ಬಸವ ಮಂಟಪ
ರವಿ ಹಂಜ್
ಗ್ರಂಥೇತಿಹಾಸದ ಪ್ರಕಾರವಾಗಿ ವೀರಶೈವ ಪದವು ವೇದವ್ಯಾಸರು ಬರೆದಿರುವರೆನ್ನುವ ಸ್ಕಂದ ಪುರಾಣದಲ್ಲಿ, “ಯೋ ಹಸ್ತಪೀಠೇ ನಿಜಮಿಷ್ಟ ಲಿಂಗಂ ವಿನ್ಯಸ್ಯ ತಲ್ಲೀನಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಸ್ಠಹಾತ್ಮಾ| ಸಂಪೂಜ ಯತ್ತಂಗ ಸ ವೀರಶೈವಂ|” ಎಂಬ ಶ್ಲೋಕದಲ್ಲಿ ಬರುತ್ತದೆ. ಈ ಶ್ಲೋಕದ ಅರ್ಥ, “ಯಾರು ತನ್ನ ಹಸ್ತಪೀಠದಲ್ಲಿ ಇಷ್ಟಲಿಂಗವನ್ನಿಟ್ಟು ತನ್ನ ಮನಸ್ಸನ್ನು ನೆಲೆಗೊಳಿಸಿ ಬಾಹ್ಯ ಕ್ರಿಯೆಗಳನ್ನು ದೂರಮಾಡಿ ಶ್ರದ್ಧೆಯಿಂದ ಪೂಜಿಸುವನೋ ಅವನೇ ವೀರಶೈವ” ಎಂದಾಗುತ್ತದೆ.
ಸ್ಕಂದ ಪುರಾಣವನ್ನು ಬಹಳಷ್ಟು ಶತಮಾನಗಳ ಹಿಂದೆಯೇ ಬರೆದಿದೆ ಎನ್ನಲಾದರೂ ಇತಿಹಾಸತಜ್ಞರು ಲಭ್ಯ ಪುರಾವೆಗಳ ಪ್ರಕಾರ ಕ್ರಿ.ಶ. 8ನೇ ಶತಮಾನ ಎಂದು ಮಾನ್ಯ ಮಾಡಿದ್ದಾರೆ. ಹಾಗಾಗಿ ಗ್ರಂಥೇತಿಹಾಸಿಕವಾಗಿ
ವೀರಶೈವ ಪದವು 8ನೇ ಶತಮಾನದಲ್ಲಿ ಇದ್ದಿತು ಎನ್ನಬಹುದು. ವಚನಕಾರ ಸಿದ್ಧವೀರ ದೇಶಿಕೇಂದ್ರನು ತನ್ನ
ವಚನದಲ್ಲಿ ಸ್ಕಂದ ಪುರಾಣವನ್ನು ಹೀಗೆ ಉಲ್ಲೇಖಿಸಿದ್ದಾನೆ: ‘ವ್ಯಾಸನುಸುರ್ದ ಸ್ಕಂದಪುರಾಣದಲ್ಲಿಯ ಶ್ರೀಶೈಲಕಲ್ಪ
ನೋಳ್ಪುದಯ್ಯಾ. ಅಲ್ಲಿ ಸಿದ್ಧಸಾಧಕರ ಸನ್ನಿಧಿಯಿಂದರಿಯಬಹುದಯ್ಯಾ.
ಮಾಡಿದನೊಬ್ಬ ಪೂರ್ವದಲ್ಲಿ ಗೋರಕ್ಷ ಮಾಡಿದನೊಬ್ಬ ಮತ್ಸ್ಯೀಂದ್ರನಾಥ, ಮಾಡಿದರೆಮ್ಮ ವಂಶದ ಶ್ರೀಗುರು ಶಾಂತದೇವರು. ಇದು ಕಾರಣ, ಯೋಗದ ಭೇದ ಯೋಗಿಗಳಂತರಂಗದಿಂದರಿತಡೆ ಯೋಗಸಿದ್ಧಿ ಸತ್ಯ ಸತ್ಯ,
ಶ್ರೀಗುರು ತೋಂಟದಸಿದ್ಧಲಿಂಗೇಶ್ವರ”. ಸ್ಕಂದ ಪುರಾಣದಲ್ಲಿ “ಶಿವಾಶ್ರಿತೇಷು ತೇ ಶೈನಾ ಜ್ಞಾನಯಜ್ಞ ರತಾ ನರಾಃ | ಮಾಹೇಶ್ವರಾಃ ಸಮಾಖ್ಯಾ ತಾಃ ಕರ್ಮಯಜ್ಜ ರತಾ ಭುವಿ | ” ಎಂಬ ಮತ್ತೊಂದು ಶ್ಲೋಕವಿದೆ. ಅರ್ಥಾತ್ ವೀರಶೈವ ಮಾಹೇಶ್ವರರು eನಯಜ್ಞದಲ್ಲಿ, ಕರ್ಮಯಜ್ಞದಲ್ಲಿ ರತರಾಗಿರುವವರು ಎಂದು.
ಇವೇ ಶ್ಲೋಕಗಳು ಸಿದ್ಧಾಂತ ಶಿಖಾಮಣಿಯಲ್ಲಿಯೂ ಇವೆ. ವೀರಶೈವ ಪದದ ನಿವೇಚನೆಯನ್ನು ‘ವಿ’ ಎಂದರೆ ವಿದ್ಯಾ,
‘ರ’ ಎಂದರೆ ರಮಿಸುವುದು; ವೀರಶೈವ ಎಂದರೆ ಶೈವನಿದ್ಯೆಯಲ್ಲಿ ರತನಾದವನು ಎಂದು ಪಂಡಿತರುಗಳು ನಿರ್ವಚಿಸಿzರೆ. ಶಾಸನಗಳಲ್ಲಿ ವೀರಶೈವ ಪದವು ಮೊದಲ ಬಾರಿಗೆ ಕಂಡುಬರುವುದು ಕ್ರಿ.ಶ. 1261ನೆಯ ಇಸವಿಯ ಮಲ್ಕಾಪುರ ಶಾಸನದಲ್ಲಿ. ಇದರಲ್ಲಿ ಚೋಳಮಾಳವರಾಜರ ಗುರುವೂ, ವೀರಶೈವ ಕಾಕತೀಯರಾಜ ‘ಗಣಪರಿಕ್ಷ್ಮಾ ಪಾಲ ದೀಕ್ಷಾ ಗುರು’ವೂ ‘ಕಳಚುರಿಕ್ಷ್ಮಾಪಾಲದೀಕ್ಷಾಗುರು’ವೂ ಆದ ವಿಶ್ವೇಶ್ವರ ಶಿವಾಚಾರ್ಯನು ‘ಮಹೀಸುರ’ ನೆಂದೂ ವೀರಶೈವಾಚಾರ್ಯನೆಂದೂ ಉಲ್ಲೇಖನಾಗಿದ್ದಾನೆ. ಮಲ್ಕಾಪುರ ಶಾಸನದಂತೆ ವಿಶ್ವೇಶ್ವರ ಶಿವಾಚಾರ್ಯನೇ ವೀರಶೈವ ಕಾಕತೀಯ ಚಕ್ರವರ್ತಿ ಗಣಪತಿಗೆ ದೀಕ್ಷಾ ಗುರುವಾಗಿರುವಂತೆ ಕಳಚುರಿಕ್ಷ್ಮಾಪಾಲ ನಿಗೂ ದೀಕ್ಷಾ ಗುರುವಾಗಿದ್ದನು.
ಖ್ಯಾತ ಕಾಕತೀಯ ರಾಣಿ ರುದ್ರಮದೇವಿ ಇದೇ ಗಣಪತಿಯ ಮಗಳು ಎಂಬುದು ಉಲ್ಲೇಖಾರ್ಹ. ಪಾಲ್ಕುರಿಕೆ ಸೋಮನಾಥನು ಸಹ ತನ್ನ ‘ಚಾತುರ್ವೇದ ಸಾರಂ’ ಗ್ರಂಥದಲ್ಲಿ ಹರಿಯು ಶಿವನಿಗೆ ಭಕ್ತಿ ಪರವಶನಾಗಿ ತನ್ನ ಕಣ್ಣುಗಳನ್ನು ಅರ್ಪಿಸಿದ ಎಂದು ವರ್ಣಿಸುತ್ತ ವೀರಶೈವ ಎಂಬ ಪದದಿಂದ ಶೈವರನ್ನು ಕರೆದಿದ್ದಾನೆ. ಕಾಳಾಮುಖರು ಯಾನೆ ಮಹೇಶ್ವರರು ಯಾನೆ ಜಂಗಮರು ಯಾನೆ ಶಕ್ತಿಗಳು ಯಾನೆ ವೀರರು ಅವರ ಪಂಥ ವಿರೋಧಿಗಳಿಗೆ ಒಡ್ಡುತ್ತಿದ್ದ ಕಠೋರ ಸವಾಲುಗಳ ವೀರತ್ವದ ಕಾರಣಗಳಿಂದಾಗಿ ವೀರಶೈವ ಪದ ಹೆಚ್ಚು ಪರಿಣಾಮಕಾರಿಯಾಗಿ ಬಳಕೆಗೆ ಬಂದಿದೆ ಎನಿಸುತ್ತದೆ.
ವೀರಶೈವ ಪದದ ಪ್ರಾಚೀನತೆಯನ್ನು ಶಂ.ಬಾ. ಜೋಷಿಯವರು ಸಹ ವೇದಗಳ ಕಾಲಕ್ಕೆ ಒಯ್ಯುವರು. ‘ಶಿವರಹಸ್ಯ’ವೆಂಬ ಅವರ ಕೃತಿಯಲ್ಲಿ, “ನನಗೆ ತಿಳಿದಮಟ್ಟಿಗೆ ವೀರಶೈವ ಶಬ್ದದ ಮೂಲವು ಋಗ್ವೇದದಲ್ಲಿದೆ.
ರುದ್ರನು ವೃಷಭನು, ಎಂದರೆ ವೀರನು. ಆದುದರಿಂದ ಆತನ ಉಪಾಸಕರೂ ವೀರರು; ಅದರಿಂದ ಈ ಹೆಸರು.
ಹೀಗೆ ಬರಿಯ ತರ್ಕದಿಂದ ಇದನ್ನು ಎಣಿಕೆ ಹಾಕಬೇಕಾದುದಿಲ್ಲ. ‘ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ದೀರಾಯ ಪ್ರಭರಾಮಹೇ ಮತಿಃ | ಯಥಾ ಶಮಸದ್ವಿಷದೇ ಚತುಸ್ಪದೇ ವಿಶ್ವಂ ಪುಷ್ಪಂ ಗ್ರಾಮೇ ಅಸ್ಮಿನ್ನನಾತುರಂ||’, ಅಂದರೆ, ಬಲಿಷ್ಠನೂ, ಜಟಾಧಾರಿಯೂ, ವೀರಪುತ್ರರನ್ನುಳ್ಳವನೂ ಆದ ರುದ್ರನನ್ನು ಕೊಂಡಾಡುವ; ಅದರಿಂದ ಈ ಊರಿನಲ್ಲಿ ಎರಡು ಕಾಲಿನವರ ಹಾಗೂ ನಾಲ್ಕು ಕಾಲಿನವರ ಕಲ್ಯಾಣವಾಗಿ ಎಲ್ಲರೂ ನಿರೋಗಿಗಳೂ ಪುಷ್ಠರೂ ಆಗುವರು.
ಇದರ ಮುಂದಿನ ಮಂತ್ರದಲ್ಲಿಯೂ, ಬೇರೆ ಮಂಡಲಗಳಲ್ಲಿಯೂ ರುದ್ರಶಿವನು ವೀರರ ತಂದೆ, ವೀರರ ಒಡೆಯ ಎಂಬ ಮಾತುಗಳು ಅಲ್ಲಲ್ಲಿ ಬಂದಿವೆ. ಶಿವ (ರುದ್ರ) ನ ಪುತ್ರರು (ಶಿವಪುತ್ರರು) ಎಂದು ಗೌರವದಿಂದ
ಹೇಳಿ ಕೊಳ್ಳುವ ಮತ್ತು ಆ ಬಗೆಯಾದ ದೃಢಶ್ರದ್ಧೆಯಿರುವ ಶಿವಭಕ್ತರಿಗೆ ಮಾತ್ರವಲ್ಲದೆ, ಬೇರೆ ಇನ್ನಾರಿಗೂ ವೀರ
(ಶೈವ) ಎಂಬ ಹೆಸರು ಸಮರ್ಪಕವಾಗಲಾರದು.
ಕರ್ನಾಟಕದಲ್ಲಿಯೇ ಈ ವೀರರು ರುದ್ರನ ಅನುಯಾಯಿಗಳಾದ ರುದ್ರೀಯರು ಇರುತ್ತಿರುವುದರಿಂದ ಈ ನಾಡಿನ ಜನಾಂಗಗಳ ವೇದಕಾಲದ ಐತಿಹ್ಯವನ್ನು ಅರಿತುಕೊಳ್ಳಲು ಈ ಶಬ್ದವು ಬಹಳ ಉಪಯುಕ್ತವಾಗಿದೆ. ವೀರ ಬಣಂಜುಗಳು, ವೀರ ಪಂಚಾಳರು ಎಲ್ಲರೂ ರುದ್ರೀಯರೇ” ಎಂದಿದ್ದಾರೆ. ಜೋಷಿಯವರು ತಿಳಿಸಿರುವ ವೃಷಭನನ್ನೇ ಹರಿಹರನು ಶಾಪಗ್ರಸ್ತನನ್ನಾಗಿಸಿ ಧರೆಯಲ್ಲಿ ಬಸವಣ್ಣನಾಗಿ ತನ್ನ ರಗಳೆಯಲ್ಲಿ ಸೃಜಿಸಿರುವುದು ಮತ್ತು ಸೋಮನಾಥನು ತನ್ನ ಪುರಾಣದಲ್ಲಿ ವರ್ಣಿಸಿರುವುದು. ಬಸವಣ್ಣನೂ ತನ್ನ ಕೆಳಗಿನ ವಚನದಲ್ಲಿ ಅವತಾರಗಳನ್ನು ಹೀಗೆ ಖುದ್ದು ಅನುಮೋದಿಸಿದ್ದಾನೆ: “ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ
ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕ ನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವ ರನ ಮಾಡಿ, ಹೆಸರಿಟ್ಟು ಕರೆದು ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ”. ಇನ್ನು ಶಂ.ಬಾ.ರವರು ಹೆಸರಿಸಿರುವ ವೀರಬಣಂಜುಗಳೇ ವೀರಶೈವ ಬಣಜಿಗರು ಮತ್ತು ವೀರಪಂಚಾಳರೇ ವೀರಶೈವ ಪಂಚಮಸಾಲಿಗಳು ಎನ್ನಬಹುದು. ವಿಕಾಸಪಥದ ಹಾದಿಯಲ್ಲಿ ಕೃಷಿಯಲ್ಲಿ ತೊಡಗಿದ್ದ ವೀರಪಂಚಾಳರಲ್ಲಿ ಸಾಕಷ್ಟು ಜನರು ಕುಶಲಕರ್ಮಿಗಳಾದರು. ಈ ಕುಶಲಕರ್ಮಿಗಳಾಗಿದ್ದ ವೀರಪಂಚಾಳರ ಕಾರಣವಾಗಿಯೇ ಕಾಳಾಮುಖರು ದಕ್ಷಿಣಾಚಾರ ಎಂಬ ಶಿಲ್ಪಕಲಾ ವಾಸ್ತುಶಾಸ್ತ್ರವನ್ನು
ರಚಿಸಿದ್ದರು. ಈ ದಕ್ಷಿಣಾಚಾರ ಪದವೇ ದಕ್ಕನಾಚಾರ/ ಜಕ್ಕನಾಚಾರ ಎಂದು ಅಪಭ್ರಂಶಗೊಂಡು ಸಂಕಥನಗಳ
ಮೂಲಕ ವಾಸ್ತುಶಾಸವು ವ್ಯಕ್ತಿರೂಪದ ಜಕಣಾಚಾರಿ ಆಗಿದೆ.
ನಮ್ಮ ಪ್ರಭೃತಿ ಪ್ರಭಾವಶಾಲಿ ಸಂಶೋಧಕರ ದೆಸೆಯಿಂದ ಸರಕಾರ ಜಕಣಾಚಾರಿಯ ಹುಟ್ಟಿದ ದಿನವನ್ನು ಸೃಷ್ಟಿಸಿ
ಜಯಂತಿ ಘೋಷಿಸಿದೆ. ಈ ಬಗ್ಗೆ ಆಸಕ್ತರು ಖ್ಯಾತ ಇತಿಹಾಸಜ್ಞರಾದ ವಸುಂಧರಾ ಫಿಲಿಯೋಜಾ ಅವರ ಕೃತಿಗಳನ್ನು
ಗಮನಿಸಬಹುದು. “ಲಕ್ಕುಂಡಿಯಲ್ಲಿರುವ ದೇವಸ್ಥಾನಗಳ ಆವರಣಗಳು ಈ ಕಾಳಾಮುಖ ದಕ್ಷಿಣಾಚಾರದ ವಾಸ್ತು ಶಿಲ್ಪದ ಶಾಲೆಗಳಾಗಿದ್ದವು. ಇಲ್ಲಿ ನಿರ್ಮಿಸಿದ ಸಣ್ಣ ಗಾತ್ರದ ಆಕೃತಿಗಳ ದೊಡ್ಡ ಪ್ರತಿಕೃತಿಗಳೇ ಹಳೇಬೀಡು,
ಬೇಲೂರು ಮುಂತಾದ ಕಡೆ ಕೆತ್ತಲ್ಪಟ್ಟಿರುವುದು” ಎಂದು ಪುರಾತತ್ವ ಸ್ಮಾರಕಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ
ಗದಗಿನ ಅಬ್ದುಲ್ ರಜಾಕ್ ದಸ್ತಗೀರ್ ಸಾಬ್ ಕಟ್ಟಿಮನಿ ಮಾಹಿತಿ ನೀಡಿದ್ದಾರೆ. ಡೇವಿಡ್ ಲೊರೆಂಜನ್ ಅಲ್ಲದೆ ಅನೇಕ ಸಂಶೋಧಕರ ಜತೆ ಕೆಲಸ ಮಾಡಿರುವ ಖ್ಯಾತಿ ಇವರದು.
(ಮುಂದುವರಿಯುವುದು)
(ಲೇಖಕರು ಶಿಕಾಗೊ ವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Ravi Hunj Column: ಪಂಥ ಶ್ರೇಷ್ಠತೆಯ ಕಸರತ್ತಿನಲ್ಲಿ ಅಸ್ಮಿತೆಗಾಗಿ ನಡೆದ ಹೋರಾಟ