Thursday, 21st November 2024

Ravi Hunz Column: ತಮ್ಮ ವಾದವನ್ನು ಪುಷ್ಠೀಕರಿಸಲು ಜಾತಿ ಅಸ್ತ್ರವನ್ನು ಬಳಸುವವರು !

ಬಸವ ಮಂಟಪ

ರವಿ ಹಂಜ್

ಶರಣರ ಅವತಾರಗಳ ಪೌರಾಣಿಕ ಸೃಷ್ಟಿ ಮಧ್ಯಯುಗದ ಸಾಹಿತ್ಯ ಪದ್ಧತಿ. ಆದರೆ ರೇಣುಕರ ಅವತಾರಗಳು ಮಾತ್ರ ಮೂದಲಿಸಲು
ಲಾಯಕ್ಕಾದವು ಎನ್ನುವ ಇಬ್ಬಗೆಯ ತಾರತಮ್ಯ ಜಾಮದಾರರ ಬರಹದುದ್ದಕ್ಕೂ ಸ್ಪಷ್ಟವಾಗಿ ಕಾಣುತ್ತದೆ. ತಮ್ಮ ಸಂಕಥನಕ್ಕೆ ಪುಷ್ಟಿ ತುಂಬಲೆಂದೋ ಅಥವಾ ಅವ್ಯಕ್ತ ಅಭದ್ರತೆಯ ಕಾರಣಕ್ಕೋ ‘ಮುಳುಗುವ ವನಿಗೆ ಹುಲ್ಲು ಕಡ್ಡಿಯೂ ಆಸರೆ’ ಎಂಬಂತೆ ಇವರು
ತಮ್ಮ ವಾದವನ್ನು ಪುಷ್ಟೀಕರಿಸಲು ‘ಜಾತಿ’ ಅಸ್ತ್ರವನ್ನು ಬಳಸುತ್ತಾರೆ.

ಜಾಮದಾರರು, “೧೩ನೆಯ ಶತಮಾನದ ಆರಂಭದಲ್ಲಿ ‘ಬಸವರಾಜ ದೇವರ ರಗಳೆ’ಯನ್ನು ರಚಿಸಿದ ಹರಿಹರ ಮತ್ತು ‘ಸಿದ್ದೇಶ್ವರ ಪುರಾಣ’ ರಚಿಸಿದ ಅವನ ಅಳಿಯ ರಾಘವಾಂಕ ಇಬ್ಬರೂ ಶೈವ ಬ್ರಾಹ್ಮಣರು. ‘ಬಸವ ಪುರಾಣ’ಗಳನ್ನು ಬರೆದವರಲ್ಲಿ ಪಾಲ್ಕುರಿಕೆ‌ ಸೋಮನಾಥ, ಪಿಡುಪರ್ತಿ ಸೋಮನಾಥ, ನಾಗಣಾರ್ಯ ಮತ್ತು ಶಂಕರಾರಾಧ್ಯ ಇವರು ಆರಾಧ್ಯ ಬ್ರಾಹ್ಮಣರು. ಸಿಂಗಿರಾಜ, ಲಕ್ಕಣ ದಂಡೇಶ, ಭೀಮಕವಿ ಇವರೂ ಬ್ರಾಹ್ಮಣ ಪರಂಪರೆಯ ಗೋತ್ರಧಾರಿಗಳು” ಎಂದು ಇದಕ್ಕೆ ಬ್ರಾಹ್ಮಣರನ್ನು ಗುರಿ ಮಾಡುತ್ತಾರೆ.

ಶರಣರ ಅವತಾರಗಳ ವಿಷಯ ಬಂದೊಡನೆ ಪುರಾಣಗಳ ಬಗ್ಗೆ ಹೀಗೆ ಅತ್ಯಂತ ತಾರ್ಕಿಕ ವಾಗಿ ಮಾನ್ಯವೆನ್ನುವ ಅಭಿಪ್ರಾಯವನ್ನು ಮಂಡಿಸು
ತ್ತಾರೆ. ಇಲ್ಲಿ ಅತ್ಯಂತ ಪ್ರೌಢವಾಗಿ ವಿಚಾರ ಮಂಡನೆ ಮಾಡಿದ್ದಾರೆ ಎಂಬುದು ನಿಜಕ್ಕೂ ಶ್ಲಾಘನೀಯ.

ಜಾಮದಾರರು, “ಪುರಾಣಗಳ ಸಮಸ್ಯೆಗಳು- ಪುರಾಣಗಳು ಇತಿಹಾಸವಲ್ಲ. ಅವು ಕೆಲವೊಂದು ಚಾರಿತ್ರಿಕ ಘಟನೆಗಳು, ರಾಜವಂಶಗಳು ಅಥವಾ ವ್ಯಕ್ತಿಗಳನ್ನು ಆಧರಿಸಿರಬಹುದು. ಆದರೆ ಅವು ಇತಿಹಾಸ ಮತ್ತು ಧಾರ್ಮಿಕ ಕಲ್ಪನೆಗಳನ್ನು ಕಲಬೆರಕೆ ಮಾಡಿ ಬಿಟ್ಟಿವೆ. ಪುರಾಣಶೈಲಿಯ ಜೀವನ ಚರಿತ್ರೆಗಳು, ಇತಿಹಾಸದ ವಾಸ್ತವ ಸಂಗತಿಗಳನ್ನು ಕಂಡುಕೊಳ್ಳುವಲ್ಲಿ, ಇತಿಹಾಸಕಾರರಿಗೆ ಅನೇಕ ಸಮಸ್ಯೆಗಳನ್ನು ಉಂಟು
ಮಾಡುತ್ತವೆ. ಪುರಾಣಗಳು ತಮ್ಮ ನಿರೂಪಣೆಯಲ್ಲಿ ಕಲ್ಪಿತ ಪವಾಡಗಳು ಮತ್ತು ಧಾರ್ಮಿಕ ಮತಾಚರಣೆ ಗಳನ್ನು ಮಿಶ್ರಮಾಡಿ ಐತಿಹಾಸಿಕ ವಾಸ್ತವಾಂಶಗಳನ್ನು ಅಪಾರ್ಥಗೊಳಿಸುತ್ತವೆ. ಪುರಾಣ ಸಾಹಿತ್ಯ ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಚರಿತ್ರೆ ಸಾಹಿತ್ಯ ಎಲ್ಲಿ ಆರಂಭವಾಗುತ್ತದೆ ಎನ್ನುವುದನ್ನು ಖಚಿತಗೊಳಿಸಲು ಕಷ್ಟವಾಗುವಂತೆ ಮಾಡುತ್ತವೆ. ಪೌರಾಣಿಕ ಕಥೆಗಳೇ ಸತ್ಯ ಮತ್ತು ಸುಸಂಗತ ಎಂದು ಭಾವಿಸುವ ಅವಿವೇಕದ ನಂಬಿಕಸ್ಥ ಜನರ ಒಂದು ಲೋಕವನ್ನೇ ಸೃಷ್ಟಿಸುತ್ತವೆ. ರಾಣಗಳು ಸಾಮಾನ್ಯವಾಗಿ ತಮ್ಮ ಕಥಾನಾಯಕರ ಕೆಲವೊಂದು ನೈತಿಕ ಗುಣಲಕ್ಷಣ ಗಳನ್ನು ಉತ್ಪ್ರೇಕ್ಷೆ ಮಾಡುತ್ತವೆ. ಹಾಗೆ ಉತ್ಪ್ರೇಕ್ಷೆ ಮಾಡುವಾಗ ಕಟ್ಟುಕಥೆಗಳ ಪ್ರಕ್ರಿಯೆಯ ಮೂಲಕ ಖಳನಾಯಕರ ಅವಗುಣಗಳನ್ನು ಉತ್ಪ್ರೇಕ್ಷೆಮಾಡುತ್ತವೆ. ಎಷ್ಟೇ ಸಮಸ್ಯಾತ್ಮಕವಿದ್ದರೂ, ಪುರಾಣಗಳು ಜನರು ನೀತಿ ಪಥದಲ್ಲಿ ನಡೆಯುವಂತೆ ಪ್ರಭಾವ ಬೀರಲು ಪ್ರಯತ್ನಿಸುತ್ತವೆ. ರಾಮಾಯಣ ಮತ್ತು ಮಹಾ ಭಾರತ ಪುರಾಣಗಳಲ್ಲಿ ಅಂಥ ಕಥೆಗಳೇ ತುಂಬಿ ಕೊಂಡಿವೆ.

ಜಾಬಾಲಿ, ನಚಿಕೇತ, ಶ್ವೇತಕೇತ ಮತ್ತು ಬುದ್ಧನ ಜಾತಕ ಕಥೆಗಳಂಥ ಉಪನಿಷತ್ತಿನ ಕಥೆಗಳೂ ಅದೇ ವರ್ಗಕ್ಕೆ ಸೇರುತ್ತವೆ. ಭಾರತೀಯ ಚರಿತ್ರ ಕಾರರು (ಉದಾ: ಎ.ಕೆ.ಮಜುಂದಾರ್, ೧೯೧೭, ಪು. ೧೬-೧೯) ರಜಪೂತರು, ಕ್ಷತ್ರಿಯರ ಚಂದ್ರವಂಶ- ಸೂರ್ಯವಂಶ, ರಾಮ ಮತ್ತು ಕೃಷ್ಣ, ಪುರು ಮತ್ತು ಯದು ಹೀಗೆ ಭಾರತದ ನಾನಾ ರಾಜವಂಶಗಳ ಇತಿಹಾಸವನ್ನು ಗುರುತಿಸಲು ಪ್ರಯತ್ನಪಟ್ಟಿದ್ದಾರೆ. ಅವರಿಗೂ ಚರಿತ್ರೆಯಕಾಲ ಎಲ್ಲಿ ಆರಂಭವಾಗುತ್ತದೆ. ಪುರಾಣದ ಕಾಲ ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಕಂಡು ಕೊಳ್ಳಲು ಕಷ್ಟವಾಗಿದೆ. ಅದೇ ಅನುಭವ ಪಂಚಾ ಚಾರ್ಯರ ಚರಿತ್ರೆಗೂ ಅನ್ವಯಿಸುತ್ತದೆ” ಎಂದಿದ್ದಾರೆ.

ಇದು ಅತ್ಯಂತ ತಾರ್ಕಿಕವಾಗಿದೆ. ಇನ್ನು ಕೇವಲ ಪಂಚಾಚಾರ್ಯರ ಯುಗಾಂತರಗಳ ಪುರಾಣ, ಪವಾಡ, ಉದ್ಭವ ಇತ್ಯಾದಿ ಕಥೆಗಳನ್ನು
ಕೇಳಿ ನ್ಯಾಯಾಂಗವಾಗಲಿ ಜನರಾಗಲಿ ವೀರಶೈವ ಲಿಂಗಾಯತ ಒಂದೇ ಎನ್ನುವ ನಿರ್ಧಾರವನ್ನು ಕೈಗೊಳ್ಳುವುದಿಲ್ಲ. ಅವುಗಳನ್ನು ಮನರಂಜನೆಗೆ ಬಳಸಬಹುದೇ ಹೊರತು ಸಂಶೋಧನೆಗಾಗಲಿ, ಪ್ರತ್ಯೇಕ ಧರ್ಮಮಂಡನೆಗಾಗಲಿ ಅಲ್ಲ. ಹರಿಹರನ ‘ರೇವಣ
ಸಿದ್ಧ ರಗಳೆ’ಯಲ್ಲಿ ಏನಿದೆಯೋ ಅದನ್ನೇ ಪುರಾಣ ಕಥಾಕಾಲಕ್ಷೇಪ ಮಾಡಿಕೊಂಡು ಬಂದಿರುವ ಸ್ವಾಮಿಗಳ ಪೌರಾಣಿಕ ಅಭಿಪ್ರಾಯ ದಾಚೆಯ ಇತಿಹಾಸ ವನ್ನು ಪುರಸ್ಕರಿಸಿದರೆ ರೇವಣಸಿದ್ಧನೇ ರೇಣುಕ ಎನ್ನ ಬಹುದು ಮತ್ತು ಆತನ ಕಾಲವನ್ನು ಹತ್ತನೇ ಶತಮಾನ ಎನ್ನಬಹುದು. ರೇಣುಕ ಉ- ರೇವಣಸಿದ್ಧನಿಗೆ ಸಂಬಂಧಿಸಿದ ಕ್ರಿಸ್ತಶಕ ೧೧೭೬ರ ಬೈರಟ್ಟಿ ಶಾಸನ, ೧೧೮೭ರ ಸಿರಿವಾಳ ಸಿದ್ಧಲಿಂಗೇಶ್ವರ ದೇವಾಲಯ ಶಾಸನ ಮತ್ತಿತರೆ ಶಾಸನಗಳನ್ನು ಜಾಮದಾರರೇ ತಮ್ಮ ಲೇಖನದಲ್ಲಿ ಉಲ್ಲೇಖಿಸುತ್ತಾರೆ.

ಆದರೂ ವೀರಶೈವ ಬಸವಪೂರ್ವದ್ದು ಎಂದು ಒಪ್ಪುವುದಿಲ್ಲ. ಏಕೆ? ಇನ್ನು ಯಾವುದೇ ಸಂಶೋಧನಾತ್ಮಕ ವಿಚಾರಕ್ಕೆ ಡಾ.ಎಂ.ಎಂ.ಕಲಬುರ್ಗಿ ಅವರನ್ನು ತೋರಿ, “ಡಾ.ಎಂ.ಎಂ.ಕಲಬುರ್ಗಿ ಅವರಂಥ ಹಿರಿಯ ಸಂಶೋಧಕರು, ವಿಜಯನಗರ ಕಾಲದ ಸುಮಾರಿನಲ್ಲಿ ವೀರಶೈವ
ಪಂಚಪೀಠಗಳು ಒಂದೊಂದಾಗಿ ಅಸ್ತಿತ್ವಕ್ಕೆ ಬಂದವು” ಎಂದಿದ್ದಾರೆ.

“೧೬ನೆಯ ಶತಮಾನಕ್ಕೆ ಮುನ್ನ ಸಾಹಿತ್ಯ ದಲ್ಲಿ ಎಲ್ಲೂ ಪಂಚಾಚಾರ್ಯರ ಬಗೆಗೆ ಪ್ರಸ್ತಾಪವಿಲ್ಲ” ಎಂದೂ ಅವರು ಹೇಳಿದ್ದಾರೆ (ಮಾರ್ಗ-೪,
ಪು. ೨೬೨). “ಇನ್ನೋರ್ವ ಹಿರಿಯ ಸಂಶೋಧಕರಾದ ಡಾ. ಎಚ್.ತಿಪ್ಪೇರುದ್ರಸ್ವಾಮಿ ಅವರೂ ಕಲಬುರ್ಗಿ ಅವರ ಅಭಿಪ್ರಾಯವನ್ನು ಒಪ್ಪಿದ್ದಾರೆ” (೨೦೧೫, ಪು. ೩೫೬-೩೫೭) ಎನ್ನುತ್ತಾರೆ. ಆದರೆ ರೇಣುಕರು ೧೬ನೇ ಶತಮಾನದ ಸೃಷ್ಟಿ ಎನ್ನುತ್ತಾ ೧೩ನೇ ಶತಮಾನದ ಹರಿಹರನ ‘ರೇವಣಸಿದ್ಧರಗಳೆ’, ‘ಏಕಾಂತರಾಮಯ್ಯನ ರಗಳೆ’ ಮತ್ತು ೧೨ನೇ ಶತಮಾನದ ಸೋಮನಾಥನ ‘ಪಂಡಿತಾರಾಧ್ಯ ಚರಿತ್ರೆ’ಗಳ ಉದಾಹರಣೆಗಳನ್ನು ಕೊಡುತ್ತಾರೆ. ಏನೀ ದ್ವಂದ್ವ? ಏಕೀ ಗೊಂದಲ? ಈ ರೇಣುಕನುದಯದ ಕುರಿತಾದ ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನ ಹೀಗಿದೆ: “ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯವಾಗದಿರ್ದಡೆ, ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ? ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು, ಅನಾದಿಮುಕ್ತನಲ್ಲ, ಅವಾಂತರ ಮುಕ್ತರೆಂಬ ಅಜ್ಞಾನಿಗಳಿಗೆ ನಾಯಕನರಕ ತಪ್ಪದು. ಸಕಲಕೋಟಿ ಬ್ರಹ್ಮಾಂಡಕ್ಕಾಧಾರಕಾರಣವಾಗಿಯು ಸಮಸ್ತ ಲೋಕಂಗಳ ಪವಿತ್ರಕಾರಣವಾಗಿಯು ಪರಮೇಶ್ವರನ ನಿಜಚಿನ್ಮಯಮಪ್ಪ ಊರ್ಧ್ವಮುಖದಲ್ಲಿ ಚಿತ್ಕಲಾ ಸ್ವರೂಪರಪ್ಪ ರುದ್ರಗಣಂಗಳುದಯವಾದರು ನೋಡ. ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ ಮರ್ತ್ಯದಲ್ಲಿ ಅವತರಿಸಿದಡೆ, ಅದೇನು ಕಾರಣ ಉದಯವಾದರು ವಾಸನಾಗುಣವಿಲ್ಲದೆ ಎಂದು ಸಂದೇಹಿಸುವ ಅವಲಕ್ಷಣ ನಾಯ ನಾಲಗೆಯ, ಯಮದೂತರು ಕೀಳದೆ ಮಾಣ್ಬರೆ? ಇವರಿಂಗೆ ನಾಯಕನರಕ ತಪ್ಪದು ಕಾಣಾ, ಎಲೆ ಶಿವನೆ ನೀ ಸಾಕ್ಷಿಯಾಗಿ, ಮಹಾಲಿಂಗಗುರು ಶಿವಸಿದ್ಧೇಶ್ವರ
ಪ್ರಭುವೇ (ಸಮಗ್ರ ವಚನ ಸಂಪುಟ: ೧೧, ವಚನದ ಸಂಖ್ಯೆ: ೬೧).

ಅಂದರೆ ಹಿಂದೆ ಅನ್ಯಮತಸ್ಥರು ರೇಣುಕನುದಯವನ್ನು ಪ್ರಶ್ನಿಸಿದ್ದನ್ನು ಖಂಡಿಸಿದ್ದ ಇಂಥ ವಚನಗಳ ಎಳೆಯನ್ನು ಸ್ವಮತಸ್ಥರೇ ಹಿಡಿದು ಹಿಂಜಿ ಹಿಂಜಿ ಸ್ವಹಿತಕ್ಕಾಗಿ ಈಗ ದೊಡ್ಡದು ಮಾಡಿzರೆ ಎನಿಸುತ್ತದೆ. ಜಾಮದಾರರು, ಪ್ರೊ.ಕಲಬುರ್ಗಿಯೇತರ ವೀರ ಶೈವ ಸಂಶೋಧನೆಗಳನ್ನು ಒಂದು ಜಾತಿಯ ಕುರಿತಾದ ಅಸಮಾಧಾನಕ್ಕೆ ತಿರುಗಿಸುತ್ತಾರೆ ಅಥವಾ ಅವುಗಳನ್ನು ಅರೆಬೆಂದ ಲೇಖನಗಳೆಂದು ಹೀಯಾಳಿಕೆಗೆ ಈಡು ಮಾಡುತ್ತಾರೆ. ಅದು ಹೀಗಿದೆ: “… ಬಸವಣ್ಣನವರಿಗಿಂತ ಮುಂಚೆ ವೀರಶೈವ ಧರ್ಮವು ಅಸ್ತಿತ್ವದಲ್ಲಿತ್ತು ಎಂದು ವಾದಿಸುವ ವಿದ್ವಾಂಸರಲ್ಲಿ ಎರಡು ವರ್ಗಗಳಿವೆ: ವಸ್ತುನಿಷ್ಠ ಸಂಗತಿಗಳಿದ್ದರೂ, ಅವು ತಮ್ಮ ನಂಬಿಕೆಗೆ ವಿರುದ್ಧವಾಗಿವೆ ಎಂಬ ಕಾರಣಕ್ಕಾಗಿ ತಮ್ಮ ಮೊಂಡುವಾದಗಳನ್ನು ದೊಡ್ಡ ದನಿಯಲ್ಲಿ ಸಮರ್ಥಿಸುವ ಜಂಗಮ ಜಾತಿಗೆ ಸೇರಿದ ಒಂದು ವರ್ಗ. ಇವರು ನಂಬಲನರ್ಹವಾದ ಪುರಾಣಗಳು, ಮತಾಚಾರಣೆಯ ಆಗಮಗಳು ಮತ್ತು ವೈದಿಕ ಪದ್ಧತಿಗಳನ್ನು ಅವಲಂಬಿಸಿರುವವರು (ಅವರು ವೀರಶೈವಕ್ಕೆ ಮೂಲಾಧಾರವೆನ್ನುವ ಎಲ್ಲವನ್ನೂ ಶರಣರು ನೇರವಾಗಿ ನಿರಾಕರಿಸಿ ದ್ದಾರೆ).

ಈ ವರ್ಗಕ್ಕೆ ಸೇರಿದ ಪ್ರಮುಖರು ಎಂದರೆ, ಡಾ.ಆರ್.ಸಿ.ಹಿರೇಮಠ, ಡಾ. ಸಂಗಮೇಶ ಸವದತ್ತಿಮಠ, ಡಾ. ಜ.ಚ.ನಿ., ಡಾ. ಎಂ. ಚಿದಾನಂದಮೂರ್ತಿ, ಡಾ. ಎಂ.ಶಿವಕುಮಾರಸ್ವಾಮಿ, ಪಂಚಾಚಾರ್ಯರು ಮತ್ತು ಕೆಲವು ಮಠಗಳ ಸ್ವಾಮಿಗಳು. ಇನ್ನೊಂದು ವರ್ಗದ ಗ್ರಂಥಕರ್ತರಲ್ಲಿ ಅನೇಕ ವೈವಿಧ್ಯಗಳಿವೆ. ಕೆಲವರು ೧) ಅರೆಬೆಂದ ಮಹಾಪ್ರಬಂಧ ಲೇಖಕರು, ೨) ಸಂಸ್ಕೃತ ಪಂಡಿತರು, ೩) ಬಸವಣ್ಣನವರ ನಾಯಕತ್ವದಲ್ಲಿ ನಡೆದ ೧೨ನೆಯ ಶತಮಾನದ ಶರಣ ಕ್ರಾಂತಿಯ ಪೂರ್ಣ ಜ್ಞಾವಿಲ್ಲದವರು, ೪) ಪಂಚಾಚಾರ್ಯರನ್ನು ಬೆಂಬಲಿಸಿ ತಮ್ಮ ರಾಜಕೀಯ ಹಿತ ಗಳನ್ನು ಕಾಪಾಡಿಕೊಳ್ಳುವವರು, ೫) ಸೈದ್ಧಾಂತಿಕ ಆಧಾರಗಳ ಮೇಲೆ ಬಸವಣ್ಣನವರನ್ನು ದ್ವೇಷಿಸುವ ವರು ಮತ್ತು ಅಂತಿಮವಾಗಿ, ೬) ಶರಣ ಪರಂಪರೆ ಯನ್ನೇ ನಾಶಗೊಳಿಸಬೇಕೆಂದಿದ್ದ ಜಾತಿಶ್ರೇಣಿಯ ಆಧಾರದ ವರ್ಣಾಶ್ರಮ ಪದ್ಧತಿಯನ್ನು ಉಳಿಸಿ
ಕೊಂಡು ಬರುವಲ್ಲಿ ಆಸಕ್ತಿ ಇರುವವರು. ‘ವೀರಶೈವ’ ಶಬ್ದದ ಬಳಕೆಗೆ ಸಂಬಂಽಸಿದಂತೆಯೇ, ಕನ್ನಡದಲ್ಲಿ ಗಣನೀಯ ಪ್ರಮಾಣದ ಸಾಹಿತ್ಯವಿದೆ. ‘ವೀರಶೈವ ಇತಿಹಾಸ ಮತ್ತು ಭೂಗೋಳ’ ಗ್ರಂಥದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರು ಈ ವಿಷಯಕ್ಕೆ ಸಂಬಂಧಪಟ್ಟ ಅಗಾಧ ಸಾಹಿತ್ಯವನ್ನು ಪರಿಶೋಧಿಸಿದ್ದಾರೆ. ಅವರು ಹೇಳಿರುವಂತೆ ‘ವೀರಶೈವ’ ಶಬ್ದವು ೧೩೬೮ಕ್ಕಿಂತ ಮುಂಚಿನ ಯಾವ ಗ್ರಂಥಗಳಲ್ಲೂ ಬಳಕೆಯಾಗಿಲ್ಲ.
ಅದು ೧೩೬೮ರಲ್ಲಿ ಭೀಮಕವಿಯ ‘ಕನ್ನಡ ಬಸವ ಪುರಾಣ’ದಲ್ಲಿ ಮೊದಲ ಬಾರಿಗೆ ಬಳಕೆಯಾಗಿದೆ. ‘ವೀರವ್ರತಿ’ ಮತ್ತು ‘ವೀರಮಾಹೇಶ್ವರ’ ಎಂಬ ಶಬ್ದ ಗಳು ಮಾತ್ರ ಮಧ್ಯಯುಗದ ಶಾಸನಗಳು ಮತ್ತು ಸಾಹಿತ್ಯದಲ್ಲಿ ಹೆಚ್ಚಾಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.

ಆದರೆ ವೀರಶೈವರ ಪವಿತ್ರ ಗ್ರಂಥವೆನ್ನಲಾಗಿರುವ ‘ಸಿದ್ಧಾಂತ ಶಿಖಾಮಣಿ’ಯು (ಅಧ್ಯಾಯ-೫ರ ಶ್ಲೋಕ ೧೯ರಿಂದ ೨೧ರಲ್ಲಿ) ವೀರಶೈವವನ್ನು ವೀರ ಮಾಹೇಶ್ವರದಿಂದ ಪ್ರತ್ಯೇಕಿಸುತ್ತದೆ”. ದಾರರ ಮತ್ತು ಕಲಬುರ್ಗಿಯವರ ಈ ವಾದ ಸತ್ಯವೇ? ಬನ್ನಿ ನೋಡೋಣ. ಶಾಸನಗಳಲ್ಲಿ
ವೀರಶೈವ ಪದವು ಮೊದಲ ಬಾರಿಗೆ ಕಂಡುಬರುವುದು ಕ್ರಿ.ಶ.೧೨೬೧ನೆಯ ಇಸವಿಯ ಮಲ್ಕಾಪುರ ಶಾಸನ ದಲ್ಲಿ. ಇದರಲ್ಲಿ ಚೋಳಮಾಳವರಾಜರ ಗುರುವೂ, ವೀರಶೈವ ಕಾಕತೀಯರಾಜ ‘ಗಣಪರಿಕ್ಷ್ಮಾಪಾಲ ದೀಕ್ಷಾ ಗುರು’ವೂ ‘ಕಳಚುರಿಕ್ಷ್ಮಾಪಾಲದೀಕ್ಷಾಗುರು’ವೂ ಆದ ವಿಶ್ವೇಶ್ವರ ಶಿವಾಚಾರ್ಯನು ‘ಮಹೀಸುರ’ನೆಂದೂ ವೀರಶೈವಾಚಾರ್ಯನೆಂದೂ ಉಲ್ಲೇಖಿತನಾಗಿದ್ದಾನೆ. ಅಂದರೆ ಕಲಬುರ್ಗಿಯವರು ತಿಳಿಸಿದ ಗ್ರಂಥದ ಒಂದು ಶತಮಾನದ ಹಿಂದೆಯೇ ಶಿಲಾಶಾಸನದಲ್ಲಿ ವೀರಶೈವ ಪದ ಇದೆ ಎಂಬ ಕಲಬುರ್ಗಿಯವರ ವಾದ ಬಿದ್ದು ಹೋಗುತ್ತದೆ.
ಕಲಬುರ್ಗಿಯವರ ಇಂಥ ಶಿಥಿಲ ಅತಾರ್ಕಿಕ ಶೂನ್ಯ ಸಂಶೋಧನೆಗಳನ್ನು ಓರ್ವ ನಿವೃತ್ತ ಐಎಎಸ್ ಅಧಿಕಾರಿ ‘ಬುಲ್‌ಶಿಟ್’ ಎಂದು ಕಸದ ಬುಟ್ಟಿಗೆ
ಎಸೆಯದೆ ಏಕೆ ಕಣ್ಣಿಗೊತ್ತಿಕೊಂಡು ಪೂಜಿಸುತ್ತಿರು ವರು? ಇದಕ್ಕೆ ಉತ್ತರವಾಗಿ ಭಾರತ ಇತಿಹಾಸದ ಯಾವುದೇ ಸಾಮ್ರಾಟ, ಅರಸ, ಸಾಮಂತ,
ಮಾಂಡಲೀಕ, ಜಮೀನ್ದಾರನ ಆಡಳಿತದ ಭಾಗವಾಗಿರದೆ ಕಸದಬುಟ್ಟಿಯಲ್ಲಿದ್ದ ‘ಮನುಶಾಸ’ಕ್ಕೆ ಬ್ರಿಟಿಷರು ಏಕೆ ಪ್ರಾಮುಖ್ಯ ಕೊಟ್ಟು ಕಣ್ಣಿಗೊತ್ತಿಕೊಂಡು ಪೂಜಿಸಿದರು? ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಉತ್ತರ ಸ್ಪಷ್ಟವಾಗುತ್ತದೆ.

ಇದಿಷ್ಟು ಎಸ್.ಎಂ.ಜಾಮದಾರರ ಸಂಕಥನದ ವಿಶ್ಲೇಷಣೆ. ಇನ್ನು ಗೊ.ರು.ಚೆನ್ನಬಸಪ್ಪ ಎನ್ನುವ ಬಹುದೊಡ್ಡ ಸಾಹಿತಿಗಳ ಸಾಧನೆಯ ಬಗ್ಗೆ ಪತ್ರಿಕೆಗಳು ಒಂದು ಅತ್ಯಂತ ಗೌರವಾನ್ವಿತ ‘ವ್ಯಕ್ತಿತ್ವ ರೂಪ’ವನ್ನು ಕಟ್ಟಿಕೊಟ್ಟಿದ್ದವು. ಇಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳ ಮೇಲಿನ ಮೂಲ ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ಕೇವಲ ತರ್ಜುಮೆಗಾರರಾಗಿ ಚೆನ್ನಬಸಪ್ಪನವರು ಗೌರವಾರ್ಥವಾಗಿ ಕೆಲಸ ಮಾಡಿದ್ದಾರೋ ಅಥವಾ
ಮೂಲ ಲೇಖಕರ ಅಭಿಪ್ರಾಯಗಳನ್ನು ಅನುಮೋದಿಸಿ ಅನುವಾದಿಸಿದ್ದಾರೋ ಎನ್ನುವುದು ನನ್ನ ಕುತೂಹಲದ ಜಿಜ್ಞಾಸೆ.

ಶ್ರೀಯುತ ಗೊ.ರು.ರವರು ಜಾಮದಾರರ ಅಭಿಪ್ರಾಯವನ್ನು ಅನುಮೋದಿಸಿಯೇ ಈ ಅನುವಾದವನ್ನು ಮಾಡಿದ್ದಾರೆ ಎಂದು ಅವರ ಲಿಂಗಾಯತ ಪ್ರತ್ಯೇಕ ಧರ್ಮದ ಭಾಗವಹಿಸುವಿಕೆ ಯಿಂದ ದೃಢವಾಗುತ್ತದೆ. ಈ ಬರಹಗಳಲ್ಲಿನ ದ್ವಂದ್ವ, ಗೊಂದಲಗಳ ಕಡೆ ಕಿಂಚಿತ್ತೂ ಗಮನಹರಿಸದ ನಡೆ ಇವರ ಗೌರವಾನ್ವಿತ ವ್ಯಕ್ತಿತ್ವ, ಸಾಕ್ಷಿಪ್ರಜ್ಞೆ ಸಹ ನಿಜಾರ್ಥದಲ್ಲಿ ತರ್ಜುಮೆಗೊಂಡು ಅವರ ನೈಜ ವ್ಯಕ್ತಿತ್ವರೂಪ ಬಯಲಾಗಿಸಿತೇನೋ ಎಂಬ ಗೊಂದಲ ಮೂಡಿಸುತ್ತದೆ. ಹೀಗೆಂದು ಅವರ ಬಗ್ಗೆ ನಿಷ್ಠುರವಾಗಿ ಹೇಳಲು ನನ್ನಲ್ಲಿ ಯಾವುದೇ ಜಾತೀಯ, ರಾಜಕೀಯ, ಸಾಮಾಜಿಕ ಮೇಲರಿಮೆಯ, ಮೀಸಲಾತಿಯ ಕಾರಣಗಳಿಲ್ಲ. ಏಕೆಂದರೆ ಇದು ದುರಿತ ಕಾಲ, ವಾಕ್ ಸ್ವಾತಂತ್ರ ಹರಣದ ಆಡಳಿತ ಎಂದು ನಾಡಿನ ಬುದ್ಧಿಜೀವಿಗಳು ಪದೇ ಪದೆ ಹೇಳುತ್ತಿರುವ ಕಾರಣ ಹೀಗೆ ನಿರ್ಭಿಡೆಯಿಂದ ಖಂಡಿಸುವ ಜರೂರಿದೆ.

ಇನ್ನು ಸಮಾಜವನ್ನು ಒಗ್ಗೂಡಿಸಲು ಬಸವಣ್ಣ ಅಂದು ಪ್ರಯತ್ನಿಸಿದ್ದರೆ ಇವರು ಅವನ ಹೆಸರಿನಡಿಯ ಸಮಾಜವನ್ನು ವಿಭಜಿಸುತ್ತಿzರೆ. ಹಾಗಾಗಿಯೇ ಬಸವಣ್ಣನು- “ಜಜ್ಜನೆ ಜರಿದೆನು, ಜಜ್ಜನೆ ಜರಿದೆನು, ಜಜ್ಜನೆ ಜರಿದೆ ನೋಡಯ್ಯಾ, ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆ ನೋಡಯ್ಯಾ. ನಾನೊಬ್ಬನೆ ಉಳಿದೆನು, ನಾನೊಬ್ಬನೆ ಉಳಿದೆನು, ನಾನೊಬ್ಬನೆ ಉಳಿದೆ ನೋಡಯ್ಯಾ. ಕೂಡಲಸಂಗಮ ದೇವಾ, ನಿಮ್ಮ ಶರಣರನಗಲಿದ ಕಾರಣ” ಎಂದು ಸಂಗಮದೊಳಗಿನಿಂದ ಪರಿತಪಿಸುತ್ತಿದ್ದಾನೇನೋ ಎನಿಸುತ್ತಿದೆ, ಏಕೆ ಗೊತ್ತೆ? ಏಕೆಂದರೆ ಅವನೂ ಜಾಮ
ದಾರರು ಅನುಮಾನಿಸುವ, ಅವಮಾನಿಸುವ ಮತ್ತು ಬ್ರಾಹ್ಮಣನೆನ್ನುವ ಕಾಳಾಮುಖ, ವೀರಮಾಹೇಶ್ವರ ವೀರಶೈವ ಜಂಗಮನಾಗಿದ್ದನು!

(ಲೇಖಕರು ಶಿಕಾಗೊ ವಾಸಿ ಹಾಗೂ ಸಾಹಿತಿ)

ಇದನ್ನೂ ಓದಿ: column