ನಾಡಿಮಿಡಿತ
ವಸಂತ ನಾಡಿಗೇರ
vasanth.nadiger@gmail.com
ಅಸ್ಸಾಂನ ಕಾಜಿರಂಗಾ ನ್ಯಾಶನಲ್ ಪಾರ್ಕ್ ಮತ್ತು ಹುಲಿ ಸಂರಕ್ಷಿತ ತಾಣದ ಕೇಂದ್ರ ಸ್ಥಾನವಾದ ಬೊಕಾಖತ್ನಲ್ಲಿ ಅಂದು ವಿಶೇಷ ಕಾರ್ಯಕ್ರಮ ನಡೆದಿತ್ತು. ಅಲ್ಲಿನ ಕ್ರೀಡಾಂಗಣದಲ್ಲಿ ದೊಡ್ಡ ಚಿತೆಯೊಂದು ಉರಿಯುವಂತೆ ತೋರುತ್ತಿತ್ತು.
ಶವ ಸುಡುತ್ತಿದ್ದಾರೆಯೇ ಎಂದು ಭಾಸವಾಗುವಂತಿತ್ತು. ಆದರೆ ಅಲ್ಲಿ ಸುಟ್ಟು ಬೂದಿಯಾಗಿದ್ದು ಘೇಂಢಾಮೃಗದ ಕೊಂಬುಗಳು! ಆರು ದೊಡ್ಡ ಉಕ್ಕಿನ ಕಟ್ಟೆಗಳನ್ನು ನಿರ್ಮಿಸಲಾಗಿತ್ತು. ಅದರ ಮೇಲೆ ಈ ಕೊಂಬುಗಳನ್ನು ಪೇರಿಸಿ ದಹನ ಮಾಡಲಾಯಿತು. ಅಂದು ಬರೋಬ್ಬರಿ 2623 ಕೊಂಬುಗಳು ಅಗ್ನಿಗೆ ಆಹುತಿಯಾದವು. ಘೇಂಡಾಮೃಗದ ಕೊಂಬುಗಳನ್ನು 12 ಜಿಲ್ಲೆಗಳಲ್ಲಿ ಸಂಗ್ರಹಿಸಿ ಡಲಾಗಿತ್ತು. 1979 ರಿಂದ ವಶಪಡಿಸಿಕೊಳ್ಳಲಾಗಿದ್ದ ಕೊಂಬುಗಳವು. ಹೀಗೇಕೆ ಮಾಡಲಾಯಿತು ಎಂಬ ಕುತೂಹಲವೆ? ಘೇಂಡಾಮೃಗದ ಕೊಂಬಿನ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಇದರ ಮುಖ್ಯ ಉದ್ದೇಶ.
ಹಾಗಾದರೆ ಏನದು ತಪ್ಪು ಕಲ್ಪನೆ ? ಈ ಕೊಂಬುಗಳಿಗೆ ವೈದ್ಯಕೀಯ ಗುಣಗಳಿವೆ ಎಂಬುದು. ಆ ಕಾರಣಕ್ಕಾಗಿ ಘೇಂಡಾಮೃಗಗಳನ್ನು ಮನಸೋ ಇಚ್ಛೆ ಬೇಟೆ ಯಾಡಿ ಕೊಲ್ಲಲಾಗುತ್ತಿದೆ. ಈ ಕಾರಣದಿಂದ ಅವು ಅಳಿವಿನ ಅಂಚಿಗೆ ಬಂದು ನಿಂತಿವೆ. ಆದರೆ ಅದು ಸರಿಯಲ್ಲ, ಇದರ ಕುರಿತು ಅರಿವು ಮೂಡಿಸುವ ಸಲುವಾಗಿ ಇಂಥ ದೊಂದು ಬೃಹತ್ ಕಾರ್ಯಕ್ರಮ ನಡೆಸಲಾಯಿತು. ಹಿಂದೆಯೂ ಬೇರೆ ಕಡೆಗಳಲ್ಲಿ ಘೇಂಡಾಮೃಗದ ಕೊಂಬು ಗಳನ್ನು ಸುಟ್ಟು ಹಾಕಲಾಗಿದೆ. ಆದರೆ ಒಂದೇ ಸಲ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿಗೆ ಅರ್ಪಿಸುತ್ತಿರುವುದು ಇದೇ ಮೊದಲಬಾರಿ. ಇದೊಂದು ಜಾಗತಿಕ ದಾಖಲೆ ಎಂದರೂ ಅಡ್ಡಿ ಇಲ್ಲ.
ಅಂದ ಹಾಗೆ ಅಂದು ವಿಶ್ವ ಘೇಂಡಾ ಮೃಗ ದಿನ. ಆ ಸಂದರ್ಭದಲ್ಲಿ, ಅಪಾಯದಂಚಿನಲ್ಲಿರುವ ಈ ಪ್ರಾಣಿಯನ್ನು ಸಂರಕ್ಷಿಸುವ ತುರ್ತು ಅಗತ್ಯವನ್ನು ಮನಗಾಣಿ ಸಲು ಈ ಕಾರ್ಯಕ್ರಮವನ್ನು ನಡೆಸಲಾಯಿತು. ಹಾಗಾದರೆ ಘೇಂಡಾಮೃಗಗಳು ನಿಜಕ್ಕೂ ಅಪಾಯದ ಅಂಚಿನಲ್ಲಿವೆಯೇ? ಅವುಗಳನ್ನು ರಕ್ಷಿಸಬೆಕಾದ ಕಾಲ ಬಂದಿದೆಯೇ ಎಂದು ಕೇಳಿದರೆ ಅದಕ್ಕೆ ಉತ್ತರ ಹೌದು ಎಂದೇ ಹೇಳಬೇಕಾಗಿದೆ. ಏಕೆಂದರೆ ಮಾನವನ ಸ್ವಾರ್ಥ, ದುರಾಸೆಗೆ ಇಂಥ ದೈತ್ಯ ಪ್ರಾಣಿಗಳಿಗೂ ಉಳಿಗಾಲ ಇಲ್ಲದಾಗಿದೆ. ಆನೆ ಕೂಡ ದೈತ್ಯ ಪ್ರಾಣಿಯಾದರೂ ಅದಕ್ಕೆ ನಮ್ಮಲ್ಲಿ ಬೇರೆಯಾದೇ ಆದ ಗೌರವ, ಸ್ಥಾನಮಾನವಿದೆ.
ಅವುಗಳನ್ನು ಪಳಗಿಸಿ, ಸಾಕುವುದೂ ಉಂಟು. ಆದರೆ ಘೇಂಡಾಮೃಗಗಳು ಕೂಡ ಅಷ್ಟೇ ದೊಡ್ಡ ಪ್ರಾಣಿಯಾದರೂ ಅವುಗಳ ಜೀವನಶೈಲಿಯೇ ಬೇರೆ ಥರದ್ದು. ಬಹುಶಃ ಈ ಕಾರಣಕ್ಕಾಗಿಯೇ ಏನೋ ಅವುಗಳಿಗೆ ಆನೆಯಷ್ಟು ಗಮನ ಸಿಕ್ಕಿಲ್ಲದಿರಬಹದು. ಈ ನಿಟ್ಟಿನಲ್ಲಿ ಮತ್ತು ನೆಪದಲ್ಲಿ ಘೇಂಡಾಮೃಗವೆಂಬ ಅದ್ಭುತವಾದ ಪ್ರಾಣಿಯ ಬಗ್ಗೆ ಒಂದಷ್ಟು ವಿವರಗಳನ್ನು ತಿಳಿಯೋಣ. 2010ರಲ್ಲಿ ಮೊದಲ ಬಾರಿಗೆ ವರ್ಲ್ಡ್ ವೈಡ್ ಫಂಡ್ (ಡಬ್ಲುಡಬ್ಲುಎಫ್) ಸಂಸ್ಥೆಯ ದಕ್ಷಿಣ ಆಫ್ರಿಕಾ
ಶಾಖೆಯು ‘ವಿಶ್ವಘೇಂಡಾಮೃಗ ದಿನ’ ಆಚರಣೆಯನ್ನು ಘೋಷಿಸಿತು. ಇದರ ರೂವಾರಿಗಳು ಇಬ್ಬರು ಮಹಿಳೆಯರು ಎಂಬುದು ಗಮನಾರ್ಹ.
ಜಿಂಬಾಬ್ವೆಯ ಲೀಸಾ ಜೇನ್ ಕ್ಯಾಂಪ್ಬೆಲ್ ಹಾಗೂ ರಿಷ್ಜಾ ಕೋಟಾ ಎಂಬುವರೇ ಆ ಮಹಿಳೆಯರು. ಘೇಂಡಾಮೃಗದ ಬಗ್ಗೆ ಅಪಾರ ಆಸಕ್ತಿ, ಕಾಳಜಿ ಹೊಂದಿದ್ದ ಲೀಸಾ ಅವುಗಳ ಸಂತತಿ ಕ್ಷೀಣಿಸುತ್ತಿರುವ ಕುರಿತು ಬೇಸರಗೊಂಡಿದ್ದರು. ಇವುಗಳ ಬಗ್ಗೆ ವಿಶ್ವದಾದ್ಯಂತ ಅರಿವು ಮೂಡಿಸಿ ರಕ್ಷಣೆಗೆ ಕಾರ್ಯಕ್ರಮ ರೂಪಿಸ ಬೇಕೆಂಬ ಇರಾದೆ ಹೊಂದಿದ್ದರು. ಇದಕ್ಕಾಗಿ ಯಾರ ಸಹಾಯ, ಸಹಕಾರವಾದರೂ ಸಿಗಬಹುದೇ ಎಂಬ ನಿರೀಕ್ಷೆ ಹೊಂದಿದ್ದರು. ಈ ವಿಷಯವನ್ನು ಮೇಲ್ ಮೂಲಕ ಪ್ರಚುರಪಡಿಸಿದಾಗ ರಿಷ್ಜಾ ಪರಿಚಯ ವಾಯಿತು. ಇಬ್ಬರೂ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಇವರಿಗೆ ಡಬ್ಲುಡಬ್ಲುಎಫ್ನ ನೆರವು, ಬೆಂಬಲ ದೊರೆ ಯಿತು.
ಹೀಗಾಗಿ 2011ರಲ್ಲಿ ಮೊದಲ ಬಾರಿಗೆ ವಿಶ್ವ ‘ಘೇಂಡಾಮೃಗ ದಿನ’ ವನ್ನು ಆಚರಿಸಲಾಯಿತು. ಆಗಿನಿಂದ ಪ್ರತಿವರ್ಷ ಸೆಪ್ಟೆಂಬರ್ 22 ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಇದು ಹೆಚ್ಚು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇದು ಹತ್ತನೇ ವರ್ಷವಾದುದರಿಂದ ಇನ್ನಷ್ಟು ಮಹತ್ವ ಬಂದಿತ್ತು. ಈ ಒಂದು ದಶಕದಲ್ಲಿ ಘೇಂಡಾಮೃಗದ ಬಗ್ಗೆ ಎಷ್ಟರ ಮಟ್ಟಿಗೆ ಜನರಲ್ಲಿ ಅರಿವು ಉಂಟಾಗಿದೆ ಹಾಗೂ ಅವುಗಳ ಸಂರಕ್ಷಣೆಗೆ ಏನೆಲ್ಲ ಕಾರ್ಯಕ್ರಮಗಳು, ಯೋಜನೆಗಳಾಗಿವೆ; ಎಷ್ಟರ ಮಟ್ಟಿನ ಯಶಸ್ಸು ದೊರೆತಿದೆ ಎಂಬಿತ್ಯಾದಿ ವಿಷಯಗಳನ್ನು ಅವಲೋಕಿಸುವ ಅವಕಾಶವೂ ಒದಗಿಬಂದಿತ್ತು.
ಅಂದಹಾಗೆ ಈ ವರ್ಷದ ವಿಷಯ ಏನಾಗಿತ್ತು ಗೊತ್ತೆ ? ‘ಕೀಪ್ ದಿ ಫೈವ್ ಅಲೈವ್’. ಅಂದರೆ ಎಲ್ಲ ಐದು ಬಗೆಯ ಘೇಂಡಾಮೃಗಗಳ ಪ್ರಭೇದಗಳನ್ನು ಉಳಿಸಿ ಎಂಬುದು. ಏನು? ಘೇಂಡಾಮೃಗಗಳಲ್ಲಿ ಐದು ವಿಧಗಳಿವೆಯೇ ಎಂಬ ಪ್ರಶ್ನೆ ಎದುರಾಗಬಹಹುದು. ಇದಕ್ಕೆ ಉತ್ತರ -ಹೌದು. ಅವೆಂದರೆ ಸುಮಾತ್ರದ ಘೇಂಡಾ, ಕಪ್ಪು ಘೇಂಡಾ, ಒಂಟಿ ಕೊಂಬಿನ ಘೇಂಡಾ, ಜಾವಾ ದ್ವೀಪದ ಘೇಂಡಾ ಹಾಗೂ ಬಿಳಿ ಬಣ್ಣದ ಘೇಂಡಾ. ಈ ಪೈಕಿ ಒಂಟಿ ಕೊಂಬಿನ ಘೇಂಡಾ ನಮ್ಮ ದೇಶದ ಅಸ್ಸಾಂನಲ್ಲಿವೆ. ಇವು ದೈತ್ಯದೇಹಿಗಳು. ಕಂಬದಂಥ ಕಾಲುಗಳನ್ನು ಹೊಂದಿವೆ. ಅವುಗಳ ಮೇಲೆ ದೊಡ್ಡ ಟ್ಯಾಂಕನ್ನು ಇಟ್ಟಹಾಗೆ ಕಾಣುತ್ತವೆ. ಒಂದು ಅಥವಾ ಎರಡು ಕೊಂಬುಗಳು ಅವುಗಳ ವೈಶಿಷ್ಟ್ಯ. ಕೆಲವು ಸಂತತಿಗಳಲ್ಲಿ ಈ ಕೊಂಬುಗಳು ಚಿಕ್ಕದಾಗಿರುತ್ತವೆ ಇಲ್ಲವೆ ಕಾಣದಷ್ಟು ಚಿಕ್ಕದಾಗಿರುತ್ತವೆ.
ಅವುಗಳ ದೃಷ್ಟಿ ಮಂದವಾಗಿರುತ್ತವೆ. ಆದರೆ ಆಘ್ರಾಣ ಮತ್ತು ಶ್ರವಣ ಶಕ್ತಿ ಅದ್ಭುತವಾಗಿರುತ್ತದೆ. ಆಫ್ರಿಕದ ಬಿಳಿ ಪ್ರಭೇದ ಮತ್ತು ಏಷ್ಯದ ಒಂಟಿಕೊಂಬಿನ
ಘೇಂಡಾಗಳು ಗಾತ್ರದಲ್ಲಿ ದೊಡ್ಡವು. ಇದೀಗ ಬಿಳಿ ಘೇಂಡಾವನ್ನು ಅಪಾಯದ ಅಂಚಿನಲ್ಲಿ ಹಾಗೂ ಒಂಟಿ ಕೊಂಬಿನ ಘೇಂಡಾಗಳನ್ನು ಅಳಿವಿನಂಚಿನಿಂದ ಅಪಾಯದ ಅಂಚಿಗೆ ಸೇರ್ಪಡೆ ಮಾಡಲಾಗಿದೆ. ಘೇಂಡಾಮೃಗಗಳು ಬಹಳ ವರ್ಷಗಳ ಮುಂಚೆ ಯುರೋಪ್, ಏಷ್ಯ ಹಾಗೂ ಆಫ್ರಿಕಾ ಖಂಡಗಳಲ್ಲಿ ಹೇರಳವಾಗಿ ಇದ್ದವು.
ಆಫ್ರಿಕಾ ಖಂಡದಲ್ಲಿ ಘೇಂಡಾಮೃಗಗಳು ಲಕ್ಷಾಂತರ ವರ್ಷಗಳಿಂದ ಇವೆ. ಆದರೆ ಇದೀಗ ಸಂಖ್ಯೆ ಕ್ಷೀಣಿಸುತ್ತಿದ್ದು ಅವುಗಳ ರಕ್ಷಣೆ ಅಗತ್ಯವಾಗಿದೆ. 20ನೇ
ಶತಮಾನದ ಆರಂಭದಲ್ಲಿ ವಿಶ್ವದಾದ್ಯಂತ ೫ ಲಕ್ಷ ಘೇಂಡಾಮೃಗಗಳು ಏಷ್ಯಾ ಮತ್ತು ಆಫ್ರಿಕದಲ್ಲಿ ವಾಸಿಸುತ್ತಿದ್ದವು. ಆದರೆ 1970ರ ಹೊತ್ತಿಗೆ ಅವುಗಳ
ಸಂಖ್ಯೆ 70 ಸಾವಿರಕ್ಕೆ ಇಳಿಯಿತು. ಈಗ ಸುಮಾರು ೨೭ ಸಾವಿರಕ್ಕೆ ಕುಸಿದಿದೆ. ಆ ಮೂಲಕ ಅಪಾಯದ ಗಂಟೆ ಬಾರಿಸಿದೆ.
ಭಾರತದ ಘೇಂಡಾ: ಭಾರತೀಯ ಘೇಂಡಾಮೃಗಗಳ ಸಂಖ್ಯೆ ೩೭೦೦ ಎಂದು ಅಂದಾಜಿಸಲಾಗಿದೆ. ೨೦ನೇ ಶತಮಾನದ ಆರಂಂಭದಲ್ಲಿ ಇವುಗಳ ಸಂಖ್ಯೆ ಕೇವಲ 200ಕ್ಕೆ ಇಳಿದು ಹೋಗಿತ್ತು. ಇದಕ್ಕೆ ಎಂದಿನಂತೆ ಬೇಟೆ ಹಾಗೂ ವಾಸಸ್ಥಾನದ ಕೊರತೆ ಕಾರಣವಾಗಿತ್ತು. ಆದರೆ ಸತತ ಸಂರಕ್ಷಣಾ ಕ್ರಮಗಳಿಂದಾಗಿ ಬಚಾವಾಗಿವೆ. ಅವುಗಳ ಸಂತತಿ ಬೆಳೆಯುತ್ತಿದೆ.
ಇದನ್ನು ಗ್ರೇಟ್ರ್ ಒನ್ ಹಾರ್ನ್ಡ ರೈನೊ ಅಥವಾ ಇಂಡಿಯನ್ ರೈನೊ ಎಂದು ಕರೆಯಲಾಗುತ್ತದೆ. ಒಂಟಿ ಕೊಂಬು ಇದರ ವೈಶಿಷ್ಟ್ಯ. 8 ರಿಂದ 25 ಇಂಚಿನ ವರೆಗೆ ಕೊಂಬು ಬೆಳೆಯುತ್ತದೆ. ಭಾರತೀಯ ಉಪಖಂಡದ ಉತ್ತರ ಭಾಗದ ಎಲ್ಲೆಡೆ ಇವು ಮೊದಲು ಕಂಡುಬರುತ್ತಿದ್ದವು. ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಸುಮಾರು 3000 ದಷ್ಟು ಭಾರತದಲ್ಲಿ ಹಾಗೂ 650 ರಷ್ಟು ನೇಪಾಳದಲ್ಲಿವೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ವವನದಲ್ಲೇ 2048 ಇವೆ. ಪೋಬಿತೋರಾ ವನ್ಯಜೀವಿ ಧಾಮದಲ್ಲೂ ಇವುಗಳು ವಾಸವಾಗಿವೆ.
ನಿರಂತರ ಬೇಟೆ ಮೊದಲಾದ ಕಾರಣಗಳಿಂದ ಸಂಖ್ಯೆ ಕ್ಷೀಣಿಸಿತ್ತಾದರೂ ಇದೀಗ ಭಾರತ ಮತ್ತು ನೇಪಾಳ ಸರಕಾರಗಳ ನಿರಂತರ ಪ್ರಯತ್ನದಿಂದಾಗಿ ಅವು ಮತ್ತೆ
ಉಳಿದು, ಬೆಳೆಯತೊಡಗಿವೆ. ಭಾರತೀಯ ಘೇಂಡಾಮೃಗಗಳ ಒಟ್ಟು ಸಂಖ್ಯೆಯ ಶೇ.85 ರಷ್ಟು ಅಸ್ಸಾಂ ರಾಜ್ಯದಲ್ಲೇ ಇವೆ. ಹೀಗಾಗಿಯೇ ಅಲ್ಲಿ ಅವುಗಳ
ರಕ್ಷಣೆಯ ಕುರಿತು ಆದ್ಯ ಗಮನ ನೀಡಲಾಗಿದೆ. ಅದಕ್ಕಾಗಿಯೇ ಘೇಂಡಾಮೃಗ ದಿನದಂದು, ವಶಪಡಿಸಿಕೊಳ್ಳಲಾದ ಕೊಂಬುಗಳನ್ನು ಸುಡಲಾಯಿತು.
ಬಿಳಿ ಮತ್ತು ಕಪ್ಪು ಘೇಂಡಾಮೃಗ: ಬಿಳಿ ಮತ್ತು ಕಪ್ಪು ಘೇಂಡಾಮೃಗಗಳು ಆಫ್ರಿಕದಲ್ಲಿ ಕಾಣಸಿಗುತ್ತವೆ. ಬಿಳಿ ಘೇಂಡಾಗೆ ಆ ಹೆಸರು ಬಣ್ಣದಿಂದ ಬಂದಿದ್ದಲ್ಲ.
ವಾಸ್ತವವಾಗಿ ಅವು ಬೂದು ಬಣ್ಣದ್ದಾಗಿವೆ. ಆದರೆ ವೈಜ್ದೆ ಎಂಬ ಡಚ್ ಪದವನ್ನು (ಇದರ ಅರ್ಥ ಅಗಲವಾದ) ವೈಟ್ ಎಂದು ತಪ್ಪಾಗಿ ಬಳಸತೊಡಗಿದರು. ಅವುಗಳ ಅಗಲವಾದ ಬಾಯಿಯಿಂದಾಗಿ ಹೀಗೆ ಕರೆಯಲಾಗುತ್ತದೆ. ನಾರ್ದರ್ನ್ ರೈನೋಸ್ ಹಾಗೂ ಸದರ್ನ್ ರೈನೋಸ್ ಎಂದು ಇವುಗಳನ್ನು ಕರೆಯಲಾಗಿದೆ.
ನಾರ್ದನ್ ರೈನೋಸ್ ಈಗ ಇಲ್ಲವೇ ಇಲ್ಲ ಎನ್ನಬಹುದು. ಅವುಗಳ ಕತೆಯೇ ಕರುಣಾಜನಕ.
ಮೊದಲೆಲ್ಲ ಈ ಘೇಂಡಾಗಳು ಉಗಾಂಡಾ, ಛಾಡ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಕಾಂಗೊ ಮೊದಲಾದ ಕಡೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದವು. ಆದರೆ ಈ
ದೇಶಗಳಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ 70-80ರ ದಶಕದಲ್ಲಿ ಅವುಗಳ ಬೇಟೆ ಎಗ್ಗಿಲ್ಲದೆ ನಡೆಯಿತು. ೨೦೦೮ರ ಸಮೀಕ್ಷೆಯ ಪ್ರಕಾರ ಅವುಗಳನ್ನು ನಶಿಸಿ ಹೋದವುಗಳೆಂದು ಪಟ್ಟಿ ಮಾಡಲಾಯಿತು. ಕೊನೆಗೆ ನಾಲ್ಕು ಉಳಿದುಕೊಂಡವು. ಎರಡು ಗಂಡು ಮತ್ತು ಎರಡು ಹೆಣ್ಣು. ಅವುಗಳನ್ನು ಒಂದೇ ಕಡೆ ತರಲಾಯಿತು. ಆದರೆ ಎಷ್ಟೇ ಪ್ರಯತ್ನಿಸಿದರೂ ಮರಿಗಳು ಜನಿಸಲಿಲ್ಲ. ಇಷ್ಟರ ನಡುವೆ ಒಂದು ಗಂಡು ಘೇಂಡಾ ಮೃತಪಟ್ಟಿತು. ಅಲ್ಲಿಗೆ ಒಂದು ಗಂಡು ಎರಡು ಹೆಣ್ಣು ಮಾತ್ರ ಉಳಿದುಕೊಂಡವು. ಆದರೆ ಗಂಡಿಗೆ ವಯಸ್ಸಾಗಿರುವ ಕಾರಣ ಸಹಜವಾಗಿ ಸಂತಾನೋತ್ಪತ್ತಿ ಸಾಧ್ಯವಿಲ್ಲದಾಗಿದೆ.
ಆದರೂ ಕೃತಕವಾಗಿ ಸಂತಾನಾಭಿವೃದ್ಧಿ ಮಾಡುವ ಪ್ರಯತ್ನಗಳು ಸಾಗಿವೆ. ಇದು ಸಾಧ್ಯವಾಗದಿದ್ದರೆ ಎರಡು ಹೆಣ್ಣು ಮಾತ್ರ ಉಳಿದಂತಾಗುತ್ತವೆ. ಹೀಗಾಗಿ ಆವುಗಳ ಸಾವಿನ ನಂತರ ಈ ಸಂತತಿ ನಾಶವಾದಂತಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಸದರನ್ ರೈನೊಗಳ ಸಂಖ್ಯೆ ಹೇರಳವಾಗಿವೆ. ಸಂರಕ್ಷಣಾ ಕ್ರಮಗಳಿಂದ ಇದು ಸಾಧ್ಯವಾಗಿದೆ. 1895ರಲ್ಲಿ ಇಲ್ಲಿ ಇವುಗಳ ಸಂಖ್ಯೆ 100 ಕ್ಕಿಂತ ಕಡಿಮೆ ಇದ್ದುದು ಈಗ 20 ಸಾವಿರದಷ್ಟಿವೆ. ಕಪ್ಪು ಘೇಂಡಾಗಳು ಗಾತ್ರದಲ್ಲಿ ಸ್ವಲ್ಪ ಚಿಕ್ಕವು. ಮೂತಿಯು ಹೆಚ್ಚು ಚೂಪಾಗಿದೆ.
1992ರವರೆಗೆ ಅವು ಅಳಿವಿನಂಚಿಗೆ ಬಂದಿದ್ದವು. ಶೇ.95 ರಷ್ಟು ಸಂತತಿ ನಶಿಸಿಹೋಗಿತ್ತು. ವ್ಯಾಪಕ ಬೇಟೆಯಿಂದ ಅವು ಈ ದುಸ್ಥಿತಿ ತಲುಪಿದ್ದವು. ಆಫ್ರಿಕದ ಘೇಂಡಾಮೃಗಗಳು ಈಗ ಕೇವಲ ನಾಲ್ಕು ರಾಷ್ಟ್ರಗಳಲ್ಲಿ ಕಾಣಸಿಗುತ್ತವೆ. ದಕ್ಷಿಣ ಆಫ್ರಿಕ, ನಮೀಬಿಯಾ, ಜಿಂಬಾಬ್ವೆ ಹಾಗೂ ಕೀನ್ಯಾ. ಸವನ್ನಾ ಹುಲ್ಲುಗಾವಲು ಗಳಲ್ಲಿ ಅವು ಹೆಚ್ಚು ತಿರುಗಾಡುತ್ತವೆ. ಆಫ್ರಿಕದ ಘೇಂಡಾಗಳು ಪರಿಸರ ಸಮತೋಲನದ ದೃಷ್ಟಿಯಿಂದ ಬಹುಮುಖ್ಯ. ಅವು ಅಪಾರ ಪ್ರಮಾಣದ ಹುಲ್ಲನ್ನು ಕಬಳಿಸುವುದರಿಂದ ಅಲ್ಲಿನ ಭೂಮಿಯ ಸ್ವರೂಪ ಬದಲಾಗುತ್ತದೆ. ಇದರಿಂದ ಇತರ ಪ್ರಾಣಿ ಪಕ್ಷಿಗಳಿಗೆ ಸಹಾಯವಾಗುತ್ತದೆ. ಜನರಿಗೂ ಉಪಯೋಗವಾಗುತ್ತದೆ.
ಸುಮಾತ್ರಾ ಘೇಂಡಾ: ಇನ್ನು ಸುಮಾತ್ರಾ ಘೇಂಡಾಗಳ ಕತೆಯೂ ಅಷ್ಟೇ. ಅವುಗಳ ಸಂಖ್ಯೆ ಈಗ ಸುಮಾರು ೮೦ರಷ್ಟಿರಬಹುದು ಎಂದು ಹೇಳಲಾಗುತ್ತದೆ.
ಇವು ಎಲ್ಲ ಘೇಂಡಾಮೃಗಗಳ ಪೈಕಿ ಅತಿ ಚಿಕ್ಕವು. ಏಷ್ಯದ ಘೇಂಡಾಗಳ ಪೈಕಿ ಎರಡು ಕೊಂಬು ಹೊಂದಿರುವ ಏಕೈಕ ಪ್ರಭೇದ. ಕಪ್ಪುಬಣ್ಣ ಹೊಂದಿವೆ. ಈ ಮೊದಲು ಹಿಮಾಲಯದ ತಪ್ಪಲು. ಪೂರ್ವ ಭಾರತ, ಭೂತಾನ್, ವಿಯೆಟ್ನಾಂ, ಚೀನಾ, ಮ್ಯಾನ್ಮಾರ್ ಮೊದಲಾದೆಡೆ ಕಂಡುಬರುತ್ತಿದ್ದವು. ಆದರೆ ಈಗ ಅಳಿವಿನ ಅಂಚಿಗೆ ಬಂದು ನಿಂತಿವೆ. ವಾಸಸ್ಥಾನ ಕಿರಿದಾಗಿರುವುದು, ಮೇಯಲು ಸಾಕಷ್ಟು ಸ್ಥಳ ಇಲ್ಲದಿರುವುದು, ಬೇಟೆ ಮೊದಲಾದ ಕಾರಣಗಳಿಂದ ಹೀಗಾಗಿದೆ. ಕಳೆದ ೧೫ ವರ್ಷಗಳಲ್ಲಿ ರಕ್ಷಿಸಿಡಲಾಗಿರುವ ಸ್ಥಳಗಳಲ್ಲಿ ಕೇವಲ ಎರಡು ಮರಿಗಳು ಜನಿಸಿವೆ.
ಜಾವಾ ಘೇಂಡಾಮೃಗ: ಇನ್ನು ಜಾವಾ ಘೇಂಡಾಮೃಗಗಳ ಕತೆ ಇನ್ನೂ ಕರುಣಾಜನಕ. ಐದು ಪ್ರಭೇದಗಳಲ್ಲಿ ಅತಿ ಅಪಾಯದಲ್ಲಿರುವಂಥವು. ಅವುಗಳ ಸಂಖ್ಯೆ ಇದೀಗ 67 ಎಂದು ಲೆಕ್ಕ ಮಾಡಲಾಗಿದೆ. ಅದೂ ರಾಷ್ಟ್ರೀಯ ಉದ್ಯಾನದಲ್ಲಿ. ಅಧಿಕಾರಿಗಳ ಕಣ್ಗಾವಲಿನಲ್ಲಿವೆ. ಜಾವಾ ಘೇಂಡಾಗಳು ಕಡು ಬೂದು ಬಣ್ಣ ಹೊಂದಿದ್ದು ಒಂಟಿ ಕೋಡು ಹೊಂದಿದೆ. ಅದು ಸುಮಾರು 10 ಇಂಚು ಬೆಳೆಯಬಲ್ಲದು.
ಘೇಂಡಾಮೃಗಗಳು ಅಳಿವಿನಂಚಿಗೆ ಬಂದಿರುವುದಕ್ಕೆ ಹಲವಾರು ಕಾರಣಗಳಿವೆ. ಹವಾಮಾನ ಬದಲಾವಣೆ, ಬೇಟೆ ಹಾಗೂ ವಾಸಸ್ಥಳಕ್ಕೆ ವ್ಯತ್ಯಯ ಉಂಟಾಗಿರು ವುದು ಇವುಗಳಲ್ಲಿ ಪ್ರಮುಖವಾದವು. ಕಳೆದೊಂದು ದಶಕದಿಂದ ಘೇಂಡಾಮೃಗಗಳ ಬೇಟೆ ವಿಪರೀತ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಅವುಗಳ ಕೊಂಬಿಗೆ ಇರುವ ಬೇಡಿಕೆ. ವಿಶೇಷವಾಗಿ ಚೀನಾ ಮತ್ತು ವಿಯೆಟ್ನಾಂ ದೇಶಗಳಲ್ಲಿ. ಈ ಕೊಂಬಿನಲ್ಲಿ ಔಷಧಿಯ ಗುಣಗಳಿವೆ ಎಂಬುದು ಅಲ್ಲಿನ ಜನರ ಬಲವಾದ ನಂಬಿಕೆ.
ಕೊಂಬನ್ನು ಪುಡಿ ಮಾಡಿ ಬಳಸುತ್ತಾರೆ. ಅದರಲ್ಲಿ ಕ್ಯಾನ್ಸರ್ ಗುಣಪಡಿಸುವ ಸಾಮರ್ಥ್ಯವಿದೆ ಎನ್ನಲಾಗಿದೆ. ಕಾಮೋತ್ತೇಜಕವಾಗಿಯೂ ಇದರ ಬಳಕೆ ಇದೆ. ಚೀನಾದಲ್ಲೂ ಇದನ್ನು ಉಪಯೋಗಿಸಲಾಗುತ್ತಿತ್ತು. ಅಲ್ಲಿ ಈಗ ಕಡಿವಾಣ ಹಾಕಲಾಗಿದೆ. ಆದರೆ ವಿಯೆಟ್ನಾಂನಲ್ಲಿ ಇನ್ನೂ ಬೇಡಿಕೆ ಇದೆ. ಈ ಕೊಂಬುಗಳಲ್ಲಿ ನಿಜವಾಗಿಯೂ ಔಷಽಯ ಗುಣಗಳಿವೆಯೇ ಎಂಬುದು ಈಗಿನ ಪ್ರಶ್ನೆ. ಇಲ್ಲ ಎನ್ನುತ್ತಾರೆ ತಜ್ಞರು.
ಘೇಂಡಾಮೃಗದ ಕೊಂಬು ವಾಸ್ತವವಾಗಿ ಕೆರ್ಯಾಟಿನ್ ಅನ್ನು ಹೊಂದಿರುತ್ತವೆ. ಅಂದರೆ ಇದೊಂದು ಪ್ರೊಟೀನ್. ನಮ್ಮ ಉಗುರು ಯಾವ ವಸ್ತುವಿನಿಂದ ಮಾಡಿರು ತ್ತದೋ ಅದೇ ಧಾತು. ನಮ್ಮ ಕೂದಲಿನಲ್ಲೂ ಈ ಅಂಶವಿರುತ್ತದೆ. ಆದರೆ ಜನರ ಬಲವಾದ ನಂಬಿಕೆಯಿಂದಾಗಿ ಇವುಗಳಿಗೆ ವಿಪರೀತ ಬೇಡಿಕೆ ಇರುವುದರಿಂದ ಬೆಲೆಯೂ ಹೆಚ್ಚು. ಇದರ ದುಬಾರಿ ಬೆಲೆಯಿಂದಾಗಿ ಉಳ್ಳವರಿಗೆ ಇವುಗಳನ್ನು ಇಟ್ಟುಕೊಳ್ಳುವುದು ಶ್ರೀಮಂತಿಕೆಯ ಅಥವಾ ಪ್ರತಿಷ್ಠೆಯ ವಿಷಯವಾಗಿದೆ.
ಮಾನವನ ದುರಾಸೆ, ದುರ್ಬುದ್ಧಿ, ಸ್ವಾರ್ಥ, ತಪ್ಪು ಕಲ್ಪನೆಗಳಿಂದಾಗಿ ಘೇಂಡಾಗಳು ಅಪಾಯದ ಅಂಚಿಗೆ ತಲುಪಿದ್ದು ದುರಂತ. ಆದರೆ ಇತ್ತೀಚೆಗೆ ಅರಿವು
ಹೆಚ್ಚಾಗುತ್ತಿದ್ದು ಜಾಗೃತಿ ಮೂಡಿಸಲಾಗುತ್ತಿದೆ. ಕಾನೂನುಗಳನ್ನು ಬಿಗಿಗೊಳಿಸಲಾಗುತ್ತಿದೆ. ಆದರೂ ದುರುಳರು ಕಾನೂನಿನ ಕಣ್ಣಿಗೆ ಮಣ್ಣೆರಚಿ, ಅಕ್ರಮವಾಗಿ
ಇವುಗಳ ಬೇಟೆಯಾಡಿ, ದಂಧೆ ನಡೆಸುತ್ತಿದ್ದಾರೆ. ಜನರಲ್ಲೂ ಅರಿವು ಮೂಡಿದರೆ ಅವುಗಳ ಉಳಿವು ಸಾಧ್ಯ.