Thursday, 12th December 2024

ಮುಂದೆ ಬಂದರೆ ಹಾಯುವ ರೇವಣ್ಣ

ರಾವ್ ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ನಾನು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿದ್ದಾಗ ಪತ್ರಿಕೆಯ ಪುಟಗಳ ವಿನ್ಯಾಸವನ್ನು ಸಿದ್ಧಪಡಿಸುವ ಜವಾಬ್ದಾರಿ ಸರದಿಯ ಮೇರೆಗೆ ನನಗೂ ದೊರಕುತ್ತಿತ್ತು. ಪೇಸ್ಟ್-ಅಪ್ ಆರ್ಟಿಸ್ಟ್‌ಗಳು ನಮ್ಮ ನಿರ್ದೇಶನಕ್ಕನುಗುಣವಾಗಿ ಪುಟಗಳನ್ನು ಅಚ್ಚಿಗೆ ಸಂರಚಿಸುತ್ತಿದ್ದರು. ಅವರಂದು ನಾಲ್ಕು ಮಂದಿ ವಯಸ್ಸಿನಲ್ಲೂ, ಅನುಭವದಲ್ಲೂ ಅವರಿಂದ ಕೆಲಸ ತೆಗೆಯುತ್ತಿದ್ದ ಉಪಸಂಪಾದಕರುಗಳಾದ ನಮಗಿಂತ ಹಿರಿಯರಾಗಿದ್ದರು.

ಹಿರಿಯರಿರಲಿ, ಕಿರಿಯರಿರಲಿ ಅವರೆಲ್ಲರನ್ನೂ ಬಹುವಚನದ ಸಂಬೋಧಿಸುತ್ತಿದ್ದವು. ಒಬ್ಬರು ಮಾತ್ರ ಏಕವ ಚನದ ಅವರೆಲ್ಲರನ್ನೂ ಬೋಧಿಸುತ್ತಿದ್ದರು. ನಾನು ಕಂಡಂತೆ, ಅವರಲ್ಲಿ ಹಿರಿಯರಾಗಿದ್ದವರೂ ಗೌರವಯುತ ವಾಗಿ ನಡೆಸಿಕೊಳ್ಳುತ್ತಿದ್ದ ನಮಗಿಂತಲೂ ದರ್ಪದಿಂದ ಅವರನ್ನು ಕರೆಯುತ್ತಿದ್ದವರು ವಹಿಸುತ್ತಿದ್ದ ಕೆಲಸಗಳನ್ನೇ ಚಾಕಚಕ್ಯತೆಯಿಂದ ನಿರ್ವಹಿಸುತ್ತಿದ್ದರು. ನನ್ನ ಬಳಿ ಸಲಿಗೆಯಿಂದ ಇರುತ್ತಿದ್ದು, ನಾನು ಹೇಳಿದ ಕೆಲಸಗಳನ್ನು ನಿರ್ವಹಿಸು ವಾಗ ಆಲಸ್ಯ ತೋರುತ್ತಿದ್ದರು, ಥಟ್ಟನೆ ಆದೇಶವನ್ನು ಪರಿಪಾಲಿಸುತ್ತಿರಲಿಲ್ಲ. ಆ ಕಾರಣಕ್ಕೆ ಅವರಿಗೆ ಸಂದಾಯವಾಗಬೇಕಿದ್ದ ಔಚಿತ್ಯಕ್ಕೆ ಕಡಿಮೆ ಮಾಡುತ್ತಿರಲಿಲ್ಲ. ನನಗೆ ಕೆಲಸ ತೆಗೆಯಲು ಬರುವುದಿಲ್ಲ ಅಂತ ಕೆಲವೊಮ್ಮೆ ಅನ್ನಿಸಿದ್ದಿದೆ.

ನಂತರದ ವರ್ಷಗಳಲ್ಲಿ ಸಂಪಾದಕನಾಗಿ ಕಾರ್ಯ ನಿರ್ವಹಿಸುವಾಗಲೂ ನನ್ನ ವಿಧಾನವನ್ನು ಬದಲಾಯಿಸಿ ಕೊಳ್ಳಲಿಲ್ಲ. ನನ್ನ ತಂಡದಲ್ಲಿದ್ದ ಬಹುತೇಕರು ಅನನುಭವಿಗಳು. ಅನ್ನ ಕಲಸಿ ಬಾಯಿಗಿಡುವುದು ನನಗಿಷ್ಟ ವಿಲ್ಲದ ಪದ್ಧತಿ. ಹುಡುಗು ಬುದ್ಧಿಯವರನ್ನು ನಿಭಾಯಿಸಬೇಕಲ್ಲ, ನನ್ನ ನಿಯಮಗಳನ್ನು ತುಸು ಸಡಿಲ ಗೊಳಿಸಿದೆ. ಇದನ್ನು ನಾನು ಹೇಳುತ್ತಲೇ ಇರುತ್ತೇನೆ. ಪ್ರತಿಷ್ಠಿತ ಪತ್ರಿಕೆಗಳೂ ಸೇರಿದಂತೆ ಇಂಗ್ಲಿಷ್ ಪತ್ರಿಕೆಗಳಲ್ಲಿನ ಹಲವಾರು ವರದಿಗಾರ/ವರದಿಗಾರ್ತಿಯರ ಇಂಗ್ಲಿಷ್ ಅಷ್ಟಕ್ಕಷ್ಟೆ. ಕೆಲವರ ಭಾಷೆಯಂತೂ ದಿಗಿಲಾಗಿಸುತ್ತದೆ.

ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿ ನೌಕರಿಯಲ್ಲಿzಗ, ಒಮ್ಮೆ ನಾನು ಮತ್ತುನನ್ನ (ಕೇರಳ ಮೂಲದ) ಸಹ ಉಪಸಂಪಾದಕ ವರದಿ ಗಾರನೊಬ್ಬನಿಗೆ ದಯವಿಟ್ಟು ನೀನು ಬರೆಯುವ ತೊಂದರೆ ತೆಗೆದುಕೊಳ್ಳಬೇಡ, ನೀನು ಕಲೆಹಾಕಿದ ಸುದ್ದಿಯನ್ನು ನಮ್ಮ ಮುಂದೆ ನಿಂತು, ಕನ್ನಡದದರೆ ನನಗೆ, ಮಲಯಾಳಂ ನದರೆ ಅವನಿಗೆ ಹೇಳಿಬಿಡು, ಅದನ್ನು ಕೇಳಿಕೊಂಡು ನಾವೇ (ಇಂಗ್ಲಿಷ್‌ನಲ್ಲಿ) ವರದಿಯನ್ನು ಬರೆಯುವುದೇ ಸರಾಗದ ಕೆಲಸ ಎಂದು ವಿನಂತಿಸಿದ್ದೆವು. (ಸದರಿ ವರದಿಗಾರನಿಗೆ ಕನ್ನಡ ಮತ್ತು ಮಲಯಾಳಂ ಮಾತನಾಡಲು ಬರುತ್ತಿತ್ತು.) ಪ್ರತಿಷ್ಠಿತ ಪತ್ರಿಕೆಗಳ ವಿದ್ಯಮಾನವೇ ಹಾಗಿರುವಾಗ, ನಾನು ತದನಂತರದಲ್ಲಿ ಸಂಪಾದಕತ್ವ ವಹಿಸಿದ್ದ ಪುಟ್ಟ ಪತ್ರಿಕೆಯ ಪಾಡೇನು? ಅದೂ, ಮೈಸೂರಿನಂತಹ ಪುಟ್ಟ ಊರಲ್ಲಿ ಪ್ರತಿಭೆಯ ಕೊರತೆ ದೊಡ್ಡದೇ.

ನನಗೆ ಅಸಮಾಧಾನವಿದ್ದುದು ನನ್ನ ತಂಡದ ಎಳೆಯರು ಮಾಡುತ್ತಿದ್ದ ತಪ್ಪುಗಳ ಬಗ್ಗೆಯಲ್ಲ, ಕೆಲಸದ ಬಗ್ಗೆ ಅವರಲ್ಲನೇಕರಿಗಿದ್ದ ನಿರಾಸಕ್ತಿಯ ಬಗ್ಗೆ. ಅವರನ್ನು ಉತ್ತೇಜಿಸಲು ಪ್ರಯತ್ನಪಟ್ಟು ಹೈರಾಣಾಗಿದ್ದೆ. ನಾನೇ ಶ್ರಮವಹಿಸಿ ಬರೆದ ವಿಶೇಷ ಲೇಖನಗಳಿಗೆ ಅವರ ಹೆಸರನ್ನು ಲಗತ್ತಿಸುತ್ತಿದ್ದೆ, ಕೆಲವೊಮ್ಮೆ, ಅವರ ಹೆಸರಿನ ಕೆಳಗೆ ನನ್ನ ಹೆಸರನ್ನು ಹಾಕುತ್ತಿದ್ದೆ. ಅವರು ತಪ್ಪು ಮಾಡಿದಾಗ ನಾನು ಬೈದದ್ದು ಕಡಿಮೆ. ತಪ್ಪನ್ನು ತಿದ್ದುವಾಗಲೂ, ಪ್ರತ್ಯೇಕವಾಗಿ ಕರೆದು ಮೆದುವಾಗಿ ಹೇಳುತ್ತಿದ್ದೆ, ಎಲ್ಲರೆದುರು ತಿದ್ದುತ್ತಿರಲಿಲ್ಲ.

ಅಷ್ಟೆಲ್ಲ ಮಾಡಿಯೂ, ಕೆಲಸದ ಬಗ್ಗೆ ಸಂಪೂರ್ಣ ಉದಾಸೀನ ತೋರಿದ್ದ ಇಬ್ಬರನ್ನು ನಾನೇ ಗದರಿ ಮನೆಗೆ ಕಳಿಸುವಂಥ ಸನ್ನಿವೇಶವನ್ನು ಅವರಿಬ್ಬರೂ ತಂದುಕೊಂಡಿದ್ದರು. ಅವರಬ್ಬರು ಬೆಂಗಳೂರಿನಲ್ಲಿ ಪತ್ರಿಕೆಯೊಂದರಲ್ಲಿ ಉದ್ಯೋಗ ಸಂಪಾದಿಸಿದ್ದರು. ಅದು ಅವರ ತಲೆಗೆ ಹೊಕ್ಕಿತ್ತು. ನಾನೊಮ್ಮೆ ಅಲ್ಲಿಗೆ ಕಾರ್ಯನಿಮಿತ್ತ ಹೋದಾಗ ರೆಸ್ಟೋರೆಂಟ್‌ದಲ್ಲಿ ಕಂಡುಬಂದರು. ಕಾಲುಚಾಚಿ ಸಿಗರೇಟ್ ಸೇದುತ್ತಾ ಕುಳಿತಿದ್ದ ಅವರು ನನ್ನನ್ನು ದೂರ ದಿಂದಲೇ ಗಮನಿಸಿ ತಿರಸ್ಕಾರದ ನೋಟ ಬೀರಿ ನನ್ನ ದಿಕ್ಕಿನತ್ತ ಹೊಗೆ ಉಗುಳಿದರು. ನನ್ನನ್ನು ಮಾತನಾಡಿಸುವ ಇರಾದೆ ಆತನ ಚಹರೆಯಲ್ಲಿ ಕಾಣದಿ ದ್ದುದರಿಂದ ನಾನೇ ಆತನ ಬಳಿ ಹೋಗಿ ಹಲೋ ಹೇಳಬೇಕೆಂದು ನನಗನ್ನಿಸಲಿಲ್ಲ.

ಅದೇ ಸಂಜೆ, ನಾನು ಪ್ರೆಸ್ ಕ್ಲಬ್ಬಿಗೆ ಹೋಗಿದ್ದೆ. ಮೆಟ್ಟಿಲಿಳಿದು ಹೊರ ಹೋಗುವಾಗ ಅದೇ ವ್ಯಕ್ತಿ ಆತನ ಬಾಸ್ ಬಳಿ ಮಾತನಾಡುತ್ತಿದ್ದರು. ನನ್ನ ಹತ್ತಿರದ ಸ್ನೇಹಿತರಾದ ಅವರ ಬಾಸ್ ನನಗೆ ವಿಶ್ ಮಾಡಿದರು. ಒಂದೆರಡು ಗಂಟೆಗಳ ಮುಂಚೆ ನನ್ನತ್ತ ಅಸಡ್ಡೆಯಾಗಿ ಹೊಗೆ ಉಗುಳಿದ್ದ ವ್ಯಕ್ತಿ ಹೌಹಾರಿ ನನಗೆ ವಿಶ್ ಮಾಡಿದರು. ಮುಂಚಿನ ಔದಾಸೀನ್ಯತೆಯನ್ನು ನಿರೀಕ್ಷಿಸಿದ್ದ ನನಗೆ ನಿರಾಸೆಯಾಯಿತು. ಆತನ ಬಾಸ್ ನನಗೆ ಹತ್ತಿರದ ಸ್ನೇಹಿತನೆಂದು ತಿಳಿದು ಬಂದ ಮೇಲೂ ತನ್ನ ಅನಾದರವನ್ನು ಮುಂದುವರೆಸಿದ್ದರೆ ಆತನನ್ನು ನಾನು ಮನದೊಳಗೇ ಮೆಚ್ಚಿಕೊಳ್ಳುತ್ತಿದ್ದೆ.

ನಾನೆಲ್ಲಿ ಬಾಸ್‌ಗೆ ಆತನ ಬಗ್ಗೆ ದೂರು ನೀಡಿ ಆತನ ನೌಕರಿಗೇ ಸಂಚಕಾರ ತರುತ್ತೇನೆಂಬ ಲೆಕ್ಕಾಚಾರದಲ್ಲಿ ನನಗೆ ಸಲಾಮ್ ಹೊಡೆದದ್ದು ನನಗೆ ಬೇಸರ ತಂದಿತ್ತು. ಆ ಸಲಾಮ್‌ನ ಹಿಂದೆ ಗೌರವವಿರಲಿಲ್ಲ, ಆತ್ಮೀಯತೆಯಂತೂ ಇರಲೇ ಇಲ್ಲ. (ಕೆಲಸ ಹೋದೀತೆಂಬ ಆತಂಕವಿತ್ತು.) ಗುಣ ಮಟ್ಟವಿಲ್ಲದ ಆತನ ಹಲೋನಿಂದ ಮನಸ್ಸು ಪಿಚ್ಚೆನಿಸಿತು. ನನ್ನ ಗರಡಿಯಲ್ಲಿ ತಯಾರಾದ ಯುವ ಪತ್ರಕರ್ತನಿಗೆ ತನ್ನತನವನ್ನೇ ಉಳಿಸಿಕೊಳ್ಳಲಿಕ್ಕಾಗದ ದೌರ್ಬಲ್ಯವನ್ನು
ಕಂಡು ಅಯ್ಯೋ ಎನಿಸಿತು. ಆತ ಸಿಗರೇಟ್ ಹತ್ತಿಸಿ ನನ್ನ ಮುಖಕ್ಕೆ ನೇರವಾಗಿ ಹೊಗೆ ಬಿಟ್ಟಿದ್ದರೂ ನನ್ನ ಪ್ರಶಂಸೆಗೆ ಪಾತ್ರನಾಗುತ್ತಿದ್ದರು. ನಾನು ಆತನ ಬಾಸ್‌ಗೆ ಚಾಡಿ ಹೇಳಬಲ್ಲ ವ್ಯಕ್ತಿಯಾಗಿ ಆತನಿಗೆ ಕಂಡುಬಂದದ್ದರಿಂದಲೇ ಆತ ಭಯಗ್ರಸ್ತನಾಗಿದ್ದು ಎಂಬರಿವು ಮೂಡಿ ಖಿನ್ನನಾದೆ.

ಆತನ ದುರದೃಷ್ಟವೋ ಏನೋ, ಆತ ವಿದೇಶದಲ್ಲಿ ಮತ್ತೊಂದು ನೌಕರಿ ಪಡೆದು ಹೋದಾಗಲೂ ಆತನ ಹೊಸ ಬಾಸ್ ಹಿಂದೊಮ್ಮೆ ನನ್ನ ಬಾಸ್ ಕೂಡ ಆಗಿದ್ದು ನನಗೆ ಚೆನ್ನಾಗಿ ಪರಿಚಯವಿದ್ದರು. ನಿಮ್ಮೂರಿನ ಹುಡುಗ ನಮ್ಮಲ್ಲಿದ್ದಾನೆ ಎಂದು ತಿಳಿಸಿದರು. ಚೆನ್ನಾಗಿ ಕೆಲಸ ಕಲಿಸಿಕೊಡಿ ಎಂದು ನಿವೇದಿಸಿದೆ. ನೋಡು, ನಿನ್ನ ಮಾಜಿ ಬಾಸ್ ಕೂಡ ನೀನು ಕೆಲಸ ಚೆನ್ನಾಗಿ ಕಲಿಯಲೆಂದು ಹೇಳುತ್ತಿದ್ದಾರೆ ಎಂದು ಆ ಯುವಪತ್ರಕರ್ತರ ಬಗ್ಗೆ ತಮಗಿದ್ದ ಅಸಮಾ ಧಾನವನ್ನು ಮುಕ್ತವಾಗೇ ಹಂಚಿಕೊಂಡರು.

ನನಗೆ ಪವರ್ ಗೇಮ್‌ನಲ್ಲಿ ನಂಬಿಕೆ ಇಲ್ಲ. ಪವರ್ ಗೇಮ್ ಎಂದರೆ ಅಧಿಕಾರದ ದುರ್ಬಳಕೆ. ಅಧೀನ ಸಿಬ್ಬಂದಿಯ ಮೇಲೆ ಅಧಿಕಾರವನ್ನು ಚಲಾಯಿ ಸುವುದೂ ಪವರ್ ಗೇಮ್. ಮಾಜಿ ಸಹೋದ್ಯೋಗಿ ನನ್ನತ್ತ ಹೊಗೆ ಉಗುಳಿದ್ದನ್ನೇ ದೊಡ್ಡದು ಮಾಡಿ ಆತನ ಪ್ರಸಕ್ತ ಬಾಸ್‌ನ ಜತೆ ನನಗಿದ್ದ ಸಾಮೀಪ್ಯ ವನ್ನು ನನ್ನ ಲಾಭಕ್ಕಾಗಿ ಬಳಸಿಕೊಂಡು ಆ ವ್ಯಕ್ತಿಗೆ ಕಿರುಕುಳ ನೀಡುವುದೂ ಪವರ್ ಗೇಮ್. ಅದನ್ನು ನಾನು ಎಂದೂ ಆಡಿಲ್ಲ. ನನ್ನ ಮೇಲಿನವರು ನನ್ನ ಮೇಲೆ ಅಧಿಕಾರವನ್ನು ಚಲಾಯಿಸಿದಾಗ ಅದನ್ನು ವಿರೋಧಿಸಿದ್ದೇನೆ. ಇದೇ ಕಾರಣಕ್ಕೇ ಹೊಳೆನರಸೀಪುರದ ಎಚ್.ಡಿ.ರೇವಣ್ಣ ಮೊನ್ನೆ ಯುವ ಪಶು ವೈದ್ಯರೊಬ್ಬರ ಮೇಲೆ ಅನುಚಿತವಾಗಿ ಬಾಯಿ ಮಾಡಿದ್ದೂ ಅಧಿಕಾರದ ದುರ್ಬಳಕೆಯಾದ ಪವರ್ ಗೇಮ್ ಆಗಿದ್ದು ಅದನ್ನು ಖಂಡಿಸಲು ಮುಂದಾಗಿದ್ದೇನೆ.

ತಮ್ಮ ಸದಸ್ಯರೊಬ್ಬರನ್ನು ಏಕವಚನದಲ್ಲಿ ಸಂಬೋಧಿಸಿ ದನ ಕಾಯಿ ಹೋಗು ಎಂದು ಅಪಮಾನಿಸಿದ್ದಕ್ಕಾಗಿ ರಾಜ್ಯ ಪಶು ವೈದ್ಯಕೀಯ ಸಂಘವು ಪ್ರತಿಭಟಿಸಿದ್ದಕ್ಕೆ ರೇವಣ್ಣ ಕ್ಷಮೆಯಾಚಿಸಿದ್ದಾರೆ. ಆದರೆ, ರೇವಣ್ಣರನ್ನು ಬಲ್ಲವರಿಗೆ ಇದು ಬೀಸುವ ದೊಣ್ಣೆಯಿಂದ ಸದ್ಯಕ್ಕೆ ತಪ್ಪಿಸಿಕೊಂಡು ಆಯಸ್ಸನ್ನು
ಗಳಿಸಿಕೊಳ್ಳುವ ತಂತ್ರವಷ್ಟೇ ಎಂಬುದು ಗೊತ್ತು. ನಾಲಗೆಯನ್ನು ಹರಿಬಿಡುವುದು ಅವರಿಗೆ ವಂಶ ಪಾರಂಪರ್ಯವಾಗಿ ಬಂದ ಗುಣವೋ, ಅಧಿಕಾರದ ಅಮಲಿನಿಂದ ಬಂದದ್ದೇ ಕಾಣೆ. ಕ್ಷಮೆ ಕೇಳಿದಾಕ್ಷಣ ಅವರು ಬದಲಾಗಿ ಬಿಟ್ಟರಂತೇನಲ್ಲ. ನಾನು ಹಾಗೆ ಭಾವಿಸಲು ಕಾರಣ ಅವರು ಸಂಘಟಿತರಾದ ಪಶು ವೈದ್ಯರುಗಳನ್ನಷ್ಟೇ ಕ್ಷಮೆ ಕೇಳಿದ್ದಾರೆ.

ಅವರು ಗೋಪಾಲಕರುಗಳನ್ನೂ ತುಚ್ಛವಾಗಿ ಕಂಡಿದ್ದು ಅವರಲ್ಲೂ ಕ್ಷಮೆ ಬೇಡಬೇಕಲ್ಲವೇ? ಬದುಕಿನ ನೀರವತೆ ಕಳೆಯಲೋ ಎಂಬಂತೆ ಶ್ರೇಣೀಕೃತ
ವ್ಯವಸ್ಥೆಯಲ್ಲಿ ದಲಿತರನ್ನು ದೂರ ಇಡಲಾಗಿದೆ ಎಂದೆಲ್ಲ ಬೊಬ್ಬೆಯಿಡುವ ಹಾಳೆ ಹುಲಿಗಳು, ತಮಗಿರುವ ದಲಿತ ಪರ, ರೈತಾಪಿಪರ ಕಾಳಜಿ ಪ್ರಾಮಾಣಿಕವಾಗಿದ್ದಲ್ಲಿ, ರೇವಣ್ಣರ ದುರ್ನುಡಿಯನ್ನು ಖಂಡಿಸಬೇಕಿತ್ತು. ಮಣ್ಣಿನ ಮಗ ಎಂದೆ ಬಿರುದು ಸಂಗ್ರಹಿಸಿರುವ ದೇವೇಗೌಡರೇಕೆ ಮಗನಿಗೆ ಕಿವಿಹಿಂಡಿಲ್ಲ? ಮಾಜಿ ಮುಖ್ಯಮಂತ್ರಿಯನ್ನೇ ಕೀಳು ಪದದಿಂದ ಹೀಗಳೆದವರಿಂದ ಆದರ್ಶ ಪೋಷಕತ್ವವನ್ನು ನಿರೀಕ್ಷಿಸುವುದೇ ತಪ್ಪಾ? ಡಕ್ವರ್ತ್ ಲೂಯಿಸ್ ಸೂತ್ರ ಕ್ರಿಕೆಟ್‌ನಲ್ಲಷ್ಟೇ ಅಲ್ಲ ರಾಜಕಾರಣದಲ್ಲೂ ಇದೆ.

ಕರ್ನಾಟಕದ ಮಟ್ಟಿಗೆ ದೇವೇಗೌಡ-ಕುಮಾರಸ್ವಾಮಿ ಸೂತ್ರವೆಂದು ಕರೆಯೋಣ. ವಿಧಾನ ಸಭೆಯ ಒಟ್ಟು ಸೀಟುಗಳ ಆರನೇ ಒಂದರಷ್ಟು ಸೀಟು ಗಳಿಸಿದ ಪಕ್ಷದ ಮುಖ್ಯಸ್ಥನೂ ಮುಖ್ಯಮಂತ್ರಿ ಪೀಠಕ್ಕೆ ಟವೆಲ್ ಹಾಕಬಲ್ಲ ವೈಚಿತ್ರ್ಯವೇ ಆ ಸೂತ್ರದ ಮಹಿಮೆ. ಅಂತಹ ವಿಚಿತ್ರ ಮಂತ್ರಿಮಂಡಲದ ಮಾಜಿ ಸದಸ್ಯನಾಗಿಯೂ ರೇವಣ್ಣ ಈ ಮಟ್ಟಿನ ಪಾಳೇಗಾರಿಕೆಯನ್ನು ಮೆರೆಯುತ್ತಾರೆಂಬುದು ಸಖೇದಾಶ್ಚರ್ಯ. ಈ ಲೇಖನ ಬರೆಯುವಾಗ ಸ್ವಯಂ ರೇವಣ್ಣ ನವರ ಹಸುಗಳ ಶುಶ್ರೂಷೆಯನ್ನು ಮಾಡಿದವರನ್ನೂ ಮಾತನಾಡಿಸಿದ್ದೇನೆ. ದನದ ವೈದ್ಯರೇನು ನಿತ್ಯದ ವೈದ್ಯರಿಗಿಂತ ಕೀಳೇ? ಲೋಕೋಪ ಯೋಗಿ ಇಲಾಖೆಯಂಥ ಇಲಾಖೆಯನ್ನು ಪ್ರಬಲ ಖಾತೆಯನ್ನು ಪರಿಗಣಿಸಿ, ಅದನ್ನು ನಿಭಾಯಿಸುವ ಛಾತಿ ತಮಗೆ (ತಮಗಷ್ಟೇ) ಇದೆ ಎಂದು ಭಾವಿಸಿ, ಅದು ಸಿಗದಿದ್ದರೆ ಮುಖ ಸಿಂಡರಿಸುವ ರೇವಣ್ಣರಿಗಷ್ಟೇ ಪಶುವೈದ್ಯಕೀಯ ಅನಾಕರ್ಷಕವಾಗಿ ಕಾಣಬಲ್ಲದು.

ರಾಜಧಾನಿಯೂ ಆದ ಬೆಂಗಳೂರಿನಂಥ ನಗರದಲ್ಲಿ ನೆಲೆ ಕಳೆದುಕೊಂಡು ವರ್ಷಗಳೇ ಸಂದ ನಂತರವೂ ಗೋಪಾಲನೆಯಲ್ಲಿ ರೇವಣ್ಣರು ಪರೋಕ್ಷವಾಗಿ ಯಾದರೂ ತೊಡಗಿಸಿಕೊಂಡಿರುವುದು ಅಭಿನಂದನೀಯವೇ. ಆದರೆ ಅಲ್ಲಿಯ ಆಧುನಿ ಕತೆಯನ್ನು ಮೈಗೂಡಿಸಿಕೊಳ್ಳದೆ, ಆರ್ಥಿಕ ವ್ಯವಸ್ಥೆಯ ಮುಖ್ಯ ಭಾಗವಾದ ಪಶುಸಂಗೋಪಕರನ್ನು ದನಗಾಹಿಗಳೆಂದು ಜರೆದಿರುವುದು ಖೇದನೀಯ, ಖಂಡನೀಯ. ಹಾಗಿದ್ದೂ, ಕ್ಷೀರ ಮಹಾಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ, ಡಕ್ವರ್ತ್ ಲೂಯಿಸ್ ಸೂತ್ರದ ಆಧಾರದ ಮೇಲೆ ಮತ್ತೆ ಆಯ್ಕೆಯಾಗುವ ಹಪಹಪಿ. ನೆನ್ನೆಯಷ್ಟೇ ರೈತಮಿತ್ರರೊಬ್ಬರ ಬಳಿ ಚರ್ಚಿಸು ತ್ತಿದ್ದೆ. ಸಗಣಿಯೇ ಗೊಬ್ಬರವಲ್ಲ, ಸಗಣಿಯೇ ಗೊಬ್ಬರ ಎಂಬ ತಪ್ಪು ಕಲ್ಪನೆಯಿದೆ. ಕಳಿಯದ ಗೊಬ್ಬರ ಭೂಮಿಗಿಳಿದಾಗ ವಿಷಾನಿಲಗಳು ಬಿಡುಗಡೆಗೊಂಡು ಮರಗಿಡಗಳ ಬೇರು ಸುಟ್ಟು ಹೋಗುತ್ತವೆ. ನೈಟ್ರೇಟ್ ಅಂಶ ಮಳೆಯ ನೀರಿನೊಂದಿಗೆ ಭೂಮಿಗಿಳಿದು ಬೋರ್ವೆಲ್ ನೀರನ್ನು ಉಪ್ಪಾಗಿಸುತ್ತದೆ ಎಂಬ ಅವರ ಜ್ಞಾನ ಸಾಗರದ ಒಂದು ಬೊಗಸೆ ನೀರನ್ನು ನನಗೂ ಕುಡಿಸಿದರು.

ರೇವಣ್ಣ ನವರೇ, ನಿಮ್ಮ ಮಾತುಗಳು ಸಗಣಿಯಂತಾದರೆ, ಅದು ನೇರವಾಗಿ ನಿಮ್ಮ ಕ್ಷೇತ್ರದ ವಿಸ್ತರಿಸಿ ಮತವೃಕ್ಷದ ಬೇರುಗಳನ್ನು ಸುಟ್ಟು ಹಾಕಬಲ್ಲದು. ನಿಮ್ಮದು ಬುದ್ಧಿವಂತರ ಜಿಲ್ಲೆಯೆಂದು ಇತ್ತೀಚೆಗೆ ಸಾಬೀತಾಗಿದೆ. ಮರೆಯಬೇಡಿ. ಅಂದು ನೀವು ಪ್ರವಾಹ ಸಂತ್ರಸ್ತರತ್ತ ಬಿಸ್ಕೆಟ್ ಪೊಟ್ಟಣ ಎಸೆದದ್ದು ದುರ್ವರ್ತನೆಯಲ್ಲದಿರಬಹುದು ಎಂದು ಔದಾರ್ಯ ತೋರಿದವರ ಎಣಿಕೆಯನ್ನು ಹುಸಿಗೊಳಿಸಿದ್ದೀರಿ. ನಡೆನುಡಿ ಬದಲಾಯಿಸಬೇಕಾದ ನಾಯಕರ ಪೈಕಿ (ಉದಾಹರಣೆಗಷ್ಟೇ ಹೇಳುವುದಾದರೆ) ಸಿದ್ದರಾಮಯ್ಯ, ಮಾಧುಸ್ವಾಮಿ ಮುಂತಾದವರ ಸಾಂಗತ್ಯ ನಿಮಗಿದೆ. ಹಾಗೆಂದು ನೀವು ಬದಲಾಗ ಬಾರದೆಂದಿಲ್ಲ.