Saturday, 27th April 2024

ಖುಷಿ ನಮ್ಮ ಆಯ್ಕೆಯಾಗಲಿ, ಫಲಿತಾಂಶದ ನಿರೀಕ್ಷೆಯಿಲ್ಲ

ಶ್ವೇತಪತ್ರ

shwethabc@gmail.com

ಸಂತೋಷ ನಮ್ಮ ಆಯ್ಕೆಯಾಗಬೇಕೇ ಹೊರತು, ಯಾವುದೋ ಫಲಿತಾಂಶದ ನಿರೀಕ್ಷೆಯಲ್ಲ. ಸಂತೋಷ ನಮ್ಮ ಆಯ್ಕೆಯಾಗದ ಹೊರತು, ಬೇರೇನೂ ನಮ್ಮನ್ನು ಖುಷಿಯಾಗಿರಿಸದು ಎಂದಿದ್ದಾನೆ ರಾಲ್ ಮಾರ್ಸ್ಟನ್. ಅಂದ ಹಾಗೆ, ‘ನಾನು ಖುಷಿಯಾಗಿರಬೇಕು’ ಅಂತ ನಿಮಗೆ ನೀವೇ ಎಷ್ಟು ಸಲ ಹೇಳಿ ಕೊಂಡಿದ್ದೀರಿ? ನಾವು ಹೀಗೆ ಹೇಳಿಕೊಳ್ಳುವುದು ತುಂಬಾ ಕಡಿಮೆ. ಒಳ್ಳೆಯ ಕೆಲಸಕ್ಕೆ ಸೇರಬೇಕು, ಬಿಸಿನೆಸ್ ಮಾಡಬೇಕು, ಚೆನ್ನಾಗಿ ಸಂಪಾದಿಸಬೇಕು, ಕಾರು ಖರೀದಿಸಬೇಕು, ಸ್ವಂತಕ್ಕೊಂದು ಮನೆ ಮಾಡ್ಕೋಬೇಕು, ಇವೆಲ್ಲ ಆದರೇನೇ ನಾನು ನೆಮ್ಮದಿಯಾಗಿರಲು ಖುಷಿಯಾಗಿರಲು ಸಾಧ್ಯ ಎಂಬ ‘ಕಂಡಿಷನ್ಡ್’ ಮನಸ್ಥಿತಿ ನಮ್ಮದು.

ಹೀಗೆ, ನಾವೆಲ್ಲಾ ಖುಷಿಯ ಹುಡುಕಾಟದಲ್ಲಿದ್ದೇವೆಯೇ ವಿನಾ ಖುಷಿಯಾಗಿಲ್ಲ. ನಮ್ಮ ಬದುಕಲ್ಲಿ ಏನಿದೆ ಅಥವಾ ಏನು ಘಟಿಸಿದೆ ಎಂಬುದು ನಮ್ಮ ಸಂತೋಷಗಳನ್ನು ನಿರ್ಧರಿಸುವುದಿಲ್ಲ; ಬದಲಾಗಿ ಘಟಿಸುವಿಕೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮ ಸಂತೋಷ-ಅಸಂತೋಷಗಳನ್ನು
ತೀರ್ಮಾನಿಸುತ್ತದೆ.

ನನ್ನ ಪರಿಚಯದ ಗೆಳತಿಯರಿಬ್ಬರ ಪೈಕಿ ಒಬ್ಬಳು ಭರ್ಜರಿ ಸಂಬಳ ತೆಗೆದುಕೊಳ್ಳುವ ಸಾಫ್ಟ್ ವೇರ್ ಎಂಜಿನಿಯರು, ಮತ್ತೊಬ್ಬಾಕೆ ಖಾಸಗಿ ಕಾಲೇಜಿನಲ್ಲಿ ಹಂಗಾಮಿ ಅಧ್ಯಾಪಕಿ. ಎಂಜಿನಿಯರ್ ಗೆಳತಿಯದ್ದು ಯಾವಾಗಲೂ ಕೊರಗುವಿಕೆ- ‘ಗಂಡ ಸರಿಯಿಲ್ಲ, ಅತ್ತೆ-ಮಾವನದು ಹಿಂಸೆ, ಮಗಳು ಮಾತು
ಕೇಳಲ್ಲ, ನನಗೆ ನಿದ್ರೆ ಬರೋಲ್ಲ, ಡಿಪ್ರೆಷನ್ ಇದೆ’ ಹೀಗೆ. ನಾನು ಎಷ್ಟು ಸಲ ಕೌನ್ಸಿಲಿಂಗ್ ಮಾಡಿದರೂ ದಿನಕ್ಕೊಂದು ಹೊಸ ಸಮಸ್ಯೆ ತರುತ್ತಾಳೆ. ಆದರೆ ಅಧ್ಯಾಪಕಿ ಗೆಳತಿಯ ಅಮ್ಮನಿಗೆ ಅನಾರೋಗ್ಯ, ಶೀಟ್ ಮನೆಯಲ್ಲಿ ಬದುಕು; ಆದರೂ ಒಂದು ದಿನಕ್ಕೂ ಕೊರಗಿದ್ದಿಲ್ಲ.

ಹೊಸ ಅನುಭವ, ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಖುಷಿಯಾಗಿದ್ದಾಳೆ. ಇಲ್ಲಿ ನನಗನ್ನಿಸಿದ್ದು- ಸುರಕ್ಷಿತ ಕೆಲಸ ಅಥವಾ ಭರ್ಜರಿ ಸಂಬಳ
ನಮ್ಮನ್ನು ಖುಷಿಯಾಗಿರಿಸಬಹುದಾಗಿದ್ದಿದ್ದರೆ, ಜಗತ್ತೇ ಸಂತೃಪ್ತವಾಗಿಬಿಡುತ್ತಿತ್ತು. ಆದರೆ ನಮ್ಮದು ಯಾವತ್ತಿಗೂ ಅತೃಪ್ತ ಮನಸ್ಸು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಲೇ ಇರುತ್ತದೆ. ಬದುಕಿನ ಎಲ್ಲ ಹಿನ್ನಡೆಗಳ ನಡುವೆಯೂ ಮನಸ್ಸುಗಳಲ್ಲಿ ಮೊಳಕೆಯೊಡೆಯಬೇಕಾದದ್ದು ಖುಷಿ. ಬದುಕಲ್ಲಿ ಖಾಲಿಬಿಟ್ಟ ಜಾಗವನ್ನು ತುಂಬಬಲ್ಲ ಶಕ್ತಿ ಸಂತೋಷಕ್ಕಿದೆ. ಸದಾ ಸಂತೋಷವಾಗಿರುವುದು ಸುಲಭವಲ್ಲ; ದಿನನಿತ್ಯದ ಜಂಜಾಟಗಳ ನಡುವೆ ಖುಷಿಯಾಗಿರುವುದು ದೊಡ್ಡ ಸವಾಲೇ.

ಮನಸ್ಸಿನಲ್ಲಿ ಖುಷಿ ಮೂಡಿಸಿಕೊಳ್ಳುವ ನಿರ್ಣಯದ ಜತೆ ಪ್ರಯತ್ನವನ್ನೂ ಚೂರು ಚೂರೇ ಕೂಡಿಸುತ್ತಾ ಬಂದರೆ, ಮನೆ ಯಲ್ಲಿ-ಮನದಲ್ಲಿ ಖುಷಿ ತುಂಬುತ್ತದೆ. ಒಂದು ವಿಷಯ ನೆನಪಿರಲಿ- ನಮ್ಮ ಖುಷಿಗಳಿಗೆ ನಾವೇ ಜವಾಬ್ದಾರರು; ಹಾಗಾಗಿ, ಬದುಕಲ್ಲಿ ‘ಏನೂ ಇಲ್ಲ’ ಎನ್ನುವುದಕ್ಕಿಂತ ‘ಎಲ್ಲಾ ಇದೆ’ ಎನ್ನುವ ಸಕಾರಾತ್ಮಕತೆಯನ್ನು, ಪ್ರಬುದ್ಧತೆಯನ್ನು ಬೆಳೆಸಿಕೊಳ್ಳೋಣ. ನಮ್ಮ ಖುಷಿಗಳನ್ನು ನಿರ್ಧರಿಸುವುದು ನಮ್ಮದೇ ಆಲೋಚನೆಗಳು. ನಾವು ಖುಷಿಯಾಗಿರುವುದಕ್ಕೆ, ಖುಷಿಯ ಆಲೋಚನೆಗಳು ನಮ್ಮವಾಗಬೇಕು. ಆದರೆ ನಾವು ಯಾವಾಗಲೂ ಇದಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುವುದು, ಹೌದಲ್ಲವೇ? ಯಾರದೋ ಜತೆಗಿನ ಘರ್ಷಣೆ, ಯಾರೋ ನಮ್ಮನ್ನು ಅವಮಾನಿಸಿದ್ದು ವಾರಗಟ್ಟಲೆ ನಮ್ಮ ಮನದೊಳಗೆ ತುಂಬಿಕೊಂಡುಬಿಟ್ಟರೆ, ಖುಷಿಗೆ ಜಾಗವೆಲ್ಲಿ? ಹೈಟೆಕ್ ಪ್ರಪಂಚ ನಮಗೆ ಹೆಚ್ಚು ಆಪ್ತವಾಗಿ, ಮನುಷ್ಯಸಂಬಂಧಿ ಸ್ಪರ್ಶವನ್ನು ನಮ್ಮ ಅರಿವಿಗೆ ಬಾರದಷ್ಟು ಪ್ರತ್ಯೇಕಿಸಿಬಿಟ್ಟಿದೆ.

ಬೆನ್ನಿಗೊಂದು ಕೆಲಸ, ಕೈತುಂಬಾ ಸಂಬಳ, ಸಂಬಳದ ಜತೆಗಿನ ಇಎಂಐ ಹೊರೆಗಳು ಮನೆಯನ್ನೇನೋ ತುಂಬಿಸಿವೆ, ಮನಸ್ಸನ್ನು ಖಾಲಿಯಾಗಿಸಿವೆ. ನಾವೆಲ್ಲ ದೊಡ್ಡ ದೊಡ್ಡ ಬಿಸಿನೆಸ್ ಪ್ರವೀಣರಾಗಿರಬಹುದು, ಭರ್ಜರಿ ಸಂಬಳ ಪಡೆಯುತ್ತಿರಬಹುದು ಅಥವಾ ಮನೆಯನ್ನು ಉತ್ತಮವಾಗಿ ನಿರ್ವಹಿಸಿ ಕೊಂಡು ಹೋಗುತ್ತಿರುವ ಗೃಹಿಣಿಯರಾಗಿರಬಹುದು- ಇಷ್ಟೂ ಬಗೆಯಲ್ಲಿ ಸಂತೋಷಗಳು ನಮ್ಮ ಆಯ್ಕೆಗಳಾಗಿರುತ್ತವೆ. ಬದುಕಿನ ಪ್ರತಿಕ್ಷಣವನ್ನೂ ಉದ್ದೀಪಿಸುತ್ತಾ, ಅವಕ್ಕೆ ಅರ್ಥ ತುಂಬುತ್ತ ಹೋಗುವುದೇ ಖುಷಿಯನ್ನು ಮನಗಾಣುವ ಮೊದಲ ಮೆಟ್ಟಿಲು. ಈ ಅರಿವಿಗೆ ಬದುಕಿನ ಎಂಥದೇ ಸವಾಲಿನ ಸಂದರ್ಭವನ್ನು ಹೊಸ ಆರಂಭವಾಗಿ ಬದಲಿಸುವ ಶಕ್ತಿಯಿದೆ. ಈ ಕ್ಷಣದಲ್ಲಿ ಬದುಕುವ ತಿಳಿವಳಿಕೆ, ಮನದಾಳದಲ್ಲಿ ನೈಜ ಬದಲಾವಣೆ ಯನ್ನುಂಟು ಮಾಡುತ್ತಾ ಖುಷಿಯನ್ನು ಮೂಡಿಸುತ್ತದೆ.

ಕಳೆದುಹೋಗಿರುವ ಸಂತೋಷಗಳನ್ನು ಪುನಃ ಪಡೆದುಕೊಳ್ಳಲು ಕ್ರಿಯಾಶೀಲ ದಾರಿಗಳು ಇಲ್ಲಿವೆ: ೧. ಬೇರೆಯವರ ಬದುಕಿನ ಜತೆ ಹಠಕ್ಕೆ ಬೀಳುವುದು ಬೇಡ: ಹಠಕ್ಕೆ ಬಿದ್ದಂತೆ ನಾವು ಬೇರೆಯವರ ಜತೆ ಸ್ಪರ್ಧೆಗೆ ಇಳಿದು ಬಿಡ್ತೀವಿ. ಎಷ್ಟರಮಟ್ಟಿಗೆ ಗೊತ್ತಾ? ಸಹೋದ್ಯೋಗಿಯೊಬ್ಬರು ತಮ್ಮ ಪ್ರೆಗ್ನನ್ಸಿ ಕನರ್ಮ್ ಆಯ್ತು ಅನ್ನೋ ಖುಷಿಯ ವಿಚಾರವನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡರು. ಇದಾಗಿ ಸ್ವಲ್ಪ ದಿನ ಕಳೆದಿರಬಹುದು, ಮತ್ತೊಬ್ಬ ಸಹೋ ದ್ಯೋಗಿ ಬಂದು ‘ನನ್ನದು ಪ್ರೆಗ್ನನ್ಸಿ ಕನರ್ಮ್ ಆಯ್ತು’ ಎಂದರು.

ಅವರ ಮಾತು ಎಷ್ಟು ಅಗ್ರೆಸಿವ್ ಆಗಿತ್ತೆಂದರೆ, ಅವರು ಖುಷಿ ಹಂಚಿಕೊಂಡಿದ್ದಕ್ಕಿಂತ ಪೈಪೋಟಿಗಿಳಿದಿದ್ದು ಎದ್ದು ಕಾಣಿಸುತ್ತಿತ್ತು. ಇದೊಂದು ಪುಟ್ಟ ಉದಾಹರಣೆಯಷ್ಟೇ. ಬೆಳಗಾದರೆ ಇಂಥ ಅನೇಕ ಹಠಗಳು ನಮಗೆ ಕಾಣಸಿಗುತ್ತವೆ. ನಮ್ಮೊಳಗೂ ಇದ್ದಿರಬಹುದು, ಸ್ವಲ್ಪ ನಿಧಾನಿಸೋಣ. ನಮ್ಮ ಹಠದ ಆಲೋಚನೆಗಳಿಗೆ, ಆಸೆಗಳಿಗೆ ಬ್ರೇಕ್ ಹಾಕದಿದ್ದರೆ ಎಡವಿಬಿಡಬಹುದು, ಎಚ್ಚರವಿರಲಿ. ನಮ್ಮ ಬದುಕಿನ ಖುಷಿಯನ್ನು ಕದ್ದು ಬಿಡುವ ಕಳ್ಳನೇ ಈ ‘ಹೋಲಿಕೆ’; ಸದಾ ಬೇರೆಯವರ ಬದುಕಿಗೆ ನಮ್ಮ ಬದುಕನ್ನು ಹೋಲಿಸಿ ನೋಡುವ ನಮ್ಮದೇ ಮನಸ್ಥಿತಿಯಿದು. ಸೂರ್ಯ ಮತ್ತು ಚಂದ್ರರ ನಡುವೆ ಹೋಲಿಕೆ ಯಾಕೆ? ಸಮಯ ಬಂದಾಗ ಇಬ್ಬರೂ ಅವರದೇ ರೀತಿಯಲ್ಲಿ ಬೆಳಗುತ್ತಾರೆ.

೨. ನಿಮ್ಮ ಬದುಕಿನ ಅನುಭವ ಮತ್ತು ಜವಾಬ್ದಾರಿ ನಿಮ್ಮದಾಗಿರಲಿ: ಸಾಮಾನ್ಯವಾಗಿ ನಾವು ನಮ್ಮ ಸೋಲುಗಳನ್ನು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ; ಅವಕ್ಕೆ ಬೇರೆಯವರನ್ನೋ ಇಲ್ಲವೇ ಪರಿಸ್ಥಿತಿಗಳನ್ನೋ ಹೊಣೆಮಾಡಲು ಯತ್ನಿಸುತ್ತೇವೆ. ಆದರೆ ಯೋಚಿಸಿ ನೋಡಿ, ನಮ್ಮ ಬದುಕಿನ ಅನುಭವ ಗಳೆಲ್ಲವೂ ನಮ್ಮದೇ ಆಸೆ, ಆಯ್ಕೆ, ಕ್ರಿಯೆ, ಪ್ರತಿಕ್ರಿಯೆಗಳ -ಲಿತಾಂಶಗಳೇ ಆಗಿರುತ್ತವೆ. ಹಾಗಾಗಿ, ನಮ್ಮ ಜೀವನದ ಅನುಭವಗಳು ನಮ್ಮವೇ ಎಂಬ ಜವಾಬ್ದಾರಿಯನ್ನು ಮೊದಲು ಒಪ್ಪಿಕೊಳ್ಳೋಣ. ನಾಳೆ ನಮ್ಮ ಬದುಕು ಹೇಗಿರಬೇಕೆಂಬ ನಿಯಂತ್ರಣವನ್ನು ರೂಪಿಸಿಕೊಳ್ಳುವುದನ್ನು ಈ ಪರಿವರ್ತನೆ
ಕಲಿಸುತ್ತದೆ. ಇವತ್ತಿಗೆ ನಾನು ಕೋಪಿಸಿಕೊಳ್ಳುವುದಿಲ್ಲ, ಆತಂಕ ಪಡುವುದಿಲ್ಲ ಎಂಬ ಬದಲಾವಣೆಗಳನ್ನು ಅನ್ವಯಿಸಿಕೊಳ್ಳುತ್ತ ಹೋದರೆ, ವ್ಯಕ್ತಿತ್ವ ನಿಧಾನವಾಗಿ ಮಾಗುತ್ತದೆ.

೩. ಕಾಂಪ್ರಮೈಸ್ ಬೇಡ: ಚಿಕ್ಕ ಪುಟ್ಟ ಆಸೆ-ಆಲೋಚನೆಗಳಿಗೆ ನಾವು ಹೆಚ್ಚಿನ ಸಲ ರಾಜಿಯಾಗಿಬಿಡುತ್ತೇವೆ. ಮನಸ್ಸಿನ ಆ ಕ್ಷಣದ ಘರ್ಷಣೆಗಳಿಂದ ಪಾರಾಗಲು ಕಾಂಪ್ರಮೈಸ್‌ನ ಆಯ್ಕೆಯೇ ನಮಗೆ ಸುಲಭ ಮಾರ್ಗವಾಗಿರುತ್ತದೆ. ಬದುಕಿನ ಗುರಿಗಳು ಪರಿಪೂರ್ಣವಾಗಿರಲಿ. ಬಲವಂತದ ಒಪ್ಪಿಕೊಳ್ಳು ವಿಕೆಯನ್ನು ನಿರಾಕರಿಸುತ್ತಾ ಗಟ್ಟಿಯಾಗಿ ನಡೆಯೋಣ.

೪. ಜಡ್ಜ್‌ಮೆಂಟಲ್ ಆಗುವುದು ಬೇಡ: ನಮ್ಮ ಬದುಕಿನ ಅನುಭವಕ್ಕೆ ಬರುವ ಪ್ರತಿ ವ್ಯಕ್ತಿಗಳು, ವ್ಯಕ್ತಿತ್ವಗಳು, ಸಂದರ್ಭಗಳನ್ನು ನಾವು ಬಹಳ ಸುಲಭ ವಾಗಿ ‘ಪಾಸಿಟಿವ್’ ಅಥವಾ ‘ನೆಗೆಟಿವ್’ ಎಂದು ತೀರ್ಮಾನಿಸಿಬಿಡುತ್ತೇವೆ. ನೆನಪಿರಲಿ- ಹೀಗೆ ಇನ್ನೊಬ್ಬರನ್ನು ಜಡ್ಜ್ ಮಾಡಿಬಿಡುವ ಮೊದಲು ನಮ್ಮಲ್ಲೊಂದು ಪ್ರಜ್ಞಾಪೂರ್ವಕ ಅರಿವಿರಬೇಕು. ಅದು ಬರೀ ಬೇರೆಯವರನ್ನು ವಿಮರ್ಶಿಸುವುದಲ್ಲ, ನಮ್ಮನ್ನು ತಿವಿದು ಎಚ್ಚರಿಸುವಂತಿರಬೇಕು.

೫. ಭಾವನೆಗಳು ಭಾರವಾಗದಿರಲಿ: ಎಲ್ಲವನ್ನೂ ಎಲ್ಲರನ್ನೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾ ಹೋದಂತೆ, ನಮ್ಮ ಭಾವನೆಗಳು, ಆಲೋಚನೆ ಗಳು ನಮಗೆ ಹೊರೆಯಾಗುತ್ತವೆ. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ್ದು ಏನು ಗೊತ್ತಾ? ನಮ್ಮ ಸ್ವಭಾವವನ್ನು ನಿರೂಪಿಸುವುದು ಈ ಕ್ಷಣದ ನಮ್ಮ ಭಾವನೆಯೂ ಅಲ್ಲ, ಆಲೋಚನೆಯೂ ಅಲ್ಲ. ನಮ್ಮ ಪ್ರತಿಕ್ರಿಯೆಯೇ ನಮ್ಮನ್ನು ಯಾರೆಂದು ವ್ಯಾಖ್ಯಾನಿಸುತ್ತದೆ. ಬದುಕನ್ನು ಸರಳವಾಗಿ ನೋಡಿ ಬಿಟ್ಟರೆ ಗೊಂದಲಗಳಿಗೆ ಜಾಗವೇ ಇರುವುದಿಲ್ಲ.

೬. ದೃಢತೆ ವ್ಯಕ್ತಿತ್ವದ ಛಾಪಾಗಿರಲಿ: ಎದುರಿಗಿರುವವರಿಗೆ ನಿಮ್ಮ ಅನಿಸಿಕೆಗಳನ್ನು, ನಿರ್ಧಾರವನ್ನು ವ್ಯಕ್ತಪಡಿಸುವಾಗ ಯಾವುದೇ ಹಿಂಜರಿಕೆ ಭಯ ವಿಲ್ಲದೆ ದೃಢವಾಗಿ ಹೇಳುವ ಛಾತಿ ಯನ್ನು ಬೆಳೆಸಿಕೊಳ್ಳಿ. ಇದು ಬದುಕಿಗೆ ಬೇಕಾದ ಮುಖ್ಯ ಕೌಶಲ. ಎಷ್ಟೋ ಬಾರಿ, ಮುಂದಾಗಬಹುದಾದ ಪರಿಣಾಮ ಗಳ ಕುರಿತಾದ ಹಿಂಜರಿಕೆಯು ಈ ಅಭಿವ್ಯಕ್ತಿಯನ್ನು ತಡೆದುಬಿಡುತ್ತದೆ. ಸದಾ ನಮ್ಮನ್ನು ಕಾಡುವ ‘ಕಳೆದುಕೊಂಡುಬಿಡಬಹುದು’ ಎಂಬ ನಮ್ಮವೇ ಭಯಗಳನ್ನು ಎದುರಿಸುವುದನ್ನು ನಾವು ಕಲಿತು ಬಿಟ್ಟರೆ, ಆ ದೃಢತೆಯೇ ನಮಗೆ ರಕ್ಷಣೆಯನ್ನು ಒದಗಿಸುತ್ತದೆ.

೭. ನಿಮ್ಮ ಬಗ್ಗೆ ಪ್ರತಿಯೊಬ್ಬರಿಗೂ ವಿವರಿಸಬೇಕಿಲ್ಲ: ಅನೇಕ ಸಲ ನಾವು, ನಮ್ಮ ಅಸ್ಥಿರತೆ-ಅಭದ್ರತೆಯ ಕಾರಣಕ್ಕಾಗಿ ಪ್ರತಿಯೊಂದನ್ನೂ ಬೇರೆಯವರಿಗೆ ವಿವರಿಸಲು ಯತ್ನಿಸುತ್ತೇವೆ. ಇದರ ಅಗತ್ಯವಿಲ್ಲ. ನೀವೇಕೆ ಹೀಗೆ ಮಾಡಿದಿರಿ, ಹೀಗೆ ಯೋಚಿಸಿದಿರಿ, ಹೀಗೆ ನಿರ್ಧರಿಸಿದಿರಿ, ಹೀಗೆ ನಡೆದುಕೊಂಡಿರಿ
ಎಂಬುದು ನಿಮಗೆ ಗೊತ್ತಿದ್ದರೆ ಸಾಕು. ಅದು ಸರಿ ಅನಿಸಿಯೇ ನೀವು ಆ ಕ್ಷಣಕ್ಕೆ ಪ್ರತಿಕ್ರಿಯಿಸುತ್ತೀರಿ. ಒಂದೊಮ್ಮೆ ಅದು ತಪ್ಪಾಗಿದ್ದರೆ ಪುಟ್ಟಕ್ಷಮೆ ಕೇಳಿಬಿಡಿ. ಅದನ್ನು ಬಿಟ್ಟು, ನಿಮ್ಮ ಯೋಚನೆಯಿಂದ ಹಿಡಿದು ನಿಮ್ಮ ಪ್ರತಿಕ್ರಿಯೆವರೆಗಿನ ಎಲ್ಲ ನಡವಳಿಕೆಗಳಿಗೆ ವಿವರಣೆಯ ಅಗತ್ಯವಿಲ್ಲ.

೮. ಉತ್ಸಾಹ ತುಂಬಬಲ್ಲ ಅಭಿರುಚಿಗಳನ್ನು ಅನುಸರಿಸಿ: ನೀವು ಪ್ರೀತಿಯಿಂದ ತೊಡಗಿಸಿಕೊಳ್ಳಬಲ್ಲ ಕೆಲಸಗಳಿಗೆ ಆದ್ಯತೆಯಿರಲಿ. ನಿಮ್ಮ ಒಳದನಿಗೆ ಕಿವಿಯಾಗಿ. ನಿಮ್ಮ ಯಾವುದೇ ಕೆಲಸಗಳಲ್ಲಿ ಪ್ರೀತಿ ಮತ್ತು ಖುಷಿ ತುಂಬಿರಲಿ. ಕೆಲಸದ ಮೇಲೆ ಪ್ರೀತಿ ಮೂಡಿಬಿಟ್ಟರೆ ಅಲ್ಲಿ ಭಯ-ಅಭದ್ರತೆಗಳಿಗೆ ಜಾಗವಿಲ್ಲ. ಪ್ರೀತಿ ಮತ್ತು ಉತ್ಸಾಹಕ್ಕೆ, ಕತ್ತಲೆಯ ಜಗತ್ತಿನೊಳಗೂ ಕೈಹಿಡಿದು ನಡೆಸುವ ಶಕ್ತಿಯಿದೆ. ಆದರೆ ಉತ್ಸಾಹವನ್ನು ಉಕ್ಕಿಸಿಕೊಳ್ಳಬೇಕಷ್ಟೇ.

೯. ಆರಾಮದ ನೆಲೆಯನ್ನು ದಾಟೋಣ: ‘ಆಗೋಲ್ಲ’ ಎಂಬ ಸಂಗತಿ ಹುಟ್ಟಿಕೊಳ್ಳುವುದೇ ನಾವು ಒಂದು ವಿಷಯಕ್ಕೆ, ವ್ಯಕ್ತಿಗೆ, ಕೆಲಸಕ್ಕೆ, ಸಂದರ್ಭಕ್ಕೆ, ಇನ್ಯಾವುದೋ ವಲಯಕ್ಕೆ ಅಂಟಿಕೊಂಡುಬಿಟ್ಟಿದ್ದರೆ. ಅಂಟಿಕೊಂಡಿರುವ ಆಲೋಚನೆ ನಮ್ಮನ್ನು ಸಾಮಾನ್ಯರಲ್ಲಿ ಸಾಮಾನ್ಯರನ್ನಾಗಿ ಮಾಡಿಬಿಡುತ್ತದೆ.
ನೀವೇನಾದರೂ ಅಸಾಧಾರಣವಾದದ್ದರ ಬಗ್ಗೆ ಯೋಚಿಸಿದ್ದಲ್ಲಿ ಆರಾಮದ ಮನಸ್ಥಿತಿಯನ್ನು ದಾಟಿ. ಆಗ ನಿಮ್ಮ ಮಿತಿಗಳಾಚೆಯ ಬದುಕನ್ನು ನೋಡ ಬಹುದಾದ ಹೊಸ ಸಾಧ್ಯತೆಗಳು ಕಾಣುತ್ತವೆ.

ಮುಗಿಸುವ ಮುನ್ನ…
ಒಮ್ಮೆ ಮೇಷ್ಟ್ರು ತರಗತಿಯ ೭೦ ಮಕ್ಕಳಿಗೆ ಒಂದೊಂದು ಬಲೂನ್ ಕೊಟ್ಟು, ಅದನ್ನು ಊದಿ ಅದರ ಮೇಲೆ ತಂತಮ್ಮ ಹೆಸರು ಬರೆದು, ಒಂದು ಕೋಣೆ ಯಲ್ಲಿ ಹಾಕುವಂತೆ ಹೇಳಿದರು. ಕೆಲ ಕಾಲದ ನಂತರ, ‘ಆ ಕೋಣೆಯೊಳಗೆ ಹೋಗಿ ನಿಮ್ಮ ಹೆಸರಿರುವ ಬಲೂನುಗಳನ್ನು ೧೦ ನಿಮಿಷದಲ್ಲಿ ಹುಡುಕಿ ತನ್ನಿ’ ಎಂದರು. ಮಕ್ಕಳೆಲ್ಲಾ ಒಬ್ಬರನ್ನೊಬ್ಬರು ತಳ್ಳುತ್ತಾ ಬಲೂನ್ ಹುಡುಕತೊಡಗಿದರು. ಆದರೆ ೧೦ ನಿಮಿಷ ಕಳೆದರೂ ಅದು ಸಾಧ್ಯವಾಗ ಲಿಲ್ಲ.

ಆಗ ಮೇಷ್ಟ್ರು, ‘ಕೈಗೆ ಸಿಕ್ಕ ಬಲೂನನ್ನು ತೆಗೆದುಕೊಂಡು, ಅದರ ಮೇಲೆ ಯಾರ ಹೆಸರಿರುವುದೋ ಅವರಿಗೆ ಕೊಡಿ’ ಎಂದರು. ಹೀಗಂದು ೧೦ ನಿಮಿಷವೂ
ಆಗಿರಲಿಲ್ಲ, ಎಲ್ಲ ಮಕ್ಕಳಿಗೂ ತಂತಮ್ಮ ಬಲೂನ್ ಸಿಕ್ಕಿತ್ತು! ನಮ್ಮ ಬದುಕಲ್ಲೂ ಹೀಗೆಯೇ ನಮ್ಮ ಸಂತಸದ ಕ್ಷಣಗಳು ಎಲ್ಲಿವೆಯೆಂದು ತಿಳಿಯದೆ ಎಲ್ಲ ಕಡೆ ಉದ್ವೇಗದಿಂದ ಹುಡುಕುತ್ತಲಿರುತ್ತೇವೆ. ಸುತ್ತಲಿನವರ ಖುಷಿಯಲ್ಲೇ ನಮ್ಮ ಸಂತೋಷ ಇರುತ್ತದೆ. ಅವರಿಗೆ ನಮ್ಮ ಖುಷಿ ನೀಡೋಣ, ಅವರ ಸಂತೋಷ ನಮ್ಮದೂ ಆಗುತ್ತದೆ!

Leave a Reply

Your email address will not be published. Required fields are marked *

error: Content is protected !!