Sunday, 15th December 2024

ಧರ್ಮದ ಹಾಸು, ಅಫೀಮಿನ ಹೊಕ್ಕು

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ಪನಾಮಾ ಸೇದಿದವನಿಗೆ ಅದರಿಂದ ಬಿಡುಗಡೆ ಇಲ್ಲ ((Once a Panama smoker, always a Panama smoker) – .ಪನಾಮಾ ಸಿಗರೆಟ್‌ನ ಒಂದು ಜಮಾನಾದ ಜಾಹಿರಾತಿದು.

ಇಂಥದ್ದೇ ಮಾತನ್ನು ಪತ್ರಿಕಾರಂಗದೊಡಗಿನ ಅನುಬಂಧಕ್ಕೂ ವಿಸ್ತರಿಸುತ್ತಾರೆ – Once a journalist, always a journalist.  ಪತ್ರಕರ್ತನಾದವನು ಅದಕ್ಕೇ ಜೋತು ಬೀಳುತ್ತಾನೆ. ಪನಾಮಾ ನಾನು ಸೇದಿಲ್ಲ, ಆದರೆ ಕೆಲ ಪತ್ರಕರ್ತರಿಗಾದರೂ ವೃತ್ತಿಯ ಕುರಿತಾದ ಈ ಮಾತು ಶಾಪದಂತೆ ಕೇಳಬಹುದೇನೊ! ಶಾಪಮುಕ್ತನಾಗಲು, ಆದರ್ಶದ ಮೂಟೆ ಹೊತ್ತು ಪ್ರವೇಶಿಸಿದ್ದ ರಂಗದಿಂದ ಹೊರಬರಲು ಕೆಲವೇ ತಿಂಗಳುಗಳಲ್ಲಿ ಪ್ರಯತ್ನಿಸಿದ್ದೆ. ಆ ಪ್ರಯತ್ನವನ್ನು ಬಹುಕಾಲ ಮುಂದುವರಿಸಿದ್ದೆ. ಪ್ರಯತ್ನ ವಿಫಲ ವಾದಾಗಲೆಲ್ಲ ಪನಾಮಾ ಜಾಹೀರಾತು ಮನದ ಪರದೆಯ ಮೇಲೆ ಮೂಡುತ್ತಿತ್ತು. ವಿಷಣ್ಣನಾಗುತ್ತಿದ್ದೆ.

ಬಿಡುಗಡೆ ಬಯಸಿದ ಮೊದಲ ಪ್ರಯತ್ನ ನನ್ನನ್ನು ಕನಕಪುರ ರಸ್ತೆಯ ಖೋಡೆ ಫ್ಯಾಕ್ಟರಿ ಬಳಿಯ ವ್ಯಾಲಿ ಶಾಲೆಗೆ ಕರೆದೊಯ್ದಿತು. ಬ್ಯಾಂಕ್ ಉದ್ಯೋಗ ತ್ಯಜಿಸಿ ಕಡಿಮೆ ವೇತನಕ್ಕೆ ಅಲ್ಲಿ ಭೂಗೋಳದ ಅಧ್ಯಾಪಕನಾಗಿದ್ದ (ಪತ್ರಿಕೋದ್ಯಮ ವ್ಯಾಸಂಗದ ಸಹಪಾಠಿ ರಮೇಶ್) ನನ್ನನ್ನು ಉತ್ತೇಜಿಸಿದ್ದ. ನನಗೆ ಅಲ್ಲಿನ ವಾತಾವರಣ ಹಿಡಿಸಿತು. ಶಾಲೆಯ ಸಂಸ್ಥಾಪಕ ಜಿಡ್ಡು ಕೃಷ್ಣಮೂರ್ತಿಯವರ
ಚಿಂತನೆಯ ಅರಿವು ತಕ್ಕಮಟ್ಟಿಗಿತ್ತು. ಮದರಾಸಿನಲ್ಲಿ ಅವರ ಉಪನ್ಯಾಸವನ್ನು ಕೇಳಿದ್ದೆ. ಆದರೆ, ನಾನು ಬಯಸಿದ ವಿಷಯ (ಭೌತಶಾಸ್ತ್ರ)ವನ್ನು ಬೋಧಿಸಲು ಅಲ್ಲಿ ಅವಕಾಶ ಸಿಗಲಿಲ್ಲ. ಅಲ್ಲಿ ಕನ್ನಡದ ಅಧ್ಯಾಪಕರಾಗಿದ್ದ ಪಾವಗಡ ಪ್ರಕಾಶ್ ರಾವ್‌ ರೊಂದಿಗೆ ಒಂದಷ್ಟು ಹರಟಿದ್ದೆ.

ಈಗಷ್ಟೇ ಪತ್ರಿಕಾರಂಗ ಪ್ರವೇಶಿಸಿದ್ದೀರಿ, ಬಿಡುವ ಆಲೋಚನೆ ಏಕೆ ಎಂದು ಕೇಳಿದರು. ಭ್ರಮನಿರಸನವಾಗಿದೆ ಎಂದೆ. ಅದೂ ಸರಿಯೆ. ಜೇಬಲ್ಲಿ ನಾಕು ಕಾಸು ಇಲ್ಲದಿದ್ದರೂ, ದೇವರಾಜ ಅರಸರ ಮುಂದೆ ಕುಳಿತು ಹೊಗೆ ಎಳೆಯುತ್ತಾ ಧಿಮಾಕಿನಿಂದ
ಮಾತನಾಡುತ್ತೀರ, ಎಂದು ನಮ್ಮ ಉದ್ಯಮದ ಬಗ್ಗೆ ಬೀಸು ಹೇಳಿಕೆ ಕೊಟ್ಟರು.

ಹೌದು, ಇದ್ದ ಕೆಲಸವನ್ನು ಬಿಟ್ಟು, ಸೈನ್ಯಕ್ಕೆ ಸೇರಬಹುದಿದ್ದ ಅವಕಾಶವನ್ನು ತ್ಯಜಿಸಿ ಪತ್ರಿಕೆಗೇ ಸೇರಬೇಕು ಎಂಬ ನನ್ನ ಛಲದ ಹಿಂದೆ ನನ್ನ ಹಿಮಾಲಯದಷ್ಟು ಸ್ವಾಭಿಮಾನವೂ ಕೆಲಸ ಮಾಡಿತ್ತು. ಯಾವ ಬಾಸ್‌ನ ಹಂಗಿರದ, ದರ್ಪ ನಡೆಯದ ವೃತ್ತಿಯಿದು. ಇದಕ್ಕೆ ಅಪವಾದಗಳು ಹೇರಳವಾಗಿವೆ. ಸ್ವಾಭಿಮಾನಕ್ಕೆ ವಿಚ್ಛೇದನ ನೀಡುವುದು ಕೆಲವರ ಆಯ್ಕೆಯ ಸ್ವಾತಂತ್ರ್ಯ! ಆ ಸ್ವಾತಂತ್ರ್ಯ ವನ್ನು ಬಯಸುವ ಸಹೋದ್ಯೋಗಿಗಳು ಹೆಚ್ಚಾದಾಗ, ಅದನ್ನು ಬಯಸದಿರುವವರಿಗೆ ಹಿಂಸೆಯಾಗುತ್ತದೆ.

ಅಲ್ಲಿಂದ ಹೊರಬರುವ ತುಡಿತ ಕಾಡುತ್ತದೆ. ಹಾಗೆ ಹೊರಬಂದ ಅಲ್ಪಾವಧಿಯಲ್ಲಿ ಅಮೆರಿಕದ ಕಂಪನಿಯೊಂದಕ್ಕೆ ಮಣ್ಣು
ಹೊತ್ತೆ. ವನ್ಯಸಂಪತ್ತನ್ನು ನಾಶಗೊಳಿಸಿ ಉಸಿರಾಟಕ್ಕೇ ಸಂಚಕಾರ ತಂದುಕೊಂಡಿದ್ದೇವೆ. ಆ ದುರಂತದ ಪ್ರಮಾಣವನ್ನು ಕಡಿಮೆಗೊಳಿಸುವ ಸಾಮರ್ಥ್ಯ ಹೈಡ್ರೊಜನ್ ಫ್ಯೂಯೆಲ್‌ಗಿದೆ. ಅದನ್ನು ವಾಹನಗಳಲ್ಲಿ ಬಳಸುವ ತಂತ್ರಜ್ಞಾನ ಈ ಕಂಪನಿ ಯದ್ದು. ಅಲ್ಲಿ ಸೇವೆ ಸಲ್ಲಿಸಲು ದೊರಕಿದ ಅವಕಾಶವನ್ನು ನಾನು ಒಪ್ಪಿಕೊಂಡದ್ದಕ್ಕೆ ಕಂಪನಿಯಲ್ಲಿ ನನಗೆ ಪಾಲು ಕೊಟ್ಟು ಪತ್ರ ನೀಡಲಾಯಿತು.

ಗ್ಲೋಬಲ್ ಹೆಡ್ (ಮಾಧ್ಯಮ ಮತ್ತು ಹೂಡಿಕೆ) ನನ್ನ ಹುದ್ದೆ. ಕಂಪನಿ ಭಾರತಕ್ಕೆ ಬರುವುದಿದ್ದು, ವಿಸ್ತೃತ ಕಾರ್ಯಾಚರಣೆಗೆ
ಹೂಡಿಕೆದಾರರನ್ನು ಕರೆತರುವುದು ನನ್ನ ಜವಾಬ್ದಾರಿಗಳಂದು. ಆ ಸಂದರ್ಭದಲ್ಲಿ, ಪರಿಚಯದೊಬ್ಬರ ಮೂಲಕ ಖೋಡೆ ಕಂಪನಿಯ ಮುಖ್ಯಸ್ಥ ಹರಿ ಖೋಡೆ ಅವರನ್ನು ಭೇಟಿಮಾಡಲು ಹೋದೆ. ಹೈ ಗ್ರೌಂಡ್ಸ್‌ನಲ್ಲಿನ ಬಸವ ಭವನದ ಹತ್ತಿರವೇ ಅವರ ಕಚೇರಿ. ಎದುರು ಬದಿರು ಕುಳಿತೆವು. ವೃತ್ತಿಪರ ಪತ್ರಕರ್ತನಿಗೆ ತಾನು ಸಂದರ್ಶಿಸುವ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ನಿರ್ಭಿಡೆಯಿಂದ ಮಾತನಾಡುವ ಛಾತಿ ಇರುತ್ತದೆ. ಅವನ ಆತ್ಮವಿಶ್ವಾಸ ಅವನ ಕಿಸೆಯಲ್ಲಿ ಎಷ್ಟು ಹಣವಿದೆ ಎಂಬುದರಿಂದ ನಿರ್ಧರಿತವಾಗುವುದಿಲ್ಲ. ಅವನ ನೈತಿಕತೆಯಿಂದ ಹೊರಹೊಮ್ಮುತ್ತದೆ.

ಐಶ್ವರ್ಯವಂತನ ಚಹರೆ, ಹಾವಭಾವಗಳು ಅವರಿಂದ ಚಿಮ್ಮುತ್ತಿದ್ದವು. ಅರೆಕ್ಷಣ ನಾನು ವಿಚಲಿತನಾದೆ. ಅದನ್ನು ಅವರು ಗಮನಿಸದರೇನೊ ಕಾಣೆ. ನನ್ನ ಅಳುಕನ್ನು ಬಿಟ್ಟುಕೊಡದೆ ಮಾತಿಗೆಳೆದೆ. ಪತ್ರಿಕೋದ್ಯಮವನ್ನು ಪ್ರವೇಶಿಸುವ ಮೊದಲು ಮದರಾಸ್ ಕಂಪನಿಯೊಂದರಲ್ಲಿ ಸೇಲ್ಸ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದೆ. ಇಂಡಸ್ಟ್ರಿಯ ದೊಡ್ಡ ವ್ಯಕ್ತಿಗಳನ್ನು ಭೇಟಿ ಮಾಡಿದ ಅನುಭವವಿತ್ತು, ಆತ್ಮವಿಶ್ವಾಸಕ್ಕೆ ಬರವಿರಲಿಲ್ಲ. ಅದರ ಪ್ರಯೋಜನ ಪಡೆದುಕೊಂಡು ಖೋಡೆಯವರಿಗೆ ನಮ್ಮ ಕಂಪನಿ ಮತ್ತದರ ತಂತ್ರಜ್ಞಾನದ ಬಗ್ಗೆ ಪರಿಚಯ ಮಾಡಿಕೊಟ್ಟೆ.

ಅಪಾರ ವ್ಯವಹಾರ ಜ್ಞಾನವಿದ್ದ ಅವರು ಕೆಲವು ಸಮಂಜಸ ಪ್ರಶ್ನೆಗಳನ್ನು ಕೇಳಿ ಸಂಶಯ ಬಗೆಹರಿಸಿಕೊಂಡರು. ಹೊರ ಬಂದವನೇ ನನ್ನ ಆಗಿನ ಅನುಭವವನ್ನು ಸ್ವಯಂವಿಶ್ಲೇಷಣೆಯ ಓರೆಗೆ ಹಚ್ಚಿದೆ. ಪತ್ರಕರ್ತನಾಗಿ ಯಾರನ್ನೂ ಅತಿ ಎತ್ತರದ ಸ್ಥಾನದಲ್ಲಿರಿಸಿ ಅಭ್ಯಾಸವಿರದ ನಾನು ಆ ಅರೆಕ್ಷಣ ವಿಚಲಿತನಾಗಿದ್ದಕ್ಕಾಗಿ ನನ್ನನ್ನು ನಾನು ಹಳಿದುಕೊಂಡೆ. ಹಣ ಹೂಡಿರೆಂದು ಯಾರನ್ನೇ ಕೇಳುವುದು ಪತ್ರಕರ್ತನ ಕೆಲಸವಲ್ಲ.

ನಾನು ನನ್ನ ನೈತಿಕತೆ ಕಳೆದುಕೊಂಡೆನೇನೋ ಅನಿಸಿತು. ನನ್ನತನವನ್ನು ಉಳಿಸಲಾರದ ಆ ಹುದ್ದೆಯಿಂದ ಹೊರಬರಲು ಹೆಚ್ಚು
ಕಾಯಲಿಲ್ಲ. ಸುರೆಯ ಸಾಮ್ರಾಜ್ಯದ ಅಧಿಪತಿಯನ್ನು ಮತ್ತೆ ಭೇಟಿ ಮಾಡಲಿಲ್ಲ. ಹಾಗಿದ್ದರೆ, ಒಂದು ಕಾಲದಲ್ಲಿ ಮದ್ಯ ವ್ಯಾಪಾರ ದಲ್ಲಿ ತೊಡಗಿಸಿಕೊಂಡಿದ್ದು, ಡೆಕ್ಕನ್ ಹೆರಾಲ್ಡ ಸಂಸ್ಥೆಯನ್ನು ಸೇರಿ ಅಲ್ಲಿ ದೀರ್ಘಾವಧಿ ಕೆಲಸ ಮಾಡಿದ್ದು ಹೇಗೆ ಎಂದು
ನೀವೇನಾದರೂ ಪ್ರಶ್ನಿಸಿದಲ್ಲಿ ಅದಕ್ಕೆ ನನ್ನ ಬಳಿ ಉತ್ತರವಿಲ್ಲ.

ಅನೇಕ ಪತ್ರಕರ್ತರು ಇಂಥ ಒಂದಲ್ಲ ಒಂದು ಸಂದಿಗ್ಧಕ್ಕೆ ಸಿಲುಕಿಕೊಂಡಿರುತ್ತಾರೆಂಬ ಸಮಜಾಯಿಷಿ ನೀಡಲು ನಾನು ಮುಂದಾಗಲಾರೆ. ಹಾಗೆ ಸಿಲುಕದಿರುವುದು ಕರೋನಾ ತಗುಲದ ಊರಿನಿಂದ ಸಾಸಿವೆ ಕಾಳು ತರುವಷ್ಟೇ ದುಸ್ಸಾಧ್ಯ. ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಷರಾಬಿಗೆ ಮೊದಲ ಸ್ಥಾನ. ಇದಕ್ಕೆ ರಾಜ್ಯದ ಬಹುತೇಕ ಮುಖ್ಯಮಂತ್ರಿಗಳ ಕೊಡುಗೆ ಇದೆ. ಮದಿರೆ ನಮ್ಮ ಜೀವನದ ಅವಿಭಾಜ್ಯ ಅಂಗ. ಕರೋನಾ ಮಾರಿ ಅಪ್ಪಳಿಸುತ್ತಿರುವ ಭೀಕರ ಪರಿಸ್ಥಿತಿಯಲ್ಲೂ ಸಾಂಸ್ಕೃತಿಕ ಕೇಂದ್ರಗಳಾದ ಮಂದಿರಗಳನ್ನು ಮುಚ್ಚಿಸಲಾಗುತ್ತದೆ, ಹೆಂಡದಂಗಡಿಗಳು ವಹಿವಾಟು ನಡೆಸಲು ವಿಶೇಷ ಅನುಮತಿ ನೀಡಲಾಗುತ್ತದೆ.

ದೇವಾಲಯಗಳ ವಿರುದ್ಧ ಬೊಂಬಡ ಬಜಾಯಿಸುವ ಸ್ವಘೋಷಿತ ಜನಪರ ಜೀವಿಗಳು ಬಡವರನ್ನು ಮತ್ತಷ್ಟು ಬರ್ಬಾದು ಮಾಡುತ್ತಿರುವ ಬಾರ್ ಗಳ ವಿರುದ್ಧ ಬೀದಿಗಿಳಿದದ್ದನ್ನು ನೋಡಿದ್ದೀರೇ? ಇದೂ ಪ್ರಜಾಪ್ರಭುತ್ವದ ವಿಕತನಗೆಯೇ? ಹೆಂಡದ ಮಾತು ಬಿಡಿ, ಭಾರತದಲ್ಲಿ (ತಂಬಾಕಲ್ಲದ) ಮಾದಕ ವಸ್ತುಗಳಿಗೆ ದಾಸರಾದವರ ಸಂಖ್ಯೆ ಐದು ಕೋಟಿ. ಅವರಲ್ಲಿ ಅರವತ್ತು ಲಕ್ಷ ಜನಕ್ಕೆ ಅದು ವ್ಯಸನ. ಅರವತ್ತು ಲಕ್ಷ ವ್ಯಸನಿಗಳಲ್ಲಿ ಅರ್ಧದಷ್ಟನ್ನು ಬಿಟ್ಟುಬಿಟ್ಟರೂ, ಕನಿಷ್ಠ 30 ಲಕ್ಷ ಸಂಸಾರಗಳ ಜೀವನ ಅಸ್ತವ್ಯಸ್ತ.

ಇದು, ಕೇವಲ ನಮ್ಮ ದೇಶದಲ್ಲಿ, ಸಂಸಾರದ ಮುಖ್ಯಸ್ಥರು ಕೋವಿಡ್‌ಗೆ ಬಲಿಯಾದದ್ದರಿಂದ ನೆಲೆ ಕಳೆದುಕೊಂಡ ಒಟ್ಟು ಸಂಸಾರಗಳಿಗಿಂತ ಅದೆಷ್ಟೋ ಪಟ್ಟು ಹೆಚ್ಚು. ಈ ಲೇಖನವನ್ನು ಸೋಮವಾರದ ಗಡುವಿಗೆ ಮುಂಚೆಯೇ – ಶುಕ್ರವಾರ – ಬರೆಯು ತ್ತಿದ್ದೇನೆ. ಈ ಹೊತ್ತಿನವರೆಗೂ ಭಾರತದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ 3.19 ಲಕ್ಷ. (ಅದೃಷ್ಟವಶಾತ್) ಅಷ್ಟೂ ಮಂದಿಯ ಸಂಸಾರಗಳೂ ಬೀದಿಗೆ ಬಿದ್ದಿಲ್ಲ. ಭ್ರಷ್ಟಾಚಾರವನ್ನು ಧಾರ್ಮಿಕ ಶ್ರದ್ಧೆಯಿಂದ ಪರಿಪಾಲಿಸಿದ ಕಾಂಗ್ರೆಸ್ ಪಕ್ಷವನ್ನು ಹೊಣೆ ಮಾಡಬೇಕಿರುವುದು ಕರೋನಾ ಉಲ್ಬಣವಾಗುತ್ತಿರುವುದಕ್ಕಷ್ಟೇ ಅಲ್ಲ.

ಅಲ್ಪಸಂಖ್ಯಾತರನ್ನು ಅವಿರತವಾಗಿ ರಮಿಸಿ ಕಾಶ್ಮೀರದಿಂದ ಕೇರಳದವರೆಗೆ, ಮಹಾರಾಷ್ಟ್ರದಿಂದ ಮೇಘಾಲಯದವರೆಗೆ ಸಾಮಾಜಿಕ ಶಾಂತಿಯನ್ನು ಕದಡುತ್ತಿರುವುದಕ್ಕೂ ಕಾರಣ ಕಾಂಗ್ರೆಸ್. ಅದೇ ಟೆಂಪ್ಲೇಟನ್ನು ಹಿರಿಯಕ್ಕ ಕಾಂಗ್ರೆಸ್‌ನ ಚಾಳಿಯನ್ನೇ
ಹಿಡಿದ ಇತರೇ ಪಕ್ಷಗಳೂ ಚಾಚೂ ತಪ್ಪದೆ ಅನುಸರಿಸುತ್ತಿವೆ. ಇದು ರಾಜಕೀಯ ಕ್ರಿಯಾಶೀಲತೆಯ ದಿವಾಳಿತನ. ಹಾಗಾಗಿ ದೇಶ ವನ್ನೇ ಕಿತ್ತು ತಿನ್ನುತ್ತಿರುವ ಸಮಸ್ಯೆಗಳತ್ತ ಇವುಗಳ ಲಕ್ಷವಿಲ್ಲ.

ಡ್ರಗ್ಸ್ ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಐಎಸ್‌ಐಎಸ್ (ಐಖಐಖ) ಉಗ್ರರು ಅದಿನ್ನೆಷ್ಟು ಉಗ್ರರಾದಾಗ ಸ್ವಾರ್ಥನಿರತ ರಾಜಕಾರಣಿಗಳು ಎಚ್ಚೆತ್ತುಕೊಳ್ಳುತ್ತಾರೋ ಕಾಣೆ. ಒಂದು ಕಡೆ ಡ್ರಗ್ಸ್ ದಂಧೆಖೋರರಿಗೆ ಬೆಂಗಾವಲು ಒದಗಿಸುತ್ತಾ, ಮತ್ತೊಂದೆಡೆ ರಾಜಕಾರಣಿಗಳ ಪಾದಸೇವೆಯಲ್ಲಿ ನಿರತರಾದ ಪೊಲೀಸರಿಂದ ಹೆಚ್ಚೇನೂ ನಿರೀಕ್ಷಿಸಲಾಗದು.

ಹಾಗಾಗಿ, ಮಾದಕ ಮಹಾಸಾಗರದಲ್ಲಿ, ಬೆಂಡು ಕಟ್ಟಿಕೊಂಡು ತೇಲುವ ನಾಲ್ಕು ಹಸುಗಲ್ಲದವರನ್ನು ಬಂಧಿಸಲಾಗುತ್ತದೆ ವಿನಾ ಬಾಲಿವುಡ್, ಟಾಲಿವುಡ್ ಅಥವಾ ಮತ್ತಾವುದೋ ವುಡ್ಡಿನ ತಿಮಿಂಗಲಗಳನ್ನು ಹೊರಗೆಳೆದು ಉಸಿರುಕಟ್ಟಿಸಿ ಸಾಯಿಸುವುದಿಲ್ಲ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡ್ರಗ್ಸ್ ವ್ಯಸನಿ, ಅವರು ಕೊಕೇನ್ ಸೇವಿಸುತ್ತಾರೆ ಎಂದು ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದರು. ಮಾದಕ ವಸ್ತುಗಳ ವ್ಯಸನಿಗಳಲ್ಲಿ ಅಪರಾಽ ಪ್ರವೃತ್ತಿ ಹೆಚ್ಚಾಗುವುದು ತಿಳಿದದ್ದೇ. ಆ ಪ್ರವೃತ್ತಿಯನ್ನು ರಾಹುಲ್‌ ರಲ್ಲಿ ದಿನ ನಿತ್ಯ ಕಾಣುತ್ತಿದ್ದೇವಲ್ಲವೇ? ಇಪ್ಪತ್ತು ವರ್ಷಗಳ ಹಿಂದೆ, ಮಾದಕ ವಸ್ತುವನ್ನು ಹೊಂದಿದ್ದಕ್ಕಾಗಿ ರಾಹುಲ್ ಅಮೆರಿಕ ದಲ್ಲಿ ಸಿಕ್ಕಿಬಿದ್ದಾಗ ಅವರ ರಕ್ಷಣೆಗೆ ಪ್ರಧಾನ ಮಂತ್ರಿ ವಾಜಪೇಯಿ ನೆರವು ನೀಡಿದರು ಎಂಬ ವರ್ತಮಾನವೂ ಇದೆ.

ಅದರ ಸತ್ಯಾಸತ್ಯತೆ ಏನೇ ಇರಲಿ, ಅಮೆರಿಕ ದೇಶದ ನಂಬರ್ ಒನ್ ಸಮಸ್ಯೆ ಮಾದಕ ವಸ್ತುಗಳದ್ದು. ಲಾಕ್‌ಡೌನ್ ಅವಧಿಯಲ್ಲಿ ಮದ್ಯಪಾನಿಗಳ ಮಾನವ ಹಕ್ಕಿಗೆ ಧಕ್ಕೆಯಾಗದಂತೆ ವರ್ತಿಸುವ ಸ್ಥಳೀಯ ನೇತಾರರಂತೆ, ಡ್ರಗ್ ವ್ಯಸನಿಗಳ ಮೂಲದ್ರವ್ಯದ ಅಭಾವವಾಗದಂತೆ ಸ್ಪಂದಿಸುವ ಸರಕಾರ ಅಮೆರಿಕದಲ್ಲೂ ಇದೆ. ಡ್ರಗ್ ವ್ಯಸನಿಗಳ ಮೂಲದ್ರವ್ಯದ ಅಭಾವವಾಗದಂತೆ ಸ್ಪಂದಿಸುವ ಸರಕಾರ ಅಮೆರಿಕದಲ್ಲೂ ಇದೆ.

ಪಕ್ಕದ ಮೆಕ್ಸಿಕೊ ದೇಶದಿಂದ ಡ್ರಗ್ಸ್ ಹರಿದುಬರದಂತೆ ಅಮೆರಿಕ ವಿಶ್ವದ ಎಲ್ಲ ಮುಳ್ಳುಗಿಡಗಳನ್ನೂ ಕಿತ್ತು ತಂದು ಮಧ್ಯೆ ಬೇಲಿ ನೆಟ್ಟರೂ ಡ್ರಗ್ಸ್ ದಂಧೆ ಇನ್ನೂ ಹತ್ತು ಶತಮಾನ ನಿಲ್ಲುವುದಿಲ್ಲ. ನಮ್ಮ ಇರುವ ಭೂ – ಮಾಫಿಯಾವನ್ನು ಯಾರಾದರೂ ಮಟ್ಟ ಹಾಕಿzರೆಯೇ? ಮಾಫಿಯಾ ಜಗತ್ತೇ ಹಾಗೆ, ಅದಕ್ಕೆ ಸಾವಿಲ್ಲ. ಅದನ್ನು ನಿಯಂತ್ರಿಸುವವರು ಮಾಫಿಯಾ – ಹೊರಗಿನ ಜಗತ್ತನ್ನೂ ನಿರ್ವಹಿಸುತ್ತಾರೆ.

ವಿಶ್ವವ್ಯಾಪಿ ಜಾಲ (www) ಬರುವುದಕ್ಕಿಂತ ಮುಂಚಿನಿಂದಲೂ ಡ್ರಗ್ಸ್ ಮಾಫಿಯಾ ಅಸ್ತಿತ್ವದಲ್ಲಿದೆ. ಪಶ್ಚಿಮ ಏಷ್ಯಾದತ್ತ ಒಂದು ಹೆಜ್ಜೆ ಹೋಗಿ ಬರೋಣ ಬನ್ನಿ. ಹೇಗಿದ್ದರೂ ಕದನ ವಿರಾಮ ಘೋಷಿಸಿಯಾಗಿದೆ. ಇಸ್ರೇಲ್ – ಪ್ಯಾಲೆಸ್ತೀನ್ ಬಾಂಬ್ ವಿನಿಮಯ ದಲ್ಲಿ ತೊಡಗಿದ್ದಾಗಲೇ ಲೆಬನಾನ್‌ನಿಂದ ಸೌದಿ ಅರೇಬಿಯಾಗೆ ಬಂದಿಳಿದ ದಾಳಿಂಬೆಯ ಹಣ್ಣುಗಳ ಅಡಿಯಲ್ಲಿ ನಾರ್ಕೊಟಿಕ್ ಟ್ಯಾಬ್ಲೆಟ್‌ಗಳು ಪತ್ತೆಯಾದವು. ಬೆಟ್ಟದಷ್ಟು ಸರಕು. ಲೋಲುಪ ರಿಯಾದ್ ದೊರೆಗಳು ಬೆಚ್ಚು ಬೀಳುವಷ್ಟು. ಅರಬ್ ದೇಶಗಳಲ್ಲಿ ವಿತರಿಸುವುದಕ್ಕಾಗಿ ಕಳಿಸಿದ್ದ ಮಾಲದು. ಒಟ್ಟು ಮಾತ್ರೆಗಳ ಸಂಖ್ಯೆ 24 ಲಕ್ಷ. ಅರಬ್ ದೇಶಗಳ ಸಮಸ್ತ ಜನತೆಗೆ ನಶೆ ಏರಿಸಬಹು ದಾದಷ್ಟು ಬೃಹತ್ ಪ್ರಮಾಣ.

ಓದುತ್ತಾ ಹೋದಂತೆ ನಿಮಗೂ ಗಾಂಜಾ ಸೇವಿಸಿದವರಂತೆ ಎಲ್ಲಾ ತಲೆಕೆಳಕಾಗಿ ಕಾಣುವ ಸಾಧ್ಯತೆ ಇದೆ. ಇರಾನಿನ ಮುಗಳು ಲೆಬನಾನಿನ ಹೆಜ್ಬೊಲ್ಲ ಉಗ್ರರೊಂದಿಗೆ ಕೈಜೋಡಿಸಿ ಅರಬ್ಬರನ್ನು ಹತ್ತಿಕ್ಕಲು ಬಳಸುವ ಮುಖ್ಯ ಸಾಧನ ಮಾದಕ ವಸ್ತುಗಳು. ಇಸ್ಲಾಂ ಭಯೋತ್ಪಾದಕತೆಗೂ, ಅಕ್ರಮ ಶಸ್ತ್ರಾಸ್ತ್ರಗಳಿಗೂ, ನಾರ್ಕೊಟಿಕ್ ಡ್ರಗ್ಸ್‌ಗಳಿಗೂ ಅವಿನಾಭಾವ ಸಂಬಂಧ. ಅನ್ನ ಪ್ರಾಶನದ ಜತೆಗೇ ಇಸ್ಲಾಂ ಭಯೋತ್ಪಾದನೆಯ ಮಂತ್ರವನ್ನು ಕಿವಿಗಿಳಿಸಿಕೊಳ್ಳುವ ಹೆಜ್ಬೊಲ್ಲಗಳ ಮುಂದೆ (ಬದ್ಧ ವೈರಿಗಳಾದ)
ಇಸ್ರೇಲಿಗರು ಗಾಢ ಸ್ನೇಹಿತರಂತೆ ಕಾಣುತ್ತಾರೆ ಎಂದು ಸೌದಿ ಶಿಕ್ಷಣ ತಜ್ಞ ಅಲ್ – ಹಮಾದ್ ಅಭಿಪ್ರಾಯಪಡುತ್ತಾರೆ.

ಈ ಉಗ್ರರು ಭಯೋತ್ಪಾದನೆಯ ಹಂತವನ್ನೂ ಮೀರಿ ಪೂರ್ಣಾವಧಿ ಕ್ರಿಮಿನಲ್‌ಗಳಾಗಿ ಪರಿವರ್ತಿತರಾಗಿದ್ದಾರೆ. ಮೆಕ್ಸಿಕೊ, ಕೊಲಂಬಿಯಾ, ಕ್ಯೂಬಾ ದೇಶಗಳಾದ್ಯಂತ ಸಂಪರ್ಕವಿರುವ ಹೆಜ್ಬೊಗಳ ಏಕೈಕ ಗುರಿ ಡ್ರಗ್ಸ್ ಮೂಲಕ ಅರಬ್ ರಾಷ್ಟ್ರಗಳನ್ನು ಧ್ವಂಸಮಾಡುವುದು ಎನ್ನುತ್ತಾರೆ ಎಮಿರೆಟ್ಸ್ ಪತ್ರಕರ್ತ ಮೊಹಮ್ಮದ್ ಅಲ್ – ಮಸ್ಕಾರಿ. ಅತ್ತ ಲೆಬನಾನ್ ದೇಶದ ಸಾಮಾನ್ಯ ಪ್ರಜೆ ಹೊಟ್ಟೆಗಿಲ್ಲದೆ ನರಳುತ್ತಿದ್ದಾನೆ.

ಡ್ರಗ್ಸ್ ಸರಕನ್ನು ಕಳ್ಳತನದಿಂದ ಸೌದಿಯೊಳಗೆ ಸಾಗಿಸುವ ಹೆಜ್ಬೊಲ್ಲ ಪ್ರಯತ್ನ ಅರಬ್ಬರನ್ನು ಕೆರಳಿಸಿದೆ. ಲೆಬನಾನ್‌ನಿಂದ ವ್ಯವಸಾಯೋತ್ಪನ್ನಗಳ ಆಮದನ್ನು ನಿಷೇಧಿಸಿದೆ. ಇತರ ಅರಬ್ ದೇಶಗಳು ನಿಷೇಧವನ್ನು ಪರಿಗಣಿಸುತ್ತಲಿವೆ. ಭವ್ಯ ಬಂಗಲೆ ಗಳಲ್ಲಿ ವಾಸಿಸುವ ಹೆಜ್ಬೊಲ್ಲ ಉಗ್ರರಿಗೆ ಅದರ ಬಾಧೆ ತಟ್ಟುವುದಿಲ್ಲ, ಎನ್ನುತ್ತಾಳೆ ಬರಿಯಾ ಅಲೀಮುದ್ದೀನ್ ಎಂಬ ಲೆಬನಾನ್ ಪತ್ರಕರ್ತೆ. ಯುಎಇ, ಬಹರೇನ್ ಮೊದಲಾದ ಅರಬ್ ದೇಶಗಳು ಇಸ್ರೇಲ್ ಜತೆ ಸಹಾಯ ಹಸ್ತ ಚಾಚಿದ್ದು ಇರಾನ್ ಮುಗಳ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ. ಶತ್ರುವಿನ ಮಿತ್ರನೂ ಶತ್ರುವೇ ಎಂದೆನ್ನುತ್ತಾ ಉಗ್ರರ ಮೂಲಕ ಅರಬ್ಬರ ಮೇಲೆ ಹಾಗೆ ಸಾಧಿಸುತ್ತಿದೆ. ಈ ರಾಷ್ಟ್ರಗಳಲ್ಲಿ ಕೊಕೇನ್, ಹೆರಾಯಿನ್ ಮುಂತಾದ ಮಾದಕವಸ್ತುಗಳನ್ನು ಮಾರುವುದು ಕೂಡ ಇಸ್ರೇಲ್ ವಿರುದ್ಧ ಹೋರಾಟದ ಒಂದು ಮುಖ್ಯ ಭಾಗವೇ ಎಂದು ಹೆಜ್ಬೊಲ್ಲ ಫತ್ವಾ ಹೊರಡಿಸಿದೆ.

ಲೆಬನಾನ್‌ನ ಎಲ್ಲ ಆಗಮನ – ನಿರ್ಗಮನ ಕೇಂದ್ರಗಳೂ ಹೆಜ್ಬೊಲ್ಲ ನಿಯಂತ್ರಣದಲ್ಲಿವೆ. ತಮ್ಮ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಗುಂಪಿಗೆ ಯಾವುದೇ ತೆರನಾದ ಬೆಂಬಲ ನೆಡಬಾರದೆಂದು ಜೋ ಬೈಡನ್‌ಗೆ ಸಂತ್ರಸ್ತ ಅರಬ್ಬರು ಮೊರೆ ಹೋಗಿದ್ದಾರೆ.
ಸುಂಕದವನ ಮುಂದೆ ಸಂಕಷ್ಟವನ್ನು ತೋಡಿಕೊಳ್ಳುವುದಕ್ಕೆ ಬೇರೆ ಉದಾಹರಣೆ ಅನಗತ್ಯ. ಒಂದು ಕಡೆ ಇರಾನ್ ಮೇಲೆ
ಹೇರಿದ್ದ ಬಹಿಷ್ಕಾರವನ್ನು ಪುನರ್ ಪರಿಶೀಲಿಸುತ್ತಲೇ, ಅತ್ತ ಸಮರನಿರತ ಇಸ್ರೇಲಿಗೆ 700 ಕೋಟಿಗೂ ಹೆಚ್ಚು ಬೆಲೆಯ ಶಸ್ತ್ರಾಸ್ತ್ರ ಗಳನ್ನು ಪೂರೈಸುವ ಕಲೆ ಬಿಳಿಯರಿಗಷ್ಟೇ ಸಾಧ್ಯ.

ಇದೊಂದು ಬಾಳಸಂಗಾತಿಯ ಬಾಹುಬಂಧನದಲ್ಲಿರುವಾಗಲೇ ಆಕೆಯ ಹಿಂದೆ ನಿಂತ ಹೆಣ್ಣನ್ನು ಪಟಾಯಿಸಲೆತ್ನಿಸುವ ಕಲೆಯಂತೆ! ಇಷ್ಟೂ ಸಾಲದೆಂಬಂತೆ, ರಣಾವೇಶದ ಇಸ್ರೇಲಿಗೆ ಶಾಂತಿಮಂತ್ರ ಬಿತ್ತುವ ಕಲಾತ್ಮಕತೆ ಬೇರೆ. ಇಪ್ಪತ್ತು ವರ್ಷಗಳ ಹಿಂದೆ ವಲ್ಡ ಟ್ರೇಡ್ ಸೆಂಟರನ್ನು ವಿಮಾನಗಳು ಧ್ವಂಸಗೊಳಿಸಿದಾಗ ಪ್ಯಾಲೇಸ್ತೀನರು ಕೇಕೆ ಹಾಕುತ್ತಾ ಕುಣಿದಿದ್ದಕ್ಕೆ ಕಾರಣವಿಲ್ಲ ಅಂತೀರಾ? ಆ ಕುಣಿತದ ಹಿಂದಿನ ಆವೇಶಕ್ಕೆ ಯಾವುದೇ ಗಾಂಜಾ, ಅಫೀಮು ಬೇಡವೇ ಬೇಡ, ಮಾರ್ಕ್ಸ್ ಹೇಳಿದ ಧರ್ಮದ
ಅಫೀಮು ಸಾಕು.