Sunday, 15th December 2024

ಸ್ವಾಧ್ಯಾಯವೆಂಬ ಜ್ಞಾನಾರ್ಜನೆಯ ಏರುಪಥ

ದಾಸ್ ಕ್ಯಾಪಿಟಲ್

dascapital1205@gmail.com

ಪತಂಜಲಿಗಳ ಯೋಗಸೂತ್ರದ ಕೊನೆಯ ೨ ನಿಯಮಗಳು ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ. ವ್ಯಾಸಭಾಷ್ಯದ ಅನುಸಾರ ಮೋಕ್ಷಶಾಸ್ತ್ರದ ಅಧ್ಯಯನ ಹಾಗೂ ಪ್ರಣವ ಜಪವೇ ಸ್ವಾಧ್ಯಾಯ. ಸ್ವಾಧ್ಯಾ ಯದ ನೇರ ಅರ್ಥ ತನ್ನನ್ನೇ ತಾನು ಅಧ್ಯಯನ ಮಾಡಿಕೊಳ್ಳುವುದು, ಆತ್ಮಾವಲೋಕನ ಮಾಡಿಕೊಳ್ಳುವುದು.

ಮಹರ್ಷಿಗಳ ಅಭಿಮತದಲ್ಲಿ ಮಾನವ ಶರೀರವು ಇಡೀ ಬ್ರಹ್ಮಾಂಡದ ಸಂಚಯವಾ ಗಿದ್ದು ಪಿಂಡಾಂಡ ಎನ್ನಿಸಿಕೊಳ್ಳುತ್ತದೆ. ಹೀಗಾಗಿ ಇಡೀ ಸೃಷ್ಟಿಯ ತತ್ತ್ವಗಳನ್ನು ಮಾನವನು ತನ್ನೊಳಗೇ ಅವಲೋಕಿಸಿಕೊಳ್ಳಬಹುದಾಗಿದೆ. ಮಾನವನಲ್ಲಿ ಭೌತಿಕ, ದೈವಿಕ ಹಾಗೂ ಅಧ್ಯಾತ್ಮಿಕ ಸ್ತರಗಳಿದ್ದು ಕೇವಲ ಭೌತಿಕ ಸ್ತರದಲ್ಲಿಯೇ ಅನೇಕ ವೈದ್ಯ ಕೀಯ ಶಾಸ್ತ್ರ-ಗ್ರಂಥಗಳಿಗೆ ಸಾಕಾಗುವಷ್ಟು ವಿಷಯಗಳಿವೆ.

ಇನ್ನು ದೈವೀ ಕ್ಷೇತ್ರ, ಅಧ್ಯಾ ತ್ಮಿಕ ಕ್ಷೇತ್ರಗಳನ್ನು ಪರಿಗಣಿಸಿದರೆ, ಮಾನವನ ಒಳಪ್ರಪಂಚ ಬಹಳ ವಿಸ್ತಾರವಾಗಿರುತ್ತದೆ. ಈ ಒಳಪ್ರಪಂಚದಲ್ಲಿ ಸಾಗಿ ಮೂಲನಾದ ಭಗವಂತನನ್ನು ತಲುಪುವುದೇ ಯೋಗ. ಈ ಒಳಪ್ರಪಂಚದ ವಿಜ್ಞಾನದ ಪರಿಚಯವು ಯೋಗಸಾಧನೆಗೆ ಬಹಳ ಪೋಷಕವಾಗಿರುತ್ತದೆ. ನಂತರ ಈ ಸ್ವಾಧ್ಯಾಯವನ್ನು ಮಾಡುವುದು ಹೇಗೆ ಎನ್ನುವ ಪ್ರಶ್ನೆ ಬರುತ್ತದೆ. ತನ್ನೊಳಗಿನ ಪರಿಚಯ ಹೇಗೆ ಉಂಟಾಗುತ್ತದೆಂದರೆ, ಮೋಕ್ಷ ಶಾಸ್ತ್ರದಿಂದ (ಉಪನಿಷತ್ತುಗಳು, ಭಗವದ್ಗೀತೆಗಳ ಅನುಸಂಧಾನ ಮತ್ತು ಓಂಕಾರ ಜಪದಿಂದ) ಉಂಟಾಗುತ್ತದೆ ಎನ್ನುತ್ತದೆ ವ್ಯಾಸ ಭಾಷ್ಯ.

ಪರಂಪರೆಯಲ್ಲಿ ಸ್ವಾಧ್ಯಾಯ ಎಂದರೆ, ವೇದದ ಸ್ವ ಶಾಖೆಯನ್ನು ಅಧ್ಯಯನ ಮಾಡುವುದು ಅಥವಾ ಅದರ ಸ್ಥಾನದಲ್ಲಿ ಪುರಾಣ ಗಳನ್ನು ಅಧ್ಯಯನ ಮಾಡುವುದು ಎನ್ನುವ ಅಭಿಪ್ರಾಯಗಳಿದ್ದು ಈ ಅಧ್ಯಯನಗಳಿಂದ ತಮ್ಮನ್ನೇ ತಾವು ಅಧ್ಯಯನ ಮಾಡಿ ಕೊಂಡಂತಾಗುತ್ತದೆ ಎಂಬುದು ಇಲ್ಲಿನ ಸಾರಾಂಶ. ವೇದ, ಉಪನಿಷತ್ತು, ಪುರಾಣ ಮುಂತಾದ ಪ್ರಾಚೀನ ಜ್ಞಾನ ಪರಂಪರೆ ಎಲ್ಲವೂ ಮೌಖಿಕವಾಗಿ ಯಾವುದೇ ಸ್ಕ್ರಿಪ್ಟ್ ಇಲ್ಲದೆ ಸ್ವಾಧ್ಯಾಯದ ಮುಖೇನ ಗುರುವಿಂದ ಶಿಷ್ಯನಿಗೆ ರವಾನೆಯಾಗಿ ಉಳಿದು ಬಂದಿದೆ.

Read E-Paper click here

ಇನ್ನೊಂದು, ಈಶ್ವರ ಪ್ರಣಿಧಾನ. ಈಶ್ವರನಲ್ಲಿ ಸರ್ವಸಮರ್ಪಣ ಬುದ್ಧಿಯನ್ನಿಟ್ಟುಕೊಳ್ಳುವುದು. ಈಶ್ವರ ಪ್ರಣಿಧಾನವು ಸಂಪೂರ್ಣ ಕೂಡಿಬಂದರೆ ಅದುವೇ ಸಮಾಧಿ ಸ್ಥಿತಿ. ಹೀಗಾಗಿ ಭಕ್ತಿಯೋಗದ ಮಾರ್ಗಗಳಲ್ಲಿ ಈಶ್ವರ ಪ್ರಣಿಧಾನವು ಪ್ರಧಾನ
ಅಂಗವಾಗಿದೆ. ಈ ವಿಚಾರ ಇಲ್ಲಿ ಈಗ ಬೇಡ. ಆದರೆ ಈ ಸ್ವಾಧ್ಯಾಯವನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಇದೇ ಸ್ವಾಧ್ಯಾಯದ ಕಲ್ಪನೆಯನ್ನು ವರ್ತಮಾನದ ಸಂದರ್ಭಕ್ಕೆ ‘ಸೆಲ್ ಸ್ಟಡಿ’ ಎಂಬ ಅರ್ಥದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಅಥವಾ
ಅಳವಡಿಸಿಕೊಳ್ಳಬೇಕು ಅಂದರೆ, ಅದರ ಅನುಸಂಧಾನವನ್ನು ಲೌಕಿಕದ ಅಧ್ಯಯನಕ್ಕೆ ಬೇಕಾಗುವಂತೆ ಅಕಾಡೆಮಿಕ್ಕಾದ
ನೆಲೆಯಲ್ಲಿ ವಿದ್ಯಾಥಿಗಳಲ್ಲಿ ಇದರ ಅರಿವನ್ನು ಹುಟ್ಟಿಸಿ ಅವರ ಅಧ್ಯಯನದಲ್ಲಿ ಉಪಯೋಗವಾಗುವಂತೆ ಮಾಡಬೇಕಿದೆ.

ಹಾಗಂತ ಇದು ಒಂದು ದಿನದ ಕಾರ್ಯವಲ್ಲ. ಯಾಕೆಂದರೆ, ಬೋಧನೆ ಮತ್ತು ಕಲಿಕೆಗಳು ಕ್ರಿಯೆಗಳಲ್ಲ, ಪ್ರಕ್ರಿಯೆಗಳು. ಸ್ವಾಧ್ಯಾಯ ಪದದ ನಿಷ್ಪತ್ತಿ ಹೀಗಿದೆ: ಸ್ವ- ತನ್ನ, ಅಧಿ- ಜ್ಞಾನ, ಆಯ- ಪಡೆಯುವುದು. ಜೈನ ದರ್ಶನದಲ್ಲಿ ೧೨ ತಪಗಳನ್ನು ಉಲ್ಲೇಖಿಸಲಾಗಿದೆ. ೬ ಹೊರಗಿನ ತಪಗಳು, ೬ ಒಳಗಿನ ತಪಗಳು. ಈ ಅಂತರಂಗ ತಪದಲ್ಲಿ ಸ್ವಾಧ್ಯಾಯವೂ ಒಂದು.  ಧಾರ್ಮಿಕ ವಾಗಿ ಸ್ವಾಧ್ಯಾಯ ಅಂದರೆ ಆತ್ಮಜ್ಞಾನ ಪಡೆಯುವುದು. ಆತ್ಮಜ್ಞಾನವನ್ನು, ಲೌಕಿಕ ಜ್ಞಾನವನ್ನು, ನಿಶ್ಚಿತ ಪಠ್ಯಜ್ಞಾನವನ್ನು ಸತತವಾಗಿ ಅಧ್ಯಯನ ಮಾಡುವುದೇ ಸ್ವಾಧ್ಯಾಯದ ಮೂಲ ಪರಿಕಲ್ಪನೆ. ಅಧ್ಯಯನ ಸ್ವ ಆಗಿರಬೇಕು.

ಆದ್ದರಿಂದ ಸ್ವಾಧ್ಯಾಯಕ್ಕೆ ಸ್ವತ್ವ ಬೇಕೇ ಬೇಕು. ನಿತ್ಯವೂ ಜ್ಞಾನಗಳಿಕೆಯೇ ಮುಖ್ಯ. ಕ್ರಮಬದ್ಧವಾಗಿ ನಿಷ್ಠಾನುಸಾರ ಅಧ್ಯಯನ ಮಾಡಿದರೆ ಜ್ಞಾನದ ಅರ್ಜನೆ ಸಾಧ್ಯ. ಇದೇ ಜ್ಞಾನವಿಕಾಸದ ಏರುಪಥ. ಇದು ಏರುದಾರಿಯ ಬೌದ್ಧಿಕ ಕೃಷಿಯ ನಿರಂತರ ನಿತ್ಯದ ಉಳುಮೆ. ದಿನಂಪ್ರತಿ ನಿಗದಿಪಡಿಸಿದ ಸಮಯಕ್ಕೆ ಓದುವುದು. ಓದುವ ಸಂದರ್ಭದಲ್ಲಿ ಹುಟ್ಟುವ ಪ್ರಶ್ನೆಗಳು, ಸಮಸ್ಯೆಗಳು, ಗೊಂ
ದಲಗಳನ್ನು ಬಲ್ಲವರಲ್ಲಿ ಕೇಳಿ ಉತ್ತರವನ್ನು, ಪರಿಹಾರವನ್ನು ಪಡೆಯುವುದು. ಇದು ಪೃಚ್ಛನಾ ಸ್ವಾಧ್ಯಾಯ.

ಪೃಚ್ಛನಾ ಸ್ವಾಧ್ಯಾಯದ ಮೂಲಕ ಅರ್ಜಿಸಿದ ಜ್ಞಾನವನ್ನು ಮತ್ತೆಮತ್ತೆ ಚಿಂತಿಸುವುದೇ ಅಂದರೆ,  recall ಮಾಡುವುದೇ
ಅನುಪ್ರೇಕ್ಷಾ ಸ್ವಾಧ್ಯಾಯ. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇರುವ ಏಕೈಕ ಮಾರ್ಗವೇ  recall ಮಾಡಿಕೊಳ್ಳುವುದು. ಮತ್ತೆಮತ್ತೆ  recall ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕಂಠಪಾಠವೂ ಒಂದು ಹಂತ. ಶ್ಲೋಕ, ಪದ್ಯ, ಸೂತ್ರ ಸಿದ್ಧಾಂತಗಳನ್ನು, ವಿಷಯ ಸಾರವನ್ನು, ಹೇಳಿಕೆಗಳನ್ನು, ಉಲ್ಲೇಖಿತ ವ್ಯಾಖ್ಯೆ ವ್ಯಾಖ್ಯಾನಗಳನ್ನು ಕಂಠಪಾಠ ಮಾಡಲೇಬೇಕಾಗುತ್ತದೆ.

ಕಾರಣ ವಿಷಯದ ಸಮಗ್ರ ಗ್ರಹಿಕೆಗೆ ಕಂಠಪಾಠ ಸ್ವಾಧ್ಯಾಯ ಬೇಕೇ ಬೇಕು. ಅಕಡೆಮಿಕ್ ನೆಲೆಯಲ್ಲಿ ಚಿಂತಿಸುವುದಾದರೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಈ ಕಂಠಪಾಠದ ಅಧ್ಯಾಯ ಅನಿವಾರ್ಯವೂ ಅತ್ಯಗತ್ಯವೂ ಆಗಿದೆ. ಬೋಧನೆ ಮತ್ತು ಕಲಿಕೆಯಲ್ಲಿ ಸೃಷ್ಟಿಶೀಲ ಸಾಮರ್ಥ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಈ ಕಂಠಪಾಠ ಸ್ವಾಧ್ಯಾಯ ಯಾಕೆಂದರೆ, ಕಂಠಪಾಠ ಮಾಡ ಬೇಕಾದ್ದನ್ನು ಮಾಡಲೇ ಬೇಕು.

ಆಲೋಚಿಸಿ ನೋಡಿ: ನಮ್ಮ ಹಿರಿಯರನೇಕರಿಗೆ ಗೀತೆ, ಉಪನಿಷತ್ತು, ರಾಮಾಯಣ-ಮಹಾಭಾರತ ಇತಿಹಾಸ ಕಾವ್ಯಗಳ, ಪುರಾಣ ಗಳ, ವಿವಿಧ ಶಾಸಗ್ರಂಥಗಳ, ವಿಜ್ಞಾನದ, ಯೋಗಸೂತ್ರಗಳ, ಕಗ್ಗದ, ಕುಮಾರವ್ಯಾಸ ಭಾರತದ, ಅಮರಕೋಶದ, ಸಾಹಿತ್ಯದ, ಗಣಿತದ ಹೀಗೆ ಅನ್ಯಾನ್ಯ ಅನೇಕ ಸಂಗತಿಗಳ ಬಾಯಿಪಾಠ ಆಗಿರುತ್ತಿದ್ದವು ಮತ್ತು ಅವನ್ನು ಸಾಂದರ್ಭಿಕವಾಗಿ ಹೇಳುತ್ತಿದ್ದರು. ಅವನ್ನು ಬದುಕಿಗೆ ಅಳವಡಿಸಿಕೊಳ್ಳುವ ತಾಕತ್ತು ಅವರಲ್ಲಿತ್ತು.

ತಾವು ಸ್ವಾಧ್ಯಾಯದಿಂದ ಗಳಿಸಿದ ಜ್ಞಾನವನ್ನು ಲೋಕಕ್ಕೆ ರವಾನಿಸುತ್ತಿದ್ದರು. ಒಬ್ಬ ಒಳ್ಳೆಯ ಗುರು ತಾನು ಕಲಿತದ್ದನ್ನು ಸಮರ್ಥ ಶಿಷ್ಯನಿಗೆ ಹೇಳಿಕೊಡುತ್ತಿದ್ದರು. ಈಗಲೂ ನಮ್ಮಲ್ಲಿ ಅನೇಕ ವಿದ್ವಾಂಸರು, ಚಿಂತಕರು, ಸಾಹಿತಿಗಳು, ಲೇಖಕರು, ಶಿಕ್ಷಕ ವರ್ಗ ತಾವು ಕಲಿತಿದ್ದನ್ನು ತಮ್ಮ ಉಪನ್ಯಾಸ, ಸಂವಾದ, ತರ್ಕ, ಚರ್ಚೆ, ಪ್ರವಚನಗಳಲ್ಲಿ ಶ್ರೋತ್ರೀಯರಿಗೆ ಉಣಬಡಿಸುತ್ತಿದ್ದಾರೆ.
ಇದನ್ನೇ ಉಪದೇಶ ಸ್ವಾಧ್ಯಾಯ ಎಂದು ಕರೆಯಲಾಗುತ್ತದೆ.

ಓದುವುದು, ಪ್ರಶ್ನಿಸುವುದು, ಆಲೋಚಿಸುವುದು, ನೆನ ಪಲ್ಲಿಟ್ಟುಕೊಳ್ಳುವುದು ಹಾಗೂ ಸಂವಾದಿಸುವುದು ಈ ೫ ಪ್ರಕ್ರಿಯೆಗಳು ಸ್ವಾಧ್ಯಾಯದ ಮೂಲಸತ್ತ್ವಗಳು. ಇದನ್ನು ತಪಸ್ಸಿನಂತೆ ಆಚರಿಸಿದರೆ ಜ್ಞಾನಾರ್ಜನೆಯಲ್ಲಿ ಪೂರ್ಣ ಯಶಸ್ಸನ್ನು ಗಳಿಸಿಕೊಳ್ಳ ಬಹುದು. ನಿರಂತರ ಅಧ್ಯಯನದಲ್ಲಿ ತೊಡಗಿ ಕೊಂಡವ ಮಾತ್ರ ಉತ್ತಮ ಅಧ್ಯಾಪಕನಾಗಲು ಸಾಧ್ಯ. ಓದಿನಲ್ಲಿ ಪ್ರಬುದ್ಧತೆ ಬಂದಂತೆ ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು, ಮತ್ತಷ್ಟು ವಿಸ್ತರಿಸಿಕೊಳ್ಳಬಹುದು.

ಜ್ಞಾನಾ ರ್ಜನೆಯ ಏರುದಾರಿಯಲ್ಲಿ ಇದೊಂದು ನಿರಂತರ ಪ್ರಕ್ರಿಯೆ. ಜ್ಞಾನದ ಬೆಳಕನ್ನು ಕಾಣುವ ಅನನ್ಯ ಪರಿಯಿದು. ಮೇಲಾಗಿ ಇದು ಪ್ರತ್ಯುತ್ಥಾನದ ಮಾರ್ಗವೂ ಅಹುದು. ಜ್ಞಾನಾರ್ಜನೆಯ ಪಥದಲ್ಲಿ ಅಧ್ಯಯನವೆಂಬುದು ಅವ್ಯಾಹತವಾದ ಶ್ರದ್ಧೆಯನ್ನು ಬಯಸುತ್ತದೆ. ಪ್ರತಿ ಯಶಸ್ಸು ಅಥವಾ ಗೆಲುವು ಅಪಾರ ಶ್ರಮವನ್ನು ಕೇಳುತ್ತದೆ. ಪಾರಮಾರ್ಥಿಕ ಜ್ಞಾನ ಪಡೆಯಲು ಈ ಸ್ವಾಧ್ಯಾಯ ಎಷ್ಟು ಮಹತ್ವವೋ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಗತಿ ಪಡೆಯಲು ಅಷ್ಟೇ ಮಹತ್ವವಾದುದು.

ತರಗತಿ ಬೋಧನೆಗೂ ಇದು ಅನಿವಾರ್ಯವಾದ ಸಂಗತಿ. ಸ್ವಾಧ್ಯಾಯವಿಲ್ಲದೆ ಬೋಧನೆ ಹೇಗೆ ಸಾಧ್ಯ? ಇಂಥ ಸ್ವಾಧ್ಯಾಯದ ಆಕೃತಿಯನ್ನು ಈಗಿನ ತಲೆಮಾರಿಗೆ ರೂಢಿಸುವುದು ಅತಿ ಅಗತ್ಯವಾದುದಾಗಿದೆ. ಇದಕ್ಕೆ ಪೂರಕವಾಗಿ ಪುಸ್ತಕ ಪ್ರೀತಿಯನ್ನು ಬಾಲ್ಯದಿಂದಲೇ ರೂಢಿಗೊಳಿಸಬೇಕಿದೆ. ಪುಸ್ತಕ ಪ್ರೀತಿ ಬೆಳೆಯುತ್ತ ಹೋದಂತೆ ಪುಸ್ತಕ ಸಂಸ್ಕೃತಿ ಬೆಳೆಯುತ್ತದೆ. ಸಾಹಿತ್ಯದ ಅಥವಾ ಇನ್ಯಾವುದೇ ಬಗೆಯ ಪುಸ್ತಕವನ್ನು ಮಕ್ಕಳ ಬೌದ್ಧಿಕ ಮಟ್ಟಕ್ಕನುಸಾರವಾಗಿ ವಾರಕ್ಕೊಂದು ಓದುವಂತೆ ಮಾಡುವ ಅಭ್ಯಾಸ ಮನೆಯಲ್ಲೂ ಶಾಲೆಯಲ್ಲೂ ಆಗಬೇಕಿದೆ. ಮುಖ್ಯವಾಗಿ, ಶಾಲಾ ಗ್ರಂಥಾಲಯಗಳು ಇಂಥ ಮಹತ್ತ್ವದ ಕೈಂಕರ್ಯಕ್ಕೆ ತೊಡಗಬೇಕಿದೆ.

ತಾವು ಓದಿದ ಪುಸ್ತಕವನ್ನು ತನ್ನ ತಗರತಿಯಲ್ಲಿ ಪರಿಚಯಿಸುವ, ಅದರ ಬಗ್ಗೆ ತನ್ನ ಅನಿಸಿಕೆ-ಅಭಿಪ್ರಾಯ ಬರೆಯುವ ಹವ್ಯಾಸ ಬೆಳೆಸಬೇಕಿದೆ. ಆಯ್ದುಕೊಂಡ ಪುಸ್ತಕವನ್ನು ದಿನಕ್ಕೆ ಇಂತಿಷ್ಟು ಪುಟಗಳನ್ನು ನಿಯತವಾಗಿ ಓದುವ ಅಭ್ಯಾಸ ಬೆಳೆಯುತ್ತ ಹೋದಹಾಗೆ ಸ್ವಾಧ್ಯಾಯ ಎಂಬುದು ನಿತ್ಯದ ಹವ್ಯಾಸವಾಗುತ್ತದೆ. ಹವ್ಯಾಸಕ್ಕಿಂತಲೂ ಇದು ಪ್ರತಿ ವಿದ್ಯಾರ್ಥಿಗೂ ಅಭ್ಯಾಸ ವಾಗುವಂತೆ ಶಾಲೆಗಳು ಶೈಕ್ಷಣಿಕ ಯೋಜನೆ ಗಳಲ್ಲಿ ಅಳವಡಿಸಿಕೊಳ್ಳಬೇಕಿದೆ. ಇಂಥ ಮೌಲ್ಯವನ್ನು ಪ್ರಾಥಮಿಕ ಹಂತದಲ್ಲೇ ಒಳಗೊಳ್ಳುವಂಥ ಶಿಕ್ಷಣನೀತಿ ರಚನೆಯಾಗಬೇಕಿದೆ.

ಆ ಬಾಲವೃದ್ಧರಾದಿಯಾಗಿ ಮೊಬೈಲ್ ಹುಚ್ಚಿನ ಸರಿ ಹೊತ್ತಿನಲ್ಲಿ ಈ ಸ್ವಾಧ್ಯಾಯವನ್ನು ಪ್ರಾಕ್ಟೀಸ್ ಮಾಡಿಸಬೇಕಾದ ಅಗತ್ಯ ವಂತೂ ಇದ್ದೇ ಇದೆ. ಅಪ್ರಸ್ತುತವೆನಿಸುವುದಿಲ್ಲ ಅಂದು ಕೊಂಡು ಒಂದು ಮಾತನ್ನು ಇಲ್ಲಿ ಹೇಳಬೇಕು: ಇತ್ತೀಚೆಗೆ ಆ ಜಯಂತಿ ಈ ಜಯಂತಿ ಅಂತ ಶಾಲೆ-ಕಾಲೇಜುಗಳಿಗೆ ಈ ಜಯಂತಿಗಳನ್ನು ಆಚರಿಸುವ ನಿರ್ದೇಶನ ಕೊಟ್ಟು ಸಾರ್ವಜನಿಕ ರಜೆ ಎಂದು ಘೋಷಿಸುವುದು ರದ್ದಾಗಬೇಕಿದೆ. ಇದರ ಬದಲು ಆಯಾ ಜಯಂತಿಯ ಮಹತ್ವ ತಿಳಿಸುವುದು ಮಕ್ಕಳಿಗೆ ಮುಖ್ಯವಾಗಬೇಕು.

ನಂತರದಲ್ಲಿ ತರಗತಿ ನಡೆಸುವುದು, ರಾಷ್ಟೀಯ ಹಬ್ಬಗಳನ್ನು ಆಚರಿಸಿ ಅರ್ಧದಿನ ರಜೆ ಕೊಡುವುದಕ್ಕೆ ಅರ್ಥವಾದರೂ ಇದೆ. ಉಳಿದಂತೆ ಧಾರ್ಮಿಕ ಹಬ್ಬಗಳನ್ನು ಆಚರಿಸುವ ಹಿನ್ನೆಲೆಯಲ್ಲಿ ರಜೆ ನೀಡುವುದಕ್ಕೆ ಆಚರಣೆಯ ಅರ್ಥವಿದೆ. ರಜೆಗಳನ್ನು ನೀಡುವ ಬದಲು ಸ್ವಾಧ್ಯಾಯದಂಥ ಪರಿಕಲ್ಪನೆಯನ್ನು ವಿಶ್ಲೇಷಿಸಿ ಅದನ್ನು ನಿತ್ಯದ ಅಧ್ಯಯನದಲ್ಲಿ ಅವರೇ ಬಳಸಿಕೊಳ್ಳು ವಂಥ ಜಾಣ್ಮೆಯನ್ನು ಬೆಳೆಸಿಕೊಳ್ಳುವಂತೆ ರಜೆಗಳನ್ನು ಬಳಸಿಕೊಳ್ಳಬಹುದು.

ಇದೊಂದೇ ಅಲ್ಲ, ಇನ್ನು ಹಲವು ಬಗೆಯ ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬಹುದು.

ಕೊನೆಯ ಮಾತು: ತೈತ್ತರೀಯ ಉಪನಿಷತ್ತಿನ ಆಚಾರ್ಯೋ  ಪದೇಶದಲ್ಲಿ ಆಚಾರ್ಯನು ಶಿಷ್ಯನಿಗೆ ಮಾಡುವ ಉಪದೇಶದಲ್ಲಿ ಬರುವ ಸ್ವಾಧ್ಯಾಯವೆಂಬುದು ತಪದಂತೆ. ಇದೊಂದು ಅಮೃತವಾಕ್. ಇದನ್ನು ವಿದ್ಯಾರ್ಥಿಗಳು ತಮ್ಮ ಅಧ್ಯಯನ ದಲ್ಲಿ ಅಳವಡಿಸಿಕೊಂಡರೆ ನಿಜವಾದ ತಪಸ್ವಿಯಾಗಿ ಯಶಸ್ಸನ್ನು ಪಡೆಯಲು ಸಾಧ್ಯ. ತರಗತಿಗಳಲ್ಲಿ ಇದು ಸಾಧ್ಯವಾಗಬೇಕಿದೆ.
‘ಸ್ವಾಧ್ಯಾಯತ್ ನ ಪ್ರಮದಿತವ್ಯಂ’- ಸ್ವಾಧ್ಯಾಯವನ್ನು ಬಿಡಬಾರದು. ಸ್ವಾಧ್ಯಾಯವೆಂಬುದು ಜ್ಞಾನಾರ್ಜನೆಯ ಸ್ವಾಏರುಪಥ!