ಗುಣಗಾನ
ಜಯಪ್ರಕಾಶ್ ಪುತ್ತೂರು
ವ್ಯಕ್ತಿಯೊಬ್ಬರ ಅಂತಃಶಕ್ತಿಯ ಮೆರುಗು ಪ್ರಥಮ ನೋಟದಲ್ಲಿಯೇ ವ್ಯಕ್ತವಾಗುವುದು ಒಂದು ಸಾಮಾನ್ಯ ಅನುಭವ. ಸುದ್ದಿ ಲೋಕದ ಹಿರಿಯರಾಗಿದ್ದ ಇನ್ನ ರಾಮಮೋಹನ್‌ರಾವ್ ಅವರಿಗೆ ಈ ಮಾತು ಚೆನ್ನಾಗಿ ಒಪ್ಪುತ್ತಿತ್ತು. ಸ್ವಲ್ಪ ದಢೂತಿ ದೇಹದ, ಮೋಹಕ ನಗೆಯ, ಅಚ್ಚುಕಟ್ಟಾದ ದಿರಿಸಿನ ರಾವ್, ಇಳಿವಯಸ್ಸಿನಲ್ಲಿಯೂ ನಲವತ್ತರ ಹುಮ್ಮಸ್ಸನ್ನು ಹೊಂದಿದ್ದರು. ಅದು
ಅವರ ಶಕ್ತಿಗೆ ವಿಶೇಷ ಹೊಳಪು ನೀಡಿತ್ತು.
ದೇಶದ ರಾಜಧಾನಿ ದೆಹಲಿಯಲ್ಲಿ ಹಲವು ದಶಕಗಳವರೆಗೆ ಉನ್ನತ ಸ್ಥಾನಗಳನ್ನು ಅಲಂಕರಿಸಿದ ಹೆಗ್ಗಳಿಕೆ ಹೊಂದಿದ್ದ ರಾವ್ ಅವರು ತಮ್ಮ ಒಡನಾಟಕ್ಕೆ ದಕ್ಕುತ್ತಿದ್ದ ಯುವಕರಲ್ಲಿ ತೋರುತ್ತಿದ್ದ ವಿಶ್ವಾಸ, ವಾತ್ಸಲ್ಯಕ್ಕೆ ಎಣೆಯೇ ಇರಲಿಲ್ಲ. ಕಾರ್ಕಳದಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ರಾವ್ ಅವರು, ಮುಂದೆ ಮಂಗಳೂರಿನ ಸೇಂಟ್ ಅಲೋಷಿಯಸ್ ಹಾಗೂ ಸರಕಾರಿ ಕಾಲೇಜಿನಲ್ಲಿ ಪದವಿ, ಮುಂಬೈನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರ ಜತೆಗೆ ನ್ಯಾಯಶಾಸ್ತ್ರದ ಪದವಿಯನ್ನು ತಮ್ಮದಾಗಿಸಿ ಕೊಂಡಿದ್ದು ಹೆಮ್ಮೆಯ ಸಂಗತಿ.
ತರುವಾಯದಲ್ಲಿ ಇಂಡಿಯನ್ ಇನ್ ಫಾರ್ಮೇಷನ್ ಇಲಾಖೆ ಯಲ್ಲಿ ಸೇವೆಗೆ ಸೇರಿಕೊಂಡು, ೧೯೫೮ರಿಂದ ೧೯೭೩ರವರೆಗೆ
ರಕ್ಷಣಾ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ತಮ್ಮ ಪಾಲಿನ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿ ದರು ರಾವ್. ೧೯೮೧ರಿಂದ ೧೯೯೮ರವರೆಗೆ ಅದೇ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು ಇವರ ಹೆಗ್ಗಳಿಕೆ. ತಮ್ಮ ಸೇವಾವಧಿಯಲ್ಲಿ ಘಟಿಸಿದ ೧೯೬೫ರ ಮತ್ತು ೧೯೭೧ರ ಯುದ್ಧಗಳ ವೇಳೆ ಸುದ್ದಿ ಮಾಧ್ಯಮದ ಸಾರಥ್ಯ ವಹಿಸಿದ್ದ ರಾವ್, ಕೆಲ ಕಾಲ ಆಕಾಶವಾಣಿಯ ಸುದ್ದಿ ವಿಭಾಗದ ಮುಖ್ಯಸ್ಥರಾಗಿಯೂ, ಇಂಡಿಯನ್ ಮತ್ತು ಫಾರಿನ್ ರಿವ್ಯೂ ಪತ್ರಿಕೆಯ ಮುಖ್ಯ ಸಂಪಾದಕರಾಗಿಯೂ ಕರ್ತವ್ಯವನ್ನು ದಕ್ಷತೆಯಿಂದ ನಿಭಾಯಿಸಿದ್ದುಂಟು.
ಭಾರತ ಸರಕಾರದ ಮುಖ್ಯ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಆ ಇಲಾಖೆಯಲ್ಲೇ ವರಿಷ್ಠರಾಗಿ ಕಾರ್ಯನಿರ್ವಹಿಸುವ ಅವಕಾಶವನ್ನೂ ಪಡೆದರು. ಸರಕಾರಿ ಸೇವೆಯಲ್ಲಿರುವಾಗ ಇಂಥ ಸುವರ್ಣಾವಕಾಶ ಲಭಿಸುವುದು ತೀರಾ ಅಪರೂಪ. ಈ ಗುರುತರ ಹೊಣೆಗಾರಿಕೆಯನ್ನು ನಿರ್ವಹಿಸಿದ ಬಳಿಕ, ದೇಶದ ಮೂವರು ಪ್ರಧಾನಿಗಳಿಗೆ ಮಾಹಿತಿ ಸಲಹೆಗಾರರಾಗಿ ರಾವ್ ದುಡಿದಿದ್ದು ಗಮನಾರ್ಹ ಸಂಗತಿ. ನಿವೃತ್ತಿಯ ಬಳಿಕವೂ ರಾವ್ ಅವರ ಸೇವೆಯನ್ನು ಬಳಸಿಕೊಳ್ಳುವಲ್ಲಿ ನಮ್ಮ ರಾಷ್ಟ್ರ ಹಿಂದೆ ಬಿದ್ದಿಲ್ಲ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದಾಗ, ಅಲ್ಲಿ ಸರಕಾರದ ಮಾಧ್ಯಮ ಸಲಹೆಗಾರ ರಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ಕಾರ್ಯತತ್ಪರತೆಗೆ ಇನ್ನೂ ಮುಪ್ಪು ಬಂದಿಲ್ಲ ಎಂಬುದನ್ನು ತೋರಿಸಿಕೊಟ್ಟ ರಾವ್, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ವೇಳೆ ಶ್ರೀನಗರದಲ್ಲಿ ಕೇಂದ್ರ ಸರಕಾರದ ವಾರ್ತಾ ಸಲಹೆಗಾರರಾಗಿ ಕೂಡ ಕಾರ್ಯ ನಿರ್ವಹಿಸಿದರು.
೧೯೯೬-೯೭ರ ಅವಧಿಯಲ್ಲಿ ಟ್ರಿನಿಡಾಡ್‌ನಲ್ಲಿ ಭಾರತ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸಿ, ಅಲ್ಲಿ
ಮಹಾತ್ಮ ಗಾಂಧಿ ಸಾಂಸ್ಕೃತಿಕ ಸಹಕಾರ ಕೇಂದ್ರವನ್ನು ಸ್ಥಾಪಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ ರಾವ್, ಪ್ರಸಾರ ಭಾರತಿ ನಿಗಮದಲ್ಲಿಯೂ ಸಲಹೆಗಾರರಾಗಿ ದುಡಿದರು. ಒಟ್ಟಾರೆ ಹೇಳುವುದಾದರೆ, ಜೀವನದುದ್ದಕ್ಕೂ ಕಾರ್ಯಪ್ರವೃತ್ತರಾಗಿದ್ದ ಸಾಧಕರು ಇನ್ನ ರಾಮಮೋಹನ ರಾವ್.
ರಾವ್ ತಮ್ಮ ಸೌಮ್ಯ ಸ್ವಭಾವ ಮತ್ತು ಸೌಜನ್ಯದಿಂದ, ಮೃದುಮಾತುಗಳಿಂದ ಎಲ್ಲರ ಪ್ರೀತಿಪಾತ್ರರೆನಿಸಿದ್ದರು. ಜನರು
ಅವರನ್ನು ಅಪರೂಪದ ವ್ಯಕ್ತಿತ್ವದವರಾಗಿ ಮತ್ತು ವಿಶಾಲಹೃದಯಿಯಾಗಿ ಗುರುತಿಸುವುದಕ್ಕೆ ಇದೇ ಕಾರಣ. ಕಿರಿಯರಿಗೆ ಸೂಕ್ತ ಮಾರ್ಗದರ್ಶನ ಹಾಗೂ ನೆರವಿನ ಹಸ್ತ ಚಾಚುವುದರಲ್ಲಿ ಸದಾ ಮುಂದಿದ್ದ ರಾವ್‌ರನ್ನು, ಅವರು ಎಲ್ಲೇ ಹೋದರೂ ಶಿಷ್ಯಗಣ
ಸುತ್ತುವರಿಯುತ್ತಿತ್ತು. ಸಜ್ಜನಿಕೆಯ ಆಗರವೇ ಆಗಿದ್ದ ರಾವ್ ಪ್ರಚಾರಕ್ಕಾಗಿ ಎಂದೂ ಹಂಬಲಿಸಿದವರಲ್ಲ. ಓರ್ವ ಚಿಂತಕರಾಗಿದ್ದು ತಮ್ಮ ನಿಲುವುಗಳಿಗೆ ಬದ್ಧರಾಗಿದ್ದುಕೊಂಡೇ ಸೇವೆ ಮಾಡುವ ಮನೋಭಾವದವರಾಗಿದ್ದ ರಾವ್ ಅವರಿಗೆ ಸಾರ್ವಜನಿಕ ಸಂಪರ್ಕದ ಛಾಪು ರಕ್ತದಲ್ಲಿಯೇ ಅಡಗಿತ್ತು. ತಮ್ಮ ವೃತ್ತಿಕ್ಷೇತ್ರದ ಶಿಷ್ಯರನ್ನೆಲ್ಲಾ ಅವರು ಪ್ರೀತಿಯಿಂದ ‘ಅಳಿಯಂದಿರು’ ಎಂದೇ ಕರೆಯುತ್ತಿದ್ದುದು ವಾಡಿಕೆ!
ರಾವ್ ಬೆಂಗಳೂರಿಗೆ ಒಮ್ಮೆ ಬಂದಿದ್ದಾಗ ನಾನು ಭೇಟಿಮಾಡಿದ್ದೆ. ಆಗ ಅವರು ವ್ಯಕ್ತಪಡಿಸಿದ ವಿಚಾರಧಾರೆ ಹೀಗಿತ್ತು: ‘ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಿಷಯಗಳ ಮೇಲೆ ಲೇಖನ ಬರೆಯುವ ಕಾರ್ಯ ತುಂಬಾ ಕಷ್ಟದ್ದು; ಏಕೆಂದರೆ ಈ ಕೆಲಸಕ್ಕೆ ರಾಷ್ಟ್ರೀಯ ರಕ್ಷಣಾ ಧೋರಣೆಯ ಅರಿವು ಮತ್ತು ವಿಷಯ ಸಂಪನ್ನತೆ ಬೇಕು. ರಕ್ಷಣಾ ವಿಷಯಗಳಿಗೆ ಸಂಬಂಧಿಸಿದ ಬಹುತೇಕ ಹೆಸರಾಂತ ಲೇಖಕರು ವಿವಿಧ ಯುದ್ಧಗಳ ವೇಳೆ, ಸೈನಿಕ ಕಾರ್ಯಾಚರಣೆಗಳಲ್ಲಿ ಸ್ವತಃ ಪಾಲ್ಗೊಂಡವರಾಗಿದ್ದಾರೆ. ಹೀಗಾಗಿ ಯುದ್ಧದ ನೈಜ ಅನುಭವ ಅವರ ಲೇಖನಗಳಲ್ಲಿ ಮೂಡಲು ಸಾಧ್ಯವಾಯಿತು. ಆ ಬಳಿಕ ರಕ್ಷಣಾ ಇಲಾಖೆಯು ತನ್ನ
ಪ್ರಯೋಗಾಲಯ ಮತ್ತು ಇತರ ಸಂಸ್ಥೆಗಳಿಗೆ ವಾರ್ತಾ ಮಾಧ್ಯಮದ ಪ್ರತಿನಿಽಗಳು ವರ್ಷಕ್ಕೊಮ್ಮೆ ಭೇಟಿ ನೀಡುವುದಕ್ಕೆ ಅನುವು ಮಾಡಿಕೊಡಲು ಆರಂಭಿಸಿತು.
ಯುದ್ಧದ ವರದಿ ಮಾಡುವ ವೇಳೆ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು; ಏಕೆಂದರೆ ಈ ಸಂದರ್ಭದಲ್ಲಿ ಸತ್ಯವಲ್ಲದ ಸುದ್ದಿ ಗಳೇ ಪ್ರಚಾರ ಪಡೆಯುವ ಸಾಧ್ಯತೆ ಹೆಚ್ಚು. ಮುಖ್ಯವಾಗಿ, ಪತ್ರಕರ್ತರಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಿಚಾರಗಳನ್ನು ಅರಿತುಕೊಳ್ಳುವ ಆಸಕ್ತಿ ಹಾಗೂ ವಸ್ತುನಿಷ್ಠ ವಿವೇಚನೆಯ ದೃಷ್ಟಿ ಇರಬೇಕು. ಈ ಹಿಂದೆ ನಡೆದ ಇರಾಕ್ ಯುದ್ಧದ ವರದಿ ಗಾರಿಕೆಯು ಇಲೆಕ್ಟ್ರಾನಿಕ್ ಮಾಧ್ಯಮ ವಲಯದ ಹಿರಿಮೆಯನ್ನು ಎತ್ತಿತೋರಿಸಿದೆ. ಯುದ್ಧದ ಕ್ಷಣ ಗಳನ್ನು ಮನೆಯ ಹಜಾರಕ್ಕೆ ತಂದಿಡುವ ಸಾಧ್ಯತೆ ಹೀಗೆ ಬೆಳೆದರೂ, ಒಂದು ವಿಚಾರ ಇಲ್ಲಿ ಮುಖ್ಯ. ಯಾವುದನ್ನು ತೋರಿಸಬೇಕು, ಯಾವುದನ್ನು ತೋರಿಸ ಬಾರದು ಎಂಬುದನ್ನು ನಿರ್ಣಯಿಸುವ ವಿವೇಚನಾ ಸಾಮರ್ಥ್ಯ ಇಲ್ಲಿ ಖಂಡಿತ ಬೇಕು.
ರಾಷ್ಟ್ರೀಯ ಚಿಂತನೆಯ ಹಿತದೃಷ್ಟಿಯಿಂದ ಇದು ತೀರಾ ಅಗತ್ಯ’. ರಾವ್ ಅವರ ಈ ಅಭಿಮತಕ್ಕೆ ಕಿವಿಯಾದ ನಂತರ, ‘ನಿಮ್ಮ
ಅನುಭವಗಳನ್ನು ಪುಸ್ತಕ ರೂಪದಲ್ಲೇಕೆ ನೀವು ದಾಖಲಿಸಬಾರದು?’ ಎಂದು ಕೇಳಿದೆ. ಅದಕ್ಕೆ ರಾವ್ ಕೊಟ್ಟ ಉತ್ತರ ಹೀಗಿತ್ತು: ‘ನನ್ನ ಬಹಳಷ್ಟು ಮಿತ್ರರು ಈ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ಈ ಕೆಲಸದ ಬಗ್ಗೆ ನನಗೆ ಮುಜುಗರ. ಏಕೆಂದರೆ, ನನ್ನ ಸೇವಾ ಶಾಸ್ತ್ರಯಲ್ಲಿ ಹಲವು ರಾಷ್ಟ್ರೀಯ ನಾಯಕರು ನನ್ನಲ್ಲಿ ಅಖಂಡ ವಿಶ್ವಾಸವಿಟ್ಟು ವಿಚಾರ-ವಿನಿಮಯ ಮಾಡಿಕೊಂಡಿ ದ್ದಾರೆ; ಈ ವಿಶ್ವಾಸವನ್ನು ನಾನು ಖಂಡಿತ ಮುರಿಯಲಾರೆ’. ಆದರೆ ಸುದ್ದಿ ಮಾಧ್ಯಮದ ಅವರ ಅಭಿಮಾನಿಗಳು, ‘ಈ ನಿರ್ಧಾರವನ್ನು ರಾವ್ ಎಂದು ಮುರಿಯುತ್ತಾರೆ?’ ಎಂದು ಕಾಯುತ್ತಿದ್ದುದುಂಟು.
ಏಕೆಂದರೆ, ಒಂದು ವೇಳೆ ರಾವ್ ಅವರು ಲೇಖನಿ ಹಿಡಿದು, ತಮ್ಮೊಳಗಿನ ಅನುಭವಗಳಿಗೆ ಅಕ್ಷರದ ರೂಪ ನೀಡಿದರೆ ಅದು ಈ ಕ್ಷೇತ್ರದ ಅತ್ಯಮೂಲ್ಯ ಗ್ರಂಥವಾಗಬಹುದು ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು. ಅಂತೆಯೇ, ಕೆಲ ವರ್ಷ ಕಳೆದ ಬಳಿಕ ಈ ನಿರೀಕ್ಷೆಯು ನಿಜವಾಗಿಯೂ ಕಾರ್ಯರೂಪಕ್ಕೆ ಬಂದಿದ್ದು ಬಹು ಸಂತೋಷದ ವಿಚಾರ. ‘ಕಾನ್‌ಫ್ಲಿಕ್ಟ್ ಕಮ್ಯುನಿಕೇಷನ್’ ಎಂಬ
ಹೊತ್ತಗೆ ಪ್ರಕಟವಾಗಿ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆಯಾದಾಗ ಅವರ ಎಲ್ಲ ಶಿಷ್ಯರೂ ಪಾಲ್ಗೊಂಡಿದ್ದು ಒಂದು ಅನುಪಮ ಕ್ಷಣವಾಗಿತ್ತು.
ಹಿಂದೂಸ್ತಾನಿ ಸಂಗೀತದೆಡೆಗೆ ಅತೀವ ಪ್ರೇಮ ಬೆಳೆಸಿಕೊಂಡಿದ್ದ ರಾವ್ ಅವರು ಬಿಡುವಿನ ವೇಳೆಯಲ್ಲಿ ಭೀಮಸೇನ್ ಜೋಷಿ, ಕುಮಾರ ಗಂಧರ್ವ ಅವರ ಗಾಯನವನ್ನು ಆಲಿಸುತ್ತಿದ್ದರು. ಓದುವುದು ಅವರ ಇನ್ನೊಂದು ಪ್ರಮುಖ ಹವ್ಯಾಸವಾಗಿತ್ತು. ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದಂತೆ ನಾಡಿನ ಪತ್ರಿಕೆಗಳಲ್ಲಿ ಅವರು ಹಲವಾರು ಲೇಖನಗಳನ್ನು ಬರೆದಿದ್ದೂ ಉಂಟು. ೨೦೧೭ರ ಮೇ
೧೩ರಂದು ೮೩ನೇ ವಯಸ್ಸಿನಲ್ಲಿ ರಾವ್ ತಮ್ಮ ಅಭಿಮಾನಿಗಳನ್ನೆಲ್ಲ ಅಗಲಿದರು. ಆದರೆ ಅವರ ಜೀವನೋತ್ಸಾಹ ಯುವಕರಿಗೆ ಯಾವತ್ತೂ ಸ್ಪೂರ್ತಿದಾಯಕ.
(ಲೇಖಕರು ಮಾಜಿ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ, ಎಡಿಎ ಮತ್ತು ಡಿಆರ್‌ಡಿಒ)