Thursday, 12th December 2024

ರೆಪೊ ದರ ಯಥಾಸ್ಥಿತಿ: ಜಾಣ್ಮೆಯ ನಡೆ

ವಾಣಿಜ್ಯ ವಿಭಾಗ

ಡಾ.ಎ.ಜಯಕುಮಾರ ಶೆಟ್ಟಿ

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಪಿ) ಸತತ ಏಳನೇ ಬಾರಿಗೆ ರೆಪೊ ದರವನ್ನು ಬದಲಾಯಿಸದಿರಲು ನಿರ್ಧರಿಸಿದೆ. ಆರ್‌ಬಿಐನ ಗವರ್ನರ್ ಶಕ್ತಿ ಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಪರಾ ಮರ್ಶೆ ಸಮಿತಿಯು ಮೊನ್ನೆ ಶುಕ್ರವಾರ ಮುಕ್ತಾಯಗೊಂಡ ೨೦೨೪-೨೫ರ ಪ್ರಥಮ ಸಭೆಯಲ್ಲಿ ರೆಪೊ ದರವನ್ನು ಶೇ.೬.೫ರಲ್ಲಿ ಉಳಿಸಿ ಕೊಳ್ಳಲು ನಿರ್ಧರಿಸಿದೆ.

ರೆಪೊ ದರ ಎಂದರೇನು?: ರೆಪೊ ದರವು, ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಹಣದ ಕೊರತೆಯ ಸಂದರ್ಭದಲ್ಲಿ ಬ್ಯಾಂಕುಗಳಿಗೆ ಹಣವನ್ನು ಸಾಲವಾಗಿ ನೀಡು ವಾಗಿನ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊದರವನ್ನು ಬಳಸುತ್ತಾರೆ. ಮಾರುಕಟ್ಟೆಯ ಬಡ್ಡಿ ದರವು ನೇರವಾಗಿ
ರೆಪೊ ದರವನ್ನು ಅವಲಂಬಿಸಿರುತ್ತದೆ. ರೆಪೊ ದರ ಹೆಚ್ಚಾದಾಗ, ವಾಣಿಜ್ಯ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕ್‌ನಿಂದ ಪಡೆಯುವ ಸಾಲವು ದುಬಾರಿಯಾ ಗುತ್ತದೆ. ಪ್ರತಿಯಾಗಿ, ವಾಣಿಜ್ಯ ಬ್ಯಾಂಕು ಗಳು ತಮ್ಮ ಸಾಲದ ದರಗಳನ್ನು ಹೆಚ್ಚಿಸುತ್ತವೆ.

ಹೀಗಾಗಿ, ಸಾಮಾನ್ಯ ಜನರು ವಾಣಿಜ್ಯ ಬ್ಯಾಂಕುಗಳಿಂದ ಸಾಲವನ್ನು ಪಡೆದಾಗ, ಪರಿಣಾಮಕಾರಿ ಬಡ್ಡಿ ದರವು ಹೆಚ್ಚಾಗುತ್ತದೆ ಮತ್ತು ಅವರು ಪಡೆದ
ಸಾಲಕ್ಕೆ ಹೆಚ್ಚಿನ ಬಡ್ಡಿ ಮೊತ್ತವನ್ನು ಪಾವತಿಸ ಬೇಕಾಗುತ್ತದೆ. ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರೀಯ ಬ್ಯಾಂಕ್ ರೆಪೊ ದರವನ್ನು ಹೆಚ್ಚಿಸುವ ಮೂಲಕ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕ್‌ನಿಂದ ಸಾಲ ಪಡೆಯಲು ಹಿಂಜರಿಯುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಆರ್ಥಿಕತೆಯಲ್ಲಿ ಹಣದ ಪೂರೈಕೆಯು ಕಡಿಮೆಯಾಗಿ ಹಣದುಬ್ಬರವನ್ನು ತಡೆಯಲು ಅದು ಸಹಾಯ ಮಾಡುತ್ತದೆ.

ಹಣದುಬ್ಬರದ ಒತ್ತಡದ ಕುಸಿತದ ಸಂದರ್ಭದಲ್ಲಿ ಕೇಂದ್ರೀಯ ಬ್ಯಾಂಕು ರೆಪೊ ದರವನ್ನು ತಗ್ಗಿಸಿ ಬ್ಯಾಂಕುಗಳು ಸಾಲ ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತದೆ.
ಪರಿಣಾಮವಾಗಿ ದ್ರವ್ಯತೆಯ (ಲಿಕ್ವಿಡಿಟಿಯ) ಪ್ರಮಾಣ ಹೆಚ್ಚಿ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುತ್ತವೆ.

ಏರುತ್ತಿರುವ ತಾಪಮಾನ ಮತ್ತು ಹಣದುಬ್ಬರ: ಏರುತ್ತಿರುವ ತಾಪಮಾನದ ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಚಿಲ್ಲರೆ ಹಣದುಬ್ಬರ ವನ್ನು ಶೇ.೪ರ ಗಡಿಯಲ್ಲಿರಿಸುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ ಫೆಬ್ರವರಿ ತಿಂಗಳಿನಲ್ಲಿ ಆಹಾರ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ
ಚಿಲ್ಲರೆ ಹಣದುಬ್ಬರವು ಶೇ.೫.೧ರಷ್ಟು ದಾಖಲಾಗಿದೆ. ಆಹಾರ ಹಣದುಬ್ಬರವು ಶೇ.೮.೬೬ರಷ್ಟಿದೆ. ದೇಶದೆಲ್ಲೆಡೆ ತಾಪಮಾನ ಅಧಿಕ ವಾಗಿದೆ. ಇದರಿಂದಾಗಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಲಿದೆ. ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ.೪.೫ರಷ್ಟು ಇರಲಿದೆ ಎಂದು ಹಣಕಾಸು ನೀತಿ ಸಮಿತಿ ಅಂದಾಜಿ ಸಿದೆ. ಚಿಲ್ಲರೆ ಹಣದುಬ್ಬರವು ಏರಿಕೆಯಾಗುವ ಸಾಧ್ಯತೆಯಿರು ವುದರಿಂದ ಬಡ್ಡಿದರದಲ್ಲಿ ಬದಲಾವಣೆಗೆ ಕೇಂದ್ರೀಯ ಬ್ಯಾಂಕ್ ಮುಂದಾಗಿಲ್ಲ.

ಸ್ಥಿರತೆ ಮತ್ತು ಆರ್ಥಿಕ ಪ್ರಗತಿಗೆ ಒತ್ತು: ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಬಡ್ಡಿದರದಲ್ಲಿನ ಬದಲಾವಣೆಯು ಪ್ರಗತಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಪ್ರಗತಿ ಮತ್ತು ಸ್ಥಿರತೆಗೆ ಹೆಚ್ಚಿನ ಒತ್ತನ್ನು ನೀಡುವ ದೃಷ್ಟಿಯಿಂದ ರೆಪೋ
ದರವನ್ನು ಬದಲಿಸದಿರಲು ಆರ್‌ಬಿಐ ನಿರ್ಧರಿಸಿದೆ. ಈ ನಿರ್ಧಾರ ಪ್ರಕಟಿಸಿದ ಬಳಿಕ ಷೇರು ಮಾರುಕಟ್ಟೆಯೂ ಸಕಾರಾತ್ಮಕವಾಗಿ ಸ್ಪಂದಿಸಿ ಚೇತರಿಕೆಯನ್ನು ಕಂಡಿದೆ.

ಇದು ಬಡ್ಡಿದರಗಳನ್ನು ಸ್ಥಿರಗೊಳಿಸುತ್ತದೆ ಮತ್ತು ಸಾಲದ ಬೇಡಿಕೆಗಳನ್ನು ಉತ್ತೇಜಿಸುತ್ತದೆ. ಗೃಹಸಾಲದ ಬಡ್ಡಿದರಗಳು ಸ್ಥಿರ ವಾಗಿ ಉಳಿಯುವುದರಿಂದ ರಿಯಲ್ ಎಸ್ಟೇಟ್ ವಲಯವೂ ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿದೆ. ಹಣದುಬ್ಬರ, ಬೆಳವಣಿಗೆ ಅಥವಾ ಜಾಗತಿಕ ಚಂಚಲತೆಯಲ್ಲಿ ಗಮನಾರ್ಹ ಬದಲಾವಣೆಗಳಿಲ್ಲದಿದ್ದರೆ, ದರಗಳು ವಿಸ್ತೃತ ಅವಽಯವರೆಗೆ ಸ್ಥಿರವಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಆರ್‌ಬಿಐ ರೆಪೊ ದರವನ್ನು ಯಥಾಸ್ಥಿತಿಯಲ್ಲಿಟ್ಟಿರುವುದು ಹಣಕಾಸಿನ ಸ್ಥಿರತೆಗೆ ಧಕ್ಕೆಯಾಗದಂತೆ ಹಣದುಬ್ಬರವನ್ನು ನಿಯಂತ್ರಣದಲ್ಲಿ ಡುವ ತನ್ನ ನಿಲುವನ್ನು ಸೂಚಿಸುತ್ತದೆ. ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ಖಚಿತಪಡಿಸುವ ನಿರ್ಧಾರಗಳು ಸ್ವಾಗತಾರ್ಹ.

ಹಣದುಬ್ಬರ ನಿಯಂತ್ರಣಕ್ಕೆ ಹಣದ ಹರಿವಿನ ಇಳಿಕೆ: ವಿವಿಧ ಆರ್ಥಿಕ ತಜ್ಞರು ಮತ್ತು ರೇಟಿಂಗ್ ಏಜೆನ್ಸಿಗಳು ಈ ಬಾರಿಯೂ ರೆಪೊ ದರದಲ್ಲಿ ಬದಲಾವಣೆ ಮಾಡದೆ ಇರುವ ಸಾಧ್ಯತೆಯನ್ನು ನಿರೀಕ್ಷಿಸಿದ್ದವು. ಸತತ ಏಳನೇ ಬಾರಿಗೆ ರೆಪೊ ದರ ಬದಲಾವಣೆ ಆಗಿಲ್ಲ. ಹೆಚ್ಚಿನ ರೆಪೊ ದರವು ವಾಣಿಜ್ಯ ಬ್ಯಾಂಕುಗಳ ಎರವಲು
ಶಕ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ಮಾರುಕಟ್ಟೆಯಲ್ಲಿ ನಗದಿನ ಹರಿವನ್ನು ಕಡಿಮೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾದಂತೆ ಬೇಡಿಕೆಯು ಇಳಿಮುಖವಾಗಿ ಬೆಲೆಗಳ ಮಟ್ಟವೂ ಇಳಿಮುಖವಾಗುತ್ತದೆ. ಹೀಗೆ ಹಣದುಬ್ಬರವನ್ನು ನಿಯಂತ್ರಿಸಲು ರೆಪೊ ದರವನ್ನು ಹೆಚ್ಚಿಸಲಾ
ಗುತ್ತದೆ. ಹಣದುಬ್ಬರ ಹೆಚ್ಚಳ ನಿಯಂತ್ರಿಸಲು ರೆಪೊ ದರ ಹೆಚ್ಚಿಸುವುದು ವಾಡಿಕೆ.

ಇದರ ಜತೆಗೆ, ಹಣದ ಹರಿವನ್ನು ಸಂಕುಚಿತ ಗೊಳಿಸುವ (UಜಿಠಿebZಡಿZ ಟ್ಛ ಅಟಞಞಟbZಠಿಜಿಟ್ಞ) ಕ್ರಮದ ತಂತ್ರವೂ ಇದೆ. ಇದು ಬ್ಯಾಂಕುಗಳ ಬಳಿ ಸಾಲ ನೀಡಲು ಹೆಚ್ಚಿನ ಫಂಡಿಂಗ್ ಇಲ್ಲದಂತೆ ಮಾಡುವ ಒಂದು ವಿಧಾನ. ಇದರಿಂದ ಹಣದುಬ್ಬರ ಕಡಿಮೆ ಆಗುಬಹುದು ಎಂಬುದೊಂದು ಲೆಕ್ಕಾಚಾರ. ಹಣದ ಹರಿವನ್ನು ಸಂಕುಚಿತಗೊಳಿಸುವ ಕ್ರಮವನ್ನೂ ಆರ್‌ಬಿಐ ಮುಂದುವರಿಸಲಿದೆ.

ಸ್ಥಿರ ರೆಪೊ ದರದ ಆಶಯ: ಆರ್‌ಬಿಐ ತನ್ನ ಪ್ರಮುಖ ಸಾಲದ ದರಗಳನ್ನು ನಿರೀಕ್ಷಿತವಾಗಿ ಸತತ ಏಳನೇ ಬಾರಿಗೆ ಬದಲಾಯಿಸದೆ ಬಿಟ್ಟಿದೆ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ವೇಗದ ಬೆಳವಣಿಗೆಯನ್ನು ಊಹಿಸಿದೆ. ಪ್ರಮುಖ ಹಣದುಬ್ಬರವು ವಿಶಾಲವಾಗಿ ಕುಸಿಯುತ್ತಿರು ವಾಗ, ಆಹಾರ ಹಣದುಬ್ಬರದ ಅಪಾಯಗಳು ಮುಂದುವರಿಯುವ ಸಾಧ್ಯತೆಗಳಿವೆ. ಕ್ರೆಡಿಟ್ ನೀತಿಯ ಗಮನವು ಬೆಲೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಉಳಿದಿರುವ ಕಾರಣ ಹೂಡಿಕೆದಾರರು, ಸಾಲಗಾರರು ಮತ್ತು ಗ್ರಾಹಕರಿಗೆ ಹೆಚ್ಚಿನ ವಿಶ್ವಾಸವನ್ನು ತರುವಂಥ ನಿಲುವುಗಳಿಗಾಗಿ ಜಾಗತಿಕ ಮತ್ತು ದೇಶೀಯ ಘಟನೆಗಳ ಮೇಲೆ ಇದುವರೆಗೆ ಜಾಗರೂಕ ಕಣ್ಣಿಟ್ಟಿದೆ.

ಸ್ಥಿರವಾದ ಸಾಲದ ದರವು ಹೂಡಿಕೆಗಳನ್ನು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನಮ್ಮ ಸಮಾನ ಮಾಸಿಕ ಕಂತುಗಳ (ಇಎಂಐ) ಮೇಲೆ ಇದು ತಕ್ಷಣದ ಪರಿಣಾಮ ಬೀರು ವುದಿಲ್ಲ ಎಂದು ಅಸ್ತಿತ್ವದಲ್ಲಿರುವ ಸಾಲಗಾರರು ಖುಷಿಪಟ್ಟರೆ, ನಿರೀಕ್ಷಿತ ಮನೆ ಖರೀದಿದಾರರು ಸ್ಥಿರವಾದ ರೆಪೊ ದರದಲ್ಲಿ ತಕ್ಷಣಕ್ಕೆ
ದರ ಏರಿಕೆಯ ಬೆದರಿಕೆಯಿಲ್ಲದೆ ತಮ್ಮ ಹೂಡಿಕೆಗಳನ್ನು ಯೋಜಿಸಲು ಇದು ಅವಕಾಶ ನೀಡುತ್ತದೆ.

ಎಚ್ಚರಿಕೆಯ ಹಾಗೂ ದೂರದೃಷ್ಟಿಯ ನಿರ್ಧಾರ: ವಿಶ್ವದ ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಆಶಾದಾಯಕ ವಾಗಿಯೇ ಇದೆ. ವಿಶ್ವಬ್ಯಾಂಕ್, ಐಎಂಎ- ಸೇರಿದಂತೆ ಜಾಗತಿಕ ಸಂಸ್ಥೆಗಳು ಭಾರತದ ಆರ್ಥಿಕತೆ ಆಶಾದಾಯಕವಾಗಿದೆ ಎಂದೇ ಮುನ್ನೋಟವನ್ನು ನೀಡಿವೆ. ಹಣದುಬ್ಬರದ ಸೂಕ್ತ ನಿಯಂತ್ರಣ, ವಿಶ್ವಾಸಾರ್ಹ ಹಣಕಾಸು ನೀತಿಯ ಕ್ರಮಗಳಿಂದ ಬೇಡಿಕೆಯನ್ನು ಖಚಿತಪಡಿಸಿಕೊಳ್ಳಲು ಹಣದ ಹರಿವು, ವ್ಯಾಪಾರ ನೀತಿ ಮತ್ತು ಸೂಕ್ತ ಆಡಳಿತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಕೇಂದ್ರೀಯ ಬ್ಯಾಂಕು ತನ್ನ ಗಮನವನ್ನು ಮುಂದುವರಿಸಿದೆ. ಆರ್‌ಬಿಐ ಅನುಸರಿಸುವ ಸ್ಥಿರ ಹಣಕಾಸು ನೀತಿಯು ಉದ್ಯಮಕ್ಕೆ ಉತ್ತೇಜನವನ್ನು ನೀಡುವು
ದರಲ್ಲಿ ಸಂದೇಹ ಇಲ್ಲ. ಆರ್ಥಿಕವಾಗಿ ಸದೃಢ ರಾಷ್ಟ್ರವಾಗಿ ಮುಂದುವರಿಯುತ್ತಿರುವ ಭಾರತವು ಯಾವುದೇ ಒಂದು ಪ್ರತಿಗಾಮಿ ನಿರ್ಧಾರ ತೆಗೆದು ಕೊಂಡರೂ ಅದು ಆರ್ಥಿಕತೆಗೆ ನೇರಹೊಡೆತ ನೀಡುವ ಸಾಧ್ಯತೆ ಇದೆ. ಆದ್ದರಿಂದ ಬೆಳವಣಿಗೆಗೆ ಅಡ್ಡಿಯಾಗದಂತೆ ಹಣದುಬ್ಬರದ ನಿಯಂತ್ರಣ ಮಾಡುವ ಕೇಂದ್ರೀಯ ಬ್ಯಾಂಕಿನ ಹೊಣೆಯರಿತ ಚಾಣಾಕ್ಷ ನಡೆಗಳು ಹಣಕಾಸು ಮಾರುಕಟ್ಟೆಯ ಸ್ಥಿರತೆಗೂ ಪೂರಕವಾಗಿದೆ.

(ಲೇಖಕರು ನಿವೃತ್ತ ಪ್ರಾಂಶುಪಾಲರು
ಹಾಗೂ ಅರ್ಥಶಾಸ ಪ್ರಾಧ್ಯಾಪಕರು)