಕೆಯ ದಾರಿಯಲ್ಲಿ ದೊಡ್ಡ ಅಡಚಣೆ.

ಇನ್ನಿತರೆ ಅಪಾಯಗಳು: ಮೊದಲೇ ಹೇಳಿದಂತೆ ಅಪಾಯ ಯಾವ ರೂಪದಲ್ಲಿ, ಯಾವ ಸಮಯ ದಲ್ಲಿ ಬರುತ್ತದೆ ಹೇಳಲು ಬಾರದು. ಅಗ್ನಿ
ಅವಘಡ, ಅತ್ಯುತ್ತಮ ನೌಕರನ ಸಾವು ಅಥವಾ ಅಪಘಾತ, ಹೊಸ ಬದಲಾವಣೆಗೆ ಸಿದ್ಧರಿಲ್ಲದ ಸಿಬ್ಬಂದಿ ಹೀಗೆ ಏನು ಬೇಕಾದರೂ ಆಗಬಹುದು.
ಈ ಪಟ್ಟಿ ಅಪೂರ್ಣ. ಯಾವುದು ಬೇಕಾದರೂ ಈ ಪಟ್ಟಿಯನ್ನು ಸೇರಬಹುದು. ಮೇಲೆ ಹೇಳಿದ ಅಪಾಯಗಳಲ್ಲಿ ಎಲ್ಲವೂ ನಮಗೆ ಅನ್ವಯವಾಗ ಬೇಕು ಎಂದಿಲ್ಲ. ನಮ್ಮ ನಮ್ಮ ಸನ್ನಿವೇಶಕ್ಕೆ ತಕ್ಕಂತೆ ಇದು ನಮ್ಮದಾಗುತ್ತಾ ಹೋಗುತ್ತದೆ. ಆದರೆ ಇವುಗಳ ಜ್ಞಾನ ನಮಗಿರಬೇಕು. ‘ನನಗೇನಾಗುತ್ತದೆ? ಇದು ನನಗೆ ತಟ್ಟುವುದಿಲ್ಲ’ ಎನ್ನುವ ಕಾಲಘಟ್ಟದಲ್ಲಿ ನಾವಿಲ್ಲ. ಇಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಸನ್ನದ್ಧವಾಗಿರುವುದೊಂದೇ ನಮ್ಮ ಕೈಲಿರುವುದು. ಉಳಿದೆ ಅಂಶಗಳು ನಮ್ಮ ನಿಯಂತ್ರಣದಲ್ಲಿ ಇಲ್ಲ.

ಇದನ್ನೂ ಓದಿ: Rangaswamy Mookanahalli Column