ಇದೇ ಅಂತರಂಗ ಸುದ್ದಿ
vbhat@me.com
ಸ್ವಾಮೀಜಿ ಹಾಗೂ ಸಂಪಾದಕರಾಗುವ ಒಂದು ಲಾಭವೇನೆಂದರೆ, ಇವರನ್ನು ನೋಡಲು ಬರುವವರು ಸಾಮಾನ್ಯವಾಗಿ ಖಾಲಿ ಕೈಯಲ್ಲಿ ಬರುವುದಿಲ್ಲ. ಸ್ವಾಮಿಗಳನ್ನು ಬೇಟಿಯಾಗಲು ಬರುವವರು ಹಣ್ಣು-ಹಂಪಲು, ಕಾಯಿ, ಹಾರ ಹಿಡಿದುಕೊಂಡು ಬರುತ್ತಾರೆ.
ಆದರೆ ಸಂಪಾದಕರನ್ನು ಬೇಟಿಯಾಗಲು ಬರುವವರು ಪುಸ್ತಕ ಹಿಡಿದುಕೊಂಡು ಬರುತ್ತಾರೆ. ಅದರಲ್ಲೂ ಲೇಖಕರು, ಕವಿಗಳು ತಮ್ಮ ಇತ್ತೀಚಿನ ಕೃತಿಗಳೊಂದಿಗೆ ಬರುತ್ತಾರೆ. ನನಗೆ ಪುಸ್ತಕ ಇಷ್ಟವೆಂದು ನನ್ನ ಓದುಗರಿಗೆ ಗೊತ್ತಿರುವುದರಿಂದ, ಯಾವುದಾದರೂ ಪುಸ್ತಕ ತಂದು ಕೊಡುತ್ತಾರೆ. ಇನ್ನುಕೆಲವರು ಪುಸ್ತಕ ನೀಡುತ್ತಾ, ‘ಸಾರ್, ಈ ಪುಸ್ತಕ ಓದಿ, ಅಷ್ಟೇ ಅಲ್ಲ ಇದರ ಬಗ್ಗೆ ಬರೆಯಿರಿ. ಓದುಗರಿಗೆ ಉಪಯುಕ್ತವಾಗುತ್ತದೆ’ ಎಂಬ ಪ್ರೀತಿಯ ಒತ್ತಾಯವನ್ನು ಮಾಡುತ್ತಾರೆ. ಇದು ಅತ್ಯಂತ ಸ್ವೀಕಾರಾರ್ಹ ಬೇಡಿಕೆಯೇ.
ಕೆಲ ವರ್ಷದ ಹಿಂದೆ ಪತ್ರಿಕೆಯ ಓದುಗರಾದ ರಾಮಮೂರ್ತಿ ಎಂಬುವವರು ಆಫೀಸಿಗೆ ಬಂದು, ಒಂದು ಪುಸ್ತದ ಕೈಗಿತ್ತು, ‘ಇದನ್ನು ನೀವೇ ಅನುವಾದಿಸ ಬೇಕು. ಅದು ನನ್ನ ಆಸೆ. ದಯವಿಟ್ಟು ಇಲ್ಲ ಎನ್ನಬೇಡಿ. ಶೀಘ್ರದಲ್ಲಿಯೇ ಆ ಪುಸ್ತಕ ಬಿಡುಗಡೆಯಾಗಬೇಕು. ಈ ನನ್ನ ಕೋರಿಕೆ ನೇರವೇರಿಸಿ ಕೊಡುತ್ತೀರಾ? ಒಬ್ಬ ಓದುಗನ ಆಸೆಯನ್ನು ಸಂಪಾದಕರಾಗಿ ಈಡೇರಿಸುತ್ತೀರಿ ಎಂಬ ನಂಬಿಕೆಯಿಂದ ಬಂದಿದ್ದೇನೆ’ ಎಂದು ನನ್ನ ಪ್ರತಿಕ್ರಿಯೆಗೆ ಕಾತರ ರಾದವರಂತೆ ಮುಖವನ್ನೇ ದಿಟ್ಟಿಸುತ್ತಿದ್ದರು. ಆ ಮಹಾನುಭಾವರಿಂದ ಪುಸ್ತಕ ಸ್ವೀಕರಿಸಿ, ಅದಕ್ಕೆ ಕಟ್ಟಿದ ಹೊದಿಕೆಗಳನ್ನು ತೆಗೆದು ಪುಸ್ತಕ ನೋಡಿದೆ. ಪುಟಗಳನ್ನೆಲ್ಲ ಸರ್ರನೆ ತಿರುವಿದೆ. ಆ ಹಿರಿಯ ಓದುಗರ ಮುಖ ನೋಡಿ ನಕ್ಕು ಸುಮ್ಮನಾದೆ.
‘ಸಾರ್, ಏನೂ ಹೇಳಲೇ ಇಲ್ಲವಲ್ಲಾ? ಅನುವಾದ ಮಾಡ್ತೀರಿ ತಾನೇ? ಹೂಂ ಅನ್ನಿ. ನಿಮ್ಮನ್ನು ಇಪ್ಪತ್ತು ವರ್ಷಗಳಿಂದ ಓದಿದವನು ನಾನು. ನೀವು ನನಗಿಂತ ಕಿರಿಯರಿರಬಹುದು. ಆದರೆ ಹೆಮ್ಮೆಯಿಂದ ಹೇಳ್ತೇನೆ, ನಾನು ನಿಮ್ಮ ಅಭಿಮಾನಿ. ಈ ಅಭಿಮಾನಿ ಓದುಗನ ಆಸೆ ಈಡೇರಿಸಲೇಬೇಕು. ಪ್ಲೀಸ್ ಹೂಂ ಅನ್ನಿ’ ಎಂದವರೇ ತಮ್ಮ ಬಲಗೈಯನ್ನು ನನ್ನತ್ತ ಚಾಚಿದರು. ಅವರ ಮಾತಿನಲ್ಲಿ, ಮುಖದಲ್ಲಿ ಎಂಥ ಪ್ರೀತಿ, ಒತ್ತಾಸೆ, ಆರ್ದ್ರಭಾವ ಇತ್ತೆಂದರೆ, ಆ ಕೃತಿ ಅರ್ಥಶಾಸ, ಕಾಮಶಾಸ ಅಥವಾ ತಳಿಶಾಸದ ಬಗ್ಗೆ ಇದ್ದರೂ ಅನುವಾದಿಸಲೇಬೇಕು ಎಂಬಂತಿತ್ತು. ‘ಇಲ್ಲ ಆಗೊಲ್ಲ’ ಎಂದು ಹೇಳಲು ಮನಸ್ಸು ಒಪ್ಪಲೇ ಇಲ್ಲ. ‘ಒಮ್ಮೆ ಪುಸ್ತಕ ಓದಿ ತಿಳಿಸುತ್ತೇನೆ’ ಎಂದೆ. ‘ಸಾರ್, ಪುಸ್ತಕ ಓದಿ ಆದರೆ ಓದಿದ ನಂತರ ಆಗೊಲ್ಲ ಅಂತ ಮಾತ್ರ ಹೇಳಬೇಡಿ’ ಅಂದರು.
‘ಒಳ್ಳೆ ಫಜೀತಿಯಾಯ್ತಲ್ಲ ಎಂದುಕೊಂಡೆ. ಸುಮಾರು ಮುನ್ನೂರು ಪುಟಗಳ ಪುಸ್ತಕ. ಕನಿಷ್ಠ ಮೂರ್ನಾಲ್ಕು ತಿಂಗಳಾದರೂ ಬೇಕು. ಆದರೆ ಇವರು ಶೀಘ್ರದಲ್ಲಿಯೇ ಅನುದಾನ ಮಾಡಿಕೊಡಿ ಎಂದು ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ನಾನೇನು ಬರೆದು ಬರೆದು ಹಾಕುವ -ಕ್ಟರಿಯಾ? ಜತೆಗೆ ದೈನಂದಿನ
ಓದು, ಬರಹ, ಸುತ್ತಾಟ, ಕಚೇರಿ ಕೆಲಸ, ಹಣಕಾಸು ನಿರ್ವಹಣೆ, ನೂರಾರು ಫೋನ್ ಕರೆಗಳು, ವಾಟ್ಸಪ್ ಸಂದೇಶ…ಈ ಎಲ್ಲ ಜಂಜಾಟಗಳ ಮಧ್ಯೆ ಈ ಜವಾಬ್ದಾರಿ ಹೊತ್ತುಕೊಳ್ಳುವುದು ಹೇಗೆ? ಈ ಎಲ್ಲ ಯೋಚನೆಗಳೂ ಹಾದೂ ಹೋದವು. ಆದರೆ ಎದುರಿಗೆ ಕುಳಿತ ವ್ಯಕ್ತಿ ಸಾಮಾನ್ಯನಲ್ಲ.
ಅನ್ನದಾತ, ಅಕ್ಷರ ಪ್ರೇಮಿ! ಅವನಿಗೂ ನನ್ನ ಮೇಲೆ ಹಕ್ಕು ಚಲಾಯಿಸಲು ಅಧಿಕಾರ ಇದ್ದೇ ಇದೆ. ಅವನ ಹುಕುಮ್ಮಿನ ಮುಂದೆ ನನ್ನ ಯಾವ ಹಮ್ಮು ನಡೆಯುವುದಿಲ್ಲ. ಅಲ್ಲದೇ ಆ ಹಿರಿಯ ಓದುಗರು ವಿನಂತಿಸಿಕೊಂಡ ಪರಿ ಹೇಗಿತ್ತೆಂದರೆ, ಅದು ಯಾವುದೇ ಪುಸ್ತಕವಿರಲಿ, ಮರು ಮಾತಾಡದೇ ಒಪ್ಪಿ ಕೊಂಡುಬಿಡಬೇಕು, ಹಾಗಿತ್ತು. ಮರು ಮಾತಾಡದೇ ಒಪ್ಪಿಕೊಂಡೆ. ಓದುಗ ಪ್ರಭುವಿಗೆ ಮಣಿದಿದ್ದೇನೆ. ಆ ಪುಸ್ತಕ ಅನುವಾದಿಸಿ ಕೈಗಿಡುವುದಷ್ಟೇ ನನ್ನ ಕೆಲಸ.
ಟಾಯ್ಲೆಟ್ ಪೇಪರ್ ಅಂಗಡಿ
ನನ್ನ ಸ್ನೇಹಿತರೊಬ್ಬರು ಅವೆನ್ಯೂ ರಸ್ತೆಯಲ್ಲಿ ನ್ಯಾಪ್‌ಕಿನ್, ಟಾಯ್ಲೆಟ್ ರೋಲ್ಸ್, ಟಿಶ್ಯು ಪೇಪರ್‌ಗಳನ್ನು ಮಾರಾಟಕ್ಕಿಟ್ಟುಕೊಂಡಿದ್ದಾರೆ. ಒರೆಸಿ ಬಿಸಾಡುವ ಈ ಕಾಗದಗಳಲ್ಲೂ ಅಷ್ಟೊಂದು ವೈವಿಧ್ಯ, ವೈಶಿಷ್ಟ್ಯ. ಬಾತ್‌ರೂಮ್, ಅಡುಗೆ ಮನೆ, ಜಗುಲಿ, ಬೆಡ್‌ರೂಮುಗಳಲ್ಲಿ ಬಳಸಲೆಂದೇ ಪ್ರತ್ಯೇಕ ನ್ಯಾಪ್‌ಕಿನ್ ಅಥವಾ ಟಿಶ್ಯುಪೇಪರ್‌ಗಳು. ಅವರ ಅಂಗಡಿಯಲ್ಲಿ ಇವುಗಳನ್ನು ಬಿಟ್ಟರೆ ಬೇರೇನೂ ಸಿಗುವುದಿಲ್ಲ.
ನನ್ನ ಸ್ನೇಹಿತರು ತಾವು ಕುಳಿತುಕೊಳ್ಳುವ ಜಾಗದಲ್ಲಿ ಸುಂದರ ಅಕ್ಷರಗಳಲ್ಲಿ ಕೆತ್ತಿದ ಅಕ್ಷರಗಳ ಒಂದು ಬೋರ್ಡನ್ನು ನೇತುಹಾಕಿಕೊಂಡಿದ್ದರು – ‘If you can market toilet paper, you can easily market gold.’ ಟಾಯ್ಲೆಟ್ ಪೇಪರ್ ಮಾರಾಟ ಮಾಡಿದರೆ, ಬಂಗಾರ ಮಾರುವು ದೇನು ಮಹಾ ಎಂದು ಟಾಯ್ಲೆಟ್ ಪೇಪರ್ ಮಾರಾಟ ಮಹಿಮೆಯನ್ನು ಬಣ್ಣಿಸಿದ್ದರು. ಟಾಯ್ಲೆಟ್‌ನಲ್ಲೂ, ಅದರಲ್ಲೂ ಸಾರ್ವಜನಿಕ ಟಾಯ್ಲೆಟ್‌ನಲ್ಲಿ ತಗುಲಿ ಹಾಕಬಹುದಾದ ಫಲಕಗಳನ್ನೂ ಅವರು ಮಾರಾಟಕ್ಕಿಟ್ಟಿದ್ದರು.
ಅಂಥ ಒಂದು ಫಲಕದ ಮೇಲೆ ಹೀಗೆ ಬರೆದಿತ್ತು- ‘Changing the toilet paper roll will not cause brain damage’. ಇದೇ ರೀತಿ, ಇಷ್ಟವಾದ ಮತ್ತೊಂದು ಬರಹ- ‘ಎಲ್ಲರೂ ಜಗತ್ತನ್ನು ಬದಲಿಸಬೇಕೆಂದು ಬಯಸುತ್ತಾರೆ. ಆದರೆ ಟಾಯ್ಲೆಟ್ ಪೇಪರ್ ರೋಲ್‌ನ್ನು ಬದಲಿಸಬೇಕೆಂದು ಯಾರೂ ಬಯಸುವುದಿಲ್ಲ. ಎರಡನೆಯದನ್ನು ಬದಲಿಸದೇ ಮೊದಲನೆಯದನ್ನು ಬದಲಿಸಲು ಸಾಧ್ಯವಿಲ್ಲ.’ ‘ಯಾವುದು ಇಲ್ಲ ಎನ್ನುವುದು ಎಲ್ಲವೂ ಇದ್ದಾಗ ಅನಿಸದಿರಬಹುದು. ಟಾಯ್ಲೆಟ್‌ನಲ್ಲಿ ಪೇಪರ್ ಮತ್ತು ನೀರು ಇಲ್ಲದಿದ್ದರೆ ಎಲ್ಲಾ ಇದ್ದೂ ಏನೂ ಇಲ್ಲದಂತೆ’ ಎಂಬ ವಕ್ರತುಂಡೋಕ್ತಿ ಮಾದರಿಯ ಬರಹಗಳು ಟಾಯ್ಲೆಟ್‌ನ್ನು ಸಹ ಸುಂದರ ತಾಣವಾಗಿ ಮಾಡಲು ಸಹಾಯಕವಾಗಬಲ್ಲವು.
ನಾನು ಆ ಅಂಗಡಿಯಲ್ಲಿ ಕೆಲವು ಟಾಯ್ಲೆಟ್ ಪೇಪರ್‌ಗಳನ್ನು ಖರೀದಿಸಿದ ನಂತರ, ಬರುವಾಗ ನನ್ನ ಸ್ನೇಹಿತರು, ಗ್ರೀಟಿಂಗ್ ಕಾರ್ಡ್ ಹಾಗೂ ಹೊಸ ವರ್ಷದ ಡೈರಿ ಕೊಟ್ಟರು. ಗ್ರೀಟಿಂಗ್ ಕಾರ್ಡ್‌ನಲ್ಲಿ ಬರೆದಿತ್ತು- ‘Make your life like toilet paper. Long and useful’.. ನನಗೆ ಪೇಪರ್ ಅಂಗಡಿ ಗೊತ್ತಿತ್ತು. ಟಾಯ್ಲೆಟ್ ಅಂಗಡಿಯೂ ಗೊತ್ತಿತ್ತು. ಟಾಯ್ಲೆಟ್ ಪೇಪರ್ ಅಂಗಡಿ ಮಾತ್ರ ಹೊಸತು.
ಹೆಸರಿನ ಫಜೀತಿ!
ಕೆಲವು ವರ್ಷದ ಹಿಂದೆ ಸಿಎನ್‌ಎನ್ ವಾರ್ತಾವಾಚಕಿ ಆಫ್ರಿಕಾದ ಕಾಮಿಡಿಯನ್ ಹೆಸರು ಹೇಳಲು ತಡಬಡಾಯಿಸಿದ್ದು, ಹೇಗೆ ಉಚ್ಚರಿಸಬೇಕು ಎಂದು ಪದೇಪದೆ ಪ್ರಯತ್ನಿಸಿದ್ದು, ಕೊನೆಗೂ ಹೆಸರು ಹೇಳಲಾಗದೇ ಸೋತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಾನೂ ಒಂದು ಕೈ ನೋಡೇ
ಬಿಡೋಣ ಎಂದು ಅವನ ಹೆಸರನ್ನು ಉಚ್ಚರಿಸಲು ಪ್ರಯತ್ನಿಸಿದೆ. ಆತನ ಹೆಸರನ್ನು ಸರಿಯಾಗಿ ಹೇಳಿದರೂ ವ್ವೆ..ವ್ವೆ…ವ್ವೆ… ಎಂದು ಹೇಳಿದಂತೆ ಕೇಳಿಸಿ, ತಪ್ಪು ಉಚ್ಚಾರ ಎಂಬ ಭಾವನೆ ನಮಗೇ ಮೂಡುತ್ತದೆ. ಅಂದಹಾಗೆ ಆ ಮಹಾನುಭಾವನ ಹೆಸರನ್ನು ಇಂಗ್ಲಿಷಿನಲ್ಲೇ ಬರೆಯುತ್ತೇನೆ. ನೀವು ಹೇಗೆ ಬೇಕಾ ದರೂ ಓದಿಕೊಳ್ಳಿ- Uvuvwevwevwe Onyetenyevwe Ugwemuhwem Osas. . ಇದೇನು ಹೆಸರಾ, ವಾಕ್ಯವಾ ಎಂಬುದು ಗೊತ್ತಾಗುವು ದಿಲ್ಲ.
ಇದರಲ್ಲಿ ಅವನ ಹೆಸರು ಯಾವುದೋ, ಅವನ ಅಪ್ಪನ ಹೆಸರು ಯಾವುದೋ, ಅಡ್ಡ ಹೆಸರು ಯಾವುದೋ ಆ ಭಗವಂತನೇ ಬಲ್ಲ. ಈ ಹೆಸರಿನ ಅರ್ಥವೇನೋ? ಯಾರೂ ಸಹ ತಮ್ಮ ಮಕ್ಕಳಿಗೆ ಅಸಹ್ಯದ ಹೆಸರನ್ನಂತೂ ಉದ್ದೇಶಪೂರ್ವಕವಾಗಿ ಇಡುವುದಿಲ್ಲ. ಈ ಹೆಸರನ್ನಿಟ್ಟ ತಂದೆ-ತಾಯಿ ಈ ಹೆಸರಿನಲ್ಲಿ ಅದೆಂಥ ಚೆಂದ ಕಂಡರೋ? ಅದೇನೇ ಇರಲಿ, ಆದರೆ ಅವನ ಹೆಸರನ್ನು ಪ್ರತಿನಿತ್ಯ ಹೇಳುವ ಅವನ ಪರಿಚಿತರು, ಸ್ನೇಹಿತರು, ಅಭಿಮಾನಿಗಳ
ಕತೆಯೇನು? ಅದಕ್ಕಿಂತ ದೊಡ್ಡ ಶಿಕ್ಷೆ ಬೇರೇನಿದೆ? ಜಿಂಬಾಬ್ವೆ ದೇಶದ ಅಧ್ಯಕ್ಷನಿದ್ದ. ಆತನ ಹೆಸರು ಕನಾನ ಬನಾನ (Canaan Banana) ಅಂತ. ೧೯೮೦ ರಿಂದ ೧೯೮೭ರ ವರೆಗೆ ಆತ ಆ ದೇಶದ ಅಧ್ಯಕ್ಷನಾಗಿದ್ದ. ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ, ದಿಲ್ಲಿಯಿಂದ ಪ್ರಸಾರವಾಗುತ್ತಿದ್ದ ಆಕಾಶವಾಣಿ ಕನ್ನಡ
ವಾರ್ತೆಯಲ್ಲಿ ಕನಾನ ಬನಾನ ಹೆಸರು ಮೇಲಿಂದ ಮೇಲೆ ಪ್ರಸ್ತಾಪವಾಗುತ್ತಿತ್ತು. ಮೊದಮೊದಲು ಈ ಹೆಸರನ್ನು ಕೇಳಿದಾಗ ಅರ್ಥವೇ ಆಗುತ್ತಿರಲಿಲ್ಲ. ಕ್ರಮೇಣ ಜಿಂಬಾಬ್ವೆ ಅಧ್ಯಕ್ಷ ಕನಾನ ಬನಾನ ಎಂದು ಕಂಠಪಾಠವಾಗಿ ಹೋಯಿತು. ಆಕಾಶವಾಣಿಯ ಖ್ಯಾತ ವಾರ್ತಾ ವಾಚಕ ರಂಗರಾವ್, ಇವರ ಹೆಸರನ್ನು ಒತ್ತಿ ಒತ್ತಿ ಹೇಳುತ್ತಿದ್ದರೆ, ಪ್ರಾಸಬದ್ಧವಾಗಿ, ತಮಾಷೆಯಾಗಿ ಕೇಳಿಸುತ್ತಿತ್ತು.
೨೦೦೧ರಲ್ಲಿ ಆತ ತೀರಿಕೊಂಡಾಗ, ಕನ್ನಡದ ಪ್ರಮುಖ ಪತ್ರಿಕೆಯ ‘ವಿದೇಶವಾರ್ತೆ ವಿಭಾಗ’ದಲ್ಲಿ ಜಿಂಬಾಬ್ವೆ ಮಾಜಿ ಅಧ್ಯಕ್ಷ ನಿಧನ ಎಂಬ ಶೀರ್ಷಿಕೆ ಯಡಿಯಲ್ಲಿ ‘ಕನಾನ ಬಾಳೆಹಣ್ಣು’ ನಿಧನರಾಗಿ ದ್ದಾರೆ ಎಂದು ಪ್ರಕಟವಾಗಿತ್ತು. ಈ ಸುದ್ದಿಯನ್ನು ಬರೆದವರು ಯಾರು ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸಿ ವಿಫಲನಾದೆ. ಗೊತ್ತಾಗಿದ್ದರೆ ‘ಪುಲಿಟ್ಜರ್ ಪ್ರಶಸ್ತಿ’ಗೆ ಶಿಫಾರಸು ಮಾಡಬಹುದಿತ್ತು. ಇದೇ ರೀತಿ ತಮಾಷೆಯಾಗಿ ಕೇಳಿಸುತ್ತಿದ್ದ ಇನ್ನೆರಡು ಹೆಸರುಗಳೆಂದರೆ, ನೈಜೀರಿಯಾದ ಮಾಜಿ ಅಧ್ಯಕ್ಷ ಗುಡ್‌ಲಕ್ ಜೊನಾಥನ್ ಹಾಗೂ ಮಲಾವಿ ಮಾಜಿ ಅಧ್ಯಕ್ಷ ಹೇಸ್ಟಿಂಗ್ಸ್ ಬಂಡ.
ಪತ್ರಿಕೆಯಲ್ಲಿ ‘ಬಂಡ ಹೇಳಿದರು.. ಬಂಡ ತಿಳಿಸಿದರು, ಬಂಡ ನುಡಿದರು’ ಎಂದು ಬರೆಯುತ್ತಿದ್ದರು. ಇನ್ನು ಕೆಲವು ಪತ್ರಿಕೆಗಳಲ್ಲಿ ‘ಬಂದ ಹೇಳಿದರು, ಬಂದ ನುಡಿದರು’ ಎಂದು ಬರೆಯುತ್ತಿದ್ದರು. ಹೆಡ್‌ಲೈನ್‌ಗಳಲ್ಲಿ ‘ಬಂಡುಕೋರರಿಗೆ ಹೆದರುವುದಿಲ್ಲ: ಬಂಡ’ ಎಂದು ಬರೆದರೆ ಓದುಗರು ತಬ್ಬಿಬ್ಬು.
ಆಫ್ರಿಕಾದ ಝೈರೆ ಗಣರಾಜ್ಯ(ಕಾಂಗೋ)ವನ್ನು ಮೂವತ್ತೆರಡು ವರ್ಷಗಳ ಕಾಲ ಆಳಿದ ಮಿಲಿಟರಿ ಆಡಳಿತಗಾರ ಹಾಗೂ ರಾಷ್ಟ್ರಾಧ್ಯಕ್ಷನ ಹೆಸರು ಒಂದು ಮೈಲಿ ಉದ್ದವಿತ್ತು. ವಿಚಿತ್ರ ಅಂದ್ರೆ ಆತ ತನ್ನನ್ನು ಪೂರ್ಣ ಹೆಸರಿನೊಂದಿಗೆ ಕರೆಯುವಂತೆ ಆದೇಶ ಹೊರಡಿಸಿದ್ದ. ಅಂದ ಹಾಗೆ ಅವನ ಹೆಸರು- ಮೊಬುಟು ಸೆಸೆ ಸೆಕೋ ಕುಕು ನಬೆಂಡು ವಾ ಝಾ ಬಂಗಾ! ಪತ್ರಿಕೆಗಳ ಶೀರ್ಷಿಕೆಗಳಲ್ಲಿ ಮಾತ್ರ ‘ಮೊಬುಟು’ ಎಂದು ಬರೆಯುತ್ತಿದ್ದರು. ಹೆಡ್‌ಲೈನ್‌ಗಳಲ್ಲೂ ಪೂರ್ಣ ಹೆಸರು ಬಳಸಬೇಕೆಂದು ಕಟ್ಟಪ್ಪಣೆ ಹೊರಡಿಸಿದ್ದಿದ್ದರೆ…ಪ್ರತಿದಿನವೂ ಎಂಟು ಕಾಲಮ್ಮು ಹೆಡ್‌ಲೈನ್ ಬರೆಯ ಬೇಕಾಗುತ್ತಿತ್ತು!
ಮಂಡಿನೋವಿಗೆ ಕಾರಣವೇನು?
ಜೋಕನ್ನು ಜೋಕು ಎಂದು ಭಾವಿಸಿ ಅಂತ ಕೇಳಿಕೊಳ್ಳುವ, ಬೇಡಿಕೊಳ್ಳುವ ಕಾಲ ಬಂದಿದೆ. ಹಾಸ್ಯವನ್ನು ಕೇಳಿ ನಕ್ಕು ಹಗುರಾಗುವುದನ್ನು ಬಿಟ್ಟು, ಅದನ್ನು ವಿಮರ್ಶಿಸುವ, ಟ್ರೋಲ್ ಮಾಡಿ ವಿಕೃತ ಸಂತಸ ಅನುಭವಿಸುವ ವಿಚಿತ್ರ ಕಾಲ ಘಟ್ಟದಲ್ಲಿ ಇದ್ದೇವೆ. ಈ ತಮಾಷೆ ಪ್ರಸಂಗ ಓದಿದ ಬಳಿಕವೂ, ಕೆಲವು ಅವಿವೇಕಿಗಳು ಹಾಗೆ ಮಾಡಿದರೂ ಅಚ್ಚರಿಯಿಲ್ಲ. ಅದೇನೇ ಇರಲಿ, ಇತ್ತೀಚೆಗೆ ಜರ್ಮನಿಯ ಕಲೋನ್‌ಗೆ ಹೋದಾಗ, ಅಲ್ಲಿನ ಹೋಟೆಲ್ ಮ್ಯಾನೇಜರ್ ಹೇಳಿದ ಜೋಕನ್ನು ನಿಮಗೆ ಹೇಳುತ್ತಿದ್ದೇನೆ.
ಒಮ್ಮೆ ಕುಡುಕನೊಬ್ಬ ಬಸ್ಸನ್ನೇರಿದ. ಕಂಠಪೂರ್ತಿ ಕುಡಿದಿದ್ದ, ಆತ ಬಿಶಪ್ ಪಕ್ಕದಲ್ಲಿ ಕುಳಿತ. ಕುಡುಕನ ಅಂಗಿ ಕೊಳೆಯಾಗಿತ್ತು. ಅವನ ಕೆನ್ನೆ ಮೇಲೆ ಲಿಪ್‌ಸ್ಟಿಕ್ ಗುರುತುಗಳಾಗಿದ್ದವು. ಅಲ್ಲದೇ ಅವನ ಕೋಟಿನ ಜೇಬಿನಲ್ಲಿ ಅರ್ಧ ಖಾಲಿಯಾದ ಶೆರೆ ಬಾಟಲಿಯಿತ್ತು. ಬಸ್ಸಿನಲ್ಲಿ ಕುಳಿತ ಆ ಕುಡುಕ, ಪೇಪರ್ ತೆಗೆದು ಓದಲಾರಂಭಿಸಿದ. ಐದು ನಿಮಿಷಗಳ ನಂತರ ಪಕ್ಕದಲ್ಲಿ ಕುಳಿತ ಬಿಶಪ್‌ಗೆ, ‘ಫಾದರ್, ಮಂಡಿನೋವಿಗೆ ಕಾರಣ ಏನು ಹೇಳ್ತೀರಾ?’ ಎಂದು
ಕೇಳಿದ.
‘ಜೀವನವಿಡಿ ಕಚಡಾ ಶೆರೆ ಕುಡಿಯುವುದರಿಂದ, ವೇಶ್ಯೆಯರ ಸಹವಾಸ ಮಾಡುವುದರಿಂದ, ಶಿಸ್ತಿಲ್ಲದೇ ಬೇಕಾಬಿಟ್ಟಿ ಜೀವನ ಸಾಗಿಸುವುದರಿಂದ ಮಂಡಿನೋವು, ಸಂದಿವಾತ ಬರುತ್ತದೆ. ಗೊತ್ತಿರಲಿ’ ಎಂದು ಬಿಶಪ್ ತುಸು ಸಿಡುಕಿನಿಂದ ಹೇಳಿದ. ಇದರಿಂದ ಕುಡುಕನಿಗೆ ತನ್ನನ್ನು ಉದ್ದೇಶಿಸಿಯೇ ಹಾಗೆ ಹೇಳಿದ್ದು ಎಂಬುದು ಗೊತ್ತಾಗಲಿ ಎಂಬುದು ಬಿಶಪ್ ಉದ್ದೇಶವಾಗಿತ್ತು. ಬಿಶಪ್ ಮಾತುಗಳನ್ನು ಕೇಳಿಸಿಕೊಂಡ ಕುಡುಕ ‘ಹೌದಾ? ಗೊತ್ತೇ ಇರಲಿಲ್ಲ’ ಎಂದು ಹೇಳಿ, ತನ್ನ ಪಾಡಿಗೆ ಪತ್ರಿಕೆ ಓದುವುದರಲ್ಲಿ ತಲ್ಲೀನನಾದ. ಹದಿನೈದು ನಿಮಿಷಗಳ ನಂತರ ಬಿಶಪ್‌ಗೆ ತಾನು ಅಷ್ಟು ಒರಟಾಗಿ, ಬಿರುಸಾಗಿ ಮಾತಾಡಬಾರದಿತ್ತು ಎಂದೆನಿಸಿತು.
‘ಕ್ಷಮಿಸಿ, ನಿಮಗೆ ನನ್ನ ಮಾತುಗಳಿಂದ ನೋವಾಯಿತೋ ಏನೋ? ಅಂದಹಾಗೆ ಎಷ್ಟು ದಿನಗಳಿಂದ ಮಂಡಿ ನೋವನ್ನು ಅನುಭವಿಸುತ್ತಿದ್ದೀರಿ?’ ಎಂದು ಬಿಶಪ್ ಕೇಳಿದ. ಅದಕ್ಕೆ ಕುಡುಕ ಹೇಳಿದ. ‘ನನಗೆ ಮಂಡಿನೋವೇನೂ ಇಲ್ಲ. ಪೇಪರ್ ಓದುತ್ತಿದ್ದೆನಲ್ಲಾ. ಅಲ್ಲಿ ಒಂದು ಸುದ್ದಿ ಕಾಣಿಸಿತು. ಪೋಪ್‌ಗೆ ಮಂಡಿನೋವಂತೆ. ಹೀಗಾಗಿ ಕೇಳಿದೆ ಅಷ್ಟೆ’ ಪೆಚ್ಚಾದ ಬಿಶಪ್ ಅಲ್ಲಿಂದ ಎದ್ದು ಬೇರೆ ಸೀಟಿನಲ್ಲಿ ಹೋಗಿ ಕುಳಿತ. ಹಣೆ ಚಚ್ಚಿಕೊಂಡ ದೇವರು ಯಾವುದೇ ಸುದ್ದಿಯಿರಬಹುದು, ಎರಡು ಪತ್ರಿಕೆಗಳಲ್ಲಿ ಒಂದೇ ರೀತಿ ಪ್ರಕಟವಾಗುವುದಿಲ್ಲವಂತೆ. ಒಂದೇ ಸುದ್ದಿ ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿ ಪ್ರಕಟವಾಗುತ್ತದೆ. ಇದಕ್ಕೆ ಕಾರಣ ಒಬ್ಬ ಪತ್ರಕರ್ತನಂತೆ ಮತ್ತೊಬ್ಬ ಇಲ್ಲ. ಒಬ್ಬ ಸಂಪಾದಕ ಮತ್ತೊಬ್ಬ ಸಂಪಾದಕನ ಅಭಿಪ್ರಾಯ, ನಿಲುವನ್ನು
ಅನುಮೋದಿಸುವುದಿಲ್ಲ. ಹೀಗಾಗಿ ಎಲ್ಲ ಪತ್ರಿಕೆಯೂ ಭಿನ್ನ.
ಒಂದು ದಿನ ಸ್ವತಃ ದೇವರೇ ಪತ್ರಿಕಾಗೋಷ್ಠಿ ಕರೆದನಂತೆ. ದೇವರ ಪತ್ರಿಕಾಗೋಷ್ಠಿ ಅಂದ್ರೆ ಕೇಳಬೇಕೇ? ಎಲ್ಲ ಪತ್ರಕರ್ತರು ಆಗಮಿಸುತ್ತಾರೆಂದು ದೇವರು ಅಂದುಕೊಂಡಿದ್ದನಂತೆ. ಆದರೆ ಕೇವಲ ನಾಲ್ಕು ಪತ್ರಿಕೆಗಳ ವರದಿಗಾರರು ಮಾತ್ರ ಆಗಮಿಸಿದ್ದರು. ದೇವರಿಗೆ ಆಶ್ಚರ್ಯವಾಯಿತು. ಆತ ತನ್ನ ಪತ್ರಿಕಾ ಗೋಷ್ಠಿಗೆ ಎಲ್ಲ ವರದಿಗಾರರು ಕಿತ್ತೆದ್ದು ಬರುತ್ತಾರೆಂದು ನಿರೀಕ್ಷಿಸಿದ್ದ. ಆದರೆ ಬಹುತೇಕ ವರದಿಗಾರರಿಗೆ ದೇವರ ಅಸ್ತಿತ್ವದಲ್ಲೇ ನಂಬಿಕೆ ಇರಲಿಲ್ಲ. ಇನ್ನು ಕೆಲವರಿಗೆ ಯಾರೋ ತಮ್ಮನ್ನು ಫುಲ್ ಮಾಡು ತ್ತಿದ್ದಾರೆ ಎಂದೆನಿಸಿತು. ದೇವರು ಬಂದು ಪತ್ರಿಕಾಗೋಷ್ಠಿ ಮಾಡೋದುಂಟಾ ಎಂದು ರಾಗ ಎಳೆದರು.
ಸರಿ, ದೇವರು ಆ ನಾಲ್ವರು ಪತ್ರಕರ್ತರನ್ನುದ್ದೇಶಿಸಿ, ‘ನೋಡಿ, ನಾನು ದೇವರು ಹೇಳುತ್ತಿದ್ದೇನೆ, ಇನ್ನೂ ಮೂರು ದಿನಗಳಲ್ಲಿ ಈ ಭೂಮಿ ಇರುವುದಿಲ್ಲ. ಪ್ರಳಯವಾಗುತ್ತದೆ’ ಎಂದು ಘೋಷಿಸಿದ. ಈ ಸುದ್ದಿ ಮರುದಿನ ಪತ್ರಿಕೆಗಳಲ್ಲಿ ಹೇಗೆ ವರದಿಯಾಗುತ್ತದೆ ಎಂಬ ಬಗ್ಗೆ ಅವನಿಗೆ ಅತೀವ ಕುತೂಹಲವಿತ್ತು. ಒಂದು ಪತ್ರಿಕೆ ‘ದೇವರ ಆಟ ಇನ್ನು ಮೂರೇ ದಿನ!’ ಎಂದು ವರದಿ ಮಾಡಿತ್ತು. ಇನ್ನೊಂದು ಪತ್ರಿಕೆ ‘ನಕಲಿ ದೇವರಿಂದ ಪ್ರಳಯದ ಬೂಟಾಟಿಕೆ’ ಎಂಬ ಹೆಡ್‌ಲೈನ್ ಬರೆಯಿತು. ಮೂರನೇ ಪತ್ರಿಕೆ ‘ಮೂರು ದಿನಗಳಲ್ಲಿ ಪ್ರಳಯ ಎಂಬ ದೇವರ ಹೇಳಿಕೆ ನಂಬುವುದು ಹೇಗೆ?’ ಎಂಬ ಶೀರ್ಷಿಕೆ ಬರೆಯಿತು. ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ಪತ್ರಿಕೆ ನಿರುದ್ವಿಗ್ನವಾಗಿ ‘ಇನ್ನು ಮೂರು ದಿನಗಳಲ್ಲಿ ಜಗತ್ತು ಪ್ರಳಯ. ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಹೆಚ್ಚು
ಸಂಕಷ್ಟ’ ಎಂದು ಬರೆಯಿತು. ದೇವರು ಹಣೆ ಚಚ್ಚಿಕೊಂಡ.