Thursday, 14th November 2024

ಭವಿಷ್ಯದ ನೀರಿನ ಅವಶ್ಯಕತೆಗೆ ಪಶ್ಚಿಮಾಭಿಮುಖ ನದಿಗಳ ಸದ್ಬಳಕೆ ಮುಖ್ಯ

Kasturirangan Report

ಅವಲೋಕನ

ಸಂಗಮೇಶ್‌ ಆರ್‌.ನಿರಾಣಿ

ಅಧ್ಯಕ್ಷರು, ಉತ್ತರ ಕನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ

ನೀರು ಮತ್ತು ಮಣ್ಣು ಜಗತ್ತಿನ ಶ್ರೇಷ್ಠ ಸಂಪನ್ಮೂಲ. ನೈಸರ್ಗಿಕವಾಗಿ ದೊರೆಯುವುದನ್ನು ಹೊರತುಪಡಿಸಿ, ಮಾನವನ ಆವಿಷ್ಕಾರದಿಂದ ಅಥವಾ ಬುದ್ಧಿಶಕ್ತಿಯಿಂದ ಇದನ್ನು ಸೃಷ್ಟಿಸಲು ಸಾಧ್ಯವಿಲ್ಲ.

ಹೀಗಾಗಿ ನೀರು ಮತ್ತು ಮಣ್ಣಿನ ಸದ್ಬಳಕೆ ನಮ್ಮ ಧ್ಯೇಯವಾಗಬೇಕು. ಭೂಮಿಯ ಮೇಲ್ಮೈ ಶೇ.71ರಷ್ಟು ನೀರಿನಿಂದ ಆವೃತವಾಗಿದ್ದರೂ, ಮನುಷ್ಯನ ಅಗತ್ಯತೆಗೆ ದೊರೆಯುವ ಸಿಹಿನೀರಿನ ಪ್ರಮಾಣ ಅತ್ಯಂತ ಕಡಿಮೆ. ಭೂಮಿಯ ಮೇಲೆ ದೊರೆಯುವ ಒಟ್ಟು ನೀರಿನಲ್ಲಿ ಶೇ.97ರಷ್ಟು ಸಮುದ್ರ ದಲ್ಲಿರುವುದರಿಂದ ಅದು ಲವಣಯುಕ್ತವಾಗಿದೆ.

ಉಳಿದ ಶೇ.3ರಷ್ಟು ಮಾತ್ರ ಸಿಹಿನೀರಿನ ಲಭ್ಯತೆ ಇದೆ. ಇದರಲ್ಲಿ ಶೇ2.7ರಷ್ಟು ಮಂಜುಗಡ್ಡೆ ಮತ್ತು ಹವೆಯ ರೂಪದಲ್ಲಿ ದೊರೆಯುತ್ತದೆ. ಹೀಗಾಗಿ ಮಾನವನ ಬಳಕೆಗೆ ದೊರೆಯುವ ನೀರಿನ ಪ್ರಮಾಣ ಕೇವಲ ಶೇ 0.3ರಷ್ಟು ಮಾತ್ರ. ಇದರಲ್ಲಿ ಶೇ.2ರಷ್ಟು ನೀರು ಕೃಷಿಗೆ ಬಳಕೆಯಾಗುತ್ತಿದೆ. ಉಳಿದ ಶೇ. 0.1ರಷ್ಟು ನೀರು ಕುಡಿಯುವ ನೀರು, ಕೈಗಾರಿಕೆ ಸೇರಿದಂತೆ ಇತರ ಎಲ್ಲ ಬಳಕೆಗೆ ಲಭ್ಯವಿದೆ.

ಈ ಶೇ.0.3 ನೀರು ಜಗತ್ತಿನಾದ್ಯಂತ ಸರಿಸಮಾನವಾಗಿ ಹಂಚಿಕೆಯಾಗಿಲ್ಲ. ಶೇ. 0.3 ನೀರಿನಲ್ಲಿಯ ಶೇ.20ರಷ್ಟು ನೀರು ಬ್ರೆಜಿಲ್ ನಲ್ಲಿ ದೊರೆಯುತ್ತದೆ. ಆದರೆ ಬ್ರೆಜಿಲ್ ಜಾಗತಿಕ ಜನಸಂಖ್ಯೆಯ ಶೇ.0.3ರಷ್ಟನ್ನು ಮಾತ್ರ ಹೊಂದಿದೆ. ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.17ರಷ್ಟನ್ನು ಭಾರತ ಹೊಂದಿದೆ. ಇಲ್ಲಿ ದೊರೆಯುವ ನೀರಿನ ಪ್ರಮಾಣ ಕೇವಲ ಶೇ.4ರಷ್ಟು ಮಾತ್ರ. ಚೀನಾ ಶೇ.6ರಷ್ಟು ನೀರಿನ ಪ್ರಮಾಣ ಹೊಂದಿದ್ದರೆ ಜಾಗತಿಕವಾಗಿ ಚೀನಾದ ಜನಸಂಖ್ಯೆ ಪ್ರಮಾಣ ಶೇ.17ರಷ್ಟಿದೆ.

ಭಾರತದ ನೀರಿನ ಕೊರತೆಗಾಗಿ ಬ್ರೆಜಿಲ್‌ನ ಅಮೇಜಾನ್ ನದಿಯನ್ನು ಭಾರತದತ್ತ ತಿರುಗಿಸಲು ಸಾಧ್ಯವಿಲ್ಲ. ಆದರೆ ಕರ್ನಾಟಕದ ನೀರಿನ ಕೊರತೆ ತಪ್ಪಿಸಲು ಪಶ್ಚಿಮ ಘಟ್ಟಗಳ ನದಿಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳು ಅಪಾರವಾದ ಜಲರಾಶಿಯನ್ನು
ಹೊಂದಿವೆ. ಕರ್ನಾಟಕದ ನೀರಾವರಿ ವ್ಯವಸ್ಥೆಯನ್ನು ಪೂರ್ವಾಭಿಮುಖ ವಾಗಿ ಹರಿಯುವ ಕೃಷ್ಣಾ, ಕಾವೇರಿ, ಗೋದಾವರಿ, ಉತ್ತರ ಪೆನ್ನಾರ,
ದಕ್ಷೀಣ ಪೆನ್ನಾರ್, ಪಾಲಾರ ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಕಣಿವೆ ಎಂದು 7 ಕಣಿವೆಗಳಾಗಿ ವಿಂಗಡಿಸಲಾಗಿದೆ. ಈ ಎಲ್ಲ ಮೂಲ ಗಳಿಂದ ಕರ್ನಾಟಕಕ್ಕೆ 3475.24 ಟಿಎಂಸಿ ಅಡಿ ನೀರಿನ ಲಭ್ಯವಿದೆ.

ಇದರಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಪಾಲು ಬರೊಬ್ಬರಿ 1998.83 ಟಿಎಂಸಿ. ಕರ್ನಾಟಕದ ಶೇ.60 ರಷ್ಟು ನೀರಿನ ಪಾಲನ್ನು
ಹೊಂದಿರುವ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಸ್ಥಳೀಯ ಕುಡಿಯುವ ನೀರು ಹಾಗೂ ಜಲ ವಿದ್ಯುತ್ ಉತ್ಪಾದನೆಗಷ್ಟೆ ಬಳಕೆಯಾಗಿ
ನೇರವಾಗಿ ಸಮುದ್ರ ಸೇರುತ್ತವೆ. ವಾರ್ಷಿಕ ಮಳೆ ಬೀಳುವ ಪ್ರಮಾಣದಲ್ಲಿ ಕರ್ನಾಟಕವನ್ನು ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಎಂದು ಪ್ರಮುಖ 3 ವಲಯಗಳಾಗಿ ವಿಂಗಡಿಸಲಾಗಿದೆ.

ಸಹಜವಾಗಿಯೇ ಕರಾವಳಿ ಅತಿ ಹೆಚ್ಚು ಅಂದರೆ ವಾರ್ಷಿಕ 3,456 ಎಂ.ಎಂ. ಮಳೆಯನ್ನು ಪಡೆಯುತ್ತವೆ. ದಕ್ಷಿಣ ಒಳನಾಡು 1,286 ಎಂ.ಎಂ. ಮಳೆಯನ್ನು ಪಡೆದರೆ ಉತ್ತರ ಒಳನಾಡು ಕೇವಲ 731 ಎಂ.ಎಂ. ಮಳೆಯನ್ನು ಪಡೆಯುತ್ತದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೊರತು ಪಡಿಸಿ ಉಳಿದ ಎಲ್ಲ ನದಿ ಕಣಿವೆಗಳು ಅಂತರಾಜ್ಯ ನದಿ ನೀರಿನ ವಿಷಯದಲ್ಲಿ ನ್ಯಾಯಾಧೀಕರಣದ ವ್ಯಾಪ್ತಿಯಲ್ಲಿವೆ. ಇದರಿಂದ ಭವಿಷ್ಯದ ನೀರಿನ ನಿರ್ವಹಣೆ ಕಷ್ಟವಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ ಹಾಗೂ ಮಳೆಯ ಹೊಯ್ದಾಟ ಭವಿಷ್ಯದ ನೀರಿನ ಅವಶ್ಯಕತೆಯನ್ನು
ನೀಗಿಸಲು ಹೊಸ ನೀರಿನ ಮೂಲಗಳನ್ನು ಹುಡುಕುವ ಗಂಭಿರತೆಯನ್ನು ಸೃಷ್ಟಿಸಿವೆ.

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಾದ ಕಾಳಿ, ಅಘನಾಶಿನಿ, ಬೆಡ್ತಿ, ಶರಾವತಿ, ನೇತ್ರಾವತಿ ನದಿಗಳನ್ನು ಜಲವಿದ್ಯುತ್ ಜತೆಗೆ ಕರ್ನಾಟಕ
ಕುಡಿಯುವ ನೀರು, ಕೆರೆ ತುಂಬಲು ಹಾಗೂ ಕೃಷಿ ಅಭಿವೃದ್ಧಿಗೆ ಬಳಸಿಕೊಳ್ಳಬಹುದು. ಕರ್ನಾಟಕದ 36,753 ಕೆರೆಗಳು 6,84,518 ಹೆಕ್ಟೆರ್
ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಿವೆ. ಇವುಗಳಲ್ಲಿಯ ಬಯಲು ಸೀಮೆಯ ಬಹುತೇಕ ಕೆರೆಗಳು ಅವಸಾನದ ಅಂಚಿನಲ್ಲಿವೆ. ಈ ಕೆರೆಗಳ
ಪುನಶ್ಚೇತನವಾಗದಿದ್ದಲ್ಲಿ ಅಂತರ್ಜಲಕ್ಕೆ ದೊಡ್ಡ ಹೊಡೆತ ಬೀಳುತ್ತದೆ.

ಮುಖವಾಗಿ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಕೃಷಿಯೋಗ್ಯ ಭೂಮಿ ನೀರಾವರಿ ಕೊರತೆಯನ್ನು ಎದುರಿಸುತ್ತಿದೆ. ಬಯಲುಸೀಮೆಯ
ಜಲಾಶಯ ಗಳು ಪದೇ ಪದೇ ನೀರಿನ ಕೊರತೆಯನ್ನು ಅನುಭವಿಸುತ್ತಿವೆ. ಹೀಗಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ಕೆಲವು ನದಿಗಳನ್ನು ಸದ್ಬಳಕೆ
ಮಾಡಿಕೊಂಡು ಪೂರ್ವಾಭಿಮುಖವಾಗಿ ಹರಿಯುವ ನದಿಗಳ ಕಣಿವೆ ಗಳನ್ನು ಸಮೃದ್ಧಗೊಳಿಸಿದರೆ, ಭವಿಷ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದು. ವಿಶೇಷವಾಗಿ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಜಯನಗರ ಜಿಲ್ಲೆಗಳನ್ನು
ಸಮೃದ್ದವಾಗಿಸಬಹುದು.

ಕಾಳಿ – ಮಲಪ್ರಭಾ – ಘಟಪ್ರಭಾ ನದಿ ಜೋಡಣೆ: ಕಾಳಿ ನದಿಗೆ ಸೂಪಾ, ಬೊಮ್ಮನಹಳ್ಳಿ, ಕೊಡಸಳ್ಳಿ, ಕದ್ರಾ ಎಂದು 4 ಜಲಾಶಯಗಳನ್ನು
ಕಟ್ಟಲಾಗಿದ್ದು, ಈ ಮೂಲಕ 1250 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಜಲವಿದ್ಯುತ್ ಹೊರತುಪಡಿಸಿ ಕಾಳಿ ನದಿ ಎಲ್ಲಿಯೂ ಕೃಷಿ
ಕಾರ್ಯಗಳಿಗೆ ಬಳಕೆಯಾಗುವುದಿಲ್ಲ. ಈ ನೀರಿನಲ್ಲಿಯ 25 ಟಿಎಂಸಿ ನೀರನ್ನು 2 ಸರಳ ಮಾರ್ಗಗಳ ಮೂಲಕ ಘಟಪ್ರಭಾ ಹಾಗೂ ಮಲಪ್ರಭಾ
ನದಿಗಳಿಗೆ ಹರಿಸಬಹುದು.

ಮಾರ್ಗ-1: ಸೂಪಾ ಜಲಾಶಯದ ಕೆಳಭಾಗದಲ್ಲಿ ನೀರನ್ನು ಲಿಫ್ಟ್ ಮಾಡಿ ರಾಜ್ಯ ಹೆದ್ದಾರಿಗೆ ಪಕ್ಕದಲ್ಲಿ ಪೈಪ್‌ಲೈನ್ ಮೂಲಕ 28 ಕಿ.ಮೀ
ದೂರದಲ್ಲಿರುವ ಅಳ್ನಾವರವರೆಗೆ ಹರಿಸಬಹುದು. ಅಲ್ಲಿಂದ ಒಂದು ಪೈಪ್ ಲೈನ್ ಮೂಲಕ 34 ಕಿ.ಮೀ. ದೂರದಲ್ಲಿರುವ ಧಾರವಾಡ ಜಿಲ್ಲೆಯ
ನರೇಂದ್ರ ಗ್ರಾಮದವರೆಗೆ ನೀರನ್ನು ಹರಿಸಬಹುದು. ಇನ್ನೊಂದು ಬದಿಯಿಂದ 2 ಲೈನ್ ಪೈಪ್‌ಲೈನ್ ಮೂಲಕ 40 ಕಿ.ಮೀ ಅಂತರದಲ್ಲಿರುವ
ಎಂ.ಕೆ. ಹುಬ್ಬಳ್ಳಿವರೆಗೆ ಸಾಗಿಸಿ ಒಂದು ಪೈಪ್‌ಲೈನ್ ಮೂಲಕ ಮಲಪ್ರಭಾ ನದಿಗೆ ನೀರು ಹರಿಸುವುದು.

ಇನ್ನೊಂದು ಪೈಪ್‌ಲೈನ್ ಎಂ.ಕೆ.ಹುಬ್ಬಳ್ಳಿಯಿಂದ ಮುಂದುವರಿಸಿ 50 ಕಿ.ಮೀ ದೂರದ ಶಿರೂರದ ಮಾರ್ಕಂಡೇಯ ಜಲಾಶಯಕ್ಕೆ ಮತ್ತು 60 ಕಿ.ಮೀ ದೂರದ ಡಕಲ್ ಜಲಾಶಯಕ್ಕೆ ನೀರು ಹರಿಸಬಹುದು. ಈ ಹಂತದ ಮೂಲಕ ವಾರ್ಷಿಕ ಘಟಪ್ರಭಾ ನದಿಗೆ 10 ಟಿಎಂಸಿ ಹಾಗೂ ಮಲಪ್ರಭಾ ನದಿಗೆ 10 ಟಿಎಂಸಿ ಮತ್ತು ಧಾರವಾಡದ ನರೇಂದ್ರವರೆಗೆ 5 ಟಿಎಂಸಿ ಕಾಳಿನದಿಯ ನೀರನ್ನು ಹರಿಸಬಹುದು. ಈ ಯೋಜನೆ ಅನುಷ್ಠಾನಕ್ಕೆ 5500 ಕೋಟಿ ರು. ವೆಚ್ಚವಾಗುತ್ತದೆ.

ಆಯ್ಕೆ 2: ಕಡಿಮೆ ವಿದ್ಯುತ್ ಹಾಗೂ ಕಡಿಮೆ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಟನಲ್ ನಿರ್ಮಿಸಿ ಯೋಜನೆಯನ್ನು ಕಾರ್ಯಗತ
ಗೊಳಿಸಬಹುದು. ಸೂಪಾ ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ಲಿಫ್ಟ್ ಮಾಡಿ 33 ಕಿ.ಮೀ ಉದ್ದದ ಸುರಂಗದಲ್ಲಿ ಪಶ್ಚಿಮ ಘಟ್ಟಗಳನ್ನು ದಾಟಿ
ಕಾಳಿನದಿಯ 25 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಸೇರಿಸಬಹುದು. 25 ಟಿಎಂಸಿ ನೀರಿನಲ್ಲಿ, 15 ಟಿಎಂಸಿಯನ್ನು ನೀರನ್ನು ಮಲಪ್ರಭಾ ನದಿ
ಮೂಲಕ ಹರಿಸಿ ನವಿಲುತೀರ್ಥ ಜಲಾಶಯದಲ್ಲಿ ಸಂಗ್ರಹಿಸುವುದು. ಉಳಿದ 10 ಟಿಎಂಸಿ ನೀರನ್ನು ಡಕಲ್ ಜಲಾಶಯಕ್ಕೆ ಸಾಗಿಸಬಹುದು. ಮಲ ಪ್ರಭಾ ನದಿಯಿಂದ ನೀರನ್ನು ಲಿಫ್ಟ್ ಮಾಡಿ 18 ಕಿ.ಮೀ ದೂರದ ಬಳ್ಳಾರಿ ನಾಲೆಗೆ ಸೇರಿಸಬಹುದು. ಅಲ್ಲಿಂದ 18 ಕಿ.ಮೀ. ಉದ್ದದ ಗ್ರಾಟಿ ಸುರಂಗ ಮಾರ್ಗದ ಮೂಲಕ ವಾರ್ಷಿಕ 10 ಟಿಎಂಸಿ ಕಾಳಿನದಿಯ ನೀರನ್ನು ಡಕಲ್ ಡ್ಯಾಂಗೆ ಹರಿಸಬಹುದು.  ಈ ಯೋಜನೆಯ ಒಟ್ಟು ವೆಚ್ಚ 3,820.00 ಕೋಟಿಯಷ್ಟಾಗುತ್ತದೆ.

ಅಘನಾಶಿನಿ ತಿರುವು ಯೋಜನೆ: ಪಶ್ಚಿಮ ಘಟ್ಟದ ಸಂಪದ್ಭರಿತ ನದಿಗಳಲ್ಲಿ ಒಂದಾದ ಅಘುನಾಶಿನಿ ನದಿಗೆ 4 ಕಡೆ ತಡೆಗೊಡೆ ನಿರ್ಮಿಸಿ
ಲಿಫ್ಟಿಂಗ್ ಮಾಡುವ ಮೂಲಕ ವಾರ್ಷಿಕ 9.19 ಟಿಎಂಸಿ ಅಡಿ ನೀರನ್ನು ಶಿರಸಿ, ಸಿದ್ದಾಪುರ ತಾಲೂಕಿನ ೧೪ ಸಾವಿರ ಹೆಕ್ಟೇರ್ ಭೂ ಪ್ರದೇಶದ
ನೀರಾವರಿಗಾಗಿ ಬಳಕೆ ಮಾಡಿಕೊಳ್ಳಬಹದು.

ಬೆಡ್ತಿ ತಿರುವು ಯೋಜನೆ: ಪಶ್ಚಿಮಾಭಿಮುಖವಾಗಿ ಹರಿಯುವ ಬೆಡ್ತಿ ನದಿಯ 8.57 ಟಿಎಂಸಿ ನೀರನ್ನು ತುಂಗಭದ್ರಾ ನದಿಯ ಉಪನದಿಯಾದ
ವರದಾ ನದಿಗೆ ಸೇರಿಸಿದರೆ ತುಂಗಭದ್ರಾ ಎಡದಂಡೆ ಕಾಲುವೆ ಜಲಾನಯನ ಪ್ರದೇಶದ ನೀರಿನ ಕೊರತೆಯನ್ನು ತಪ್ಪಿಸಲು ಸಾಧ್ಯವಿದೆ.
515.65 ಕೋಟಿಗಳಲ್ಲಿ ಅನುಷ್ಠಾನಗೊಳಿಸಬಹುದಾದ ಈ ಯೋಜನೆಯು ಕೃಷಿ ಹಾಗೂ ಜಲವಿದ್ಯುತ್ ಉತ್ಪಾದನೆ ಎರಡಕ್ಕೂ ಉಪಕಾರಿ ಯಾಗಲಿದೆ.

ನೇತ್ರಾವತಿ ತಿರುವು ಯೋಜನೆ: ಮಧ್ಯ ಕರ್ನಾಟಕದ ಹಾಗೂ ಪೂರ್ವಭಾಗದ ಜಿಲ್ಲೆಗಳ ಕುಡಿಯುವ ನೀರಿನ ಬವಣೆ ತಪ್ಪಿಸಲು ಹಾಗೂ ಕೆರೆ ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಸಲು ನೇತ್ರಾವತಿ ನದಿ ನೀರನ್ನು ಬಳಸಿಕೊಳ್ಳಬಹುದು. ಜಲತಜ್ಞರು ನೀಡಿರುವ ಅಂಕಿ – ಅಂಶಗಳ
ಪ್ರಕಾರ ನೇತ್ರಾವತಿ ಮತ್ತು ಕುಮಾರಧಾರಾ ನದಿ ಪಾತ್ರಗಳಲ್ಲಿ 100 ಟಿಎಂಸಿ ನೀರಿನ ಲಭ್ಯತೆ ಇದೆ.

ನೇತ್ರಾವತಿ ಕೆಳಪಾತ್ರದ ಉಪ್ಪಿನಂಗಡಿ ಬಳಿ ತಡೆಗೋಡೆ ನಿರ್ಮಿಸಿ ನೀರನ್ನು 500 ರಿಂದ 600 ಕಿ.ಮೀ.ವರೆಗೆ ಲಿಫ್ಟ್ ಮಾಡಿದರೆ ಅರಸೀಕೆರೆ ಬಳಿಯ ಎತ್ತಿನಹೊಳೆ ಕಾಲುವೆಗೆ ಹರಿಸಬಹುದು. ಅಲ್ಲಿಂದ ಕಡೂರು, ಅರಸೀಕೆರೆ ಸೇರಿದಂತೆ ತುಮಕೂರು, ಚಿಕ್ಕಬಳ್ಳಾಪೂರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ನೀರನ್ನು ಹರಿಸಬಹುದು.

ಮಹಾದಾಯಿ ತಿರುವು ಯೋಜನೆ: ಕಳಸಾ ನಾಲೆಯ 1.5 ಟಿಎಂಸಿ ನೀರನ್ನು ಕಣಕುಂಬಿ ಸಮೀಪದ ಉದ್ದೇಶಿತ ಕಳಸಾ ಡ್ಯಾಂನಿಂದ 49 ಮೀ
ಎತ್ತರದಲ್ಲಿರುವ ಮಲಪ್ರಭಾ ನದಿಗೆ ಹರಿಸಬಹುದು. ಇದೇ ರೀತಿ ಕೊಂಗಲ್ ಬಳಿ ಬಂಡೂರಿ ಜಲಾಶಯದಿಂದ 1.5 ಟಿಎಂಸಿ ನೀರನ್ನು ಎತ್ತಿ
ಮಲಪ್ರಭಾ ನದಿಗೆ ಹರಿಸಬಹುದು. ಹೀಗೆ ಕಳಸಾ – ಬಂಡೂರಿ ನಾಲೆಗಳಿಂದ ವಾರ್ಷಿಕ 3 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸಬಹುದು.
ಕೊಂಗಲ್ ಗ್ರಾಮದ ಮಹಾದಾಯಿ ನದಿಯ 4 ಟಿಎಂಸಿ ನೀರನ್ನು ಬಂಡೂರಿ ನಾಲೆಗೆ ಸೇರಿಸಿದರೆ ಅಲ್ಲಿಂದ ಮಲಪ್ರಭಾ ನದಿಗೆ ಸೇರಿಸಬಹುದು. ಈ ಮೂರು ಹಂತದ ಒಟ್ಟು ಯೋಜನಾ ವೆಚ್ಚವು 303.25 ಕೋಟಿಯಷ್ಟಾಗುತ್ತದೆ.

ಶರಾವತಿ ತಿರುವು ಯೋಜನೆ: ಶರಾವತಿಯನ್ನು ಕನ್ನಡ ನಾಡಿನ ಭಾಗಿರಥಿ ಎಂದು ಕರೆಯುತ್ತಾರೆ. ಶರಾವತಿಯ ಅಪಾರ ಜಲಸಂಪತ್ತು ಕರುನಾಡಿಗೆ ಬೆಳಕು ನೀಡುವುದರ ಜತೆಗೆ ಬಯಲು ಸೀಮೆಯ ತುಂಗಭದ್ರಾ ಜಲಾನಯನ ಪ್ರದೇಶದ ಜನರ ಬದುಕನ್ನು ಬೆಳಗಲು ಸಾಧ್ಯವಿದೆ. ಶರಾವತಿ ನದಿ ಹರಿಯುವ ಅನತಿ ದೂರದಲ್ಲಿಯೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹುಟ್ಟುವ ವರದಾ ನದಿಗೆ ಕೇವಲ ಅರ್ಧ ಕಿ.ಮೀ ಅಂತರದಲ್ಲಿ ಲಿಂಗನ ಮಕ್ಕಿ ಜಲಾಶಯದಿಂದ ಸಮುದ್ರ ಮಟ್ಟದಿಂದ 510 ಮೀ.ನಿಂದ 570 ಮೀ ಎತ್ತರದವರೆಗೆ ಲಿಫ್ಟ್ ಮಾಡಿ ಶರಾವತಿಯ ನೀರನ್ನು ವರದಾ ನದಿಗೆ ಹರಿಸಬಹುದು.

ವರದಾ ನದಿಯು ಮುಂದೆ ತುಂಗಭದ್ರೆಯನ್ನು ಸೇರುವುದರಿಂದ ಮಧ್ಯ ಕರ್ನಾಟಕದ ಬಯಲುಸೀಮೆಯ ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಕಾಳಿ, ಅಘನಾಶಿನಿ, ಶರಾವತಿ, ಬೆಡ್ತಿ, ನೇತ್ರಾವತಿ ಸೇರಿದಂತೆ ಪಶ್ಚಿಮಘಟ್ಟದ 13 ಪ್ರಮುಖ ನದಿಗಳು ಕರ್ನಾಟಕದಲ್ಲಿಯೇ ಹುಟ್ಟಿ ಕರ್ನಾಟಕ ಕರಾವಳಿ ವ್ಯಾಪ್ತಿಯಲ್ಲಿಯೇ ಸಮುದ್ರ ಸೇರುತ್ತವೆ. ನೀರು ರಾಜ್ಯದ ಪರಮೊಚ್ಚ ಸಂಪನ್ಮೂಲ. ಹೀಗಾಗಿ ನಮ್ಮ ರಾಜ್ಯದ ನೀರನ್ನು ಬಳಕೆ ಮಾಡಿಕೊಳ್ಳಲು ನಮಗೆ ಪೂರ್ಣ ಅಧಿಕಾರವಿದೆ.

ಭವಿಷ್ಯದ ಹಿತದೃಷ್ಟಿಯಿಂದ ಯೋಚಿಸಿದಾಗ 2048-49ರವರೆಗೆ ಕರ್ನಾಟಕದ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದ ಕುಡಿಯುವ ನೀರಿಗಾಗಿಯೇ 240 ಟಿಎಂಸಿ ಅಡಿ ನೀರು ಬೇಕು ಎಂದು ಅಂದಾಜಿಸಲಾಗಿದೆ. ಕೃಷಿ, ಕೈಗಾರಿಕೆ ಇತರ ಬಳಕೆ ಎಲ್ಲ ಸೇರಿ 2760 ಟಿಎಂಸಿಯಷ್ಟಾಗು ತ್ತದೆ. ಹೀಗಾಗಿ 2050ರ ವೇಳೆಗೆ ಕರ್ನಾಟಕಕ್ಕೆ 3000 ಟಿಎಂಸಿ ನೀರಿನ ಅವಶ್ಯಕತೆ ಇದೆ.

ಈಗ ನಮ್ಮ ರಾಜ್ಯದಲ್ಲಿ ಉಪಯೋಗವಾಗುತ್ತಿರುವ 1235.75 ಟಿಎಂಸಿಗೆ ಹೋಲಿಸಿದರೆ 1764.25 ಟಿಎಂಸಿಯಷ್ಟು ನೀರಿನ ಕೊರತೆ ಎದುರಾಗುತ್ತದೆ. ಆದ್ದರಿಂದ ಭವಿಷ್ಯದ ಅವಶ್ಯಕತೆಗಾಗಿ ಈಗಿನಿಂದಲೇ ಜಾಗೃತರಾಗೋಣ. ಹಿರಿಯ ನೀರಾವರಿ ತಜ್ಞರಾದ ಜಿ. ಎಸ್. ಪರಮಶಿವಯ್ಯ ನವರು ಪಶ್ಚಿಮ ಘಟ್ಟಗಳ ನದಿಗಳನ್ನು ಬಯಲುಸೀಮೆಗಾಗಿ ಸದ್ಬಳಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.

ಬಯಲು ಸೀಮೆಯ ಕೆಲ ಜಿಲ್ಲೆಗಳಲ್ಲಿ ಅಂತರ್ಜಲ ಪ್ರಮಾಣ ಪಾತಳಕ್ಕಿಳಿದಿದೆ. ಕೆಲವೆಡೆ ಕಲುಷಿತಗೊಂಡಿದೆ. ಹೀಗಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರಿನಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಪೂರ್ವಕ್ಕೆ ತಿರುಗಿಸಿದರೇ ತಪ್ಪೇನೂ ಆಗುವುದಿಲ್ಲ. ಪಶ್ಚಿಮ ಘಟ್ಟಗಳ ಜೀವವೈವಿಧ್ಯ ಹಾಗೂ ಸೂಕ್ಷ್ಮ ಪರಿಸರಕ್ಕೆ ಹಾನಿಯಾಗದಂತೆ ತಂತ್ರಜ್ಞಾನದ ಸಹಾಯ ದಿಂದ ನೀರು ಹರಿಸಲು ಸಾಧ್ಯವಿದೆ. ಪಕ್ಕದ ತೆಲಂಗಾಣ ರಾಜ್ಯ ಕಾಲೇಶ್ವರಂ ಯೋಜನೆ ಮೂಲಕ ಗೋದಾವರಿ ನೀರನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಿದ್ದು ನಮ್ಮ ಕಣ್ಣು ಮುಂದಿದೆ.

ಕೇಂದ್ರ ಸರಕಾರ ಮಹತ್ವದ ರಾಷ್ಟ್ರೀಯ ನದಿ ಜೋಡಣೆ ಯೋಜನೆಗೆ ಸಜ್ಜಾಗಿರುವಾಗ ನಮ್ಮ ರಾಜ್ಯದಲ್ಲಿಯೂ ನದಿ ಸಂಪನ್ಮೂಲ ಬಳಕೆಗಾಗಿ ನದಿಗಳ ಪರಸ್ಪರ ಜೋಡಣೆಗೆ ಮುಂದಾಗಬೇಕು.

ಅನ್ನಮಾಪಃ ಅಮೃತಮಾಪಃ ಸ್ವರಾಡಮಾಪ: ರಾಡಮಾಪಃ ನೀರೆಂದರೆ ಅನ್ನ, ನೀರೆಂದರೆ ಅಮೃತ, ನೀರೆಂದರೆ ಅಂತಸ್ತೇಜ, ನೀರೆಂದರೆ ವಿರಾಟ ಚೇತನ, ನೀರೆಂದರೆ ಬೆಳಕು ಎಂಬ ಉಪನಿಷತ್ತಿನ ಈ ಸಾಲುಗಳು ನಮ್ಮ ಧ್ಯೇಯಮಂತ್ರವಾಗಬೇಕು. ಈ ಅಮೃತವನ್ನು ಮುಂದಿನ ತಲೆಮಾರಿಗೆ ಸಮೃದ್ಧವಾಗಿ, ಶುದ್ಧವಾಗಿ ಉಳಿಸಿಕೊಡುವ ಮಹತ್ತರವಾದ ಜವಾಬ್ದಾರಿ ನಮ್ಮ ಪೀಳಿಗೆಯ ಹೆಗಲಿಗಿದೆ. ಇದನ್ನು ಅರಿತು ಕಾರ್ಯಪ್ರವೃತ್ತರಾಗೋಣ.