ಅರಳೀಕಟ್ಟೆ
ರವೀ ಸಜಂಗದ್ದೆ
ಚಂದ್ರಚೂಡರ ಆಡಳಿತಾತ್ಮಕ ಆದೇಶಗಳು, ಸದಾ ಮಾಧ್ಯಮದೊಂದಿಗೆ ಮಾತಾಡುವ ವ್ಯಾಮೋಹ ಇವು ಆಗಾಗ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ತತ್ವ-ಸಿದ್ಧಾಂತಕ್ಕೆ ವ್ಯತಿರಿಕ್ತವಾದ ತೀರ್ಪು ಬಾರದಂತೆ ನೋಡಿಕೊಳ್ಳಲೆಂದು ಸೂಕ್ಷ್ಮ ಪ್ರಕರಣಗಳನ್ನು ನಿರ್ದಿಷ್ಟ ನ್ಯಾಯಮೂರ್ತಿಗಳ ಪೀಠಗಳಿಗೆ ವರ್ಗಾಯಿಸುತ್ತಾರೆ ಎಂಬ ಆರೋಪಕ್ಕೆ ಅವರು ಗುರಿಯಾಗಿದ್ದುಂಟು.
ದೇಶವೊಂದರ ಸಾಮಾಜಿಕ ನ್ಯಾಯ, ಸ್ವಾಸ್ಥ್ಯವನ್ನು ನಿಯಂತ್ರಿಸುವ -ನಿರ್ಧರಿಸುವ 3 ಅಂಗಗಳಲ್ಲಿ ನ್ಯಾಯಾಂಗಕ್ಕೆ ಪ್ರಮುಖ ಸ್ಥಾನ. ಇದು ಶಾಸಕಾಂಗ ಮತ್ತು ಕಾರ್ಯಾಂಗದ ಜತೆಗೂಡಿ ಕೆಲಸ ಮಾಡಿದಾಗ ಮಾತ್ರವೇ ಎಲ್ಲವೂ ಸುಲಲಿತ ಮತ್ತು ಸ್ವಸ್ಥ ಸಮಾಜದ ಸ್ಥಾಪನೆ ಸಾಧ್ಯ. ಪರ-ವಿರೋಧ ವಾಗಿರುವ ಅನೇಕ ವಾದ, ಪ್ರತಿಕ್ರಿಯೆಗಳ ಹೊರತಾಗಿಯೂ ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ತನ್ನ ಪ್ರಬುದ್ಧತೆ,
ಗೌರವವನ್ನು ಕಾಪಾಡಿಕೊಂಡು ಬಂದಿದೆ. ಯಾವುದೇ ವಿಷಯವಿರಲಿ, ಯಾವುದೇ ತೀರ್ಪು ಬರಲಿ, ಅದನ್ನು ಗೌರವಿಸುವ ಪರಂಪರೆ ನಮ್ಮ ದೇಶದಲ್ಲಿದೆ. ಇದು ಸಂವಿಧಾನಕ್ಕೆ ಕೊಡುವ ಗೌರವ.
ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಕಳೆದೆರಡು ವರ್ಷಗಳಿಂದ ಸೇವೆ ಸಲ್ಲಿಸಿದ ಡಿ.ವೈ.ಚಂದ್ರಚೂಡ್ ಅವರು ಇತ್ತೀಚೆಗಷ್ಟೇ ಸೇವೆಯಿಂದ ನಿವೃತ್ತರಾಗಿದ್ದಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಅವರಿತ್ತ ಕೊಡುಗೆ ಅಪಾರ. ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ
ಜನರಿಗೆ ನಂಬಿಕೆ ಕುಸಿಯುತ್ತಿದ್ದ ಕಾಲಘಟ್ಟದಲ್ಲಿ, ಹಲವು ಐತಿಹಾಸಿಕ ತೀರ್ಪುಗಳನ್ನು ನೀಡುವ ಮೂಲಕ ಆ ನಂಬಿಕೆ ಮತ್ತೆ ಚಿಗುರುವಂತೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಬಹುಚರ್ಚಿತ ಚುನಾವಣಾ ಬಾಂಡ್ ಯೋಜನೆ, ಅತಿಸೂಕ್ಷ್ಮವೆನಿಸಿದ್ದ ರಾಮಜನ್ಮಭೂಮಿ ವಿವಾದ ಮತ್ತು ಸಂಚಲನೆ ಮೂಡಿಸಿದ್ದ ಸಲಿಂಗಕಾಮದ ಅಮಾನ್ಯತೆ ವಿಷಯದಲ್ಲಿ ಅವರಿತ್ತ ತೀರ್ಪುಗಳು, ವಿಧಿ 370ರ ರದ್ದತಿ ಯನ್ನು ಮಾನ್ಯ ಮಾಡಿದ ತೀರ್ಪು, ಅಪರಾಧ ಪ್ರಕರಣಗಳಲ್ಲಿ ಬಂಽತ ಆರೋಪಿಗಳ ಆಸ್ತಿ-ಪಾಸ್ತಿಯನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡುವುದರ ವಿರುದ್ದದ ತೀರ್ಪು ಹೀಗೆ ಹಲವಾರು ತೀರ್ಪುಗಳಿಂದ ಸುದ್ದಿಯಲ್ಲಿದ್ದವರು ಚಂದ್ರಚೂಡ್. ಈ ಕುರಿತು ಒಂದಿಷ್ಟು ಅವಲೋಕಿಸೋಣ.
ಇಡೀ ದೇಶವೇ ಅನೇಕ ಬಾರಿ ಕೋಮುದಳ್ಳುರಿಯಿಂದ ಘಾಸಿಗೊಳ್ಳುವುದಕ್ಕೆ ಕಾರಣವಾದ ವಿಚಾರವೆಂದರೆ, ಅಯೋಧ್ಯೆಯ ರಾಮಮಂದಿರ-ಬಾಬ್ರಿ ಮಸೀದಿ ಸಂಘರ್ಷ. ಇತ್ತೀಚಿನವರೆಗೂ ಯಾವುದೇ ಸರಕಾರ, ನ್ಯಾಯಾಧೀಕರಣ, ಸುಪ್ರೀಂಕೋರ್ಟ್ ಪೀಠ ಇದನ್ನು ಕೈಗೆತ್ತಿಕೊಂಡು ತಾತ್ವಿಕ ವಾದ ಮತ್ತು ಬಹುಜನರು ಒಪ್ಪುವಂಥ ತೀರ್ಪುನೀಡಲು ಯತ್ನಿಸಲೇ ಇಲ್ಲ. ಇದು ಜೇನುಗೂಡಿಗೆ ಕೈಹಾಕಿದಂತೆ ಆಗಬಹುದೆಂದು ಎಲ್ಲರೂ ಈ ವಿಚಾರದಿಂದ ದೂರವೇ ಉಳಿಯುತ್ತಿದ್ದರು. ಆದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬರುತ್ತಿದ್ದಂತೆ ಇದನ್ನು ಕೈಗೆತ್ತಿಕೊಂಡಿತು. ತನ್ನ ಪ್ರಣಾಳಿಕೆಯಲ್ಲಿದ್ದ ‘ಅಯೋಧ್ಯೆ ಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ’ ಎಂಬ ಭರವಸೆಯನ್ನು ಈಡೇರಿಸುವ ಸಲುವಾಗಿ ಬಿಜೆಪಿ ಸರಕಾರ ಸುಪ್ರೀಂಕೋರ್ಟ್‌ನ ಕದ ತಟ್ಟಿತು.
ಸುದೀರ್ಘಕಾಲ ವಾದ-ಪ್ರತಿವಾದ ನಡೆದು, 70 ವರ್ಷಗಳಿಂದ ಇತ್ಯರ್ಥಪಡಿಸಲಾಗದಿದ್ದ ಈ ವಿವಾದವು 2019ರ ನವೆಂಬರ್ 9ರಂದು ಕೋರ್ಟಿನ ತೀರ್ಪಿನ ಮೂಲಕ ಇತ್ಯರ್ಥವಾಯಿತು. ವಿವಾದಾತ್ಮಕ 2.77 ಎಕರೆ ಜಾಗವನ್ನು ರಾಮಮಂದಿರ ನಿರ್ಮಾಣಕ್ಕಾಗಿ ಸಂಬಂಧಿತ ಟ್ರಸ್ಟ್ ವಶಕ್ಕೆ ಕೊಡಬೇಕು, ಅಯೋಧ್ಯೆಯ ಸೂಕ್ತ ಜಾಗದಲ್ಲಿ 5 ಎಕರೆ ಜಾಗವನ್ನು ಮಸೀದಿ ನಿರ್ಮಾಣಕ್ಕೆ ಕೊಡಬೇಕು ಎಂಬ ಐತಿಹಾಸಿಕ ತೀರ್ಪನ್ನು ಕೋರ್ಟ್‌ನ ಐವರು ಸದಸ್ಯರ ಸಾಂವಿಧಾನಿಕ ಪೀಠ ನೀಡಿತು. ಈ ಪೀಠದ ಪ್ರಮುಖ ಭಾಗವಾಗಿದ್ದವರು ಚಂದ್ರಚೂಡ್. “ಬಹುತೇಕರು ಒಪ್ಪುವ ತೀರ್ಪು ನೀಡುವುದಕ್ಕೆ ಆ ಭಗವಂತನೇ ಪ್ರೇರೇಪಣೆ. ಅವನ ಪ್ರೇರಣೆಯಿದ್ದರಷ್ಟೇ ಇಂಥ ಪವಾಡಸದೃಶ ವಿಚಾರಗಳು ನಡೆಯಲು ಸಾಧ್ಯ. ದೈವಶಕ್ತಿ ಮತ್ತು ಮನುಷ್ಯನ ಶ್ರಮದ ಮೇಲಷ್ಟೇ ನನಗೆ ನಂಬಿಕೆ” ಎಂದು ಅವರು ಸಂದರ್ಶನವೊಂದರಲ್ಲಿ ಮಾತಾಡುವಾಗ ಕಂಗಳಲ್ಲಿ ಸಾರ್ಥಕತೆ ಚಿಮ್ಮುತ್ತಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿ ಅದನ್ನು ಅವಿಭಾಜ್ಯ ಅಂಗವಾಗಿ ಭಾರತದೊಳಗೆ ಸೇರಿಸುವುದು ಬಿಜೆಪಿಯ ಪ್ರಣಾಳಿಕೆಯ ಇನ್ನೊಂದು ಅಂಶವಾಗಿತ್ತು. “ಜಮ್ಮು-ಕಾಶ್ಮೀರದಲ್ಲಿ ಕೆಲ ವರ್ಷಗಳಿಂದ ರಾಷ್ಟ್ರಪತಿ ಆಳ್ವಿಕೆಯಿದ್ದು, ರಾಜ್ಯ ಸರಕಾರವು ಅಸ್ತಿತ್ವ ದಲ್ಲಿಲ್ಲದ ಕಾರಣ, ಹಿಂದಿನಿಂದ ಇರುವ ವಿಧಿ 370 ಅಸ್ತಿತ್ವವನ್ನು ಕಳೆದುಕೊಂಡಿದೆ” ಎಂದು 2018ರ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತು.
ಇದರ ಆಧಾರದಲ್ಲಿ ಕೇಂದ್ರ ಸರಕಾರವು 2019ರ ಆಗಸ್ಟ್ 5ರಂದು ವಿಧಿ 370ನ್ನು ರದ್ದುಪಡಿಸುವ ವಿಧೇಯಕವನ್ನು ಲೋಕಸಭೆ ಮತ್ತು
ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದಿಸಿತು. ನಂತರ ರಾಷ್ಟ್ರಪತಿಗಳು ಅಂಕಿತ ಹಾಕಿದರು. ಈ ಮಧ್ಯೆ ಕೆಲ ಜನರು ಮತ್ತು ರಾಜಕೀಯ ಪಕ್ಷಗಳು ‘ವಿಧಿ 370ರ ರದ್ದತಿಯನ್ನು ಹಿಂಪಡೆಯಬೇಕು” ಎಂದು ಸುಪ್ರೀಂಕೋರ್ಟ್‌ನ ಕದ ತಟ್ಟಿದವು. ಆದರೆ ಚಂದ್ರಚೂಡ್ ನೇತೃತ್ವದ ಪಂಚಸದಸ್ಯ
ಸಾಂವಿಧಾನಿಕ ಪೀಠವು 2023ರ ಡಿಸೆಂಬರ್‌ನಲ್ಲಿ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದು ತೀರ್ಪು ಪ್ರಕಟಿಸಿತು.
ಸಂಪ್ರದಾಯದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬಾಲ್ಯವಿವಾಹ ನಿಷೇಧ ಕಾಯ್ದೆಯ ಅನುಷ್ಠಾನಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ; ವೈಯಕ್ತಿಕ ಕಾನೂನಿನಡಿ ಸಂಪ್ರದಾಯ ಉಲ್ಲೇಖಿಸಿ ಈ ಕಾನೂನಿನ ದುರ್ಬಳಕೆ ಶಿಕ್ಷಾರ್ಹ ಅಪರಾಧ ಎಂದು ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿತು. ಕೇಂದ್ರ ಸರಕಾರವು ೨೦೧೮ರಲ್ಲಿ ಜಾರಿಗೊಳಿಸಿದ್ದ ‘ಚುನಾವಣಾ ಬಾಂಡ್ ಯೋಜನೆ’ಯನ್ನು ಚಂದ್ರಚೂಡ್
ನೇತೃತ್ವದ ನ್ಯಾಯಪೀಠ ೨೦೨೪ರ ಫೆಬ್ರವರಿಯಲ್ಲಿ ರದ್ದುಮಾಡಿತು. ಈ ಯೋಜನೆಯಡಿ ರಾಜಕೀಯ ಪಕ್ಷಗಳು ಸ್ವೀಕರಿಸಿದ ದೇಣಿಗೆಯ ಮಾಹಿತಿ ಗೌಪ್ಯವಾಗಿದ್ದುದು ಸುಪ್ರೀಂ ಕೆಂಗಣ್ಣಿಗೆ ಗುರಿಯಾಯಿತು.
“ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸರಕಾರ ಸ್ವಾಧೀನಪಡಿಸಿಕೊಳ್ಳಬಹುದು” ಎಂಬ ಅಯ್ಯರ್ ನೇತೃತ್ವದ ಆಗಿನ ಸಾಂವಿಧಾನಿಕ ಪೀಠದ ತೀರ್ಪನ್ನು ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಪರಿಷ್ಕರಿಸಿ, “ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸಾರ್ವಜನಿಕ
ಬಳಕೆಗೆಂದು ಸರಕಾರ ಸ್ವಾಽನಪಡಿಸಿಕೊಳ್ಳುವಂತಿಲ್ಲ; ಆದರೆ ಸಮುದಾಯದ ವಶದಲ್ಲಿರುವ ಭೌತಿಕ ಸ್ವರೂಪದ ಸಂಪನ್ಮೂಲಗಳನ್ನು ಸಮಾಜದ ಒಳಿತಿಗಾಗಿ ಸ್ವಾಽನಪಡಿಸಿಕೊಳ್ಳಬಹುದು” ಎಂದು ತೀರ್ಪಿತ್ತಿತು. “ಭಾರತದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆಯಿಲ್ಲ”
ಎಂಬ ಮತ್ತೊಂದು ಐತಿಹಾಸಿಕ ತೀರ್ಪನ್ನು ಚಂದ್ರಚೂಡ್ ನೇತೃತ್ವದ ನ್ಯಾಯಪೀಠ 2023ರ ಅಕ್ಟೋಬರ್‌ನಲ್ಲಿ ನೀಡಿದ್ದು,
ಇದರಲ್ಲಿ ಲಿಂಗ ಸಮಾನತೆಯ ವಿಚಾರವಾಗಿ ಕಾನೂನು ರೂಪಿಸುವ ನಿರ್ಧಾರವನ್ನು ಸಂಸತ್ತಿಗೆ ಬಿಡಲಾಗಿದೆ.
“ಅಪರಾಧಿಗಳ ಆಸ್ತಿನಾಶ ಮಾಡುವ, ನೆಲಸಮಗೊಳಿಸುವ ಉತ್ತರ ಪ್ರದೇಶ ಸರಕಾರದ ‘ಬುಲ್ಡೋಜರ್ ನ್ಯಾಯ’ ಅಸಾಂಪ್ರದಾಯಿಕ” ಎಂಬ ತೀರ್ಪು ಚಂದ್ರಚೂಡರ ನಿವೃತ್ತಿಯ ಕೊನೆಯಲ್ಲಿ ಸದ್ದುಮಾಡಿತು. 1971ಕ್ಕಿಂತ ಮೊದಲು ಬಾಂಗ್ಲಾದೇಶದಿಂದ ಅಸ್ಸಾಂ ರಾಜ್ಯಕ್ಕೆ ಬಂದ ನಿರಾಶ್ರಿತರಿಗೆ ಪೌರತ್ವ ನೀಡುವ ‘ಅಸ್ಸಾಂ ಒಪ್ಪಂದ’ವನ್ನು ಸಿಂಧು ಎಂದಿದ್ದು, ದೇಶದ ಜೈಲುಗಳಲ್ಲಿ ಜಾತಿಯ ಆಧಾರದಲ್ಲಿ ಕೈದಿಗಳ ನಡುವಿನ ತಾರತಮ್ಯವನ್ನು ನಿಷೇಽಸಿದ್ದು, ಸದನದಲ್ಲಿ ಮತ ಚಲಾಯಿಸಲು, ಮಾತಾಡಲು ಲಂಚ ಪಡೆವ ಶಾಸಕರು/ಸಂಸದರಿಗೆ ಕಾನೂನು ಕ್ರಮದಿಂದ ರಕ್ಷಣೆಯಿಲ್ಲ ಎಂದಿದ್ದು ಹೀಗೆ 200ಕ್ಕೂ ಹೆಚ್ಚು ಮಹತ್ವದ ತೀರ್ಪುಗಳನ್ನು ನೀಡಿದ ಹೆಗ್ಗಳಿಕೆ ಚಂದ್ರಚೂಡ್ ಅವರದ್ದು. ಚಂದ್ರಚೂಡರ ಕಾರ್ಯಕ್ಷಮತೆ, ಆಡಳಿತಾತ್ಮಕ ಆದೇಶಗಳು, ನ್ಯಾಯಾಲಯದ ಹೊರಗಿನ ನಡವಳಿಕೆಗಳು, ಸದಾ ಮಾಧ್ಯಮದೊಂದಿಗೆ ಮಾತಾಡುವ ವ್ಯಾಮೋಹ ಇವು ಆಗಾಗ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡಿವೆ. ಮಹಿಳಾ ಹಕ್ಕುಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಅವರು, ಕೊಲಿಜಿಯಂನಲ್ಲಿ 17 ನ್ಯಾಯಾಧೀಶರನ್ನು ನೇಮಿಸಿ ದರೂ ಅದರಲ್ಲಿ ಒಬ್ಬರೂ ನ್ಯಾಯಾಽಶೆ ಇರಲಿಲ್ಲ!
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ, ಅದರ ತತ್ವ-ಸಿದ್ಧಾಂತಕ್ಕೆ ವ್ಯತಿರಿಕ್ತವಾದ ತೀರ್ಪು ಬಾರದಂತೆ ನೋಡಿಕೊಳ್ಳಲೆಂದು ಸೂಕ್ಷ್ಮ ಪ್ರಕರಣಗಳನ್ನು ನಿರ್ದಿಷ್ಟ ನ್ಯಾಯಮೂರ್ತಿಗಳ ಪೀಠಗಳಿಗೆ ನೀಡುತ್ತಾರೆ/ವರ್ಗಾಯಿಸುತ್ತಾರೆ ಎಂಬ ಗುರುತರ ಆರೋಪ ಅವರ ಮೇಲೆ ಬಂದು ಒಂದಷ್ಟು ವಿವಾದವಾಗಿತ್ತು. ರಾಜಕೀಯ ಸೂಕ್ಷ್ಮತೆಯಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಮೂರ್ತಿ ಲೋಯಾ ಅವರ ಕೊಲೆ ಪ್ರಕರಣದ ವಿಚಾರಣೆಗೆ ಅವರು ಅನುಮತಿ ನಿರಾಕರಿಸಿದ್ದು ದೇಶಾದ್ಯಂತ ಸುದ್ದಿಯಾಯಿತು. ಇತ್ತೀಚಿನ ನವರಾತ್ರಿ ಆಚರಣೆ ವೇಳೆ ಅವರು ಪ್ರಧಾನಿ ಮೋದಿಯವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದೂ ಒಂದಷ್ಟು ಪರ-ವಿರೋಧ ಚರ್ಚೆಗೆ, ವಿವಾದಕ್ಕೆ ಕಾರಣವಾಯಿತು. ‘ಕಣ್ಣಿಗೆ ಬಟ್ಟೆ ಕಟ್ಟಿ ತಕ್ಕಡಿ ಹಿಡಿದು ನಿಂತಿದ್ದ’ ನ್ಯಾಯ ದೇವತೆಯ ಪ್ರತಿಮೆಯನ್ನು ಚಂದ್ರಚೂಡ್ ತಮ್ಮ ಅಧಿಕಾರಾವಧಿಯಲ್ಲಿ ಬದಲಿಸಿದರು. ‘ಕಣ್ಣಿನ ಬಟ್ಟೆಯಿಲ್ಲದೆ ಎಲ್ಲವನ್ನೂ ಗಮನಿಸುವ’ ಪ್ರತಿಮೆ ಈಗ ಹೊಸ ನ್ಯಾಯದೇವತೆ.
“ಭಾರತದ ಕಾನೂನು ಕುರುಡಾಗಿಲ್ಲ, ವಸಾಹತುಶಾಹಿ ಧೋರಣೆಗೆ ಮುಕ್ತಿ ನೀಡುವ ಮಹತ್ವದ ಕ್ರಮವಾಗಿ ಕಣ್ಣಿನ ಬಟ್ಟೆ ತೆರೆದು ಎಲ್ಲರನ್ನೂ ಸಮಾನವಾಗಿ ನೋಡುವ ನ್ಯಾಯದೇವತೆಯು ನವಭಾರತದ ನ್ಯಾಯಾಂಗದ ಸಂಕೇತ” ಎಂಬುದು ಈ ಹೊಸ ಪ್ರತಿಮೆಯ ಕುರಿತಾದ
ವಿವರಣೆ. ಚರಿತ್ರೆಯಲ್ಲಿ ಈ ಬದಲಾವಣೆ ದಾಖಲಾಗಿದ್ದೂ ಚಂದ್ರಚೂಡರ ನೇತೃತ್ವದಲ್ಲೇ. ಒಳ್ಳೆಯ ಮತ್ತು ಒಳ್ಳೆಯದಲ್ಲದ ವಿಚಾರಗಳೆರಡಕ್ಕೂ
ಸಮಾನವಾಗಿ ಸುದ್ದಿಯಲ್ಲಿ ಮತ್ತು ಟ್ರೆಂಡಿಂಗ್‌ನಲ್ಲಿ ಇರುತ್ತಿದ್ದ ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾಗಿದ್ದಾರೆ. ಚಂದ್ರಚೂಡರ ನಿವೃತ್ತಿ ಜೀವನ ಸುಖ-ಸಮೃದ್ಧಿಯಿಂದ ತುಂಬಿರಲಿ, ಅವರ ಸ್ಥಾನಕ್ಕೆ ನಿಯುಕ್ತರಾಗಿರುವ ಸಂಜೀವ್ ಖನ್ನಾ ಅವರು ಅಪ್ರತಿಮ
ನ್ಯಾಯಮೂರ್ತಿಗಳಾಗಿ ಹೊರಹೊಮ್ಮಲಿ, ನ್ಯಾಯ ಸದಾ ಉಳಿದು ದೇಶ ಗೆಲ್ಲಲಿ ಎಂದು ಹೃತ್ಪೂರ್ವಕವಾಗಿ ಹಾರೈಸೋಣ.
(ಲೇಖಕರು ಸಾಫ್ಟ್ ವೇರ್ ಉದ್ಯೋಗಿ)