Wednesday, 23rd October 2024

Ranjith H Ashwath Column: ಅತಿಯಾದ ಆತ್ಮವಿಶ್ವಾಸ ಕಂಟಕವಾದೀತು !

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ranjith.hoskere@gmail.com

ಅತಿಯಾದ ಆತ್ಮವಿಶ್ವಾಸದಿಂದಾಗಿ ಕಾಂಗ್ರೆಸ್‌ನ ಕೈತಪ್ಪಿದ ರಾಜ್ಯಗಳಲ್ಲಿ ಹರಿಯಾಣವೇ ಮೊದಲನೆ ಯದಲ್ಲ. ಕಳೆದ ವರ್ಷದ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಪಂಜಾಬ್ ಮತ್ತು ಗುಜರಾತ್‌ನಲ್ಲಿ ಕ್ಲೀನ್ ಸ್ವೀಪ್ ಆಗಿದ್ದರ ಹಿಂದೆಯೂ ಇದೇ ತಪ್ಪು ಹೆಜ್ಜೆಗಳಿದ್ದವು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಹಬ್ಬದಲ್ಲಿ ಗೆಲುವು ಸೋಲಿಗೆ ಕಾರಣಗಳು ನೂರಾರಿರುತ್ತವೆ. ಆದರೆ ಅಂತಿಮ ಫಲಿತಾಂಶವನ್ನು ಹಿಡಿದು ಅಧಿಕಾರದ ಗದ್ದುಗೆ ಏರುವುದಕ್ಕೆ ಮಾತ್ರ ಒಂದೇ ಮಾನದಂಡ.

ಅದುವೇ ‘ಸಂಖ್ಯಾಬಲ’. ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ತಲೆ ಎಣಿಕೆಯ ಮೇಲೆಯೇ ಮುಂದಿನ 5 ವರ್ಷ ರಾಜ್ಯ, ಕೇಂದ್ರವನ್ನು ಯಾರು ನಡೆಸಬೇಕು ಎನ್ನುವುದು ತೀರ್ಮಾನವಾಗುತ್ತದೆ. ಭಾರತದ ಚುನಾವಣಾ ಪದ್ಧತಿ ಯಲ್ಲಿ ಶೇಕಡಾವಾರು ಮತಕ್ಕಿಂತ, ಜನಪ್ರತಿನಿಧಿಗಳ ತಲೆ ಎಣಿಕೆಗೆ ಹೆಚ್ಚಿನ ಮಹತ್ವ. ಒಂದೇ ಕ್ಷೇತ್ರದಲ್ಲಿ 4 ಲಕ್ಷ ಮತಗಳ ಅಂತರದಿಂದ ಗೆಲ್ಲುವುದಕ್ಕಿಂತ 4 ಕ್ಷೇತ್ರದಲ್ಲಿ 4 ಮತಗಳ ಅಂತರದಿಂದ ಗೆದ್ದರೂ ಸಾಕೆನ್ನುವ ಮನಸ್ಥಿತಿ ಯಲ್ಲಿ ಎಲ್ಲ ಪಕ್ಷಗಳಿರುತ್ತವೆ. ಚುನಾವಣೆಯಲ್ಲಿ ಲಕ್ಷ ಅಂತರದಿಂದ ಗೆಲುವು ಸಾಧಿಸಿದ್ದರೂ ಅಷ್ಟೇ, ಒಂದೇ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದರೂ ಅಷ್ಟೇ.

ಈ ಕಾರಣಕ್ಕಾಗಿಯೇ ಅದೆಷ್ಟೋ ಬಾರಿ ಶೇಕಡಾವಾರು ಮತಗಳನ್ನು ಒಂದು ಪಕ್ಷ ಹೆಚ್ಚುವರಿ ಪಡೆದಿದ್ದರೂ, ಅಧಿಕಾರದ ಗದ್ದುಗೆ ಏರುವುದಕ್ಕೆ ಸಾಧ್ಯವಾಗಿರುವುದಿಲ್ಲ. ಇತ್ತೀಚೆಗೆ ನಡೆದ ಜಮ್ಮು-ಕಾಶ್ಮೀರ ಚುನಾವಣೆ ಇದಕ್ಕೆ
ಉತ್ತಮ ಉದಾಹರಣೆ. ಜಮ್ಮು-ಕಾಶ್ಮೀರದಲ್ಲಿ ಅತ್ಯಧಿಕ ಸ್ಥಾನವನ್ನು ನ್ಯಾಷನಲ್ ಕಾನರೆನ್ಸ್ ಪಕ್ಷ ಗಳಿಸಿದ್ದರೂ, ಮತ
ಗಳಿಕೆ ವಿಷಯದಲ್ಲಿ ಹಿಂದಿದೆ. ಬಿಜೆಪಿ ಶೇ.25.64ರಷ್ಟು ಮತ ಗಳಿಸಿದ್ದರೆ, ಎನ್‌ಸಿ ಶೇ.23.43ರಷ್ಟು ಮತ ಗಳಿಸಲಷ್ಟೇ
ಸಾಧ್ಯವಾಗಿದೆ. ಇತರರು ಮತ್ತು ಪಕ್ಷೇತರರ ಮತಗಳಿಕೆಯೂ (ಶೇ.24.83) ನ್ಯಾಷನಲ್ ಕಾನರೆನ್ಸ್‌ಗಿಂತ ಅಧಿಕ ವಾಗಿದೆ. ಆದರೂ ಅಧಿಕಾರದ ಗದ್ದುಗೆ ಏರಿದ್ದು ಮಾತ್ರ ನ್ಯಾಷನಲ್ ಕಾನ್ಫರೆನ್ಸ್!

ಆದರೆ ಈ ಮತಗಳಿಕೆಯ ಬಗ್ಗೆ ಚರ್ಚಿಸುವುದಕ್ಕಿಂತ ಮೊದಲು ‘ಅತಿಯಾದ ಆತ್ಮವಿಶ್ವಾಸ’ದಿಂದ ಹರಿಯಾಣದಲ್ಲಿ
ಕೈಗೆ ಬಂದ ತುತ್ತನ್ನು ಕಾಂಗ್ರೆಸ್ ಯಾವ ರೀತಿಯಲ್ಲಿ ಕಳೆದುಕೊಂಡಿದೆ ಎನ್ನುವ ಬಗ್ಗೆ ಪ್ರಸ್ತಾಪಿಸಬೇಕಿದೆ. ಕಳೆದ
ಮಂಗಳವಾರ, ರಾಜಕೀಯ ಅಸ್ತಿತ್ವದ ಕಾರಣಕ್ಕೆ ತೀವ್ರ ಕುತೂಹಲ ಮೂಡಿಸಿದ್ದ ಜಮ್ಮು-ಕಾಶ್ಮೀರ ಹಾಗೂ
ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗಿವೆ. ಜಮ್ಮು-ಕಾಶ್ಮೀರದಲ್ಲಿ ನಿರೀಕ್ಷೆಯಂತೆ
ನ್ಯಾಷನಲ್ ಕಾನರೆನ್ಸ್ ಹಾಗೂ ಕಾಂಗ್ರೆಸ್ ಅಧಿಕಾರದ ಗದ್ದುಗೆಯನ್ನು ಹಿಡಿದವು. ಆದರೆ ಹರಿಯಾಣದ ವಿಷಯ ದಲ್ಲಿ ಬಹುತೇಕ ಸಮೀಕ್ಷೆಗಳಲ್ಲಿ ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್, ಫಲಿತಾಂಶದ ವೇಳೆ ರಾಜ್ಯದಲ್ಲಿ ನೆಲ ಕಚ್ಚಿತ್ತು. ಚುನಾವಣಾ ದಿನದ ಆರಂಭಿಕ ಮತ ಎಣಿಕೆ ವೇಳೆ ಭಾರಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್, ಮತ ಎಣಿಕೆ ಆರಂಭಗೊಂಡ ಎರಡೇ ಗಂಟೆಗೆ 25ರ ಆಸುಪಾಸಿಗೆ ಕುಸಿದಿತ್ತು.

ಕುಸಿತದಿಂದ ಮೇಲೇಳಲು ಭಾರಿ ಪ್ರಯುತ್ನಪಟ್ಟರೂ, ಅದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ
ಮೂರನೇ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಹಿಡಿಯುವಲ್ಲಿ ಯಶ ಕಂಡಿತು. ಹರಿಯಾಣದಲ್ಲಿ ಚುನಾವಣಾ ದಿನಾಂಕದ ಘೋಷಣೆಯ ದಿನದಿಂದಲೂ ‘ಗೆಲ್ಲುವ ನೆಚ್ಚಿನ ಕುದುರೆ’ಯಾಗಿ ಕಾಂಗ್ರೆಸ್ ಕಾಣಿಸಿತ್ತು. ಸತತ 2 ಬಾರಿ ಆಡಳಿತ ನಡೆಸಿದ್ದ ಬಿಜೆಪಿಯು, ಆಡಳಿತ ವಿರೋಧಿಅಲೆ, ರೈತರು, ಜಾಟ್ ಸಮುದಾಯದ ವಿರೋಧ ದಿಂದಾಗಿ ಈ ಬಾರಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎನ್ನುವ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಈ ಹಂತದಲ್ಲಿ ಕಾಂಗ್ರೆಸ್ ನಾಯಕರು, ಮೈತ್ರಿಪಕ್ಷಗಳೊಂದಿಗೆ ಚುನಾವಣೆಗೆ ಹೋಗಿ ಮೈತ್ರಿ ಸರಕಾರ ನಡೆಸುವುದಕ್ಕಿಂತ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆ ಏರಬಹುದು ಎನ್ನುವ ಲೆಕ್ಕಾಚಾರಕ್ಕೆ ಮುಂದಾಗಿದ್ದರು.

ಆದ್ದರಿಂದ ಆಮ್ ಆದ್ಮಿ ಪಕ್ಷ ಕೇಳಿದ 10 ಸೀಟಿನ ಬದಲಿಗೆ 5 ಸೀಟು ನೀಡುವುದಾಗಿ ಹೇಳಲಾಗಿತ್ತು. ಇದಕ್ಕೆ ಮುನಿಸಿ ಕೊಂಡ ‘ಆಪ್’ ಸ್ವಂತಬಲದ ಮೇಲೆ ಚುನಾವಣೆ ಎದುರಿಸಲು ಮುಂದಾಗಿತ್ತು. ಇದರೊಂದಿಗೆ ಹರಿಯಾಣ
ಕಾಂಗ್ರೆಸ್‌ ನಲ್ಲಿನ ‘ಬಣ’ ರಾಜಕೀಯದ ಬಡಿದಾಟ, ಅವರು ಹೋದಕಡೆ ನಾವು ಹೋಗುವುದಿಲ್ಲ ಎನ್ನುವ ಸಂಘರ್ಷದ ಫಲವಾಗಿ ಗೆಲುವಿನ ಸನಿಹಕ್ಕೆ ಬಂದು ಕಾಂಗ್ರೆಸ್ ವಾಪಸು ಹೋಗಬೇಕಾಯಿತು ಎನ್ನುವ ಮಾತುಗಳಿವೆ. ಆದರೆ ಈ ಸೋಲಿನ ಅಂತರವನ್ನು ಗಮನಿಸಿದರೆ, ಆಪ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ ಬಣ ಬಡಿದಾಟದ ನಡುವೆಯೂ ಬಿಜೆಪಿಯ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಬಹುದಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.

ಏಕೆಂದರೆ, ಈ ಬಾರಿ ಹರಿಯಾಣದಲ್ಲಿ ಶೇ..80 ಮತಗಳ ಅಂತರದಲ್ಲಿ ಕಾಂಗ್ರೆಸ್ ಹಲವು ಕ್ಷೇತ್ರಗಳನ್ನು ಬಿಟ್ಟುಕೊ ಟ್ಟಿದೆ. ಆಡಳಿತ ವಿರೋಧಿ ಅಲೆ ನಡುವೆಯೂ ಬಿಜೆಪಿ ಶೇ.39.89 ಮತಗಳೊಂದಿಗೆ 48 ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದರೆ, ಕಾಂಗ್ರೆಸ್ ಶೇ.39.08ರಷ್ಟು ಮತಗಳನ್ನು ಪಡೆದುಕೊಂಡಿದೆ. ಅಂದರೆ ಮತಗಳಿಕೆಯ ಅಂತರ ಕೇವಲ ಶೇ.0.80 ಮಾತ್ರ. ಆದರೆ ಹರಿಯಾಣದಲ್ಲಿ ಆಮ್ ಆದ್ಮಿ ಪಕ್ಷ ಪಡೆದಿರುವ ಮತ ಶೇ.1.79ರಷ್ಟು. ಒಂದು ವೇಳೆ ಕಾಂಗ್ರೆಸ್ ಹಾಗೂ ಆಪ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ್ದರೆ, ಒಟ್ಟು ಮತಗಳಿಕೆಯ ಪ್ರಮಾಣ ಶೇ.40.87ರಷ್ಟಿರುತ್ತಿತ್ತು. ಇದು ಕಾಂಗ್ರೆಸ್‌ಗೆ ಬೇಕಿದ್ದ ‘ಬಹುಮತ’ವನ್ನು ಪಡೆಯುವುದಕ್ಕೆ ಸಾಕಾಗುತ್ತಿತ್ತು ಎನ್ನುವುದು ಸ್ಪಷ್ಟ.

ಆದರೆ ಅತಿಯಾದ ಆತ್ಮವಿಶ್ವಾಸದಿಂದ ‘ಆಪ್’ ಅನ್ನು ದೂರವಿಟ್ಟ ಕಾಂಗ್ರೆಸ್, ಬಿಜೆಪಿಯು ದಾಖಲೆ ಪ್ರಮಾಣದಲ್ಲಿ ಗೆಲುವು ಸಾಧಿಸುವುದಕ್ಕೆ ಅನುವುಮಾಡಿಕೊಟ್ಟು, ಮುಂದಿನ 5 ವರ್ಷಗಳ ಕಾಲ ಪ್ರತಿಪಕ್ಷವಾಗಿಯೇ ಕೂರಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದೆ. ಹಾಗೆ ನೋಡಿದರೆ, ಅತಿಯಾದ ಆತ್ಮವಿಶ್ವಾಸದಿಂದ ಕಾಂಗ್ರೆಸ್ ಕಳೆದು ಕೊಳ್ಳುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಹರಿಯಾಣವೇ ಮೊದಲಲ್ಲ. ಕಳೆದ ವರ್ಷ ನಡೆದ ಪಂಚರಾಜ್ಯ ಚುನಾವಣೆ ಯಲ್ಲಿಯೂ ಪಂಜಾಬ್ ಹಾಗೂ ಗುಜರಾತ್‌ನಲ್ಲಿ ಕ್ಲೀನ್ ಸ್ವೀಪ್ ಆಗುವುದರ ಹಿಂದೆಯೂ ಇದೇ ತಪ್ಪು ಹೆಜ್ಜೆಗಳಿದ್ದವು. ಈ ರೀತಿಯ ಅತಿಯಾದ ಆತ್ಮವಿಶ್ವಾಸ ಹೊಂದಿರುವಾಗ ಬಹುತೇಕ ಪಕ್ಷಗಳು ಜನರ ಮನಸ್ಸನ್ನು ಅರ್ಥೈಸಿಕೊಳ್ಳು ವಲ್ಲಿ ಸಂಪೂರ್ಣ ವಿಫಲವಾಗುತ್ತವೆ. ಇದು ಕೇವಲ ಕಾಂಗ್ರೆಸ್‌ಗೆ ಸೀಮಿತವಾದ ಸಮಸ್ಯೆಯಲ್ಲ. ಅನೇಕ ಚುನಾವಣೆ ಯಲ್ಲಿ ಹಲವು ಪಕ್ಷಗಳು ಮಕಾಡೆ ಮಲಗುವುದಕ್ಕೆ ಈ ನಡೆ ಕಾರಣವಾಗಿರುತ್ತದೆ.

ಇನ್ನು 2024ರ ಲೋಕಸಭಾ ಚುನಾವಣೆಯಲ್ಲಿನ ‘ಅಚ್ಚರಿಯ’ ಫಲಿತಾಂಶಕ್ಕೂ ಇದೇ ಅತಿಯಾದ ಆತ್ಮವಿಶ್ವಾಸವೇ
ಕಾರಣ ಎಂದರೆ ತಪ್ಪಾಗುವುದಿಲ್ಲ. ಚುನಾವಣೋತ್ತರ ಸಮೀಕ್ಷೆಗಳೆಲ್ಲ ಬಿಜೆಪಿಗೆ ಸ್ಪಷ್ಟ ಬಹುಮತವೆಂದರೆ, ಕೆಲ
ಸಮೀಕ್ಷೆಗಳು 400+ ನಿಶ್ಚಿತ ಎನ್ನುವ ಷರಾ ಬರೆದಿದ್ದವು. ಬಿಜೆಪಿಯೂ ಇದೇ ವಿಶ್ವಾಸದಲ್ಲಿದ್ದ ಕಾರಣಕ್ಕೆ ‘400+’ನ
ನಿರೀಕ್ಷೆಯಲ್ಲಿತ್ತು. ಅದಕ್ಕೆ ಪೂರಕವಾಗಿ ಮೋದಿ ನಾಯಕತ್ವಕ್ಕೆ ಎದುರಾಳಿ ನಾಯಕತ್ವದ ಕೊರತೆ, ‘ಇಂಡಿಯ’
ಮೈತ್ರಿಕೂಟದಲ್ಲಿದ್ದ ಹತ್ತು ಹಲವು ಗೊಂದಲ, ಟಿಕೆಟ್ ಹಂಚಿಕೆಯಲ್ಲಿನ ಭಿನ್ನಾಭಿಪ್ರಾಯ ಹಾಗೂ ಬಿಜೆಪಿ ವಿರುದ್ಧ
‘ಬಹಿರಂಗ’ವಾಗಿ ಕಾಣಿಸಿಕೊಳ್ಳದ ಆಡಳಿತ ವಿರೋಧಿ ಅಲೆ, ಈ ಎಲ್ಲದರೊಂದಿಗೆ ಉತ್ತರ ಪ್ರದೇಶದಲ್ಲಿ ಕಳೆದ
ಬಾರಿಯಂತೆ ‘ಮೋದಿ-ಯೋಗಿ’ ಅಲೆಯಲ್ಲಿ ಕ್ಲೀನ್ ಸ್ವೀಪ್ ನ ಗುರಿ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಪಶ್ಚಿಮ
ಬಂಗಾಳದಲ್ಲಿ ಹೆಚ್ಚಿನ ಸ್ಥಾನದ ಲೆಕ್ಕಾಚಾರದಲ್ಲಿನ ಸೋಲು ಬಿಜೆಪಿಯ ಹಿನ್ನಡೆಗೆ ಕಾರಣವಾಗಿದ್ದವು.

ಇದರೊಂದಿಗೆ ಈ ಬಾರಿ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಯಾವ ರೀತಿಯಲ್ಲಿ ಶೇ.1ಕ್ಕಿಂತ ಕಡಿಮೆ ಮತಗಳು
ಚದುರಿದ್ದು ಕಾರಣವಾಗಿತ್ತೋ, ಬಿಜೆಪಿಗೂ ಅದೇ ರೀತಿಯಾಗಿತ್ತು. ಅದು ಸುಮಾರು 32 ಸ್ಥಾನಗಳಲ್ಲಿ ಸೋಲುವಂತೆ
ಮಾಡಿದ್ದು ಕೇವಲ 6,09,639 ಮತಗಳು. ಅದರಲ್ಲಿಯೂ 16 ಕ್ಷೇತ್ರಗಳಲ್ಲಿ ಸಾವಿರಕ್ಕೂ ಕಡಿಮೆ ಅಂತರದಲ್ಲಿ
ಸೋಲಾಗಿತ್ತು. ಐದಾರು ಸಾವಿರ ಮತಗಳ ಅಂತರದಲ್ಲಿ ನಾಲ್ಕೈದು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿತ್ತು. ಒಟ್ಟಾರೆ ಕೇವಲ ಶೇ. 0.7 ಮತ ಕಡಿಮೆ ಬಿದ್ದ ಕಾರಣ ಬರೋಬ್ಬರಿ 63 ಸೀಟುಗಳನ್ನು ಬಿಜೆಪಿ ಕಳೆದುಕೊಂಡಿತ್ತು. ತೀವ್ರ ಹಣಾಹಣಿಯಿದ್ದ, ಬಿಜೆಪಿಗೆ ‘ಫೇವರ್’ ಆಗಿದ್ದ ಈ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುವುದಕ್ಕೆ ಪ್ರಮುಖ ಕಾರಣ ವೇನೆಂದು ನೋಡಿದರೆ, ಈ ಎಲ್ಲ ಕ್ಷೇತ್ರಗಳಲ್ಲಿಯೂ ಗೆಲುವು ನಿಶ್ಚಿತ ಎನ್ನುವ ಕಾರಣಕ್ಕೆ ‘ನಿರಾಳ’ವಾಗಿ ದ್ದುದು, ಮೈಮರೆತಿದ್ದುದು ಎನ್ನುವುದು ಸ್ಪಷ್ಟ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಪ್ರತಿ ಪಕ್ಷಗಳ ಮೈತ್ರಿಕೂಟದ ಶಕ್ತಿ ಅರಿಯುವಲ್ಲಿ ವಿಫಲವಾದರೆ,
ಅದಕ್ಕೂ ಕೆಲವೇ ತಿಂಗಳ ಮೊದಲು ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತಿಯಾದ ‘ಅವಲಂಬನೆ’ ಯಿಂದ ರಾಜ್ಯವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಾಯಿತು. ಕರ್ನಾಟಕ ಬಿಜೆಪಿಯಲ್ಲಿನ ಒಳಜಗಳ, ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪಗಳನ್ನು ಮೀರಿ, ‘ಮೋದಿ ಬಲವೊಂದೇ ಸಾಕು’ ಎನ್ನುವ ಮನಸ್ಥಿತಿಯಲ್ಲಿ ಪಕ್ಷದ ಅಂದಿನ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂತಿದ್ದರು.

ರಾಜ್ಯ ಬಿಜೆಪಿಯಲ್ಲಿನ ಒಳಜಗಳವನ್ನು ಪಕ್ಷದ ವರಿಷ್ಠರು ನಿಭಾಯಿಸುತ್ತಾರೆ ಹಾಗೂ ರಾಜ್ಯ ಬಿಜೆಪಿ ಸರಕಾರದ
ವಿರುದ್ಧವಿದ್ದ ಆಡಳಿತ ವಿರೋಧಿ ಅಲೆಯನ್ನು ‘ಮೋದಿ ಹವಾ’ ನಿಯಂತ್ರಿಸುತ್ತದೆ. ಇದರೊಂದಿಗೆ ಕೆಲವೆಡೆ
‘ಹೊಸಮುಖ’ ಪ್ರಯೋಗ ಪಕ್ಷದ ಎಲ್ಲ ಲೋಪಗಳನ್ನು ಮುಚ್ಚಿ ಹಾಕಿ ನೂರರ ಗಡಿಗೆ ಸಂಖ್ಯಾಬಲ ತಲುಪಲಿದೆ.
ಆಗ ಜೆಡಿಎಸ್‌ನಿಂದ ಬೆಂಬಲ ಪಡೆದು ಸರಕಾರವನ್ನು ರಚಿಸಬಹುದು ಎನ್ನುವ ದೂರಾಲೋಚನೆಯಲ್ಲಿ ಬಿಜೆಪಿ
ನಾಯಕರಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 5 ವರ್ಷದಲ್ಲಿ ಒಂದು ಬಾರಿ ಪ್ರಜೆ ಪ್ರಭುವಾಗಿದ್ದರೂ, ಆ ಒಂದು ದಿನ ಮುಂದಿನ
5 ವರ್ಷ ಏನಾಗಬೇಕು ಎಂದು ತೀರ್ಮಾನಿಸುವ ‘ಹಕ್ಕು’ ಪ್ರತಿ ಮತದಾರನಿಗೆ ಇರುತ್ತದೆ. ಗೆಲುವು ಸಾಧಿಸಿದ ಬಳಿಕ
ತನಗೂ, ಜನರಿಗೂ ಸಂಬಂಧವಿಲ್ಲವೆಂದು ತಿರುಗಾಡುವ ಅನೇಕ ‘ಜನಪ್ರತಿನಿಧಿ’ಗಳನ್ನು ಮತದಾರ ಐದೇ ವರ್ಷ ದಲ್ಲಿ ಯಾವ ರೀತಿ ಮಕಾಡೆ ಮಲಗಿಸಿದ್ದಾನೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಅದೇ ರೀತಿ ‘ಪ್ರತಿಪಕ್ಷ’ಕ್ಕೆ ಜನಬಲವಿಲ್ಲವೆಂದು ಅಹಂಕಾರದಲ್ಲಿ ಮೆರೆಯುವ ಪಕ್ಷಗಳಿಗೆ ಪದೇಪದೆ ಪಾಠ ಕಲಿಸುತ್ತಿರುವುದು ಇತ್ತೀಚಿನ ಪ್ರತಿ ಚುನಾವಣೆಯಲ್ಲಿ ಒಂದಿಲ್ಲೊಂದು ಪಕ್ಷಕ್ಕೆ ತಿಳಿಸಿರುವುದನ್ನು ಫಲಿತಾಂಶವೇ ಹೇಳುತ್ತದೆ. ಈ ಎರಡನ್ನೂ ಮೀರಿ, ರಾಜಕೀಯದ ಒಳಸುಳಿ ಅರಿಯುವಲ್ಲಿ ವಿಫಲವಾಗಿ ರಾಜ್ಯಗಳನ್ನು ಬಿಟ್ಟುಕೊಡುತ್ತಿರುವ ಕಾಂಗ್ರೆಸ್ ಇನ್ನಾದರೂ ಪಾಠ ಕಲಿಯಬೇಕಿದೆ.

ಇನ್ನಾರು ತಿಂಗಳಲ್ಲಿ ಮಹಾರಾಷ್ಟ್ರ, ಜಾರ್ಖಂಡ್, ದೆಹಲಿಯ ಚುನಾವಣೆಗಳು ಎದುರಾಗಲಿದ್ದು, ಈ ಚುನಾವಣೆ ಯಲ್ಲಿ ಅದು ‘ಮೈತ್ರಿ’ ಪಕ್ಷಗಳೊಂದಿಗೆ ಕೈಜೋಡಿಸಿ ಆಡಳಿತ ಪಕ್ಷದಲ್ಲಿ ಕೂರುವ ಆಲೋಚನೆ ಮಾಡುವುದೋ ಅಥವಾ ಏನಾದರೂ ಆಗಲಿ ಸ್ವತಂತ್ರವಾಗಿಯೇ ವಿಧಾನಸಭಾ ಚುನಾವಣೆಗಳನ್ನು ಎದುರಿಸ ಬೇಕು ಎನ್ನುವ ಮನಸ್ಥಿತಿಯನ್ನು ಮುಂದುವರಿಸುವುದೋ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.

ಇದನ್ನೂ ಓದಿ: Ranjith H Ashwath Column: ತಿರುಗುತ್ತಿದೆಯೇ ಪ್ರಜಾಪ್ರಭುತ್ವದ ಕಾಲಚಕ್ರ ?