Thursday, 12th December 2024

ಸಂಬಂಧಗಳ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದೆವೆಯೇ ?

ಅಭಿಪ್ರಾಯ

ಗಣೇಶ್ ಭಟ್, ವಾರಣಾಸಿ

ಇತ್ತೀಚೆಗೆಗೆ ಪ್ರಸಿದ್ಧ ಫಿನ್‌ಟೆಕ್ ಸಂಸ್ಥೆಯಾದ ಝರೋದಾದ ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್ ಅವರು ತಾನು ಮಕ್ಕಳನ್ನು ಹೊಂದಲು ಇಷ್ಟಪಡುವುದಿಲ್ಲ ಎಂದು ಆಡಿದ ಮಾತುಗಳು ಸಾರ್ವಜನಿಕರಲ್ಲಿ ಬಹಳ ಚರ್ಚೆಗಳನ್ನು ಹುಟ್ಟುಹಾಕಿದೆ. ಮಕ್ಕಳಿಗೆ ಜನ್ಮ ನೀಡಿದರೆ ನಮ್ಮ ಜೀವನದ ಅಮೂಲ್ಯ ೧೮ ವರ್ಷಗಳು ಅವರ ಪಾಲನೆ ಹಾಗೂ ಪೋಷಣೆಗಳ ವ್ಯರ್ಥವಾಗುತ್ತವೆ. ದೊಡ್ಡವರಾದ ಮೇಲೆ ಈ ಮಕ್ಕಳು ಹೆತ್ತವರನ್ನು ನೋಡಿಕೊಳ್ಳು ತ್ತಾರೆಂದೇನೂ ಇಲ್ಲ, ಮಕ್ಕಳು ನಮ್ಮ ವಂಶವನ್ನು ಬೆಳೆಸುತ್ತಾರೆ ಎಂಬ ಚಿಂತನೆ ತನಗಿಲ್ಲ ಎಂದು ನಿಖಿಲ್ ಕಾಮತ್ ಅವರು ಹೇಳಿದ್ದರು.

ಸ್ಟಾಕ್ ಬ್ರೋಕರೇಜ್ ಮಾಡುವ ಝರೋದಾದ ನಿಖಿಲ್ ಕಾಮತ್ ಅವರ ಸಂಪತ್ತಿನ ಮೌಲ್ಯ ೨೮,೦೦೦ ಕೋಟಿ ರುಪಾಯಿಗಳನ್ನು ದಾಟುತ್ತದೆ. ನಿಖಿಲ್ ಕಾಮತ್ ಒಬ್ಬರೇ ಅಲ್ಲ, ಮದುವೆ ಮತ್ತು ಮಕ್ಕಳು ನಮ್ಮ ವೈಯಕ್ತಿಕ ಆಯ್ಕೆ ಎಂದು ಪ್ರತಿಪಾದಿಸಿ ಮಕ್ಕಳನ್ನು ಹಡೆಯದಿರಲು ನಿಶ್ಚಯಿಸಿರುವ ಅಸಂಖ್ಯ ಯುವ ದಂಪತಿಗಳು ನಮ್ಮ ಸಮಾಜದಲ್ಲಿದ್ದಾರೆ. ವೈದ್ಯಕೀಯ ಅಥವಾ ಬೇರೆಬೇರೆ ಕಾರ ಣಗಳಿಂದ ಮಕ್ಕಳಾಗುತ್ತಿಲ್ಲ ಎಂದು ಕೊರಗುತ್ತಿರುವ ಲಕ್ಷಾಂತರ ದಂಪತಿಗಳು ನಮ್ಮ ಕಣ್ಣ ಮುಂದೆ ಇರುವಾಗ ಮಕ್ಕಳೇ ಬೇಡ ಎಂದು ನಿರ್ಧರಿಸಿರುವ ಜೋಡಿಗಳನ್ನು ಕಾಣುವಾಗ ಬಹಳ ವಿಚಿತ್ರವೆನಿಸುತ್ತದೆ.

ಮಕ್ಕಳನ್ನು ಹಡೆಯುವುದಕ್ಕಿಂತ ತಮ್ಮ ವೃತ್ತಿಜೀವನ , ವಹಿವಾಟುಗಳೇ ಮುಖ್ಯ ಎಂದು ಭಾವಿಸುವುದು ಸಾಮಾಜಿಕವಾಗಿ ಅಷ್ಟೇನೂ ಉತ್ತಮ ಬೆಳವಣಿಗೆಯಲ್ಲ. ತಾಯ್ತನ ಎನ್ನುವುದು ಜೀವ ಸಂಕುಲದ ಮುಂದುವರಿಕೆಯ ಪ್ರಧಾನ ಕೊಂಡಿಯಾಗಿದೆ. ಇದು ಪ್ರಕೃತಿ ಸಹಜವಾದ ಪ್ರಕ್ರಿಯೆ.
ನಮ್ಮ ಹೆತ್ತವರು ನಮ್ಮನ್ನು ಹೆರುವಾಗ ನಾಳೆ ಈ ಮಕ್ಕಳು ತಮ್ಮ ಪ್ರಯೋಜನಕ್ಕೆ ಬರಲಿ ಎಂದ ಲೆಕ್ಕ ಹಾಕಿರಲಿಕ್ಕಿಲ್ಲ. ಈ ಪ್ರಪಂಚದಲ್ಲಿ ಮಕ್ಕಳಾಗದೇ
ಕೊರಗುವ ಎಷ್ಟೋ ದಂಪತಿಗಳು ಇದ್ದಾರೆ. ಮಗುವೊಂದು ವೈಕಲ್ಯತೆಯೊಂದಿಗೆ ಜನಿಸಿದರೂ ಆ ಮಗುವಿಗೆ ವಿಶೇಷ ಕಾಳಜಿಯನ್ನು ಬಹುತೇಕ
ಹೆತ್ತವರು ತೋರುತ್ತಾರೆ. ಹಕ್ಕಿಯೊಂದು ಮೊಟ್ಟೆಯಿಟ್ಟು, ಕಾವುಕೊಟ್ಟು, ಮರಿಮಾಡಿ, ಆಹಾರ ತಿನ್ನಿಸಿ, ಬೆಳೆಸುವಾಗಲೂ ಯಾವುದೇ ನಿರೀಕ್ಷೆಯನ್ನಿ
ಟ್ಟುಕೊಂಡಿರುವುದಿಲ್ಲ.

ಮರವೊಂದು ಬೀಜವನ್ನು ಸೃಷ್ಟಿಸುವಾಗ ನಾಳೆ ಈ ಬೀಜದಲ್ಲಿ ಮೊಳಕೆಯೊಡೆದ ಸಸಿ ಮರವಾಗಿ ತನ್ನನ್ನು ಸಲಹಬೇಕು ಎಂದು ಭಾವಿಸುವುದಿಲ್ಲ. ಕೆಲವು ಮನುಷ್ಯರ ಹೊರತಾಗಿ ಜಗತ್ತಿನ ಯಾವುದೇ ಜೀವಿಯು ಸಂತಾನೋತ್ಪತ್ತಿ ಹಾಗೂ ಮಕ್ಕಳ ಪೋಷಣೆಯನ್ನು ಒಂದು ವ್ಯವಹಾರವನ್ನಾಗಿ ಭಾವಿಸಿಲ್ಲ. ಇಂದು ವೈವಾಹಿಕ ಜೀವನವೂ ಒಂದು ವ್ಯವಹಾರವಾಗಿ ಬದಲಾಗುತ್ತಿದೆ. ಇದರ ಪರಿಣಾಮವಾಗಿ ಮುರಿದು ಬೀಳುವ ವೈವಾಹಿಕ ಸಂಬಧಗಳ ಸಂಖ್ಯೆ ಯೂ ವಿಪರೀತವಾಗಿ ಏರುತ್ತಿದೆ. ಟಿವಿ ರಿಯಾಲಿಟೀ ಶೋ ಬಿಗ್ ಬಾಸ್ ಮೂಲಕ ಸೆಲೆಬ್ರಿಟಿಗಳಾದ ಜೋಡಿಯೊಂದು ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಮುರಿದುಕೊಳ್ಳುತ್ತಿರುವ ವಿಚಾರವಿಂದು ಮುಖ್ಯವಾಹಿನಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅತಿಯಾಗಿ ಹರಿದಾಡುತ್ತಿದೆ.

ಇವರ ಬದುಕಿನ ವಿಚಾರಗಳ ಬಗ್ಗೆ ನಾನಾ ಬಣ್ಣ ಹಾಗೂ ಕಥೆಗಳನ್ನು ಕಟ್ಟಿ ಪ್ರಸಾರ ಮಾಡಲಾಗುತ್ತದೆ. ಈ ನಡುವೆ ಕನ್ನಡ ಸಿನಿಮಾ ಲೋಕದ ಪ್ರತಿಷ್ಠಿತ
ಕುಟುಂಬದ ಕುಡಿಯೊಂದರ ಮುರಿದುಬೀಳುತ್ತಿರುವ ವೈವಾಹಿಕ ಜೀವನದ ಸುದ್ದಿ ಅಲ್ಲಿಲ್ಲಿ ಕೇಳತೊಡಗಿದೆ. ಕೆಲವು ದಿವಸಗಳ ಹಿಂದೆ ಕ್ರಿಕೆಟ್ ತಾರೆ
ಹಾರ್ದಿಕ್ ಪಾಂಡ್ಯ ಹಾಗೂ ಆತನ ಪತ್ನಿ ನಟಾಶಾ ಸ್ಟಾಂಕೋವಿಕ್ ಮದುವೆ ಮುರಿದು ಬೀಳಲಿದೆ ಎನ್ನುವ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿತ್ತು. ಐಪಿಎಲ್ ಸರಣಿಯ ಸಂದರ್ಭದಲ್ಲಿ ಈ ಸುದ್ದಿ ಹೆಚ್ಚು ಚಾಲ್ತಿಯಲ್ಲಿತ್ತು. ನಂತರದ ದಿವಸಗಳಲ್ಲಿ ಈ ಸುದ್ದಿ ಬಿದ್ದು ಹೋಯಿತು.

ಅವರಿಬ್ಬರೂ ಪುನಃ ಒಂದಾಗಿzರೆ ಎಂಬ ಸಮಾಧಾನಕರವಾದ ಸುದ್ದಿ ಬಂದಿದೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ವಿಚ್ಛೇದನ ನಡೆಯಲಿದೆ ಎನ್ನುವ ಸುದ್ದಿ ಅವರು ಮದುವೆಯಾದ ದಿನದಿಂದ ಇಂದಿನವರೆಗೂ ಮಾಧ್ಯಮಗಳಲ್ಲಿ ವರ್ಷಕ್ಕೆ ಎರಡು ಬಾರಿಯಾದರೂ ಬರುತ್ತಲೇ ಇರುತ್ತದೆ. ಕೆಲವು ಮಾಧ್ಯಮಗಳು ಸುದ್ದಿಗಾಗಿ ಸೆಲೆಬ್ರಿಟಿಗಳ ವೈವಾಹಿಕ ಜೀವನವು ಯಾವಾಗ ಮುರಿದು ಬೀಳುತ್ತದೆ ಎಂದು ಕಾಯುತ್ತಲೇ ಇರುತ್ತವೆ.
ಮುರಿದುಬೀಳುತ್ತಿರುವ ಮದುವೆಗಳು ಇಂದಿನ ದಿನದಲ್ಲಿ ಹೆಚ್ಚುತ್ತಿರುವ ಅಪನಂಬಿಕೆ ಹಾಗೂ ಅವಿಶ್ವಾಸದ ಪ್ರತೀಕವಾಗಿದೆ. ಕೆಲವು ದಿನಗಳ ಹಿಂದೆ
ನೊಂದ ಪುರುಷರ ಪರವಾಗಿ ಕೆಲಸ ಮಾಡುವ ಬರ್ಖಾ ಟ್ರೆಹಾನ್ ಹೆಸರಿನ ಸಾಮಾಜಿಕ ಕಾರ್ಯಕರ್ತೆ ಎP (ಈ ಮೊದಲು ಟ್ವಿಟ್ಟರ್ ಆಗಿತ್ತು) ಮೂಲಕ ಇತ್ತೀಚೆಗಿನ ಭಾರತದಕೆ ಡೈವೋರ್ಸ್ ಗಳು ಹೆಚ್ಚುತ್ತಿವೆ? ವಿಚ್ಛೇದನಕ್ಕೆ ಬಹುದೊಡ್ಡ ಕಾರಣವೇನು? ಎಂದು ಪ್ರಶ್ನಿಸಿದ್ದರು.

ಇದಕ್ಕೆ ಸಾವಿರಾರು ಮಂದಿ ಉತ್ತರಿಸಿದ್ದಾರೆ. ಅತೀ ಹೆಚ್ಚಿನ ನಿರೀಕ್ಷೆಗಳು ಮದುವೆ ಕುಸಿಯಲು ಕಾರಣ ಎಂದು ಕೆಲವರು ಹೇಳಿದ್ದಾರೆ. ಇದು ಸತ್ಯವೂ ಹೌದು. ಮದುವೆಯಾಗುವಾಗ ಯುವ ದಂಪತಿಗಳು ಸಾವಿರಾರು ಕನಸುಗಳನ್ನು ಹಾಗೂ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಆದರೆ ದಿನಗಳೆದಂತೆ ತಮ್ಮ ಎಲ್ಲಾ ನಿರೀಕ್ಷೆಗಳೂ ಕಾರ್ಯ ಸಾಧುವಲ್ಲ ಎಂದು ಅರಿವಾದೊಡನೆ ನಿಧಾನವಾಗಿ ಭ್ರಮನಿರಸನಕ್ಕೊಳಗಾಗುತ್ತಾರೆ. ನಿರೀಕ್ಷೆಗಳು ಮತ್ತು ವಾಸ್ತವಗಳ ನಡುವಿನ ಅಂತರ ಹೆಚ್ಚುತ್ತಿದ್ದಂತೆ ಪರಸ್ಪರ ಅಸಹನೆ ಹಾಗೂ ಕೋಪಗಳು ಹೆಚ್ಚಾಗುತ್ತದೆ. ಅಂತಿಮವಾಗಿ ಇದು ಡೈವೋರ್ಸಿನೊಂದಿಗೆ ಪರ್ಯವಸಾನಗೊಳ್ಳುತ್ತದೆ.

ವಿಶ್ವಾಸದ ಕೊರತೆ, ಸಂವಹನದ ಅಂತರ, ಉದ್ಯೋಗದ ಒತ್ತಡ, ಸಹನೆಯ ಕೊರತೆ, ಸ್ವಕೇಂದ್ರಿತ ಮನಸ್ಥಿತಿ, ಹೊಂದಾಣಿಕೆಯ ಸಮಸ್ಯೆ, ವಿವಾಹೇತರ
ಸಂಬಂಧಗಳು, ಹೆತ್ತವರ ಅನಗತ್ಯ ಹಸ್ತಕ್ಷೇಪ, ಅನುಮಾನ, ಔದ್ಯೋಗಿಕ ಜೀವನಕ್ಕೆ ಕೊಡುವ ಪ್ರಾಮುಖ್ಯತೆ, ಹಣದ ಹಿಂದೆ ಬೀಳುವುದು ಸೇರಿದಂತೆ ಮೊದಲಾದ ವಿಚಾರಗಳು ಇಂದಿನ ಯುವಜನತೆಯ ವೈವಾಹಿಕ ಜೀವನದ ವೈಫಲ್ಯತೆಗೆ ಕಾರಣವಾಗಿವೆ. ಇತರರಿಗೆ ಅತಿ ಕ್ಷುಲ್ಲಕ ಎನಿಸುವ ವಿಚಾರಗಳೇ ದಂಪತಿಗಳ ನಡುವೆ ಬೃಹತ್ತಾದ ಸಮಸ್ಯೆಗಳಾಗಿ ಕಾಡುತ್ತವೆ. ಪತಿ ಪತ್ನಿಯರ ಆರ್ಥಿಕ ಸ್ವಾತಂತ್ರ್ಯವೂ ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.

ಹಿಂದಿನ ಕಾಲದಲ್ಲಿ ಗಂಡ ಎಷ್ಟೇ ಹಿಂಸೆ ಕೊಟ್ಟರೂ ಆತನನ್ನೇ ಆರ್ಥಿಕವಾಗಿ ಅವಲಂಬಿಸಿರಬೇಕಾದ ಸ್ಥಿತಿ ಇದ್ದ ಕಾರಣ ಗಂಡ ನೊಂದಿಗೆ ಉಳಿದು ಕೊಳ್ಳಬೇಕಾದ ಸ್ಥಿತಿ ಹೆಂಡತಿಯರಿಗೆ ಇತ್ತು. ಇಂದು ಹೆಂಡತಿಯೂ ಆರ್ಥಿಕವಾಗಿ ಸಬಲಳಾಗುತ್ತಿರುವ ಕಾರಣ ಪತಿಯ ದೌರ್ಜನ್ಯಗಳನ್ನು ಪ್ರತಿಭಟಿಸಿ ವೈವಾಹಿಕ ಜೀವನ ದಿಂದ ಹೊರಬರುವ ಅವಕಾಶ ಪತ್ನಿಗೆ ಇದೆ. ಇಂದಿನ ವಿವಾಹ ವಿಚ್ಚೇದನಗಳಲ್ಲಿ ಗಂಡಂದಿರ ಪಾಲು ಎಷ್ಟಿದೆಯೋ ಅಷ್ಟೇ ಪಾಲು ಹೆಂಡತಿ ಯರದೂ ಇದೆ. ಭಾರತದಲ್ಲಿಂದು ಆರೇಂಜ್ಡ್ ಮ್ಯಾರೇಜುಗಳಿಂಗಿಂತ ಲವ್ ಮ್ಯಾರೇಜ್‌ಗಳೇ ಹೆಚ್ಚಿನ ಪ್ರಮಾಣದಲ್ಲಿ ಮುರಿದು ಬೀಳುತ್ತಿರುವುದು
ಆಶ್ಚರ್ಯದ ಸಂಗತಿಯಾಗಿದೆ. ಹೆಚ್ಚಿನ ವಿಚ್ಛೇದನಗಳು ಪ್ರೇಮ ವಿವಾಹಗಳಿಂದ ಮಾತ್ರ ಉದ್ಭವಿಸುತ್ತವೆ ಎಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶ ರಾದ ಬಿ ಆರ್ ಗವಾಯಿ ಅವರು ಕಳೆದ ವರ್ಷ ಹೇಳಿಕೆ ನೀಡಿದ್ದರು.

ಮಕ್ಕಳನ್ನು ಬೆಳೆಸುವ ವಿಧಾನದ ಒಂದಿಷ್ಟು ತಪ್ಪುಗಳಾಗುತ್ತಿವೆ. ಹೆತ್ತವರು ತಮ್ಮ ಮಕ್ಕಳನ್ನು ಪ್ರೀತಿಸಬೇಕು ಎನ್ನುವುದು ಸರಿ, ಆದರೆ ಮಕ್ಕಳನ್ನು
ವಿಪರೀತವಾಗಿ ಹೊಗಳುವುದು , ಅತಿಯಾಗಿ ಮುದ್ದು ಮಾಡುವುದು ಅಥವಾ ವಿಪರೀತವಾಗಿ ಸಮರ್ಥಿಸುವುದು ಮಕ್ಕಳಲ್ಲಿ ವರ್ತನೆಯ ಸಮಸ್ಯೆ
ಯನ್ನುಂಟು ಮಾಡುತ್ತದೆ. ಬಹಳಷ್ಟು ಹೆತ್ತವರು ತಮ್ಮ ಮಗುವಿನ ಸಿಟ್ಟಿನ ಸ್ವಭಾವವನ್ನು ವೈಭವೀಕರಿಸುವುದನ್ನು ನಾನು ಗಮನಿಸಿದ್ದೇನೆ. ಮಕ್ಕಳ ಕೋಪತಾಪವನ್ನು ಹೆತ್ತವರು ಸಮರ್ಥಿಸಿದರೆ ಮುಂದೆ ಆ ಮಕ್ಕಳು ದೊಡ್ಡವರಾದ ಮೇಲೂ ಸಿಟ್ಟನ ಸ್ವಭಾವವನ್ನು ಮುಂದುವರಿಸುವುದರಲ್ಲಿ ಸಂಶಯವಿಲ್ಲ.

ದುಡುಕಿನ ಸ್ವಭಾವವು ಮುಂದುವರಿದರೆ ಅಂತವರು ಕೋಪದ ಭರದಲ್ಲಿ ಅಪರಾಧಗಳನ್ನು ಎಸಗುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳು ಮಾಡುವ
ತಪ್ಪುಗಳನ್ನೂ ಹೆತ್ತವರು ಸಮರ್ಥಿಸುತ್ತಾ ಹೋದರೆ ಮಕ್ಕಳು ಮುಂದೆ ಒರಟರು, ಹಠವಾದಿಗಳು ಹಾಗೂ ಅಹಂಕಾರಿಗಳಾಗಿ ಬೆಳೆಯುವ ಅಪಾಯ
ಇದೆ. ಹೆತ್ತವರು ತಮ್ಮ ಮಕ್ಕಳು ತಮ್ಮ ಬದುಕಿನಲ್ಲಿ ಯಾವ ಒತ್ತಡವನ್ನೂ ಅನುಭವಿಸದಂತೆ ನೋಡಿಕೊಳ್ಳುತ್ತಿರುವುದರ ಪರಿಣಾಮವಾಗಿ ಈ ಮಕ್ಕಳು
ಜೀವನದಲ್ಲಿ ಸಣ್ಣ ಆಘಾತವನ್ನೂ ಎದುರಿಸುವ ಸಾಮರ್ಥ್ಯವನ್ನು ಗಳಿಸಿಕೊಳ್ಳುವುದಿಲ್ಲ. ಮೊಬೈಲ್ ನೋಡುವುದನ್ನು ಕಡಿಮೆ ಮಾಡಲು ಹೇಳಿದರೆ,
ಓದಲು ಹೇಳಿದರೆ, ಬುದ್ಧಿವಾದವನ್ನು ಹೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳ ಬಗ್ಗೆ ಮಾಧ್ಯಮ ವರದಿಗಳನ್ನು ನೋಡುತ್ತಿರುತ್ತೇವೆ.

ಪ್ರೇಮ ವೈಫಲ್ಯಕ್ಕೆ ಜೀವವನ್ನು ಕಳೆದುಕೊಳ್ಳುವ ಯುವಜನರಿಗೆ ಲೆಕ್ಕವೇ ಇಲ್ಲ. ೨೦೨೨ ರಲ್ಲಿ ಭಾರತದಲ್ಲಿ ೧.೭ ಲಕ್ಷ ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆಂದು ಅಂಕಿ ಅಂಶಗಳು ಹೇಳುತ್ತವೆ. ಹಸುಳೆಗಳ ತಾಯಂದಿರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಹೆಂಡತಿ ಮಕ್ಕಳನ್ನು ಅರ್ಧದಲ್ಲಿ ಕೈಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಗಂಡಂದಿರು ಇದ್ದಾರೆ, ತನ್ನನ್ನು ಕೊಂದುಕೊಂಡು ತಂದೆತಾಯಂದಿರಿಗೆ ನಿರಂತರ ಶೋಕವನ್ನು ಕೊಡುವ ಮಕ್ಕಳಿದ್ದಾರೆ.

ಯಾರಿಗೋ ಬುದ್ಧಿಕಲಿಸಲೆಂದು ಹಠಕ್ಕೆ ಬಿದ್ದು ಆತ್ಮಹತ್ಯೆ  ಮಾಡಿಕೊಳ್ಳುವವರಿಗೂ ಕೊರರತೆಯಿಲ್ಲ. ತನ್ನ ಸಾವಿನಿಂದ ಒಂದಿಷ್ಟು ಜನರಿಗೆ ನೋವಾಗ ಲಿದೆ, ತನ್ನ ಅವಲಂಬಿತರಿಗೆ ಎಷ್ಟು ಕಷ್ಟವಾಗಲಿದೆ ಎಂಬುದನ್ನು ಇವರು ಆಲೋಚಿಸುವುದೇ ಇಲ್ಲ. ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮಗಳು, ಅನಾಥಾಶ್ರಮಗಳು ಹಾಗೂ ನಿರ್ಗತಿಕರ ಪುನರ್ವಸತಿ ಸಂಸ್ಥೆಗಳು ಸಮಾಜದಲ್ಲಿ ಮಾನವ ಸಂಬಂಧಗಳು ದುರ್ಬಲವಾಗುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಮಕ್ಕಳಿಗೆ ಹೆತ್ತವರೇ ಭಾರವಾಗುತ್ತಿದ್ದಾರೆ.

ವೃತ್ತಿಜೀವನದ ಜಂಜಾಟದಲ್ಲಿ ಮಕ್ಕಳಿಗೆ ವೃದ್ಧ ಹೆತ್ತವರನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವ ಮಕ್ಕಳಿಗೆ
ತಮ್ಮ ಹೆತ್ತವರನ್ನು ಅಲ್ಲಿಗೆ ಕರೆದೊಯ್ಯಲು ಆಗುವುದಿಲ್ಲ. ಅಪ್ಪ-ಮಕ್ಕಳ ನಡುವೆ ಹಾಗೂ ಅತ್ತೆ-ಸೊಸೆಯಂದಿರ ನಡುವಿನ ಭಿನ್ನಾಭಿಪ್ರಾಯಗಳೂ ಹೆತ್ತವರು ವೃದ್ಧಾಶ್ರಮಗಳಿಗೆ ಸೇರಲು ಕಾರಣವಾಗುತ್ತವೆ. ಕಾರಣಗಳೇನಿದ್ದರೂ ವಯಸ್ಸಾದ ಹೆತ್ತವರು ಮಕ್ಕಳಿಗೆ ಭಾರ ಅನ್ನಿಸುವ ಮನಸ್ಥಿತಿ ಬರುತ್ತಿರು ವುದು ಸಡಿಲಗೊಳ್ಳುತ್ತಿರುವ ಸಂಬಂಧಗಳನ್ನು ಎತ್ತಿ ತೋರಿಸುತ್ತವೆ.

ಹೊಂದಾಣಿಕೆಯ ಸಮಸ್ಯೆ ಎನ್ನುವುದು ಇಂದಿನ ಜನರು ಅತಿಯಾಗಿ ಎದುರಿಸುವ ಸಮಸ್ಯೆಯಾಗಿದೆ. ಅತ್ತೆ – ಸೊಸೆಯಂದಿರ ನಡುವೆ, ಗಂಡ- ಹೆಂಡಿರ
ನಡುವೆ, ಅಪ್ಪ- ಮಕ್ಕಳ ನಡುವೆ , ಅಣ್ಣ- ತಮ್ಮಂದಿರ ನಡುವೆ, ಅಕ್ಕ-ತಂಗಿಯರ ನಡುವೆ ಹೊಂದಾಣಿಕೆಯ ಸಮಸ್ಯೆಗಳು ತಲೆದೋರುತ್ತಲೇ ಇರುತ್ತವೆ. ಇವುಗಳ ಪರಿಣಾಮವಾಗಿ ಮತ್ಸರ, ಅನುಮಾನ, ವಿರಸ, ಜಗಳಗಳು ಹೆಚ್ಚಾಗುತ್ತಿವೆ. ಒಂದು ಅಥವಾ ಎರಡು ಮಕ್ಕಳನ್ನು ಮಾತ್ರ ಹೊಂದಿದ ಅತೀ ಚಿಕ್ಕ ಕುಟುಂಬ ವ್ಯವಸ್ಥೆಯ ಜೀವನ ಪದ್ಧತಿಗೆ ನಾವು ತಲುಪಿದ್ದೇವೆ. ಕೂಡುಕುಟುಂಬದ ವ್ಯವಸ್ಥೆಯು ಇಂದು ನಾಶವಾಗುತ್ತಿದೆ.

ಹಿಂದಿನ ಕಾಲದ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಹೊಂದಾಣಿಕೆಯ ಜೀವನವನ್ನು ಕಲಿಯುವ ಅವಕಾಶವಿತ್ತು. ಆದರೆ ಇಂದಿನ ವಿಭಕ್ತ ಕುಟುಂಬ
ವ್ಯವಸ್ಥೆಯಲ್ಲಿ ಸಂಬಂಧಗಳೇ ಮರೆತು ಹೋಗುತ್ತಿವೆ. ಕೋಚಿಂಗ, ಪರೀಕ್ಷೆಗಳ ಗಡಿಬಿಡಿಯೆಡೆಯಲ್ಲಿ ಮಕ್ಕಳು ಅಜ್ಜನ ಮನೆ, ಮಾವನ ಮನೆ, ಸೋದರತ್ತೆ, ಸೋದರ ಮಾವನ ಮನೆ, ಚಿಕ್ಕಪ್ಪ ದೊಡ್ಡಪ್ಪನ ಮನೆ ಮೊದಲಾದ ಮನೆಗಳಿಗೆ ಹೋಗುವುದೇ ಅಪರೂಪವಾಗಿಬಿಟ್ಟಿದೆ. ಹೀಗಿರುವಾಗ ಮಕ್ಕಳಿಗೆ
ಸಂಬಂಧಿಕರ ಹಾಗೂ ಸಂಬಂಧಗಳ ನೆನಪು ಉಳಿಯುವುದಾದರೂ ಹೇಗೆ?

ಹೆಚ್ಚುತ್ತಿರುವ ಹಲ್ಲೆ, ಆಕ್ರಮಣ ಹಾಗೂ ಕೊಲೆಗಳು ಮಾನವ ಸಂಬಂಧಗಳು ತೀರಾ ಹದಗೆಡುತ್ತಿರುವುದರ ಸೂಚಕವಾಗಿವೆ. ಪ್ರಪಂಚದಲ್ಲಿ ಪ್ರತೀ ವರ್ಷ ದ್ವೇಷದಿಂದ ಬಡಿದಾಡಿಕೊಂಡು ಸಾಯುತ್ತಿರುವ ಮಾನವರ ಸಂಖ್ಯೆ ನಾಲ್ಕು ಲಕ್ಷವನ್ನು ಮೀರುತ್ತದೆ (ಯುದ್ಧಗಳ ಸಾವುನೋವುಗಳನ್ನು ಹೊರತು ಪಡಿಸಿ). ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳು ಮುಂದೆ ದಾಯಾದಿಗಳಾಗಿ ಕಾದಾಡಿ ಪರಸ್ಪರ ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ. ತನ್ನನ್ನು ಪ್ರೇಮಿಸಲು ಅಥವಾ ಮದುವೆಯಾಗಲು ಒಪ್ಪದ ಹುಡುಗಿಯನ್ನು ಕೊಲ್ಲುವ ಹುಡುಗರ ಪ್ರೇಮವನ್ನು ನಿಜ ಪ್ರೀತಿಯೆಂದು ಒಪ್ಪುವುದಾದರೂ ಹೇಗೆ? ತನಗೆ ಸಿಗದ ಹುಡುಗಿ ಬದುಕಿ ಉಳಿಯಲೇಬಾರದು ಎಂದು ನಿರ್ಧರಿಸುವ ಏಕಮುಖಿ ಪ್ರೇಮಿಗಳು ಪ್ರೀತಿ ಮತ್ತು ದ್ವೇಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಸಾಬೀತುಪಡಿಸುತ್ತಾರೆ.

ಗಂಡನು ಹೆಂಡತಿಯನ್ನು ಕೊಲ್ಲುವುದು, ಹೆಂಡತಿಯು ಗಂಡನನ್ನು ಸಾಯಿಸುವುದು, ಮಕ್ಕಳು ಹೆತ್ತವರನ್ನು ಕೊಲ್ಲುವುದು, ಹೆತ್ತಬ್ಬೆಯೇ ಮಕ್ಕಳನ್ನು
ಕೊಲ್ಲುವುದು ಮೊದಲಾದ ಘಟನೆಗಳನ್ನು ಕಾಣುವಾಗ ಮನುಷ್ಯರು ಸಂಬಂಧಗಳಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತದೆ.