Wednesday, 18th September 2024

ಏಷ್ಯಾದ ರಿಯಲ್ ಎಸ್ಟೇಟ್ ರಾಜಧಾನಿಯಾಗಲಿರುವ ಭಾರತ

ಪ್ರಸ್ತುತ

ಡಾ.ಪವಿತ್ರ ಆರ್‌.ಎಚ್

ಭಾರತವು ಏಷ್ಯಾದ ರಿಯಲ್ ಎಸ್ಟೇಟ್ ಕ್ಷೇತ್ರದ ರಾಜಧಾನಿಯಾಗುವತ್ತ ದಾಪುಗಾಲು ಇಟ್ಟಿದೆ. ಈ ವರ್ಷ (೨೦೨೪) ದೇಶದಲ್ಲಿರುವ ರಿಯಲ್ ಎಸ್ಟೇಟ್ ಕಂಪನಿಗಳ ಒಟ್ಟು ಮೌಲ್ಯ ೩,೬೦೦ ಕೋಟಿ ಡಾಲರ್‌ಗೆ ಏರಿಕೆಯಾಗಿದ್ದು, ಏಷ್ಯಾ ಖಂಡದಲ್ಲಿ ರಿಯಲ್ ಎಸ್ಟೇಟ್ ವಲಯದ ಅಭಿವೃದ್ಧಿಯಲ್ಲಿ ಚೀನಾ ವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಲಿದೆ ಎಂದು ವರದಿಯೊಂದು ಹೇಳಿದೆ.

ಚೀನಾವು ರಿಯಲ್ ಎಸ್ಟೇಟ್ ವಲಯದ ಮೇಲೆ ಹೇರಿರುವ ನಿರ್ಬಂಧಗಳು ಮತ್ತು ವಸತಿಗಳಿಗೆ ಬೇಡಿಕೆ ಕುಸಿತವಾಗಿರುವುದರಿಂದ ಅಲ್ಲಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ತೀವ್ರ ತೊಂದರೆ ಎದುರಿಸುತ್ತಿದೆ. ಭಾರತದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆಗೆ ಪೂರಕ ವಾತಾವಾರಣ ಕಂಡು ಬರುತಿದೆ. ೨೦೩೦ರ ವೇಳೆಗೆ ದೇಶದ ಮಧ್ಯಮ ವರ್ಗದ ಜನಸಂಖ್ಯೆ ೫೪.೭ ಕೋಟಿಗೆ ತಲುಪಲಿದೆ ಎಂದು ಹೇಳಲಾಗುತ್ತಿದ್ದು, ಈ ಆರ್ಥಿಕ ವರ್ಷದಲ್ಲಿ (೨೦೨೪-೨೫) ವಸತಿಗಳ ಮಾರಾಟ ಪ್ರಮಾಣ ಶೇ ೧೦ರಿಂದ ೧೨ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ೨೦೨೪ ಜಿಆರ್ ಒಎಚ್‌ಇ-ಹುರುನ್ ಇಂಡಿಯಾ ರಿಯಲ್ ಎಸ್ಟೇಟ್ ೧೦೦ ವರದಿ ಹೇಳಿದೆ.

ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯು ಪ್ರತಿ ವರ್ಷ ೪೦೦ ಕೋಟಿ ಡಾಲರ್‌ಗಳಷ್ಟು ಹೆಚ್ಚಾಗುತ್ತಿರುವುದು  ಉದ್ದಿಮೆಯ ಅಭಿವೃದ್ಧಿಗೆ ಇನ್ನಷ್ಟು ಉತೇಜನ ನೀಡುತ್ತಿದೆ ಎಂದು ಹುರುನ್ ಇಂಡಿಯಾದ ಸಂಸ್ಥಾಪಕ ಮತ್ತು ಮುಖ್ಯ ಸಂಶೋಧಕ ಅನಾಸ್ ರೆಹಮಾನ್ ಜುನೇದ್ ಹೇಳಿದ್ದಾರೆ.

ದೇಶದ ಅತ್ಯುನ್ನತ ೧೦೦ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ೬೦ ಕಂಪನಿಗಳು ಅವುಗಳ ಕೇಂದ್ರ ಕಚೇರಿಗಳು ಇರುವ ರಾಜ್ಯಗಳನ್ನೂ ಮೀರಿ ಕಾರ್ಯಾ ಚರಿಸುತ್ತಿವೆ. ಈ ಕಂಪನಿಗಳು ರಿಯಲ್ ಎಸ್ಟೇಟ್ ವಲಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಬ್ರ್ಯಾಂಡ್ ನಿರ್ಮಾಣ ಮಾಡಲು
ಮುಂದಾಗಿರುವುದನ್ನು ಈ ಬೆಳವಣಿಗೆ ತೋರಿಸುತ್ತದೆ. ಪಟ್ಟಿಯಲ್ಲಿರುವ ೧೦೦ ಕಂಪನಿಗಳ ಪೈಕಿ, ಆರು ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ
ಗುರುತಿಸಿಕೊಂಡಿದ್ದು, ಇದು ಜಾಗತಿಕ ಮಟ್ಟದಲ್ಲಿ ತಮ್ಮ ಉಪಸ್ಥಿತಿಯನ್ನು ತೋರಿಸಬೇಕು ಎನ್ನುವ ಭಾರತೀಯ ಕಂಪನಿಗಳ ಮಹತ್ವಾಕಾಂಕ್ಷೆಯನ್ನು
ಬಿಂಬಿಸುತ್ತದೆ.

ಹೊರ ದೇಶಗಳಲ್ಲಿ ಭಾರತೀಯ ಸಮುದಾಯ ದೊಡ್ಡ ಸಂಖ್ಯೆಯಲ್ಲಿರುವುದು, ಭಾರತದ ರಿಯಲ್ ಎಸ್ಟೇಟ್ ಕಂಪನಿಗಳಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಲು ಉತ್ತಮ ಅವಕಾಶ ಒದಗಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆ ಇದೆ ಎಂದು ಜುನೇದ್ ಪ್ರತಿಪಾದಿಸಿದ್ದಾರೆ.

ದೇಶದ ಅತ್ಯುನ್ನತ ೧೦೦ ರಿಯಲ್ ಎಸ್ಟೇಟ್ ಕಂಪನಿಗಳ ಪಟ್ಟಿಯಲ್ಲಿ ಡಿಎಲ್ಎಫ್ ಮೊದಲ ಸ್ಥಾನದಲ್ಲಿದೆ. ಈ ಕಂಪನಿಯ ಒಟ್ಟು ಮೌಲ್ಯ ೨,೦೨,೧೪೦ ಕೋಟಿ ರು.ಯಷ್ಟಿದೆ. ೧,೩೬,೭೩೦ ಕೋಟಿ ರು. ಮೌಲ್ಯ ಹೊಂದಿರುವ ಮ್ಯಾಕ್ರೊಟೆಕ್ ಡೆವೆಲೆಪರ್ಸ್ ಕಂಪನಿ ಎರಡನೇ ಸ್ಥಾನದಲ್ಲಿದೆ. ಇಂಡಿಯನ್ ಹೋಟೆಲ್ಸ ಕಂಪನಿ ಮೂರನೇ ಸ್ಥಾನದಲ್ಲಿದ್ದು, ಇದು ೭೯,೧೫೦ ಕೋಟಿ ರು. ಮೌಲ್ಯ ಹೊಂದಿದೆ. ಮೊದಲ ೧೦ ಸ್ಥಾನಗಳಲ್ಲಿರುವ ಕಂಪನಿಗಳಲ್ಲಿ ಶೇ೬೦ರಷ್ಟು ಕಂಪನಿಗಳ ಪ್ರಧಾನ ಕಚೇರಿಗಳು ಮುಂಬೈನಲ್ಲಿವೆ. ಎರಡು ಕಂಪನಿಗಳು ಬೆಂಗಳೂರು ಮೂಲದ್ದಾಗಿದ್ದು, ಗುರುಗ್ರಾಮ ಮತ್ತು ಅಹಮದಾ ಬಾದ್‌ನಲ್ಲಿ ತಲಾ ಒಂದೊಂದು ಕಂಪನಿಗಳು ಕೇಂದ್ರ ಕಚೇರಿ ಹೊಂದಿವೆ.

ಟೈರ್-೨ ಶ್ರೇಣಿ ನಗರಗಳ ಉದ್ಯಮಿಗಳು ಅತ್ಯಂತ ಪ್ರಭಾವಿಯಾದಂತಹ ರಿಯಲ್ ಎಸ್ಟೇಟ್ ಕಂಪನಿಗಳನ್ನು ದೇಶದಲ್ಲಿ ಸ್ಥಾಪಿಸುತ್ತಿರುವುದನ್ನು ಕಂಪನಿಗಳ ಪಟ್ಟಿ ತೋರಿಸುತ್ತದೆ. ೨೦೨೪ರ ಜಿಆರ್‌ಒಎಚ್‌ಇ-ಹುರುನ್ ಇಂಡಿಯಾ ರಿಯಲ್ ಎಸ್ಟಟ್-೧೦೦ರಲ್ಲಿ ಪ್ರವೇಶ ಪಡೆದ ಕಂಪನಿಗಳಲ್ಲಿ ಶೇ.೫ರಷ್ಟು ಕಂಪನಿಗಳು ಟೈರ್-೨ ನಗರಗಳಿಗೆ ಸೇರಿದವು. ದೇಶದ ಅತ್ಯಂತ ಪ್ರಭಾವಿ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಭೌಗೋಳಿಕ ಗಡಿಯು ಮಿತಿಯಾ ಗಿಲ್ಲ ಎಂಬುದನ್ನು ಇದು ಸಾರಿ ಹೇಳುತ್ತದೆ ಎಂದು ಜುನೇದ್ ವಿವರಿಸಿದ್ದಾರೆ.

೨೦೩೭ರ ವೇಳೆಗೆ ಭಾರತವು ೨ ಲಕ್ಷ ಕಿ.ಮೀಗಳಷ್ಟು ಉದ್ದದ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ನಿರೀಕ್ಷೆ ಇದ್ದು, ಇದು ಸಣ್ಣ ನಗರಗಳ ಅಭಿವೃದ್ಧಿ ಗೆ ಕಾರಣವಾಗಲಿದೆ. ಪರಿಣಾಮವಾಗಿ, ರಿಯಲ್ ಎಸ್ಟೇಟ್ ವಲಯವೂ ಅಭಿವೃದ್ಧಿ ಹೊಂದಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

(ಲೇಖಕರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ 
ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹ ಪ್ರಾಧ್ಯಾಪಕರು)

Leave a Reply

Your email address will not be published. Required fields are marked *