ಬಸವ ಮಂಟಪ
ರವಿ ಹಂಜ್
ಕಲಬುರ್ಗಿಯವರ ಸಂಶೋಧನೆಯು ದ್ವಂದ್ವ, ಗೊಂದಲಗಳ ಕಲಸುಮೇಲೋಗರ! ತಟಸ್ಥ ನಿಲುವಿರದ ಸಂಶೋಧಕನಲ್ಲಿ ಅಹಂ ತುಂಬಿಕೊಂಡಾಗ ಸಂಶೋಧನೆಗಳು ಹೇಗೆ ತಾಳ ತಪ್ಪಿ ಅವರ ಹಿಂದಿನ ಪುಟವು ಮುಂದಿನ ಪುಟದ ತಪ್ಪೆಂದು ರದ್ದಾಗುತ್ತದೆ ಎನ್ನುವುದಕ್ಕೆ ಇವರ ಕೃತಿಗಳು ಸಾಕ್ಷಿ.
ಪ್ರೊ.ಕಲಬುರ್ಗಿಯವರ ಇನ್ನೊಂದು ಅಧ್ಯಾಯ, ‘ಜಗದಾಚಾರ್ಯರದು ಜಾತಿಭೇದ ಸಿದ್ಧಾಂತ ಪಂಚಾಚಾರ್ಯರ ನಿಜಸ್ವರೂಪ’ದಲ್ಲಿ “ಕುಲವನರಸುವರೆ ಶರಣರಲ್ಲಿ, ಜಾತಿ ಸಂಕರವಾದ ಬಳಿಕ?’ ಎಂಬ ಶರಣ ಸಿದ್ಧಾಂತಕ್ಕೆ ವಿರುದ್ಧವಾದುದಾಗಿದೆ, ಜಗದಾಚಾರ್ಯ ಸಿದ್ಧಾಂತ. ಇವರು ಆಗ ಮಿಕ ಪರಂಪರೆಯವರಾಗಿದ್ದರೂ ಬ್ರಾಹ್ಮಣರೇ ಆಗಿರುವುದರಿಂದ ಇವರಲ್ಲಿ ವರ್ಣಭೇದ ವ್ಯವಸ್ಥೆ ಸಹಜವಾಗಿದೆ. ಈ
ಬ್ರಾಹ್ಮಣರ ಜಾತಿಭೇದ ಆಚರಣೆಗೆ ಲಿಂಗಸೂಗೂರು ತಾಲೂಕಿನ ಕರಡಿಕಲ್ಲು ಗ್ರಾಮದ 2 ಶಾಸನಗಳು (ರಾಯಚೂರು ಜಿಲ್ಲಾ ಶಾಸನಗಳು- ಲಿಂಗಸೂಗೂರು 4 ಮತ್ತು 6) ಸಾಕ್ಷಿಯಾಗಿವೆ. ಇವು 11ನೇ ಶತಮಾನದ ಉತ್ತರಾರ್ಧದ ಅಂದರೆ ಬಸವಣ್ಣನಿಗೆ ಕೆಲವೇ ವರ್ಷ
ಪೂರ್ವದ ಶಾಸನಗಳಾಗಿವೆ. ಇಲ್ಲಿಯ ತತ್ಪುರುಷಶಿವ, ಸೂಕ್ಷ್ಮಶಿವ, ಮೈಮಶಿವ ಹೆಸರುಗಳ ಮುಂದೆ ’ಶಿವ ಅಂದರೆ ಶಿವಾಚಾರ್ಯ ಪ್ರತ್ಯಯ ವಿರುವುದರಿಂದ ಇವರು ಇಂದಿನ ಪಂಚಾಚಾರ್ಯ ಪರಂಪರೆಯ ಪೂರ್ವಜರೆಂದು ಸ್ಪಷ್ಟವಾಗುತ್ತದೆ.
ಈ ಶಾಸನದಲ್ಲಿ ಸೂಕ್ಷ್ಮಶಿವ (ಸೂಕ್ಷ್ಮಶಿವಾಚಾರ್ಯ)ನು ‘ಅಂತ್ಯಜಾತಿ ಯಾರಾದೊಡವಂಗಡಿ ಬೀದಿ ಯೊಳಗೆ ಮದುವೆಯಲು ಬಂಡಿಯನೇರಿ ಬರಸಲ್ಲದು. ಬಂದನಪ್ಪಡೆ ಪನ್ನೆರಡು ಗದ್ಯಾಣ ಪೊನ್ನಂ ದಂಡವಂ ತಿ(ತೆ) ರುವರಂತಪ್ಪುದಕೆ ಶ್ರೀ ಬಲ್ಲವರಸರಾಣೆ, ಶ್ರೀ ಮದ್ರಾಜ ಗುರುದೇವರಾಣೆ’ ಎಂದು ಆಜ್ಞೆ ಹೊರಡಿಸಿರುವನು. ಅಸ್ಪೃಶ್ಯರು ಮದುವೆ ಮೆರವಣಿಗೆ ಬಂಡಿಯನ್ನು ಗ್ರಾಮದ ಅಂಗಡಿ ಬೀದಿಯಲ್ಲಿ
ತರಕೂಡದು. ತಂದರೆ 12 ಗದ್ಯಾಣ ದಂಡ ನೀಡಬೇಕೆಂಬುದು ಇಲ್ಲಿಯ ಅಭಿಪ್ರಾಯ. ಇದನ್ನು ನೋಡಿದರೆ ಈ ಶಿವಾಚಾರ್ಯರದು (ಇದರ ಮುಂದುವರಿದ ರೂಪವಾಗಿರುವ ಇಂದಿನ ಪಂಚಾಚಾರ್ಯರದು) ಅಂದರೆ ಇಂದಿನ ವೀರಶೈವ ಜಂಗಮರದು ಮೂಲತಃ ಜಾತಿಭೇದ ಪಾಲಿಸುವ ಬ್ರಾಹ್ಮಣಧರ್ಮವೆಂದು ಸ್ಪಷ್ಟವಾಗುತ್ತದೆ” ಎನ್ನುತ್ತಾರೆ. ಇಲ್ಲಿ ಪಂಚಾಚಾರ್ಯರನ್ನು ವರ್ಣಭೇದಿಗರು ಎಂದು ಆರೋಪಿಸುವ ಭರದಲ್ಲಿ ಬಸವಪೂರ್ವ ದಲ್ಲಿ ಇವರಿರಲೇ ಇಲ್ಲ ಎಂಬ ತಮ್ಮ ವಾದವನ್ನು ತಾವೇ “ಬಸವಪೂರ್ವದ ಲಿಂಗಸೂಗೂರು ತಾಲೂಕಿನ ಕರಡಿಕಲ್ಲು ಗ್ರಾಮದ ಎರಡು ಶಾಸನ”ಗಳು ಪಂಚಾಚಾರ್ಯರು ಬಸವಪೂರ್ವದಲ್ಲಿ ಇದ್ದರೆಂದು ಆಧಾರ ಕೊಟ್ಟು ಸುಳ್ಳು ಮಾಡಿಬಿಟ್ಟಿದ್ದಾರೆ.
ಅಂದ ಹಾಗೆ ಇವರು ಉಲ್ಲೇಖಿಸಿದ “ಕುಲನರಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ” ವಚನದ ಸಿದ್ಧಾಂತ ಶಿಖಾಮಣಿಯ ಮೂಲಶ್ಲೋಕ ಹೀಗಿದೆ, “ಬ್ರಾಹ್ಮಣಃ ಕ್ಷತ್ರಿಯೋ ವಾಪಿ ವೈಶ್ಯೋ ವಾ ಶೂದ್ರ ಏವ ವಾ ಅಂತ್ಯಜೋ ವಾ ಶಿವಭಕ್ತಃ ಶಿವವನ್ಮಾನ್ಮ ಏವ ಸಃ| ಶಿವಭಕ್ತಿ ಸಮಾವೇಶೇ ಕ್ವಜಾತಿ ಪರಿಕಲ್ಪನಾ ಇಂಧನೇಶ್ವಗ್ನಿ ದಗ್ಧೇಷು ಕೋ ವಾ ಭೇದಃ ಪ್ರಕೀರ್ತ್ಯತೇ||” ವಚನದ ಪೂರ್ಣಪಾಠ: “ಆವ ಕುಲದವನಾದರೇನು? ಶಿವಲಿಂಗವಿದ್ದವನೆ ಕುಲಜನು; ಕುಲನರಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ? ಶಿವಜಾತ ಕುಲೇ ಧರ್ಮಃ ಪೂರ್ವಜನ್ಮ ವಿವರ್ಜಿತಃ ಉಮಾ ಮಾತಾ ಪಿತಾ ರುದ್ರೋ ಈಶ್ವರಃ ಕುಲಮೇವಚ ಎಂದುದಾಗಿ ಒಕ್ಕುದ ಕೊಂಬೆ ನವರಲ್ಲಿ, ಕೂಸ ಕೊಡುವೆ ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣರನ್ನು”. ಚಿದಾನಂದಮೂರ್ತಿ ಆಯ್ಯ, ಆರ್.ಸಿ. ಹಿರೇಮಠ ಜಂಗಮ, ಶಂಬಾ ಜೋಶಿ
ಬ್ರಾಹ್ಮಣ ಹಾಗಾಗಿ ಅವರ ಸಂಶೋಧನೆ ಹೀಗೆ ಎಂದು ‘ಕುಲವನರಸುವ’ ಇವರ ಪರಿಯಂತೂ ಇವರ ಶಿಷ್ಯಗಣದ ಮೇಲ್ಪಂಕ್ತಿಯಾಗಿದೆ ಎಂಬುದು ಮತ್ತೊಂದು ತೌಲನಿಕ ಅಧ್ಯಯನದ ವಿಷಯ ಎಂಬಲ್ಲಿಗೆ ಲಿಂಗಿಜಂಗಮ ಲಿಂಗಾಯತದಿಂದ ಹೊರಗು ಎನ್ನುವ ವಾದ ರದ್ದಾಗುತ್ತದೆ.
ಅಧ್ಯಾಯ ‘ಜಗದ್ಗುರು-ಜಗದಾಚಾರ್ಯ’ದಲ್ಲಿ “ನಮ್ಮಲ್ಲಿ ‘ಗುರು’ ಮತ್ತು ‘ಆಚಾರ್ಯ’ವೆಂಬ ಎರಡು ವಿಭಿನ್ನ ತಾತ್ವಿಕ ಪರಂಪರೆಗಳು ಬೆಳೆದುಬಂದಿವೆ. ಇವುಗಳಲ್ಲಿ ಒಂದು ‘ಅನುಭಾವ’ದ ನಿರ್ದೇಶನದಲ್ಲಿ, ಇನ್ನೊಂದು ‘ಶಾಸ್ತ್ರ’ದ ನಿಯಂತ್ರಣದಲ್ಲಿ ಮುನ್ನಡೆಯುತ್ತವೆ. ಹೀಗಿದ್ದೂ
ಇಂದು ಈ ಎರಡೂ ಪರಂಪರೆಗಳಿಗೆ ‘ಜಗದ್ಗುರು’ ಎಂಬ ಒಂದೇ ಪದವನ್ನು ಬಳಸುತ್ತಲಿರುವುದು ಎಷ್ಟರ ಮಟ್ಟಿಗೆ ಸರಿ? ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಗುರು ಪರಂಪರೆಯವರ ‘ಗುರು’ ಶಬ್ದವನ್ನು ಆಚಾರ್ಯ ಪರಂಪರೆಯವರು ಸೆಳೆದುಕೊಂಡು, ಅವರಿಗೆ
‘ವಿರಕ್ತ’ವೆಂಬ ಹೊಸ ಶಬ್ದವನ್ನು ಪ್ರಚುರಗೊಳಿಸಿದ್ದಾರೆ.
ಇದರಿಂದಾಗಿ, ಆಚಾರ್ಯ ಪರಂಪರೆಯವರಿಗೆ ಇಂದು ಬಳಸಲಾಗುತ್ತಿರುವ ‘ಜಗದ್ಗುರು ಪಂಚಾಚಾರ್ಯ’ ಎಂಬ ಪ್ರಯೋಗದಲ್ಲಿ ಭಕ್ತಿಮಾರ್ಗ ಸೂಚಿಸುವ ಗುರು ಮತ್ತು ಕರ್ಮಮಾರ್ಗ ಸೂಚಿಸುವ ಆಚಾರ್ಯವೆಂಬ ಎರಡು ಭಿನ್ನತತ್ವಗಳು ಸೇರಿಕೊಂಡ ವೈರುಧ್ಯದೋಷ ಘಟಿಸಿದೆ.
ಹುಬ್ಬಳ್ಳಿಯಲ್ಲಿ ಜರುಗಿದ ಕೋರ್ಟ್ ವ್ಯಾಜ್ಯವೊಂದರಲ್ಲಿ ಸುಪ್ರಸಿದ್ಧ ವಕೀಲರಾಗಿದ್ದ ಶ್ರೀ ಸಿದ್ಧರಾಮಪ್ಪ ಪಾವಟೆಯವರು ಪಂಚಾಚಾರ್ಯರಿಗೆ ಜಗದ್ಗುರು ವಿಶೇಷಣ ಬಳಸಬಾರದೆಂದು ವಾದಿಸಿದುದನ್ನು ಇಲ್ಲಿ ಸ್ಮರಿಸಬಹುದು” ಎನ್ನುತ್ತಾರೆ.
ಮೊದಲನೆಯದಾಗಿ ಗುರು ಮತ್ತು ಆಚಾರ್ಯ ಎರಡೂ ಸಂಸ್ಕೃತ ಮೂಲದ ಪದಗಳು. ಒಂದು ಗ್ರಾಂಥಿಕ ಎನಿಸಿದರೆ ಇನ್ನೊಂದು ಮೌಖಿಕ ಪದ. ವೀರಶೈವರು ಜ್ಞಾನಯಜ್ಞ ಮತ್ತು ಕರ್ಮಯಜ್ಞನಿರತರು. ಇಲ್ಲಿ ಕರ್ಮ ಎಂದರೆ ಕಾಯಕ, ಕರ್ಮಸಿದ್ಧಾಂತವಲ್ಲ. ಕನ್ನಡ ಸ್ನಾತಕೋತ್ತರ
ಪದವಿಯಲ್ಲಿ ಬಂಗಾರದ ಪದಕ ಪಡೆದ ಪಂಡಿತರು ಭಾಷಾವಿಕಾಸವನ್ನು ಏಕೆ ಮರೆತರು? ಕರ್ಮ ಎಂಬುದನ್ನು ಕಾಯಕ ಎಂದು ಪರಿಗಣಿಸಿದೆ ಕರ್ಮಸಿದ್ಧಾಂತ ಎಂದು ಎಲ್ಲಿಗೋ ತಮ್ಮ ‘ನಾಥ ಸಿದ್ದಾಂತ’ ಸಂಶೋಧನೆಯನ್ನು ಏಕೆ ಕೊಂಡೊಯ್ದರು? ಒಂದೊಮ್ಮೆ ಬೆಂಗಳೂರಿನಲ್ಲಿ
‘ಏನಲೋ ಬಾರಲೋ’ ಎನ್ನುತ್ತಿದ್ದ ಜನರು ನಂತರ ಫ್ಯಾಷ ನ್ನಿಗೆ ತಕ್ಕಂತೆ ‘ಏನಮ್ಮಾ ಬಾರಮ್ಮಾ’ ಎನ್ನುವುದನ್ನು ‘ಬೆಂಗಳೂರಿಗರು ಸಾಮೂಹಿಕ ಲಿಂಗಪರಿವರ್ತನೆಗೆ ಒಳಗಾಗಿದ್ದರು’ ಎನ್ನುವ ಸಂಶೋಧನೆ ಮಂಡಿಸುವುದು ಮೂರ್ಖ ತನವಲ್ಲವೇ! ಇನ್ನು ಹುಬ್ಬಳ್ಳಿ ಕೋರ್ಟ್ ವ್ಯಾಜ್ಯದಲ್ಲಿ ಏನೇ
ವಾದಿಸಿದ್ದರೂ ಅದು ಸೋತುಹೋದ ಕಾರಣ ಜಗದ್ಗುರು ವಿಶೇಷಣ ಇಂದಿನ ವರ್ತಮಾನದಲ್ಲಿ ಜಾರಿ ಇದೆ ಎನ್ನುವುದಷ್ಟೇ ಸತ್ಯ.
ತಮ್ಮ ವಾದವನ್ನು ಮುಂದುವರಿಸುತ್ತಾ ಕಲಬುರ್ಗಿ ಯವರು, “ಪ್ರಾಚೀನ ಕಾಲದಲ್ಲಿ ಪಂಚಾಚಾರ್ಯರಿಗೆ ಮೊದಮೊದಲು ‘ಜಗದಾರಾಧ್ಯ’ ‘ಜಗದಾಚಾರ್ಯ’ ಪದಗಳನ್ನು ಬಳಸುತ್ತಲಿದ್ದ ಉದಾಹರಣೆಗಳು ಪಂ. ಕಾಶೀನಾಥಶಾಸ್ತ್ರಿಗಳ ‘ಪಂಚಾಚಾರ್ಯಪ್ರಭಾ’ ಪತ್ರಿಕೆ ಮತ್ತು
ಅವರ ಪುಸ್ತಕಗಳಲ್ಲಿ ಸಿಗುತ್ತವೆ, ಆದರೆ ಯಾವುದೋ ಕಾಲಘಟ್ಟದಲ್ಲಿ ಇವರಿಗೆ ‘ಜಗದ್ಗುರು’ ವಿಶೇಷಣವನ್ನು ಬಳಸತೊಡಗಿದರು. ಆದುದರಿಂದ, ಇನ್ನು ಮೇಲೆ ತಾತ್ವಿಕ ದೃಷ್ಟಿಯಿಂದ ವಿರಕ್ತರಿಗೆ ‘ಜಗದ್ಗುರು’ಗಳೆಂದೂ ಆಚಾರ್ಯರಿಗೆ ‘ಜಗದಾಚಾರ್ಯ’ರೆಂದೂ ಕಟ್ಟುನಿಟ್ಟಾಗಿ ಬಳಸು ವುದು ಅವಶ್ಯವಿದೆ” ಎಂದು ಆಜ್ಞೆ ಮಾಡಿದ್ದಾರೆ.
ಇವರ ಈ ಆಜ್ಞೆಯನ್ನು ಯಾರು ಪಾಲಿಸಬೇಕು? ಅಂದ ಹಾಗೆ, ಅಲ್ಲಮ ತನ್ನ ಒಂದೆರಡು ವಚನಗಳಲ್ಲಿ ಜಗದಾರಾಧ್ಯ ಎಂದು ಬಳಸಿದ್ದಾನೆ. ಅವು ಹೀಗಿವೆ: “ಹಸಿವಿಲ್ಲದೆ ಉಣಬಲ್ಲಡೆ, ಉಪಾಧಿಯಿಲ್ಲದೆ ಬೇಡಬಲ್ಲಡೆ, ಅದು ವರ್ಮ, ಅದು ಸಂಬಂಧ. ಗಮನವಿಲ್ಲದೆ ಸುಳಿಯಬಲ್ಲಡೆ, ನಿರ್ಗಮನಿ ಯಾಗಿ ನಿಲಬಲ್ಲಡೆ ಅದು ವರ್ಮ, ಅದು ಸಂಬಂಧ. ಅವರ ನಡೆ ಪಾವನ, ಅವರ ನುಡಿ ತತ್ವ, ಅವರು(ರ?) ‘ಜಗದಾರಾಧ್ಯ’ರೆಂಬೆ ಗುಹೇಶ್ವರಾ. ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯಾ. ಗಮನವಿಲ್ಲದೆ ಸುಳಿಯ ಬಲ್ಲಡೆ, ನಿರ್ಗಮನಿಯಾಗಿ ನಿಲ್ಲಬಲ್ಲಡೆ, ಅದಕ್ಕದೆ ಪರಿಣಾಮ ಅದಕ್ಕದೆ ಸಂತೋಷ. ಗುಹೇಶ್ವರಲಿಂಗದಲ್ಲಿ ಅವರ ‘ಜಗದಾರಾಧ್ಯ’ರೆಂಬೆ”. ಪ್ರೊ.ಕಲಬುರ್ಗಿಯವರು ಜಗದಾರಾಧ್ಯ ಎಂಬುದು ಪಂಚಾಚಾರ್ಯರ ಕುರಿತು ಎಂದು ಆಜ್ಞೆ ಹೊರಡಿಸಿದ ಕಾರಣ ಪಂಚಾಚಾರ್ಯರು ಅಲ್ಲಮನ ಕಾಲದಲ್ಲಿಯೂ
ಇದ್ದರು ಎಂದಾಯಿತಲ್ಲವೇ?!
ಇದು ಪ್ರೊಫೆಸರರ ದ್ವಂದ್ವ, ಗೊಂದಲ, ಕಲಸುಮೇಲೋಗರ, ಜನಾಂಗೀಯ ದ್ವೇಷ! ತಟಸ್ಥ ನಿಲುವಿರದ ಸಂಶೋಧಕನಲ್ಲಿ ದ್ವೇಷ, ಅಹಂ
ತುಂಬಿಕೊಂಡಾಗ ಸಂಶೋಧನೆಗಳು ಹೇಗೆ ತಾಳ ತಪ್ಪಿ ಅವರ ಹಿಂದಿನ ಪುಟವು ಮುಂದಿನ ಪುಟದ ತಪ್ಪೆಂದು ರದ್ದಾಗುತ್ತದೆ ಎನ್ನುವುದಕ್ಕೆ ಇವರ ಕೃತಿಗಳು ಸಾಕ್ಷಿಭೂತವಾಗಿವೆ ಎಂಬಲ್ಲಿಗೆ ಪಂಚಾಚಾರ್ಯ ಬೇರೆ ಎಂಬ ವಾದ ರದ್ದಾಗುತ್ತದೆ.
(ಮುಂದುವರಿಯುವುದು)
(ಲೇಖಕರು ಶಿಕಾಗೊ ವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Ravi Hunz Column; ನಿತ್ಯನೂತನವಾಗುತ್ತ ಸಾಗಿ ಬಂದಿರುವ ಮೂಲ ಸಂಸ್ಕೃತಿ: ವೀರಶೈವ ಸಂಸ್ಕೃತಿ