Sunday, 24th November 2024

Ranjith H Ashwath Column: ಹೊಂದಾಣಿಕೆ ರಾಜಕೀಯ ಹೊಸದೇನಲ್ಲ

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ರಾಜಕೀಯದಲ್ಲಿ ಹಲವು ಪಟ್ಟುಗಳಿರುತ್ತವೆ. ಅವುಗಳ ಪೈಕಿ, ಉತ್ತಮ ರಾಜಕಾರಣಿಯಾಗಲು ‘ರೈಟ್ ಟೈಮ್-ರೈಟ್
ಡಿಸಿಷನ್’ ಅಂದರೆ ‘ಸೂಕ್ತ’ ಸಮಯದಲ್ಲಿ ‘ಸರಿಯಾದ’ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಕೂಡ
ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಯಶಸ್ವಿ ರಾಜಕಾರಣಿಯಾಗಿ, ಪಕ್ಷ ಮೀರಿ ಎಲ್ಲರೊಂದಿಗೆ
ಉತ್ತಮ ಸಂಬಂಧ ಹೊಂದುವುದಕ್ಕೆ ಸೂಕ್ತ ತೀರ್ಮಾನಗಳಿಗಿಂತ ಹೆಚ್ಚಾಗಿ, ‘ತಪ್ಪು’ ಹೆಜ್ಜೆಗಳನ್ನು ಇಡಬೇಕಾಗುತ್ತದೆ.
ಇಲ್ಲವೇ ಎದುರಾಳಿ ಇಡುವಂತೆ ನೋಡಿಕೊಳ್ಳಬೇಕಾಗುತ್ತದೆ.

ಹಲವು ಸಮಯದಲ್ಲಿ ತಾವು ಗೆಲ್ಲುವುದಕ್ಕಿಂತ ವಿರೋಧಿಗಳು ಗೆಲ್ಲದಂತೆ ನೋಡಿಕೊಳಲು ‘ಮೂಗುದಾರ’ ಹಾಕಿದರೂ ರಾಜಕೀಯ ಗೆದ್ದಂತೆ ಎನ್ನುವುದು ಈ ಅಖಾಡದ ಅಲಿಖಿತ ನಿಯಮ. ಈ ನಿಯಮವನ್ನು ಬಹುತೇಕ ರಾಜಕಾರಣಿಗಳು ಅಳವಡಿಸಿಕೊಂಡಿದ್ದರೂ, ‘ಅಳವಡಿಸಿಕೊಂಡಿಲ್ಲ’ ಎನ್ನುವಂತೆಯೇ ಓಡಾಡಬೇಕಾಗುತ್ತದೆ. ಈ ಹೊಂದಾಣಿಕೆ ಸ್ವಭಾವವಿರದೆ ರಾಜಕೀಯದಲ್ಲಿ ಹೋರಾಡಲು ಹೋದರೆ, ಹೆಚ್ಚು ದಿನಗಳ ಕಾಲ ‘ಅಧಿಕಾರ’ ದಲ್ಲಿರಲು ಆಗುವುದಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯ. ಏಕೆಂದರೆ, ರಾಜಕೀಯದಲ್ಲಿ ‘ಶಾಶ್ವತ ಶತ್ರುತ್ವ ಕ್ಕಾಗಲಿ, ಶಾಶ್ವತ ಮಿತ್ರತ್ವ’ಕ್ಕಾಗಲಿ ಹೆಚ್ಚಿನ ಬೆಲೆಯಿಲ್ಲ.

ಅನೇಕ ವೇಳೆ ನಮ್ಮ ರಾಜ್ಯ, ದೇಶದ ರಾಜಕೀಯದಲ್ಲಿ ಈ ರೀತಿಯ ನಿಯಮಗಳಿಂದಲೇ ದಶಕಗಳ ಕಾಲ ‘ಗೆದ್ದು’
ಗದ್ದುಗೆ ಏರಿದ ಉದಾಹರಣೆಗಳಿವೆ. ಕರ್ನಾಟಕದಲ್ಲಿಯೂ ಕಳೆದ ಕೆಲ ಚುನಾವಣೆಯನ್ನು ಗಮನಿಸಿದರೆ, ಸ್ವಂತ ಶಕ್ತಿಗಿಂತ ಹೆಚ್ಚಾಗಿ, ಎದುರಾಳಿಯ ಗೆಲುವಿಗೆ ಮೂಗುದಾರ ಹಾಕಿದ್ದಕ್ಕಾಗಿ ಹಲವರಿಗೆ ಜಯ ಸಿಕ್ಕಿದೆ ಎನ್ನುವುದು ಸ್ಪಷ್ಟ. ಮೂವರು ಹಾಲಿ ಶಾಸಕರು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ರಾಜ್ಯದಲ್ಲೀಗ ಉಪಚುನಾವಣೆ ಎದುರಾಗಿದೆ. ಕುಮಾರಸ್ವಾಮಿ ರಾಜೀನಾಮೆಯಿಂದ ಚನ್ನಪಟ್ಟಣ ತೆರವಾಗಿದ್ದರೆ, ತುಕಾರಾಂ ರಾಜೀನಾಮೆಯಿಂದ ಸಂಡೂರು ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ಶಿಗ್ಗಾಂವಿಗೆ ಉಪಚುನಾವಣೆ ಎದುರಾಗಿದೆ.

ಈಗಾಗಲೇ ಮೂರೂ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯಾಗಿದೆ. ಹೀಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೂರೂ ಕ್ಷೇತ್ರದಲ್ಲಿ ಯಾರ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತೋ, ಅವರ ಕುಟುಂಬಿಕರಿಗೆ ಟಿಕೆಟ್ ಹಂಚಿಕೆಯಾಗಿದೆ. ಕ್ರಮವಾಗಿ ಚನ್ನಪಟ್ಟಣ ಹಾಗೂ ಶಿಗ್ಗಾಂವಿಯಲ್ಲಿ ಮಾಜಿ ಸಿಎಂಗಳ ಪುತ್ರರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಸಂಡೂರಿನಲ್ಲಿ ಆರಂಭದಲ್ಲಿ ತುಕಾರಾಂ ಪುತ್ರಿಗೆ ಟಿಕೆಟ್ ನೀಡಬೇಕೆಂದು ತೀರ್ಮಾನವಾಗಿತ್ತಾದರೂ, ಸ್ಥಳೀಯರ ಭಾರಿ ವಿರೋಧ ದಿಂದ ತುಕಾರಾಂ ಪತ್ನಿ ಅನ್ನಪೂರ್ಣ ಅವರನ್ನು ಕಣಕ್ಕೆ ಇಳಿಸಲಾಗಿದೆ.

ಕುಟುಂಬಿಕರಿಗೆ ಟಿಕೆಟ್ ನೀಡಿರುವುದು ಒಂದು ಭಾಗವಾದರೆ, ಅವರಿಗೆ ಸ್ವಂತ ಬಲದ ಮೇಲೆ ಗೆಲ್ಲುವುದಕ್ಕೆ ಬೇಕಾ
ದಷ್ಟು ‘ಶಕ್ತಿ’ ಇಲ್ಲ ಎಂಬುದು ಅರಿವಾಗುತ್ತಿದ್ದಂತೆ ಎದುರಾಳಿ ಯನ್ನು ದುರ್ಬಲಗೊಳಿಸುವ ಅಥವಾ ದುರ್ಬಲರನ್ನೇ
ತಮ್ಮ ಎದುರಾಳಿ ಮಾಡಿಕೊಳ್ಳುವ ‘ಪ್ರಯತ್ನ’ ಮೂರೂ ಕ್ಷೇತ್ರದಲ್ಲಿ ನಡೆದಿದೆ ಎನ್ನುವುದು ಸ್ಪಷ್ಟ. ಈ ಕಾರಣ ಕ್ಕಾಗಿಯೇ ಶಿಗ್ಗಾಂವಿಯಲ್ಲಿ ಭಾರಿ ಪ್ರಮಾಣದ ಬಂಡಾಯ ಕಾಣಿಸಿಕೊಂಡು ಬಳಿಕ ಸದ್ದಿಲ್ಲದೇ ಶಮನವಾಗಿದ್ದು.

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಪೈಕಿ ಭಾರಿ ಕುತೂಹಲ, ಸದ್ದು ಮಾಡಿದ್ದು ಚನ್ನಪಟ್ಟಣ
ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಷಯದಲ್ಲಿನ
ಮೇಲಾಟದಿಂದಾಗಿ ಬಿಜೆಪಿಯ ‘ಸೈನಿಕ’ ಪಕ್ಷಾಂತರ ಮಾಡಿ ‘ಕೈ’ ಹಿಡಿದು ಅಭ್ಯರ್ಥಿಯಾಗಿ ಪ್ರಚಾರ ಆರಂಭಿಸಿದ್ದಾರೆ.
ಯೋಗೇಶ್ವರ ಅವರಿಗೆ ಬಿಜೆಪಿ ಟಿಕೆಟ್ ಸಿಗದಂತೆ ನೋಡಿಕೊಂಡು, ಪಕ್ಷಾಂತರವಾಗುವಂತೆ ಮಾಡುವುದಕ್ಕೂ
ಮುಖ್ಯ ಕಾರಣ ಕುಮಾರಸ್ವಾಮಿ ಅವರ ಭವಿಷ್ಯದ ಚಿಂತೆ.

ಈ ಎಲ್ಲ ಕಾರಣಕ್ಕೆ ಚನ್ನಪಟ್ಟಣ ಕುತೂಹಲ ಮೂಡಿಸಿದ್ದರೂ, ಭಾರಿ ಬಂಡಾಯದ ಬಿಸಿ ಕಾಣಿಸಿಕೊಂಡಿದ್ದು
ಶಿಗ್ಗಾಂವಿಯಲ್ಲಿ ಎಂದರೆ ತಪ್ಪಾಗುವುದಿಲ್ಲ. ಹಾಗೆ ನೋಡಿದರೆ, ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡುತ್ತಿದ್ದಂತೆ ಶಿಗ್ಗಾಂವಿಯಲ್ಲಿ ಪುತ್ರ ಭರತ್ ರನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಟಿಕೆಟ್ ಘೋಷಣೆಗೆ ಕೆಲ ದಿನಗಳ ಮೊದಲು ಸ್ವತಃ ಬೊಮ್ಮಾಯಿ ಅವರು, ‘ನನ್ನ ಪುತ್ರನಿಗೆ ಟಿಕೆಟ್ ಬೇಡ. ಸಾಮಾನ್ಯ ಕಾರ್ಯಕರ್ತರಿಗೆ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲಾಗುವುದು’ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆದರೆ ಅಂತಿಮವಾಗಿ ‘ವರಿಷ್ಠರ ಒತ್ತಡ’ಕ್ಕೆ ಮಣಿದು ಪುತ್ರನ ಸ್ಪರ್ಧೆಯನ್ನು ಒಪ್ಪಿಕೊಂಡೆ ಎಂದು ಬೊಮ್ಮಾಯಿ ಹೇಳಿದರು.

ಈ ಹೇಳಿಕೆ ನೀಡುವಾಗ, ‘ಪಕ್ಷ ಸಂಘಟನೆ ಹಾಗೂ ಪಕ್ಷಕ್ಕೆ ಅನುಕೂಲವಾಗಲೆಂದು ವರಿಷ್ಠರು ಭರತ್ ಹೆಸರನ್ನು ಅಂತಿಮಗೊಳಿಸಿದ್ದಾರೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಆದರೆ, ಭರತ್ ಇದಕ್ಕೂ ಮೊದಲು ಪಕ್ಷದ ಯಾವ ಚಟುವಟಿಕೆಯಲ್ಲಿ ತೊಡಗಿದ್ದರು ಎನ್ನುವುದಕ್ಕೆ ಅವರಲ್ಲಿ ಉತ್ತರವಿರಲಿಲ್ಲ. ವರಿಷ್ಠರ ಈ ತೀರ್ಮಾನಕ್ಕೆ ಪಕ್ಷದ ಹಲವು ಕಾರ್ಯಕರ್ತರು ತಿರುಗಿ ಬಿದ್ದರು. ಬಳಿಕ ಮೇಲ್ನೋಟಕ್ಕೆ ಎಲ್ಲವನ್ನೂ ‘ಹ್ಯಾಂಡಲ್’ ಮಾಡುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಗಿಂತ ಹೆಚ್ಚು ಬಂಡಾಯ ಕಾಣಿಸಿದ್ದು ಕಾಂಗ್ರೆಸ್‌ನಲ್ಲಿ ಎನ್ನುವುದು ಮುಖ್ಯ.

ಕಾಂಗ್ರೆಸ್ ನಲ್ಲಿನ ಬಂಡಾಯಕ್ಕೆ, ‘ಸುಲಭವಾಗಿ ಗೆಲ್ಲುವ ಕ್ಷೇತ್ರವನ್ನು ಕೈಯಾರೆ ಬಿಟ್ಟುಕೊಡುವ ಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ’ ಎನ್ನುವುದೇ ಪ್ರಮುಖ ಕಾರಣ ಎಂಬುದು ಗೋಚರಿಸುತ್ತದೆ. ಏಕೆಂದರೆ, ಈ ಬಾರಿಯೂ ಕಾಂಗ್ರೆಸ್‌ ನಲ್ಲಿ ‘ಸಂಪ್ರದಾಯ’ದಂತೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಆದರೆ ಶಿಗ್ಗಾಂವಿಯಲ್ಲಿ ಮುಸ್ಲಿಮರಿಗೆ ಟಿಕೆಟ್ ಘೋಷಿಸುವ ಬದಲು ಪಂಚಮಸಾಲಿ ಲಿಂಗಾಯತ ಅಥವಾ ಲಿಂಗಾಯತ ಸಮುದಾಯದ ಯಾವುದೇ ಉಪಪಂಗಡದ ನಾಯಕನಿಗೆ ಟಿಕೆಟ್ ಕೊಟ್ಟಿದ್ದರೂ ಕಾಂಗ್ರೆಸ್ ಗೆಲುವು ಖಚಿತ ಎನ್ನಲಾಗಿತ್ತು. ಇದೇ ಮಾತನ್ನು ಬಂಡಾಯವಾಗಿ ಸ್ಪರ್ಧಿಸಿದ್ದ ಮಂಜುನಾಥ್ ಕುನ್ನೂರ್ ಕೆಲ ದಿನಗಳ ಹಿಂದೆ ಹೇಳಿದ್ದರು.

‘ಶಿಗ್ಗಾಂವಿಯಲ್ಲಿ ಎಷ್ಟು ವರ್ಷಗಳ ಕಾಲ ಕಾಂಗ್ರೆಸ್ ಮುಸ್ಲಿಮರಿಗೆ ಟಿಕೆಟ್ ನೀಡುವುದೋ ಅಷ್ಟು ವರ್ಷ ಬಸವರಾಜ ಬೊಮ್ಮಾಯಿ ಗೆಲ್ಲುತ್ತಾರೆ’ ಎಂದಿದ್ದರು ಅವರು. ಎರಡೂ ಪಕ್ಷದಿಂದ ಲಿಂಗಾಯತರೇ ಸ್ಪರ್ಧಿಸಿದರೆ, ಲಿಂಗಾಯತ ಮತಗಳು ‘ವಿಭಜನೆ’ಯಾಗಿ ಅಹಿಂದ ಮತಗಳು ಕಾಂಗ್ರೆಸ್‌ಗೆ ಬರುತ್ತವೆ. ಒಂದು ವೇಳೆ ಹಿಂದೂ ವರ್ಸಸ್ ಮುಸ್ಲಿಂ ಫೈಟ್ ಆದರೆ ಸಹಜವಾಗಿಯೇ ಲಿಂಗಾಯತ ಮತಗಳು ವಿಭಜನೆಯಾಗದೇ ಬಸವರಾಜ ಬೊಮ್ಮಾಯಿ ಅವರಿಗೆ ಸುಲಭ ಗೆಲುವು ದಕ್ಕುತ್ತದೆ.

ಈ ಸರಳ ರಾಜಕೀಯ ಗಣಿತ ಕಾಂಗ್ರೆಸ್ ನಾಯಕರಿಗೆ ತಿಳಿದಿಲ್ಲವೆಂದಲ್ಲ. ಆದರೆ ಮೇಲೆ ವಿವರಿಸಿರುವಂತೆ ಶಿಗ್ಗಾಂವಿ
ಅಭ್ಯರ್ಥಿ ವಿಷಯದಲ್ಲಿ ‘ಜಾಣ ತಪ್ಪುಹೆಜ್ಜೆ’ ಇಡುವ ಮೂಲಕ ಸಹಾಯ ಮಾಡಿಕೊಡುವುದು ಕಾಂಗ್ರೆಸ್ಸಿಗರಿಗೆ
ಸಾಮಾನ್ಯವಾಗಿದೆ. ಈ ಹಿಂದೆಯೂ ಬೊಮ್ಮಾಯಿ ಅವರಿಗೆ ಸಹಾಯ ಮಾಡುವ ಕಾರಣಕ್ಕೆ ಕಾಂಗ್ರೆಸ್‌ನ ಕೆಲವು ಪ್ರಮುಖ ನಾಯಕರು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ವಾದಿಸಿ, ಕಾಂಗ್ರೆಸ್ ಸೋಲುವಂತೆ ಮಾಡಿ ದ್ದಾರೆ. ಈ ಬಾರಿಯೂ ಇದು ಪುನರಾವರ್ತನೆಯಾಗುವುದೇ ಅಥವಾ ಮುಸ್ಲಿಮರೊಂದಿಗೆ ಪಂಚಮಸಾಲಿ ಲಿಂಗಾಯತರೂ ಕಾಂಗ್ರೆಸ್‌ನ ಕೈಹಿಡಿಯುವರೇ? ಅಥವಾ ಬಸವರಾಜ ಬೊಮ್ಮಾಯಿ ಅವರಿಗೆ ಸಿಕ್ಕ ಪಂಚಮಸಾಲಿ ಲಿಂಗಾಯತ ಮತದಾರರ ‘ಸಾಲಿಡ್’ ಬೆಂಬಲ ಪುತ್ರ ಭರತರಿಗೆ ವರ್ಗಾವಣೆಯಾಗುವ ವೇಳೆ ಡೈಲ್ಯೂಟ್ ಆಗುವುದೇ
ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಆದರೆ ಈ ಉಪಚುನಾವಣೆಯ ಮಟ್ಟಿಗೆ ಹೊಂದಾಣಿಕೆಯಿಲ್ಲದೇ ನೇರಾನೇರ ಸ್ಪರ್ಧೆಯಿರುವ ಕ್ಷೇತ್ರ ಎನಿಸಿರುವುದು ಚನ್ನಪಟ್ಟಣ ಮಾತ್ರ. ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿರುವ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದಾರೆ. ಕಳೆದ ಎರಡು ಬಾರಿ ಚಕ್ರವ್ಯೂಹ ಭೇದಿಸುವಲ್ಲಿ ವಿಫಲರಾಗಿದ್ದ ನಿಖಿಲ್ ಈ ಬಾರಿ ‘ಅರ್ಜುನ’ನ ರೀತಿ ಚಕ್ರವ್ಯೂಹ ಭೇದಿಸಲಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದರೆ, ಇತ್ತ ಎರಡು ಬಾರಿ
ಸೋತಿರುವ ನಿಖಿಲ್‌ಗೆ ಮೂರನೇ ಸೋಲಿನ ರುಚಿ ತೋರಿಸುವ ಉತ್ಸಾಹದಲ್ಲಿದ್ದ ಕಾಂಗ್ರೆಸ್ಸಿಗರು ಯೋಗೇಶ್ವರ
ಅವರನ್ನು ಸಮರ್ಥ ಅಭ್ಯರ್ಥಿಯೆಂದು ಬಿಜೆಪಿಯಿಂದ ಕರೆದುಕೊಂಡು ಬಂದು ಟಿಕೆಟ್ ಕೊಟ್ಟು ನಿಲ್ಲಿಸಿದ್ದಾರೆ.

ಮೇಲ್ನೋಟಕ್ಕೆ ಈ ಚುನಾವಣೆ ‘ಬಿಜೆಪಿ-ಜೆಡಿಎಸ್’ ವರ್ಸಸ್ ‘ಕಾಂಗ್ರೆಸ್’ ಎನಿಸಿದರೂ, ಸ್ಥಳೀಯ ಮಟ್ಟದಲ್ಲಿ ಬಿಜೆಪಿಯ ಹಲವು ನಾಯಕರು ನಿಖಿಲ್ ಹ್ಯಾಟ್ರಿಕ್ ಸೋಲು ಬಯಸಿ ತಟಸ್ಥ ಅಥವಾ ಕಾಂಗ್ರೆಸ್ ಪರ ‘ಹೊಂದಾಣಿಕೆ’ ರಾಜಕೀಯ ನಡೆಸಲು ಸಜ್ಜಾಗಿದ್ದಾರೆ. ಹಾಗೆ ನೋಡಿದರೆ, ಈ ರೀತಿಯ ಹೊಂದಾಣಿಕೆ ರಾಜಕೀಯ ರಾಜ್ಯದಲ್ಲಿ ಹೊಸದೇನಲ್ಲ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಸೋಲಲಿ ಎನ್ನುವ ಕಾರಣಕ್ಕೆ ಸ್ವಪಕ್ಷದವರೇ ಪ್ರತಿಪಕ್ಷದವರೊಂದಿಗೆ ಕೈಜೋಡಿಸಿರುವ ಸಾಕಷ್ಟು ನಿದರ್ಶನಗಳಿವೆ.

ಇನ್ನು ಕೆಲವೊಮ್ಮೆ ಪಕ್ಷದ ನಾಯಕರೇ ‘ತಪ್ಪು ಹೆಜ್ಜೆಯ’ ನೆಪದಲ್ಲಿ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಎದುರಾಳಿಗೆ ‘ರೆಡ್ ಕಾರ್ಪೆಟ್’ ಹಾಕುತ್ತಾರೆ. ಕರ್ನಾಟಕದ ಮಟ್ಟಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ರೀತಿಯ ‘ಹೊಂದಾಣಿಕೆ’ ಮಾಡಿಕೊಂಡು ಅಭ್ಯರ್ಥಿಗಳ ಗೆಲುವಿಗೆ ಸ್ವಪಕ್ಷದವರಷ್ಟೇ ಪ್ರತಿಪಕ್ಷದ ನಾಯಕರೂ ಶ್ರಮಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಕುಟುಂಬಕ್ಕಾಗಿನ ಈ ರೀತಿಯ ‘ಹೊಂದಾಣಿಕೆ’ಗಳು ದೇಶದ ರಾಜಕೀಯದಲ್ಲಿಯೂ ಹೊಸದೇನಲ್ಲ. ಆದರೆ ಕುಟುಂಬ ರಾಜಕಾರಣದ ವಿರುದ್ಧ ಹೋರಾಡಿಕೊಂಡೇ ಅಧಿಕಾರದ ಗದ್ದುಗೆ ಹಿಡಿದ, ಕುಟುಂಬ ರಾಜಕಾರಣಕ್ಕೆ ಒತ್ತು
ನೀಡುವುದಿಲ್ಲ ಎನ್ನುವ ಮಾತನ್ನು ಹೇಳಿ ಅನೇಕ ‘ಸಮರ್ಥ’ರ ಬದಲಿಗೆ ಹೊಸ ಮುಖಗಳನ್ನು ಪರಿಚಯಿಸಿದ
ಬಿಜೆಪಿಯ ತೀರ್ಮಾನ ಹಲವು ನಿಷ್ಠಾವಂತರನ್ನು ‘ತಟಸ್ಥ’ರಾಗುವಂತೆ ಮಾಡಿದೆ ಎನ್ನುವುದು ಸುಳ್ಳಲ್ಲ. ಹೊಂದಾಣಿಕೆ ಹಾಗೂ ಕುಟುಂಬ ರಾಜಕಾರಣವನ್ನು ಮೀರಿದ ಆಯ್ಕೆ ಬೇಕೆನ್ನುವುದು ಪಕ್ಷನಿಷ್ಠರ ನಿರೀಕ್ಷೆ ಯಾದರೂ, ರಾಜಕೀಯವಾಗಿ ಇದು ಸಾಧ್ಯವೇ ಎನ್ನುವುದು ಪ್ರಶ್ನೆ.

ಇದಕ್ಕೆ ಬಹುತೇಕರ ಬಳಿ ಉತ್ತರವಿಲ್ಲ. ಈ ಎಲ್ಲದರ ಹೊರತಾಗಿ ಮೂರೂ ರಾಜಕೀಯ ಪಕ್ಷಗಳು ಇದೀಗ ಉಪಚುನಾವಣಾ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ದೀಪಾವಳಿಯ ಬಳಿಕ ಉಪಸಮರದ ಹೋರಾಟ ಇನ್ನಷ್ಟು ಹೆಚ್ಚಾಗುವುದು ಬಹುತೇಕ ಖಚಿತ. ಕ್ಷೇತ್ರದ ಜನರು ಅಪ್ಪಂದಿರನ್ನು ನೋಡಿಕೊಂಡು ಮಕ್ಕಳಿಗೆ ಮನ್ನಣೆ ನೀಡುವರೋ ಅಥವಾ ಇತರೆ ಮಾನದಂಡಗಳನ್ನು ಅನುಸರಿಸುವರೋ ಎಂಬ ಪ್ರಶ್ನೆಗೆ ಫಲಿತಾಂಶದ ದಿನವೇ ಉತ್ತರ ಸಿಗಲಿದೆ!

ಇದನ್ನೂ ಓದಿ: Ranjith H Ashwath Column: ನೀ ಕೊಡೆ, ನಾ ಬಿಡೆ ಹೋರಾಟದಲ್ಲಿ ಗೆಲ್ಲುವುದ್ಯಾರು ?