Thursday, 12th December 2024

ವಸ್ತುಸ್ಥಿತಿಯನ್ನು ಅರಿತರೆ ಒಳ್ಳೆಯದು..

ಚರ್ಚಾ ವೇದಿಕೆ

ಶಿವ ಪ್ರಸಾದ್ ಎ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕರ್ನಾಟಕ ಸರಕಾರದಲ್ಲಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ, ಟ್ವಿಟರ್‌ನ ಹೊಸ ಹೆಸರಾಗಿರುವ ‘ಗಿ’ನ ವೇದಿಕೆಯ ಮೇಲೆ ಪರಸ್ಪರ ಪೋಸ್ಟ್ ಸಮರಕ್ಕಿಳಿದಿರುವುದು ಸುದ್ದಿ ಮಾಡಿದೆ. ಕೇಂದ್ರ ಸರಕಾರವು ಕರ್ನಾಟಕವನ್ನು ಮಲತಾಯಿ ಧೋರಣೆಯೊಂದಿಗೆ ನಡೆಸಿಕೊಳ್ಳುತ್ತಿದೆ
ಯೆಂದೂ, ರಾಜ್ಯ ಸರಕಾರವು ತನ್ನ ೫ ಗ್ಯಾರಂಟಿಗಳ ಮೂಲಕ ಬೊಕ್ಕಸವನ್ನು ದಿವಾಳಿ ಮಾಡುತ್ತಿದೆಯೆಂದೂ ಪರಸ್ಪರರ ತರ್ಕಗಳೊಂದಿಗೆ ಆರಂಭಗೊಂಡ ಈ ತಿಕ್ಕಾಟ ತಾರಕಕ್ಕೇರಿದೆ.

ಈಚೀಚೆಗೆ ಉತ್ತರ ಭಾರತದಿಂದ ಕರ್ನಾಟಕಕ್ಕೆ ಎಲ್ಲ ಬಗೆಯ ಉದ್ಯೋಗಾರ್ಥಿಗಳು ಬಂದು ನೆಲೆಸುತ್ತಿರುವು ದನ್ನು ಪ್ರಿಯಾಂಕ್ ಉಲ್ಲೇಖಿಸಿ ತೇಜಸ್ವಿ ಸೂರ್ಯರ ಕಾಲೆಳೆಯಲು ಯತ್ನಿಸಿದ್ದಾರೆ. ಇದರಲ್ಲಿ ಅವರ ಉಲ್ಲೇಖವಿರುವುದು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಿಂದ ಹೇಗೆ ಬಹುಪಾಲು ಕೂಲಿ ಕಾರ್ಮಿಕರು ಈಗ ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕೂಲಿ ಕೆಲಸಗಳನ್ನರಸಿ ಬಂದು ನೆಲೆಸಿದ್ದಾ ರೆಂಬ ವಿಷಯದ ಬಗ್ಗೆ. ಇದಕ್ಕೆ ಹಲವು ಆಯಾಮಗಳಿವೆ.

ಯಾವುದೇ ನಗರದ ನಿರ್ಮಾಣ-ಬೆಳವಣಿಗೆಗೆ ಬೇಕಾಗುವ ಮಾನವ ಸಂಪನ್ಮೂಲವು ಹಳ್ಳಿಗಳಿಂದ, ಕಡಿಮೆ ಅಭಿವೃದ್ಧಿ ಹೊಂದಿದ ಪ್ರಾಂತ್ಯಗಳಿಂದ ಸರಬರಾಜಾ ಗುವುದು ವಾಡಿಕೆ. ೨-೩ ದಶಕಗಳ ಹಿಂದೆ ಬೆಂಗಳೂರು ನಿರ್ಮಾಣಕ್ಕಾಗಿ ಕಾರ್ಮಿಕರು ತಮಿಳುನಾಡಿನಿಂದ, ಸ್ವಲ್ಪ ಮಟ್ಟಿಗೆ ಆಂಧ್ರಪ್ರದೇಶದಿಂದ ಬರುತ್ತಿದ್ದುದು ಹಳಬರಿಗೆ ಗೊತ್ತಿದೆ.

ಅದಿನ ‘ಬಿಟಿಎಸ್’ ಬಸ್ಸುಗಳಲ್ಲಿ ತಮಿಳು-ತೆಲುಗು ಕೇಳುವ ಅವಕಾಶ ಸಿಗುತ್ತಿದ್ದುದು ಇಂಥವರ ಕಾರಣ ದಿಂದಲೇ. ಅಂತೆಯೇ ಇಂದಿನ ‘ಬಿಎಂಟಿಸಿ’ಗಳಲ್ಲಿ ಹೆಚ್ಚಾಗಿ ಹಿಂದಿ ಕೇಳಸಿಗುತ್ತಿರುವುದೂ ವಲಸೆ ಕಾರ್ಮಿಕರ ಮೂಲಸ್ಥಳಗಳು ಬದಲಾಗಿರುವು ದರಿಂದಾಗಿ. ದಶಕಗಳಿಂದ ಜನಸಂಖ್ಯಾ ಸೋಟದ ಸಮಸ್ಯೆ ಎದುರಿಸುತ್ತಿರುವ ಭಾರತದಲ್ಲಿ, ಬಹು ಪಾಲು ದಕ್ಷಿಣ ಮತ್ತು ಪಶ್ಚಿಮದ ರಾಜ್ಯಗಳಲ್ಲಿ ಮಾನವ ಅಭಿವೃದ್ಧಿ ನಿಯತಾಂಕಗಳು ಉತ್ತರ ಮತ್ತು ಪೂರ್ವದ ರಾಜ್ಯಗಳಿಗಿಂತಲೂ  ಮುಂಚೂಣಿಯಲ್ಲಿವೆ. ಜನಸಂಖ್ಯೆ ಹೆಚ್ಚಳದ ಮೇಲೆ ಈ ರಾಜ್ಯಗಳು ಸಾಧಿಸಿರುವ ಹಿಡಿತವೇ ಇದಕ್ಕೆ ಕಾರಣ. ಅಂತೆಯೇ, ಆರ್ಥಿಕಾಭಿವೃದ್ಧಿ ಮತ್ತು ಶೈಕ್ಷಣಿಕ ಅವಕಾಶಗಳ ಲಭ್ಯತೆಯು ಜನಸಂಖ್ಯಾ ನಿಯಂತ್ರಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಯೆಂಬುದು ಸಂಶೋಧನೆ-ಸಮೀಕ್ಷೆಗಳಿಂದ ಹೊರಬಂದ ಸಂಗತಿ. ಮೇಲಾಗಿ, ಸೀಯರಿಗೆ ಹೆಚ್ಚಿನ ಶಿಕ್ಷಣಾವಕಾಶ ದೊರೆತ ಸಂದರ್ಭಗಳಲ್ಲಿ ಜನಸಂಖ್ಯೆ ನಿಯಂತ್ರಣದ ಯತ್ನಕ್ಕೆ ಗಜಬಲ ನೀಡಿದಂತೆ ಎನ್ನುತ್ತವೆ ಈ ಸಮೀಕ್ಷೆಗಳು. ಭಾರತವು ಶತಮಾನಗಳಿಂದ ವಿದೇಶಿ ದಾಳಿ ಅನುಭವಿಸಿದ ದೇಶ.

ಈ ದಾಳಿಗಳ ಹೊಡೆತವನ್ನು ಮೊದಲಿಗೆ ಮತ್ತು ಹೆಚ್ಚಾಗಿ ಅನುಭವಿಸಿದ್ದು ಉತ್ತರ ಭಾರತ. ದಕ್ಷಿಣದಲ್ಲೂ ವಿದೇಶಿಗರು ಸಮುದ್ರ ಮಾರ್ಗವಾಗಿ ಹಲವು ಶತಮಾಗಳ ಹಿಂದೆಯೇ ಬಂದಿಳಿದಿದ್ದಾರೆ. ಆದರೆ ಆ ದಿನಗಳಲ್ಲಿ ನೌಕಾ ಮಾರ್ಗಗಳ ಮೂಲಕ ಬಂದಿಳಿದದ್ದು ಬಹುಪಾಲು ವ್ಯಾಪಾರಿಗಳು. ಅಂದಿನ ಹಡಗುಗಳಲ್ಲಿ ಹೆಚ್ಚೆಂದರೆ ೧೦೦-೨೦೦ ಸಂಖ್ಯೆಗಳಲ್ಲಿ ಬರಲು ಸಾಧ್ಯವಿದ್ದುದರಿಂದ, ಅವರೆಲ್ಲರೂ ವ್ಯಾಪಾರಿಗಳಾಗಿ ಬಂದಿಳಿದವರೇ. ನಂತರ ಈ ವ್ಯಾಪಾರಿಗಳು ಐರೋಪ್ಯ ದೇಶಗಳಿಂದಲೂ ಬಂದರು. ಇಂಥವರು ಅಂದು ಈ ಭೂಭಾಗವನ್ನಾಳುತ್ತಿದ್ದ ದೊರೆಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದು ವಾಡಿಕೆ. ಆ ವಿದೇಶಿಗರು
ಯುದ್ಧಕ್ಕಿಳಿದ ನಿದರ್ಶನ ಕಡಿಮೆ. ಆದರೆ ಉತ್ತರದ ಭೂ ಮಾರ್ಗಗಳಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಇರಾನ್, ಪರ್ಷಿಯಾ, ತುರ್ಕಿ ರಾಷ್ಟ್ರಗಳ ದಂಡುಕೋರ ಸೇನೆಗಳು ಕಾಲ್ನಡಿಗೆಯಲ್ಲಿ ಬಂದು, ಯುದ್ಧ ಮಾಡಿ ಅಲ್ಲಿನ ಹೆಚ್ಚಿನ ಭೂಭಾಗ ವಶಪಡಿಸಿಕೊಂಡು, ಆಽಪತ್ಯ ಸ್ಥಾಪಿಸಿದವು.

ಇಂಥ ದಾಳಿಗಳನ್ನು ಎದುರಿಸಿ ದೀರ್ಘಾವಧಿವರೆಗೆ ಅವರ ಅಟಾಟೋಪ ಸಹಿಸಿಕೊಳ್ಳುತ್ತಿರುವ ಉತ್ತರ ಭಾರತದ ಸಮಾಜದಲ್ಲಿ ತಮ್ಮ ಮನೆಯ ಮಹಿಳೆಯರನ್ನು ಕಾಪಾಡಿಕೊಳ್ಳಲೆಂದು ಅವರನ್ನು ಮನೆಯೊಳಗೇ ಬಂಧಿಸಿಟ್ಟುಕೊಳ್ಳುವ ಅನಿವಾರ್ಯತೆ ಏರ್ಪಟ್ಟಿದ್ದು ವಿಷಾದನೀಯ. ಆದರೆ ಉತ್ತರದಷ್ಟೇನೂ ದಾಳಿ ಅನುಭವಿಸದ ದಕ್ಷಿಣದ ಸಮಾಜದಲ್ಲಿ ಶತಮಾನಗಳಿಂದ ಏರ್ಪಟ್ಟಿರುವ ಸಾಮಾಜಿಕ ಪರಂಪರೆಗಳು ಮಹಿಳೆಯರ ಸ್ಥಾನಮಾನಗಳನ್ನು ಬೇರೆ ರೀತಿಯಲ್ಲಿ
ರೂಪಿಸಿವೆ. ಹೀಗಾಗಿ, ಹುಡುಗಿಯರನ್ನು ಶಾಲೆ ಕಾಲೇಜುಗಳಿಗೆ ಕಳುಹಿಸುವಲ್ಲಿ ಮೊದಲಿಗೆ ದಕ್ಷಿಣದ ರಾಜ್ಯಗಳು ನಂತರ ಪಶ್ಚಿಮದ ರಾಜ್ಯಗಳು ಮುಂಚೂಣಿ ಯಲ್ಲಿದ್ದವು.

ಉತ್ತರದ ರಾಜ್ಯಗಳು ಹಿಂದುಳಿದಿದ್ದುದಕ್ಕೆ ಇಂಥ ಐತಿಹಾಸಿಕ ಕಾರಣಗಳಿವೆ. ಹೀಗಾಗಿ ಜನಸಂಖ್ಯಾ ನಿಯಂತ್ರಣದ ನಿಯತಾಂಕಗಳು ದಕ್ಷಿಣದ ಪರವಾಗಿರುವು ದರಲ್ಲಿ ಇತಿಹಾಸದ ಕಾಕತಾಳೀಯ ಅಂಶವಿದೆ. ಇಲ್ಲಿನ ಸರಕಾರಗಳು ಕೆಲವು ದಶಕಗಳಿಂದ ಹೆಣ್ಣುಮಕ್ಕಳನ್ನೂ ಶಾಲೆಗೆ ಸೆಳೆಯುವೆಡೆಗೆ ಗಮನ ನೀಡಿ, ಅದಕ್ಕಾಗಿ ಮಾಡಿದ ಯತ್ನಗಳು ಫಲ ನೀಡಿವೆಯೆನ್ನಲೇಬೇಕು. ಈ ವೇಳೆ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಒದಗಿಸಿ, ಹೆಚ್ಚೆಚ್ಚು ಮಕ್ಕಳು ಬಂದು ಶಿಕ್ಷಣದ ಅನುಕೂಲ ಪಡೆಯುವಂತೆ ಮಾಡಿದ್ದು ತಮಿಳುನಾಡಿನ ಕೆ.ಕಾಮರಾಜ್ ಸರಕಾರ. ಈ ಯೋಜನೆಯ ಉಪಯುಕ್ತತೆಯನ್ನರಿತು ದಕ್ಷಿಣದ ಇತರ ರಾಜ್ಯಗಳಲ್ಲೂ
ಇದನ್ನು ಅನುಷ್ಠಾನಗೊಳಿಸಿದವು ಅಂದಿನ ಸರಕಾರಗಳು.

ಅಂತೆಯೇ ‘ಕೀರ್ತಿಗೊಬ್ಬ ಆರತಿಗೊಬ್ಬಳು’ನಂಥ ಸಾಮಾಜಿಕ ಕಳಕಳಿಯ ಆಕರ್ಷಕ ಘೋಷಣಾ ವಾಕ್ಯಗಳೊಂದಿಗೆ ಜನಸಂಖ್ಯಾ ನಿಯಂತ್ರಣಕ್ಕೆ ಬುನಾದಿ ಹಾಕಿದ್ದೂ ದಕ್ಷಿಣದ ರಾಜ್ಯಗಳೇ. ಈಗ ಜನಸಂಖ್ಯೆ ಹೆಚ್ಚಾಗಿ ಇಲ್ಲದಂತಾಗಿರುವ ದಕ್ಷಿಣದ ರಾಜ್ಯಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿವೆ. ಉತ್ಪಾದನಾ ವಲಯದ ಉದ್ದಿಮೆ ಗಳು ಕಡಿಮೆ ಸಂಖ್ಯೆಯಲ್ಲಿವೆ, ಹೆಚ್ಚಾಗಿ ಸೇವಾವಲಯದ ಉದ್ದಿಮೆಗಳಿವೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ದೇಶದಲ್ಲೇ
ಮುಂಚೂಣಿಯಲ್ಲಿರುವ ದಕ್ಷಿಣದ ಉದ್ದಿಮೆಗಳಲ್ಲಿ ಹೆಚ್ಚಿನ ಸಂಬಳದ, ಆರ್ಥಿಕ ಮೌಲ್ಯ ಸರಪಳಿಯಲ್ಲಿ ಉನ್ನತ ಶ್ರೇಣಿಯ ಉದ್ಯೋಗಾವಕಾಶಗಳು ವಿಪುಲವಾಗಿರುವ ಕಾರಣಗಳಿಂದ, ಕಟ್ಟಡ ನಿರ್ಮಾಣಕಾರ್ಯದಂಥ ಕೆಲಸಗಳಿಗೆ ದಕ್ಷಿಣದ ಜನರು ಮುಂದೆ ಬರುತ್ತಿಲ್ಲ.

ಹೀಗಾಗಿ, ಇಂಥ ಅವಕಾಶಗಳು ಕಡಿಮೆ ಲಭ್ಯವಿರುವ, ಶೈಕ್ಷಣಿಕವಾಗಿ ಸ್ವಲ್ಪ ಕೆಳಮಟ್ಟದಲ್ಲೇ ಇರುವ, ಅಂತೆಯೇ ಅತಿಹೆಚ್ಚು ಜನಸಂಖ್ಯೆ ಯಿರುವ ಉತ್ತರದ ಜನರು, ಮುಖ್ಯವಾಗಿ ಉತ್ತರಪ್ರದೇಶ, ಬಿಹಾರದವರು ಇಂಥ ಕೂಲಿ ಕೆಲಸಗಳನ್ನರಸುತ್ತ ದಕ್ಷಿಣದ ಕಡೆಗೆ, ಮುಖ್ಯವಾಗಿ ಬೆಂಗಳೂರಿಗೆ ಬರುತ್ತಿರುವುದಕ್ಕೆ ಮೇಲೆ
ತಿಳಿಸಿದ ಕಾರಣಗಳಿವೆ. ಬೆಂಗಳೂರಿನಲ್ಲಿ ಸೇವಾಕ್ಷೇತ್ರದ ಉದ್ದಿಮೆಗಳು, ಎಂದರೆ ಸಾ-ವೇರ್ ಮುಂತಾದ ಉದ್ದಿಮೆ ಗಳು ಹೆಚ್ಚಾಗಿ ನೆಲೆ ನಿಲ್ಲಲೂ ಕಾರಣಗಳಿವೆ. ಇಲ್ಲಿನ ಹವಾಮಾನ, ಉನ್ನತ ಶೈಕ್ಷಣಿಕ ಅರ್ಹತೆಯಿರುವ ಉದ್ಯೋಗಿಗಳ ಲಭ್ಯತೆ ಮತ್ತು ಸರಕಾರಗಳು ಈ ಉದ್ದಿಮೆಗಳ ಪ್ರೋತ್ಸಾಹಕ್ಕಾಗಿ ನೀಡಿದ ತೆರಿಗೆ ವಿನಾಯತಿ ಸೌಲಭ್ಯಗಳು, ಇವೇ ಈ ಕಾರಣಗಳಾಗಿವೆ.

ಮಿಗಿಲಾಗಿ, ಇಲ್ಲಿನ ಜನರ ಶಾಂತ ಸ್ವಭಾವದಿಂದಾಗಿ ಗಲಭೆಗಳು ತುಲನಾತ್ಮಕವಾಗಿ ಕಮ್ಮಿ. ಇಲ್ಲಿಯವರೆಗಿನ ಸರಕಾರಗಳ ಪಾಲು ಈ ಎಲ್ಲ ಅಂಶಗಳಲ್ಲಿ
ಇದೆ. ಕಳೆದ ೩ ದಶಕಗಳಲ್ಲಿನ ಕೇಂದ್ರ ಸರಕಾರಗಳ ಕೊಡುಗೆಯನ್ನೂ ಇಲ್ಲಿ ನೆನೆಯಬೇಕು. ಮುಕ್ತ ಆರ್ಥಿಕ ನೀತಿ, ಸಾಮಾಜಿಕ ಮತ್ತು ರಕ್ಷಣಾ ಭದ್ರತೆ, ಶೈಕ್ಷಣಿಕ ನೀತಿ, ತೆರಿಗೆ ನೀತಿಗಳನ್ನು ರೂಪಿಸುವಲ್ಲಿ ರಾಜ್ಯಕ್ಕಿಂತ ಮಿಗಿಲಾದ ಸ್ಥಾನ ಕೇಂದ್ರದ್ದು. ಕಳೆದ ೯ ವರ್ಷಗಳಲ್ಲಿ ಮೋದಿಯವರ ಸರಕಾರ ಸುಭದ್ರ ಆಡಳಿತ ನೀಡುತ್ತ ಬಂದಿದೆ. ಹೀಗಾಗಿ, ಬೆಂಗಳೂರಿನಲ್ಲಿ ಉತ್ತರದ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿರುವುದಕ್ಕೆ ತಾವೇ ಕಾರಣರೆಂದು ಬೆನ್ನು ತಟ್ಟಿಕೊಳ್ಳುವ ಧೋರಣೆಯ ನಾಯಕರು, ತಾವೂ ರಾಜಕಾರಣದ ಸಲುವಾಗಿ ರಾಜ್ಯದ ಉತ್ತರದಿಂದ ದಕ್ಷಿಣದ ಬೆಂಗಳೂರಿಗೆ ಬಂದು ನೆಲೆಸಿದ್ದೆಂಬುದನ್ನು ಅರಿತರೆ ಒಳಿತು.
‘ಗಿ’ನ ವೇದಿಕೆಯ ಮೇಲೆ ಖರ್ಗೆಯವರ ಪೋಸ್ಟ್‌ಗೆ ತಿರುಗೇಟು ನೀಡಿರುವ ಮತ್ತೊಬ್ಬರು, ಕಲಬುರಗಿಯಿಂದ ಬೆಂಗಳೂರಿಗೆ ಜನರು ಉದ್ಯೋಗಾವಕಾಶ ಗಳನ್ನರಸಿ ಬರುತ್ತಾರೆಯೇ ಹೊರತು, ಬೆಂಗಳೂರಿನಿಂದ ಯಾರೂ ಕಲಬುರಗಿಗೆ ಉದ್ಯೋಗಕ್ಕಾಗಿ ತೆರಳುವುದಿಲ್ಲವೆಂದಿದ್ದಾರೆ.

ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆಯವರು ದಶಕ ಗಳಿಂದ ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿನಿಧಿಸುತ್ತ ಬಂದಿರುವ ಈ ಜಿಲ್ಲೆಗೆ ಅವರೀರ್ವರ ಕೊಡುಗೆ ಸಂದಿದೆಯೇ ಎಂಬುದು ಈ ತಿರುಗೇಟಿನಲ್ಲಿ ಅಡಗಿರುವ ಮಾರ್ಮಿಕ ಅಂಶ. ವಿರೋಧಿಸುವ ಒಂದೇ ಉದ್ದೇಶದಿಂದ ‘ಗಿ’ನಂಥ ಸಾರ್ವಜನಿಕ ವೇದಿಕೆಯ ಮೇಲೆ ಮನಬಂದಂತೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಚಿವರಿಗೆ ತಮ್ಮ ಧೋರಣೆಯ ಪರಿಣಾಮಗಳೇನಾಗಬಹುದೆಂಬ ವಿವೇಚನೆ ಯಿದ್ದರೆ ಒಳ್ಳೆಯದು. ಇಲ್ಲದೆ ಹೋದರೆ, ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ನಮ್ಮ ರಾಜಕೀಯ ನಾಯಕರಿಗೆ ತಾವು ನಗೆಪಾಟಲಿ ಗೀಡಾಗುವ ಸಂದರ್ಭಗಳು ಸಾಕಷ್ಟು ಒದಗುತ್ತವೆಂಬ ಕಹಿಸತ್ಯದ ಅರಿವಾಗುವುದು ನಿಶ್ಚಿತ.