ಅಭಿಮತ
ಆದರ್ಶ್ ಶೆಟ್ಟಿ ಉಪ್ಪಿನಂಗಡಿ
ಗುಜರಾತಿನಲ್ಲಿ ಅಭಿವೃದ್ಧಿಯ ಮಂತ್ರವನ್ನು ಜಪಿಸಿ, ದೂರದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಮಾದರಿ ಮುಖ್ಯಮಂತ್ರಿ ಯಾಗಿ ಹೊರಹೊಮ್ಮಿದ ನರೇಂದ್ರ ಮೋದಿಯವರು, ತರುವಾಯದಲ್ಲಿ ದೇಶದ ಪ್ರಧಾನಿಯಾಗಿ ವಿಶ್ವವೇ ಮೆಚ್ಚುವ ರೀತಿಯಲ್ಲಿ ದಕ್ಷ ಆಡಳಿತವನ್ನು ನೀಡುತ್ತಾ ಬಂದಿದ್ದಾರೆ.
ತನ್ಮೂಲಕ ರಾಜಕಾರಣಕ್ಕೆ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿದ ಮೋದಿ, ಸೈನಿಕರು, ರೈತರು, ಕೃಷಿ ಕಾರ್ಮಿಕರು, ಋಷಿ ಪರಂಪರೆ, ವ್ಯಾಪಾರಿಗಳು ಹೀಗೆ ಸಮಾಜದ ಪ್ರತಿಯೊಂದು ವರ್ಗದ ಔನ್ನತ್ಯಕ್ಕೂ ತಮ್ಮದೇ ಆದ ರೀತಿ ಯಲ್ಲಿ ಶ್ರಮಿಸುತ್ತಿರುವ ಅಪರೂಪದ ರಾಜಕಾರಣಿ.
ದಶಕಗಳ ಕಾಲ ಹಲವು ಹಗರಣಗಳು ಮತ್ತು ಭ್ರಷ್ಟಾಚಾರದ ಪ್ರಕರಣಗಳನ್ನು ನೋಡಿಕೊಂಡು ಬಂದು ರೋಸತ್ತಿದ್ದ ಭಾರತೀಯರಿಗೆ ದಕ್ಷ ಆಡಳಿತದ ಮೂಲಕ ರಾಜಕಾರಣದ ಮತ್ತೊಂದು ಆಯಾಮವನ್ನು ತೋರಿಸಿಕೊಟ್ಟವರು ಮೋದಿ. ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಸೇನಾವ್ಯವಸ್ಥೆಯಲ್ಲಿ ನೈತಿಕ ಸ್ಥೈರ್ಯ ತುಂಬುವಿಕೆ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯ ರದ್ದತಿಯ ಮೂಲಕ ಅಲ್ಲಿನ ನಾಗರಿಕರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸಿರುವಿಕೆ, ಮುಸ್ಲಿಂ ಮಹಿಳೆಯರ ಪಾಲಿಗೆ ದುಸ್ವಪ್ನವಾಗಿದ್ದ ತ್ರಿವಳಿ ತಲಾಖ್ ಪದ್ಧತಿ
ಯನ್ನು ನಿಷೇಧಿಸುವಿಕೆ, ರೈತರ ಅಭ್ಯುದಯಕ್ಕಾಗಿ ಕಿಸಾನ್ ಸಮ್ಮಾನ್ ನಂಥ ಹಲವು ಯೋಜನೆಗಳ ಜಾರಿ, ನಾಗರಿಕರ ಆರೋಗ್ಯದ ಸಂರಕ್ಷಣೆಗಾಗಿ ಆಯುಷ್ಮಾನ್ ಯೋಜನೆಯ ಅನುಷ್ಠಾನ ಹೀಗೆ ಹೇಳುತ್ತಾ ಹೋದರೆ ಮೋದಿಯವರ ಜನಪರ ಕಾಳಜಿಗೆ ಹಲವು ನಿದರ್ಶನಗಳು ದಕ್ಕುತ್ತವೆ.
ಒಟ್ಟಾರೆ ಹೇಳುವುದಾದರೆ, ಯಾವುದೇ ಭ್ರಷ್ಟಾಚಾರವಿಲ್ಲದೆ ಅಥವಾ ಮಧ್ಯವರ್ತಿಗಳ ಕಾಟವಿಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರಿ ಯೋಜನೆ ಗಳ ಪ್ರಯೋಜನ ದಕ್ಕುವಂತಾಗುವಲ್ಲಿ ಮೋದಿ ಶ್ರಮಿಸಿದ್ದಾರೆ. ಕೋಟ್ಯಂತರ ಹಿಂದೂಗಳ ಬಹುವರ್ಷಗಳ ಕನಸು ಹಾಗೂ ಶ್ರದ್ಧಾ ಭಕ್ತಿಯ ಸಂಕೇತ ವಾದ, ಅಯೋಧ್ಯೆಯಲ್ಲಿನ ರಾಮ ಮಂದಿರದ ನಿರ್ಮಾಣವನ್ನು ಸಾಕಾರಗೊಳಿಸುವ ಮೂಲಕ ಇದು ಕೇವಲ ದೇಶದ ಭವ್ಯಮಂದಿರವಲ್ಲ, ಇಡೀ ಜಗತ್ತಿನ ಪಾಲಿಗೆ ನೆಮ್ಮದಿಯ ನೆಲೆವೀಡು ಎಂಬ ಸಂದೇಶವನ್ನು ಸಾರಿದವರು ಮೋದಿ.
ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ಸಾರುವ ನಿಟ್ಟಿನಲ್ಲಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಪರಿಕಲ್ಪನೆಯಡಿ ಸಮಾಜದ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ ಗಳನ್ನು ಜಾರಿ ಮಾಡಿದವರು ಮೋದಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇದೀಗ ಮತ್ತೊಂದು ಲೋಕಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಮೂರನೇ ಅವಽಗೆ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿಯಲು ಮೋದಿಯವರು ಸಕಲ ಸಿದ್ಧತೆ ಗಳನ್ನು ನಡೆಸಿದ್ದಾರೆ. ದೇಶಹಿತ ಮತ್ತು ಜನಕಲ್ಯಾಣವನ್ನೇ ಉಸಿರಾಗಿಸಿಕೊಂಡಿರುವ, ಅದಕ್ಕಾಗಿ ವೈಯಕ್ತಿಕ ಜೀವನವನ್ನೇ ಮುಡಿಪಾಗಿಟ್ಟಿರುವ ಮೋದಿಯ ವರಂಥ ನಾಯಕರು ಮತ್ತೊಮ್ಮೆ ದೇಶದ ನಾಯಕತ್ವವನ್ನು ವಹಿಸಿ ಕೊಳ್ಳುವಂತಾಗಬೇಕು.
ಅವರಲ್ಲಿ ಕೆನೆಗಟ್ಟಿರುವ ದೂರದೃಷ್ಟಿಯ ಯೋಜನೆಗಳು ಸಾಕಾರಗೊಳ್ಳಬೇಕೆಂದರೆ, ಭಾರತವು ವಿಶ್ವಗುರು ಸ್ಥಾನದಲ್ಲಿ ನಿಲ್ಲಬೇಕು ಎಂದಾದರೆ, ಭ್ರಷ್ಟಾ ಚಾರ-ಮುಕ್ತ ಆಡಳಿತವು ಕೈಗೂಡಬೇಕೆಂದರೆ, ಭಯೋತ್ಪಾದಕರು ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ಮೂಲೋತ್ಪಾಟನೆಯಾಗಬೇಕೆಂದರೆ ಮೋದಿಯವರ ಆಡಳಿತದ ಅನಿವಾರ್ಯತೆ ಮತ್ತೊಮ್ಮೆ ಭಾರತಕ್ಕಿದೆ. ‘ನಮ್ಮ ಜಾತಿಯವರಿಗೆ ಅಥವಾ ನಮ್ಮ ಬಣದ ನಾಯಕನಿಗೆ ಟಿಕೆಟ್ ಸಿಕ್ಕಿಲ್ಲ’ ಎಂಬಂಥ ಸಂಕುಚಿತ ಚಿತ್ತಸ್ಥಿತಿಗಳನ್ನು ಬದಿಗೊತ್ತಿ ಬಿಜೆಪಿಯ ಕಾರ್ಯಪಡೆ ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಹಾಗೂ ಈ ಆಶಯಕ್ಕೆ ಮತದಾರ ಬಂಧುಗಳು ಅಂಗೀಕಾರದ ಮುದ್ರೆ ಯನ್ನು ಒತ್ತಬೇಕಿದೆ.
(ಲೇಖಕರು ಹವ್ಯಾಸಿ ಬರಹಗಾರರು)