ತನ್ನಿಮಿತ್ತ
ಸವಿತಾ ವಿ.ಅಮರಶೆಟ್ಟಿ
ದೇಶದಲ್ಲಿ ಸಮ ಸಮಾಜ ನಿರ್ಮಿಸಬೇಕು ಎನ್ನುವ ಧ್ವನಿ ಇಂದು ನಿನ್ನೆಯದ್ದಲ್ಲ. ೧೨ನೇ ಶತಮಾನದಲ್ಲಿ ಬಸವಣ್ಣನವರೂ ಮಹಿಳಾ ಸಮಾನತೆಗಾಗಿಯೇ ಹೋರಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಹತ್ತು ಹಲವರು ಮಹಿಳೆಯರ ಸ್ವಾತಂತ್ರ್ಯ, ಸಮಾನತೆ ಬಗ್ಗೆ ಮಾತನಾಡಿದ್ದಾರೆ. ಆದರೆ ನಿಜವಾದ ಅರ್ಥದಲ್ಲಿ ಮಹಿಳೆಗೆ ಸಮಾನತೆ, ಸ್ವಾತಂತ್ರ್ಯ ಸಿಗಲು ಪ್ರಧಾನಿ ನರೇಂದ್ರ ಮೋದಿ ಅವರೇ ಬರಬೇಕಾಯಿತು.
ಯಾವುದೇ ಒಂದು ಸಮುದಾಯದ ಅಭಿವೃದ್ಧಿಯಾಗಬೇಕು ಎಂದರೆ ಶೈಕ್ಷಣಿಕ, ಸಾಮಾಜಿಕ ಮೀಸಲಿನೊಂದಿಗೆ ರಾಜಕೀಯ ಮೀಸಲು ಅತ್ಯಗತ್ಯವೆಂದು ಅಂಬೇಡ್ಕರ್ ಅವರು ಅಭಿಪ್ರಾಯಪಟ್ಟಿದ್ದರು. ಆರು ದಶಕಗಳ ಕಾಲ ದೇಶವನ್ನು ನಡೆಸಿದ ಪಕ್ಷಗಳು, ಈ ಮಾತನ್ನು ಪ್ರತಿ ಚುನಾವಣಾ ಸಮಯದಲ್ಲಿ ಹೇಳಿ ಕೊಂಡು, ಮಹಿಳಾ ಮೀಸಲು ನೀಡುವುದನ್ನು ಭಾಷಣಕ್ಕೆ ಸೀಮಿತ ಗೊಳಿಸಿದ್ದವೇ ಹೊರತು, ಜಾರಿಗೊಳಿಸುವ ‘ದಿಟ್ಟತನ’ವನ್ನು ತೋರಿಸಲಿಲ್ಲ.
ರಾಜಕೀಯ ಮೀಸಲಿಗೆ ಸಂಬಂಧಿಸಿದಂತೆ, ಮಹಿಳಾ ಸಮಾನತೆಯ ಹೆಸರಲ್ಲಿ ಹತ್ತಾರು ಪಕ್ಷಗಳ ‘ರಾಜಕೀಯ’ ಘೋಷಣೆಗಳು ಕೇಳಿಬಂದಿವೆ. ರಾಜಕೀಯ ಮೀಸಲಿಗೆ ದಶಕಗಳಿಂದ ಕೂಗು ಕೇಳಿ ಬಂದಿತ್ತು. ಆದರೆ ಇದನ್ನು ಜಾರಿಗೊಳಿಸಿದ್ದು ಮಾತ್ರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ. ಹಲವು ದಶಕಗಳ ರಾಜಕೀಯ ಮೀಸಲಿನ ಕೂಗಿಗೆ ಮೋದಿ ಸರಕಾರ ‘ಓಗೊಟ್ಟು’ ಅದನ್ನು ಉಭಯ ಸದನದಲ್ಲಿ ಅಂಗೀಕಾರವಾಗುವಂತೆ ನೋಡಿಕೊಳ್ಳುವ ಮೂಲಕ ‘ನಾರಿಶಕ್ತಿ’ ಎನ್ನುವುದಕ್ಕೆ ಹೊಸ ಭಾಷ್ಯ ಬರೆಯಿತು ಎಂದರೆ ತಪ್ಪಾಗುವುದಿಲ್ಲ.
ಮೋದಿ ಸರಕಾರವು ಕಳೆದ ವರ್ಷ, ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲು ನೀಡುವ ಐತಿಹಾಸಿಕ ವಿಧೇಯಕವನ್ನು ಅಂಗೀಕರಿಸಿದ್ದು, ೨೦೨೯ರ ಚುನಾವಣೆ ವೇಳೆಗೆ ಇದು ಜಾರಿಯಾಗಲಿದೆ. ಈಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಮಹಿಳಾ ಮೀಸಲು ನಿಜ
ವಾದ ಅರ್ಥ ದಲ್ಲಿ ಜಾರಿ ಯಾಗಲು ಕೆಲ ಸಮಯ ಬೇಕಾಗಬಹುದು. ೨೦೪೭ರ ಹೊತ್ತಿಗೆ ದೇಶವನ್ನು ವಿಕಸಿತ ಭಾರತವನ್ನಾಗಿ ರೂಪಿಸುವ ನರೇಂದ್ರ ಮೋದಿ ಅವರ ಕನಸು ಸಾಕಾರಗಳಿಸಲು ಈ ಕಾನೂನು ಸಹಕಾರಿಯಾಗ ಲಿದೆ ಎನ್ನುವುದು ಸ್ಪಷ್ಟ. ಈ ಮೀಸಲಿನಿಂದ ಮಹಿಳಾ ಸಂಸದರ ಸಂಖ್ಯೆ ೭೮ರಿಂದ ೧೮೧ಕ್ಕೆ ಏರಿಕೆ ಯಾಗಲಿದೆ.
ಹಾಗೆ ನೋಡಿದರೆ, ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳಾ ಸಬಲೀಕರಣಕ್ಕೆ ಹತ್ತು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮಹಿಳೆಗೆ ಸಹಾನುಭೂತಿ ತೋರುವುದಕ್ಕಿಂತ ಹೆಚ್ಚಾಗಿ ಅವಕಾಶ ನೀಡಬೇಕು ಎಂದು ಅರಿತಿರುವ ಮೋದಿ ಅವರು, ಹತ್ತು ಹಲವು ಉನ್ನತ ಸ್ಥಾನಗಳನ್ನು ಕಳೆದೊಂದು ದಶಕದಲ್ಲಿ ಮಹಿಳೆಯರಿಗೆ ನೀಡಿರುವುದು ನಮ್ಮ ಕಣ್ಣ ಮುಂದಿದೆ. ದೇಶದ ಪ್ರಥಮ ಪ್ರಜೆಯ ನ್ನಾಗಿ ದ್ರೌಪದಿ ಮುರ್ಮು ಅವರನ್ನು, ಅರ್ಥ ಸಚಿವೆಯನ್ನಾಗಿ ನಿರ್ಮಲಾ ಸೀತಾರಾಮನ್ ಅವರನ್ನು ಮೋದಿ ನೇಮಿಸಿದ್ದಾರೆ.
ಇನ್ನು ಕಳೆದ ಅವಧಿಯಲ್ಲಿ ವಿದೇಶಾಂಗ ಸಚಿವರ ಸ್ಥಾನವನ್ನು ಸುಷ್ಮಾ ಸ್ವರಾಜ್ ಅವರಿಗೆ ನೀಡಿದ್ದರು. ಈ ರೀತಿಯ ಹಲವು ಆಯಕಟ್ಟಿನ ಸ್ಥಳವನ್ನು ಮಹಿಳೆಯರಿಗೆ ನೀಡುವ ಮೂಲಕ ಮೋದಿ ನೇತೃತ್ವದ ಕೇಂದ್ರ ಸರಕಾರ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ಯನ್ನು ನೀಡಿದೆ. ಮಹಿಳೆಯೂ ಪುರುಷನಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡ ಬಲ್ಲಳು ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ.
ತಾಯಿಯಾಗಿ, ಗೃಹಿಣಿಯಾಗಿ, ಜೀವನದುದ್ದಕ್ಕೂ ಕುಟುಂಬದ ಶ್ರೇಯಸ್ಸನ್ನು ಬಯಸುವ ಮಹಿಳೆಯ ಕೈಯಲ್ಲಿ ಒಂದು ಕ್ಷೇತ್ರವನ್ನು ನೀಡಿದರೆ, ಅದರ ಅಭಿವೃದ್ಧಿಗೆ ಆಕೆ ಹಗಲಿರುಳೂ ಶ್ರಮಿಸುವುದರಲ್ಲಿ ಅನುಮಾನವಿಲ್ಲ. ಮೋದಿ ಅವರ ದೂರದೃಷ್ಟಿಯ ಫಲವಾಗಿ ಜಾರಿಯಾಗಿರುವ ಶೇ.೩೩ರಷ್ಟು ರಾಜಕೀಯ ಮೀಸಲಿನಿಂದ ೨೦೪೭ರ ಹೊತ್ತಿಗೆ ಭಾರತವು ನಾರಿಶಕ್ತಿಯನ್ನು ಹೊಂದಲಿದೆ.
ಕೊನೆಯದಾಗಿ, ಯಾವುದೇ ಒಂದು ದೇಶವು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರೆ ಅದರ ಹಿಂದೆ ಮಹಿಳೆಯರ ಪಾತ್ರ ಬಹುದೊಡ್ಡ ಮಟ್ಟದಲ್ಲಿರುತ್ತದೆ. ನಮ್ಮ ದೇಶದಲ್ಲಿ ಶತ- ಶತಮಾನಗಳಿಂದಲೂ ಮಹಿಳೆಯರಿಗೆ ಪೂಜನೀಯ ಸ್ಥಾನವನ್ನು ನೀಡುತ್ತಾ ಬಂದಿದ್ದರೂ, ಅವರ ಮೇಲಿನ ದೌರ್ಜನ್ಯ ವನ್ನು ತೊಡೆದು ಹಾಕಲು ಈವರೆಗೆ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾನೂನಿನಲ್ಲಿ ಬದಲಾವಣೆ ತರುವ ಮೂಲಕ ಸುರಕ್ಷಿತ ವಾತಾವರಣ ವನ್ನು ನಿರ್ಮಿಸಲು ಶ್ರಮಿಸುತ್ತಿದೆ. ಇದಕ್ಕೆ ಪೂರಕವಾಗಿ ಮಹಿಳೆಯ ಮೇಲಾಗುವ ದೌರ್ಜನ್ಯವನ್ನು ಮೊದಲಿಗೆ ಮಹಿಳೆಯರು ಖಂಡಿಸಬೇಕು.
ಮಹಿಳಾ ದಿನಾಚರಣೆ ನಿಜವಾದ ಅರ್ಥದಲ್ಲಿ ಸಾಕಾರಗೊಳ್ಳ ಬೇಕಾದರೆ, ಮಹಿಳೆಯು ತನಗೆ ಈಗಲೂ ಇರುವ ಹತ್ತು ಹಲವು ಸಂಕೋಲೆಗಳಿಂದ ಹೊರಬಂದು, ಸ್ವಾವಲಂಬಿ ಯಾಗಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು.
(ಲೇಖಕಿ ಬಿಜೆಪಿ ನಾಯಕಿ ಮತ್ತು ರೇಷ್ಮೆ ಮಂಡಳಿಯ ಮಾಜಿ
ಅಧ್ಯಕ್ಷೆ ಹಾಗೂ ಸುವರ್ಣ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ)