ಅಭಿವ್ಯಕ್ತಿ
ಉಮಾ ಮಹೇಶ ವೈದ್ಯ
ವಿಚಿತ್ರವೆನಿಸಬಹುದಲ್ಲವೇ? ಈ ರೋಗಗಳಿಗೆ ಅಲೋಪಥಿಯಲ್ಲಿ ಔಷಧಿಯೇ ಇಲ್ಲವೆಂದು ಜಗತ್ತೇ ಒಪ್ಪಿಕೊಂಡಿರುವಾಗ,
ಆ ರೋಗಗಳ ಚಿಕಿತ್ಸೆಗೆ ರೋಗಿಗಳಿಂದ ಚಿಕಿತ್ಸೆ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಶುಲ್ಕದ ಹೆಸರಿನಲ್ಲಿ ಡಾಕ್ಟರುಗಳು ಲೂಟಿ ಹೊಡೆಯುತ್ತಿರುವುದನ್ನು ನಾವು ಕಣ್ಣಾರೆ ಕಂಡರೂ, ಸರಕಾರವೂ ಸಹ ಈ ಹಗಲು ದರೋಡೆಯನ್ನು ಕಂಡೂ ಜಾಣ ಕುರುಡ ತನವನ್ನು ಪ್ರದರ್ಶಿಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಕಳೆದ ವರ್ಷ ಚೀನಾದಲ್ಲಿ ಕಂಡು ಬಂದ ಕೋವಿಡ್-19 ಸಾಂಕ್ರಾಮಿಕ ವೈರಾಣು ಈಗ ನಮ್ಮ ದೇಶ ವನ್ನೊಳಗೊಂಡಂತೆ, ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಈ ರೋಗಾಣು ಪತ್ತೆಯಾದ ತಕ್ಷಣ ವಿಶ್ವ ಆರೋಗ್ಯ ಸಂಸ್ಥೆ ಈ ವೈರಾಣುವಿನಿಂದ ಉಂಟಾಗುವ ರೋಗಗಳ ಶಮನಕ್ಕೆ ಯಾವುದೇ ಔಷಧಿಯಿಲ್ಲ ಆದ್ದರಿಂದ, ದೈಹಿಕ ಅಂತರ, ಮುಖಗವಸು, ಹಾಗೂ ಶುಚಿತ್ವವೇ ಔಷಧವೆಂದು ಸಾರಿ ಹೇಳಿತ್ತು ಹಾಗೂ ಇಂದಿಗೂ ಹೇಳುತ್ತಲಿದೆ.
ಆದರೆ, ಈ ಕರೋನಾ ಪವರ್ ಕಾಲವನ್ನು ತಮ್ಮ ಸ್ವಾರ್ಥ ಲಾಭಕ್ಕೆ ಸುವರ್ಣ ಕಾಲವಾಗಿ ಪರಿವರ್ತಿಸಿಕೊಂಡ ಡಾಕ್ಟ್ರುಗಳು ಹಾಗೂ ಆಸ್ಪತ್ರೆಗಳು ಈ ಕರೋನಾಕ್ಕೆ ಚಿಕಿತ್ಸೆ ನೀಡುವುದಾಗಿ ರೋಗಿಗಳನ್ನು ಒಳರೋಗಿಗಳಾಗಿ ದಾಖಲು ಮಾಡಿಕೊಂಡು, ಸಾಧಾರಣ ಜ್ವರ, ಕೆಮ್ಮು, ನೆಗಡಿಗೆ ನೀಡುವ ಔಷಧಿಯನ್ನೇ ಕರೋನಾ ರೋಗಕ್ಕೆ ಔಷಧಿಯೆಂದು ಹೇಳಿ, ಅನಗತ್ಯವಿದ್ದರೂ
ವೆಂಟಿಲೇಟರ್‌ನಡಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸುಮಾರು 14 ದಿನಗಳವರೆಗೆ ಚಿಕಿತ್ಸೆೆ ನೀಡಿ ಕೊನೆಗೆ ಕರೋನಾ ಲಕ್ಷಣಗಳು ಕಡಿಮೆಯಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ರೋಗಿಗಳಿಂದ ದಿನಕ್ಕೆ ಇಪ್ಪತ್ತೈದು ಸಾವಿರ ರುಪಾಯಿಯಂತೆ ಶುಲ್ಕ ವಿಧಿಸಿ
ವಸೂಲಿ ಮಾಡಿದ್ದನ್ನು ನಾವು ಕಣ್ಣಾರೆ ನೋಡಿದ್ದೇವೆ.
ಈ ರೀತಿಯಾಗಿ ಕಳೆದ ಮಾರ್ಚ್ ತಿಂಗಳಿಂದ ಇಲ್ಲಿಯವರೆಗೂ ಸಾವಿರಾರು ರೋಗಿಗಳಿಂದ ಶುಲ್ಕದ ಹೆಸರಿನಲ್ಲಿ ಬಾಚಿಕೊಂಡ ಹಣದ ಮೊತ್ತವನ್ನು ಅಂದಾಜು ಲೆಕ್ಕ ಹಾಕಿದರೂ ಸಹ ಮೊತ್ತವು ಸಮೀಪ ಒಂದು ಲಕ್ಷ ಕೋಟಿಯೆಂದರೆ ತಪ್ಪಾಗಲಿಕ್ಕಿಲ್ಲ.
ಇದೇ ಸಮಯದಲ್ಲಿ, ದೇಶದಲ್ಲಿ ಬಾಬಾ ರಾಮ ದೇವ ತಮ್ಮ ಪತಂಜಲಿ ಸಂಸ್ಥೆಯ ಮೂಲಕ ಕರ್ನಾಟಕದಲ್ಲಿ, ಡಾ.ಗಿರಿಧರ ಕಜೆ ಆಯುರ್ವೇದ ಪದ್ಧತಿಯಲ್ಲಿ ಕರೋನಾ ವೈರಾಣುವಿನಿಂದ ಉಂಟಾಗುವ ಅನಾರೋಗ್ಯಗಳಿಗೆ ಕೇವಲ ಇನ್ನೂರಾ ಐವತ್ತು ರುಪಾಯಿಗಳಲ್ಲಿ ಚಿಕಿತ್ಸೆಯಿದೆ ಎಂದು ಸ್ವತಃ ಔಷಧಗಳನ್ನು ತಯಾರಿಸಿದಾಗ ಈ ಅಲೋಪೆಥಿಕ್ ಡಾಕ್ಟರುಗಳು ಮೂಗೆಳೆದು ಕೇಳಿದ್ದು, ಕರೋನಾ ರೋಗವನ್ನು ಈ ಔಷಧಿಗಳು ಗುಣವಾಗಿಸುತ್ತವೆ ಎನ್ನುವುದಕ್ಕೆ ಪುರಾವೆಯೇನು? ಎಂದು.
ಇದಕ್ಕೆ ಪ್ರತಿಯಾಗಿ ಹಾಗಾದರೆ ಅಲೋಪಥಿಯಲ್ಲಿ ಈ ಕರೋನಾ ಗುಣಪಡಿಸಲು ಇರುವ ಔಷಧಿಗಳು ಯಾವುವು? ಎಂದರೆ ಅವರಿಂದ ಮೌನದ ಉತ್ತರವೇ ಹೊರತು ಯಾವುದೇ ವಿವರಣೆ ಅಸಾಧ್ಯ. ಏಕೆಂದರೆ ಅವರಿಗೂ ಗೊತ್ತು, ಈ ಕರೋನಾಕ್ಕೆ ಅಲೋ ಪಥಿಯಲ್ಲಿ ಔಷಧಿಯಿಲ್ಲ. ಆದರೂ ವಾಸಿಮಾಡುತ್ತೇವೆಂದು ಹೇಳಿ ಚಿಕಿತ್ಸೆ ನೀಡುತ್ತಿದ್ದೇವೆ ಎನ್ನುವುದು. ಇದೇ ವಿಷಯ ವನ್ನು ಒಬ್ಬ ಸೇವಾ ಮನೋಭಾವ ಹೊಂದಿದ ಅಲೋಪೆಥಿಕ ಪದ್ಧತಿಯಲ್ಲಿ ವೈದ್ಯ ವೃತ್ತಿ ಕೈಗೊಂಡಿರುವ ಪರಿಚಯದ ಡಾಕ್ಟರನ್ನು ಕೇಳಿದಾಗ, ಅವರು ಹೇಳಿದ್ದಿಷ್ಟು, ಅಲೋಪಥಿಯಲ್ಲಿ ಕರೋನಾ ಬಿಡಿ ಯಾವುದೇ ರೋಗವನ್ನು ಸಂಪೂರ್ಣವಾಗಿ ಗುಣಪಡಿ ಸುವ ಔಷಧಿಗಳಿಲ್ಲ. ರಾಸಾಯನಿಕ ಔಷಧಿಗಳನ್ನು ಬೆರೆಸಿ, ಒಂದು ವಿಷವನ್ನು ಕೊಲ್ಲಲು ಇನ್ನೊಂದು ವಿಷವನ್ನು ಸೇವಿಸಲು ನೀಡಿ ರೋಗದ ಹೆಸರಿನಲ್ಲಿರುವ ಆ ವಿಷವು ಕೆಲ ದಿನಗಳವರೆಗೆ ಮೌನವಾಗಿರುವಂತೆ ಇರಿಸುವ ಔಷಧಿಗಳಿವೆಯೇ ಹೊರತು, ರೋಗಿಯ ರೋಗದ ಮೂಲ ಬೇರಿಗೆ ಹೋಗಿ ಅದಕ್ಕೆ ಚಿಕಿತ್ಸೆ ನೀಡುವ ಔಷಧಿಗಳು ಅಲೋಪಥಿಯಲ್ಲಿ ಇಲ್ಲವೇ ಇಲ್ಲ. ಆದ್ದರಿಂದ ಭಾರತ ರಾಜಕೀಯವಾಗಿ ಸ್ವತಂತ್ರವಾದರೂ ಈ ಔಷಧಿ ಜಗತ್ತಿನಲ್ಲಿ ಇನ್ನೂ ಸಹ ಬ್ರಿಟೀಷರ ಲೂಟಿ ಮಾಡುವ ಮನೋಭಾವ ವನ್ನೇ ಆಸ್ಪತ್ರೆಗಳು ಇಂದಿಗೂ ಮುಂದುವರಿಸಿಕೊಂಡು ಬಂದಿವೆ. ಇವರ ದೃಷ್ಟಿಯಲ್ಲಿ ಪ್ರತಿ ರೋಗಿಯೂ ಆದಾಯದ ಮೂಲವೇ ಹೊರತು ಮತ್ತೇನಿಲ್ಲ.
ಇದಕ್ಕೆ ಪೂರಕವಾಗಿ ಇನ್ನೊಂದು ಘಟನೆ ಹೇಳಬೇಕೆಂದರೆ, ನನ್ನ ಹಿಮ್ಮಡಿಯ ನೋವಿಗೆ ಆಯುರ್ವೇದ ಚಿಕಿತ್ಸೆ ಪಡೆಯಲು ಪ್ರಕೃತಿ ಚಿಕಿತ್ಸಾಲಯದಲ್ಲಿದ್ದಾಗ, ಅದೇ ಪ್ರಕೃತಿ ಚಿಕಿತ್ಸಾಲಯಕ್ಕೆ ನಮ್ಮೂರಿನ ಹೆಸರಾಂತ ಅಲೋಪೆಥಿಕ್ ಡಾಕ್ಟರೊಬ್ಬರು ತಮ್ಮ ಮಂಡಿ ಹಾಗೂ ಹಿಮ್ಮಡಿ ನೋವಿನ ಚಿಕಿತ್ಸೆಗೆ ಬಂದಿದ್ದರು. ಅಚ್ಚರಿಯಿಂದ ಇಲ್ಲಿ ಹೇಗೆ? ಎಂದು ಕೇಳಿದಾಗ, ಅವರು ಹೇಳಿದ್ದು, ಹಣ ಗಳಿಸಲು ಅಲೋಪೆಥಿ, ಆರೋಗ್ಯವನ್ನು ಉಳಿಸಿಕೊಳ್ಳಲು ಈ ಆಯುರ್ವೇದ ಎಂದು. ತಮಗೆ ಹಾಗೂ ತಮ್ಮ ಕುಟುಂಬದ ವರಿಗೆ ಆಯುರ್ವೇದ ಔಷಧಿ ನೀಡುವ ಈ ಡಾಕ್ಟರ ತಮ್ಮ ಬಳಿ ಬರುವ ರೋಗಿಗಳಿಗೆ ಮಾತ್ರ ಅಲೋಪೆಥಿಕ್ ಔಷಧಿಗಳನ್ನು ನೀಡುತ್ತಾರೆ. ಈ ಘಟನೆಯೇ ಸಾಕು ಯಾಕೆ ನಮ್ಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಆರೋಗ್ಯ ಭಾಗ್ಯ ಮರೀಚಿಕೆಯಾಗಿದೆ ಯೆಂದು ಕಂಡುಕೊಳ್ಳಲು.
ಈ ಕರೋನಾಕ್ಕೆ ಚಿಕಿತ್ಸೆಯಾಗಿ ತುರ್ತು ನಿಗಾ ಘಟಕದಲ್ಲಿ ನೀಡಿದ್ದು, ರೆಮಿಡೆಸಿವಿರ್ (Remdesivir) ಇಂಜೆಕ್ಷನ್. ವೈರಾಣುವಿನ
ನಿಗ್ರಹಕ್ಕೆ ಈ ಹಿಂದೆ ಬಳಿಸಲ್ಪಡುವ ಈ ಔಷಧಿಯನ್ನು ಈ ಕೊರೊನಾ ರೋಗಕ್ಕೂ ಬಳಿಸಬಹುದೆಂದು ಸರಕಾರಗಳೇ ಹೇಳಿದವು. ಆದರೆ ಈ ಕರೋನಾ ರೋಗದ ಗಂಭೀರ ಸ್ಥಿತಿಯೆಂದರೆ ರೋಗಿಯು ಉಸಿರಾಟದ ತೊಂದರೆಗೆ ಸಿಲುಕುವುದು ಹಾಗೂ ನಂತರ ಬಹು ಅಂಗಾಂಗಗಳ ವೈಫಲ್ಯತೆಯಿಂದ ನರಳಿ ಕೊನೆಯುಸುರೆಳೆಯುವುದು. ಹಾಗಾದರೆ ಈ ರೆಮಿಡೆಸಿವಿರ್ (Remdesivir) ಇಂಜೆಕ್ಷನ್‌ನ ಅಡ್ಡ ಪರಿಣಾಮಗಳೇನು ಎಂದು ವಿಕಿಪಿಡಿಯಾವನ್ನು ಪರಿಶೀಲಿಸಿದಾಗ ಕಂಡು ಬಂದ ಅಂಶಗಳಿವು “The
most common adverse effects in studies of remdesivir for COVID 19 include respiratory failure and organ impair ment, including low albumin, low potassium, low count of red blood cells, low count of platelets that help with clotting, and yellow discoloration of the skin. Other reported side effects include gastrointestinal distress, elevated transaminase levels in the blood (liver enzymes), and infusion site reactions.” ಈ ಔಷಧಿಯ ಪ್ರಯೋಗವೇ ರೋಗಿಯ
ಉಸಿರಾಟದ ತೊಂದರೆಗೆ ಮತ್ತಷ್ಟು ಕಾರಣ ವಾಗುತ್ತದೆಂದರೆ, ವೆಂಟಿಲೇಟರ್‌ನಲ್ಲಿ ಉಸಿರಾಟಕ್ಕೆ ಅನುಕೂಲವಾಗಲೆಂದು ಇರಿಸಿ, ಈ ರೆಮಿಡೆಸಿವಿರ್ ಔಷಧಿಯನ್ನು ನೀಡುತ್ತಾ ಹೋದರೆ ವೆಂಟಿಲೇಟರ್‌ನ ಲಾಭವೇನು? ಈ ರೋಗಿ ಗುಣವಾಗುವುದು ಹೇಗೆ? ಹಾಗೂ ಎಂದು? ಇದಕ್ಕೆ ಉತ್ತರವಾಗಿ ಡಾಕ್ಟರುಗಳು ಬೆರಳು ಮಾಡಿ ತೋರುವುದು ಸರಕಾರಗಳಿಗೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಕಡೆಗೆ. ಆದರೆ ಡಾಕ್ಟ್ರೇ ನೀವು ರೋಗಿಯ ಬಳಿ ಇರುವವರು, ಆತನ ಅನಾರೋಗ್ಯದ ಸ್ಥಿತಿಯನ್ನು ಕಣ್ಣಾರೆ ಕಾಣು ವವರು, ನೀವು ಕಲಿತ ವಿದ್ಯೆಯನ್ನು ಬಳಿಸಿ ನಿಮ್ಮದೇ ರೀತಿಯಲ್ಲಿ ಚಿಕಿತ್ಸೆ ನೀಡಿ ಎಂದು ಗೋಗರೆದರೂ ಡಾಕ್ಟರುಗಳು ಪ್ರೊಟೊ ಕಾಲ್ ಪ್ರಕಾರ ಹೇಳಿದ ಔಷಧಿಗಳನ್ನು ನೀಡಿದ್ದೇವೆ ಎಂದು ಉತ್ತರಿಸುತ್ತಾರೆಯೇ ಹೊರತು, ತಮ್ಮ ಜ್ಞಾನ ಹಾಗೂ ಅನುಭವದ ಆಧಾರದ ಮೇಲೆ ಔಷಧಿಯನ್ನು ನಿಶ್ಚಿತಗೊಳಿಸಿ ನೀಡಿದ್ದೇವೆಂದು ಎಂದೂ ಹೇಳುವುದಿಲ್ಲ, ಏಕೆಂದರೆ ಅವರಿಗೂ ಗೊತ್ತು ಈ ರೋಗಕ್ಕೆ ಔಷಧಿ ನೀಡಲು ಅಲೋಪಥಿ ಚಿಕಿತ್ಸಾ ಪದ್ಧತಿಯಲ್ಲಿ ಅವಕಾಶವೇ ಇಲ್ಲ ಎಂಬುದು.
ಇದಕ್ಕೆ ಉತ್ತಮ ಉದಾಹರಣೆ ನೀಡಬೇಕೆಂದರೆ ಹಲವು ಪ್ರಸಿದ್ಧ ವ್ಯಕ್ತಿಗಳು ತಮಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದೇವೆ ಹೊರತು ಮತ್ತೇನು ಕಾರಣವಿಲ್ಲವೆಂದು ತಮ್ಮ ಅಭಿಮಾನಿಗಳನ್ನು ದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಕೆಲದಿನಗಳ ನಂತರ ತುರ್ತು ಚಿಕಿತ್ಸಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡುತ್ತಿರುವುದನ್ನು ನಾವು ಅವರ ಪೇಸ್‌ಬುಕ್ ಅಥವಾ ಟ್ವೀಟರ್ ಖಾತೆಗಳಲ್ಲಿ ಕಾಣುತ್ತೇವೆ. ಕೇವಲ ಕೆಲದಿನಗಳ ಚಿಕಿತ್ಸೆ ಎಂದು ಆಸ್ಪತ್ರೆ ಸೇರಿದವರು ಇಹ ಲೋಕ ತ್ಯಜಿಸಿದ್ದು ಕಂಡು ಅವರಿಗೆ ಡಾಕ್ಟರುಗಳು ನೀಡಿದ ಚಿಕಿತ್ಸಾ ಪಟ್ಟಿಯಲ್ಲಿ ಈ ರೆಮಿಡೆಸಿವಿರ್ ಹೆಸರು ಕಂಡು ಬಂದ ನಂತರ ನನಗನಿಸಿದ್ದು, ಉಸಿರಾಟದ ತೊಂದರೆ ಇರುವ ವ್ಯಕ್ತಿಗೆ ಈ ಇಂಜೆಕ್ಷನ್ ನೀಡಿ ಉಸಿರಾಟವನ್ನೇ ಈ ಡಾಕ್ಟರುಗಳು ನಿಲ್ಲಿಸಿದರಾ? ಎಂದು.
ಕೊನೆಗೆ ಸಂಬಂಧಿಕರಿಗೆ ನಮ್ಮ ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಸಹ ಜೀವವನ್ನು ಉಳಿಸಿಕೊಳ್ಳಲಾಗಲಿಲ್ಲ
ಎಂದು ವಿಷಾದ ವ್ಯಕ್ತಪಡಿಸುವ ಡಾಕ್ಟರ್‌ಗಳಿಗೆ ಗೊತ್ತಿರಲಿಲ್ಲವೇ, ನಾವು ಔಷಧಿಯಿಲ್ಲದ ರೋಗಕ್ಕೆ ಚಿಕಿತ್ಸೆ ನೀಡುತ್ತೇವೆ, ಹಾಗೂ ಈ ರೋಗದ ಕೊನೆಯ ಹಂತವೇ ಉಸಿರಾಟದ ತೀವ್ರ ತೊಂದರೆ. ಇದನ್ನು ಶಮನಗೊಳಿಸುವುದನ್ನು ಬಿಟ್ಟು ಮತ್ತಷ್ಟು ಉಲ್ಬಣ ಗೊಳಿಸುವ ಔಷಧಿಯನ್ನು ನೀಡುತ್ತಿದ್ದೇವೆ ಎಂದು? ನಿಜಕ್ಕೂ ನ್ಯಾಯಾಂಗ ಇಂಥ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ಸಂಜ್ಞೆ ತಗೆದುಕೊಂಡು ಇಂಥ ಅಕಾಲಿಕ ಮರಣಗಳ ಬಗ್ಗೆ ವಿಚಾರಣೆ ಮಾಡುವುದು ಅತ್ಯಗತ್ಯ.
ಇವೆಲ್ಲಾ ಸಂಗತಿಗಳು ಗೊತ್ತಿದ್ದೂ ಚಿಕಿತ್ಸೆಯ ಹೆಸರಿನಲ್ಲಿ ರೋಗವನ್ನು ಉಲ್ಬಣಗೊಳಿಸಿ ಆ ರೋಗಿಯ ಪ್ರಾಣಕ್ಕೆ ಅಪಾಯ ವನ್ನುಂಟು ಮಾಡಿ ಆತ ಸಾಯಲು ಕಾರಣವಾದರೆ, ಈ ಕೃತ್ಯ ಕಾನೂನಿನ ಕೊಲೆ ಎಂಬ ಪದದ ಪರಿಭಾಷೆಯಲ್ಲಿ ಬರುತ್ತದೆ ಎಂಬುದನ್ನು ಡಾಕ್ಟರುಗಳು ತಿಳಿಯುವುದು ಸೂಕ್ತ, ಏಕೆಂದರೆ, ಇದು ವೈದ್ಯಕೀಯ ನಿರ್ಲಕ್ಷ್ಯತೆಯೆನಿಸಿಕೊಳ್ಳದೇ ಎಲ್ಲಾ ಅರಿತು ಕೈಗೊಂಡ ಕೃತ್ಯವೆಂದು ಪರಿಗಣಿಸಲಾಗುವುದು. ಡಾಕ್ಟರುಗಳ ರೂಪದಲ್ಲಿ ದೇವರೇ ಇದ್ದು ಅವರೇ ಕುಟುಂಬದ ಬೆನ್ನಲುಬಾದ ರೋಗಿಯ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದರೆಂದು ನಿಜ.
ಆ ನೊಂದ ಸಂಬಂಧಿಕರಿಗೆ ಹಾಗೂ ಅಕಾಲವಾಗಿ ಕಾಲವಾದ ಆ ರೋಗಿಯ ಆತ್ಮಕ್ಕೆ ಎಷ್ಟು ಸಂಕಟವಾಗಬಹುದು. ಅವರ ನಿಟ್ಟುಸಿರು, ಮನದಾಳದಲ್ಲಿ ಮೂಡಿ ಬರುವ ಶಾಪದ ಬಿಸಿ ಡಾಕ್ಟರುಗಳಿಗೆ ತಟ್ಟಲಾರದು ಎಂದು ಹೇಳಲಾಗದು.ಔಷಧಿಯೇ
ಇಲ್ಲದ ರೋಗಕ್ಕೆ ಔಷಧ ನೀಡುತ್ತೇನೆ, ಗುಣ ಮಾಡುತ್ತೇನೆಂದು ಹೇಳಿ ನಂಬಿಸಿ ರೋಗಿಗಳಿಗೆ ಚಿಕಿತ್ಸೆ ನೀಡಿ ಹಣವನ್ನು ವಸೂಲಿ ಮಾಡುವುದು ಕಾನೂನಿನ ಪ್ರಕಾರ ಯಾವ ಅಪರಾಧವೆಂದು ಕೇಳಿದರೆ, ಇದಕ್ಕೆ ಸರಳವಾಗಿರುವ ಉತ್ತರ ಮೋಸ ಎಸಗಿದ ಅಪರಾಧ ಎಂದು ಹೇಳಬಹುದು.
ಭಾರತೀಯ ದಂಡ ಸಂಹಿತೆಯ ಕಲಂ 415ರಡಿ ಈ ಮೋಸ ಎಂಬ ಕೃತ್ಯವನ್ನು ವ್ಯಾಖ್ಯಾನಿಸುತ್ತ ಯಾವುದೇ ವ್ಯಕ್ತಿ ಮೋಸ ಮಾಡಬೇಕೆಂಬ ಉದ್ದೇಶದಿಂದಲೇ ತಾನು ಈ ರೀತಿಯಾಗಿ ಮಾಡುತ್ತೇನೆ ಅಥವಾ ಮಾಡುವುದಿಲ್ಲವೆಂದು ಇನ್ನೊಬ್ಬ ವ್ಯಕ್ತಿಯನ್ನು ನಂಬಿಸಿ ಆತನಿಂದ ಹಣವನ್ನು ಅಥವಾ ಬೆಲೆಬಾಳುವ ಸ್ವತ್ತನ್ನು ಪಡೆದುಕೊಳ್ಳುವುದು ಎಂದು.
ಈಗ ನೋಡೋಣ ಹೇಗೆ ಈ ಔಷಧಿಯಿಲ್ಲದ ಕರೋನಾ ರೋಗದ ಹೆಸರಿನಲ್ಲಿ ಡಾಕ್ಟರುಗಳು ನಮಗೆ ಮೋಸ ಮಾಡಿದರೆಂದು. ಉದಾಹರಣೆಗೆ ಕಳೆದ ವರ್ಷದ ಜುಲೈ ತಿಂಗಳಲ್ಲಿ ವೈರಲ್ ಫಿವರ್ ಕುರಿತಂತೆ ಒಂದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ರೋಗಿಯ
ಒಟ್ಟು ಚಿಕಿತ್ಸಾ ವೆಚ್ಚ ಕೇವಲ ಹತ್ತು ಸಾವಿರ. ಆದರೆ ಈ ವರ್ಷದ ಜುಲೈ ತಿಂಗಳಲ್ಲಿ ಕರೋನಾ ಹೆಸರಿನಲ್ಲಿ ಅದೇ ವೈರಲ್ ಫಿವರ್ ಚಿಕಿತ್ಸೆಗೆ ಅದೇ ಔಷಧಿಗಳನ್ನು ನೀಡಿ ಪಡೆದ ಹಣ ಮೂರು ಲಕ್ಷ ಐವತ್ತು ಸಾವಿರ ರುಪಾಯಿಗಳು. ಅಂದರೆ ಮೂರು ಲಕ್ಷ ನಲವತ್ತು ಸಾವಿರ ರುಪಾಯಿಗಳು ಹೆಚ್ಚುವರಿ. ಇದಕ್ಕೆ ಕಾರಣ ಕೇಳಿದರೆ, ಇದು ಕರೋನಾ, ಐಸೋಲೇಷನ್ ವಾರ್ಡ್, ವೆಂಟಿಲೇ ಟರ್, ವೆಚ್ಚ ಇತ್ಯಾದಿ. ಡಾಕ್ಟರೇ ಕರೋನಾ ಕೂಡಾ ವೈರಲ್ ಫಿವರ್‌ನಂತೆ ಔಷಧಿಯಿಲ್ಲದ ರೋಗವಲ್ಲವೇ? ಎಂದು ಕೇಳಿದರೆ, ನಿಜ.
ಆದರೆ ಅದು ಸಾಂಕ್ರಾಮಿಕವಾಗಿ ಹಬ್ಬಬಾರದೆಂದು ತಗೆದುಕೊಂಡ ಮುಂಜಾಗ್ರತಾ ಕ್ರಮಗಳಿಗೆ ಉಂಟಾದ ವೆಚ್ಚವೆಂದು ಸಬೂಬು ಹೇಳುತ್ತಾರೆ. ಒಟ್ಟಾರೆ, ಆ ರೋಗಿಗೆ ತಾವು ಹೇಗೆ ಮೂರು ನಾಮ ಹಾಕಿದೆವು ಎಂದು ತಮ್ಮಲ್ಲಿಯೇ ಹಾಸ್ಯವನ್ನಾಡುತ್ತ
ಒಬ್ಬ ಡಾಕ್ಟರು ಹೇಳಿದ್ದೇನೆಂದರೆ, ತನ್ನ ನರ್ಸಿಂಗ್ ಹೋಂನಿಂದ ಇಪ್ಪೆತ್ತೆೆಂಟು ಲಕ್ಷ ರುಪಾಯಿಗಳಷ್ಟು ಸಾಲವನ್ನು ಈ ಕೋವಿಡ್-19 ವೈರಾಣು ತೀರಿಸಿ, ತನ್ನನ್ನು ಸಾಲ ಮುಕ್ತನನ್ನಾಗಿಸಿತು ಎಂದು ಹೇಳಿದ್ದನ್ನು ನೋಡಿದರೆ ನಾವೆಲ್ಲ ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂತೆ ಅನಿಸಿದ್ದು ಕಟು ಸತ್ಯ.
ಕೋಟಿ ಗಳಿಸುವ ಉದ್ದೇಶದಿಂದಲೇ ಈ ಡಾಕ್ಟರುಗಳು ಹಾಗೂ ಆಸ್ಪತ್ರೆಗಳು ಲಕ್ಷ ರುಪಾಯಿಗಳನ್ನು ಹೂಡಿ ಆಧುನಿಕ ಉಪಕರಣ ಗಳನ್ನು ತರಿಸಿ ಉಪಯೋಗಿಸುವುದು. ಒಂದು ಹಂತದಲ್ಲಿ ಇದು ಅಗತ್ಯ, ಅಂತಹ ತುರ್ತು ಸಮಯದಲ್ಲಿ ಅವುಗಳನ್ನು
ಅವಲಂಬಿಸುವುದು ಸೂಕ್ತ, ಆದರೆ ರೋಗಿಯು ದಾಖಲಾದ ತಕ್ಷಣ ಅವುಗಳ ಉಪಯೋಗದ ಅಗತ್ಯತೆಯನ್ನೂ ತಿಳಿಗೊಡದೇ ಸಂಬಂಧಿಕರನ್ನು ಹೆದರಿಕೆಯಲ್ಲಿರಿಸಿ, ಅವರಿಂದ ಚಿಕಿತ್ಸೆಯ ಹೆಸರಿನಲ್ಲಿ ಹಣವನ್ನು ಲೂಟಿ ಮಾಡುವುದು ಸುಲಿಗೆಯಲ್ಲವೇ?
ಔಷಧಿಯೇ ಇಲ್ಲದ ರೋಗಕ್ಕೆ ಈ ಡಾಕ್ಟರುಗಳು ಚಿಕಿತ್ಸೆ ನೀಡಿ ಹಣ ಪಡೆಯುವುದು ಕಾನೂನಿನಡಿ ಅಪರಾಧ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು.
ಚಿಕಿತ್ಸೆ ಕೊಟ್ಟು ಗುಣ ಮಾಡುತ್ತೇವೆಂದು ಹೇಳುವ ಈ ಡಾಕ್ಟರುಗಳನ್ನು ಆಸ್ಪತ್ರೆಗಳನ್ನು ಪ್ರಶ್ನಿಸುವ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಭವಿಷ್ಯದ ಸಾಮಾಜಿಕ ಆರೋಗ್ಯವನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು ಸಾಧ್ಯ. ಆದ್ದರಿಂದ
ಗಟ್ಟಿಯಾಗಿ ಕೇಳಿ ಡಾಕ್ಟ್ರೇ, ಈ ರೋಗಕ್ಕೆ ನಿಮ್ಮ ಅಲೋಪಥಿಯಲ್ಲಿ ಔಷಧವಿದೆಯೇ? ಇದ್ದರೆ ಅದರೆ ಅಡ್ಡಪರಿಣಾಮಗಳೇನು? ತಿಳಿಸಿ ಎಂದು.