ಅಭಿವ್ಯಕ್ತಿ
ಡಾ.ಚಿ.ನಾ.ರಾಮು
ನೂರು ವರ್ಷಗಳ ಹಿಂದೆ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಪರಿಕಲ್ಪನೆ ಉದಯವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತುಳಿತಕ್ಕೊಳಗಾದ ಸಮುದಾಯಗಳಿಗೆ ಮೀಸಲು ನೀಡಲು 1918ರಲ್ಲಿ ಮೈಸೂರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾಗಿದ್ದ ಸರ್ ಜಾನ್ ಲೆಸ್ಲಿ ಮಿಲ್ಲರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದರು.
ಈ ಸಮಿತಿ 1919ರಲ್ಲಿ ವರದಿ ನೀಡಿತು. ಅದರ ಪ್ರಕಾರ, ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ, ಉಳಿದೆಲ್ಲಾ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಘೋಷಣೆಯಾಯಿತು. 1921ರ ಮೇ ತಿಂಗಳಿನಿಂದ ಅದು ಕಾರ್ಯಗತ ಗೊಂಡಿತು. ಮುಂದೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಮೀಸಲಾತಿ ಪದ್ಧತಿ ಇಡೀ ದೇಶಕ್ಕೆ ವ್ಯಾಪಿಸಿತು.
1931ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಎರಡನೇ ದುಂಡುಮೇಜಿನ ಸಭೆಯಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ, ರಾಜಕೀಯ ಪ್ರತ್ಯೇಕತೆಗೆ ಪಟ್ಟು ಹಿಡಿದಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಪ್ರತ್ಯೇಕ ಚುನಾವಣಾ ಪದ್ಧತಿಗೆ ಬದಲಾಗಿ ಮೀಸಲಾತಿಗೆ
ಒಪ್ಪಿಸುವಲ್ಲಿ ಮಹಾತ್ಮ ಗಾಂಧಿ ಯಶಸ್ವಿಯಾಗಿದ್ದರು. ನಾಲ್ವಡಿ ಅವರ ಚಿಂತನೆಯಿಂದ ಪ್ರಭಾವಿತರಾಗಿದ್ದ ಗಾಂಧಿ, ಮೀಸಲಾತಿ ನೀತಿಯ ಬಗ್ಗೆ ಮಾಹಿತಿ ಪಡೆದಿದ್ದರು. ಮೈಸೂರು ರಾಜ್ಯದ ಈ ಪ್ರಯೋಗ ಕೊಲ್ಹಾಪುರ, ಮದ್ರಾಸ್, ಟ್ರಾವಂಕೂರ್, ಕೊಚ್ಚಿನ್
ಹಾಗೂ ಬಾಂಬೆ ಪ್ರಾಂತ್ಯದಲ್ಲಿ ಅನುಷ್ಠಾನಗೊಂಡು ಸಾಮಾಜಿಕ ನ್ಯಾಯದ ಪರಿಕಲ್ಪನೆ ಅರಳಿರುವುದನ್ನು ಅವರು ಕಣ್ಣಾರೆ ಕಂಡಿದ್ದರಿಂದ ಇದೇ ಸೂತ್ರವನ್ನು ಅಂಬೇಡ್ಕರ್ ಮುಂದಿಟ್ಟು ಪೂನಾ ಒಪ್ಪಂದದ ಮೂಲಕ ಅವರನ್ನು ಒಪ್ಪಿಸಿದ್ದರು.
ಹೀಗಾಗಿ ಮೀಸಲಾತಿ ಎನ್ನುವುದು ಒಂದು ನೀತಿಯಾಗಿ ಜಾರಿಗೊಂಡು ಶತಮಾನ ಕಳೆದಿದೆ. ಈ ನೂರು ವರ್ಷಗಳಲ್ಲಿ ಮೀಸಲು ಪದ್ಧತಿ ದಲಿತರನ್ನು ಸಬಲರನ್ನಾಗಿಸಿದೆಯೇ? ಹಿಂದುಳಿದವರು, ತುಳಿತ ಕ್ಕೊಳಗಾದ ಅಸ್ಪೃಶ್ಯರ ಸ್ಥಿತಿ ಸುಧಾರಣೆಯಾಗಿದೆಯೇ
ಎಂಬ ಪ್ರಶ್ನೆಗಳನ್ನು ಹಾಕಿಕೊಂಡರೆ ನಿಜಕ್ಕೂ ನಿರಾಶೆಯಾಗುತ್ತದೆ. ಸ್ವಾತಂತ್ರ್ಯೋತ್ತರದಲ್ಲಿ ಮೀಸಲಾತಿಗೆ ಏಳು ದಶಕ ಕಳೆದರೂ ಅಸಮಾನತೆಯ ಚಾದರ ಹೊದ್ದು ಮಲಗಿರುವ ದೇಶ ಅದರಿಂದ ಹೊರಬರಲು ಸಿದ್ಧವಿಲ್ಲ ಎಂಬ ಕಟು ಸತ್ಯದ ಅನಾವರಣ ವಾಗುತ್ತದೆ.
ಬಡವರನ್ನು ಬಡವರಾಗಿಯೇ ಉಳಿಸುವ, ದುರ್ಬಲರ ನೆತ್ತಿಯ ಮೇಲೆ ಕಾಲಿಟ್ಟು ಏಣಿಯಾಗಿ ಬಳಸಿಕೊಳ್ಳುವ ವ್ಯವಸ್ಥೆಯೊಂದು ರೂಪಗೊಂಡು ಸರ್ವವ್ಯಾಪಿಯಾಗಿ ಆವರಿಸಿದೆ ಎಂಬ ಭಾವನೆ ಕಾಡುತ್ತದೆ. ಮೀಸಲಾತಿ ವ್ಯವಸ್ಥೆಯ ಹುಳುಕುಗಳನ್ನು ಎತ್ತಿ
ಸಮಾಜದ ಮುಂದಿಡಲು ಹಾಗೂ ಪರಿಶಿಷ್ಟರ ಮೀಸಲಾತಿಯ ಕೆನೆಪದರ ತೆಗೆಯುವಂತೆ ಪ್ರತಿಪಾದಿಸುತ್ತ ನಾನು ಈ ವಿಚಾರದಲ್ಲಿ ಮೂರು ದಶಕಗಳಿಂದ ಹೋರಾಟ ನಡೆಸುತ್ತ ಬಂದಿದ್ದೇನೆ. ಅಂಬೇಡ್ಕರ್ ಅವರು ಹೇಳಿದ ‘ಮೀಸಲು ಸಮನಾಗಿ ಹಂಚಿ ತಿನ್ನಿ’ ಎನ್ನುವ ಸಂದೇಶಕ್ಕೆ ಬೆನ್ನು ಹಾಕಿ ಬಕಾಸುರರಂತೆ ಮತ್ತೆ ಮತ್ತೆ ಮೀಸಲು ಉಂಡ ಒಂದು ಬಲಿತ ದಲಿತ ವರ್ಗ ಹಾಗೂ ಸೌಲಭ್ಯಗಳಿಂದ ವಂಚಿತವಾಗಿ ಕೇರಿ ಕಾಲೋನಿಗಳಲ್ಲಿ ಕೊಳೆಯುತ್ತಿರುವ ಕಟ್ಟಕಡೆಯ ಇನ್ನೊಂದು ವರ್ಗದ ನಡುವಿನ ಭೂಮಿ
ಅಕಾಶದಷ್ಟು ಅಂತರವನ್ನು ಗಮನಿಸಿದ್ದೇನೆ.
ದಲಿತರ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶ ಸುತ್ತಿದ ನಮಗೆ ಸಾಮಾಜಿಕ ತಾರತಮ್ಯ, ಧ್ವನಿಯಿಲ್ಲ ದವರ ಶೋಷಣೆ, ಹಕ್ಕುಗಳ ಅತಿಕ್ರಮಣ ಗಾಢ ಅನುಭವಕ್ಕೆ ಬಂದಿದೆ. ರಾಜ್ಯದಿಂದ ರಾಜ್ಯಕ್ಕೆ ಪರಿಶಿಷ್ಟರ ಜಾತಿನಾಮ, ಜೀವನ ಶೈಲಿ, ಆಹಾರ ಸಂಸ್ಕೃತಿ, ಸಾಂಪ್ರದಾಯಿಕ ಮನಸ್ಥಿತಿಗಳು ಬೇರೆ ಬೇರೆಯಾದರೂ ಸಮಾಜೋ ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ
ಮಾತ್ರ ಏಕರೂಪದಲ್ಲಿದೆ.
ಕೆಲವೆಡೆ ತೀರಾ ಶೋಚನೀಯ ವೆನಿಸಿದರೆ, ಇನ್ನು ಕೆಲವೆಡೆ ನಿಕೃಷ್ಟವೆನಿಸಿದೆ. ಬಾಬಾ ಸಾಹೇಬರು ಕೊಟ್ಟ ಸಂವಿಧಾನ ಬದ್ಧ ಹಕ್ಕುಗಳು ಚೆಲ್ಲಾಪಿಲ್ಲಿಯಾಗಿವೆ ಎನಿಸುತ್ತದೆ. ಅಸ್ತವ್ಯಸ್ತವಾದ ಹಕ್ಕುಗಳು ಕೆಲವೇ ಜನರ ಕೈಗೆ ಸಿಕ್ಕಿರುವುದು ಸ್ಪಷ್ಟವಾಗಿ
ಗೋಚರಿಸುತ್ತದೆ. ದಕ್ಷಿಣ ಭಾರತಕ್ಕೆ ಹೋಲಿಸಿಕೊಂಡರೆ ಉತ್ತರ ಭಾರತದ ಪರಿಶಿಷ್ಟರ ಸ್ಥಿತಿಗತಿ ದಯನೀಯವಾಗಿದೆ. ಭಾರತಾಂಬೆಯ ಮುಕುಟಮಣಿ ಜಮ್ಮು-ಕಾಶ್ಮೀರದಿಂದ ಈಶಾನ್ಯ ಸೆರಗಿನ ಪಶ್ಚಿಮ ಬಂಗಾಳದವರೆಗೆ, ಗುಜರಾತ್ ಕರಾವಳಿ ತೀರದಿಂದ ಗಂಗೆಯ ಮಡಿಲು ಹಾದು ಬಿಹಾರದವರೆಗೆ ಸಂಚರಿಸಿದ ನಮಗೆ ದಲಿತರ ನಡುವಿನ ಎರಡು ಮುಖಗಳ ಸ್ಪಷ್ಟ
ಪರಿಚಯವಾಯಿತು.
ಒಂದು ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿ ಕತ್ತಲಲ್ಲೇ ಉಳಿದ ಕಪ್ಪುಮುಖ. ಮತ್ತೊಂದು ಎಲ್ಲವನ್ನೂ ಬಾಚಿ ತಿಂದು ಫಳಫಳನೆ ಹೊಳೆಯುವ ಮುಖ. ಇದು ಮುಖವಾಡವೆಂದರೂ ನಡೆದೀತು. ಮೀಸಲಾತಿಯ ಸವಲತ್ತು, ಸೌಕರ್ಯ ಸ್ವಾಹ ಮಾಡಿದ ಪರಿಶಿಷ್ಟ ಜಾತಿಯೊಳಗಿನ ಜನರೇ ಮುಖ್ಯವಾಹಿನಿ ತಲುಪಿ ಮುಖವಾಡ ಬದಲಿಸಿದ್ದಾರೆ. ಮೀಸಲಾತಿ ಹಕ್ಕುದಾರಿಕೆ
ಕತ್ತಲಲ್ಲಿ ಉಳಿದವರಿಗೆ ಬಿಟ್ಟುಕೊಡಲು ಈ ಜನ ಸಿದ್ಧರಿಲ್ಲ. ಉತ್ತರ ಭಾರತದ ದಲಿತರೊಳಗೆ ಅಳೆಯಲಾಗದಷ್ಟು ಅಂತರವಿದೆ.
ಪರಿಶಿಷ್ಟರ ಪಟ್ಟಿಯಲ್ಲಿರುವ ಕೆಲ ನಿರ್ದಿಷ್ಟ ಜಾತಿಗಳು ದುಬದುಬನೆ ಬೆಳೆದು ಮೇಲ್ವರ್ಗಗಳನ್ನು ಮೀರಿಸುವಷ್ಟರ ಮಟ್ಟಕ್ಕೆ ಏರಿವೆ. ಅದೇ ದಲಿತ ಗುಂಪಿನ ಕೆಲ ಜಾತಿಗಳ ಸ್ಥಿತಿ ಅತ್ಯಂತ ಹೀನಾಯವಾಗಿದೆ. ಕೆಲವು ಕಡೆ ದಲಿತರ ಕೇರಿ, ಕಾಲೋನಿಗಳಿಗೆ ಭೇಟಿ ನೀಡಿದಾಗ ತಮಗೆ ಮೀಸಲಾತಿ ಎಂಬುದೊಂದು ಹಕ್ಕು ನೀಡಲಾಗಿದೆ. ಅಂಬೇಡ್ಕರ್ ಎನ್ನುವ ಮಹಾನುಭಾವರೊಬ್ಬರು ನಮ್ಮ
ವಿಮೋಚನೆಗಾಗಿ ಹೋರಾಡಿದರು ಎಂಬ ಅರಿವು ಕೂಡಾ ಅಲ್ಲಿನ ಜನರಿಗಿಲ್ಲದ್ದು ಕಂಡು ಆಶ್ಚರ್ಯ, ಆತಂಕವಾಯಿತು.
ಬಿಹಾರದಂಥ ರಾಜ್ಯದಲ್ಲಿ ಮೀಸಲಾತಿಯಿಂದಲೇ ಬಲಾಢ್ಯಗೊಂಡ ಜಾತಿಗಳ ಆರ್ಭಟಕ್ಕೆ ಇತರ ಜಾತಿಗಳು ನಲುಗಿಹೋಗಿರು ವುದು ಗೋಚರವಾದರೆ ಮಹಾರಾಷ್ಟ್ರದಲ್ಲಿ ಮಹರ್ ಜಾತಿ ಮೇಲ್ವರ್ಗಕ್ಕಿಂತಲೂ ಒಂದು ಹೆಜ್ಜೆ ಮುಂದಾಗಿ ಬದುಕಿದರೂ ಮೀಸಲಾತಿಯನ್ನು ಕಬ್ಬಿನಂತೆ ಹಿಂಡಿ ಸವಿಯುತ್ತಿರುವುದು ಕಾಣಸಿಕ್ಕಿತು. ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ದಲಿತರ ಬದುಕನ್ನು ಅತ್ಯಂತ ಸಮೀಪದಿಂದ ಕಾಣುವ ಅವಕಾಶ ಮಾಡಿಕೊಂಡೆವು.
ಜಮ್ಮುವಿನ ಬಹು ಪೋರ್ಟ್ ಬಳಿಯ ಕಚಾ ತಲಾಬ್ ಮೊಹಲ್ಲಾದಲ್ಲಿ ಉಸಿರುಗಟ್ಟಿಸುವ ಓಣಿಯ ಗೂಡುಗಳಂಥ ಮನೆಗಳಲ್ಲಿ ಜನ ಬದುಕುವುದನ್ನು ಕಂಡೆವು. ಅವರಿಗೆ ಸರಕಾರದ ಯಾವ ಸವಲತ್ತುಗಳ ಸ್ಪರ್ಶಾನುಭವವು ಇರಲಿಲ್ಲ. ರೇಷನ್ ಕಾರ್ಡ್ಗಳು ಕೊಟ್ಟಿರಲಿಲ್ಲ. ಆದರೆ ವೋಟ್ ಕಾರ್ಡ್ ನೀಡಿ ಮತ ಬ್ಯಾಂಕ್ ಮಾಡಿಕೊಂಡಿದ್ದರು. ಸಲೀಸಾಗಿ ಒಂದು ಪುಟ್ಟ ವಾಹನ ಹೋಗ ಲಾರದಂಥ ಮುಖ್ಯರಸ್ತೆಗಳು, ಅದರೊಳಗಿನ ಕಿರು ಗಲ್ಲಿಗಳು, ಅವುಗಳಿಂದ ಟಿಸಿಲೊಡೆಯುತ್ತಿದ್ದ ಸಂದಿ ಗೊಂದಿಗಳ ಮನೆ ಯಲ್ಲದ ಮನೆಗಳಿಗೆ ನೀರು ಪೂರೈಕೆ, ಶೌಚಾಲಯವಿರಲಿ.
ಸರಾಗವಾಗಿ ಉಸಿರಾಡುವಷ್ಟು ಗಾಳಿ, ಬೆಳಕು ಕೂಡಾ ಬರುವಂತಿರಲಿಲ್ಲ. ‘ನಮ್ಮ ಬದುಕೇ ಹೀಗಿದೆ. ಇದಕ್ಕೇ ಹೊಂದಿಕೊಂಡಿ ದ್ದೇವೆ. ಸರಕಾರದ ಯಾವ ಸವಲತ್ತು ನಮಗೆ ತಲುಪಿಲ್ಲ’ ಎಂದರು ಅಲ್ಲಿನ ಜನ. ಇದಕ್ಕೆ ವ್ಯತಿರಿಕ್ತವಾದ ದೃಶ್ಯಗಳು ಅದೇ ಜಮ್ಮುವಿನ ಅನುಕೂಲಸ್ಥ ದಲಿತರ ಮನೆ ಸಾಲುಗಳಲ್ಲಿ ಕಂಡುಬಂದವು. ಮೀಸಲಾತಿ ಬಳಸಿಕೊಂಡು ಉನ್ನತ ಮಟ್ಟಕ್ಕೇರಿದ ಪರಿಶಿಷ್ಟರು ಅಲ್ಲಿನ ಮೇಲ್ವರ್ಗಗಳ ಜತೆ ವೈವಾಹಿಕ ಸಂಬಂಧಗಳನ್ನು ಏರ್ಪಡಿಸಿಕೊಂಡರೂ ಮೀಸಲಾತಿಯನ್ನು ಬಿಡದೆ
ಅನುಭವಿಸುತ್ತಿರುವ ಹಲವಾರು ಕತೆಗಳಿಗೂ ನಾವು ಕಿವಿಯಾದೆವು.
ಉತ್ತರ ಪ್ರದೇಶ ರಾಜ್ಯದ, ದೆಹಲಿಗೆ ತೀರಾ ಹತ್ತಿರವಿರುವ, ಸಮೃದ್ಧ ಕೃಷಿಯಿಂದ ನಳನಳಿಸುವ ಸಹರಾನ್ಪುರ ಸನಿಹದ ನಿತ್ಯಾನಂದ್ಪುರ್ ಸುತ್ತಮುತ್ತಲಿನ ದಲಿತರು ತಕ್ಕ ಮಟ್ಟಿಗೆ ಭೂ ಹಿಡುವಳಿದಾರರಾದರೂ ಸರಕಾರದ ಅನುಕೂಲಗಳೇನು
ಅವರಿಗೆ ಮುಟ್ಟಿಲ್ಲ. ‘ಶಿಕ್ಷಣವಿದ್ದರೂ ಉದ್ಯೋಗಗಳು ನಗರವಾಸಿ ದಲಿತರ ಪಾಲಾಗುತ್ತಿವೆ. ನಮ್ಮ ಕಾಲಕ್ಕೆ ಹೋಗಲಿ; ಮಕ್ಕಳೂ ಇಲ್ಲೇ ಕೊಳೆಯಬೇಕೇ’ ಎಂದವರು ಅದೇ ಗ್ರಾಮದ ಭೀಮನಾಥ್.
ಪಂಜಾಬ್ನ ಹೊಶೀಯಾರ್ಪುರ್, ಜಲಂಧರ್, ಲೂದಿಯಾನ ಭಾಗಗಳಲ್ಲಿ ಸಂಚರಿಸುತ್ತಾ ಅಲ್ಲಿನ ಪರಿಶಿಷ್ಟ ಜಾತಿಗಳ ವಾಸ್ತವ ಸ್ಥಿತಿಗತಿಗಳ ಅನ್ವೇಷಣೆ ಮಾಡಿದಾಗ ದಲಿತರಲ್ಲೇ ಇರುವ ಸ್ಪೃಶ್ಯ, ಅಸ್ಪೃಶ್ಯರ ನಡುವೆ ಭಾರೀ ಅಂತರ ಅನುಭವಕ್ಕೆ ಬಂತು. ಬಹುಜನರನ್ನು ಒಂದುಗೂಡಿಸಿ ರಾಜಕೀಯ ಶಕ್ತಿ ಹುಟ್ಟುಹಾಕಿದ ಕಾನ್ಶಿರಾಂ ಮೂಲತಃ ಪಂಜಾಬ್ನ ರೂಪ್ನಗರ್ ಜಿಲ್ಲೆಯವರು. ಅವರ ಸಹೋದರರು, ಬಂಧುಗಳ ಬದುಕು ಈಗಲೂ ಸುಧಾರಣೆಯಾಗದಿರುವುದನ್ನು ನಾವು ನೋಡಿದೆವು.
ಓಡ್, ರೈಸಿಖ್, ಪಾಸಿ, ಕೋಲಿ, ಕೋರಿಯಂತ ಜಾತಿಗಳು ದಕ್ಷಿಣ ಭಾರತದಲ್ಲಿ ಓಬಿಸಿಯಲ್ಲಿರುವ ಪ್ರಬಲ ಸಮುದಾಯಗಳ ಮಟ್ಟಕ್ಕೆ ಸಾಮಾಜಿಕ, ಆರ್ಥಿಕ ಸ್ಥಾನಮಾನ ಗಳಿಸಿರುವುದು ಕಂಡುಬಂತು. ಉತ್ತರ ಭಾರತದುದ್ದಕ್ಕೂ ನಮ್ಮ ಅರಿವಿಗೆ ಬಂದ ಮತ್ತೊಂದು ಸಂಗತಿ ಎಂದರೆ ಹಿಂದುಳಿದ ವರ್ಗ ಪಟ್ಟಿಯಲ್ಲಿರಬೇಕಾದ ಸಾಕಷ್ಟು ಅನುಕೂಲಸ್ಥ ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟರ ಜಾತಿ ಪಟ್ಟಿಗೆ ತಂದು ತುಂಬಿರುವುದು. ಇವೇ ಸಮುದಾಯಗಳು ಮೀಸಲಾತಿಗೆ ಬಲೆ ಬೀಸಿ ಕುಳಿತಿರುವುದರಿಂದ ಅಸ್ಪೃಶ್ಯರು ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ರಾಜಕೀಯ ಸ್ಥಾನಮಾನಗಳು ಇವರ ಸುತ್ತಲೇ ಗಿರಕಿ ಹೊಡೆಯುತ್ತಿವೆ.
ಬಿಹಾರದಲ್ಲಿ ಪಾಸ್ವಾನ್ಗಳು ಪರಿಶಿಷ್ಟ ಜಾತಿಗಳಲ್ಲಿಯೇ ಅತಿ ಹೆಚ್ಚಿನ ಪ್ರಗತಿ ಸಾಽಸಿರುವ ಜನ. ರಾಜಕಾರಣದಿಂದ ಹಿಡಿದು
ಸಾರ್ವಜನಿಕ ಸೇವೆಯವರೆಗೆ, ಉದ್ಯಮದಿಂದ ಹಿಡಿದು ವೈದ್ಯಕೀಯ ಲೋಕದವರೆಗೆ ಮೇಲ್ವರ್ಗದವರ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಉತ್ತರದ ಮೂರ್ನಾಲ್ಕು ರಾಜ್ಯಗಳಲ್ಲಿ ಮೀಸಲಾತಿಯ ಮೇಲೆ ಇವರದೇ ಅಲಿಖಿತ ಹಕ್ಕುದಾರಿಕೆ. ದುಸದ್ ಎಂತಲೂ ಕರೆಯಲಾಗುವ ಈ ಪಾಸ್ವಾನರು ಜಾರ್ಖಂಡ್, ಉತ್ತರಖಂಡ್, ಮಧ್ಯಪ್ರದೇಶ್, ಪಶ್ಚಿಮ ಬಂಗಾಳದವರೆಗೂ ಹಬ್ಬಿದ್ದಾರೆ.
ಬಿಹಾರದಲ್ಲಿ ಅತ್ಯಂತ ಪ್ರಬಲರಾಗಿದ್ದಾರೆ. ಬುದ್ಧನ ನಾಡಿನ ಹರಿಜನರ ನಡುವೆ ಅನೇಕ ವೈರುಧ್ಯಗಳಿವೆ. ಉತ್ತರ ಪ್ರದೇಶದ ನಂತರ ದಲಿತ ನಾಯಕತ್ವ ಪ್ರಬಲವಾಗಿ ಬೆಳೆದು ರಾಷ್ಟ್ರ ರಾಜಕಾರಣವನ್ನು ನಿಯಂತ್ರಿಸುವ ಮಟ್ಟಕ್ಕೆ ಏರಿದರೂ ಅಲ್ಲಿನ ದಲಿತ ಬಾಳು ಹಸನಾಗಿಲ್ಲ. ಪಾಟ್ನಾದ ಕೊಳಗೇರಿಯೊಂದರ ಓಣಿಯ ಇರುಕಟ್ಟಾದ ಮಣ್ಣಿನ ಗೋಡೆಯ ಮನೆಯೊಂದಕ್ಕೆ ಹೋದಾಗ ಅಲ್ಲಿದ್ದ ವ್ಯಕ್ತಿಯೊಬ್ಬರನ್ನು ನಮಗೆ ಪರಿಚಯಿಸಲಾಯಿತು.
ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರ ಸ್ವಂತ ಸಹೋದರ ಎಂದಾಗ ನನಗೆ ನಂಬಲಾಗಲಿಲ್ಲ. ಇಂತವರ ಸ್ಥಿತಿಯೇ ಸುಧಾರಣೆಯಾಗದ ಮೇಲೆ ಉಳಿದವರ ಪಾಡೇನು ಎನಿಸಿ ಇಡೀ ಪಾಟ್ನಾದ ಅನೇಕ ದಲಿತ ಕಾಲೋನಿ, ಕೊಳಗೇರಿಗೆ ತಿರುಗಿದಾದ ಅನೇಕ ಕಳವಳಕಾರಿ ದೃಶ್ಯಗಳು ಕಾಣಸಿಕ್ಕವು. ಸಮಾಜವಾದಿ ಚಳವಳಿಯ ನಾಡು ಎಂದು ಕರೆಸಿ ಕೊಳ್ಳುವ ರಾಜ್ಯದಲ್ಲಿ ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿ ಬಿಸಾಡುತ್ತಿರುವುದು ಗೋಚರಿಸಿತು.
ಉತ್ತರ ಭಾರತದ ಅಧ್ಯಯನ ಪ್ರವಾಸದಲ್ಲಿ ಕಂಡುಬಂದ ದಲಿತರ ಸಮಸ್ಯೆಗಳ ವಿವಿಧ ಆಯಾಮಗಳು, ರಾಟಗಳು, ಜಾತಿ-ಜಾತಿಗಳ (ಸ್ಪೃಶ್ಯ-ಅಸ್ಪೃಶ್ಯ) ನಡುವಿನ ಸಾಮಾಜಿಕ ಅಂತರ, ಶೈಕ್ಷಣಿಕ ಮಟ್ಟ, ಆರ್ಥಿಕ, ರಾಜಕೀಯ ಪರಿಸ್ಥಿತಿ, ಮೀಸಲಾತಿ ದುರ್ಬಳಕೆ ಕಂಡ ಮೇಲೆ ನಮ್ಮ ಕೆನೆಪದರ ಮೀಸಲಾತಿ ಜಾರಿ ಪ್ರತಿಪಾದನೆ ಮತ್ತಷ್ಟು ಬಲಗೊಂಡಿದೆ.
ದಕ್ಷಿಣ ರಾಜ್ಯಗಳಲ್ಲಿ ಬಲಿತವರ ಪಾರುಪತ್ಯರಾಜಪ್ರಭುತ್ವಗಳ ಕಾಲಘಟ್ಟದಲ್ಲಿಯೇ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೀಸಲಾತಿ ಪದ್ಧತಿ ಜಾರಿಯಾಗಿದ್ದರಿಂದ ಪರಿಶಿಷ್ಟರೊಳಗೆ ಕೆನೆಪದರ ರಚನೆಯಾಗಿದೆ. ಮೀಸಲು ಸೌಲಭ್ಯಗಳನ್ನು ನಿರಂತರವಾಗಿ ಬಳಸಿ ಶ್ರೀಮಂತರಾಗಿ ಸಾಮಾಜಿಕ ಸ್ಥಾನಮಾನಗಳನ್ನು ಗಳಿಸಿಕೊಂಡವರ ಈ ಕೆನೆಪದರದಿಂದ ತಳದಲ್ಲಿ ಉಳಿದವರಿಗೆ ಮೀಸಲು ತಲುಪಲು ಅಡ್ಡಿಯಾಗುತ್ತಿದೆ.
ದ್ರವರೂಪವಾಗಿ ತಳದಲ್ಲೇ ಉಳಿದ ದುರ್ಬಲರು ಮೇಲ್ಮಟ್ಟದ ಘನೀಕೃತ ಬಲಾಢ್ಯರ ಕ್ರೀಮೀಲೇಯರ್ ಭೇದಿಸಿ ಮೀಸಲು ಬಳಸಿ ಕೊಳ್ಳುವಷ್ಟು ಶಕ್ತರಲ್ಲ. ಈ ಪದರವನ್ನು ತೆಗೆದು ಕೆಳಗಿನವರ ಸಹಜ ಮೀಸಲು ಬಳಕೆಗೆ ಅನುವು ಮಾಡಿಕೊಟ್ಟರೆ ಅವರೂ ಕೆನೆ ಗಟ್ಟುತ್ತಾರೆ ಎಂಬುದು ಕೆನೆಪದರ ನೀತಿಯ ಅಶಯ. ಮೇಲಿನ ಕೆನೆ ತೆಗೆದು ಕೆಳಪದರಗಳೂ ಕೆನೆಗಟ್ಟಲು ಬಿಡುವುದು. ಹಂತ ಹಂತವಾಗಿ ಕೆನೆ ಬಂದ ಪದರಗಳನ್ನು ತೆಗೆಯುತ್ತಾ ತಳಮಟ್ಟದವರೆಗೆ ಕೆನೆಗಟ್ಟಿಸುತ್ತಾ ಸಾಗುವ ವ್ಯವಸ್ಥೆ ರೂಪಗೊಂಡಾಗ ಮಾತ್ರ ಅಂಬೇಡ್ಕರ್ ಅವರ ದಲಿತ ಜನರ ಅಭ್ಯುದಯದ ಕನಸು ನನಸಾಗಲು ಸಾಧ್ಯ.