Saturday, 14th December 2024

ಮೀಸಲಾತಿ ಪರಾಮರ್ಶೆಗೆ ಇದು ಸಕಾಲ

ಅವಲೋಕನ

ಚಂದ್ರಶೇಖರ ಬೇರಿಕೆ

ಬಾಲ್ಯದಲ್ಲಿ ನಾನು ನನ್ನ ತಾಯಿ ಜತೆ ಶಾಲಾ ರಜಾ ದಿನಗಳಂದು ಕೂಲಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾ ಯಿತು. ಹಾಗಾಗಿ ನಮ್ಮ ಮನೆಯಿಂದ 1 ಕಿ.ಮೀ ದೂರದಲ್ಲಿರುವ ನನ್ನ ಪ್ರೈಮರಿ ಶಾಲೆಯ ಪಕ್ಕದ ಬ್ರಾಹ್ಮಣರ ಮನೆಯ ತೋಟದಲ್ಲಿ ಕೆಲಸ ಮಾಡಲು ತಾಯಿ ಜತೆ ಹೋಗುತ್ತಿದ್ದೆ.

ನಮ್ಮಂತೆಯೇ ಅಲ್ಲಿಗೆ ಕೆಲಸಕ್ಕೆ ಬರುತ್ತಿದ್ದವರ ಪೈಕಿ ಯವರು ಕೆಲಸ ಮಾಡುವ ಮನೆಯಿಂದ ಕೂಗಳತೆ ದೂರದಲ್ಲಿರುವ ಅಡಿಕೆ ಮರದ ಗರಿ (ಸೋಗೆ)ಗಳಿಂದ ನಿರ್ಮಿಸಲಾಗಿದ್ದ ಒಂದು ಸಣ್ಣ ಮನೆಯಲ್ಲಿ ವಾಸವಿದ್ದರು. ಅವರು ತಮ್ಮ ಮನೆಯಲ್ಲಿ ಸುಮ್ಮನೆ
ಕೂರಲಾಗದೇ ಕೆಲಸಕ್ಕೆ ಬರುವವರಾಗಿರದೇವ ಅನಿವಾರ್ಯ ದುಡಿಮೆ ಮಾಡಬೇಕಾದ ಪರಿಸ್ಥಿತಿಯಿಂದ ಕೆಲಸಕ್ಕೆ ಬರುತ್ತಿದ್ದರು. ತೋಟದ ಕೆಲಸ ಅಂದ ಮೇಲೆ ಅಡಿಕೆ, ತೆಂಗಿನ ಕಾಯಿ ಹೆಕ್ಕುವುದು, ಅಡಿಕೆ ಸುಲಿಯುವುದು, ತೋಟದ ಕಳೆ ಕೀಳುವುದು, ಹಟ್ಟಿ
ಗೊಬ್ಬರವನ್ನು ಹೊತ್ತುಕೊಂಡು ಹೋಗಿ ಅಡಿಕೆ ಗಿಡಗಳಿಗೆ ಹಾಕುವುದು, ಹಸು ಕರುಗಳಿಗೆ ಹುಲ್ಲು ತರುವುದು ಇತ್ಯಾದಿ.

ಈ ಎಲ್ಲಾ ಕೆಲಸಗಳಲ್ಲಿ ನಮ್ಮ ಜತೆ ಅವರೂ ಸಮಾನ ಪಾಲುದಾರರು. ಸಹ ಕೆಲಸಗಾರರ ಜತೆಯೇ ಊಟ, ತಿಂಡಿ ಮಾಡು ತ್ತಿದ್ದರು. ಅವರ ಜೀವನ ನಿರ್ವಹಣೆ, ಮೂಲಭೂತ ಅಗತ್ಯಗಳ ಪೂರೈಕೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಅವರು ಈ ಕೂಲಿಯನ್ನೇ
ನೆಚ್ಚಿಕೊಂಡಿದ್ದರು. ಅವರ ಪರಿಸ್ಥಿತಿ ಎಷ್ಟು ಶೋಚನೀಯವಾಗಿತ್ತೆಂದರೆ ಅವರ ಕಷ್ಟಗಳ ಮುಂದೆ ನಮ್ಮ ದುಃಖಗಳನ್ನು ಮರೆಯುವಷ್ಟು. ಹಾಗೆಯೇ ಮತ್ತೊಂದು ಕುಟುಂಬ ಇದೇ ವ್ಯಾಪ್ತಿಯಲ್ಲಿ ಅವರಿಗಿಂತ ಕೆಳವರ್ಗ ದವರ ಒಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಜೀವನ ನಿರ್ವಹಣೆಗೆ ವಾಸದ ಮನೆಯ ಒಂದು ಭಾಗದಲ್ಲಿ ಚಿಕ್ಕದೊಂದು ಹೋಟೆಲ್ ನಡೆಸುತ್ತಿದ್ದರು. ಜಾತಿ ಕಟ್ಟುಪಾಡು ಗಳನ್ನು ಬಿಟ್ಟು ಎಲ್ಲಾ ಕೆಲಸಗಳನ್ನು ಸ್ವತಃ ಅವರೇ ಮಾಡುತ್ತಿದ್ದರು. ಸಾಕಷ್ಟು ಯಾತನೆಯನ್ನೂ ಅನುಭವಿಸಿದರು. ಅವರು ತಮ್ಮ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ಪರಿಶ್ರಮ ಪಟ್ಟರು. ಮುಂದೆ ಅವರ ಇಬ್ಬರು ಮಕ್ಕಳೂ ಶಿಕ್ಷಣ ಮುಂದುರಿಸಲು
ಬ್ಯಾಂಕಿನಿಂದ ಶೈಕ್ಷಣಿಕ ಸಾಲ ಪಡೆಯಬೇಕಾಯಿತು. ಆದರೆ ಆ ಎರಡೂ ಕುಟುಂಬ ಗಳು ಬಹಳ ಶೋಚನೀಯ ಪರಿಸ್ಥಿತಿ ಯಲ್ಲಿದ್ದರೂ ಸರಕಾರದ ಯಾವುದೇ ಸೌಲಭ್ಯಗಳಿಂದ ವಂಚಿತ ರಾಗಿದ್ದರು, ಯಾವುದೇ ಹಕ್ಕುಗಳಿಗೆ ಅನರ್ಹರಾಗಿದ್ದರು.

ಯಾಕೆಂದರೆ ಆ ಎರಡೂ ಕುಟುಂಬದವರು ಈ ಸಮಾಜದ ವರ್ಗ ವ್ಯವಸ್ಥೆಯ ಉನ್ನತ ಸ್ತರವಾದ ಬ್ರಾಹ್ಮಣ ಜಾತಿಗೆ ಸೇರಿದವರಾಗಿ ದ್ದರು. ಈ ಎರಡು ಚಿತ್ರಣಗಳು ನಾನು ಬಾಲ್ಯದಲ್ಲಿ ದಿನನಿತ್ಯ ಕಂಡ ಪ್ರತ್ಯಕ್ಷ ನಿದರ್ಶನಗಳಷ್ಟೇ. ಹಾಗಾಗಿ ಈ ಬರಹ ಬ್ರಾಹ್ಮಣರ ಪರವಾಗಿ ವಕಾಲತ್ತು ವಹಿಸುವುದ ಕ್ಕಾಗಲೀ ಅಥವಾ ಆ ವರ್ಗದವರನ್ನು ಓಲೈಕೆ ಮಾಡಿಕೊಳ್ಳುವುದಕ್ಕಾಗಿನ ಪ್ರಯತ್ನವಲ್ಲ. ಸಮಾಜದ ಉನ್ನತ ಸ್ತರದಲ್ಲಿ ಗುರುತಿಸಿಕೊಂಡ ಬ್ರಾಹ್ಮಣರ ಇಂತಹ ಪರಿಸ್ಥಿತಿ ಯವರು ಇದ್ದಾರೆ ಎಂದರೆ ಆ ವರ್ಗದ ನಂತರದ
ಸ್ತರದಲ್ಲಿ ಗುರುತಿಸಿಕೊಂಡಿರುವ ಇತರ ವರ್ಗದ ಜಾತಿಯವರಲ್ಲಿ ಇನ್ನೆಷ್ಟು ಶೋಚನೀಯ ಪರಿಸ್ಥಿತಿಯವರು ಮತ್ತು ಸೌಲಭ್ಯಗಳು ಹಾಗೂ ಹಕ್ಕುಗಳಿಂದ ವಂಚಿತ ರಾಗಿರುವವರು ಇರಬಹುದು ಎಂಬುದರ ಒಂದು ಕಲ್ಪನೆ ಮೂಡಿಸುವ ಸಲುವಾಗಿ ಆ ವರ್ಗದವ ರನ್ನು ಉದಾಹರಿಸ ಲಾಗಿದೆಯಷ್ಟೇ.

ಮೀಸಲಾತಿಯಲ್ಲಿ ಸಿಂಹ ಪಾಲನ್ನು ಪಡೆದ ಕೆಳವರ್ಗದಲ್ಲಿರುವ ಶ್ರೀಮಂತರ ಮನೆಯಲ್ಲಿ ಮೇಲ್ವರ್ಗದ ಬಡವರು ಕೆಲಸ ಮಾಡುವುದನ್ನು ಕಾಣಬಹುದು. ಕೆಳವರ್ಗದವರ ಪೈಕಿ ಕೆಲವರು ಐಷಾರಾಮಿ ಮನೆ, ಬಂಗಲೆ, ದುಬಾರಿ ಕಾರುಗಳನ್ನು
ಹೊಂದಿದವರಿದ್ದಾರೆ. ಕೆಲವರ ಮಕ್ಕಳು ಪ್ರತಿಷ್ಠಿತ ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ ಅಥವಾ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವವರಿದ್ದಾರೆ. ರಾಜಕೀಯವಾಗಿ ಮುನ್ನೆಲೆಗೆ ಬಂದ ಸಾಕಷ್ಟು ಜನರಿದ್ದಾರೆ.

ಪ್ರಭಾವಿ ಮತ್ತು ಪ್ರಮುಖ ಉನ್ನತ ಸರಕಾರಿ ಹುzಯಲ್ಲೂ ಇದ್ದಾರೆ. ಕೆಲವರು ಕೋಟಿ ಸಂಪತ್ತಿನ ಒಡೆಯರಾಗಿದ್ದಾರೆ. ಆದರೆ
ತದ್ವಿರುದ್ಧ ಸ್ಥಿತಿಗತಿಗಳ ನಿದರ್ಶನಗಳು ಮೇಲ್ವರ್ಗದ ಬಡ ಕುಟುಂಬಗಳಲ್ಲಿ ಕಾಣಬಹುದು. ಹಾಗಾದರೆ ಈಗ ಜಾರಿಯಲ್ಲಿರುವ ಮೀಸಲಾತಿ ನಿಯಮಗಳು ನ್ಯಾಯಬದ್ಧವೇ? ಒಂದು ಕಡೆ ಭಾರತ ಅಭಿವೃದ್ಧಿಶೀಲ ರಾಷ್ಟ್ರ ವೆಂಬುದನ್ನು ಜಾಗತಿಕ ವೇದಿಕೆ ಅನುಮೋದಿಸುತ್ತದೆ.

ಕೆಲವು ರಾಷ್ಟ್ರಗಳು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದೇ ಗುರುತಿಸುತ್ತದೆ. ಆದರೆ ಭಾರತದಲ್ಲಿ ಕೆಲವರು ಮಾತ್ರ ನಮ್ಮದು ಹಿಂದುಳಿದ ದೇಶ ಎಂಬುದನ್ನು ಸಾರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ಜಾತಿ ವ್ಯವಸ್ಥೆ ನಮ್ಮ ದೇಶಕ್ಕೆ ಒಂದು ದೊಡ್ಡ ತೊಡಕು. ಜಾತಿ ಸಂಘರ್ಷಗಳಿಂದಲೇ ನಾವು ನಿರೀಕ್ಷಿತ ಗುರಿಯನ್ನು ಸಾಧಿಸಲಾಗಿಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ನಾವು ಮೂಲಭೂತ ಸೌಕರ್ಯಗಳು, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಮುಂದುವರಿ ದರೂ ಮಾನಸಿಕವಾಗಿ ಅಭಿವೃದ್ಧಿ ಹೊಂದದ ಮನಸ್ಥಿತಿ ಯಲ್ಲಿದ್ದೇವೆ.

ಆದರೆ ಇಂತಹ ದರಿದ್ರ ಮಾನಸಿಕ ಮನಸ್ಥಿತಿಯನ್ನು ಬದಲಾಯಿಸುವುದು ದೇಶವನ್ನು ಅಭಿವೃದ್ಧಿಪಡಿಸುವುದಕ್ಕಿಂತಲೂ ಕಷ್ಟದ ಕೆಲಸ. ಪ್ರಸ್ತುತ ನಡೆಯುತ್ತಿರುವ ವಿವಿಧ ಜಾತಿ, ಸಮುದಾಯಗಳ ಮೀಸಲಾತಿಗಾಗಿನ ಹೋರಾಟವೇ ಹಾಸ್ಯಾಸ್ಪದ. ಪಂಚಮ ಸಾಲಿ, ಕುರುಬ, ವಾಲ್ಮೀಕಿ, ವೀರಶೈವ ಲಿಂಗಾಯತ, ಒಕ್ಕಲಿಗ, ಮಡಿವಾಳ, ಉಪ್ಪಾರ, ಈಡಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ
ಮುಂತಾದ ಸಮುದಾಯದವರ ಜಾತಿ ಆಧಾರಿತ ಸಲಾತಿ ಬೇಡಿಕೆ ಈಗಿನ ಕಾಲಘಟ್ಟಕ್ಕೆ ಅಪ್ರಸ್ತುತ ವೆನಿಸುತ್ತದೆ.

ಒಟ್ಟು ಮೀಸಲಾತಿ ಪ್ರಮಾಣ ಶೇಕಡಾ 50ಕ್ಕಿಂತ ಮೀರಬಾರದು ಎಂಬುದು ಸುಪ್ರಿಂ ಕೋರ್ಟ್ ತೀರ್ಪು. ಸಂವಿಧಾನ ರಚನಾ ಕಾಲಘಟ್ಟದ ಸನ್ನಿವೇಶಕ್ಕೆ ಅನುಗುಣವಾಗಿ ಕೆಲವೊಂದು ವರ್ಗಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲಕ್ಕೆತ್ತುವ
ಪ್ರಯತ್ನದ ಭಾಗವಾಗಿ ಮೀಸಲು ರೂಪಿಸಲಾಗಿತ್ತು. ಆದಾಗ್ಯೂ ಕೇವಲ 10 ವರ್ಷಗಳ ಅವಧಿಗೆ ಮೀಸಲು ರೂಪಿಸಿ ಆ ಅವಽಯಲ್ಲಿ ಸಂಬಂಧಪಟ್ಟ ವರ್ಗಗಳನ್ನು ತಳಹಂತದ ಪರಿಸ್ಥಿತಿ ಯಿಂದ ಮೇಲಕ್ಕೆತ್ತಿ ಸಂವಿಧಾನದಲ್ಲಿ ಅಳವಡಿಸಿಕೊಳ್ಳ ಲಾಗಿದ್ದ ಮೀಸಲಾತಿಯನ್ನು ಕೈ ಬಿಡಬೇಕಾಗಿತ್ತು. ಆ ಕಾಲಘಟ್ಟದಲ್ಲಿ ವರ್ಗಾಧಾರಿತ ಮೀಸಲಾತಿಯ ಅವಶ್ಯಕತೆಯೂ ಇತ್ತು. ಆದರೆ ಅದು ಈಗಿನ ಸನ್ನಿವೇಶಕ್ಕೆ ಸರಿ ಹೊಂದುವುದಿಲ್ಲ.

ಜಾತಿ, ವರ್ಗಗಳ ಆಧಾರದ ಮೇಲೆ ಮೀಸಲಾತಿ ರೂಪಿಸುವುದಕ್ಕಿಂತ ಆರ್ಥಿಕತೆ ಆಧಾರಿತ ಮೀಸಲಾತಿ ರೂಪಿಸಬೇಕು. ಎಲ್ಲಾ ಜಾತಿ, ಸಮುದಾಯ, ಮತ ಧರ್ಮಗಳಲ್ಲೂ ನಿರ್ಗತಿಕರು ಇzರೆ. ಮನುಷ್ಯರು ಮನುಷ್ಯತ್ವದ ಕಣ್ಣಿನಿಂದ ನೋಡಿದರೆ ಮೀಸಲಾತಿ
ಯಾರಿಗೆ ಮೀಸಲಾಗಬೇಕು ಎಂಬುದು ಅರ್ಥ ವಾಗುತ್ತದೆ. ಕೆಳವರ್ಗದವರ ಪೈಕಿ ಆರ್ಥಿಕವಾಗಿ ಸಬಲ ರಾದವರನ್ನು ಮೀಸಲಾತಿ ಯಿಂದ ಹೊರಗಿಟ್ಟು ಮೇಲ್ವರ್ಗದ ಬಡವರನ್ನು ಗುರುತಿಸಿ ಅವರನ್ನೂ ಮೇಲಕ್ಕೆತ್ತಲು ಪ್ರಯತ್ನಿಸಬೇಕು.

ಈಗಿನ ಜಾತಿ ಮತ್ತು ವರ್ಗ ಮೀಸಲಾತಿಯಡಿಯಲ್ಲಿ ಕೆಲವು ಪ್ರಕರಣಗಳಲ್ಲಿ ಕುಟುಂಬದ ಎಲ್ಲರೂ ಉನ್ನತ ಸರಕಾರಿ ಹುದ್ದೆ
ಯಲ್ಲಿದ್ದರೂ ಅವರ ಹಕ್ಕುಗಳು ಅಬಾಧಿತ. ಕೆಳಹಂತ ದವರನ್ನು ಮೇಲಕ್ಕೆತ್ತುವುದು ಎಂದರೆ ಅದಕ್ಕೊಂದು ಮಿತಿಯನ್ನೊಳ ಗೊಂಡ ಹಂತವಿಲ್ಲವೇ? ಇದು ಯಾವ ಬಗೆಯ ನ್ಯಾಯ ಎಂಬುದೇ ಅರ್ಥವಾಗುತ್ತಿಲ್ಲ. ಹಾಗಾದರೆ ಮೇಲ್ವರ್ಗದ ಬಡವರು ಮನುಷ್ಯ ರಲ್ಲವೇ? ಹೋಗಲಿ, ಕನಿಷ್ಠ ಪಕ್ಷ ಜಾತಿ ಮತ್ತು ವರ್ಗ ಆಧಾರಿತ ಮೀಸಲಾತಿ ಅಡಿಯಲ್ಲಿ ಸೌಲಭ್ಯಗಳನ್ನು ಪಡೆದು
ಮುಂದುವರೆದವರು ಆ ವರ್ಗದಲ್ಲಿ ಇನ್ನೂ ಹಿಂದುಳಿದವರಾಗಿಯೇ ಅಥವಾ ಕಡು ಬಡವರಾಗಿಯೇ ಉಳಿದಿರುವವರ ಶ್ರೇಯೋಭಿ ವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆಯೇ? ಅವರೊಳಗಡೆಯೇ ಸ್ವಾರ್ಥದ ಹೋರಾಟ ನಡೆಯುತ್ತಿಲ್ಲವೇ? ಮೀಸಲಾತಿಯನ್ನು ಒಂದು ಹಂತದವರೆಗೆ ಅನುಭವಿಸಿ ಇತರರಿಗೂ ಅವಕಾಶ ಮಾಡಿಕೊಡುವುದನ್ನು ಬಿಟ್ಟು ಜಾತಿಯೊಳಗಿನ
ಪ್ರಭಾವಿಗಳೇ ಸವಲತ್ತುಗಳನ್ನು ಯಥೇಚ್ಛವಾಗಿ ಅನುಭವಿಸಿದ ನಿದರ್ಶನಗಳಿಲ್ಲವೇ? ಜನರು ಸ್ವಇಚ್ಛೆಯಿಂದ ಮೀಸಲಾತಿ ತ್ಯಜಿಸುವುದು ನಮ್ಮ ದೇಶದಲ್ಲಿ ಅಸಂಭವ.

ಕ್ರೂರ ಮೃಗಗಳೂ ಕೂಡಾ ತನ್ನ ಹೊಟ್ಟೆ ತುಂಬಿದ ಬಳಿಕ ಭಕ್ಷಿಸುವುದನ್ನು ನಿಲ್ಲಿಸುತ್ತದೆ. ಆದರೆ ಬುದ್ಧಿಜೀವಿಗಳು ಎಂದು ಕರೆಯಿಸಿಕೊಂಡ ಮನುಷ್ಯರಿಗೆ ಹೊಟ್ಟೆ ತುಂಬಿದರೂ ತನ್ನ ದುರಾಸೆಯನ್ನು ಬಿಡಲಾರರು. ಪ್ರಾಣಿಗಳಾದರೂ ಹಂಚಿಕೊಂಡು
ತಿಂದಾವು. ಆದರೆ ಮನುಷ್ಯರು ಮಾತ್ರ ಸ್ವಾರ್ಥ ಬಿಡಲೊಲ್ಲರು.

ಇನ್ನು ಸ್ವಾಮೀಜಿಗಳನ್ನು, ಮಠಾಧಿಪತಿಗಳನ್ನು ಭಕ್ತಿ ಭಾವದಿಂದ ಕಾಣಬೇಕು ಎಂದು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಕೆಲವು ಸ್ವಾಮೀಜಿಗಳು, ಮಠಾಧಿಪತಿಗಳು ಅವಕಾಶವೇ ನೀಡುತ್ತಿಲ್ಲ. ಸೌಲಭ್ಯ, ಸವಲತ್ತುಗಳನ್ನು ಪಡೆದುಕೊಳ್ಳಲು ತನ್ನ ಸ್ಥಾನಮಾನ ಗಳನ್ನು ಬದಿಗಿಟ್ಟು ಯಾರು ಯಾವ ಹಂತಕ್ಕೆ ಇಳಿಯಲೂ ಸಿದ್ಧರು ಎಂಬುದಕ್ಕೆ ಈಗಿನ ಜಾತಿಯಾಧಾರಿತ ಮೀಸಲಾತಿ ಹೋರಾಟವನ್ನು ಪ್ರತಿನಿಧಿಸಿ ಮುಂದಾಳತ್ವ ವಹಿಸು ತ್ತಿರುವ ವಿವಿಧ ಸ್ವಾಮೀಜಿಗಳು ಮತ್ತು ಮಠಾಧಿಪತಿಗಳೇ ಸಾಕ್ಷಿ.

ಸ್ವಾಮೀಜಿಗಳ ಪೈಕಿ ಕೆಲವರು ಈಗ ಜಾತಿ, ಸಮುದಾಯಗಳಿಗಾಗಿನ ಮೀಸಲಾತಿ ಹೋರಾಟಗಾರ ರಾಗಿ ಮುಂದಾಳತ್ವ ವಹಿಸಿzರೆ. ಮೀಸಲಾತಿ ಸ್ವಾಮೀಜಿಗಳು ಅವರ ಜಾತಿ, ಸಮುದಾಯದ ಜನತೆಗಷ್ಟೇ ಮೀಸಲಾಗಿದ್ದಾರೆ ಹೊರತು ಸರ್ವರಿಗೂ ಸ್ವಾಮೀಜಿ ಗಳಾಗಿ ಅಲ್ಲ. ಮಠಾಧೀಪತಿಗಳು ಮೂಲ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣಾ ಕೈಂಕರ್ಯ ಗಳಿಂದ ವಿಮುಖರಾಗು ತ್ತಿದ್ದಾರೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ.

ಮಠಾಧಿಪತಿಗಳು ಸರ್ವಸ್ವವನ್ನೂ ತ್ಯಾಗ ಮಾಡಿ ಲೋಕ ಕಲ್ಯಾಣಕ್ಕಾಗಿ ಅಧ್ಯಾತ್ಮದ ಕಡೆಗೆ ಮುಖ ಮಾಡಿದವರು. ಧರ್ಮಗ್ರಂಥ ಗಳ ಸಾರವನ್ನು ಸಮಾಜಕ್ಕೆ ಮುಟ್ಟಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕಾದ ಮಹತ್ಕಾರ್ಯ ಅವರ ಮೇಲಿದೆ. ಅವರು ಸಮಾಜ ಸುಧಾರಕರೂ, ಸಮಾಜಕ್ಕೆ ಮಾರ್ಗದರ್ಶಕರೂ ಹೌದು. ಎಲ್ಲಾ ಜಾತಿ, ಸಮುದಾಯಗಳನ್ನು ಒಗ್ಗೂಡಿಸಿ ಸುಂದರ ಸಮಾಜ ಕಟ್ಟಬೇಕಾದ ಸ್ವಾಮೀಜಿಗಳು, ಮಠಾಧಿಪತಿಗಳು ಜಾತಿ ಹೋರಾಟಗಾರರಾಗಿರುವುದು ಅವರಿಗೆ ಶೋಭೆಯಲ್ಲ. ಮನುಷ್ಯತ್ವ ಮತ್ತು ಸಮಾನತೆ ಯನ್ನು ಸಾರಬೇಕಾದ ಸ್ವಾಮೀಜಿಗಳು ಸ್ವಜಾತಿ ಪ್ರೇಮವನ್ನು ಸಾರುತ್ತಿರು ವುದು ವಿಪರ್ಯಾಸ.

ಈಗ ಸರಕಾರದ ಭವಿಷ್ಯ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಂದ ನಿರ್ಧಾರವಾಗುತ್ತದೆ ಎಂದು ತಿಳಿದುಕೊಂಡರೆ ಬಹುಶಃ ತಪ್ಪಾಗಬಹುದು. ಚುನಾವಣಾ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಅಭ್ಯರ್ಥಿಗಳ ಗೆಲುವು, ಸರಕಾರದ ರಚನೆ, ಸರಕಾರವನ್ನು
ಉಳಿಸಿಕೊಳ್ಳುವುದು ಅಥವಾ ಬೇಡವೆಂದರೆ ಪತನಗೊಳಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುವವರು ಧಾರ್ಮಿಕ ಮುಖವಾಡ ಹೊತ್ತ ಕೆಲವು ರಾಜಕೀಯ ಸ್ವಾಮೀಜಿಗಳು. ಇದೆಲ್ಲವನ್ನೂ ಪುಷ್ಠೀಕರಿಸುವುದು ಆಯಾ ಸಂದರ್ಭಗಳಲ್ಲಿನ ಅವರ ಬ್ಲಾಕ್ಮೇಲ್ ಹೇಳಿಕೆ ಗಳು.

ಜಾತಿ, ಸಮುದಾಯದ ಸ್ವಾಮೀಜಿಗಳು ಮತ್ತು ಮಠಾಧಿಪತಿಗಳು ಜಾತಿಯಾಧಾರಿತ ಮೀಸಲಾತಿಗಾಗಿ ಹೋರಾಡುವ ಬದಲು ಆರ್ಥಿಕ ಅಸಮಾನತೆ ಹೋಗಲಾಡಿಸಲು ಎ ಜಾತಿ, ಸಮುದಾಯಗಳಲ್ಲಿನ ಸಬಲರನ್ನು ಹೊರಗಿಟ್ಟು ಆರ್ಥಿಕವಾಗಿ ದುರ್ಬಲ ರಾದವರನ್ನು, ಕಡು ಬಡತನದ ಪರಿಸ್ಥಿತಿಗಳನ್ನು ಎದುರಿಸುತ್ತಿರುವವರನ್ನು ಗುರುತಿಸಿ ಅವರ ಶ್ರೇಯೋಭಿ ವೃದ್ಧಿಗಾಗಿನ ಮೀಸಲಾತಿ ಗಾಗಿ ಹೋರಾಟ ಮಾಡಿದ್ದರೆ, ಧ್ವನಿ ಎತ್ತಿದ್ದರೆ ಖಂಡಿತವಾಗಿಯೂ ಸ್ವಾಮೀಜಿಗಳು ಮತ್ತು ಮಠಾಧಿಪತಿಗಳ ಗೌರವ ಇಮ್ಮಡಿಗೊಳ್ಳುತ್ತಿತ್ತು.

ಆದರೆ ಈಗ ಸ್ವಾಮೀಜಿಗಳು ಮತ್ತು ಮಠಾಧಿಪತಿಗಳು ಜಾತಿ ಮೀಸಲಾತಿಗಾಗಿನ ಹೋರಾಟಗಾರರಾಗಿ ರೂಪುಗೊಂಡಿದ್ದರಿಂದ ಅವರ ಬಗ್ಗೆ ಇದ್ದ ಗೌರವಕ್ಕೆ ಧಕ್ಕೆ ಯಾಗಿರುವುದು ಸುಳ್ಳಲ್ಲ. ಹೀಗಾಗಿ ಸ್ವಾಮೀಜಿಗಳಿಗೆ ಸೂಕ್ತ ಶಿಕ್ಷಣ ಕೊಟ್ಟು ತಿಳಿವಳಿಕೆ ತುಂಬಿ ಅವರನ್ನು ಪ್ರಬುದ್ಧರನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಈಗ ಅವರ ಅನುಯಾಯಿಗಳದ್ದಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಮೀಸಲಾತಿಯ ಹಂಚಿಕೆ ನ್ಯಾಯಬದ್ಧವಾಗಿಲ್ಲ ಎಂದೇ ಹೇಳಬಹುದು. ಜಾತಿಯ ಆಧಾರದಲ್ಲಿ ಆರ್ಥಿಕವಾಗಿ ಸಬಲರು ಅಥವಾ
ದುರ್ಬಲರು ಎಂಬ ವರ್ಗೀಕರಣವೇ ಮೂರ್ಖತನ.

ಹಾಗಾಗಿ ಆರ್ಥಿಕತೆ ಆಧಾರಿತ ಮೀಸಲಾತಿಗಾಗಿ ಪರಾಮರ್ಶೆ ನಡೆಸಲು ಇದು ಸಕಾಲ. ಮೀಸಲಾತಿಯ ನೈಜ ಆಶಯ ಈಡೇರ ಬೇಕಾದರೆ ಆರ್ಥಿಕ ಆಧಾರಿತ ಮೀಸಲಾತಿಗಾಗಿ ಜಾತಿ ಆಧಾರಿತ ವ್ಯವಸ್ಥೆಗೆ ತಿಲಾಂಜಲಿ ನೀಡಿ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಪಾರದರ್ಶಕ ಪ್ರಕ್ರಿಯೆಗಳ ಮೂಲಕ ಎಲ್ಲಾ ಜಾತಿ, ಸಮುದಾಯ ಹಾಗೂ ಮತ ಧರ್ಮಗಳ ಅರ್ಹ ಫಲಾನುಭವಿಗಳನ್ನು
ಆಯ್ಕೆ ಮಾಡುವಂತಾಗಬೇಕು. ಆರ್ಥಿಕವಾಗಿ ಸಬಲ ರಾಗಿರುವವರನ್ನು ಮೀಸಲಾತಿಯಿಂದ ನಿರ್ದಾಕ್ಷಿಣ್ಯ ವಾಗಿ ಹೊರಗಿಡ  ಬೇಕು. ಅರ್ಥಾತ್ ಈಗಾಗಲೇ ಹೊಟ್ಟೆ ತುಂಬಿದವರಿಗೆ ತಿನ್ನಿಸುವುದನ್ನು ನಿಲ್ಲಿಸಿ ಹಸಿದವರಿಗೆ ಉಣಿಸುವ ಪ್ರಯತ್ನವಾಗಬೇಕು.

ಜಾತಿ ಮೀಸಲಾತಿ ಹೋರಾಟಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಜಾತಿಯಾಧಾರಿತ ಮೀಸಲಾತಿ ಹೋರಾಟದಿಂದ ಮುಂದೊಂದು ದಿನ ಜಾತಿಗಳ ನಡುವೆ ಸಂಘರ್ಷ
ನಡೆದು ಆಂತರಿಕ ಕ್ಷೋಭೆ ಉಂಟಾದರೂ ಅಚ್ಚರಿ ಪಡಬೇಕಾಗಿಲ್ಲ. ಇದನ್ನು ಸರಿದೂಗಿಸಲು ಮುಂದೊಂದು ದಿನ ಜಾತಿ ಮನಸ್ಥಿತಿಯಿಂದ ಹೊರತಾದ ಸಮಾನ ಮನಸ್ಕ ನಾಗರಿಕರು ದೇಶದ ಹಿತದೃಷ್ಟಿಯಿಂದ ಮೀಸಲಾತಿ ವಿರುದ್ಧ ಸಾಮಾಜಿಕ ಹೋರಾಟ ಮಾಡಬೇಕಾದ ಅನಿವಾರ್ಯತೆಯೂ ಎದುರಾಗ ಬಹುದು. ಆ ಸನ್ನಿವೇಶ ಸೃಷ್ಟಿಯಾಗದಿರಲಿ!.