ಬಸವ ಮಂಟಪ
ರವಿ ಹಂಜ್
ಭೂಮಿ, ವಾಯು, ವರುಣ, ಅಗ್ನಿ, ಆಕಾಶ ಮುಂತಾದ ಶಕ್ತಿಗಳಿಗಲ್ಲದೆ ಹಲವಾರು ದೇವರುಗಳಿಗೆ ವ್ಯಕ್ತಿರೂಪ ಕೊಟ್ಟ
ರೂಪಾಲಂಕಾರ ಸಾಹಿತ್ಯಪ್ರಿಯ ಭಾರತೀಯನಂತೆಯೇ ಮನುಸ್ಮೃತಿಯಲ್ಲಿ ಇಂದು ನ್ಯಾಯಾಂಗ, ರಾಜ್ಯಾಂಗ ಎನ್ನುವ Governing Body ಎಂಬ ಅಂದಿನ ಆಡಳಿತಾಂಗಕ್ಕೆ ಮನು ಅಂಗರೂಪಿ ‘ಪುರುಷ ರೂಪಾಲಂಕಾರ’ ಕೊಟ್ಟಿದ್ದಾನೆ.
ಈ ರೂಪಾಲಂಕಾರದಲ್ಲಿ ತಲೆಯು ಆಡಳಿತದ ಸಾಂವಿಧಾನಿಕ ನೀತಿ, ನಿಯಮಗಳನ್ನು ರೂಪಿಸುವ ರಾಜ್ಯಾಂಗ/ನ್ಯಾಯಾಂಗ ಪರಿಣತ ವಿದ್ಯೆಯ ಸಂಕೇತವಾಗಿದೆ. ಭುಜಗಳು ಸೇನೆ, ರಾಷ್ಟ್ರ ರಕ್ಷಣೆಯ ಭುಜಬಲದ ಸಂಕೇತವಾಗಿ, ಹೊಟ್ಟೆ/ಸೊಂಟದ ಭಾಗವು ದೇಶವನ್ನು ಪೋಷಿಸುವ ಆರ್ಥಿಕತೆಯ ವಾಣಿಜ್ಯ/ಭೂಸಂಪತ್ತು/ ಕುಶಲಕಲೆಗಳ ಸಂಕೇತವಾಗಿದೆ. ಕಾಲುಗಳು ದೇಶವನ್ನು ನಡೆಸುವ ಕಾರ್ಮಿಕಶಕ್ತಿಯ ರೂಪವಾಗಿವೆ.
ಇದೇ ರೀತಿಯಾಗಿ ವೀರಶೈವವು ಜೀವಾತ್ಮಸೂಚಕ ಎನ್ನುವ ಪಂಚಕೋನ ಪ್ರಣವವನ್ನು ಹೀಗೆ ವರ್ಣಿಸಿದೆ: “ಪಂಚ ಕೋನದ ಮೇಲಿನ ಶೃಂಗ ಕೋನವು ಶಿರಸ್ಸನ್ನು, ಮೇಲಿನ ಎಡ-ಬಲಬದಿಯ ಕೋನಗಳು ಎರಡು ಭುಜ ಗಳನ್ನು, ಮಧ್ಯದ ಕೇಂದ್ರವು ಹೃದಯವನ್ನು, ಕೆಳಗಿನ ಎಡಬಲಬದಿಯ ಕೋನಗಳು ಕಾಲುಗಳನ್ನು ಸಂಕೇತಿಸಿ, ಶಾಂಭವಿ ಮುದ್ರೆಯಲ್ಲಿ ಧ್ಯಾನಕ್ಕೆ ಕುಳಿತ ವ್ಯಕ್ತಿಯ ಸೂಚಕವಾಗಿದೆ. ಇಷ್ಟಲಿಂಗ ಸೂಚಕವಾದ ಪಂಚಕೋನ ಪ್ರಣವವನ್ನು, ಲಿಂಗವನ್ನು ಅಂಗೈಯಲ್ಲಿಟ್ಟುಕೊಳ್ಳುವ ಮೊದಲು ಅಂಗೈಯಲ್ಲಿ ಹಾಗೂ ಪೂಜೆಗೆ ಕುಳಿತುಕೊಳ್ಳುವ ಪೀಠದ ಮೇಲೆ ಬರೆಯಬೇಕು”.
ಹೀಗೆ ವೈಯಕ್ತಿಕ ಶ್ರೀಸಾಮಾನ್ಯನ ಆತ್ಮಲಿಂಗವು ಬ್ರಹ್ಮಾಂಡದ ಪರಮಾತ್ಮನಾದ ಪರಮೇಶ್ವರನೊಂದಿಗೆ ಸಂಯೋಗ ಗೊಂಡು ಅಲೌಕಿಕ ಲಿಂಗಾಂಗ ಸಾಮರಸ್ಯವನ್ನು ಹೊಂದುತ್ತದೆ. ಈ ಅಲೌಕಿಕ ಆಧ್ಯಾತ್ಮಿಕ ತತ್ವದಂತೆಯೇ ಲೌಕಿಕ ಪ್ರಜೆಯು (ತಲೆ, ಭುಜ, ಹೊಟ್ಟೆ ಮತ್ತು ಕಾಲುಗಳನ್ನು ಹೊಂದಿರುವ ಯಾನೆ ಬ್ರಾಹ್ಮಣ/ಕ್ಷತ್ರಿಯ/ವೈಶ್ಯ/ಶೂದ್ರವೆಲ್ಲ ವನ್ನೂ ತನ್ನ ಹೊಂದಿರುವ) ಆಡಳಿತಾತ್ಮಕವಾಗಿ ಸಮಾಜದೊಂದಿಗೆ ಸಾಮರಸ್ಯ ಸ್ಥಾಪಿಸುತ್ತಾನೆ. ಈ ವೀರಶೈವ ಪಂಚಕೋನ ಪ್ರಣವ ನಿಯಮವನ್ನೇ ಲಿಂಗಾಯತ ಪ್ರತ್ಯೇಕ ಧರ್ಮ ಎಂದ ಮಾತೆ ಮಹಾದೇವಿ ಮತ್ತು ಲಿಂಗಾನಂದ ಸಹ “ಅಪ್ಪಿ ಅನುಮೋದಿಸಿ ಬೋಧಿಸಿದ್ದಾರೆ” ಎಂಬುದು ಗುರುತು ಹಾಕಿಕೊಳ್ಳಬೇಕಾದ ಅಂಶ!
ಹೀಗೆ ಆಧ್ಯಾತ್ಮಿಕವಾದ ಜೀವಾತ್ಮ, ಮನುವಿನ ಪುರುಷರೂಪ ರೂಪಾಲಂಕಾರಗಳು ಅಧ್ಯಾತ್ಮ-ಆಡಳಿತ ಎರಡನ್ನೂ
ಬೋಧಿಸುವ ಮಾರ್ಗವಾಗಿವೆ. ಇದನ್ನು ರೂಪಾಲಂಕಾರದ ಆಡಳಿತ ಸೂತ್ರವಾಗಿಯಾಗಲಿ ಮತ್ತು ಅಧ್ಯಾತ್ಮದ
ಶಾಸ್ತ್ರವಾಗಿಯಾಗಲಿ ನೋಡದ ಸ್ವತಂತ್ರ ಭಾರತದ ಸಾಂವಿಧಾನಿಕ ಶಕ್ತಿಯ ವಿದ್ಯಾವಂತ ಭಾರತೀಯ ಮಾತ್ರ ಅಜ್ಞಾನಿ ಅನರ್ಥವನ್ನೇ ಸೃಷ್ಟಿಸಿಬಿಟ್ಟಿದ್ದಾನೆ. ಸಾಹಿತ್ಯಿಕ ರೂಪಕ, ಸಂಕೇತ, ಉಪಮೆ, ಅಲಂಕಾರ, ಉತ್ಪ್ರೇಕ್ಷೆ, ನವರಸಗಳ ಹೂರಣದ ಸೃಜನಶೀಲ ಸಾಹಿತ್ಯವನ್ನೇ ಓದಿ ಮೆಚ್ಚಿ ವಿಮರ್ಶಿಸಿ ಅದರ ವಿದ್ಯಾಪರಿಣತಿ ಹೊಂದಿದ ಭಾಷಾ ಪಂಡಿತ ರೆಲ್ಲ ಸಾಮಾಜಿಕ ವಿಜ್ಞಾನ, ಮಾನವಿಕ, ಇತಿಹಾಸದ ಸಂಶೋಧಕರಾಗಿಯೂ ಇತ್ತ ಸಂಶೋಧನೆ ಗಾಗಲೀ ಸಾಹಿತ್ಯ ಕ್ಕಾಗಲೀ ಸಲ್ಲದೆ ‘ಮಡಿವಾಳನ ಸೊಣಗ’ರಾಗಿದ್ದೇವೆಂದು ಸ್ವಯಂ ನಿರೂಪಿಸಿ ಬಿಟ್ಟಿದ್ದಾರೆ.
ಇರಲಿ, ಗಾಂಧಿಯವರು ಮನುಸ್ಮೃತಿಯ ಸತ್ಯಾನುಶೋಧದ ಬಗ್ಗೆ ಏನೂ ಮಾಡದಾದರೆ, ಅಂಬೇಡ್ಕರ್ ಸತ್ಯಾನು ಶೋಧ ಮಾಡಿಯೂ ಏನೂ ಮಾಡದಾದರು! ನೆಲೆ ನಿಲ್ಲದ ಮುಸ್ಲಿಂ ದಾಳಿಯಿಂದ ಉಂಟಾದ ಹುಟ್ಟಿನಿಂದ ಜಾತಿ, ನೆಲೆಯೂರಿದ ಮುಸ್ಲಿಂ ಆಡಳಿತದಿಂದ ಉಂಟಾದ ಸಾಮಾಜಿಕ ಶ್ರೇಣೀಕರಣದ ತಾರತಮ್ಯ ಮತ್ತು ಆಸ್ಪೋಟಕವಾಗಿ ವಿಸ್ತರಣೆಗೊಂಡ ಮಹಿಳಾ ಶೋಷಣೆ, ನಂತರ ಬ್ರಿಟಿಷರಿಂದ ಉಂಟಾದ ಜನಾಂಗೀಯ ತಾರತಮ್ಯ ಮತ್ತು ಅಸ್ಪೃಶ್ಯತೆ ಯಂಥ ಅನಿಷ್ಟಗಳ ಸ್ಪಷ್ಟ ಅರಿವಿದ್ದೂ ಅಂಬೇಡ್ಕರ್ ಅದನ್ನು ಸಮಾಜಕ್ಕೆ ತಿಳಿ ಹೇಳಲಾರದಷ್ಟರ ಮಟ್ಟಿಗೆ ಜನರು ಮನುಸ್ಮೃತಿಯಲ್ಲಿಲ್ಲದ ಮೌಢ್ಯಗಳು ಅದರಲ್ಲಿ ಇವೆ ಎಂದು ನಂಬಿಬಿಟ್ಟಿದ್ದರು. ಅದನ್ನು ಮೀರಿ ತಿಳಿ ಹೇಳುವ ಅಥವಾ ಸ್ಪಷ್ಟತೆಯನ್ನು ಸಂವಿಧಾನದ ಮೂಲಕ ಹೇರುವ ಅವಕಾಶವಿದ್ದೂ ಅದನ್ನು ಹೇರುವ ಅಥವಾ ತಿಳಿ ಹೇಳುವ ಬದ್ಧತೆಯನ್ನು ಅಂಬೇಡ್ಕರ್ ತೋರಲಿಲ್ಲ.
ಇದಕ್ಕಿಂತ ಮಿಕ್ಕಿದ ತಾರ್ಕಿಕ ವಿಶ್ಲೇಷಣೆಯು ಇಲ್ಲಿ ‘ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ’ ಎಂಬ ಕವಿವಾಣಿ ಯಂತೆ ಸತ್ಯಾನ್ವೇಷಣಾ ಸಂಶೋಧನೆಯ ಜಿಜ್ಞಾಸೆಯ ನೈತಿಕಸ್ಮೃತಿಗೆ ಬಿಟ್ಟ ವಿಷಯ. ವಚನಗಳು 12ನೇ ಶತಮಾ ನದ ಶರಣರ ಚರ್ಚೆಗಳ ದಾಖಲೆಯೆನ್ನುವ ಪ್ರಾಥಮಿಕ ಮಾಹಿತಿಯಿದ್ದೂ, ಇತಿಹಾಸಜ್ಞ ಮಾನ್ಯ ದಾಖಲೆಗಳು ಕಾಳಾಮುಖ ವೀರಶೈವ ಲಿಂಗಾಯತ ಒಂದೇ ಎಂದರೂ ಮತ್ತು ವಚನಗಳ ದಾಖಲಾತಿಯ ಒಂದೇ ಒಂದು ಮೂಲ ಓಲೆಗರಿ ಈವರೆಗೆ ಸಿಗದೇ ಕೇವಲ ಪೌರಾಣಿಕ, ಸೃಜನಶೀಲ ಸಂಕಥನಗಳ ಆಧಾರದ ಮೇಲೆ ಹೇಗೆ ಲಿಂಗಾಯತ ಸ್ವತಂತ್ರ ಧರ್ಮ ಎಂಬ ನಿರ್ವಾತವನ್ನು ಕಟ್ಟಲಾಗಿದೆಯೋ ಅದೇ ರೀತಿ ಮನುಸ್ಮೃತಿಯಲ್ಲಿ ಇಲ್ಲದ ಅಂಶಗಳ ಆಧಾರದಲ್ಲಿ ಸಂವಿಧಾನದ ಪ್ರಮುಖ ಹಿಂದೂ ಅಂಶಗಳನ್ನು ನಿರ್ವಾತದಿಂದಲೇ ರೂಪಿಸಲಾಯಿತು. ಈ ಮೂಲವಾಗಿಯೇ ಭಾರತದ ಸಾಮಾಜಿಕ ಸಂಶೋಧನೆಗಳ ಅಧ್ವಾನ ರಾಷ್ಟ್ರವ್ಯಾಪಿಯಾದದ್ದು ಎಂದು ಎದ್ದು ಗಾಣುತ್ತದೆ.
ನ್ಯಾಯ ತರ್ಕಶಾಸ್ತ್ರದ ಜಗತ್ತಿನ ಪ್ರಪ್ರಥಮ ‘ವಿಶ್ಲೇಷಣಾ ಸೂತ್ರ’ವನ್ನು ಸಂಶೋಧಕರು “ಒರೆಯ ಕಟ್ಟುವೆ,
ನಿಗಳನಿಕ್ಕುವೆ, ಬೆನ್ನ ಬಾರನೆತ್ತುವೆ, ಮೂಗ ಕೊಯಿವೆ” ಎಂದು ರೋಷಾವೇಶದಿಂದ ತಟ್ಟಿ, ಕಟ್ಟಿ, ಚಚ್ಚಿ, ಇರಿದು, ಕುಯ್ದು ಮಕಾಡೆ ಮಲಗಿಸಿದ ಮೇಲೆ ಎಲ್ಲವೂ ಅಧ್ವಾನವಲ್ಲವೇ! ಹಾಗಾಗಿ ಸ್ವತಂತ್ರ ಭಾರತದಲ್ಲಿ ಬ್ರಿಟಿಷರು ರೂಪಿಸಿದ್ದ ಮುಸ್ಲಿಮೇತರ (ಹಿಂದೂ) ಕಾನೂನು ಮತ್ತು ಮುಸ್ಲಿಂ ಕಾನೂನುಗಳು ಹೆಚ್ಚು ಕಡಿಮೆ ಯಥಾವತ್ತಾಗಿ
ಮುಂದುವರಿದುಕೊಂಡು ಬಂದವು. ಅದಲ್ಲದೇ ಬ್ರಿಟಿಷ್ -ಪ್ರಣೀತ ಅಸ್ಪೃಶ್ಯತೆ ಮತ್ತು ಮನುಸ್ಮೃತಿಗಳು ಸೃಷ್ಟಿಸಿದ್ದ
ವಿಸ್ಮೃತಿ, ಭ್ರಾಂತಿಗಳಿಗೆ ಒಳಗಾಗಿ ವಿಕಾರ ರೂಪ ತಾಳಿ ಅಸ್ಪೃಶ್ಯತೆಯ ದಮನಕ್ಕೊಳಗಾಗಿದ್ದ ಜನತೆಯ ಕಕ್ಕುಲಾತಿಗೆ
ಮೀಸಲಾತಿಯನ್ನು ಅಳವಡಿಸುವ ಅಂಬೇಡ್ಕರರ ಸದಾಶಯದ ಉದ್ದೇಶವೇ ಇಲ್ಲದ ಮನುಸ್ಮೃತಿಯನ್ನು ಪರೋಕ್ಷ ವಾಗಿ ಸಂವಿಧಾನದೊಳಗೆ ಸೇರಿಸಿತು.
ಹೀಗೆ ಭಾರತದ ಇತಿಹಾಸದುದ್ದಕ್ಕೂ ಕಸದಬುಟ್ಟಿಯಲ್ಲಿದ್ದ ಮನುಸ್ಮೃತಿ ಗ್ರಂಥವು ಸ್ವತಂತ್ರ ಭಾರತದ ವ್ಯವಸ್ಥೆಯ ಅಧಿಕೃತ ಅನಭಿಷಿಕ್ತ ಸಾಂವಿಧಾನಿಕ ಸರ್ವಾಧಿಕಾರಿಯಾಯಿತು. ಈ ಮೂಲಕ ಮನುಸ್ಮೃತಿಯನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪರೋಕ್ಷವಾಗಿ ಜಗತ್ತಿನ ಬಹುದೊಡ್ಡ ಮನುವಾದಿಯಾಗಿಬಿಟ್ಟರು!
ಇಂದು ಮನುಸ್ಮೃತಿಯನ್ನು ತೀವ್ರವಾಗಿ ದ್ವೇಷಿಸುವ ಮನುವಾದಿಗಳೇ ಜಾತ್ಯತೀತ ಭವ್ಯ ಭಾರತದ ನವ್ಯ ಕುಲೀನ
ಚಿಂತಕ, ಬುದ್ಧಿಜೀವಿ, ಉದಾರಜೀವಿಗಳಾಗಿ ಹೊಮ್ಮಿದ್ದಾರೆ. ಮೀಸಲಾತಿ, ಜಾತೀಯತೆ ಬೇಡ ಎನ್ನುವವರೇ ಅತೀವ
ಮನುಸ್ಮೃತೀಯರು ಎಂದಾಗಿದೆ. ಎಲ್ಲವೂ ಅಯೋಮಯ. ಎಲ್ಲವೂ ತಿರುವುಮುರುವು!
ಬ್ರಿಟಿಷ್ ಕಾರಕೂನ ಉತ್ಪಾದನಾ ಶಿಕ್ಷಣ ವ್ಯವಸ್ಥೆ, ಪಟ್ಟಭದ್ರ ಹಿತಾಸಕ್ತಿ ಮತ್ತು ಹೊಸ ಭಾರತೀಯ ನಾಯಕತ್ವದ ಪ್ರಭಾವಗಳೇ ಸ್ವತಂತ್ರ ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮನುಸ್ಮೃತಿಯನ್ನು ಸಾಂವಿಧಾನಿಕವಾಗಿ ಅಳವಡಿಸಿದ ಪ್ರಭಾವದಿಂದ ಸಂಶೋಧನೆಗಳನ್ನು ತಿರುವುಮುರುವು ಮಾಡಿಟ್ಟವು. ಇಂಥ ಪಟ್ಟಭದ್ರ ಹಿತಾಸಕ್ತಿಯ ಬುನಾದಿಯ ಕಾರಣವೇ ಕಲ್ಯಾಣ ಕ್ರಾಂತಿಯನ್ನು ಸಂಪೂರ್ಣ ತಿರುವು ಮುರುವು ಅರ್ಥೈಸಿ ಮನುಸ್ಮೃತಿಯ ‘ಹುಟ್ಟಿನಿಂದ ಜಾತಿ’ ಯು ಸನಾತನವಾಗಿದ್ದಿತು. ಬಸವಣ್ಣ ಇದರ ವಿರುದ್ಧ ಹೋರಾಡಿದ್ದ ಎಂದೆ ಸಂಕಥನ ಮಾಡಿಟ್ಟ ಖ್ಯಾತಿ ನಮ್ಮೆಲ್ಲ ‘ಮಡಿವಾಳನ ಸೊಣಗ’ ಸಂಶೋಧಕರ ಸಂಶೋಧನಾ ಶಕ್ತಿ! ಒಂದೆರಡು ಶತಮಾನದ ಹಿಂದಿನ ಬ್ರಿಟಿಷ್ ಇತಿಹಾಸ ವನ್ನೇ ಅರಿಯದ ಈ ನವಸಂಶೋಧನಾ ಶಕ್ತಿ 12ನೇ ಶತಮಾನದ ಇತಿಹಾಸವನ್ನು ಹೇಗೆ ತಾನೇ ಸಶಕ್ತವಾಗಿ ಅರಿಯ ಬಲ್ಲದು?!
ಐತಿಹಾಸಿಕ ಅರಾಜಕತೆ/ರಾಜಪ್ರಭುತ್ವ/ರಾಜಕೀಯ/ ಸಾಮಾಜಿಕ ಪರಿಸ್ಥಿತಿಯಲ್ಲಿ ಸಂಖ್ಯಾಬಲ ಅವಶ್ಯವಾಗಿ ಬೇಕಿತ್ತು, ಹಾಗಾಗಿ ಧರ್ಮ/ಪಂಥ ವಿಕಾಸಗೊಳ್ಳುತ್ತ/ಆಕ್ರಮಿಸುತ್ತಾ/ ವಿಸ್ತರಿಸುತ್ತಾ ಸಾಗಿದ್ದವು. ಧರ್ಮವೆಂಬುದು ಜೀವನ ರೀತಿಯನ್ನು ಸುಧಾರಿಸಲು ಮತ್ತು ಸಂಘಟಿತರಾಗಲು ಒಂದೊಮ್ಮೆ ಬೇಕಾಗಿದ್ದ ಸಾಧನ. ಆಧುನಿಕ ಜಗತ್ತಿನಲ್ಲಿ ಇದರ ಅಗತ್ಯವಿಲ್ಲದೆಯೂ ರೀತಿನೀತಿಗಳಿನುಗುಣವಾಗಿ ಆಯಾ ದೇಶ/ಪ್ರಾಂತ್ಯಗಳ ಸಂವಿಧಾನ, ಕಾನೂನುಗಳಿಗೆ ತಕ್ಕಂತೆ ಬದುಕಿ ಬಾಳಬಹುದು. ಆಚರಿಸುವವನ ಮನೆಗೆ ಸೀಮಿತವಾಗಬೇಕಿದ್ದ ಧರ್ಮ ಇಂದು ಅಧಿಕೃತವಾಗಿ ಸಾಂವಿಧಾನಿಕವಾಗಿ ಸಾರ್ವತ್ರಿಕವಾಗಿರುವುದು ಪ್ರಜಾಪ್ರಭುತ್ವದ ಅಣಕವೆನಿಸಿದರೂ ಅಣಕವಲ್ಲ!
ಏಕೆಂದರೆ ಪ್ರಜಾಪ್ರಭುತ್ವದ ಸಂಖ್ಯಾಬಲದ ಆಸೆಯೇ ಈ ಧಾರ್ಮಿಕ ದುಃಖಕ್ಕೆ ಮೂಲ. ಇಂಥ ಸುದೀರ್ಘ ಪರಂಪರೆಯ ಇತಿಹಾಸವನ್ನು ಯಾರೋ ಹಿತಾಸಕ್ತರು ಕೇಳಿದರೆಂದು ಓರ್ವ ರಾಜಕಾರಣಿ ಮತ್ತವನ ಗಾಂಪ ಆಸ್ಥಾನ ವಿದ್ವಾಂಸರು ಅಳಿಸಿ ಲಿಂಗಾಯತ ಎಂಬುದು ಬೇರೆಯದೇ ಆದ ಧರ್ಮ ಎಂದು 21ನೇ ಮಾಹಿತಿ ತಂತ್ರಜ್ಞಾನದ ಶತಮಾನದಲ್ಲಿಯೂ ಷರಾ ಬರೆದು ಸಾಂವಿಧಾನಿಕ ತೀರ್ಪು ಕೊಡುತ್ತಾರೆಂದರೆ ಶೋಧಗಂಗಾ ದಲ್ಲಿರುವ ಇನ್ನೆ 5,60,745 ಥೀಸಿಸುಗಳ ಸಂಶೋಧನೆಗಳು ಯಾವ ಮಟ್ಟಿಗಿನ ಮನುಸ್ಮೃತಿಯ ವಿಸ್ಮೃತಿಗೊಳ ಗಾಗಿರಬಹುದು ಎಂದು ಅಂದಾಜು ಮಾಡಿಕೊಳ್ಳಿ ಎಂದಷ್ಟೇ ಷರಾ ಬರೆಯಬೇಕಾಗುತ್ತದೆ.
ಇನ್ನು ವಚನಗಳಲ್ಲಿಲ್ಲದ ಲಿಂಗಾಯತ ರಾಜಕಾರಣವನ್ನು ಉಂಬಳಿಯಾಗಿ ಪಡೆದು ಅಂಬಲಿ ಕಂಬಳಿಗೆ ತೊತ್ತಾಗಿ
ಬಳಸುವುದು ಯಾವ ಕಾಯಕ ಲಿಂಗವಂತ ದಾಸೋಹ ಸೂತ್ರ ಎಂಬ ನೈತಿಕತೆಯ ಘನಲಿಂಗ ಪ್ರಶ್ನೆ ನನ್ನಂಥ
ಸರ್ವಸಂಗಪರಿಕಾಮಿಯ ಆತ್ಮವನ್ನು ಬಾಧಿಸುತ್ತಿರುವಾಗ ‘ನಮ್ಮ ನಾಡು ವಿಶ್ವದ ತತ್ವಜ್ಞಾನದ ತವರು’ ಎಂದು ಭಾಷಣ ಮಾಡುವ ವಿಭೀಷಣ ಖಾವಿಧಾರಿ ಸರ್ವಸಂಗಪರಿತ್ಯಾಗಿಗಳ ಆತ್ಮವನ್ನು ಏಕೆ ಬಾಧಿಸುತ್ತಿಲ್ಲ ಎಂಬ ರಾಷ್ಟ್ರೀಯ ಬಾಧೆ ಸದ್ಯಕ್ಕೆ ನನ್ನ ವೈಯಕ್ತಿಕ ಬಾಧೆ ಮಾತ್ರವಾಗಿದೆ!
ಒಂದು ಸುದೀರ್ಘ ಐತಿಹಾಸಿಕ ಪುರಾವೆಸಹಿತ ಇರುವ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿಯೂ ವೀರಶೈವ ಪಂಥವು ನಿರಾಕಾರವನ್ನು ನಿರಾಕರಿಸಿ ತರ್ಕ, ತಂತ್ರ, ಯೋಗಗಳನ್ನು ನಿರಾಮಯಗೊಳಿಸಿ ಕೇವಲ ಮತ್ತು ಕೇವಲ ಸಾಮಾಜಿಕ ಲೌಕಿಕವನ್ನು ಬಿಂಬಿಸುವ ಪಂಥವಾಗಿಸಿಕೊಂಡು ಅದಕ್ಕೆ ತಕ್ಕಂಥ ಅತಾರ್ಕಿಕ, ಕುತಂತ್ರ, ಕುತ್ಸಿತ ಸಂಶೋಧಕರ ಸಂಕಥನಕ್ಕೆ ತಲೆದೂಗುವ ಅನುರಕ್ತ ಕೋಲೆಬಸವಣ್ಣಗಳಂಥ ಗುರುಗಳನ್ನು ಹೊಂದಿರುವುದು ಇಂದಿನ ಅತ್ಯಂತ ಸ್ಥಿತ್ಯಂತರದ ವೈಪರೀತ್ಯದ ಸಾಕ್ಷಿ!
ಇದು ಕೇವಲ ವೀರಶೈವ ಲಿಂಗಾಯತಕ್ಕಷ್ಟೇ ಅನ್ವಯಿಸದೆ ಇಡೀ ದೇಶದ ಪರಂಪರೆಗೆ ಅನ್ವಯವೇ ಎಂಬುದು ಮನುಸ್ಮೃತಿ ಪ್ರಣೀತದಲ್ಲೂ ಸ್ಮೃತಿ ಇರಬಹುದಾದ ಓದುಗ ಧಿಃಶಕ್ತಿಗೆ ಬಿಟ್ಟ ತರ್ಕ.
ತಾರ್ಕಿಕವಾಗಿ ಅವಲೋಕಿಸಿದರೆ ಸಮಗ್ರವಾಗಿ ದೇಶದಲ್ಲಿ ಕಾನೂನಾತ್ಮಕ ಅಧಿಕೃತ ಧರ್ಮವಾಗಿ ಇರುವುದು ಇಸ್ಲಾಂ
ಮಾತ್ರ, ಹಾಗಾಗಿಯೇ ಮುಸ್ಲಿಮೇತರ ಧರ್ಮಗಳನ್ನು ಹಿಂದೂ ಎನ್ನಲಾಗಿದೆಯೇ ಹೊರತು ಅವುಗಳನ್ನು ಪರಿಶೀಲಿಸಿ ಧರ್ಮದ ಸ್ವಾಯತ್ತತೆಯನ್ನು ಈವರೆಗೆ ಕೊಟ್ಟಿಲ್ಲ. ಹಿಂದೂ ಸಂಸ್ಕೃತಿಯ ಬೌದ್ಧ, ಜೈನ, ಸಿಖ್ ಪಂಥಗಳು ಸಾಂದ ರ್ಭಿಕ ಶಿಶುಗಳಾಗಿ ಸ್ವತಂತ್ರ ಧರ್ಮಗಳಾದವೇ ಹೊರತು ಒಂದು ವಿಶ್ಲೇಷಣಾಪೂರ್ಣ ಅವಲೋಕನದಿಂದಲ್ಲ. ಈ ಎಲ್ಲಾ ಕಾರಣಗಳಿಂದಾಗಿಯೇ ಒಂದು ರೀತಿಯಲ್ಲಿ ಭಾರತವನ್ನು ಹಿಂದೂ ಸಂಸ್ಕೃತಿಯ ಮುಸ್ಲಿಂ ರಾಷ್ಟ್ರ ಎನ್ನಬಹುದು! ಅದಕ್ಕೆ ಪೂರಕವಾಗಿ ಹಿಂದೂ ಎನ್ನುವುದು ಧರ್ಮವಲ್ಲ, ಸಂಸ್ಕೃತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಧರ್ಮದ ಆಧಾರದ ಮೇಲೆಯೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಸ್ವತಂತ್ರ ಭಾರತದ ಸಾಂವಿಧಾನಿಕ ಮೂಲಭೂತ ಹಕ್ಕುಗಳಲ್ಲಿ ಒಂದಾದ ‘ಧಾರ್ಮಿಕ ಸ್ವಾತಂತ್ರ್ಯದ ಹಕ್ಕು’ ಎಂಬುದು ಇದ್ದೂ, ಬಹುಪಾಲು ಜನರು ಧರ್ಮವನ್ನು ಪಾಲಿಸುತ್ತಿದ್ದರೂ ಅವರ ಧರ್ಮಕ್ಕೆ ಧರ್ಮದ ಮಾನ್ಯತೆ ಕಾನೂನಾತ್ಮಕವಾಗಿ ಇಲ್ಲ.
ರಾಜಪ್ರಭುತ್ವಗಳಿಂದ ದಾನ ಪಡೆದ ವಕ್ ಆಸ್ತಿಗಳು ಪ್ರಜಾಪ್ರಭುತ್ವದಲ್ಲಿಯೂ ಹಾಗೆಯೇ ಇದ್ದು ದೇವಸ್ಥಾನಗಳ
ಆಸ್ತಿಗಳು ರzಗಿವೆ. ಯಾರಾದರೂ, ‘ಹಿಂದೂ ಎನ್ನುವುದು ನ್ಯಾಯಾಂಗದ ಪ್ರಕಾರ ಧರ್ಮವಲ್ಲದ ಕಾರಣ ಹಿಂದೂ
ಧಾರ್ಮಿಕ ದತ್ತಿ ಕಾನೂನು ಅಮಾನ್ಯವಲ್ಲದೆ ನ್ಯಾಯಾಂಗ ಸ್ವನಿಂದನೆಯೂ ಆಗುತ್ತದೆ. ಹಾಗಾಗಿ ಹಿಂದೂ ಧಾರ್ಮಿಕ ದತ್ತಿ ಕಾನೂನನ್ನು ಅಮಾನ್ಯಗೊಳಿಸಿ’ ಎಂದು ಮೊಕದ್ದಮೆ ಹೂಡಿದರೆ ಏನಾಗಬಹುದು ಎಂದು ನಾಡಿನ ಕಾನೂನು ತಜ್ಞರೇ ಹೇಳಬೇಕು!
ಹಾಗಾದಾಗ ವೀರಶೈವ, ಲಿಂಗಾಯತ ಅಷ್ಟೇ ಅಲ್ಲದೆ ಇರುವ ಛಪ್ಪನ್ನೈವತ್ತಾರು ಹಿಂದೂ ಮತಪಂಥಗಳ ಸ್ವಾಮಿಗಳ ಮಠಗಳು ಏನಾಗಬಹುದು? ಹಿಂದೂ ಹಿಂದುತ್ವ ಎನ್ನುವ ರಾಜಕಾರಣಿಗಳು ಏನಾಗಬಹುದು? ಏನೂ ಇಲ್ಲ, ಅರಬರ ನಾಲಿಗೆ ಹೊರಳದೆ ಅಪಭ್ರಂಶಗೊಂಡು ಹಿಂದೂ ಆದ ಸಿಂಧೂ ನಾಗರಿಕತೆಯು ಅಸಿಂಧು ಆಗುತ್ತದಷ್ಟೇ!
“ನೂರನೋದಿ ನೂರ ಕೇಳಿ ಏನು ಆಸೆ ಬಿಡದು, ರೋಷ ಪರಿಯದು. ಮಜ್ಜನಕ್ಕೆರೆದು ಫಲವೇನು ಮಾತಿನಂತೆ ಮನವಿಲ್ಲದ ಜಾತಿ ಡಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ”.
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Ravi Hunj column: ಇಲ್ಲ, ಇದು ಹೀಗೆಯೇ…