Thursday, 12th December 2024

ಅಮೆರಿಕ ಅಧ್ಯಕ್ಷ ಚುನಾವಣೆ ಅವಲೋಕನ

ವಿದ್ಯಮಾನ

ಕೆ.ವಿ.ವಾಸು

ವಿಶ್ವದ ಅತ್ಯಂತ ಪ್ರಬಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಜೋ ಬೈಡನ್ ಜಯಗಳಿಸಿರುವುದು ಸ್ವಾಗತಾರ್ಹ.

ಅವರು ತಮ್ಮ ಸಮೀಪ ಪ್ರತಿಸ್ಪರ್ಧಿ ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು 76
ಮತಗಳ ಅಂತರದಿಂದ ಸೋಲಿಸಿದ್ದಾರೆ. ಡೊನಾಲ್ಡ್ ಟ್ರಂಪ್ 214 ಮತಗಳನ್ನು ಗಳಿಸಿದ್ದರೆ; ಜೋ ಬೈಡನ್ 290 ಮತಗಳ ಬಹುಮತವನ್ನು ದಾಖಲಿಸಿದ್ದಾರೆ. ಈ ಬಾರಿಯ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಬಾರಿ ಕುತೂಹಲಗೊಳಿಸಿತ್ತು. ಅತ್ಯಂತ ಬಲಿಷ್ಠ ರಾಷ್ಟ್ರವಾದ ಈ ದೇಶದಲ್ಲಿ ವಿಶ್ವದಲ್ಲೇ ಅತ್ಯಧಿಕ ಕರೋನಾ ಸೊಂಕು ವ್ಯಾಪಿಸಿ; ಅತಿ ಹೆಚ್ಚು ಜನರು ಮರಣ ಹೊಂದು ತ್ತಿದ್ದಾರೆ.

ಕರೋನಾ ಸೊಂಕನ್ನು ತಳಹದಿಗೆ ತರಲು ಡೊನಾಲ್ಡ್ ಟ್ರಂಪ್ ಸಂಪೂರ್ಣ ವಿಫಲವಾಗಿದ್ದರು. ಅವರೇ ಸ್ವತಃ ಸೋಂಕಿಗೆ ಗುರಿ ಯಾಗಿ ಚೇತರಿಸಿಕೊಂಡಿದ್ದರು. ಈ ಸೋಂಕಿನ ನಿವಾರಣೆಗೆ ಅವರು ನೀಡಿದ್ದ ಕೆಲವು ಸಲಹೆಗಳು ಬಾಲಿಶವಾಗಿದ್ದು ಅವರನ್ನು ನಗೆಪಾಟಲಿಗೆ ಗುರಿಮಾಡಿತ್ತು. ಅವರ ಸೋಲಿಗೆ ಕರೋನಾದ ಅಸಮರ್ಪಕ ನಿರ್ವಹಣೆ ಕೂಡ ಒಂದು ಕಾರಣವೆನ್ನ ಬಹುದು. ಇದರ ಜತೆಗೆ ಇನ್ನೂ ಹಲವಾರು ವಿಷಯಗಳು ಅವರನ್ನು ಶ್ವೇತ ಭವನಕ್ಕೆ ಮತ್ತೇ ಪ್ರವೇಶಿಸದಂತೆ ಮಾಡಿವೆ ಎಂದು ಹೇಳ ಬಹುದು. ಅವರ ಪ್ರತಿಸ್ಪರ್ಧಿಯಾಗಿದ್ದ ಜೋ ಬೈಡನ್ ಪ್ರಾರಂಭದಿಂದ ತುಂಬು ಉತ್ಸಾಹದಿಂದ ಚುನಾವಣಾ ಪ್ರಚಾರ ಸಭೆ ಗಳಲ್ಲಿ ಭಾಗಿಯಾಗಿ ಪಾದರಸದಂತೆ ಓಡಾಡಿ ಅಮೆರಿಕಾದ ಮತದಾರರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆನ್ನ ಬಹುದು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿರುವ 77 ವರ್ಷದ ಜೋ ಬೈಡನ್ ನನ್ನನ್ನು ಇಂಥ ಮಹಾನ್ ದೇಶದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ. ನೀವು ನನಗೆ ಮತ ಹಾಕಿದ್ದೀರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ನೀವು ನನ್ನ ಮೇಲೆ ಇಟ್ಟಿರುವ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂಬ ಮಾತುಗಳನ್ನಾಡಿದ್ದಾರೆ. ಇಂತಹ ಮುತ್ಸದ್ದಿತನದ ಮಾತುಗಳು ಅವರ ಮೇಲೆ ಜನರಿಟ್ಟಿರುವ ನಂಬಿಕೆಗಳನ್ನು ಹೆಚ್ಚಿಸುತ್ತವೆ.

ಕಳೆದ 24 ವರ್ಷಗಳಿಂದ ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿದ್ದ ಅರಿಜೋನ ಹಾಗೂ 28 ವರ್ಷಗಳಿಂದ ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಜಾರ್ಜಿಯಾ ರಾಜ್ಯಗಳಲ್ಲಿ ಮತದಾರರು ಡೆಮಾಕ್ರಟ್ ಪಕ್ಷಕ್ಕೆ ಮತ ನೀಡಿದ್ದಾರೆ. ಒಟ್ಟಿನಲ್ಲಿ, ಈ ಬಾರಿಯ ಚುನಾ ವಣೆಯಲ್ಲಿ ಬದಲಾವಣೆಯ ಗಾಳಿ ಇಡೀ ಅಮೆರಿಕಾದ್ಯಂತ ಬೀಸಿದೆಯೆಂದು ಹೇಳಬಹುದು. ಇವಿಷ್ಟು ಚುನಾವಣೆಗೆ ಸಂಬಂಧ ಪಟ್ಟ ವಿಶ್ಲೇಷಣೆಗಳು. ಅಮೆರಿಕ ಎಂಬ ದೈತ್ಯ ರಾಷ್ಟ್ರ 1776ರ ಜುಲೈ 4ರಲ್ಲಿ ಗ್ರೇಟ್ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆಯಿತು.

ಅದಕ್ಕಿಂತ ಮುಂದೆ ಇದು ಬ್ರಿಟನ್ನಿನ 13 ಕಾಲೋನಿಗಳಾಗಿದ್ದವು.ಜಾರ್ಜ್ ವಾಷಿಂಗ್ಟನ್‌ರವರು ಈ ದೇಶದ ಪ್ರಥಮ ರಾಷ್ಟ್ರಧ್ಯಕ್ಷ ರಾಗಿ ಆಯ್ಕೆಗೊಂಡಿದ್ದರು. ಅವರ ನಂತರ 46 ಅಧ್ಯಕ್ಷರನ್ನು ಈ ದೇಶ ಕಂಡಿದೆ. ಅವರ ಪೈಕಿ ಫ್ರಾಂಕ್ಲಿನ್ ರೂಸ್ ವೆಲ್ಟ್ ಮಾತ್ರ ಮೂರು ಬಾರಿ ಪೂರ್ಣ ಅವಧಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಅವರ ನಾಲ್ಕನೇ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರು ನಿಧನ ಹೊಂದಿದರು. ಅಮೆರಿಕಾದ ಸಂವಿಧಾನಕ್ಕೆ 1947ರಲ್ಲಿ ಮಾಡಲಾದ 22ನೇ ತಿದ್ದುಪಡಿ ಪ್ರಕಾರ ಅಮೆರಿಕಾದ ಯಾವುದೇ ಅಭ್ಯರ್ಥಿ ಎರಡಕ್ಕಿಂತ ಹೆಚ್ಚು ಬಾರಿ ಅಧ್ಯಕ್ಷರಾಗಲು ಸಾಧ್ಯವಿಲ್ಲ.

ಸುಮಾರು 33 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಈ ದೇಶದ ವಾರ್ಷಿಕ ಮಿಲಿಟರಿ ವೆಚ್ಚ ಇಡೀ ಪ್ರಪಂಚದಲ್ಲೇ ಅತಿ ಹೆಚ್ಚಾದ 732 ಬಿಲಿಯನ್ ಯುಎಸ್ ಡಾಲರ್ಸ್. ಈ ದೇಶ ಅನುಸರಿಸುವ ಆರ್ಥಿಕ ಮತ್ತು ವಿದೇಶಾಂಗ ನೀತಿ ವಿಶ್ವದ ಹಲವಾರು ದೇಶಗಳ ಮೇಲೆ ತನ್ನದೇ ಆದ ಪರಿಣಾಮ ಬೀರುತ್ತದೆ. ಶೀತಲ ಯುದ್ಧ ಸಮರದ ಕಾಲದಲ್ಲಿ ಅಮೆರಿಕ ಮತ್ತು ರಷ್ಯಾ ಅತ್ಯಂತ ಪ್ರಬಲ ರಾಷ್ಟಗಳಾಗಿದ್ದವು. ಅಮೆರಿಕದಲ್ಲಿ ಪ್ರಬಲ ಅಧ್ಯಕ್ಷರ ಆಳ್ವಿಕೆ ಇದೆ (ಎಕ್ಸಿಕ್ಯುಟಿವ್ ಪ್ರೆಸಿಡೆನ್ಸಿ). ಆಡಳಿತದಲ್ಲಿ ಅವರಿಗೆ ನೆರವಾಗಲು ಉಪ ರಾಷ್ಟಪತಿ ಹಾಗೂ ಇತರ ಅಧಿಕಾರ ವರ್ಗವಿದೆ.

ಪ್ರತಿಯೊಂದು ಇಲಾಖೆಗೂ ಕಾರ್ಯದರ್ಶಿ ಇರುತ್ತಾರೆ. ಮೆಲ್ನೋಟಕ್ಕೆ ಅಮೆರಿಕ ದೇಶದಲ್ಲಿ ಪ್ರಬಲ ಅಧ್ಯಕ್ಷೀಯ ಆಳ್ವಿಕೆ ಇದ್ದರೆ ಶಾಸನ ಸಭೆಗಳಾದ ಕಾಂಗ್ರೆಸ್ ಹಾಗೂ ಸೆನೆಟ್ ಅನೇಕ ವಿಚಾರಗಳಲ್ಲಿ ಅಧ್ಯಕ್ಷರಿಗೆ ಮೂಗುದಾರ ಹಾಕಬಲ್ಲದು.  ಮಹಾಭಿ ಯೋಗದ ಮೂಲಕ ರಾಷ್ಟಪತಿಯನ್ನು ಪದಚ್ಯುತಗೊಳಿಸುವ ಅಧಿಕಾರವೂ ಆ ದೇಶ ಸಂಸತ್ತಿಗೆ ಇದೆ. ಹಲವಾರು ವೈಶಿಷ್ಟ್ಯ ಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಅಮೆರಿಕಾ; ನೂತನ ಅಧ್ಯಕ್ಷ ಜೋ ಬೈಡನ್ ಅವರ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಪ್ರಗತಿಯತ್ತ ಸಾಗಲಿ; ಕರೋನಾ ಸೇರಿದಂತೆ ದೇಶವನ್ನು ಕಾಡುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳು ಕೊನೆಗಾಣಲಿ ಎಂದು ಆಶಿಸೋಣ.