ಸಾಧನೆ
ಮಿರ್ಲೆ ಚಂದ್ರಶೇಖರ
ಬರಗಾಲ ಇದ್ದಾಗ ನೀರಿನ ಕೊರತೆ, ಶೇಖರಣೆ, ಉಳಿತಾಯ ಹಾಗೂ ನಿರ್ವಹಣೆ ಮಾಡುವುದರ ಕುರಿತು ಉಪನ್ಯಾಸಗಳು, ಚರ್ಚೆಗಳು ನಡೆಯುತ್ತವೆ, ಮಳೆ ಪ್ರಾರಂಭವಾಯಿತೆಂದರೆ ಅವುಗಳೆಲ್ಲವನ್ನು ಮರೆತು ನೀರು ವ್ಯರ್ಥವಾಗಿ ಸಮುದ್ರದ ಕಡೆಗೆ ಹರಿದು ಹೋಗುತ್ತಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ನೀರಿನ ಸದ್ಬಳಕೆ ಎಲ್ಲರ ಕರ್ತವ್ಯ ಆಗಬೇಕು.
ಅವಿದ್ಯಾವಂತನಾದರೂ ಪ್ರಬುದ್ದತೆಯಿಂದ ನೀರನ್ನು ಶೇಖರಿಸಿಡುವ ಕಾರ್ಯದಲ್ಲಿ ಋಷಿಮುನಿಯಂತೆ ಮಗ್ನನಾಗಿ ಧ್ಯಾನಿಸಿದ ಆಧುನೀಕ ಭಗಿರಥರೊಬ್ಬರನ್ನು ಮುಂಗಾರು ಮಳೆ ಪ್ರಾರಂಭವಾಗಿರುವ ಶುಭಕಾಲದಲ್ಲಿ ನೆನೆಯಲೇಬೇಕು. ಎರಡು ವರ್ಷಗಳ ಹಿಂದೆ ಇರಬಹುದು ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡರ ಹೆಸರು ನಮ್ಮ ದೇಶದ ಪ್ರದಾನಮಂತ್ರಿಯವರೆಗೂ ಮುಟ್ಟಿದೆಯೆಂದರೆ ಅದಕ್ಕೆ ಕಾರಣ ಅವರು ಮಾಡಿದ ಸಾಧನೆ. ಬೆಟ್ಟದ ತಪ್ಪಲಿನಲ್ಲಿ
ಇರುವ ಕುಗ್ರಾಮದ ಕುರಿಕಾಯುವ ಒಬ್ಬ ಶ್ರೀಸಾಮನ್ಯನಿಗೆ ಕರೆಮಾಡಿ ಅವರನ್ನು ಕೊಂಡಾಡಿದ್ದು ಬ್ರೇಕಿಂಗ್ ನ್ಯೂಸ್ ಆಗಿ ರಾಜ್ಯದ ಎಲ್ಲರ ದೃಷ್ಟಿ ದಾಸನ ದೊಡ್ಡಿಯ ಕೆರೆಗಳ ಕಿಂಗ್ ಕಾಮೇಗೌಡರತ್ತ ಬೀರುವಂತಾಯಿತು.
ಕಾಮೇಗೌಡರು ಹುಟ್ಟಿದ ವರ್ಷ ಗೊತ್ತಿಲ್ಲವಾದರು ಅವರ ಮಕ್ಕಳನ್ನು ನೋಡಿದರೆ ಅವರಿಗೆ ತೊಂಬತ್ತು ವರ್ಷ ಗಳಿಗಿಂತಲೂ ಕಡಿಮೆ ಇರಲಾರದು. ಕಾಮೇಗೌಡರು ಓದಿದ್ದು ಸೊನ್ನೆ. ಆದರೆ, ಸಾಧನೆ ಬೆಟ್ಟದಷ್ಟು ದೊಡ್ಡದು. ಮಳೆ ಬಿದ್ದರೆ ನಿಲ್ಲದೆ ಓಡುವ ನೀರನ್ನು ತಡೆಹಿಡಿದು ಅಲ್ಲಿನ ಜೀವಸಂಕುಲಗಳ ದಾಹ ಇಂಗಿಸುವ ಉದ್ದೇಶಕ್ಕಾಗಿ ಅನೇಕ ವರ್ಷಗಳಿಂದ ಛಲಬಿಡದ ತ್ರಿವಿಕ್ರಮನಂತೆ ಕುಂದೂರು ಬೆಟ್ಟದ ತಪ್ಪಲಿನ ಸುತ್ತಲೂ ಹದಿನಾರು ಕೆರೆಕಟ್ಟೆಗಳನ್ನು ನಿರ್ಮಿಸಿದ
ಕಾಮೇಗೌಡರ ಹೆಸರು ಮಾಧ್ಯಮಗಳಲ್ಲಿ ಕೇಳಿದ ನಂತರ ಆ ಸಾಧಕನನ್ನು ನೋಡಲೇಬೇಕೆಂಬ ಆಸೆಯಿಂದ ಆತ ಬದುಕಿದ್ದಾಗ ಮೈಸೂರಿಗೆ ದೂರವೇನು ಇರದ ಕೇವಲ ಐವತ್ತೈದು ಕಿಮೀ ಅಂತರದ ದಾಸನದೊಡ್ಡಿ ಗ್ರಾಮಕ್ಕೆ ಸ್ನೇಹಿತ ಡಾ.ಸಾಯಿಶಂಕರ್ ಜೊತೆ ಹೋಗಿದ್ದೆ.
ನನ್ನ ಕಾರು ಊರನ್ನು ಪ್ರವೇಶಿಸದಾಗ ಅಲ್ಲಿನವರು ನನ್ನಂತೆಯೇ ಕಾಮೇಗೌಡರನ್ನು ನೋಡಲು ಬರುತ್ತಿದ್ದ ನೂರಾರು ಜನರಿಗೆ ಅವರ ಮನೆಯನ್ನು ತೋರಿಸಿ ಟ್ರಾಫಿಕ್ ಪೊಲೀಸರ ರೀತಿ ರಸ್ತೆಯಲ್ಲಿ ಚಲಿಸುತ್ತಿದ್ದಂತೆ ಕೇಳಲು ಬಾಯಿ ಬಿಡುವಷ್ಟರಲ್ಲಿ ಅವರ ಮನೆಯತ್ತ ಕೈತೋರಿಸುತ್ತಿದ್ದರು. ಊರಿಗೆ ಬರುವ ಅಪರಿಚಿತರೆಲ್ಲ ಅವರನ್ನು ನೋಡಲೆಂದೇ ಬರುವುರು ಎಂಬುದು ಅವರಿಗೆ ತಿಳಿದಾಗಿತ್ತು. ಕಾಮೇಗೌಡರನ್ನು ರಾಜ್ಯದ ಜನತೆ ಕೊಂಡಾಡಲು ಅವರು ಮಾಡಿದ ಕೆಲಸವಾದರು ಏನು? ಅದೂ ಇಳಿವಯಸ್ಸಿನ ವ್ಯಕ್ತಿ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯುವುದು ಮೇರುಮಟ್ಟದ ಸಾಧನೆಯಿಂದ ಮಾತ್ರ ಸಾಧ್ಯ.
ಕಳೆದ ನಲವತ್ತು-ನಲವತ್ತೈದು ವರ್ಷಗಳಿಂದ ಎಡಬಿಡದ ನಿರಂತರ ದುಡಿಮೆಯ ಫಲವೇ ಹದಿನಾರು ಕೆರೆಗಳ ಸರದಾರ ನಾಗಿ ಪ್ರಬುದ್ಧಮಾನಕ್ಕೆ ಬಂದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿರುವ ಕಾಮೇ(ಕೆರೇ)ಗೌಡರು ಸುಮಾರು ಎಂಟನೂರು ಕುಟುಂಬಗಳಿರುವ ಸಣ್ಣ ಗ್ರಾಮ, ಕುಂದೂರು ಬೆಟ್ಟದ ತಪ್ಪಲಿನ ದಾಸನದೊಡ್ಡಿಯಲ್ಲಿ ಹುಟ್ಟಿ ಅಲ್ಲೇ ಪುಟ್ಟದಾದ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಇವರಿಗೆ ಮೂರು ಜನ ಮಕ್ಕಳು ಇಬ್ಬರು ಗಂಡು ಮಕ್ಕಳು
ಟೈಲರಿಂಗ್ ಮಾಡಿಕೊಂಡು ತಂದೆಯ ಸೇವೆಯಲ್ಲಿ ಕೈಜೋಡಿಸಿದ್ದರು, ಮಗಳನ್ನು ಅದೇ ಊರಿನ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಇಬ್ಬರು ಗಂಡು ಮಕ್ಕಳಿಗೂ ಮದುವೆ ಯಾಗಿ ಅವರಿಗೂ ಮಕ್ಕಳಿದ್ದಾರೆ, ಇರುವ ಆಸ್ತಿ ಅಂಗೈ ಅಗಲ ವಾದರೂ ಇವರದು ಸುಖೀ ಕುಟುಂಬವಾಗಿತ್ತು.
ಏನೂ ಓದದೆ ಇರುವ ಕಾಮೇಗೌಡರಿಗೆ ಸಹಿಯನ್ನೂ ಮಾಡಲು ಬರುವುದಿಲ್ಲವಂತೆ, ನಾನು ಸ್ವತಃ ನೀರಾವರಿ ಇಂಜಿನಿಯರ್ ಆಗಿ ಹತ್ತು ಹಲವಾರು ಕಾಮಗಾರಿ ಗಳನ್ನು ನಿರ್ಮಿಸಿದ್ದೆನೆ, ತುಮಕೂರು ಜಿಲ್ಲೆಯ ಬರಪ್ರದೇಶ ಗಳಾದ ಪಾವಗಡ ಮತ್ತು ಶಿರಾ ತಾಲ್ಲೂಕುಗಳಲ್ಲಿ ನಲವತ್ತಕ್ಕೂ ಹೆಚ್ಚು ಮಳೆ ನೀರನ್ನು ಶೇಖರಣೆ ಮಾಡುವ ಚೆಕ್ ಡ್ಯಾಂಗಳನ್ನು ಮಾಡಿಸಿ ದ್ದೇನೆ. ಆ ಅನುಭವದಿಂದ ಹೇಳುತ್ತಿದ್ದೇನೆ ಓದುಬರಹ ಗೊತ್ತಿಲ್ಲದ ಕಾಮೇಗೌಡರು ಯಾವ ಇಂಜಿನಿಯರ್ ಗೂ ಕಡಿಮೆ ಇಲ್ಲದಂತೆ ಕೆರೆಗಳನ್ನು ಕಟ್ಟಿದ್ದಾರೆ. ವ್ಯತ್ಯಾಸ ವಿಷ್ಟೆ ನಾನು ಕಟ್ಟಿಸಿದ್ದೇನೆ ಅವರು ಸ್ವತಃ ಕಟ್ಟಿದ್ದಾರೆ. ಅವರು ಕೆರೆಗಳನ್ನು ನಿರ್ಮಿಸಿಲು ಆಯ್ಕೆ ಮಾಡಿರುವ ಸ್ಥಳಗಳು ಅದ್ಭುತ, ಬೆಟ್ಟದ ಮೇಲೆ ಬಿದ್ದ ಮಳೆಯ ನೀರು ಕೃಡೀಕೃತಗೊಂಡು ಕೆರೆಗೆ ಹರಿಯುವಂತೆ ಇರುವ ಸೂಕ್ತ ಸ್ಥಳವಾಗಿವೆ. ಕೆರೆಗಳಿಗೆ ಅವಶ್ಯವಿರುವ ಬಸಿಗಾಲುವೆ ಗಳನ್ನು ಮತ್ತು ಪೂರಕ ಕಾಲುವೆಗಳನ್ನು ನಿರ್ಮಿಸಿದ್ದಾರೆ.
ಒಂದು ಕೆರೆ/ ಕಟ್ಟೆ ತುಂಬಿದ ನಂತರ ಹೆಚ್ಚುವರಿ ನೀರು ಕೋಡಿ ಬಿದ್ದು ಮತ್ತೊಂದು ಕೆರೆಗೆ ಹರಿಯುವಂತೆ ಸಂಪರ್ಕ ಕಾಲುವೆಯನ್ನು ತೋಡಿದ್ದಾರೆ. ಬೆಟ್ಟಕ್ಕೆ ಬಿದ್ದ ನೀರು ವ್ಯರ್ಥವಾಗದಂತೆ ಯೋಜಿಸಿ ಎಲ್ಲಾ ಕೆರೆಗಳು ತುಂಬುವಂತೆ ಮಾಡಿದ್ದಾರೆ. ಇಲ್ಲಿನ ಎಲ್ಲಾ ಕೆರೆಗಳಲ್ಲಿನ ನಿರ್ಮಾಣದಲ್ಲಿ ವಿಶೇಷತೆಯನ್ನು ಗಮನಿಸ ಬಹುದು, ಯಾವುದಕ್ಕೂ ಸಿಮೆಂಟ್ ಬಳಸದೆ ಕೆರೆಯ ಅಂಗಳವನ್ನು ಆಕಾರಕ್ಕೆ ತಕ್ಕಂತೆ ಅಗೆದು ಅದೇ ಮಣ್ಣಿನಿಂದ ಏರಿ ನಿರ್ಮಿಸಿ ಅಲ್ಲೇ ದೊರೆಯುವ ಕಲ್ಲು ಗಳಿಂದ ರಿವೆಟ್‌ಮೆಂಟ್ ಕಟ್ಟಿದ್ದಾರೆ, ಹೊರಗಿನಿಂದ ಏನನ್ನೂ ತಂದಿರವುದಿಲ್ಲ.
ಕೆರೆಯೆಂದರೆ ಹೂಳು ಇರಲೇಬೇಕಲ್ಲವೆ, ಸೋಜಿಗವೆಂದರೆ ಯಾವ ಕೆರೆಯಲ್ಲೂ ಸ್ವಲ್ಪವೂ ಹೂಳು ಇರಲಿಲ್ಲ. ಬೆಟ್ಟದ ಮಧ್ಯ ಇರುವ ದೇವಸ್ಥಾನಕ್ಕೆ ರಸ್ತೆಯಿದೆ,
ಇದು ಡಾಂಬರು ಇಲ್ಲದ ಮಣ್ಣಿನ ರಸ್ತೆಯಾದರು ಚನ್ನಾಗಿದೆ ಹಾಗೂ ಇದೇ ರಸ್ತೆಯ ಇಕ್ಕೆಲಗಳಲ್ಲಿ ನಾನು ನೋಡಿದ ಎಂಟು ಕೆರೆಗಳು ಇರುವುದು. ಪ್ರಾರಂಭದಲ್ಲಿ ಇವರು ಸ್ವಂತ ಹಣ ವಿನಿಯೋಗಿಸಿ ಕೂಲಿಕಾರರೊಟ್ಟಿಗೆ ತಾವೂ ಕೆಲಸ ಮಾಡಿದ್ದಾರೆ, ಇತ್ತೀಚೆಗೆ ಜೆಸಿಬಿ ಯಂತ್ರಗಳನ್ನು ಬಳಸಿ ಅಗೆಸಿರುವುದಾಗಿ ಗೌಡರ ಮಗ ತಿಳಿಸಿದರು. ಕೃಷ್ಣರಾಜಸಾಗರವನ್ನು ನಿರ್ಮಿಸಲು ಅರಸರು ಹಣಕ್ಕಾಗಿ ಒಡವೆಗಳ್ನು ಮಾರಿದಂತೆ, ಕಾಮೆಗೌಡರು ಹಣವನ್ನು ಹೊಂದಿಸಲು ಸಾಕಿದ ಕುರಿಗಳನ್ನು
ಮಾರಿದ್ದಾರೆ, ನಾನು ಬೇಟಿ ನೀಡಿದ ಕಾಲಕ್ಕೆ ಇವರ ಬಳಿ ಸುಮಾರು ಐವತ್ತು ಕುರಿಗಳಿದ್ದವು.
ಈ ಕುರಿಗಳೇ ಇವರಿಗೆ ಮೊದಲ ಪ್ರೇರಣೆ, ನಲವತ್ತು ವರ್ಷಗಳ ಹಿಂದೆ ತನ್ನ ಮನೆಯ ಸಮೀಪದ ಕುಂದೂರು ಬೆಟ್ಟದಡಿ ಕುರಿಗಳನ್ನು ಮೇಯಿಸುವ ಕಾಲದಲ್ಲಿ ಅವುಗಳ ದಾಹ ಇಂಗಿಸಲು ನೀರಿನ ಹೊಂಡಗಳು ಇಲ್ಲದಿದ್ದಾಗ, ತನ್ನ ಮೂಕ ಪ್ರಾಣಿಗಳಿಗಾಗಿ ಮಳೆ ನೀರು ನಿಲ್ಲಲೆಂದು ತೆಗೆದ ಗುಂಡಿಗಳು ಇಂದು ಹದಿನಾರು ಕೆರೆಗಳಾಗಿವೆ. ತನ್ನ ಕುರಿ ಗಳಷ್ಟೆ ಅಲ್ಲದೆ ಇತರೆ ಪ್ರಾಣಿಪಕ್ಷಿಗಳು ಕುಡಿಯಲೆಂದು ಬಯಸಿ ಈ ಮಟ್ಟಕ್ಕೆ ಬೆಟ್ಟದ ಸುತ್ತಲೂ ನೀರಿನ ಬ್ಯಾಂಕ್‌ಗಳನ್ನು ನಿರ್ಮಿಸಿದ್ದಲ್ಲದೆ
ಮಕ್ಕಳೊಂದಿಗೆ ಅಂದಾಜು ಸಾವಿರ ದಷ್ಟು ಹಣ್ಣಿನ ಗಿಡಗಳನ್ನು ಪಕ್ಷಿಗಳು ತಿನ್ನಲೆಂದು ನೆಟ್ಟು ಪೋಷಿಸುತ್ತಿದ್ದರು.
ಜೀವನಪೂರ ಗಳಿಸಿದ ಹಣದಿಂದ ಭವ್ಯ ಬಂಗಲೆಗಳನ್ನು ಕಟ್ಟಿಸಿ ಮನೆಗೆ ಮಕ್ಕಳು ಮೊಮ್ಮಕ್ಕಳ ಹೆಸರನ್ನಿಡುವುದು ಸಾಮಾನ್ಯ, ಆದರೆ ಇವರು ಬೆವರು ಸುರಿಸಿ ಕಟ್ಟಿದ ಕೆರೆಗಳಿಗೆ ಇಟ್ಟಿರುವ ಹೆಸರುಗಳು ಪೂಜಾ, ಪೂರ್ವಿ, ಕೃಷ್ಣ, ಕೃಷ್ಣ ಡಿ.ಕೆ., ಅಕ್ಷಯಪಾತ್ರೆ, ಗಗನ್ ಮತ್ತು ಸ್ಪಂದನ. ಅಕ್ಷಯಪಾತ್ರೆಯನ್ನು ಹೊರತುಪಡಿಸಿ ಉಳಿದೆಲ್ಲವು ಮಕ್ಕಳು ಮೊಮ್ಮಕ್ಕಳ ಹೆಸರು. ಇಬ್ಬರು ಮಕ್ಕಳಿಗೂ ಈ ಕೆರೆಗಳನ್ನು ವಹಿಸಿ ಉಳಿದ ಕೆರೆಗಳಿಗೆ ಹೆಸರಿಡದಿದ್ದರೂ ಒಟ್ಟಾಗಿ ಸೇರಿ ನೋಡಿಕೊಳ್ಳು ತ್ತಿದ್ದಾರೆ. ಮಾಡಿದ ಆಸ್ತಿಯನ್ನು ಮಕ್ಕಳಿಗೆ ಹಂಚುವ ಹಾಗೆ ಇಬ್ಬರು ಮಕ್ಕಳಿಗೆ ಮೂವತ್ತೆಂಟು ಕುಂಟೆ ಹೊಲದೊಂದಿಗೆ ಕೆರೆಗಳನ್ನು ವಿಭಾಗಿಸಿ ಕೊಟ್ಟಿದ್ದಾರೆ. ಕಾಮೇಗೌಡರ ಬದುಕು ಇಂದಿನ ಹಣ ಆಸ್ತಿ ಸಂಪಾದಿಸುವ ದುರಾಸೆಯ ಬದುಕಿಗೆ ಜೀವಂತ ಕಥೆಯಾಗಿ ಸಮಾಜಕ್ಕೆ ಮಾದರಿಯೆನಿಸಿದೆ.
ಕೆರೆಗಳ ಮೇಲ್ಭಾಗದಲ್ಲಿ ಪುಟ್ಟದೊಂದು ಸಿದ್ದಪ್ಪಾಜಿ ದೇವಸ್ಥಾನವಿದೆ, ಅಲ್ಲಿ ಕುಳಿತು ಕಣ್ಣಾಯಿಸಿದರೆ ಕಾಣುವ ಬೆಟ್ಟಗುಡ್ಡಗಳು, ಹಸಿರು ಬಯಲು, ಕಾಮೇಗೌಡರ ಕೆರೆಗಳಲ್ಲಿ ನಿಂತ ನೀರು, ಪುಟ್ಟಹಳ್ಳಿಯ ಮನೆಗಳಿಂದ ಸಣ್ಣದಾಗಿ ಮೇಲೇಳುವ ಹೊಗೆ, ಸುತ್ತಲೂ ಹಕ್ಕಿಪಕ್ಷಿಗಳ ಕಲರವ ಒಟ್ಟಾರೆ ದೃಶ್ಯವು ಸ್ವರ್ಗಲೋಕದಂತಿದೆ ಅಲ್ಲಿನ ಪ್ರಕೃತಿಯ ಮಡಿಲು. ದಟ್ಟ ವಾಹನಗಳ ಸಂಚಾರದಿಂದ ಹಾಗೂ ಅಭಿವೃದ್ಧಿಯ ಭೂತಕ್ಕೆ ಸಿಲುಕಿ ನರಳುತ್ತಿರುವ ನಗರವಾಸಿಗಳು ಕೇವಲ ಒಂದು ದಿನ ಅಲ್ಲಿದ್ದು ಆ ಸೌಂದರ್ಯವನ್ನು ಅನುಭವಿ ಸುತ್ತಾ… ಶುದ್ಧ ಗಾಳಿಯನ್ನು ಸೇವಿಸಿ ಬಂದರೆ ರೋಗವಿದ್ದ ವರು ಹಾಗೂ ಮನಸ್ಥಿತಿ ಸರಿ ಇಲ್ಲದವರು ಗುಣಮುಖ ರಾಗುವುದು ಖಂಡಿತ.
ಆ ಸುಂದರ ಪ್ರಕೃತಿಯನ್ನು ಸವಿದು ವಾಪಸ್ಸು ಬರುವಾಗ ನನ್ನೊಳಗೆ ಸಾರ್ಥಕತೆಯ ಭಾವ ಮತ್ತು ನರನಾಡಿಗಳಲ್ಲಿನ ಖುಷಿಯು ಮುಗಿಲವರೆಗೆ ಏರಿತ್ತು. ಆ ದಿನ ಕಾಮೇಗೌಡರು ಸಿಕ್ಕಿದ್ದಿದ್ದರೆ ಮತ್ತಷ್ಟು ಆನಂದವನ್ನು ಅನುಭವಿಸುವ ಅದೃಷ್ಟ ನನ್ನದಾಗುತ್ತಿತ್ತು, ಬಿಟ್ಟೇನೆಯೇ ಅಲ್ಲಿಗೆ ಮತ್ತೇ ಹೋಗಿ ಅವರನ್ನು ಬೇಟಿ ಆಗುವುದು ನಿಶ್ಚಿತವೆಂದುಕೊಂಡು ಬಂದೆ, ಆದರೆ ನನ್ನ ಕರ್ತವ್ಯದ ಜಂಜಾಟದಲ್ಲಿ ಮತ್ತೊಮ್ಮೆ ಅಲ್ಲಿಗೆ ಹೋಗಲಾಗಲಿಲ್ಲ, ಅವರನ್ನು ನೋಡಲೇ ಆಗದಂತೆ ಭಗವಂತ
ಕರೆದುಕೊಂಡು ಹೋಗಿದ್ದಾನೆ, ಬಹುಶಃ ದೇವಲೋಕದಲ್ಲೂ ಕೆರೆಗಳನ್ನು ನಿರ್ಮಿಸುವ ಅವಶ್ಯಕತೆ ಇರಬಹುದೇನೋ!
ಮರಣಸಿದ ಪುಣ್ಯ ಪುರುಷರ ಸಾಧನೆಯನ್ನು ಓದಿ ತಿಳಿಯುವುದಕ್ಕಿಂತ ನಮ್ಮ ಕಾಲಘಟ್ಟದಲ್ಲೇ ಗತಿಸಿದ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವುದು ಮೇಲಲ್ಲವೇ?
ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗ ದವರು ಪ್ರಾಜೆಕ್ಟ್ ವರ್ಕ್‌ಗೆ ಮಕ್ಕಳನ್ನು ಅಲ್ಲಿಗೆ ಕರೆದು ಕೊಂಡು ಹೋದರೆ ಅವಿದ್ಯಾವಂತ ಕಾಮೇಗೌಡರ ಕೆರೆಗಳು ಕಲಿಕೆಗೆ ಪಾಠವಾದೀತು. ಕಲಿತು ವೃತ್ತಿಯಲ್ಲಿ ಇರುವ ನೀರಾವರಿ ಇಂಜಿನಿಯರ್‌ಗಳು ಸಹ ದಾಸನ ದೊಡ್ಡಿಯ ಕುಂದೂರು ಬೆಟ್ಟದ ತಪ್ಪಲಿನ ಕಾಮೇ ಗೌಡರ ಕೆರೆಗಳನ್ನು ವೀಕ್ಷಣೆ ಮಾಡಿದರೆ ಬಹಳಷ್ಟು ತಾಂತ್ರಿಕ ವಿಷಯಗಳನ್ನು ಗಮನಿಸಬಹುದು.
ಕೆರೆಯ ಪಕ್ಕದಲ್ಲಿ ಇರುವ ಕಲ್ಲುಬಂಡೆಯ ಮೇಲೆ ‘ಕಾಮೇಗೌಡರು ಕೈ ಹಾಕಿದ ಮೇಲೆ ಕೈಲಾಸ’ ಎಂದು ಯಾರೋ ಬರೆದಿದ್ದಾರೆ, ಆ ಕಲ್ಲುಬಂಡೆ ಮುಂದೆ ಕರಗಿ
ಮಣ್ಣಾಗಬಹುದು ಹಾಗೂ ಕಾಮೇಗೌಡರು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಗೌಡರು ನಿರ್ಮಿಸಿದ ಕೆರೆಗಳು ಎಂದಿಗೂ ಸಾಯುವುದೇ ಇಲ್ಲ. ನಿಜಕ್ಕೂ ಕುಂದೂರು ಬೆಟ್ಟವೊಂದು ಕೈಲಾಸ ಪರ್ವತದಂತೆ (ಸಿನಿಮಾಗಳಲ್ಲಿ ವೈಭವೀಕರಿಸಿ ತೋರಿ ಸುವಂತೆ) ಇದೆ. ಬೆಂಗಳೂರಿನಿಂದ ನೂರ ಹದಿನೈದು ಕಿಮೀಗಳ ದೂರವಿದ್ದು, ಮಳವಳ್ಳಿಯಿಂದ ಶಿಂಷಾ ಕಡೆಗೆ ಹದಿನೈದು ಕಿಮೀ ಪಯಣಿಸಿದರೆ ಸಿಗುವುದೇ ದಾಸನ ದೊಡ್ಡಿ, ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಆಹಾರ ಮತ್ತು ನೀರಿನೊಂದಿಗೆ ಹೋದರೆ ಒಂದು ದಿನ ಪೂರ್ತಿ ಇದ್ದು ಬರಲು ಅತ್ಯಂತ ಸೂಕ್ತ ಪ್ರೇಕ್ಷಣೀಯ ಪ್ರಕೃತಿಯ ಮಡಿಲು.
(ಲೇಖಕರು: ಹವ್ಯಾಸಿ ಬರಹಗಾರರು)