ಹಿತೋಪದೇಶ
ರಂಗನಾಥ ಎನ್.ವಾಲ್ಮೀಕಿ
ಆ ಮಕ್ಕಳ ಪೈಕಿ ಕೆಲವರಲ್ಲಿ ಆತಂಕ, ಮತ್ತೆ ಕೆಲವರಲ್ಲಿ ಭಯ-ಉದ್ವೇಗ, ಇನ್ನು ಕೆಲವರಲ್ಲಿ ಆತುರ-ಕಾತುರ-ಆತ್ಮವಿಶ್ವಾಸ, ಮತ್ತೆ ಕೆಲವರಲ್ಲಿ ಅತಿಯಾದ ಆತ್ಮವಿಶ್ವಾಸ. ಈ ಭಾವಗಳು ಯಾರಲ್ಲಿ ಉಕ್ಕುತ್ತವೆ? ಯಾವಾಗ ಉಕ್ಕುತ್ತವೆ ಎಂಬುದು ನಿಮಗೀಗ ತಿಳಿದಿರಬಹುದು. ನಿಮ್ಮ ಊಹೆ ನಿಜ. ಅವರೇ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಅದರಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು.
ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಈ ರೀತಿಯ ವಿಭಿನ್ನ ಭಾವಗಳು ಸುರಿಸುವುದೇಕೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುವುದು ಸಹಜ. ಆರಂಭದಿಂದಲೂ ಚೆನ್ನಾಗಿ ಓದಿದವರಿಗೆ ಆತ್ಮವಿಶ್ವಾಸ ಇರುತ್ತದೆ; ಕಾಲಾನುಕಾಲಕ್ಕೆ ಅಧ್ಯಯನ ಮಾಡದವರಲ್ಲಿ ಅಥವಾ ಅವತ್ತಿನ ಪಾಠವನ್ನು ಅವತ್ತೇ ಓದದೆ ಸಮಯ ವನ್ನು ವೃಥಾ ಹಾಳುಮಾಡಿದವರಲ್ಲಿ ಆತಂಕವಿರುತ್ತದೆ. ಮತ್ತೆ ಕೆಲವರು ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿಕೊಂಡು ಸುಮ್ಮನೇ ಇಲ್ಲಸಲ್ಲದ ಭ್ರಮೆಗಳನ್ನು, ಅಸ್ಥಿರತೆಯ ಸ್ಥಿತಿಯನ್ನು ಸೃಷ್ಟಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ, ಸೂಕ್ತ ತಯಾರಿ ಮಾಡಿಕೊಳ್ಳದೇ ವಾರ್ಷಿಕ ಪರೀಕ್ಷೆಗೆ ಹಾಜರಾಗುವುದು ವಿದ್ಯಾರ್ಥಿಗಳ ಭಯ ಮತ್ತು ಆತಂಕಕ್ಕೆ ಕಾರಣವಾಗಬಹುದು. ಇದನ್ನು ಹೊರತುಪಡಿಸಿ, ವಾರ್ಷಿಕ ಪರೀಕ್ಷೆಗೂ ಮುಂಚಿನ ಶಾಲಾ ಹಂತದ ಪರೀಕ್ಷೆಗಳಲ್ಲಿ ಉತ್ತಮವಾಗಿ ಬರೆಯದಿರುವುದು, ಪರಸ್ಥಳದಲ್ಲಿ, ಬೇರೆ ಬೇರೆ ಕೊಠಡಿಯಲ್ಲಿ, ಮೇಲ್ವಿಚಾರಕರ ಸಮ್ಮುಖದಲ್ಲಿ ಪರೀಕ್ಷೆ ಬರೆಯುವುದು ಕೆಲವರಿಗೆ ಸಣ್ಣ ಮಟ್ಟದ ಆತಂಕವನ್ನು ತರಬಹುದು. ಮಕ್ಕಳೇ, ಈ ಎಲ್ಲಾ ನಕಾರಾತ್ಮಕ ಮತ್ತು ನಿಷೇಧಾತ್ಮಕ ಭಾವಗಳಿಂದ ಕಳಚಿಕೊಂಡು, ಆತ್ಮವಿಶ್ವಾಸದೊಂದಿಗೆ ವಾರ್ಷಿಕ ಪರೀಕ್ಷೆಯನ್ನು ಬರೆಯುವಂತಾಗಬೇಕು ಎನ್ನುವು ದಾದರೆ, ಇನ್ನೂ ಕಾಲ ಮಿಂಚಿಲ್ಲ, ಇವತ್ತಿನಿಂದಲೇ ಈ ಕ್ಷಣದಿಂದಲೇ ಸೂಕ್ತ ತಯಾರಿ ಮಾಡಿಕೊಳ್ಳಿ.
ಈ ನಿಟ್ಟಿನಲ್ಲಿ ನೀವು ಒಂದಷ್ಟು ನಿರ್ಣಾಯಕ ಹೆಜ್ಜೆಗಳನ್ನು ಅನುಸರಿಸಬೇಕಾದ್ದು ಅಗತ್ಯ. ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದಂತೆ ಶಿಕ್ಷಕರು ಕೆಲವೊಂದು ಪ್ರಮುಖ ಸಲಹೆಗಳನ್ನು ಶಾಲಾ ತರಗತಿಗಳಲ್ಲಿ ನೀಡುವುದುಂಟು. ಆದ್ದರಿಂದ ಯಾವೊಂದು ತರಗತಿಯನ್ನೂ ತಪ್ಪಿಸಿಕೊಳ್ಳದೆ, ಗುರುಗಳು ನೀಡುವ ಇಂಥ ಸಲಹೆಗಳನ್ನು, ಅವರು ಮಾಡುವ ಪಾಠಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳಬೇಕು. ಪ್ರಮುಖಾಂಶಗಳನ್ನು ಪಟ್ಟಿಮಾಡಿಕೊಳ್ಳುವ ಅಭ್ಯಾಸವನ್ನು
ರೂಢಿಸಿಕೊಂಡರೆ ಅದು ನಿಮ್ಮ ಓದುವಿಕೆಯ ಶ್ರಮವನ್ನು ಕಡಿಮೆ ಮಾಡುವುದು. ಅತಿಯಾದ ನಿರೀಕ್ಷೆ ತರವಲ್ಲ, ನಿಮ್ಮ ಸಾಮರ್ಥ್ಯ ಅರಿತು ಪ್ರಾಮಾಣಿಕ ಪ್ರಯತ್ನ ಮಾಡಿ.
ಯಾವುದೇ ಕಾರಣಕ್ಕೂ ನಿಮ್ಮನ್ನು ಇನ್ನೊಬ್ಬರ ಜತೆ ಹೋಲಿಸಿಕೊಳ್ಳಬೇಡಿ, ಅನವಶ್ಯಕವಾಗಿ ಸಮಯ ವ್ಯಯ ಮಾಡಬೇಡಿ. ಏಕೆಂದರೆ ಕಲಿಕೆಯ ಹಂತದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯವೇ, ಹೀಗಾಗಿ ಅದನ್ನು ಸದುಪಯೋಗಪಡಿಸಿಕೊಂಡು ಚೆನ್ನಾಗಿ ಕಲಿಯಬೇಕು. ಒತ್ತಾಯದ ಕಲಿಕೆ
ಹೆಚ್ಚು ಸ್ಥಿರವಲ್ಲ, ಸ್ವಕಲಿಕೆ ಅತ್ಯಂತ ಅವಶ್ಯ. ಆದ್ದರಿಂದ ಇಷ್ಟಪಟ್ಟು ಓದುವುದನ್ನು ನೀವು ರೂಢಿಸಿಕೊಳ್ಳಬೇಕು. ನಿಮ್ಮದೇ ಆದ ವೇಳಾಪಟ್ಟಿ ಇರಲಿ. ಅವ್ಯವಸ್ಥಿತವಾಗಿ ಓದುವುದಕ್ಕಿಂತ ಯೋಜನಾಬದ್ಧವಾಗಿ ಅಧ್ಯಯನ ಮಾಡುವುದಕ್ಕೆ ಈ ವೇಳಾಪಟ್ಟಿ ಸಹಕಾರಿ. ಯಾವುದೋ ವಿಷಯದಲ್ಲಿ ಉತ್ತಮ ಅಂಕ ಪಡೆದು ಇನ್ನೊಂದು ವಿಷಯದಲ್ಲಿ ಕಡಿಮೆ ಅಂಕ ಬಂದರೆ, ಒಟ್ಟಾರೆ ಫಲಿತಾಂಶದ ಮೇಲೆ ಅದು ಪ್ರಭಾವ ಬೀರುವುದು.
ಆದ್ದರಿಂದ ಎಲ್ಲಾ ವಿಷಯಗಳಿಗೂ ಸಮಾನ ಆದ್ಯತೆ ನೀಡಿ. ಬರೀ ಓದುವುದನ್ನಷ್ಟೇ ಮಾಡದೆ ಬರೆಯುವುದನ್ನೂ ರೂಢಿಸಿಕೊಳ್ಳಿ. ಏಕೆಂದರೆ, ಓದಿದ್ದು ಬೇಗ ಮರೆಯಬಹುದು, ಆದರೆ ಓದಿ ಬರೆದದ್ದು ಮರೆತುಹೋಗದು. ಹೀಗಾಗಿ ಬರವಣಿಗೆಗೆ ಆದ್ಯತೆ ಅಗತ್ಯ. ಜತೆಗೆ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದನ್ನು ರೂಢಿಸಿಕೊಳ್ಳಿ. ಪ್ರಶ್ನೆಪತ್ರಿಕೆಯ ಸ್ವರೂಪವನ್ನು ಅರಿಯಲು ಇದು ನೆರವಾಗುತ್ತದೆ. ಜತೆಗೆ, ಹೇಗೆ ಓದಬೇಕು, ಯಾವ ರೀತಿಯ
ಪ್ರಶ್ನೆಗಳು ಬರುತ್ತವೆ, ಯಾವ ಪ್ರಶ್ನೆಗಳು ಬಹುಮುಖ್ಯ ಇತ್ಯಾದಿ ಪ್ರಾಥಮಿಕ ವಿಚಾರಗಳು ತಿಳಿಯುತ್ತವೆ.
ಅಗತ್ಯ ಎನಿಸಿದಾಗ ಗುಂಪು ಅಧ್ಯಯನದಲ್ಲಿ ತೊಡಗಿ; ಅನೇಕ ಕ್ಲಿಷ್ಟ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಈ ಪರಿಪಾಠ ಸಹಕಾರಿ. ಆದರೆ, ಉತ್ತಮ ವಾಗಿ ಅಭ್ಯಾಸ ಮಾಡುವವರ ಜತೆ ಗುಂಪು ಅಧ್ಯಯನದಲ್ಲಿ ತೊಡಗಿದಾಗ, ಸಮಯಹರಣ ಮಾಡಿದರೆ ಅಥವಾ ವ್ಯರ್ಥ ಹರಟೆಯಲ್ಲಿ ವ್ಯಸ್ತರಾದರೆ ನಿಮಗೇ ತೊಂದರೆ ಎನ್ನುವುದನ್ನು ಮರೆಯದಿರಿ. ಆದ್ದರಿಂದ ಈ ನಿಟ್ಟಿನಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸಿ ದರೆ, ಮುಂದೆ ಒತ್ತಡಗಳು ಎದುರಾಗುವ ಸಾಧ್ಯತೆ ಕಡಿಮೆ.
ಹೀಗಾಗಿ ಯಾವುದೇ ಕಾರಣಕ್ಕೂ ಕೆಲಸಗಳನ್ನು ಮುಂದೂಡುವ ಪ್ರಯತ್ನ ಬೇಡ. ಒಂದೊಮ್ಮೆ ಮುಂದೂಡಿದರೆ ಅದೇ ದೊಡ್ಡ ಸಮಸ್ಯೆಗೆ ಮತ್ತು ಆತಂಕಕ್ಕೆ ಕಾರಣವಾಗಬಹುದು. ಓದು ಮತ್ತು ಬರವಣಿಗೆಯ ನಡುವೆ ಒಂದೊಮ್ಮೆ ಬೇಸರ ಇಣುಕಿದರೆ, ನಡುನಡುವೆ ಸ್ವಲ್ಪ ವಿಶ್ರಾಂತಿ ಪಡೆಯಿರಿ. ಇದು ಕಿರುವಿಶ್ರಾಂತಿ ಆಗಿರಬೇಕೇ ಹೊರತು ಆರಾಮವಾಗಿ ಮೈಚೆಲ್ಲಿ ಗಡದ್ದಾಗಿ ನಿದ್ರೆ ಹೊಡೆಯುವುದು ಆಗಬಾರದು. ಆರೋಗ್ಯದ ಕಡೆಗೆ ನಿರಂತರ ಗಮನ ಹರಿಸುವುದನ್ನು ವಿದ್ಯಾರ್ಥಿಗಳು ಮರೆಯಬಾರದು.
ಕೆಲವೊಬ್ಬರು ಆರೋಗ್ಯವನ್ನು ನಿರ್ಲಕ್ಷಿಸಿ, ಊಟ-ನಿದ್ದೆ ಬಿಟ್ಟು ಅಧ್ಯಯನದಲ್ಲಿ ತೊಡಗಿ, ಪರೀಕ್ಷೆಯ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ
ಪರೀಕ್ಷೆಗೇ ಹಾಜರಾಗಲು ಆಗದಂಥ ಅಥವಾ ಹಾಜರಾದರೂ ಉತ್ತಮವಾಗಿ ಬರೆಯಲಾಗದಂಥ ಪರಿಸ್ಥಿತಿಯನ್ನು ತಂದುಕೊಳ್ಳುವುದುಂಟು. ಆದ್ದರಿಂದ ಆರೋಗ್ಯವನ್ನು ನಿರ್ಲಕ್ಷಿಸದಿರಿ. ಇನ್ನು, ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಯಾವುದೇ ಕಾರಣಕ್ಕೂ ಆ ಪ್ರಶ್ನೆಪತ್ರಿಕೆಯ ಕುರಿತು ಚರ್ಚಿಸುವುದು, ‘ಅದು ಸರಿಯಾಯಿತು, ಇದು ತಪ್ಪಾಯಿತು’ ಎಂದು ಮಾತಾಡುವುದು ಅನಗತ್ಯ.
ಆಗಿದ್ದು ಆಗಿಹೋಯಿತು, ಮುಂದಿನ ಪರೀಕ್ಷೆಗೆ ಸಿದ್ಧವಾಗಬೇಕು. ಅದನ್ನು ಬಿಟ್ಟು ಮುಗಿದುಹೋಗಿದ್ದರ ಬಗ್ಗೆ ಚರ್ಚಿಸುತ್ತಾ ಕುಳಿತರೆ, ಪರೀಕ್ಷೆಯ ಮುಂದಿನ ವಿಷಯದ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರುವುದು. ಆತ್ಮೀಯ ವಿದ್ಯಾರ್ಥಿಗಳೇ, ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ. ಪ್ರಯತ್ನ ಪಡದೆಯೇ ನಾವು ಏನನ್ನೂ ನಿರೀಕ್ಷೆ ಮಾಡಬಾರದು. ಪ್ರಾಮಾಣಿಕ ಪ್ರಯತ್ನ ಮಾತ್ರ ನಮ್ಮದಿರಲಿ. ಏಕೆಂದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು
ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾಗಿದ್ದು, ಇದರಲ್ಲಿ ಹೊಮ್ಮುವ ಫಲಿತಾಂಶವು ನಿಮ್ಮ ಭವಿಷ್ಯದ ಬದುಕಿನ ದಿಕ್ಸೂಚಿಯಾಗಿರುತ್ತದೆ. ಹೀಗಾಗಿ ನಿರ್ಲಕ್ಷ್ಯ ಮಾಡದೇ ಆಸಕ್ತಿಯಿಂದ ಓದಿ ಸೂಕ್ತ ತಯಾರಿ ಮಾಡಿಕೊಂಡರೆ ಹಾಗೂ ಗುರುಗಳ ಮಾತನ್ನು ಚಾಚು ತಪ್ಪದೆ ಪಾಲಿಸಿದರೆ, ಯಾವ ಆತಂಕ ವಿಲ್ಲದೆ ಆತ್ಮವಿಶ್ವಾಸದಿಂದ ವಾರ್ಷಿಕ ಪರೀಕ್ಷೆಯನ್ನು ಎದುರಿಸಬಹುದು.
ಇದರಲ್ಲಿ ನೀವು ಗಳಿಸುವ ಒಂದೊಂದು ಅಂಕಕ್ಕೂ ಎಷ್ಟು ಮಹತ್ವ ಇರುತ್ತದೆ ಎಂಬುದು ನಿಮಗೆ ತಕ್ಷಣಕ್ಕೆ ಅರಿವಾಗದಿರಬಹುದು. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳಿಕೆಗೆ ಎಷ್ಟೊಂದು ಮಹತ್ವವಿದೆ ಎಂಬುದು, ಆ ಘಟ್ಟವನ್ನು ತಲುಪಿದಾಗ ನಿಮಗೆ ಅರ್ಥವಾಗುತ್ತದೆ. ಈ ಸ್ಪರ್ಧೆಯಲ್ಲಿ ನಾವೂ ಗೆಲ್ಲಬೇಕೆಂದರೆ ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ. ಆದ್ದರಿಂದ, ಗಮನವಿಟ್ಟು ಓದಿರಿ, ಓದಿದ್ದನ್ನು ಬರೆಯಿರಿ, ಮತ್ತೆ ಮತ್ತೆ ಮನನ ಮಾಡಿಕೊಳ್ಳಿರಿ. ನೀವು ಮಾಡುವ ಈ ಎಲ್ಲಾ ಪರೀಕ್ಷಾ ತಯಾರಿಗಳು ನಿಮಗಾಗಿ ಮತ್ತು ನಿಮ್ಮ ಒಳಿತಿಗಾಗಿ ಎಂಬುದನ್ನು ಮರೆಯಬೇಡಿ.
ಓದಿಗೆ ಕೂತಾಗ ಏಕಾಗ್ರತೆ ಬರದಿದ್ದರೆ, ಹಿಂಜರಿಕೆ ಎದುರಾದರೆ, ಹಿಡಿದ ಪಟ್ಟು ಬಿಡದೆ ಮತ್ತೆ ಮತ್ತೆ ಪ್ರಯತ್ನಿಸಿ. ಆಗ ಖಂಡಿತವಾಗಿಯೂ ನಿಮಗೆ ಹಿಡಿತ ಸಿಕ್ಕಿ ಒಳಿತಾಗುವುದು. ಇನ್ನೇನು ವಾರ್ಷಿಕ ಪರೀಕ್ಷೆಗಳು ತುಂಬಾ ಹತ್ತಿರದಲ್ಲಿವೆ, ಹೀಗಾಗಿ ಬಹಳ ಅಮೂಲ್ಯವಾದ ಸಮಯವಿದು. ಒಂದೊಂದು ನಿಮಿಷವನ್ನೂ ಸರಿಯಾಗಿ ಬಳಸಿಕೊಳ್ಳಿ. ಏಕೆಂದರೆ, ‘ಕಳೆದುಹೋದ ಸಮಯ ಮತ್ತೆ ಬಾರದು, ಒಡೆದ ಮುತ್ತು ಮತ್ತೆ ಒಂದಾಗದು’ ಎಂಬ ಮಾತೇ ಇದೆ.
ವಿದ್ಯಾರ್ಥಿ ಜೀವನವೂ ಹಾಗೆಯೇ. ಓದುವ ಸಮಯದಲ್ಲಿ ಓದದಿದ್ದರೆ, ಬದುಕಿನಲ್ಲಿ ಎದುರಾಗುವ ಸವಾಲು ಮತ್ತು ಅಸಹಾಯಕತೆಗಳಿಂದಾಗಿ ಮುಂದೊಮ್ಮೆ ಅಂಥ ಅವಕಾಶವೇ ಸಿಗದಿರಬಹುದು. ಜತೆಗೆ, ನಿಮ್ಮ ತಂದೆ- ತಾಯಿ, ಬಂಧು-ಬಳಗ, ಗುರುಗಳು ನಿಮ್ಮ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ ಇಟ್ಟುಕೊಂಡಿರುತ್ತಾರೆ ಎಂಬುದನ್ನು ಮರೆಯದಿರಿ. ಹತ್ತರ ಮಕ್ಕಳೇ, ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿದರೆ ನಿಮಗೆ ಖಂಡಿತ ಒಳಿತಾಗುವುದು.
(ಲೇಖಕರು ಶಿಕ್ಷಕರು)