ಯಕ್ಷದಕ್ಷ
ರವೀ ಸಜಂಗದ್ದೆ
ಯಕ್ಷಗಾನದ ಅರ್ಥಗಾರಿಕೆ, ಅಧ್ಯಯನ- ಅಧ್ಯಾಪನ, ನಾಟಕ, ಸಾರ್ವಜನಿಕ ಸೇವೆ, ಬರಹ, ಪ್ರಕಾಶನ ಹೀಗೆ
ಕಲೆ-ಸಾಹಿತ್ಯ-ಸಂಸ್ಕೃತಿ ವಿಭಾಗಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ, ಛಾಪು ಒತ್ತಿದ ಗಡಿನಾಡ ಕನ್ನಡಿಗರ ಪೈಕಿ ಮೊದಲ ಸಾಲಿನಲ್ಲಿ ಕಾಣುವುದು ದಿ. ವಿದ್ವಾನ್ ಕೃಷ್ಣಭಟ್ಟರ ಹೆಸರು. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ಅಡ್ಯನಡ್ಕ ಮಾರ್ಗವಾಗಿ ಕೇರಳಕ್ಕೆ ಸಾಗುವಾಗ ಸಿಗುವ ಮೊದಲ ಊರು ಪೆರ್ಲ.
ಪುತ್ತೂರಿನಿಂದ ಪಾಣಾಜೆ ಮಾರ್ಗದಲ್ಲಿ ‘ಸ್ವರ್ಗ’ ದಾಟಿಯೂ ಪೆರ್ಲ ತಲುಪಬಹುದು. ಕೃಷ್ಣಭಟ್ಟರ ಹುಟ್ಟೂರು ಇದೇ ಪೆರ್ಲ ಸಮೀಪದ ‘ಪಡ್ರೆ’ ಗ್ರಾಮ. ಶ್ರೀಯುತರ ಸವಿನೆನಪಿಗಾಗಿ ಪೆರ್ಲ ಪರಿಸರದಲ್ಲಿ ಡಿಸೆಂಬರ್ 21ರಂದು ‘ಪೆರ್ಲ ನೂರರ ನೆನಪು’ ಹೆಸರಿನ ‘ಪೆರ್ಲ ಕೃಷ್ಣ ಭಟ್ಟರ ಜನ್ಮಶತಮಾನೋತ್ಸವ’ ಎಂಬ ಅಪರೂಪದ ಸಮಾರಂಭ ನಡೆಯಲಿದೆ. ಕೃಷ್ಣಭಟ್ಟರ ಜೀವಮಾನದ ಕೊಡುಗೆ ಸ್ಮರಿಸುವ ಅನನ್ಯ ಕಾರ್ಯಕ್ರಮವಿದು. ತನ್ನಿಮಿತ್ತ, ಪೆರ್ಲರ
ಸಾಧನೆ- ಕೊಡುಗೆಗಳ ಕುರಿತಾದ ಅಕ್ಷರ ನಮನವಿದು. ಕೃಷ್ಣಭಟ್ಟರು ಜನಿಸಿದ್ದು 1923ರ ಮೇ 16ರಂದು. ತಂದೆ
ಪಡ್ರೆ ಗುರು ಶ್ರೀಪತಿ ಶಾಸ್ತ್ರಿ, ತಾಯಿ ನೇತ್ರಾವತಿ. ಸಂಸ್ಕೃತದಲ್ಲಿ ‘ವಿದ್ವಾನ್’, ಹಿಂದಿಯಲ್ಲಿ ‘ರಾಷ್ಟ್ರಭಾಷಾ ಪ್ರವೀಣ’,
ಆಂಗ್ಲಭಾ ಷೆಯಲ್ಲಿ ‘ಇಂಟರ್ ಮೀಡಿಯೇಟ್’ ಶಿಕ್ಷಣ ಪಡೆದ ಹೆಗ್ಗಳಿಕೆ ಕೃಷ್ಣಭಟ್ಟರದು.
ಮಂಗಳೂರು ಕೆನರಾ ಪ್ರೌಢಶಾಲೆಯಲ್ಲಿ ಒಂದು ವರ್ಷ, ನಂತರ ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ 31 ವರ್ಷಗಳ ಕಾಲ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೃಷ್ಣಭಟ್ಟರು, ಅಧ್ಯಾಪನದ ಜತೆಜತೆಗೆ ಕಾಸರಗೋಡು ಏಕೀಕರಣಕ್ಕಾಗಿನ ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗಿಯಾದರು. ಏಕೀಕರಣದ ಮಹತ್ವ ಮತ್ತು ಅವಶ್ಯಕತೆಗಳ ಬಗ್ಗೆ ಜನರಿಗೆ ತಿಳಿಸಲು, ಕನ್ನಡದ ಬಗ್ಗೆ ಕಳಕಳಿ ಮೂಡಿಸಲು ಸಾಂಸ್ಕೃತಿಕ ಮತ್ತು ಸಾಹಿತ್ಯಕ ಚಟುವಟಿಕೆಗಳ
ಮೊರೆಹೋದ ಭಟ್ಟರು, ಮಹಾಜನ್ ಆಯೋಗದ ವರದಿಯ ಜಾರಿಗಾಗಿ ಸಾಕಷ್ಟು ಯತ್ನಿಸಿದರು, ಹೋರಾಟ ನಡೆಸಿದರು.
ಕಾಸರಗೋ ಡನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಆಗ್ರಹಕ್ಕೆ ನಿರಂತರವಾಗಿ ದನಿಗೂಡಿಸಿದರು. ಯಕ್ಷಗಾನ ದಲ್ಲಿದ್ದ ಆಸಕ್ತಿಯಿಂದಾಗಿ, 1960ರ ದಶಕದಿಂದ ಕುಬಣೂರು ಬಾಲಕೃಷ್ಣ ರಾಯರ ತಾಳಮದ್ದಲೆ ತಂಡದಲ್ಲಿ
ಅರ್ಥಧಾರಿಯಾಗಿ ಗುರುತಿಸಿಕೊಂಡ ಕೃಷ್ಣಭಟ್ಟರು ತಮ್ಮ ಅಪ್ರತಿಮ ವಾಕ್ಚಾತುರ್ಯದಿಂದ ಕೃಷ್ಣ, ರಾಮ, ಅತಿಕಾಯ, ವಿಭೀಷಣ, ಬೃಹನ್ನಳೆ ಪಾತ್ರಗಳಿಗೆ ಜೀವತುಂಬುತ್ತಿದ್ದರು. ಕೌರವ, ಕರ್ಣ, ವಿದುರ, ಪಂಚವಟಿಯ
ರಾಮ, ಪರಶುರಾಮ ಮೊದಲಾದ ಪಾತ್ರಗಳಿಗೆ ಭಟ್ಟರು ನೀಡುತ್ತಿದ್ದ ಅರ್ಥಗಾರಿಕೆಯು ತಾಳಮದ್ದಳೆಯ ರಂಗಕ್ಕೆ ವಿಶಿಷ್ಟ ಮೆರುಗು ನೀಡುತ್ತಿತ್ತು. ಇವರ ಅರ್ಥಗಾರಿಕೆಯನ್ನು ಸವಿಯಲು ಬಹುದೊಡ್ಡ ದಂಡು ಅವರು
ಹೋದಲ್ಲೆಲ್ಲ ಸೇರುತ್ತಿತ್ತು.
ಪ್ರಬುದ್ಧ ಲೇಖಕರೂ ಆಗಿದ್ದ ಕೃಷ್ಣಭಟ್ಟರು ಕಿರಾತಾರ್ಜುನೀಯ, ಭಗವಾನ್ ಪರಶುರಾಮ, ಜಾತ್ರೆ ಮತ್ತು ಇತರ ಕಥೆಗಳು (ಅನುವಾದಗಳು), ಪಾದುಕಾ ಪ್ರದಾನ (ನಾಟಕ), ತಾಳಮದ್ದಳೆ (ಪ್ರಹಸನ), ಭಗವಾನ್ ಬುದ್ಧ (ಜೀವನ ಚರಿತ್ರೆ), ಮಹಾಭಾರತ ಉಪಾಖ್ಯಾನಗಳು (ಕಥಾ ಸಂಕಲನ), ಮಧೂರು ಶ್ರೀ ಸಿದ್ಧಿವಿನಾಯಕ ಸುಪ್ರಭಾತಂ
(ಸಂಪಾದಿತ ಸಂಸ್ಕೃತ ಭಜನೆಗಳು), ಶರವು ಮಹಾಗಣಪತಿ ಸುಪ್ರಭಾತ (ಕನ್ನಡ) ಮುಂತಾದ ಕೃತಿಗಳ ರಚನೆ/
ಸಂಪಾದನೆಯಿಂದಲೂ ಹೆಸರಾದರು. ಮಾತೃಭಾಷೆಯಾದ ‘ಕರ್ಹಾಡ’ದಲ್ಲಿ ‘ರುಪಯ್ಯಾಂ ಹರ್ಡಿ’ ಎಂಬ ನಾಟಕವನ್ನೂ, ಹಲವು ಸೋಬಾನೆ ಹಾಡುಗಳನ್ನೂ ಭಟ್ಟರು ರಚಿಸಿದ್ದಾರೆ.
‘ಬದುಕಿ ಫಲವೇನು?’- ಇದು ಪೆರ್ಲರ ವೈವಿಧ್ಯಮಯ ಬದುಕಿನ ಒಳನೋಟ ತೆರೆದಿಡುವ ಆತ್ಮಕಥೆ. ದಿವಂಗತ ಹಿರಿಯ ಬಲಿಪ ನಾರಾಯಣ ಭಾಗವತರ ಕುರಿತಾದ ಅನುಪಮ ಮಾಹಿತಿಗಳಿರುವ ‘ಕಲಾತಪಸ್ವಿ’ ಕೃತಿಯು ಅವರು ಸಂಪಾದಿಸಿದ ಗ್ರಂಥಗಳ ಪೈಕಿ ವಿಶಿಷ್ಟವಾದದ್ದು. ಹೀಗೆ ಒಟ್ಟು 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಹೆಗ್ಗಳಿಕೆ ಕೃಷ್ಣಭಟ್ಟರದ್ದು. ಹಿಂದಿ ಅಧ್ಯಾಪನ ವೃತ್ತಿಯಿಂದ 1978ರಲ್ಲಿ ನಿವೃತ್ತರಾದ ಬಳಿಕ ಕೃಷ್ಣಭಟ್ಟರು ಪೆರ್ಲದಲ್ಲಿಯೇ ‘ಗುರುಕುಲ ಮುದ್ರಣಾಲಯ’ವನ್ನು ಸ್ಥಾಪಿಸಿದರು. ಪೆರ್ಲದಂಥ ಗ್ರಾಮೀಣ ಪ್ರದೇಶಕ್ಕೆ ವಿವಿಧ ಕ್ಷೇತ್ರಗಳ ಮೂಲಕ ಕೃಷ್ಣಭಟ್ಟರು ನೀಡಿದ ಕೊಡುಗೆ ಅನನ್ಯವಾದುದು.
ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿದ್ದ ಅವರು ಅನೇಕ ವಿಷಯಗಳ ಕುರಿತು ಆಳವಾದ ಜ್ಞಾನವನ್ನು ಸಂಪಾದಿಸಿದ್ದರು. ಪೆರ್ಲ ಪರಿಸರದ ಸಾಹಿತ್ಯಕ-ಸಾಂಸ್ಕೃತಿಕ ಚಟುವಟಿಕೆಗಳು ಕೃಷ್ಣಭಟ್ಟರ ನಿರ್ದೇಶನದಿಂದಾಗಿ ಸಶಕ್ತವಾಗಿ ರೂಪುಗೊಂಡಿವೆ, ಸಮೃದ್ಧವಾಗಿವೆ.
ಇವರ ಸಮರ್ಥ ವ್ಯವಸ್ಥಾಪಕತ್ವದಲ್ಲಿ ಯಕ್ಷಗಾನ ಮತ್ತು ಹಳ್ಳಿ ಭಜನೆ ಕೇಂದ್ರಗಳು, ಮಂದಿರಗಳು, ಶಿಕ್ಷಣ ಮಾಧ್ಯಮ ಗಳು ರೂಪುಗೊಂಡು ಬೆಳೆದಿವೆ. ಕೃಷ್ಣಭಟ್ಟರಿಂದಾಗಿ ಬ್ರಿಟಿಷರ ಆಡಳಿತದಲ್ಲೂ ಕನ್ನಡವನ್ನು ಉಳಿಸಿಕೊಂಡಿದ್ದ ಪೆರ್ಲ ಪ್ರದೇಶವು ಭಾಷಾ ಸಂಸ್ಕೃತಿಯ ಜತೆಗೆ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮೌಲ್ಯಗಳನ್ನೂ ಕಾಪಾಡಿ ಕೊಂಡು ಬಂದಿತು ಎಂಬುದು ಹೆಮ್ಮೆಯ ಸಂಗತಿ.
ಯಕ್ಷಗಾನದಲ್ಲಿ ಖ್ಯಾತನಾಮರಾದ ಪ್ರಭಾಕರ ಜೋಷಿಯವರು, “ಬಡತನದ ಮಧ್ಯೆ ಹುಟ್ಟಿ ಬೆಳೆದು, ವ್ಯಕ್ತಿ ಮತ್ತು
ಗುಂಪಿನ ಬೆಂಬಲವಿಲ್ಲದೆ ಸ್ವಂತ ಯೋಗ್ಯತೆ, ಕೌಟುಂಬಿಕ ಸಂಸ್ಕಾರ, ಛಲ ಮತ್ತು ಶಿಸ್ತಿನ ಬಲದಿಂದ ಬಲು ಎತ್ತರಕ್ಕೆ
ಬೆಳೆದವರು ವಿದ್ವಾನ್ ಕೃಷ್ಣಭಟ್ಟರು. ವಾರಾನ್ನದ ಜೀವಿಕೆಯಿಂದ ಓರ್ವ ಶ್ರೇಷ್ಠ ಅಧ್ಯಾಪಕ, ಕಲಾವಿದ, ಸಾಹಿತಿ,
ಸಾಂಸ್ಕೃತಿಕ ಕ್ರಿಯಾಶೀಲನಾಗಿ, ಕೊನೆಗೆ ಸ್ವ-ಉದ್ಯೋಗದಲ್ಲೂ ಯಶಸ್ಸು ಗಳಿಸಿದ ಕೃಷ್ಣಭಟ್ಟರ ಸಾಧನೆ ಅಸಾಮಾನ್ಯ, ಪ್ರೇರಕ ಮತ್ತು ಅಧ್ಯಯನಯೋಗ್ಯ ವಸ್ತು” ಎಂದು ಪ್ರಶಂಸಿಸಿದ್ದಾರೆ.
ಉರುಟುಮುಖ, ಕನ್ನಡಕದೊಳಗೆ ಹೊಳೆಯುವ ಕಣ್ಣುಗಳು, ವಿಶಾಲ ಹಣೆ, ಸ್ವಚ್ಛ-ಶುಭ್ರ ಬಿಳಿಪಂಚೆ, ಇಸಿಹಾಕಿದ ಅಂಗಿ/ಜುಬ್ಬಾ, ಹೆಗಲ ಮೇಲೊಂದು ಜರಿಯ ಶಾಲು, ವೀಳ್ಯದ ಪೆಟ್ಟಿಗೆಯ ಸಾಂಗತ್ಯ, ಗೋಧಿ ಬಣ್ಣ ಸಾಧಾರಣ ಮೈಕಟ್ಟು- ಇವಿಷ್ಟು ಕೃಷ್ಣಭಟ್ಟರ ಬಾಹ್ಯಚಹರೆಯ ವೈಶಿಷ್ಟ್ಯ. ಹಿತ-ಮಿತ ಭಾಷಿಯಾಗಿದ್ದ ಕೃಷ್ಣಭಟ್ಟರು ಬದುಕಿನ
ಕೊನೆಯವರೆಗೂ ಜೀವನೋತ್ಸಾಹದಿಂದಲೇ ಇದ್ದು, ೨೦೧೩ರ ಸೆಪ್ಟೆಂಬರ್ ೨ರಂದು ವಿಧಿವಶರಾದರು. ಕೃಷ್ಣಭಟ್ಟರ ಜೀವನ ಸಾಧನೆ ನೋಡಿದಾಗ ‘ಇಂದಿನಿತು ಈ ಮಹಾನ್ ಚೇತನ ಬದುಕಿರಬೇಕಿತ್ತು’ ಎಂದೆನಿಸುತ್ತದೆ.
ಪ್ರಶಸ್ತಿಗಳ ಮಹಾಪೂರ
ಕೃಷ್ಣಭಟ್ಟರಿಗೆ ಒಲಿದುಬಂದ ಪ್ರಶಸ್ತಿ-ಬಿರುದುಗಳು ಅನೇಕ. ಔದ್ಯೋಗಿಕ ಜೀವನದ ಸಾರ್ಥಕತೆಯನ್ನು ಬಿಂಬಿಸುವ ಕೇರಳ ಸರಕಾರದ ‘ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ’, ಕನ್ನಡದ ಕುರಿತಾದ ಹೋರಾಟ ಮತ್ತು ಸೇವೆಗಾಗಿ ನೀಡಲಾದ ‘ಕರ್ನಾಟಕ ಏಕೀಕರಣ ಪ್ರಶಸ್ತಿ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ಯಕ್ಷಗಾನ ಕ್ಷೇತ್ರದಲ್ಲಿನ ಸೇವೆ-ಸಾಧನೆಗಾಗಿ ಸಂದ ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’, ‘ಪೊಳಲಿ ಶಾಸಿ ಪ್ರಶಸ್ತಿ’, ‘ದೇರಾಜೆ ಪ್ರಶಸ್ತಿ’, ‘ನಾರಾಯಣ ಕಿಲ್ಲೆ ಪ್ರಶಸ್ತಿ’ ಹೀಗೆ ಹತ್ತಾರು ಪುರಸ್ಕಾರಗಳು ಕೃಷ್ಣಭಟ್ಟರ ಮುಡಿಗೇರಿವೆ.
ಮಾತ್ರವಲ್ಲದೆ, ಶೃಂಗೇರಿ ಶಾರದಾ ಪೀಠ, ಉಡುಪಿಯ ಪೇಜಾವರ ಮಠ, ನೀರ್ಚಾಲಿನ ಸಂಸ್ಕೃತ ಕಾಲೇಜು, ಎಡನೀರು ಸಂಸ್ಥಾನ, ಪೆರ್ಲ ಸತ್ಯನಾರಾಯಣ ವಿದ್ಯಾ ಸಂಸ್ಥೆ ಸೇರಿದಂತೆ ಕರಾವಳಿ ಭಾಗದ ನೂರಾರು ದೇಗುಲಗಳು, ಸಂಘ-ಸಂಸ್ಥೆಗಳು, ಭಜನಾ ಮಂದಿರಗಳಿಂದ ಶ್ರೀಯುತರಿಗೆ ಮಾನ-ಸಮ್ಮಾನಗಳು ಸಂದಿವೆ.
ಸ್ಮರಣೆಗೊಂದು ಕಾರ್ಯಕ್ರಮ
ಪೆರ್ಲ ಕೃಷ್ಣಭಟ್ಟ ಸಾಂಸ್ಕೃತಿಕ ಪ್ರತಿಷ್ಠಾನವು ಕೃಷ್ಣಭಟ್ಟರ ಜನ್ಮಶತಮಾನೋತ್ಸವ ಪ್ರಯುಕ್ತ ‘ಪೆರ್ಲ ನೂರರ ನೆನಪು’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಯಕ್ಷಗಾನ ತಾಳಮದ್ದಳೆ, ಸಭಾ ಕಾರ್ಯಕ್ರಮ, ಸಂಸ್ಮರಣೆ
ಮತ್ತು ಪೆರ್ಲ ಪ್ರಶಸ್ತಿ ಪ್ರದಾನ ಇವೆಲ್ಲವೂ ಡಿಸೆಂಬರ್ 21ರಂದು ಪೆರ್ಲದಲ್ಲಿ ನಡೆಯಲಿವೆ. ಸಮಾಜಕ್ಕೆ ಅಪಾರ
ಕೊಡುಗೆ ನೀಡಿದ ಕೃಷ್ಣಭಟ್ಟರನ್ನು ಸ್ಮರಿಸುವ, ಒಂದಷ್ಟು ಸವಿನೆನಪುಗಳನ್ನು ಮೆಲುಕು ಹಾಕುವ ಈ ಅಪೂರ್ವ
ಸಾಹಿತ್ಯಕ-ಸಾಂಸ್ಕೃತಿಕ-ಯಕ್ಷಗಾನ ಕಾರ್ಯಕ್ರಮದಲ್ಲಿ ಪ್ರೀತಿ ಮತ್ತು ಅಭಿಮಾನದಿಂದ ಭಾಗವಹಿಸೋಣ, ಬನ್ನಿ.
(ಲೇಖಕರು ಸಾಫ್ಟ್ ವೇರ್ ಉದ್ಯೋಗಿ)
ಇದನ್ನೂ ಓದಿ: Ravi Sajangadde Column: ಸಂಪರ್ಕ ಸಾಧನ ಸ್ಫೋಟವೆಂಬ ಕದನ ಕುತೂಹಲ !