Thursday, 25th July 2024

ಧರ್ಮ-ರಾಜಕಾರಣಗಳ ನಡುವೆ ಮೌನವಾದ ಸಾಹಿತ್ಯ ದನಿ !

ಯಶೋ ಬೆಳಗು

yashomathy@gmail.com

ಜಾತಿ, ಧರ್ಮಗಳ ಮೂಲಕ ಗುರುತಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಮನಸ್ಥಿತಿಯೇ ಎಡೆಯೂ ವಿಜೃಂಬಿಸುವಾಗ ಎಲ್ಲರನ್ನೂ ಒಗ್ಗೂಡಿ ಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದೇ, ಜಾತಿ ಒಂದೇ, ಕುಲ ಒಂದೇ ಭಾಷೆ ಒಂದೇ ಎನ್ನುತ್ತ ನಲಿದಾಡುವ ರಾಜ್ಯ ಭಾಷೆ ಕನ್ನಡ ಇಂದು ರಾಜಧಾನಿ ಯಲ್ಲಿ ಯಾವ ಸ್ಥಿತಿ ತಲುಪಿದೆ?

ಇತ್ತೀಚಿನ ಬೆಳವಣಿಗೆಯಾದ ರಾಹುಲ್ ಗಾಂಧಿಯ ಹೇಳಿಕೆಯಿಂದ ಜರುಗಿದ ಕಾನೂನು ಕ್ರಮಗಳ ನಡುವೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು, ಸರಕಾರದ ಮೇಲೆರಗಿದ ಆರೋಪಗಳನ್ನು ಗಮನಿಸುವಾಗ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಅಧಿಕಾರ ರೂಢರ ನಡುವೆ ಉಂಟಾಗುತ್ತಿರುವ ಘರ್ಷಣೆಗೆ ಕಾನೂನನ್ನು ಯಾವ ರೀತಿಯ ಕಡಿವಾಣವಾಗಿ ಬಳಸಿಕೊಳ್ಳಲಾಗುತ್ತಿದೆ ಅನ್ನುವ ವಿಷಯ ಹೆಚ್ಚು ಸ್ಪಷ್ಟವಾಗಿ ಗೋಚರವಾಗತೊಡಗಿತು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಅಗತ್ಯವಿರುತ್ತದೆ. ಹಾಗೆಯೇ ಅವರಾಡುವ ಮಾತುಗಳು ಚಿಂತನೆಗೆ, ಅಲೋಚನೆಗೆ ಹಚ್ಚುವಂತಿರ ಬೇಕು, ಎದುರಾಳಿಯನ್ನು ದೂಷಿಸುವ ಅವಸರದಲ್ಲಿ ಒಂದಿಡೀ ಜನಾಂಗವನ್ನು ಅಪಮಾನ ಗೊಳಿಸುವುದು ಅಕ್ಷಮ್ಯ. ರಾಜಕಾರಣದಲ್ಲಿ ರಾಹುಲ್ ಇನ್ನಷ್ಟು ಪಳಗಬೇಕಿದೆ. ಕೋಟ್ಯಂತರ ಜನರಿರುವ ಭಾರತ ದೇಶವನ್ನು ಪ್ರತಿನಿಧಿಸುವ ನಾಯಕ ಸ್ಥಾನದಲ್ಲಿರುವವರು ಎಲ್ಲ ವರ್ಗದ ಜನರನ್ನೂ ಅವರ ಧರ್ಮ, ಭಾಷೆ, ಆಚರಣೆ ಹಾಗೂ ಸಂಸ್ಕೃತಿಗಳನ್ನು ಗೌರವಿಸಬೇಕಾಗುತ್ತದೆ.

ಸಮಸ್ಯೆಗಳಿಗೆ ಸ್ಪಂದಿಸಬೇಕಾಗುತ್ತದೆ. ವೈಯಕ್ತಿಕ ದ್ವೇಷವನ್ನು ಸಾರ್ವಜನಿಕವಾಗಿ ಬಿತ್ತುವುದು ಆರೋಗ್ಯಕರ ಬೆಳವಣಿಗೆಯಲ್ಲ. ಇದರ ನಡುವೆ ಅನ್ಯಾಯಗಳ ವಿರುದ್ಧ ದನಿಯೆತ್ತುವ ಅಧಿಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಗೂ ಇದೆ. ಅದು ಪ್ರಜಾಪ್ರಭುತ್ವದ ವೈಶಾಲ್ಯತೆ. ಭಾರತೀಯ ಸಂಸ್ಕೃತಿ ಅತ್ಯಂತ ಪುರಾತನವಾದದ್ದು. ಅದನ್ನು ಅನ್ಯ ಧರ್ಮೀಯರಿಂದ ನಾಶವಾಗಲು ಬಿಡದೆ ಉಳಿಸಿ ಬೆಳೆಸಿಕೊಂಡು ಬರುವುದು ಪ್ರತಿಯೊಬ್ಬ ಪ್ರಜೆಯ ಮೂಲ ಕರ್ತವ್ಯ. ಹಾಗಂತ ಅನ್ಯಧರ್ಮೀಯರನ್ನು ದ್ವೇಷಿಸುವ ಅಗತ್ಯವಿಲ್ಲ. ನಾವು ನಿಂತಿರುವ ನೆಲದ ಸಂಸ್ಕೃತಿಗೆ ಮೊದಲ ಪ್ರಾಧಾನ್ಯತೆ ಸಿಗುವಂತಾಗಬೇಕು. ಅದರಲ್ಲಿ ಎರಡು ಮಾತಿಲ್ಲ. ಉದ್ಯೋಗ, ವಿದ್ಯೆ, ನೆಲೆಯನ್ನರಸಿಕೊಂಡು ನಾಡಿನಿಂದ ನಾಡಿಗೆ, ದೇಶದಿಂದ ದೇಶಕ್ಕೆ ವಲಸೆ ಹೋಗುವ ಜನರಿಗೆ ಸದಾ ಅತಂತ್ರ ಭಾವ ಕಟ್ಟಿಟ್ಟ ಬುತ್ತಿ.

ಅಲ್ಲಿಯ ನೆಲ, ಜಲ, ಸಂಪತ್ತನ್ನು ಬಳಸಿಕೊಂಡ ಮೇಲೆ ಅದಕ್ಕೆ ಬದ್ಧರಾಗಬೇಕಾಗಿರುವುದು, ಕೃತಜ್ಞರಾಗಬೇಕಾಗಿರುವುದು ಅವರ ಧರ್ಮ. ಹೀಗಾಗಿ ಮೂಲಧರ್ಮೀಯರ ಭಾವನೆಗೆ ಧಕ್ಕೆ ತರುವಂಥ ಕೆಲಸ ವಲಸಿಗರಿಂದ ಆಗ ಬಾರದು. ಅದನ್ನು ಗೌರವಿಸುತ್ತಲೇ ತಮ್ಮ ಧರ್ಮವನ್ನು ಆಚರಿಸಿ ಕೊಳ್ಳುವ ನಿಟ್ಟಿನಲ್ಲಿ ಯಾವುದೇ ಅಭ್ಯಂತರವಿಲ್ಲ. ಧರ್ಮಾಂಧತೆಯ ಆಕ್ರಮಣಕಾರೀ ಮನೋಭಾವವನ್ನು ಹತ್ತಿಕ್ಕಲು ಕಾನೂನಿನ ಕಡಿವಾಣ ಅಗತ್ಯ.
ಈಗಂತೂ ಎಡೆ ಚುನಾವಣೆಯ ಅರ್ಭಟದ ಅಮಲಿನಲ್ಲಿ ವೀರಾವೇಶದ ಮಾತುಗಳೇ ಮೊಳಗುತ್ತಿವೆ.

ವಸಂತನ ಆಗಮನದೊಂದಿಗೆ ವರ್ಣಮಯವಾಗಿ ಸುಂದರ ಹೂವುಗಳೊಂದಿಗೆ, ಪೊರೆ ಕಳಚಿದ ಹಾವಿನ ಮೈಯಂತೆ ನುಣ್ಣಗೆ ಹೊಳೆಯುತ್ತಿರುವ ರಸ್ತೆಗಳನ್ನು ನೋಡುವಾಗ ಚುನಾವಣೆಗಳು ಐದು ವರ್ಷಕ್ಕೊಮ್ಮೆಅಲ್ಲ. ಪ್ರತಿ ಋತುವಿಗೊಮ್ಮೆ ಇರಬೇಕಿತ್ತು ಅನಿಸುತ್ತದೆ. ಈ ಉರಿ ಬಿಸಿಲಿನಲ್ಲಿ ಉರಿಗೌಡ-ನಂಜೇಗೌಡರ ಚರ್ಚೆ ವೃದ್ಧರಿಂದ ಮಕ್ಕಳ ತನಕ ರಂಜನೀಯವಾಗಿ ಪ್ರಸಿದ್ಧಿಗೆ ಬಂದ ಹಿನ್ನೆಲೆಯಲ್ಲಿ ಅದನ್ನು ಸಿನಿಮಾ ಕಥಾವಸ್ತುವನ್ನಾಗಿ
encash ಮಾಡಿಕೊಂಡ ಸನ್ಮಾನ್ಯ ನಿರ್ಮಾಪಕರು ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕನ್ನಡ ಸಾಹಿತ್ಯ ಪರಿಷತ್ತಿನ, ರಾಜರಾಜೇಶ್ವರಿನಗರದ ವಿಧಾನಸಭಾ ಕ್ಷೇತ್ರದ ತೃತೀಯ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಬೇಕಿದ್ದ ಅವರ ಗೈರು ಹಾಜರಿ ಸಾಹಿತ್ಯ ಕ್ಷೇತ್ರಕ್ಕೆ ಅವರು ತೋರುವ ಅಗೌರವವನ್ನು ಎದ್ದು ಕಾಣುವಂತೆ ಮಾಡಿತು.

ಜಾತಿ, ಧರ್ಮಗಳ ಮೂಲಕ ಗುರುತಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಮನಸ್ಥಿತಿಯೇ ಎಡೆಯೂ ವಿಜೃಂಭಿಸುವಾಗ ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದೇ, ಜಾತಿ ಒಂದೇ, ಕುಲ ಒಂದೇ ಭಾಷೆ ಒಂದೇ ಎನ್ನುತ್ತ ನಲಿದಾಡುವ ರಾಜ್ಯ ಭಾಷೆ ಕನ್ನಡ ಇಂದು
ರಾಜಧಾನಿಯಲ್ಲಿ ಯಾವ ಸ್ಥಿತಿ ತಲುಪಿದೆ ಎನ್ನುವುದರ ಕುರಿತು ಗಣ್ಯರು ಆಡಿದ ಮಾತುಗಳು ಮನ ಕಲಕಿತು. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ಅದರಿಂದಲೇ ಎಲ್ಲದರಲ್ಲೂ ಹಿಂದುಳಿಯುತ್ತಿದ್ದೇವೆ. ಒಗ್ಗಟ್ಟಿನ ಹೋರಾಟದ ಫಲದಿಂದಾಗಿಯೇ ಸಿಕ್ಕ ಸ್ವಾತಂತ್ರ್ಯದಿಂದಾಗಿ, ತನ್ನದೇ ಸಂವಿಧಾನ ವನ್ನು ರೂಪಿಸಿಕೊಂಡು ರಾಜರ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ನೆಲೆಗೊಂಡ ಸಮಯದಲ್ಲಿ ಮೈಸೂರು ರಾಜ್ಯ ಎಂದು ಕರೆಯುತ್ತಿದ್ದ ಕನ್ನಡ ನಾಡಿಗೆ ೧೯೭೩ರಲ್ಲಿ ಕರ್ನಾಟಕವೆಂದು ಹೆಸರಿಡಲಾಯಿತು.

ಕರ್ನಾಟಕವೆಂದರೆ ಕೇವಲ ಮೈಸೂರಷ್ಟೇ ಅಲ್ಲ. ಕನ್ನಡ ಭಾಷೆ ಅಸ್ತಿತ್ವದಲ್ಲಿರುವ ಪ್ರಾಂತ್ಯಗಳನ್ನೆಲ್ಲ ಒಂದುಗೂಡಿಸಿದ ಕರ್ನಾಟಕದ ಏಕೀಕರಣದ ವರ್ಷದ ೧೯೫೬ರಲ್ಲಿ ಧಾರವಾಡದಲ್ಲಿ ರಾಷ್ಟ್ರಕವಿ ಕುವೆಂಪುರವರ ಸರ್ವಾಧ್ಯಕ್ಷತೆಯಲ್ಲಿ ೩೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ನಡೆಯಿತು. ಅಂದಿನಿಂದ ಇಂದಿನವರೆಗೆ ಐವತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದರೂ ಕನ್ನಡಿಗರ ಬವಣೆಗಳು ಮಾತ್ರ ತಪ್ಪಲೇ ಇಲ್ಲ ಎಂದು ಕಾರ್ಯಕ್ರಮದ ಸರ್ವಾಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯನವರು ವೇದನೆ ಪಟ್ಟರು.

ಎಂಬತ್ತಾರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮಗಾದ ಅನಾನುಕೂಲವನ್ನು ಪ್ರಶ್ನಿಸಿ ಸಮಸ್ತ ಹೆಣ್ಣುಮಕ್ಕಳ ಪರವಾಗಿ ಪ್ರತಿ ಭಟಿಸಿದ ಲೇಖಕಿ, ಚಂದನ ವಾಹಿನಿ ಕಾರ್ಯಕ್ರಮದ ಮುಖ್ಯಸ್ಥೆ ನಿರ್ಮಲಾ ಎಲಿಗಾರ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿ, ನೀಡಿದ್ದ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳುವ ಮೂಲಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ದ್ವೇಷಪೂರಿತ ಸರ್ವಾಧಿಕಾರೀ ಧೋರಣೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ
ಕಸಿದುಕೊಂಡಂತಾಗಿದೆ. ಕನ್ನಡ ಭಾಷೆ ಹಾಗೂ ಸಾಹಿತ್ಯದ ನಡುವಿನ ಪ್ರಾಚೀನತೆಯನ್ನು ಗುರುತಿಸಿ ಕೇಂದ್ರ ಸರಕಾರ ಅದಕ್ಕೆ ೨೦೦೮ರಲ್ಲಿ ಶಾಸ್ತ್ರೀ ಭಾಷೆಯ ಮಾನ್ಯತೆಯನ್ನು ನೀಡಿತು. ಪಂಚ ದ್ರಾವಿಡ ಭಾಷೆಗಳಲ್ಲಿ ತಮಿಳು, ಕನ್ನಡ, ತೆಲುಗು, ಮಲಯಾಳಂ ಭಾಷೆಗಳಿಗೆ ಈ ಮಾನ್ಯತೆ
ದೊರೆಯಿತು.

ಇದರಿಂದ ಗ್ರೀಕ್, ಲ್ಯಾಟಿನ್, ಪರ್ಷಿಯನ್, ಅರೇಬಿಕ್, ಹೀಬ್ರೂ, ಚೈನೀಸ್, ಸಂಸ್ಕೃತ ಭಾಷೆಗಳ ನಡುವೆ ಕನ್ನಡವೂ ಕ್ಲಾಸಿಕಲ್ ಲಾಂಗ್ವೇಜ್
ಸ್ಟೇಟಸ್ ಹೊತ್ತು ಬೀಗಿತು. ಇದೆಲ್ಲಕ್ಕೂ ಕಿರೀಟವಿಟ್ಟಂತೆ ಉಳಿದ ಯಾವ ಭಾಷಾ ಸಾಹಿತ್ಯಕ್ಕೂ ದೊರೆಯದಂಥ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯದ ವೈವಿಧ್ಯತೆ ಹಾಗೂ ಶ್ರೀಮಂತಿಕಗೆ ಸಾಕ್ಷಿಯಾಗಿದೆ. ಅಂಥಾ ಜ್ಞಾನಪೀಠ ಪುರಸ್ಕೃತರಲ್ಲಿ ಒಬ್ಬರಾದ ಡಾ. ಯು. ಆರ್. ಅನಂತ ಮೂರ್ತಿಯವರೊಂದಿಗೆ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಹಾಗೂ ನಾಡೋಜ ಸಿದ್ದಲಿಂಗಯ್ಯನವರ ಸಮಾಽಗಳು ಸೂಕ್ತವಾಗಿ ನಿರ್ವಹಿಸದ ಕಾರಣ ಗಿಡಗಂಟಿ ಕಲ್ಲು-ಮುಳ್ಳುಗಳಿಂದ ಆವೃತವಾಗಿ ಅನಾಥವಾಗಿರುವ ದೃಶ್ಯ ಕನ್ನಡಿಗರು ತಲೆತಗ್ಗಿಸುವಂತಾಗಿದೆ.

ಕಲಾವಿದರಿಗೆ ಸಿಗುವ ಮಾನ್ಯತೆ ಅಂಥಾ ಶ್ರೇಷ್ಠ ಸಾಹಿತಿಗಳಿಗೇಕೆ ಸಿಗುತ್ತಿಲ್ಲ? ಎಂಬ ಸರ್ವಾಧ್ಯಕ್ಷರ ಮಾತುಗಳು ಸಾಹಿತ್ಯ ಕ್ಷೇತ್ರದ ಸತ್ಯದರ್ಶನ ಮಾಡಿಸುವಂತಿದ್ದವು. ಇವತ್ತು ಸಾಹಿತ್ಯದ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸಬೇಕೆಂದರೆ ಅಂದು ಕಲಾವಿದರ ಉಪಸ್ಥಿತಿ ಅವಶ್ಯಕವೆನ್ನುವಂತಾಗಿ ಹೋಗಿದೆ. ಜನರಲ್ಲಿ ಓದುವ ಅಭಿರುಚಿಯೇ ಕ್ಷೀಣಿಸಿ ಹೋಗುತ್ತ ಮನರಂಜನೆಗೆ ಮಾತ್ರ ಸೀಮಿತಗೊಳ್ಳುತ್ತಿದ್ದಾರೆ.

ಇದು ಸಾಹಿತ್ಯದ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆಯಲ್ಲ. ಹಾಗಾದರೆ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಆಕರ್ಷಕವನ್ನಾಗಿ ಮಾಡಲು ಹಮ್ಮಿಕೊಳ್ಳ ಬೇಕಾದ ಕಾರ್ಯಕ್ರಮಗಳೇನು ಎಂಬುದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಬೇಕಿದೆ. ಗುಂಪುಗಾರಿಕೆಗಳಿಗೆ ಅವಕಾಶ ನೀಡದೆ ಪ್ರತಿಭೆಯನ್ನು ಮಾನದಂಡವನ್ನಾಗಿಟ್ಟುಕೊಂಡು ಹೆಚ್ಚೆಚ್ಚು ಕಾದಂಬರಿಯಾಧಾರಿತ ಧಾರಾವಾಹಿಗಳು, ಚಲನಚಿತ್ರಗಳ ನಿರ್ಮಾಣವಾಗಬೇಕಿದೆ. ಇದರಿಂದಾಗಿ ಕಲೆ-ಸಂಸ್ಕೃತಿ-ಸಾಹಿತ್ಯದ ಮೂಲಕ ಭಾಷೆ ಇನ್ನಷ್ಟು ಶ್ರೀಮಂತವಾಗುವುದರಲ್ಲಿ ಸಂಶಯವೇ ಇಲ್ಲ.

ನೃಪತುಂಗನ ಕಾಲದಲ್ಲಿ ಸಾಮ್ರಾಜ್ಯ ಭಾಷೆಯಾಗಿದ್ದ ಕನ್ನಡವನ್ನು ಮುಂದಿನ ಪೀಳಿಗೆಯವರಿಗೆ ಸರಿಯಾಗಿ ದಾಟಿಸದಿದ್ದರೆ ಮುಂದೆ ಅದನ್ನು ಮ್ಯೂಸಿಯಂನಲ್ಲಿ ನೋಡಬೇಕಾದಂಥ ಕಾಲ ಬರುತ್ತದೆ ಎಂದು ಕನ್ನಡವನ್ನೇ ಉಸಿರಾಗಿಸಿಕೊಂಡು ಕನ್ನಡಕ್ಕಾಗಿ ಹೋರಾಡುತ್ತಿರುವ ಸಾಹಿತಿ ಶಶಿಕಲಾ ವಸದ ಅವರು ಅಭಿಪ್ರಾಯ ಪಡುತ್ತಾರೆ. ಇಷ್ಟೆಲ್ಲ ಕೊಟ್ಟ ಭಾಷೆಯನ್ನು ಅರಿಯದೇ, ಕಲಿಯಲು ಇಚ್ಛಿಸದೇ ಆಂಗ್ಲಭಾಷಾ ವ್ಯಾಮೋಹಕ್ಕೆ
ಒಳಗಾಗುವ ಬದಲು ಒಂದಷ್ಟು ಸಮಯವನ್ನು ಕನ್ನಡಭಾಷೆಗಾಗಿ ಮೀಸಲಿಡಿ. ಬ್ಯಾಂಕುಗಳಲ್ಲಿ ಕನ್ನಡದ ವ್ಯವಹರಿಸಿ, ಮಕ್ಕಳಿಗೆ ಕನ್ನಡ ಮಹತ್ವವನ್ನು
ತಿಳಿಸಿಕೊಡಿ. ಅನ್ಯಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡಿ ಎಂದು ಹೇಳುತ್ತಾ ತಮ್ಮ ಕನ್ನಡ ಪ್ರೇಮವನ್ನು ಹೇಳುವುದಕ್ಕಷ್ಟೇ ಸೀಮಿತಗೊಳಿಸದೆ ನಡೆದಂತೆ ನುಡಿಯುತ್ತಾ ಆದರ್ಶಪ್ರಿಯರಾಗಿದ್ದಾರೆ.

ಒಂದು ದೇಶದ ಜಾಗೃತ ಪ್ರಜ್ಞೆಯಂತಿರುವ ಸಾಹಿತ್ಯಕ್ಷೇತ್ರ ಕೂಡ ಧರ್ಮ – ರಾಜಕಾರಣದ ಬಿಗಿಮುಷ್ಠಿಯಲ್ಲಿ ಸಿಲುಕಿ, ಅಧಿಕಾರ-ಪ್ರಶಸ್ತಿಗಳ ಸ್ವಾರ್ಥ ದಿಂದ ತನ್ನ ದನಿಯನ್ನು ಕಳೆದುಕೊಂಡಿದೆಯೇ ಎಂದು ಪ್ರಶ್ನಿಸಿದ ಚಿಂತಕ, ಲೇಖಕ, ಸಂಶೋಧಕ, ಸಂಘಟಕ ಡಾ. ಬೈರ ಮಂಗಲ ರಾಮೇಗೌಡರ ಮಾತು ಮಾರ್ಮಿಕವಾಗಿತ್ತು. ಇಷ್ಟೆಲ್ಲ ಮಾತುಗಳನ್ನು ಆಲಿಸಿದ ನಂತರ ಮನದಲ್ಲಿ ಉಳಿದ ಮಾತುಗಳೆಷ್ಟು ಎಂಬ ಮನ ಮಂಥನದಲ್ಲಿ ನನ್ನ ನಿಲುಕಿದ ದಕ್ಕಿದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ.

ಗಾರ್ಡನ್ ಸಿಟಿ, ಹೈಟೆಕ್ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ಕರೆಸಿಕೊಳ್ಳುತ್ತಾ ಜನಸಾಗರವನ್ನೇ ತನ್ನ ತೆಕ್ಕೆಗೆಳೆದುಕೊಳ್ಳುತ್ತಾ ಬೃಹತ್ ಬೆಂಗಳೂರಾಗಿ ಬೆಳೆಯುತ್ತಿರುವ ಮಹಾನಗರಿ ಸಮಸ್ಯೆಗಳನ್ನೂ ಅಷ್ಟೇ ಪ್ರಮಾಣದಲ್ಲಿ ತನ್ನೊಡಲಲ್ಲಿ ಹುದುಗಿಸಿಕೊಳ್ಳುತ್ತಿದೆ. ಇಂಗ್ಲಿಷ್ ಬರುವುದಿಲ್ಲವೆಂದು ಇನೀರಿ ಯರ್ ಆಗದೆ ನಮ್ಮ ಭಾಷೆ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುತ್ತಾ, ಕಲಿಸುತ್ತಾ, ಉಳಿಸುವ ಪ್ರಕ್ರಿಯೆಯಲ್ಲಿ ಇರಲಿ ನಮ್ಮದೂ ಒಂದು ಅಳಿಲ ಸೇವೆ ಅಲ್ಲವೇ?

error: Content is protected !!