ಅಭಿಮತ
ಶಂಕರನಾರಾಯಣ್ ಭಟ್
ರಾಜಕೀಯದಲ್ಲಿ ಸೋತು ಗೆದ್ದವರು ಅತಿ ವಿರಳ. ಆ ವಿರಳರಲ್ಲೇ ಹೊರ ಹೊಮ್ಮುತ್ತಿರುವುದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎನ್ನುವು ದನ್ನು ಅಂಕಣಕಾರ ಶಿಶಿರ್ ಹೆಗಡೆಯವರು ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಶೀರ್ಷಿಕೆಯ ತಮ್ಮ ಅಂಕಣ ಬರಹದಲ್ಲಿ (ವಿಶ್ವವಾಣಿ ನ.೧೦) ಸ್ವಾರಸ್ಯ ಕರವಾಗಿ ವಿವರಿಸಿದ್ದಾರೆ. ರಾಜಕಾರಣಿಗಳು ಸೋಲನ್ನು ಅರಗಿಸಿಕೊಳ್ಳಲಾರರು ಎಂಬುದನ್ನು ಕುಮಟಾ ಶಾಸಕರಾಗಿದ್ದ ಮೋಹನ ಶೆಟ್ಟಿ ಅವರ ಉದಾ ಹರಣೆಯೊಂದಿಗೆ ಉಲ್ಲೇಖಿಸುವ ಅವರ ಬರಹವು, ಟ್ರಂಪ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗ ಬಹುದು ಎಂಬ ಸಂಭಾ ವ್ಯತೆಯೊಂದಿಗೆ ಮುಕ್ತಾಯವಾಗುತ್ತದೆ.
ಟ್ರಂಪ್ ತಮ್ಮ ವೈಯಕ್ತಿಕ ಲೋಪದೋಷಗಳಿಂದಲೇ ಮತ್ತು ತಮ್ಮ ಮೇಲಿನ ಕೆಲವಷ್ಟು ಆರೋಪಗಳಿಂದಲೇ ಅಧಿಕಾರ ಕಳೆದುಕೊಂಡಿದ್ದು ಎಷ್ಟು ನಿಜವೋ, ಅವೆಲ್ಲವೂ ತನಗೆ ಬಾಧಕವಾಗದು ಎಂಬುದನ್ನು ಸಾಬೀತುಪಡಿಸಲು ಮತ್ತೊಮ್ಮೆ ಪುಟಿ ದೇಳುತ್ತಿರುವುದೂ ಅಷ್ಟೇ ನಿಜ ಎಂಬ ಮಾಹಿತಿ ಯನ್ನು ಅಂಕಣಕಾರರು ಒದಗಿಸಿದ್ದಾರೆ. ಒಂದಂತೂ ಒಪ್ಪಿಕೊಳ್ಳಲೇಬೇಕು, ರಾಜಕಾರಣಿಗಳ ಅಧಿಕಾರ ವ್ಯಾಪ್ತಿ ಮಾತ್ರ ಇನ್ನೆಲ್ಲೂ ಕಾಣಸಿಗದು. ವ್ಯಕ್ತಿ
ಯೊಬ್ಬರು ಒಮ್ಮೆ ಶಾಸಕರೋ, ಸಚಿವರೋ, ಉಪಮುಖ್ಯ ಮಂತ್ರಿಯೋ, ಮುಖ್ಯಮಂತ್ರಿಯೋ ಆದರೆಂದರೆ, ಅವರ ಹಿಂದೆ ಸುತ್ತಾಡುವವರ ಸಂಖ್ಯೆ ಕಡಿಮೆಯಿರುವುದಿಲ್ಲ.
ಐಎಎಸ್, ಐಪಿಎಸ್‌ಗಳ ಅಧಿಕಾರವೂ ಇವರಿಗೆ ಲೆಕ್ಕಕ್ಕೆ ಬಾರದು; ಇಂಥವರನ್ನೂ ಬುಗುರಿಯಂತೆ ತಿರುಗಿಸುವ ತಾಕತ್ತನ್ನು ರಾಜಕಾರಣಿಗಳು ಸಹಜ ಎಂಬಂತೆ ಪಡೆದಿರುತ್ತಾರೆ. ಹೋದಲ್ಲಿ ಬಂದಲ್ಲಿ ‘ಜೀ ಹುಜೂರ್’ ಎನ್ನುವವರೋ, ಸಲ್ಯೂಟ್ ಹೊಡೆಯುವವರೋ, ಕಾಲಿಗೆ ಬೀಳುವವರೋ ಲೆಕ್ಕ ವಿಲ್ಲದಷ್ಟು ಕಾಣಸಿಗುತ್ತಾರೆ. ಈ ಅಧಿಕಾರದ ಮದ ನೆತ್ತಿಗೇರಿ, ಅದರ ಗುಂಗಿನಲ್ಲೇ ತಾವು ನಡೆದದ್ದೇ ದಾರಿ, ಹೇಳಿದ್ದೇ ಸರಿ ಎಂಬಲ್ಲಿಗೆ ತಲುಪುತ್ತಾರೆ. ಅದರ ಜತೆಗೆ ಸಾಕಷ್ಟು ಸೌಲಭ್ಯಗಳು! ಕೇಳಬೇಕೇ ಅವರ ದರ್ಪಕ್ಕೆ?! ಆದರೆ ಇಂಥ ಅಧಿಕಾರ ಕಳಚಿಬಿದ್ದಾಗ ಅವರನ್ನು ಕೇಳುವವರೇ ಇರುವುದಿಲ್ಲ.
೨ ಬಾರಿ ಶಾಸಕರಾಗಿದ್ದ ಕುಮಟಾದ ಮೋಹನ ಶೆಟ್ಟಿಯವರು ೩ನೇ ಬಾರಿ ಸೋತಾಗ ಅವರ ಸ್ಥಿತಿ ಹೇಗಾಗಿಬಿಟ್ಟಿತು ಎಂಬುದನ್ನು ಅಂಕಣಕಾರರೇ ವಿವರಿಸಿದ್ದಾರೆ. ಇದುವೇ ಹಕೀಕತ್ತು! ಇಂದು ರಾಜ್ಯದಲ್ಲೂ ಅಂಥದ್ದೇ ಪರಿಸ್ಥಿತಿಯಿದೆ. ಈ ಹಿಂದೆ ಅಽಕಾರ ಚಲಾಯಿಸಿದವರು, ಚುನಾವಣಾ ಸೋಲಿ ನಿಂದ ಹೊರಬರಲಾಗದೆ ಖಿನ್ನರಾಗಿಬಿಟ್ಟಿದ್ದಾರೆ. ಸೋಲು- ಗೆಲುವನ್ನು ಸಮಚಿತ್ತದಿಂದ ನೋಡುವ ಸ್ವಭಾವ ರಾಜಕಾರಣಿಗಳದ್ದಲ್ಲ. ತಾವು ಗೆಲ್ಲುತ್ತಲೇ ಇರಬೇಕು ಎಂಬುದು ಅವರ ಧೋರಣೆ. ಇದು ಸಾಧ್ಯವೇ? ಉಳಿದೆಲ್ಲ ಕ್ಷೇತ್ರಗಳಂತೆ ರಾಜಕೀಯದಲ್ಲೂ ಜಯ, ಅಪಜಯ, ನಿವೃತ್ತಿ ಇದ್ದದ್ದೇ. ಆದರೆ ಅದನ್ನು ಅರಗಿಸಿಕೊಳ್ಳುವ ತಾಕತ್ತಿನ ಅಭಾವ ಕೆಲವರಲ್ಲಿ ಇಣುಕುತ್ತದೆ.
ಅಧಿಕಾರವಿಲ್ಲದವರ ಸವಲತ್ತು ಗಳನ್ನು ಹಿಂಪಡೆಯಲಾಗುತ್ತದೆ, ಹಿಂಬಾಲಕರೂ ಹಿಂದೆ ಸರಿಯುತ್ತಾರೆ. ಹಿಂದಿನ ರಾಜವೈಭವ ಮಾಯವಾಗುತ್ತದೆ. ಅಂಥವರು ಚುನಾವಣಾ ರಾಜಕೀಯದಿಂದಲೇ ಹಿಂದಕ್ಕೆ ಸರಿಯುತ್ತಿರುವ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿರುವಾಗ, ಸೋತು ಸುಣ್ಣವಾದ ಟ್ರಂಪ್ ಸೋಲಿಗೇ ಸಡ್ಡು ಹೊಡೆದು ಮತ್ತೊಮ್ಮೆ ಅಖಾಡಕ್ಕಿಳಿಯಲು ಇಚ್ಛಿಸಿದ್ದು ನಿಜಕ್ಕೂ ಹುಬ್ಬೇರಿಸುವಂಥ ವಿಷಯ. ಇಲ್ಲಿ ಇನ್ನೊಂದು ವಿಷಯ ಹೇಳಬೇಕು. ರಾಜಕಾರಣಿಗಳು ತಮಗೆ ದಕ್ಕಿದ ಅಧಿಕಾರ ಶಾಶ್ವತ ಅಂದುಕೊಂಡುಬಿಡುತ್ತಾರೆ.
ಎಷ್ಟೇ ಒಳ್ಳೆಯವರೆನಿಸಿಕೊಂಡು ದಕ್ಷತೆಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ರಾಜಕೀಯ ಕ್ಷೇತ್ರದ ನಿರೀಕ್ಷೆಗಳು ಬದಲಾಗುತ್ತಲೇ ಇರುತ್ತವೆ. ಇದಕ್ಕೆ ಇಂಥದ್ದೇ ಕಾರಣ ಎನ್ನಲಾಗದು. ಆದರೆ ಬದಲಾವಣೆಯಂತೂ ಗೋಚರಿಸುತ್ತದೆ. ಅಂಥ ವೇಳೆ, ಯಾವ ದಕ್ಷತೆ, ಪ್ರಾಮಾಣಿಕತೆ, ಸಚ್ಚಾರಿತ್ರ್ಯವೂ ಕೆಲಸ ಮಾಡದು. ಒಂದು ಕಾಲಕ್ಕೆ ‘-ರ್ ಬ್ರ್ಯಾಂಡ್’ ಎನಿಸಿಕೊಂಡವರೂ ಸಮಯ ಸರಿಯಿಲ್ಲದಾಗ ಮೌನಕ್ಕೆ ಶರಣಾದ ಉದಾಹರಣೆಗಳೂ ನಮ್ಮಲ್ಲಿ ಸಾಕಷ್ಟಿವೆ. ಆದರೆ ಸೋಲನ್ನೂ ಗೆಲ್ಲಬಲ್ಲ ರಾಜಕಾರಣಿ ಮಾತ್ರ ತನ್ನ ಅಧಿಕಾರವನ್ನು ಮರುಸ್ಥಾಪಿಸಿಕೊಳ್ಳಬಲ್ಲ!
(ಲೇಖಕರು ಹವ್ಯಾಸಿ ಬರಹಗಾರರು)