Friday, 22nd November 2024

Ranjith H Ashwath Column: ದೂರುಗಳು ರಾಜಕೀಯ ಅಸ್ತ್ರವಾಗದಿರಲಿ

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ರಾಜ್ಯದಲ್ಲಿ ಸದ್ಯ ‘ದೂರುಗಳದ್ದೇ’ ಸುಗ್ಗಿ. ಬಿಜೆಪಿಯವರ ಮೇಲೆ ಕಾಂಗ್ರೆಸಿಗರು ಪೊಲೀಸ್ ಠಾಣೆಯಲ್ಲಿ ದೂರು ಗಳನ್ನು ನೀಡಿ ಕೇಸ್ ದಾಖಲಿಸುತ್ತಿದ್ದರೆ, ಇತ್ತ ಬಿಜೆಪಿಗರು ಸರಕಾರದ ವಿವಿಧ ಸಚಿವರ ವಿರುದ್ಧ ವಿವಿಧ ಭ್ರಷ್ಟಾಚಾರದ ಆರೋಪದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಮೊರೆ ಹೋಗುತ್ತಿದ್ದಾರೆ.

ಮೇಲ್ನೋಟಕ್ಕೆ ಈ ಎಲ್ಲ ಪ್ರಕರಣಗಳಲ್ಲಿಯೂ ಒಂದಿಲ್ಲೊಂದು ಆರೋಪಗಳಿವೆ. ಈ ಆರೋಪಗಳಿಗೂ ಕಾನೂನಿ ನಲ್ಲಿ ‘ದೂರಲು’ ಅವಕಾಶವಿದೆ. ಆದರೆ ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ದೂರುದಾರರು ತಾರ್ಕಿಕ ಅಂತ್ಯಕ್ಕಿಂತ ಹೆಚ್ಚಾಗಿ ‘ಸದ್ಯ’ದ ರಾಜಕೀಯ ಮೇಲಾಟಕ್ಕೆ ವೇದಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದಲ್ಲಿ ಖಾಸಗಿ ದೂರು ದಾಖಲಾಗುತ್ತಿದ್ದಂತೆ, ರಾಜ್ಯಪಾಲರ ಮುಂದೆ ಸಾಲು ಸಾಲು ದೂರುಗಳು ಬರಲು ಶುರುವಾಗಿವೆ. ಆದರೆ ಬಿಜೆಪಿಯ ಮಾಜಿ ಸಚಿವರ ಮೇಲಿನ ದೂರುಗಳಿಗೆ ಸಂಬಂಧಿಸಿದಂತಿರುವ ಪ್ರಾಸಿಕ್ಯೂಷನ್ ಬಗ್ಗೆ ಯಾವುದೇ ಕ್ರಮವಹಿಸದೇ, ಹಾಲಿ ಸಚಿವರ ವಿರುದ್ಧದ ದೂರುಗಳನ್ನು ಮುಂದಿಟ್ಟುಕೊಂಡು ನೋಟಿಸ್ ನೀಡುತ್ತಿರುವುದರಿಂದ ಇದೀಗ ರಾಜಭವನದ ದುರ್ಬಳಕೆಯಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯೋ ತಪ್ಪೋ ಎನ್ನುವುದನ್ನು
ಹೈಕೋರ್ಟ್ ತೀರ್ಮಾನಿಸಲಿದ್ದು, ಮಂಗಳವಾರ (ಸೆ.24) ಮಧ್ಯಾಹ್ನ ಒಂದು ಗಂಟೆ ವೇಳೆಗೆ ಅದು ತಿಳಿಯಲಿದೆ.
ಅದನ್ನು ಮುಂದಿಟ್ಟುಕೊಂಡು ಮುಂದಿನ ಕಾನೂನು ಹೋರಾಟದ ಬಗ್ಗೆ ಎರಡೂ ಕಡೆಯವರು ಯೋಚಿಸುತ್ತಾರೆ
ಎನ್ನುವುದು ಬೇರೆ ಮಾತು.

ಒಂದೆಡೆ ಬಿಜೆಪಿಗರು ರಾಜ್ಯಪಾಲರ ಮುಂದೆ ಸಾಲು ಸಾಲು ಪ್ರಕರಣಗಳನ್ನು ಹಾಕುತ್ತಿದ್ದರೆ, ಇತ್ತ ಕಾಂಗ್ರೆಸಿಗರು
ಬಿಜೆಪಿ ಅವಽಯ ಸಾಲು ಸಾಲು ಹಗರಣಗಳನ್ನು ಮುಂದಿಟ್ಟುಕೊಂಡು ಆರೋಪಿಸುತ್ತಿದ್ದಾರೆ. ಸ್ವತಃ ಆರೋಪಿಗೇ
ಮರೆತುಹೋಗಿರುವ ಹಲವು ಪ್ರಕರಣಗಳನ್ನು ರಿ-ಓಪನ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಯಾರೇ ತಪ್ಪು
ಮಾಡಿದ್ದರೂ ಕ್ರಮಕೈಗೊಳ್ಳಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಎರಡೂ ಕಡೆಯಿಂದ ಹೊರಿಸುವ ಆರೋಪಗಳು ಮೂರು ದಿನ ಭಾರಿ ಸದ್ದು ಮಾಡಿ ಬಳಿಕ ತಣ್ಣಗೆ ಮಲಗು ತ್ತಿರುವುದು ಸಮಸ್ಯೆ. ಬಿಜೆಪಿಯವರ ವಿರುದ್ಧದ ಆರೋಪಗಳಿಗೆ ‘ತನಿಖೆ’ಯ ಬಳಿಕ ಕ್ರಮವಹಿಸಲಾಗುವುದು ಎನ್ನುವ ಸಬೂಬನ್ನು ಕಾಂಗ್ರೆಸಿಗರು ಹೇಳುತ್ತಾರೆ. ಕಾಂಗ್ರೆಸ್ ನಾಯಕರ ವಿರುದ್ಧದ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಸೂಕ್ತ ದಾಖಲೆ ನೀಡಲಾಗುವುದು ಎಂದು ಬಿಜೆಪಿಗರು ಹೇಳುತ್ತಾರೆ. ಆದರೆ ಬಹುತೇಕ ಸಮಯದಲ್ಲಿ ಈ ಎರಡೂ ಸಮಯ ಬರುವುದೇ ಇಲ್ಲ ಎನ್ನುವುದು ಈಗಿರುವ ಬಹುದೊಡ್ಡ ಸಮಸ್ಯೆ!

ಆಡಳಿತ-ಪ್ರತಿಪಕ್ಷಗಳು ಎಂದ ಮೇಲೆ ಈ ರೀತಿಯ ಆರೋಪ-ಪ್ರತ್ಯಾರೋಪ ಸರ್ವೇಸಾಮಾನ್ಯ. ಈ ಹಿಂದೆ
ರಾಜಕೀಯ ಹೇಳಿಕೆಗಳು ವಾಕ್ಸಮರಕ್ಕೆ ಸೀಮಿತವಾಗಿರುತ್ತಿದ್ದವು, ಇಲ್ಲವೇ ದಾಖಲೆಗಳೊಂದಿಗೆ ಆರೋಪಗಳನ್ನು
ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಈ ಎಲ್ಲವನ್ನೂ ಮೀರಿ ಎದುರಾಳಿಯ ‘ಧ್ವನಿ’ ತಗ್ಗಿಸುವ ಉದ್ದೇಶಕ್ಕೆ ಅನೇಕ ಆರೋಪಗಳನ್ನು ಮಾಡುತ್ತಿರುವುದು ಸ್ಪಷ್ಟ. ರಾಜಕೀಯ ಕಾರಣಗಳಿಗೆ ಕೇಳಿಬರುವ ಅನೇಕ ಆರೋಪ ಗಳನ್ನು ರಾಜಕೀಯವಾಗಿಯೇ ನಿಭಾಯಿಸಬೇಕು. ಆದರೆ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ, ರಾಜಕೀಯ ಕಾರಣಕ್ಕೆ ಸಾಂವಿಧಾನಿಕ ಹುದ್ದೆಗಳನ್ನು ಬಳಸಿಕೊಳ್ಳುವುದು ಅಥವಾ ಸಂವಿಧಾನದಲ್ಲಿರುವ ‘ಗ್ರೇ ಏರಿಯಾ’ವನ್ನು ಬಳಸಿಕೊಂಡು ದ್ವೇಷ ರಾಜಕಾರಣಕ್ಕೆ ನಾಂದಿ ಹಾಡುವುದು ಕರ್ನಾಟಕದಲ್ಲಿ ಕಾಣಬರುತ್ತಿದೆ.

ಸಾಂವಿಧಾನಿಕ ಪೀಠದಲ್ಲಿರುವ ಅಥವಾ ಪೀಠದಲ್ಲಿದ್ದ ಸಮಯದಲ್ಲಿ ಆಗಿರುವ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ
ಮೊದಲು ರಾಜ್ಯಪಾಲರ ಅನುಮತಿ ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗೆಂದ ಮಾತ್ರಕ್ಕೆ, ದಿನ ಬೆಳಗ್ಗೆಯಾದರೆ ಖಾಸಗಿ ದೂರುಗಳನ್ನು ರಾಜ್ಯಪಾಲರ ಮುಂದೆ ಸಲ್ಲಿಸುತ್ತಾ ಹೋದರೆ ಮುಂದೊಂದು ದಿನ ‘ಪ್ರಾಸಿಕ್ಯೂಷನ್’ಗೆ ಇರುವ ಪಾವಿತ್ರ್ಯ ಕಳೆದು ಹೋಗುವುದರಲ್ಲಿ ಅನುಮಾನವಿಲ್ಲ. ಇದು ಕೇವಲ ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಅಥವಾ ಬಿಜೆಪಿಯ ಬೆಂಬಲಿತ ‘ಹೋರಾಟಗಾರರು’ ದೂರು ನೀಡುವುದಕ್ಕೆ ಮಾತ್ರವಲ್ಲದೇ, ಬಿಜೆಪಿಗರ ವಿರುದ್ಧ ಕೆಲವೊಂದಷ್ಟು ಪ್ರಕರಣದಲ್ಲಿ ಸರಕಾರ ನಡೆದುಕೊಂಡಿರುವ ರೀತಿಗೂ ಅನ್ವಯ.

ಉದಾಹರಣೆಗೆ, ಕೆಲ ದಿನಗಳ ಹಿಂದೆ ನಾಗಮಂಗಲ ಗಲಾಟೆಯ ಸಮಯದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪೊಲೀಸರು ಎಫ್‌ ಐಆರ್ ದಾಖಲಿಸಿದ್ದಾರೆ. ಇದಕ್ಕೆ ಕಾರಣ, ಈ ಇಬ್ಬರೂ ಸುಳ್ಳು ಭಾಷಣ ಮಾಡಿದ್ದಾರೆ, ನಾಗಮಂಗಲದ ಗಲಾಟೆಗೆ ಪ್ರಚೋದನೆ ನೀಡಿದ್ದಾರೆ ಎನ್ನುವ ಆರೋಪ. ಇಬ್ಬರೂ ನಾಯಕರು ಮಾಡಿರುವುದು ‘ಕಾನೂನಾತ್ಮಕ’ವಾಗಿ ತಪ್ಪಿರಬಹುದು. ಆದರೆ ರಾಜಕೀಯದ ಸಾಮಾನ್ಯ ಜ್ಞಾನವಿರುವವರಿಗೂ ಈ ಪ್ರಕರಣದಲ್ಲಿ ಕಾನೂನು ಮೀರಿದ ‘ರಾಜಕೀಯ’ವಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯು ತ್ತದೆ.

ಹಾಗೆ ನೋಡಿದರೆ, ಸಾಂವಿಧಾನಿಕ ಪೀಠದಲ್ಲಿರುವ ರಾಜ್ಯಪಾಲರು, ಸಭಾಧ್ಯಕ್ಷರು ಯಾವುದೇ ಒಂದು ಪಕ್ಷಕ್ಕೆ
ಸೀಮಿತವಾಗಿರುವುದಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವರು ಒಂದು ಪಕ್ಷದಿಂದ ಆಯ್ಕೆಯಾಗಿದ್ದರೂ, ಅಭಿವೃ
ದ್ಧಿಯ ವಿಷಯ ಬಂದಾಗ ಅವರುಗಳೂ ಪಕ್ಷಾತೀತರಾಗಿಯೇ ಕಾರ್ಯನಿರ್ವಹಿಸಬೇಕಾಗುತ್ತದೆ. ಅನೇಕ ಸಮಯ ದಲ್ಲಿ ತೀರ್ಮಾನಗಳು ತಪ್ಪು ಎನ್ನುವುದು ಗೊತ್ತಿದ್ದರೂ, ಕಾನೂನಿನ ಅನ್ವಯವೇ ನಡೆಯಬೇಕು ಎನ್ನುವ
ಕಾರಣಕ್ಕೆ ವಿಧಾನಸಭಾಧ್ಯಕ್ಷರು ಸರಕಾರದ ನಡೆಯನ್ನು ಖಂಡಿಸಿದರೂ, ಒಪ್ಪಿಗೆ ನೀಡಿರುವ ಉದಾಹರಣೆಗಳಿವೆ. ಆ
ಎಲ್ಲ ಸಮಯದಲ್ಲಿಯೂ ‘ನಿಯಮಾವಳಿ’ಗಳ ಅನ್ವಯ ಮಾತ್ರ ನಾವು ಕಾರ್ಯನಿರ್ವಹಿಸುತ್ತೇವೆ ಎನ್ನುವ
ಮಾತುಗಳನ್ನು ಹಲವು ವಿಧಾನಸಭಾಧ್ಯಕ್ಷರು ಆಡಿರುವುದು ಇಂದಿಗೂ ಸದನದ ಇತಿಹಾಸದಲ್ಲಿದೆ.

ಇನ್ನು ಸಿಎಂಗೆ ಪ್ರಾಸಿಕ್ಯೂಷನ್ ನೀಡಿರುವುದು ಹಾಗೂ ಇನ್ನುಳಿದ ಸಚಿವರ ವಿರುದ್ಧ ಕೇಳಿಬಂದಿರುವ ದೂರುಗಳಿಗೆ ಸ್ಪಷ್ಟನೆ ನೀಡುವಂತೆ ಸಿಎಸ್‌ಗೆ ಪತ್ರ ಬರೆದಿರುವ ನಡೆಗೆ ಖಂಡನೆ ಕೇಳಿಬಂದಾಗಲೆಲ್ಲ, ರಾಜ್ಯಪಾಲರಿಗೆ ವಿವೇಚನಾಧಿ ಕಾರ’ ಬಳಸಲು ಅವಕಾಶವಿದೆ ಎನ್ನುವುದು ಬಿಜೆಪಿ ವಾದ. ಆದರೆ ಈ ವಿವೇಚನಾಧಿಕಾರವನ್ನು ಯಾವ ರೀತಿಯಲ್ಲಿ ಬಳಕೆ ಮಾಡಬೇಕು ? ಇದಕ್ಕಿರುವ ಮಾನದಂಡಗಳೇನು ಎನ್ನುವ ಬಗ್ಗೆ ಯಾವುದೇ ಸ್ಪಷ್ಟ ನೀತಿಗಳಿಲ್ಲ. ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳಲ್ಲಿಯೂ ಈ ‘ವಿವೇಚನಾಧಿಕಾರ’ದ ಬಗ್ಗೆಯೇ ಚರ್ಚೆಗಳು ನಡೆಯುತ್ತಿರುವುದರಿಂದ ಇವುಗಳ ಬಗ್ಗೆ ಒಂದು ಸ್ಪಷ್ಟನೆ ಸಿಗಬೇಕಿದೆ.

ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಸಿಕ್ಯೂಷನ್ ರದ್ದುಗೊಳಿಸುವಂತೆ ಸಲ್ಲಿಸಿರುವ
ಅರ್ಜಿಯ ತೀರ್ಪಿಗೆ ಇಡೀ ದೇಶ ಎದುರು ನೋಡುತ್ತಿದೆ. ಹಾಗೆಂದ ಮಾತ್ರಕ್ಕೆ ಈ ಪ್ರಕರಣ ಇಲ್ಲಿಗೆ ಮುಕ್ತಾಯವಾಗದೇ
ಸುಪ್ರೀಂ ಕೋರ್ಟ್‌ಗೆ ಹೋಗುವುದು ನಿಶ್ಚಿತವಾಗಿದ್ದರೂ, ಇಂದಲ್ಲವಾದರೂ ಮುಂದೊಂದು ದಿನ ರಾಜ್ಯಪಾಲರ
ವಿವೇಚಾನಾಧಿಕಾರದ ‘ಗ್ರೇ ಏರಿಯಾ’ದ ಬಗ್ಗೆ ಸ್ಪಷ್ಟ ಆದೇಶ ನ್ಯಾಯಾಲಯದಿಂದ ಬರುವ ನಿರೀಕ್ಷೆಯಿದೆ.

ಕಳೆದ 2-3 ದಶಕದ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ರಾಜಭವನ ಹಾಗೂ ಸರಕಾರದ
ನಡುವೆ ಈ ಪ್ರಮಾಣದಲ್ಲಿ ‘ಘರ್ಷಣೆ’ಯಾಗಿದ್ದು ತೀರಾ ಕಡಿಮೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ
ಯಾಗಿದ್ದ ಸಮಯದಲ್ಲಿ ಹಂಸರಾಜ್ ಭಾರದ್ವಾಜ್ ಹಾಗೂ ಸರಕಾರದ ನಡುವೆ ಸಂಘರ್ಷ ನಡೆಯುತ್ತಿತ್ತು. ಅದಾದ
ಬಳಿಕ ಬಂದ ಬಹುತೇಕ ರಾಜ್ಯಪಾಲರು ಅನವಶ್ಯಕವಾಗಿ ಸರಕಾರದ ‘ದೈನಂದಿನ’ ಕಾರ್ಯಗಳಿಗೆ ತಲೆಹಾಕು ತ್ತಿರಲಿಲ್ಲ.

ಥಾವರ್ ಚಂದ್ ಗೆಹ್ಲೋಥ್ ಅವರು ರಾಜ್ಯಪಾಲರಾಗಿ ಬಂದ ಬಳಿಕ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ಮೊದಲ ಒಂದು ವರ್ಷ ರಾಜಭವನ- ಸರಕಾರದ ನಡುವೆ ಯಾವುದೇ ಸಂಘರ್ಷವಿರಲಿಲ್ಲ. ನೆರೆಯ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿ ರಾಜಭವನದೊಂದಿಗೆ ಸರಕಾರದ ಘರ್ಷಣೆಗಳು ನಡೆಯು ತ್ತಿದ್ದರೂ ಕರ್ನಾಟಕದಲ್ಲಿ ‘ಸಾಮರಸ್ಯ’ವಿತ್ತು. ಆದರೆ ಮುಡಾ ಪ್ರಕರಣದೊಂದಿಗೆ ಶುರುವಾದ ಸಂಘರ್ಷ ಇದೀಗ ವಿಧೇಯಕವನ್ನು ತಡೆಹಿಡಿಯುವ, ರಾಜ್ಯಪಾಲರಿಗಿರುವ ಕುಲಪತಿಗಳ ನೇಮಕದ ಅಧಿಕಾರ ಹಿಂಪಡೆಯುವ ತನಕ ಬಂದು ನಿಂತಿದೆ.

ಅಲ್ಲಿಗೇ ನಿಲ್ಲದ ಈ ಗೊಂದಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಷ್ಟೇ ಅಲ್ಲದೇ, ಸಚಿವ ಸಂಪುಟದಲ್ಲಿಯೂ ರಾಜ್ಯಪಾಲರ ನಡೆಯನ್ನು ಅಧಿಕೃತವಾಗಿ ‘ಖಂಡಿಸುವ’ ನಿರ್ಣಯ ಕೈಗೊಳ್ಳುವ ಲೆಕ್ಕಾಚಾರದಲ್ಲಿ ಸರಕಾರವಿರುವು ದನ್ನು ಗಮನಿಸಿದರೆ ಸಂಘರ್ಷ ಕಡಿಮೆಯಾಗುವುದು ಕನಸು ಎನ್ನುವುದು ಸ್ಪಷ್ಟ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದ ರಾಜಕೀಯ ಪರಿಸ್ಥಿತಿ ವಿಭಿನ್ನವಾಗಿದೆ. ಅದರಲ್ಲಿಯೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ‘ದ್ವೇಷದ ರಾಜಕೀಯ’ ಹೆಚ್ಚಾಗಿರಲಿಲ್ಲ (ಬೇರೆ ರಾಜ್ಯದವರು ನಮ್ಮ ರಾಜಕೀಯ ನಡೆಯನ್ನು ‘ಹೊಂದಾಣಿಕೆ ರಾಜಕೀಯ’ ಎನ್ನುವುದು ಬೇರೆ ಮಾತು). ಆದರೆ ಹೊಂದಾಣಿಕೆ ರಾಜಕೀಯ ಆರೋಪದ ಹೊರತಾಗಿಯೂ ಕರ್ನಾಟಕದಲ್ಲಿ ‘ಉತ್ತಮ’ ವಾತಾವರಣವಿತ್ತು ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಅದರಲ್ಲಿಯೂ ರಾಜ್ಯ ಸರಕಾರ ಹಾಗೂ ರಾಜಭವನದ ನಡುವೆ ಕೆಲ ಸಮಯ ಹೊರತುಪಡಿಸಿದರೆ, ಬಹುಪಾಲು ಸಂಘರ್ಷವಿರಲಿಲ್ಲ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯದಲ್ಲಿ ಶುರುವಾಗಿರು ವಂತೆಯೇ ಕರ್ನಾಟಕದಲ್ಲಿಯೂ ಶುರುವಾಗಿರುವ ‘ಸಂಘರ್ಷ’ ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಒಂದು ವೇಳೆ ತಪ್ಪಾಗಿದ್ದೇ ನಿಜವಾದರೆ, ಎಲ್ಲ ರಾಜಕಾರಣಿಗಳ ಮೇಲೆ ಬಂದಿರುವ ಆರೋಪಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು, ಈ ರೀತಿ ಬುಟ್ಟಿಯೊಳಗಿನ ಹಾವಿನ ರೀತಿ ತಮಗೆ ಬೇಕಾದ ಸಮಯದಲ್ಲಿ ತೋರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆಯಲ್ಲ. ಈ ರೀತಿ ದ್ವೇಷದ ರಾಜಕೀಯ ಪ್ರಕರಣಗಳನ್ನು ದಾಖಲಿಸುವ ಸಂಸ್ಕೃತಿ ಎರಡೂ ಕಡೆಯೂ ನಿಂತರೆ ಉತ್ತಮ. ಇಲ್ಲದಿದ್ದರೆ ಮುಂದೊಂದು ದಿನ ದಶಕದ ಹಿಂದೆ ಉತ್ತರ ಭಾರತದ ರಾಜ್ಯಗಳಲ್ಲಿ ಕಂಡಿದ್ದ ‘ರಾಜಕೀಯ ಕಿತ್ತಾಟ’ವನ್ನು ಕರ್ನಾಟಕದಲ್ಲಿ ಕಾಣಬೇಕಾಗುತ್ತದೆ!

ಇದನ್ನೂ ಓದಿ: Ranjith H Ashwath Column: ಒಡೆದ ಕನ್ನಡಿಯಾದ ರಾಜ್ಯ ಬಿಜೆಪಿ