ಬಸವ ಮಂಟಪ
ರವಿ ಹಂಜ್
‘ಹುಟ್ಟಿನಿಂದ ಜಾತಿ’ ಎಂಬುದು ಆಗಷ್ಟೇ ಅಳವಡಿಸಿಕೊಂಡದ್ದು ಎಂಬ ವಿಶ್ಲೇಷಣೆಗೆ ಪೂರಕವಾಗಿ ಅಲ್ಲಮನು ಈ ವಚನದಲ್ಲಿ ‘ಪುರಾತನ’ ಚಾರಿತ್ರ್ಯದಲ್ಲಿ ಅಂದರೆ ಹಳೆಯ ವೃತ್ತಿಯಿಂದ ಜಾತಿ ವ್ಯವಸ್ಥೆಯನ್ನು ಪುರಸ್ಕರಿಸುತ್ತಾನೆ: “ಆವ ಜಾತಿಯಾದಡೂ ಆಗಲಿ; ಪುರಾತನ ಚಾರಿತ್ರ್ಯದಲ್ಲಿ ನಡೆದು, ಗುರುಲಿಂಗ ಜಂಗಮಕ್ಕೆ ಅರ್ಥಪ್ರಾಣಾಭಿ ಮಾನಮಂ ಕೊಟ್ಟು, ಅಹಂಕಾರವಳಿದಿಹಂತಹ ಮಹಾತ್ಮರ ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಹೊದಿವೆ. ಅವರ ಪಾದರಕ್ಷೆಗಳೆರಡನೂ, ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ. ಆ ಗಣಂಗಳ ದಾಸನ ದಾಸ ನಾನು, ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ||” (ಸಮಗ್ರ ವಚನ ಸಂಪುಟ: 2, ವಚನದ ಸಂಖ್ಯೆ: 919).
ಸೊಡ್ಡಳ ಬಾಚರಸ ಸಹ ಈವರೆಗೆ ಎಲ್ಲಾ ಜಾತಿಯ ವರ ನಡುವೆ ವೈವಾಹಿಕ ಸಂಬಂಧಗಳಾಗುತ್ತಿದ್ದುದನ್ನು
ಎತ್ತಿ ಹಿಡಿದು ಜಾತಿಯೊಳಗೇ ಮದುವೆಯಾಗ ಬೇಕೆಂಬ ‘ಹುಟ್ಟಿನಿಂದ ಜಾತಿ’ಯ ಇನ್ನೊಂದು ಸ್ವರೂಪವನ್ನು ಹೀಗೆ ಪ್ರಶ್ನಿಸಿzನೆ: “ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ, ನಾಶಿಕ ಬಣಜಿಗ, ಅಧರ ಒಕ್ಕಲಿಗ, ಕರ್ಣ ಗೊಲ್ಲ, ಕೊರಳು ಕುಂಬಾರ, ಬಾಹು ಪಂಚಾಳ, ಅಂಗೈ ಉಪ್ಪಾರ, ನಖ ನಾಯಿಂದ, ಒಡಲು ಡೊಂಬ, ಬೆನ್ನು ಅಸಗ, ಚರ್ಮ ಬೇಡ, ಪೃಷ್ಠಸ್ಥಾನ ಕಬ್ಬಿಲಿಗ, ಒಳದೊಡೆ ಹೊಲೆಯ, ಮೊಣ ಕಾಲು ಈಳಿಗ, ಕಣಕಾಲು ಸಮಗಾರ, ಮೇಗಾಲು ಮಚ್ಚಿಗ, ಚಲಪಾದ ವೆಂಬ ಅಂಗಾಲು ಶುದ್ಧ ಮಾದಿಗ ಕಾಣಿರೊ! ಇಂತೀ ಹದಿನೆಂಟುಜಾತಿ ತನ್ನಲಿ ಉಂಟು.
ಇವು ಇಯೆಂದು ಜಾತಿಗೆ ಹೋರುವ ಅಜ್ಞಾನಿಗಳ ನಮ್ಮ ಸೊಡ್ಡಳದೇವರು ಮೆಚ್ಚನಯ್ಯಾ” (ಸಮಗ್ರ ವಚನ ಸಂಪುಟ: 9, ವಚನದ ಸಂಖ್ಯೆ: 812). ಚೆನ್ನಬಸವಣ್ಣ ಇನ್ನೂ ಸ್ಪಷ್ಟವಾಗಿ ‘ಹುಟ್ಟಿನಿಂದ ಜಾತಿ’ ಎಂಬುದು ಆಗಷ್ಟೇ ಹುಟ್ಟಿದ ನಿಯಮ ಎನ್ನುವಂತೆ ಅದನ್ನು ಜಾತಿ ಪರಿಕಲ್ಪನೆ ಎಂದು ಸ್ಪಷ್ಟವಾಗಿ ಹೇಳುತ್ತಾನೆ: “ಸಾಧಕದೆಸೆಯಲ್ಲಿ ಕುಲವನರಸಬಹುದಲ್ಲದೆ, ಸಿದ್ಧದೆಸೆಯಲ್ಲಿ ಅರಸಲಹುದೆ? ಹಲವು ಜಾತಿಯ ಕಟ್ಟಿಗೆಯ ಸುಟ್ಟಲ್ಲಿ ಅಗ್ನಿಯೊಂದ ಲ್ಲದೆ ಅಲ್ಲಿ ಕಟ್ಟಿಗೆಗಳ ಕುರುಹು ಕಾಂಬುದೆ? ಶಿವಭಕ್ತಸಮಾವೇಶೇ ನ ಜಾತಿಪರಿಕಲ್ಪನಾ ಇಂಧನೇಷ್ವಗ್ನಿದಗ್ಧೇಷು ಕೋ ವಾ ಭೇದಃ ಪ್ರಕೀತ್ರ್ಯತೇ ಎಂದುದಾಗಿ, ಶಿವಜ್ಞಾನಸಿದ್ಧರಾದ ಶಿವಭಕ್ತರಲ್ಲಿ ಪೂರ್ವಜಾತಿಯನರಸುವ ಅರೆಮರುಳ ರನೇನೆಂಬೆ ಕೂಡಲಚೆನ್ನಸಂಗಮದೇವಾ” (ಸಮಗ್ರ ವಚನ ಸಂಪುಟ: 3, ವಚನದ ಸಂಖ್ಯೆ: 1656).
ಹೀಗೆ ವೀರಶೈವ ಸಂಕಥನವು ವಚನ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಅನಾವರಣಗೊಳ್ಳುತ್ತದೆ. ಇಂಥ ಸ್ಪಷ್ಟ
ಚಿತ್ರಣವಿದ್ದರೂ ಇಲ್ಲಿಯವರೆಗೆ ಅದನ್ನು ಸಂಶೋಧಕರು ಏಕೆ ಕಂಡಿಲ್ಲವೋ ನಾನರಿಯೆ! ಕಾಯಕ ಮಹತ್ವ, ಸಾಮೂಹಿಕ ಲಿಂಗಧಾರಣೆ, ಶಿವದೀಕ್ಷೆ, ದಾಸೋಹದಂಥ ಸಮಾಜ, ಸಮೂಹದ ಕಾರ್ಯಕ್ರಮಗಳನ್ನು ಹಾಕಿಕೊಂಡು ಸಮರೋಪಾದಿಯಲ್ಲಿ ಪಂಥ ವಿಜಯ ಮೆರೆಯುತ್ತಿದ್ದ ಇಂಥ ಶರಣ ಸೇನೆಗೆ ತಮ್ಮ ಪಂಥದ ಹಿರಿಯರ ಹುಟ್ಟಿನಿಂದ ಜಾತಿ ನಿಯಮ ಬರಸಿಡಿಲಿನಂತೆ ಬಂದೆರಗಿರಬೇಕು.
ಹುಟ್ಟಿನಿಂದ ಮಾತ್ರ ಪಂಥ ವಿಸ್ತರಣೆಯಾದರೆ ತಮ್ಮೆ ಹೋರಾಟಗಳು, ರೂಪುರೇಷೆಗಳು, ನಂಬಿಕೆಗಳೇ
ಬುಡಮೇಲಾದಂತಾಗಿ ಈ ನವನೀತಿಯ ವಿರುದ್ಧ ಅವರೆ ಒಗ್ಗಟ್ಟಾಗಿ ಸಿಡಿದು ನಿಂತಿzರೆ. ಆ ಹಿನ್ನೆಲೆ
ಯಲ್ಲಿ ‘ಹುಟ್ಟಿನಿಂದ ಜಾತಿ’ ನಿಯಮವನ್ನು ಅವಹೇಳಿಸುವ ವಚನಗಳು ಹೀಗಿವೆ: “ಮಾಯಾಯೋನಿಯಲ್ಲಿ ಹುಟ್ಟುವ ಮರುಳ ರೆಲ್ಲರು ಮಹಾಜ್ಞಾನಿಗಳಪ್ಪರೆ? ಕಾಮವಿಕಾರಕ್ಕೆ ತಿರುಗುವ ಜೀವಗಳ್ಳರು ಅನಾದಿವಸ್ತು ವನರಿವರೆ? ಮಾತಿನಲ್ಲಿ ಮಹಾeನಿಗಳೆಂಬ ವೇಷಧಾರಿಗಳ ಕಂಡು ನಾಚುವೆ ಕಾಣಾ ಅಮುಗೇಶ್ವರಾ”- ಅಮುಗೆ ರಾಯಮ್ಮ (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 678).
ಅಕ್ಕಮಹಾದೇವಿಯು ಶೈವ ಎರಡಾಯಿತು ಎಂಬ ತನ್ನ ವಚನದಲ್ಲಿ ಶೈವಪಂಥ ಕೂಡಾ ಹುಟ್ಟಿನಿಂದ ಜಾತಿ ಯನ್ನು ಅಪ್ಪಿಕೊಂಡುದುದನ್ನು ಹೇಳಿದ್ದಾಳೆ (ವರ್ತಮಾನಕಾಲ ಸೂಚಕವನ್ನು ವಿಶೇಷವಾಗಿ ಗಮನಿಸಿ): “ಜಾತಿಶೈವ-ಅಜಾತಿಶೈವವೆಂದೆರಡು ಪ್ರಕಾರವಾಗಿಹುದಯ್ಯ ಜಾತಿಶೈವರೆಂಬವರು ಶಿವಂಗೆ ಭೋಗಸೀಯರಯ್ಯ ಅಜಾತಿಶೈವರೆಂಬ ವರು ಶಿವಂಗೆ ಕುಲಸೀಯರಯ್ಯ…” ‘ಹುಟ್ಟಿನಿಂದ ಜಾತಿ’ 12ನೇ ಶತಮಾನದ ಉತ್ತರಾರ್ಧ ದಲ್ಲಿಯೇ ಆರಂಭವಾಯಿತೆನ್ನುವುದನ್ನು ಈ ವಚನ ದೃಢ ಪಡಿಸುತ್ತದೆ.
ಇದೇ ಅಭಿಪ್ರಾಯದ ವಚನವನ್ನು ರೇಚದ ಬಂಕಣ್ಣ ಹೀಗೆ ಹೇಳಿದ್ದಾನೆ: “ಜಾತಿ ಶೈವರು ಅಜಾತಿ ಶೈವರೆಂದು ಎರಡು ಪ್ರಕಾರವಾಗಿಹರಯ್ಯಾ. ಜಾತಿ ಶೈವರೆಂಬವರು ಶಿವಂಗೆ ಭೋಗ ಸ್ತ್ರೀಯರಯ್ಯಾ. ಅಜಾತಿ ಶೈವರೆಂಬವರು ಶಿವಂಗೆ
ಕುಲಸೀಯರಯ್ಯಾ. ಜಾತಿ ಶೈವರೆಂಬವರು ಸರ್ವ ಭೋಗಂಗಳ ಬಯಸಿ ಮಾಡುವರಾಗಿ, ದ್ವಾರೇ ಯಸ್ಸ
ಚ ಮಾತಂಗೋ ವಾಯುವೇಗ ತುರಂಗಮಃ |
ಪೂರ್ಣೆಂದು ವದನಾ ನಾರೀ ಶಿವಪೂಜಾ ವಿಧೇಃ ಫಲಂಃ || ಎಂದುದಾಗಿ, ಇವು ಜಾತಿಶೈವರಿಗೆ ಕೊಟ್ಟ
ಭೋಗಂಗಳಯ್ಯಾ. ಅಜಾತಿಶೈವರು ಗುರುಲಿಂಗ ಜಂಗಮಕ್ಕೆ ತನುಮನಧನವ ನಿವೇದಿಸಿ, ಸರ್ವ
ಸೂತಕರಹಿತರಾಗಿಹರಯ್ಯಾ. ಅಹಂ ಮಾಹೇಶ್ವರ ಪ್ರಾಣೇ ಮಾಹೇಶ್ವರೋ ಮಮ ಪ್ರಾಣಃ | ತಥೈಕಂ
ನಿಷ್ಕ್ರೀಯಂ ಭೂಯಾದನ್ಯಲ್ಲಿಂಗೈಕ್ಯಮೇವ ಚ || ಇದು ಕಾರಣ, ಸರ್ವೇಶ್ವರ ಚೆನ್ನಮಲ್ಲಿಕಾರ್ಜುನ
ಯ್ಯನು ಭಕ್ತಿಕಾಯನೆಂಬೈಕ್ಯಪದವನು ಅಜಾತಿಶೈವರಿಗೆ ಕೊಡುವನಯ್ಯಾ” (ಸಮಗ್ರ ವಚನ ಸಂಪುಟ:
9, ವಚನದ ಸಂಖ್ಯೆ: 1153).
ಈ ಎಲ್ಲಾ ವಚನಗಳು ಬಹುಪಾಲು ವರ್ತಮಾನ ಕಾಲ ಸೂಚಕದಲ್ಲಿರುವುದು ಏನನ್ನು ಹೇಳುತ್ತವೆ ಎನ್ನುವುದು ಸುಸ್ಪಷ್ಟ. ಹೀಗೆ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ, ಉರಿಲಿಂಗಪೆದ್ದಿ, ಅಂಬಿಗರ ಚೌಡಯ್ಯ ಮುಂತಾದವರ ಉತ್ತರಾರ್ಧದ ವಚಗಳೆ ಕಾಯಕ ಮಹತ್ವ, ಹುಟ್ಟಿನಿಂದಾದ ಜಾತಿ, ಗೋಮಾಂಸಭಕ್ಷಕರನ್ನು ಕೀಳುಜಾತಿ ಯವರನ್ನಾಗಿ ವರ್ಗೀಕರಿಸಿದ ವರ್ಗೀಕರಣ, ಜಾತಿವ್ಯವಸ್ಥೆಗಳು ಸೃಷ್ಟಿಸಿದ ಅಸಮಾನತೆ, ಹೇರಲ್ಪಟ್ಟ ಉದ್ಯೋಗಗಳು, ಮೀಸಲಾದ ಉದ್ಯೋಗಗಳು, ಸೀಮಿತಗೊಂಡ ಅವಕಾಶಗಳು, ಕಾಯಕದಿಂದ ಅಸ್ಮಿತೆ ಕಂಡುಕೊಳ್ಳುತ್ತಿದ್ದುದು ನಿಕಾಯವಾದದ್ದು ಮುಂತಾದ ಸಾಮಾಜಿಕ ಸ್ಥಿತ್ಯಂತರಗಳ ಕುರಿತಾಗಿವೆ.
ಒಟ್ಟಾರೆ ಶರಣ ಚಳವಳಿಯನ್ನು ಹೀಗೆ ಎರಡು ಭಾಗಗಳಾಗಿ ನೋಡಬಹುದು. ಚಳವಳಿಯ ಪೂರ್ವಾರ್ಧ ಪಂಥ ವಿಸ್ತರಣೆ, ಜೈನಪಂಥ ವಿರೋಧ ವಾದರೆ, ಉತ್ತರಾರ್ಧದ ಕಲ್ಯಾಣಕ್ರಾಂತಿಯ ಭಾಗ ಆಗಷ್ಟೇ ಹೇರಿದ್ದ ಹುಟ್ಟಿನಿಂದ ಜಾತಿಯನ್ನು ವಿರೋಧಿಸುವುದಾಗಿದ್ದಿತು. ಹಾಗಾಗಿಯೇ ಕಲ್ಯಾಣ ಕ್ರಾಂತಿ ಪಂಥವೊಂದರ ಅಂತರಿಕ ಕ್ರಾಂತಿ ಯಾದರೂ ಸಾಮಾಜಿಕ ಕ್ರಾಂತಿ ಎಂದೆನಿಸುವುದು.
ಅಂಥ ಪ್ರಬಲ ಕಾರಣವಿದ್ದುದರಿಂದಲೇ ಕ್ರಾಂತಿಯೆನ್ನಿಸುವ ಸಾಮೂಹಿಕ ಸಂಘಟನೆ ಮತ್ತು ಬೆಂಬಲ ಅದಕ್ಕೆ ಸಾಧ್ಯವಾಗಿದ್ದುದು. ಹುಟ್ಟಿನಿಂದ ಜಾತಿ ಸಲ್ಲದೆಂಬುದನ್ನು ವಿರೋಧಿಸಲೆಂದೇ ಸಾಮೂಹಿಕ ಲಿಂಗ ಕಟ್ಟುವ, ಕಾಯಕವೇ ಕೈಲಾಸವೆನ್ನುವ, ಅಂತ್ಯಜರನ್ನು ಆದಿಮರೆಂಬುವ, ಊರ ಹೊರಗಿರಬೇಕೆನಿಸಿಕೊಂಡ ವರನ್ನು ಒಳಗೊಳ್ಳುವ, ಮೋಕ್ಷಕ್ಕೆ ಅರ್ಹರಲ್ಲವೆನಿಸಿ ಕೊಂಡವರನ್ನು ಆರಾಽಸುವಂಥ ಕ್ರಿಯಾತ್ಮಕ ಪ್ರತಿ
ಭಟನೆಗಳು ಚಳವಳಿಯ ಭಾಗಗಳಾದವು.
ಇನ್ನು ಅಂತರ್ಜಾತಿ ವಿವಾಹವಾಗುವುದನ್ನು ನಿರ್ಬಂಧಿಸಿ ಅಂಥ ಸಂಬಂಧಗಳೇರ್ಪಟ್ಟಾಗ ಅವರ ಮಕ್ಕಳನ್ನು ಅಂತ್ಯಜರೆಂದು ವರ್ಗೀಕರಿಸುವುದನ್ನು ವಿರೋಧಿಸುವುದೇ ಬಸವಣ್ಣನ ಖ್ಯಾತ ವಚನದ ಹಿನ್ನೆಲೆಯಾಗಿದೆ:
“ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲ ಸಂಗಮದೇವ ಸಾಕ್ಷಿಯಾಗಿ” (ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 346). ಈ ವಚನದಲ್ಲಿ ಬಸವಣ್ಣ, ಹೀಗೆ ಚೆನ್ನಯ್ಯನ ದಾಸನ ಮಗನಿಗೂ ಕಕ್ಕಯ್ಯನ ದಾಸಿಯ ಮಗಳಿಗೂ ಸಂಬಂಧವುಂಟಾಗಿ ನಾನು ಹುಟ್ಟಿದ್ದೇನೆ, ಹಾಗಾಗಿ ನನ್ನನ್ನು ಹುಟ್ಟಿನ ಕಾರಣ ಅಂತ್ಯಜನೆನ್ನುವಿರೇ? ಎಂಬರ್ಥದಲ್ಲಿ ಪ್ರಶ್ನಿಸಿದ್ದಾನೆ.
ಈ ನೂತನ ವೈವಾಹಿಕ ಕಟ್ಟಳೆಯನ್ನು ವಿರೋಧಿಸುವ ಪ್ರತಿಭಟನೆಯ ಅಂಗವಾಗಿ ಶರಣರು ಮಧುವಯ್ಯನ ಮಗಳು ಮತ್ತು ಹರಳಯ್ಯನ ಮಗನ ಮದುವೆಯನ್ನು ಹಮ್ಮಿಕೊಂಡರು. ಈ ಕುರಿತು ಸಿದ್ದರಾಮೇಶ್ವರನ ಈ ವಚನದಲ್ಲಿ ‘ಹುಟ್ಟಿನಿಂದ ಜಾತಿ’ಯೇ ಅಧಿಕವೆಂದು ಹೋರಾಡುವ ಆದ್ಯರೇ ಕೇಳಿರಿ ಎಂಬ ಮತ್ತದೇ ವರ್ತಮಾನಕಾಲದಲ್ಲಿರುವ
ವಾಚ್ಯವನ್ನು ಗಮನಿಸಬಹುದು: “ಕುಲದಿಂದಧಿಕವೆಂದು ಹೋರಾಡುವ ಅಣ್ಣಗಳಿರಾ, ಕೇಳಿರಯ್ಯಾ. ಬ್ರಾಹ್ಮಣನವ ಮಧುವಯ್ಯ, ಚಂಡಾಲನವ ಹರಳಯ್ಯ, ದೂರ್ವಾಸನವ ಮಚ್ಚಿಗ, ಊರ್ವಶಿ ಯಾಕೆ ದೇವಾಂಗನೆ, ಚಂಡಾಲನವ ಪರಾಶರ, ಕುಸುಮಗಂಧಿಯಾಕೆ ಕಬ್ಬಿಲಗಿತ್ತಿ. ‘ಜಪತಸ್ತಪತೋ ಗುಣತಃ’ ಕಪಿಲಸಿದ್ಧಮಲ್ಲಿಕಾರ್ಜುನಾ ಕೇಳಾ,
ಕೇದಾರಯ್ಯ” (ಸಮಗ್ರ ವಚನ ಸಂಪುಟ: ವಚನದ ಸಂಖ್ಯೆ: 1933).
ಹೀಗೆ ಹಮ್ಮಿಕೊಂಡ ಈ ಕಲ್ಯಾಣವು ಕಲ್ಯಾಣ ಕ್ರಾಂತಿಗೆ ಮಂಗಳ ಹಾಡಿತು. ತಮ್ಮ ಸಾಮಾಜಿಕ ಹೋರಾಟದೊಂದಿಗೆ ರಾಜಕೀಯ ಹೋರಾಟವನ್ನೂ ತಳುಕು ಹಾಕಿಕೊಂಡು ಬಿಜ್ಜಳನನ್ನು ಕೊಂದಿದ್ದ ಶರಣರಿಗೆ ತಕ್ಕ ಶಾಸ್ತಿ ಮಾಡಲು ಇದು ಬಿಜ್ಜಳನ ಮಗನಿಗೆ ಅವಕಾಶವನ್ನೂ ಒದಗಿಸಿತು. ಶರಣರನ್ನು ಸೋವೇಶನ ಸೈನ್ಯ ಮತ್ತು ಆದ್ಯರ ನವನಿಯಮಗಳ ಒತ್ತಡಗಳು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಬಿಟ್ಟವು. ಜಗತ್ತಿನ ಎಲ್ಲಾ ಕ್ರಾಂತಿಕಾರಿಗಳೂ ತಮ್ಮ ಕ್ರಾಂತಿಯ ವೈರುಧ್ಯ ಫಲವನ್ನು ಕಂಡಾಗ ಉಂಟಾ ಗುವ ಹತಾಶೆ, ನೋವು ಮತ್ತು ಅವರುಗಳು ತೆಗೆದು
ಕೊಳ್ಳುವ ಅಂತಿಮ ನಿರ್ಣಯದಂತೆಯೇ, “ಅವಧಿ ಅಳಿಯಿತ್ತು ವ್ಯವಧಾನ ಉಳಿಯಿತ್ತು.
ನಿಜವೆ ನಿಜವ ನೊಡಗೂಡಿತ್ತು ಕೇಳಾ ಬಸವಣ್ಣ. ಕಲಿಯುಗದಲ್ಲಿ ಮುಂದೆ ಇರಬಾರದು ನಿಜ ಶರಣಂಗೆ ನಡೆ ನೀನು
ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು. ಉಳುಮೆಯಲ್ಲಿ ನಿಜವನೆಯ್ದು ನಡೆ, ಚೆನ್ನಬಸವಣ್ಣಾ. ಮಹವ ನೊಡಗೂಡು ಮಡಿವಾಳಯ್ಯ. ಸೊಡ್ಡಳ ಬಾಚರ ಸರು ಮೊದಲಾದ ಪ್ರಮಥರೆಲ್ಲರು ನಿಜವನೆಯ್ದು
ವುದು ನಿರ್ವಯಲ ಸಮಾಧಿಯಲ್ಲಿ.
ಬಗಿದು ಹೋಗಿ ಲಿಂಗದೊಳಗೆ ಹೊಗುವರೆಲ್ಲರೂ! ನಡೆಯಿರಿ ಕಾಯವೆರಸಿ ಕೈಲಾಸಕ್ಕೆ, ಕಾಯಸಹಿತ ಎಯ್ದುವುದು.
ನಿಮಗೆಲ್ಲರಿಗೆಯೂ ಉಪದೇಶಮಂತ್ರ ತಪ್ಪದು. ನಮಗೆ ಕದಳಿ ಯಲ್ಲಿ ಹೊಕ್ಕು ನಿಜದಲ್ಲಿ ಒಡಗೂಡುವ ಪರಿಣಾಮ. ಇದು ನಮ್ಮ ಗುಹೇಶ್ವರಲಿಂಗದ ಅಣತಿ ನಿಮಗೆಲ್ಲರಿ ಗೆಯೂ” (ಸಮಗ್ರ ವಚನ ಸಂಪುಟ: 2, ವಚನದ ಸಂಖ್ಯೆ: 847).
ಅಲ್ಲಮನು ಶೂನ್ಯಪೀಠಾಧ್ಯಕ್ಷನಾಗಿ ತನ್ನ ಶಿವ ಗಣಂಗಳಿಗೆ ಬಯಲಾಗಲು ನೇರ ನಿರ್ದೇಶನವನ್ನು ಕೊಟ್ಟು ಚಳವಳಿಯನ್ನು ಬರಖಾಸ್ತುಗೊಳಿಸುವಲ್ಲಿಗೆ ಕಲ್ಯಾಣಕ್ರಾಂತಿ ಪರಿಸಮಾಪ್ತಿಗೊಳ್ಳುತ್ತದೆ.
ಅಲ್ಲಿಂದ ಮುಂದಾದ ಘಟನಾವಳಿಗಳೊಂದಿಗೆ ಶರಣ ಕ್ರಾಂತಿಯು ಅಷ್ಟೇ ಕ್ಷಿಪ್ರವಾಗಿ ಅವಸಾನಗೊಂಡು ಭಿನ್ನರೊಂದಿಗೆ ಒಂದಾಗಿ ‘ಹುಟ್ಟಿನಿಂದ ಜಾತಿ’ಯನ್ನು ಅಪ್ಪಿಕೊಂಡು ಮತ್ತೆ ಮೂಲಸ್ಥಿತಿಗೆ ಮರಳಿ ಜೈನರನ್ನು
ಗುರಿಯಾಗಿಸಿಕೊಂಡಿತು. ಹೀಗೆ ವಚನಗಳು ಕೇವಲ ನೀತಿಯನ್ನಲ್ಲದೆ ಅಂದಿನ ಕಾಲಘಟ್ಟದ ಪ್ರಾಗೈತಿಹಾಸಿಕ, ಸಾಮಾಜಿಕ, ರಾಜಕೀಯದ ಕುರುಹು ಪುರಾವೆಗಳನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತವೆ. ಸರಳವಾಗಿರುವ ಇಂಥ ವಚನ
ಸಾಹಿತ್ಯದ ಜಾಡನ್ನು ಹಿಡಿದು ಸಾಗಿದರೆ ವಚನಕಾರರ ಮನಸ್ಥಿತಿಯನ್ನೂ ಅರಿಯಬಹುದಾದಷ್ಟು ಸುಸ್ಪಷ್ಟವಾದ ಚಿತ್ರಣ ಸಿಗುತ್ತದೆ. ನುಡಿದರೆ ಸಟಿಕದ ಶಲಾಕೆಯಂತಿರಬೇಕು ಎಂಬುದರ ಸ್ಫಟಿಕ ಸದೃಶ ಸ್ಪಷ್ಟತೆ, ನುಡಿದರೆ ಮುತ್ತಿನಹಾರದಂತಿರಬೇಕು ಎಂಬುದರ ಮುತ್ತಿನಹಾರವ ಪೋಣಿಸಿದಂತಿರುವ ಸಂಕಥನದ ಸಾಹಿತ್ಯ ಪ್ರಕಾರವು ವಚನಸಾಹಿತ್ಯವಾಗಿದೆ.
ಇಂಥ ಸ್ಪಷ್ಟ ಸಂಕಥನವನ್ನು ನಾವೇಕೆ ಈ ಮೊದಲೇ ಅರಿಯಲಿಲ್ಲ?! ಏಕೆಂದರೆ ಎಲ್ಲಾ ಕನ್ನಡ ಭಾಷಾ ಪಂಡಿತ ಸಂಶೋಧಕರೂ ರವಿಯಾಗದೆ ಕವಿಗಳಾಗಿ ದ್ದರು. ಉದಾಹರಣೆಗೆ ತುರುಗಾಹಿ ರಾಮಣ್ಣನ, “ಬಂದಿತ್ತು ದಿನ ಬಸವಣ್ಣ ಕಲ್ಲಿಗೆ ಚನ್ನಬಸವಣ್ಣ ಉಳುವೆಯಲ್ಲಿಗೆ ಪ್ರಭು ಅಕ್ಕ ಕದಳಿದ್ವಾರಕ್ಕೆ ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ ಕ್ಕೆ ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ ಅಡಗಿಹರೆಲ್ಲರು ಅಡಗಿದುದ ಕೇಳಿ ನಾ ಗೋಪತಿನಾಥ ವಿಶ್ವೇಶ್ವರಲಿಂಗ ದಲ್ಲಿಯೆ ಉಡುಗುವೆನು” ವಚನದಲ್ಲಿ ‘ಬಸವಣ್ಣ ಕಲ್ಲಿಗೆ’ ಎಂಬ ಸಾಲಿನ ಅರ್ಥ ಬಸವಣ್ಣ ಸಮಾಧಿಗೆ ಎಂದು.
ಆದರೆ ಇದನ್ನು ಖ್ಯಾತ ವಚನಯಾನ ಸಂಶೋಧಕರೊಬ್ಬರು ಕಲ್ಲಿಗೆ ಎಂಬುದು ಇನ್ನೂ ಯಾರೂ ಒಡೆಯಲಾಗದ ಒಡಪು ಎಂದು ಭಾವುಕ ಕವಿಯಾಗಿಬಿಟ್ಟಿದ್ದಾರೆ.
ಸಮಾಧಿ ಮಾಡಿ ಗುರುತಿಗೆ ಕಲ್ಲಿಡುವುದನ್ನು ದನಗಾಹಿಯ ಆಡುನುಡಿಯಲ್ಲಿ ಕಲ್ಲಿಗೆ ಎಂಬುದು ಅದ್ಯಾವ ಅಮಲಿನ ಒಡೆಯ ಲಾಗದ ಒಗಟೋ ನಾನರಿಯೆ! ಇರಲಿ, ಶರಣರ ಕ್ರಾಂತಿಯನ್ನು ಮತ್ತು ವಚನಗಳನ್ನು ಇತಿಹಾಸದ ಒಂದು ಕಾಲದ ಪರಿಮಿತಿಗೆ ಸೀಮಿತಗೊಳಿಸಿ ಅಥವಾ ಪೂರ್ವಗ್ರಹಗಳ ದೃಷ್ಟಿಕೋನದಿಂದ ಮಾತ್ರ ಈವರೆಗೆ ನೋಡಲಾಗಿದೆ.
ಇತಿಹಾಸವನ್ನು ಸಮಗ್ರವಾಗಿ ಗ್ರಹಿಸಿ ತೂಲಿಸಿ ವಿಶ್ಲೇಷಿಸಿ ಒರೆಗೆ ಹಚ್ಚುವ ಸಂಶೋಧನೆಗಳು ಈ ವಿಷಯದಲ್ಲಿ ನಡೆದೇ ಇಲ್ಲವೆನ್ನಬಹುದು.
ವಚನ ಮತ್ತು ಶರಣ ಸಂಸ್ಕೃತಿಯ ಬಗ್ಗೆ ಈವರೆಗೆ ನಡೆದಿರುವ ಯಾವುದೇ ಸಂಶೋಧನೆಗಳಲ್ಲಿಯೂ ಈ ರೀತಿಯ
ಹೊಳಹು ಸಿಕ್ಕಿಲ್ಲದಿರುವುದಕ್ಕೆ ನಮ್ಮ ಸಂಶೋಧನೆಗಳ ವೈಧಾನಿಕತೆಯ ತೊಡಕುಗಳ ಕಾರಣವಿರಬಹುದು.
ಸ್ವಾತಂತ್ರ ಪೂರ್ವ ಭಾರತದಲ್ಲಿನ ಸಂಶೋಧಕರು ಸಮಗ್ರವಾಗಿ ಆಕರಗಳನ್ನು ಪರಿಗಣಿಸಿ ಸಂಶೋಧನ ವೈಧಾನಿ ಕತೆಗಳನ್ನು ಅಳವಡಿಸಿಕೊಂಡಿರುವುದು ಗೋವಿಂದ ಪೈಗಳಂಥ ಪಂಡಿತರ ಸಂಶೋಧನೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಸ್ವಾತಂತ್ರೋತ್ತರ ಸಂಶೋಧಕರಲ್ಲಿ ‘ಹೀಗಿದ್ದರೆ ಹೇಗೆ’ (What if) ಎಂಬ ವೈಧಾನಿಕತೆ ಕ್ಷೀಣಿಸುತ್ತ ‘ಅದು ಹೀಗೆಯೇ’ ಎಂದು ಸಾಗಿಬಂದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಕನ್ನಡ ಸಂಶೋಧನ ನೆಲೆಯಲ್ಲಿ ಬಿ.ಎಲ್.ರೈಸ್ ನಂತರದ ಗೋವಿಂದ ಪೈ, ವೆಂಕಣ್ಣಯ್ಯ, ಶಂ.ಬಾ.ಜೋಷಿ, ಆರ್.ಜಿ.ದೀಕ್ಷಿತ್, ರಾಮಸ್ವಾಮಿ ಐಯಂಗಾರ್ ಮುಂತಾದವರ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ
ಸ್ವತಂತ್ರ ಭಾರತದಲ್ಲಿ ಏಕೀಕರಣಗೊಂಡ ಕರ್ನಾಟಕದ ಸಂಶೋಧನ ಪರಂಪರೆ ನಿಸ್ಸಂಶಯವಾಗಿ ಶೂನ್ಯ
ಸಂಶೋಧನೆಯಾಗಿದೆ.
ಎಲ್ಲಾ ಪ್ರಕ್ಷಿಪ್ತ, ವಿಕ್ಷಿಪ್ತ, ವಿಪ್ಲವಗಳ ನಡುವೆಯೂ ವಚನ ಸಾಹಿತ್ಯವು ತನ್ನ ವರ್ತಮಾನದ ಇತಿಹಾಸವನ್ನು ಸ್ಪಷ್ಟವಾಗಿ ಕಟ್ಟಿಕೊಟ್ಟಿದೆ. ಅದನ್ನು ಗುರುತಿಸುವಲ್ಲಿ ಸಂಶೋಧಕರು ಸೋತಿದ್ದಾರೆ. ಅನುಭವ ಮಂಟಪದ ಚರ್ಚೆಯ ದಾಖಲೆಗಳೇ ವಚನಗಳು ಎಂಬ ಸ್ಪಷ್ಟ ತಿಳಿವಳಿಕೆ ಇದ್ದರೂ ಅವುಗಳನ್ನು ಹಾಗೆ ಪರಿಗಣಿಸಿ ಚರ್ಚೆಯ ವಿಷಯವನ್ನು ಅರಿಯದೆ ಧರ್ಮ, ಧರ್ಮಗ್ರಂಥ ಇತ್ಯಾದಿಯಾಗಿ ಸಂಶೋಧ ಕರು ದಿಕ್ಕು ತಪ್ಪಿರುವುದು ಸಹ ಸ್ಫಟಿಕಸದೃಶ ಸೋಲಾಗಿದೆ.
ಒಟ್ಟಾರೆ ಬಸವಣ್ಣ ಮತ್ತವರ ಸಮಕಾಲೀನ ಶರಣರು ಸನಾತನವಾಗಿ ಬಂದಿದ್ದ ಕರ್ಮ (ಕಾಯಕ) ಮತ್ತು ಜ್ಞಾನ (ಅರಿವು) ಆಧಾರಿತವಾಗಿ ನಿರ್ಧಾರ ವಾಗುತ್ತಿದ್ದ ಜಾತಿಯನ್ನು ಬೆಂಬಲಿಸಿ ಹುಟ್ಟಿನಿಂದ ಜಾತಿ ಎಂಬ ನೂತನ ಬದಲಾವಣೆಯನ್ನು ವಿರೋಧಿಸಿದ್ದರು. ಆದರೆ ಅದನ್ನು ಇಲ್ಲಿಯವರೆಗಿನ ಸಂಶೋಧನೆಗಳು ಬಸವಣ್ಣನವರು ಸನಾತನವಾಗಿ ಬಂದಿದ್ದ ‘ಹುಟ್ಟಿನಿಂದ ಜಾತಿ’ ಪದ್ಧತಿಯನ್ನು ವಿರೋಧಿಸಿದ್ದರು ಎನ್ನುತ್ತವೆ.
ಕ್ಷಿಪ್ರ ಕ್ರಾಂತಿಗಳಿಗೆ ಕ್ಷಿಪ್ರವಾಗಿ ತರಲಾಗುವ ಬದಲಾವಣೆಗಳು ಪ್ರಮುಖ ಕಾರಣವಾಗಿರುತ್ತವೆಯೇ ಹೊರತು ಶತಮಾನಗಳಿಂದ ಆಚರಣೆ ಯಲ್ಲಿರುವ ಆಚರಣೆಗಳಲ್ಲ. ಹಾಗಾಗಿ ಕಲ್ಯಾಣ ಕ್ರಾಂತಿ ಎಂಬ ಕ್ಷಿಪ್ರಕ್ರಾಂತಿ ಉಂಟಾಗಿದ್ದು ‘ಹುಟ್ಟಿ ನಿಂದ ಜಾತಿ’ ಎಂಬ ಕ್ಷಿಪ್ರ ಬದಲಾವಣೆಯ ಕಾರಣದಿಂದಲೇ! ತನ್ನ ಪಂಥದ ಯಾವ ಮೌಲ್ಯಗಳನ್ನು ಮೆಚ್ಚಿ ವೀರಶೈವ ಪಂಥವನ್ನು ಪಸರಿಸುತ್ತಿದ್ದನೋ, ಅದೇ ಪಂಥವೀಗ ತಮ್ಮ ವಿರೋಧಿಗಳಂತೆಯೇ
‘ಹುಟ್ಟಿನಿಂದ ಜಾತಿ’ಯನ್ನು ಅಳವಡಿಸಿಕೊಂಡಿದ್ದುದು ಬಸವಣ್ಣನಿಗೆ ಮರ್ಮಾಘಾತವನ್ನುಂಟುಮಾಡಿದ್ದಿತು.
‘ಹುಟ್ಟಿನಿಂದ ಜಾತಿ’ಯನ್ನು ವಚನಚಳವಳಿಯಷ್ಟು ಪ್ರಬಲವಾಗಿ ವಿರೋಧಿಸಿ ಸನಾತನವಾಗಿದ್ದ ‘ವೃತ್ತಿಯಿಂದ ಜಾತಿ’ಯ ನಿಯಮವೇ ಬೇಕೆಂದು ‘ಕಾಯಕವೇ ಕೈಲಾಸ’ವೆಂಬ ಉದ್ಘೋಷದೊಂದಿಗೆ ಉಗ್ರವಾಗಿ ಹೋರಾಡಿದಷ್ಟು ಇನ್ಯಾವ ಚಳವಳಿಯೂ ಭಾರತದ ಇತಿಹಾಸದಲ್ಲಿಯೇ ಹೋರಾಡಿಲ್ಲ ಎಂಬುದು ಗಮನಾರ್ಹ.
ಸನಾತನ ವರ್ಣಾಶ್ರಮ ಪದ್ಧತಿಯೇ ಸರಿಯೆಂದು ಹೋರಾಡಿದ ಈ ಏಕೈಕ ಚಳವಳಿ ಇಡೀ ದೇಶಕ್ಕೆ ಮಾದರಿ! ಆದರೆ ಇದನ್ನು ಕುದುರೆಯ ಕಣ್ಪಟ್ಟಿ ತೊಟ್ಟಿದ್ದ ಸಂಶೋಧಕರು ಜನಾಂಗೀಯ ದ್ವೇಷಕ್ಕೆ ತಿರುಗಿಸಿ ಶೂನ್ಯವಾಗಿಸಿ
ಬಿಟ್ಟಿದ್ದಾರೆ.
ವೀರಶೈವದ ಈ ಸಮಾಜೋಧಾರ್ಮಿಕ ಸ್ಥಿತ್ಯಂತರದ ಸಾಕ್ಷ್ಯ ಸುಸ್ಪಷ್ಟವಾಗಿ ವಚನಗಳಲ್ಲಿ ಅಡಕವಾಗಿದೆ. ಪಂಥ ಶ್ರೇಷ್ಠತೆ, ಪರಪಂಥ ದ್ವೇಷ, ವೃತ್ತಿಯಿಂದ ಜಾತಿಪರತೆ ಮತ್ತು ಹುಟ್ಟಿನಿಂದ ಜಾತಿ ವಿರೋಧ, ಗೋಮಾಂಸ ನಿಷೇಧದ ವಿರೋಧ, ಅಂತರ್ಜಾತಿ ವಿವಾಹ ನಿರ್ಬಂಧದ ವಿರೋಧಗಳಂಥ ಸ್ಥಿತ್ಯಂತರಗಳು ಹೇಗೆ ಒಂದು ಧಾರ್ಮಿಕ ಪಂಥವನ್ನು ಸಾಮಾಜಿಕ ಪಂಥವಾಗಿ ರೂಪಿಸಿದವು ಎಂಬುದು ವಚನಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ವಿದೇಶಿ ದಾಳಿ
ಗಳಿಂದುಂಟಾದ ಇಂಥ ಸ್ಥಿತ್ಯಂತರಗಳನ್ನು ವಿರೋಧಿಸಲು ಎಡೆ ನವಪಂಥಗಳು ಉದಯವಾದರೆ ವೀರಶೈವವು ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡಿತು. ಹೀಗೆ ಕಾಲಕ್ಕನುಗುಣವಾಗಿ ಶಿಶ್ನಾರಾಧನೆಯಿಂದ ರೂಪಾಂತರಗೊಳ್ಳುತ್ತ ಕಡೆಗೆ ಹುಟ್ಟಿನಿಂದ ಜಾತಿಯಂಥ ಸ್ಥಿತ್ಯಂತರಗಳನ್ನು ಒಪ್ಪಿಕೊಂಡರೂ ತನ್ನ ಸಾಮಾಜಿಕ ಕಳಕಳಿಯನ್ನು ಬಿಟ್ಟುಕೊಡದೆ ಹಿಂದೂ ಸಂಸ್ಕೃತಿಯಂತೆಯೇ ನಿತ್ಯನೂತನವಾಗುತ್ತ ಸಾಗಿ ಬಂದಿರುವ ಮತ್ತೊಂದು ಮೂಲ ಸಂಸ್ಕೃತಿಯೆಂದರೆ ಅದು ವೀರಶೈವ ಸಂಸ್ಕೃತಿ!
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Ravi Hunz Column: ಇದು ಕಲ್ಯಾಣ ಕ್ರಾಂತಿಯ ಸತ್ಯದರ್ಶನ !