Sunday, 24th November 2024

ಅಷ್ಟಕ್ಕೂ ಬಂಡಾಯಗಾರರ ಬಂಡವಾಳ ಏನು ?

ಅಶ್ವತ್ಥಕಟ್ಟೆ

ranjith.hoskere@gmail.com

ತಾಲೂಕು ಪಂಚಾಯಿತಿಯಿಂದ ಲೋಕಸಭೆಯವರೆಗೆ ಯಾವುದೇ ಚುನಾವಣೆ ಎದುರಾದರೂ, ಪಕ್ಷಗಳಲ್ಲಿ ಪೈಪೋಟಿ ಸರ್ವೇ
ಸಾಮಾನ್ಯ. ಸೋಲುವ ಕ್ಷೇತ್ರವೆಂದು ಗೊತ್ತಿದ್ದರೂ ಸ್ಥಳೀಯ ಮಟ್ಟದಲ್ಲಿ ‘ನಾಯ ’ನೆಂದು ಗುರುತಿಸಿಕೊಳ್ಳುವ ಉದ್ದೇಶ
ದಿಂದ ಅಭ್ಯರ್ಥಿಯಾಗಬೇಕು ಎನ್ನುವ ರೇಸ್‌ನಲ್ಲಿ ಕನಿಷ್ಠ ನಾಲ್ಕೈದು ಮಂದಿ ಇರುತ್ತಾರೆ. ಇನ್ನು ಗೆಲುವು ನಿಶ್ಚಿತ ಎನ್ನುವ ಕ್ಷೇತ್ರಗಳಲ್ಲಿ ಈ ಪಟ್ಟಿ ೧೦ಕ್ಕಿಂತಲೂ ಹೆಚ್ಚಿರುತ್ತದೆ.

ಆದರೆ ಯಾವುದೇ ಪಕ್ಷ ‘ಅಧಿಕೃತ ಅಭ್ಯರ್ಥಿ’ಯನ್ನಾಗಿ  ಒಬ್ಬರನ್ನು ಮಾತ್ರ ನಿಲ್ಲಿಸಲು ಸಾಧ್ಯ. ಈ ರೀತಿ ಒಬ್ಬನ ಆಯ್ಕೆ ಯಾಗುತ್ತಿದ್ದಂತೆ ಬಂಡಾಯ, ಭಿನ್ನಾಭಿಪ್ರಾಯ, ಪಕ್ಷಾಂತರ ಪರ್ವ, ತಟಸ್ಥ ಸೇರಿದಂತೆ ಹಲವು ರೀತಿಯಲ್ಲಿ ‘ಟಿಕೆಟ್ ವಂಚಿತ’ರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಾರೆ. ಇದರಲ್ಲಿ ಬಹುತೇಕ ಆಕಾಂಕ್ಷಿಗಳ ಸಾಮಾನ್ಯ ಅಸವೆಂದರೆ ‘ಬಂಡಾಯ ಸ್ಪರ್ಧೆ’ಯೇ ಆಗಿರುತ್ತದೆ. ಇತ್ತೀಚಿನ ದಿನದಲ್ಲಿ ಬಂಡಾಯ ಸ್ಪರ್ಧೆ ಎನ್ನುವುದು ನಾಮಪತ್ರ ಹಿಂಪಡೆಯುವ ಹಿಂದಿನ ದಿನದವರೆಗೆ ಹೈಡ್ರಾಮಾ ನಡೆಸಿ, ಬಳಿಕ ನಾಮಪತ್ರ ಹಿಂಪಡೆಯುವುದು ಎನ್ನುವಂತಾಗಿದೆ. ಆದರೆ ಈ ರೀತಿ ಮಾಡುವ ಮೂಲಕ ಅಂತಹ ಅಭ್ಯರ್ಥಿಗಳು ಸಾಧಿಸಲು ಹೊರಟಿರುವುದೇನು ಎನ್ನುವುದೇ ಎಲ್ಲರ ಮುಂದಿರುವ ಪ್ರಶ್ನೆ. ಈ ಬಾರಿಯೂ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇದೇ ರೀತಿಯ ಹೈಡ್ರಾಮಾಕ್ಕೆ ಬಹುತೇಕ ಕ್ಷೇತ್ರ ಹಾಗೂ ಪಕ್ಷಗಳು ಸಾಕ್ಷಿಯಾಗಿವೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳಲ್ಲಿಯೂ ಪ್ರತೀ ಪಟ್ಟಿ ಘೋಷಣೆಯಾದಾಗಲೂ ಸಣ್ಣ ಪ್ರಮಾಣದ
ಬಂಡಾಯ, ಪಕ್ಷೇತರ ಸ್ಪರ್ಧೆ ನಡೆದೇ ಇದೆ. ಅದರಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಈ ಬಂಡಾಯದ ಪ್ರಮಾಣದ ಬಹುದೊಡ್ಡ ಪ್ರಮಾಣದಲ್ಲಿಯೇ ಇದಿದ್ದರಿಂದ, ಪಕ್ಷಾಂತರ ಹಾಗೂ ಬಂಡಾಯ ಸ್ಪರ್ಧೆಯ ಮಾತು ಜೋರಾಗಿಯೇ ಕೇಳಿಬಂದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡರಲ್ಲಿಯೂ ಕನಿಷ್ಠ ೨೫ರಿಂದ ೩೦ ಕ್ಷೇತ್ರದಲ್ಲಿ ಆರಂಭದಲ್ಲಿ ಬಂಡಾಯ ಸ್ಪರ್ಧೆಯನ್ನು ಆಕಾಂಕ್ಷಿಗಳು ಘೋಷಿಸಿದರು.

ಬಳಿಕ ಎರಡೂ ಪಕ್ಷದಲ್ಲಿಯೂ ಆರೇಳು ಮಂದಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ‘ಜಂಪ್’ ಸಹ ಮಾಡಿದ್ದಾರೆ. ಈ ರೀತಿ ಪಕ್ಷಾಂತರ ಮಾಡದವರು, ಪಕ್ಷೇತರವಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿ ನಾಮಪತ್ರವನ್ನೂ ಸಲ್ಲಿಸಿದ್ದರು. ಕೆಲ ಅಭ್ಯರ್ಥಿಗಳು ಯಾವುದೇ ಸಂಧಾನ ಸಭೆ ನಡೆಯುವ ಮೊದಲೇ ನಾಮಪತ್ರ ಹಿಂಪಡೆಯುವ ತೀರ್ಮಾನಕ್ಕೆ ಬಂದಿದ್ದರೆ, ಇನ್ನು ಕೆಲ ಕ್ಷೇತ್ರದಲ್ಲಿ ಸಂಧಾನ ಸಭೆ, ‘ಸಂಪನ್ಮೂಲ’ಗಳ ಹಂಚಿಕೆಯ ಬಳಿಕ ನಾಮಪತ್ರ ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.
ಹಾಗೇ ನೋಡಿದರೆ, ಈ ಬಾರಿ ಶಿಸ್ತಿನ ಪಕ್ಷವಾಗಿರುವ ಬಿಜೆಪಿಯಲ್ಲಿ ಬಂಡಾಯದ ಕಾವು ದೊಡ್ಡ ಪ್ರಮಾಣದಲ್ಲಿ ಕಾಣಿಸಿ ಕೊಂಡಿತ್ತು.

ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಅನೇಕರು ಪಕ್ಷಾಂತರ ಮಾಡಿದ್ದರೆ, ಗಾಂಧಿನಗರದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ, ಹಾವೇರಿಯಲ್ಲಿ ಗವಿಸಿದ್ದಪ್ಪ ದ್ಯಾಮ ಣ್ಣನವರ ವಿರುದ್ಧ ರಾಮು ಮಾಳಗಿ, ರಾಣೆಬೆನ್ನೂರಿನಲ್ಲಿ  ಆರ್. ಶಂಕರ್, ಕಾರವಾರದಲ್ಲಿ ರೂಪಾಲಿ ನಾಯ್ಕ್ ವಿರುದ್ಧ ಗಂಗಾಧರ್ ಭಟ್, ಶಿರಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರ ಲಮಾಣಿ ವಿರುದ್ಧ ರುದ್ರಪ್ಪ ಲಮಾಣಿ ಸೇರಿದಂತೆ
ಅನೇಕರು ಬಂಡಾಯವೆದ್ದಿದ್ದರು. ಆದರೆ ಇವರಲ್ಲಿ ಪುತ್ತೂರಿನ ಪುತ್ತಿಲ, ಗಾಂಧಿನಗರದ ಕೃಷ್ಣಯ್ಯ ಶೆಟ್ಟಿ ಹೊರತುಪಡಿಸಿ
ಇನ್ನುಳಿದವರೆಲ್ಲ ನಾಮಪತ್ರವನ್ನು ವಾಪಸು ಪಡೆದಿದ್ದಾರೆ.

ಇದೇ ರೀತಿ ಕಾಂಗ್ರೆಸ್‌ನಲ್ಲಿಯೂ ನಡೆದಿದೆ. ಟಿಕೆಟ್ ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ್ದ ಅಖಂಡ ಶ್ರೀನಿವಾಸ್‌ ಮೂರ್ತಿಗೆ ಟಿಕೆಟ್ ನಿರಾಕರಿಸಿದ್ದರಿಂದ ಪುಲಕೇಶಿ ನಗರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಬಳಿಕ ಬಿಎಸ್‌ಪಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಇದೇ ರೀತಿ ಛಬ್ಬಿ, ಸಿಂಧನೂರಿನಲ್ಲಿ ಬಸನಗೌಡ ಬಾದರ್ಲಿ, ಹರಪನಹಳ್ಳಿಯಲ್ಲಿ ಎನ್ ಕೊಟ್ರೇಶ್ ವಿರುದ್ಧ ಎಂಪಿ ಪ್ರಕಾಶ್ ಪುತ್ರಿಯರು, ಶಿರಸಿಯಲ್ಲಿ ವೆಂಕಟೇಶ್ ಹೆಗಡೆ ಹೊಸಬಾಳೆ, ಕುಮಟಾದಲ್ಲಿ ನಿವೇದಿತ್ ಆಳ್ವ ವಿರುದ್ಧ ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿದಂತೆ ಅನೇಕರು ಸ್ಪರ್ಧಿಸುವುದಾಗಿ ಘೋಷಿಸಿದ್ದರು.

ಆದರೆ ನಾಮಪತ್ರ ಹಿಂಪಡೆಯಲು ಕೊನೆಯ ದಿನ ಈ ಎಲ್ಲರೂ ನಾಮಪತ್ರ ಹಿಂಪಡೆದು, ಪಕ್ಷದ ವರಿಷ್ಠರ ಸೂಚನೆಯಂತೆ ಅಭ್ಯರ್ಥಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಿರುವ ವಿಷಯವೆಂದರೆ, ಈ ರೀತಿ ಬಂಡಾಯ ವೆದ್ದಿರುವ ಎಲ್ಲ ಆಕಾಂಕ್ಷಿಗಳಿಗೂ ಮೊದಲಿನಿಂದಲೂ ‘ಬಂಡಾಯ ಸ್ಪರ್ಧೆ ಬೇಡ’ ಎನ್ನುವ ಸೂಚನೆಯನ್ನು ಪಕ್ಷದ ನಾಯಕರು ನೀಡುತ್ತಲೇ ಬಂದಿದ್ದಾರೆ. ಆದರೆ ಆಗ ನಾಯಕರ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದ ‘ಬಂಡಾಯಕೋರ’ ಅಭ್ಯರ್ಥಿಗಳಿಗೆ ಕೊನೆದಿನ ‘ಜ್ಞಾನೋದಯ’ವಾಗುವುದು ಏಕೆ? ಎನ್ನುವುದು ಬಹುತೇಕರಿಗೆ ಅರ್ಥವಾಗದ ಪ್ರಶ್ನೆಯಾಗಿದೆ.

ಕೇವಲ ಹೈಡ್ರಾಮಾ ಮಾಡಿ, ರಾಜ್ಯದಲ್ಲಿ ಸುದ್ದಿಯಾಗಬೇಕು ಎನ್ನುವುದೊಂದೇ ಈ ಬಂಡಾಯದ ಬೆಂಕಿಯ ಮೂಲ ಉದ್ದೇಶವಾಗಿರುವುದೇ? ಅಥವಾ ಮುಂದೆ ಸರಕಾರ ಅಧಿಕಾರಕ್ಕೆ ಬಂದರೆ ಸೂಕ್ತ ಸ್ಥಾನಮಾನಕ್ಕಾಗಿ ಈಗಿನಿಂದಲೇ ಟವೆಲ್ ಹಾಕುವ ಮತ್ತೊಂದು ರೀತಿಯೋ ಎನ್ನುವುದು ಗೊತ್ತಿಲ್ಲ. ಆದರೆ ಬಂಡಾಯದ ಹೆಸರಲ್ಲಿ, ಈ ನಾಯಕರ ಮನೆಬಾಗಿಲಿಗೆ ಸ್ಥಳೀಯ ಅಧಿಕೃತ ಅಭ್ಯರ್ಥಿಗಳು ಬರುವಂತೆ ನೋಡಿಕೊಳ್ಳುವುದಂತೂ ಸತ್ಯ!

ಹಾಗೇ ನೋಡಿದರೆ, ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್‌ನಲ್ಲಿ ಗೆಲುವಿನ ಸಾಮರ್ಥ್ಯವಿದ್ದರೆ ಟಿಕೆಟ್ ಸಿಗುವುದು ನಿಶ್ಚಿತ. ಕೆಲ ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ಟಿಕೆಟ್ ಬೇರೆಯವರಿಗೆ ಕೊಟ್ಟಿರಬಹುದು. ಆದರೆ ಬಹುತೇಕ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡುತ್ತಾರೆ. ಈ ವಿಷಯ ಟಿಕೆಟ್ ವಂಚಿನ ಆಕಾಂಕ್ಷಿಗಳಿಗೂ ಸ್ಪಷ್ಟತೆಯಿರುತ್ತದೆ. ಉದಾಹರಣೆಗೆ ಕೊರಟಗೆರೆಯಲ್ಲಿ ಡಾ. ಜಿ. ಪರಮೇಶ್ವರ್ ಅವರಿಗೆ ಟಿಕೆಟ್ ಸಿಗುವುದು ನಿಶ್ಚಿತ ಎನ್ನುವುದು ಗೊತ್ತಿದ್ದರೂ, ಆ ಕ್ಷೇತ್ರದಿಂದ ನಾಲ್ಕೈದು ಮಂದಿ ಟಿಕೆಟ್‌ಗೆ ಕಾಂಗ್ರೆಸ್‌ನಿಂದ ಅರ್ಜಿ ಸಲ್ಲಿಸಿದ್ದರು.

ಟಿಕೆಟ್ ಸಿಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಅರ್ಜಿ ಸಲ್ಲಿಸುತ್ತಾರೆ. ಇನ್ನು ಕೆಲವರು ಒಮ್ಮೆ ಚುನಾವಣಾ ಪ್ರಕ್ರಿಯೆ ಮುಗಿಯಿತು
ಎಂದರೆ ಮನೆಯಲ್ಲಿ ಬೆಚ್ಚಗೆ ಮಲಗಿರುತ್ತಾರೆ. ಆ ಸಮಯದಲ್ಲಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಉಳಿಸಿಕೊಳ್ಳಲು ಐದು ವರ್ಷಗಳ ಕಾಲ ಒಮ್ಮೆ ವ್ಯಕ್ತಿ ಓಡಾಡಿ ಶ್ರಮಿಸಿರುತ್ತಾನೆ. ಆದರೆ ಟಿಕೆಟ್ ಹಂಚಿಕೆಯ ಸಮಯದಲ್ಲಿ ಮಾತ್ರ, ಐದು ವರ್ಷ ಏನು ಕೆಲಸ ಮಾಡದಿರುವ ವ್ಯಕ್ತಿ ಬಂದು ತಾನು ಟಿಕೆಟ್ ಆಕಾಂಕ್ಷಿಯೆಂದರೆ, ಇಷ್ಟು ಪಕ್ಷದ ಉಳಿವಿಗಾಗಿ ಹೋರಾಟ ಮಾಡಿದ ವ್ಯಕ್ತಿಗೆ ಟಿಕೆಟ್ ನೀಡದಿದ್ದರೆ ಆತ ಅಥವಾ ಆಕೆಗಾದ ಅನ್ಯಾಯವಲ್ಲವೇ? ಇದು ಬಂಡಾಯವೇಳುವ ಆಕಾಂಕ್ಷಿಗಳ ಕಥೆಯಾಯಿತು. ಆದರೆ ಇವರನ್ನೇ ನಂಬಿಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿಗೆ ವಿರುದ್ಧವಾಗಿ ಕ್ಯಾಂಪೇನ್ ಆರಂಭಿಸುವ ಸಾಮಾನ್ಯ ಕಾರ್ಯಕರ್ತರ ಬಗ್ಗೆ ಯಾರೂ ಯೋಚಿಸುವುದಿಲ್ಲ.

ಒಬ್ಬ ಬಂಡಾಯ ಅಭ್ಯರ್ಥಿಯೊಂದಿಗೆ ಕೆಲ ನಾಯಕರು ಹೋಗುತ್ತಾರೆ. ಆದರೆ ಬಂಡಾಯ ಹಿಂಪಡೆದು, ಅಧಿಕೃತ ಅಭ್ಯರ್ಥಿಯೊಂದಿಗೆ ಇವರು ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಬಂಡಾಯ ಅಭ್ಯರ್ಥಿಯ ನ್ನು ಬೆಂಬಲಿಸುವ ವಿಷಯದಲ್ಲಿ ಅಽಕೃತ ಅಭ್ಯರ್ಥಿಯೊಂ ದಿಗೆ ‘ಮುನಿಸಿಕೊಂಡಿರುವ’ ಬಂಡಾಯ ಅಭ್ಯರ್ಥಿಯ ಹಿಂಬಾಲಕರ ಕಥೆಯೇನು ಎನ್ನುವುದು ಬಹುತೇಕರು ಯೋಚಿಸುವುದಿಲ್ಲ. ಅನಿವಾರ್ಯಕ್ಕಾಗಿ ಬಂಡಾಯ ನಾಯಕರೊಂದಿಗೆ ಅಭ್ಯರ್ಥಿಗಳು ಸರಿಹೋದರೂ, ಅವರ ಹಿಂಬಾಲರಕನ್ನು ಸರಿಪಡಿಸಿಕೊಳ್ಳುವ ಗೋಜಿಗೆ ಬಹುತೇಕರು ಹೋಗುವುದಿಲ್ಲ.

ಆದರೆ ಬಂಡಾಯವೇಳುವ ಎಲ್ಲ ಕ್ಷೇತ್ರದಲ್ಲಿಯೂ ಇದೇ ರೀತಿಯ ವಾತಾವರಣವಿರುವುದಿಲ್ಲ. ಉದಾಹರಣೆಗೆ ಕುಮುಟಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವ ಬಹುತೇಕರಿಗೆ ಗೊತ್ತಿಲ್ಲ. ಆದರೆ ಶಾರದಾ ಶೆಟ್ಟಿ ಸ್ಥಳೀಯ ಮಟ್ಟ ದಲ್ಲಿ ಪಕ್ಷ ಸಂಘಟಿಸಿದ್ದಾರೆ. ಪುತ್ತೂರಿನಲ್ಲಿ ಆಶಾ ಅವರಿಗಿಂತ ಬಹುದೊಡ್ಡ ಬಿಜೆಪಿ ಬೆಂಬಲ ಅರುಣ್ ಕುಮಾರ್ ಪುತ್ತಿಲ ಅವರಿತ್ತು. ಆದರೆ ಟಿಕೆಟ್ ಬದಲಾಯಿಸಲಾಗಿದೆ. ಇನ್ನು ಕಳೆದ ಚುನಾವಣೆಯಲ್ಲಿ ೮೦ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಅಖಂಡ ಶ್ರೀನಿವಾಸ್‌ಮೂರ್ತಿ ಬದಲಿಗೆ ಪುಲಕೇಶಿನಗರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಿದೆ. ಈ ಕ್ಷೇತ್ರಗಳಲ್ಲಿ ಬಂಡಾಯ ಸಾಮಾನ್ಯ. ಆದರೆ ಯಾವುದೇ ಸಂಘಟನೆ ಮಾಡದೇ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಬಂಡಾಯವೆದ್ದರೆ ಅದಕ್ಕಿರುವ ಅರ್ಥವೇನು ಎನ್ನುವುದು ಅನೇಕರ ಪ್ರಶ್ನೆ.

ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗಲಿಲ್ಲವೆಂದು ಘಟಾನುಘಟಿ ನಾಯಕರೇ ಒಂದು ಪಕ್ಷದಿಂದ ಮತ್ತೊಂದು ಪಕ್ಷದತ್ತ ವಾಲಿದ್ದಾರೆ. ಇನ್ನು ಬಹುತೇಕ ಕಡೆಯಲ್ಲಿ ಇಡೀ ಪ್ರಹಸನ ಇದೇ ರೀತಿಯಾಗುತ್ತದೆ ಎಂದು ಬಹುತೇಕರು ಊಹಿಸಿದಂತೆ, ಟಿಕೆಟ್ ಘೋಷಣೆ ವೇಳೆ ಎದಿದ್ದ ಬಂಡಾಯವನ್ನು ‘ಎಂದಿನಂತೆ’ ಶಮನ ಮಾಡುವಲ್ಲಿಯೂ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರೂ ಯಶಸ್ವಿ ಯಾಗಿದ್ದಾರೆ. ನಿಜವಾಗಿಯೂ ಸಂಘಟನೆ ಮಾಡಿ ಟಿಕೆಟ್ ತಪ್ಪಿಸಿಕೊಂಡಿರುವವರು, ಪಕ್ಷೇತರ ವಾಗಿಯೋ ಅಥವಾ ಇನ್ನೊಂದು ಪಕ್ಷದಿಂದಲೋ ಸ್ಪರ್ಧಿಸಿದ್ದಾರೆ. ಆದರೆ ನಾಮ್ ಕೆವಸ್ತೆಗೆ ‘ಬಂಡಾಯ’ದ ಬಾವುಟ ಹಾರಿಸಿದ್ದವರು, ಹೆಸರು ಓಡಾಡಿದೆ, ಶಕ್ತಿಯಾನುಸಾರ ‘ಬೇಡಿಕೆ’ ಪೂರೈಕೆಯಾಗುತ್ತಿದ್ದಂತೆ ಬಂಡಾಯವೆನ್ನುವ ನಾಟಕವನ್ನು ಪೂರ್ಣಗೊಳಿಸಿ, ತಮ್ಮ ಉಳಿದ ವ್ಯವಹಾರಗಳತ್ತ ಹೊರಳಿದ್ದಾರೆ !