Friday, 2nd June 2023

ರೋಮ್‌ನಲ್ಲಿ ಹಕ್ಕಿಗಳ ನೋಟ, ಆಮೇಲೆ ಹಿಕ್ಕೆಯ ಕಾಟ ಅಂತೆ !

ತಿಳಿರು ತೋರಣ

srivathsajoshi@yahoo.com

ಎಲ್ಲ ಹಕ್ಕಿಗಳೂ ಒಂದಕ್ಕೊಂದು ಕಣ್ಣಿಗೆ ಕಾಣುವಷ್ಟು ಆಸುಪಾಸಿನಲ್ಲೇ ಇರುತ್ತವೆ. ಅವು ರೋಮ್ ನಗರವನ್ನು ಆಯ್ದುಕೊಳ್ಳುವುದೇ ನಗರಪ್ರದೇಶದಲ್ಲಾದರೆ ಸಂಚಾರದಟ್ಟಣೆ, ಕಾಂಕ್ರೀಟ್ ರಸ್ತೆಗಳು, ಕಟ್ಟಡಗಳು, ವಿದ್ಯುದ್ದೀಪಗಳು ಇತ್ಯಾದಿಯಿಂದಾಗಿ ತಾಪಮಾನ ಹೆಚ್ಚಿರುತ್ತದೆ, ಅರಣ್ಯಪ್ರದೇಶಕ್ಕಿಂತ ಹೆಚ್ಚು ಬೆಚ್ಚಗೆ ಇರಲಿಕ್ಕಾಗುತ್ತದೆಂದು. ಆದರೆ ಆಹಾರಕ್ಕಾಗಿ ಪ್ರತಿದಿನವೂ ನಗರದಿಂದ ಹೊರವಲಯಕ್ಕೇ ಹೋಗಬೇಕು.

ಅದ್ಭುತ ಮತ್ತು ರಮಣೀಯ ಅನಿಸುವ ದೃಶ್ಯವಿದು. ದೃಶ್ಯಕಾವ್ಯ ಎನ್ನಲಿಕ್ಕೆ ಯೋಗ್ಯ ವಾದದ್ದು. ಕುವೆಂಪು ಏನಾದರೂ ಇದನ್ನು ನೋಡಿದ್ದಿದ್ದರೆ ‘ದೇವರು ರುಜು ಮಾಡಿದನು’ ಎನ್ನುವ ಬದಲಿಗೆ ‘ದೇವರು ಬಲೆ ಬೀಸಿಹನು’ ಎನ್ನುತ್ತಿದ್ದರೇನೋ. ಏಕೆಂದರೆ ಇದು ರುಜು ಹಾಕಿದಂತೆ ಒಂದು ಸಾಲಿನ ವಿನ್ಯಾಸವಲ್ಲ, ಆಕಾಶದಲ್ಲಿ ಒಂದೆಕ್ರೆ ವಿಸ್ತೀರ್ಣದ ಬಲೆ ಬೀಸಿದರೆ ಹೇಗಿರಬಹುದೋ ಹಾಗೆ ಕಾಣುವಂಥದ್ದು.

ಅಷ್ಟೇಅಲ್ಲ, ಕ್ಷಣಕ್ಷಣಕ್ಕೂ ಆಕಾರ ಮತ್ತು ಗಾತ್ರ ಬದಲಾಯಿಸುತ್ತ ಆ ಬಲೆಯೇ ಬಾಗಿ ಬಳುಕುತ್ತಿದೆಯೇನೋ ಅನಿಸುವಂಥದ್ದು! ಕುವೆಂಪು ಬಣ್ಣಿಸಿದ್ದು ಸಿಬ್ಬಲುಗುಡ್ಡೆ (ಚಿಬ್ಬಲ ಗುಡ್ಡೆ ಎಂದು ಕೂಡ ಹೆಸರಿದೆ) ಎಂಬಲ್ಲಿ ತುಂಗಾ ನದಿಯಲ್ಲಿ ತಾನು ಮೀಯುತ್ತಿದ್ದಾಗ ಆಕಾಶದಲ್ಲಿ ಕಂಡ ಸುಂದರ ದೃಶ್ಯವನ್ನು. ಬೆಳ್ಳಕ್ಕಿಗಳ ಗುಂಪೊಂದು ಇಂಗ್ಲಿಷ್ ಅಕ್ಷರದ ವಿನ್ಯಾಸದಲ್ಲಿ ಹಾರುತ್ತ ಹೋದಾಗ ಕಣ್ಣಿಗೆ ಕಾಣಿಸಿದ ಭವ್ಯ ನೋಟ ಅದು. ಆ ಪಕ್ಷಿಗಳನ್ನು ನೋಡಿ ತನ್ನೊಳಗಿನ ಕವಿ ರಸವಶನಾದನೆಂದು ಕುವೆಂಪು ಬರೆಯುತ್ತಾರೆ.

‘ನಿರ್ಜನ ದೇಶದ ನೀರವ ಕಾಲಕೆ ಖಗರವ ಪುಲಕಂ ತೋರಿತ್ತು…’ ಎಂದು ತನಗಾದ ಪುಳಕವನ್ನು  ಹೇಳಿಕೊಳ್ಳುತ್ತಾರೆ. ‘ದೃಶ್ಯ ದಿಗಂತದಿನೊಮ್ಮೆಯೆ ಹೊಮ್ಮಿ ಗಿರಿವನ ಪಟದಾಕಾಶದಲಿ| ತೇಲುತ ಬರಲ್ಕೆ ಬಲಾಕಪಂಕ್ತಿ ಲೇಖನ ರೇಖಾವಿನ್ಯಾಸದಲಿ, ಅವಾಙ್ಮಯ ಛಂದಃಪ್ರಾಸದಲಿ…’ ಎಂದು ಆ ಅನೂಹ್ಯ ಅನುಭವ ರೋಮಾಂಚನವನ್ನು ಆಕಾಶದೆತ್ತರಕ್ಕೆ ಏರಿಸುತ್ತಾರೆ.

‘ಚಿರಚೇತನ ತಾನಿಹೆನೆಂಬಂದದಿ ಬೆಳ್ಳಕ್ಕಿಯ ಹಂತಿಯ ಆ ನೆವದಿ…’ ಅದು ಸಾಕ್ಷಾತ್ ದೇವರದೇ ರುಜು ಎಂದು ಕುವೆಂಪು ಪ್ರತಿಪಾದನೆ. ಆಕಾಶದಲ್ಲಿ ಪಕ್ಷಿಗಳ ಹಾರಾಟ ವಿನ್ಯಾಸವನ್ನು ಹೂಮಾಲೆಗೆ ಹೋಲಿಸಿ ಆದಿಕವಿ ವಾಲ್ಮೀಕಿ ಮಹರ್ಷಿ ಬರೆದ ಒಂದು ಚಂದದ ಶ್ಲೋಕವೂ ಇದೆ, ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಬರುತ್ತದೆ: ‘ವಿಪಕ್ವಶಾಲಿಪ್ರಸವಾನಿ ಭುಕ್ತ್ವಾ ಪ್ರಹರ್ಷಿತಾ ಸಾರಸಚಾರುಪಂಕ್ತಿಃ| ನಭಃ ಸಮಾಕ್ರಾಮತಿ ಶೀಘ್ರವೇಗಾ ವಾತಾವಧೂತಾ ಗ್ರಥಿತೇವಮಾಲಾ’.

ಇದರ ಅರ್ಥ ‘ಬತ್ತದ ತೆನೆಯ ರಸವನ್ನು ಹೀರಿ ಹಸಿವೆಯನ್ನು ನೀಗಿಸಿಕೊಂಡ ಸುಂದರವಾದ ಸಾರಸ ಪಕ್ಷಿಗಳು ಆಕಾಶಮಾರ್ಗ ದಲ್ಲಿ ವೇಗವಾಗಿ ಹಾರುತ್ತಿವೆ. ಚಂದದ ಹೂವುಗಳನ್ನು ದಾರದಲ್ಲಿ ಪೋಣಿಸಿ ಮಾಡಿದ ಮಾಲೆಯನ್ನು ಯಾರೋ ಗಾಳಿಯಲ್ಲಿ ತೇಲಿಬಿಟ್ಟಿದ್ದಾರೇನೋ ಅನಿಸುವಂತೆ ಕಾಣುತ್ತಿದೆ ಈ ದೃಶ್ಯ!’ ಎಂದು. ಅಂದಹಾಗೆ ಸಾರಸ ಪಕ್ಷಿಗಳು, ಬಲಾಕಗಳು, ಬೆಳ್ಳಕ್ಕಿಗಳು,
ಕೊಕ್ಕರೆ-ಕ್ರೌಂಚವೇ ಮೊದಲಾದ ಪಕ್ಷಿಗಳ ಗುಂಪು ಇಂಗ್ಲಿಷ್ ಅಕ್ಷರದ ವಿನ್ಯಾಸದಲ್ಲಿ ಹಾರುವುದರಲ್ಲಿ ಏರೋಡೈನಮಿಕ್
ತತ್ತ್ವವೂ ಇದೆ, ತನ್ಮೂಲಕ ಶಕ್ತಿಯ ಉಳಿತಾಯದ ಉದ್ದೇಶವೂ ಇದೆ, ಮಾತ್ರವಲ್ಲ ಆ ಟೀಮ್ ವರ್ಕ್‌ನಲ್ಲಿ ನಾಯಕತ್ವದ ಪಾಳಿ
ಅನುಕ್ರಮವಾಗಿ ಬದಲಾಗುವುದೂ ಇದೆ ಅಂತೆಲ್ಲ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಆದರೆ ಪ್ರಸ್ತುತ ಇಲ್ಲಿ ವಿವರಿಸಹೊರಟಿರುವುದು ಭಾರತದಲ್ಲಿ ಕಾಣುವ ವಿಹಂಗಮ ದೃಶ್ಯವನ್ನಲ್ಲ. ಇದು ಯುರೋಪ್ ಖಂಡ ದಲ್ಲಿ, ಮುಖ್ಯವಾಗಿ ರೋಮ್ ನಗರದಲ್ಲಿ ಈ ಚಳಿಗಾಲದ ಋತುವಿನಲ್ಲಿ ಪ್ರತಿದಿನ ಸಂಜೆ ಕಾಣಸಿಗುವ ಅಮೋಘ ಪಕ್ಷಿ-ಪ್ರದರ್ಶನ. ಇವು ಸ್ಟಾರ್ಲಿಂಗ್ಸ್ ಎಂಬ ಪಕ್ಷಿಗಳು. ಹೆಚ್ಚಾಗಿ ಯುರೋಪ್‌ನಲ್ಲಿ ಕಂಡುಬರುತ್ತವೆ. ಕಂದು ಮಿಶ್ರಿತ ಹಸುರುಬಣ್ಣ, ಮೈಮೇಲೆ ಚಿಕ್ಕಚಿಕ್ಕ ಬಿಳಿ ಚುಕ್ಕಿಗಳು. ಭಾರತದಲ್ಲಿ ನಮಗೆ ಪರಿಚಿತ ಮೈನಾ ಹಕ್ಕಿಗಳ ಯುರೋಪಿಯನ್ ಕಸಿನ್ಸ್ ಎನ್ನಬಹುದು.

ಚಳಿಗಾಲದಲ್ಲಿ ಇವು ಯುರೋಪ್‌ನ ಉತ್ತರ ಭಾಗಗಳಿಂದ- ಜರ್ಮನಿ, ಹಂಗೇರಿ, ಮತ್ತು ದೂರದ ರಷ್ಯಾದಿಂದಲೂ- ದಕ್ಷಿಣದಲ್ಲಿ ಬೆಚ್ಚಗಿರುವ ಪ್ರದೇಶಗಳಿಗೆ, ಮುಖ್ಯವಾಗಿ ಇಟಲಿ ದೇಶಕ್ಕೆ, ಅದರಲ್ಲೂ ರಾಜಧಾನಿ ರೋಮ್ ನಗರಕ್ಕೆ ವಲಸೆ ಹೋಗುತ್ತವೆ. ಬಹುಶಃ All roads lead to Rome ಇಂಗ್ಲಿಷ್‌ನ ನುಡಿಗಟ್ಟು ಇವುಗಳಿಗೂ ಗೊತ್ತಿದೆ! ಸುಮಾರು ನವೆಂಬರ್‌ನಿಂದ ಫೆಬ್ರವರಿ ಕೊನೆಯವರೆಗೆ ರೋಮ್‌ನಲ್ಲಿ ಪ್ರತಿದಿನ ಸೂರ್ಯಾಸ್ತಕ್ಕೆ ಸ್ವಲ್ಪ ಮೊದಲು ಆಕಾಶದಲ್ಲಿ ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತವೆ. ಅಂತಹ ಗುಂಪು ಸಂಯೋಜನೆಗೆ ಇಂಗ್ಲಿಷ್‌ನಲ್ಲಿ Murmuration ಎನ್ನುತಾರೆ.

ಹತ್ತಾರು-ಐವತ್ತು-ನೂರು ಸಂಖ್ಯೆಯಲ್ಲಲ್ಲ, ಒಂದೊಂದು ಗುಂಪಿನಲ್ಲೂ ಸಾವಿರಗಟ್ಟಲೆ, ಕೆಲವೊಮ್ಮೆ ಲಕ್ಷಕ್ಕೂ ಮೀರಿ ಹಕ್ಕಿಗಳು! ಆಕಾಶದಲ್ಲಿ ಇವುಗಳ ಸಮೂಹನೃತ್ಯ, ರೋಮ್ ನಗರದ ನಿವಾಸಿಗಳಿಗೆ ಮತ್ತು ಪ್ರವಾಸಿಗಳಿಗೆ ನಿತ್ಯದ ಮನೋರಂಜನೆ. ಭೂಮಿಯ ಮೇಲೆ ನಿಂತುನೋಡುವವರಿಗೆ ಆಗಸದಲ್ಲಿ ಮೂಡುವ ಕ್ಷಣಿಕ ಆಕಾರಗಳು ಪ್ರಕೃತಿಯೇ ಪೈಂಟ್‌ಬ್ರಷ್ ಹಿಡಿದು ಕೊಂಡು ಏನನ್ನೋ ಚಿತ್ರಿಸುತ್ತಿದೆಯೇನೋ ಎಂಬಂತೆ ಕಾಣುತ್ತದಂತೆ. ಕೆಲವೊಮ್ಮೆಯಂತೂ ಸ್ಟಾರ್ಲಿಂಗ್ಸ್ ಗುಂಪು ಸೂರ್ಯನಿಗೇ ಅಡ್ಡಬಂದು ತಾತ್ಕಾಲಿಕವಾಗಿ ಕತ್ತಲೆಯಾಗುವುದೂ ಇದೆಯಂತೆ!

ಕುರುಕ್ಷೇತ್ರ ಯುದ್ಧದಲ್ಲಿ ಅವೇನಾದರೂ ಹಾಗೆ ಮಾಡಿದ್ದರೆ ಅರ್ಜುನನಿಂದ ಜಯದ್ರಥನ ವಧೆ ಅನುವಾಗುವಂತೆ ಕೃಷ್ಣನು ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡ ಹಿಡಿಯಬೇಕಾಗುತ್ತಿರಲಿಲ್ಲ. ಸ್ಟಾರ್ಲಿಂಗ್ಸ್ ಅಷ್ಟು ದೊಡ್ಡ ಗುಂಪು ಕಟ್ಟಿಕೊಂಡು ಏಕೆ
ಹಾರುತ್ತವೆ? ಮತ್ತು ಆ ರೀತಿ ಸಮೂಹನೃತ್ಯ ಏಕೆ ಮಾಡುತ್ತವೆ? ಮೊದಲನೆಯದಾಗಿ ಅವು ಸಂಘಜೀವಿಗಳು. ವೈರಿಗಳ ದಾಳಿ ಯಿಂದ ರಕ್ಷಿಸಿಕೊಳ್ಳಲು ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಂಬುವ ಜೀವಿಗಳು.

ಆದ್ದರಿಂದ ಒಟ್ಟೊಟ್ಟಿಗೇ ಇರುತ್ತವೆ. ಇನ್ನು ಅವುಗಳ ಸಮೂಹನೃತ್ಯದ ಬಗ್ಗೆ ಇತ್ತೀಚಿನವರೆಗೂ ಪಕ್ಷಿತಜ್ಞರು ಅಂದುಕೊಂಡಿದ್ದು ಅವುಗಳು ಒಂಥರದಲ್ಲಿ ಟೆಲಿಪತಿಕ್- ಒಬ್ಬರ ಆಲೋಚನೆಯನ್ನು ಇನ್ನೊಬ್ಬರಿಗೆ ಸಂವಹಿಸುವ ಮತ್ತು ತಿಳಿದುಕೊಳ್ಳುವ ಸಾಮರ್ಥ್ಯವುಳ್ಳವು- ಎಂದು. ಆದರೆ ಆಧುನಿಕ ಸಂಶೋಧನೆಗಳಿಂದ ತಿಳಿದುಬಂದಿರುವುದೇನೆಂದರೆ ಸ್ಟಾರ್ಲಿಂಗ್ಸ್ ಆ ರೀತಿ ವಿಶೇಷ ಶಕ್ತಿಯನ್ನೇನೂ ಹೊಂದಿಲ್ಲ, ಮತ್ತು ಪರಾವರ್ತಿತ ಪ್ರತಿಕ್ರಿಯೆಯಾಗಿಯಷ್ಟೇ ಅವುಗಳ ಚಲನೆ ಇರುವುದು. ಆರೀತಿ ಪ್ರತಿಕ್ರಿಯೆ ತೋರುವ ವೇಗ ಅದ್ಭುತವಾದದ್ದು.

ಮೈಕ್ರೊಸೆಕೆಂಡುಗಳೊಳಗೆ ಸ್ಪಂದಿಸಿ ಅವು ತಮ್ಮ ದಿಕ್ಕನ್ನು ಬದಲಾಯಿಸಬಲ್ಲವು. ಮೂಲತಃ ಅವು ಗುಂಪಾಗಿ ಹಾರುವಾಗ ಭೂಪ್ರದೇಶಕ್ಕೆ ಸಮಾಂತರವಾಗಿ ಒಂದು ಚಪ್ಪಟೆ ದೋಸೆಯ ಆಕಾರದಲ್ಲಿ ಗುಂಪು ಕಟ್ಟಿಕೊಂಡು ಹಾರುತ್ತವೆ. ಅಂದರೆ ಒಂದು ಹಕ್ಕಿ ನಾಯಕಸ್ಥಾನ ವಹಿಸಿಕೊಳ್ಳುವುದು ಉಳಿದವು ಆ ನಾಯಕನನ್ನು ಹಿಂಬಾಲಿಸುವುದು ಅಂತೆಲ್ಲ ಏನೂ ಇಲ್ಲ. ಸಬ್-ಕಾ-ಸಾಥ್ ಸಬ್ -ಕಾ-ಉಡಾನ್ ಅಷ್ಟೇ. ಪರಾಪರ್ತಿತ ಪ್ರತಿಕ್ರಿಯೆಯಿಂದಾಗಿ ಆ ದೋಸೆಯಾಕಾರದಲ್ಲಿ ಯಾವೊಂದು ಹಕ್ಕಿ ವಿಚಲಿತ ವಾದರೂ ತತ್ ಕ್ಷಣ ಅದರ ಸುತ್ತಲಿನ ಆರೇಳು ಹಕ್ಕಿಗಳು ಅದೇ ದಿಕ್ಕಿಗೆ ವಿಚಲಿತವಾಗುತ್ತವೆ. ಅವುಗಳ ಪಥ ಬದಲಾವಣೆ ಗಮನಿ ಸಿದ ಸುತ್ತಲಿನ ಆರೇಳು ಹಕ್ಕಿಗಳು… ಹೀಗೆ ಮಿಕ್ಕೆಲ್ಲವೂ ಅದೇ ದಿಕ್ಕಿಗೆ ಬದಲಾಯಿಸಿಕೊಳ್ಳುವುದರಿಂದ ದೋಸೆ ಭೂ ಪ್ರದೇಶಕ್ಕೆ ಸಮಾಂತರವಾಗಿರದೆ ಕೋನ ಬದಲಾಯಿಸುತ್ತ ಇರುತ್ತದೆ.

ಸ್ಪೋರ್ಟ್ಸ್ ಸ್ಟೇಡಿಯಮ್‌ಗಳಲ್ಲಿ ಆಟ ನೋಡುವ ಉನ್ಮಾದದಲ್ಲಿ ಪ್ರೇಕ್ಷಕರು ‘ಮೆಕ್ಸಿಕನ್ ಅಲೆ’ ಎಬ್ಬಿಸುತ್ತಾರಲ್ಲ ಆ ರೀತಿಯಲ್ಲಿ ಸಾಗುತ್ತದೆ ಸ್ಟಾರ್ಲಿಂಗ್ಸ್ ಗುಂಪಿನ ಚಲನೆ. ಸಹಜವಾಗಿಯೇ ದೋಸೆ ಬಳುಕಿದಂತೆ ಕಾಣುತ್ತದೆ. ವಿವರಿಸಲಿಕ್ಕೆ ಒಳ್ಳೆಯ ಹೋಲಿಕೆ ಯೆಂದರೆ ‘ರುಮಾಲಿ ರೋಟಿ’ ಮಾಡುವುದನ್ನು ನೀವು ನೋಡಿದ್ದೀರಾದರೆ ಆ ರೋಟಿ ವರ್ತುಲಾಕಾರದಲ್ಲಿದ್ದೂ ಮೂರು ಆಯಾಮಗಳಲ್ಲಿ ಹೇಗೆ ವಿಧವಿಧ ವಿನ್ಯಾಸ ಪಡೆಯುತ್ತದೆಯೋ ಹಾಗೆಯೇ ಈ ಸ್ಟಾರ್ಲಿಂಗ್ಸ್ ಮರ್ಮರೇಷನ್ ಸಹ. ನೆಲದ ಮೇಲೆ ನಿಂತು ನೋಡುವವರಿಗೆ ಅದ್ಭುತ ಎಕ್ರೊಬಾಟಿಕ್ಸ್‌ನಂತೆ, ಕ್ಷಣಕ್ಷಣಕ್ಕೂ ವಿನ್ಯಾಸ ಬದಲಾಯಿಸುವ ಕೆಲೈಡೊಸ್ಕೋಪ್‌ನಂತೆ ಕಾಣುತ್ತದೆ.

ಮರ್ಮರೇಷನ್‌ನ ಉದ್ದೇಶಗಳು ಇನ್ನೂ ಇವೆ. ದೂರದಿಂದ ಬಂದು ತಡವಾಗಿ ಗುಂಪನ್ನು ಸೇರಿಕೊಳ್ಳುವ ಹಕ್ಕಿಗಳಿಗೆ ಸುಲಭ
ದಲ್ಲೇ ಗೊತ್ತಾಗಬೇಕೆಂಬುದು ಒಂದು ಉದ್ದೇಶವಾದರೆ, ಇಂತಹ ದೈತ್ಯಾಕಾರವನ್ನು ನೋಡಿ ವೈರಿಗಳೂ ಹಿಂದೇಟು ಹಾಕಲಿ
ಎಂಬುದು ಇನ್ನೊಂದು ಉದ್ದೇಶ. ಗಂಟೆಗೆ 200 ಮೈಲುಗಳಷ್ಟು ವೇಗದಿಂದ ಹಾರಬಲ್ಲ ನಿರ್ಭೀತ ಗಿಡುಗವು ಸ್ಟಾರ್ಲಿಂಗ್‌ನಂಥ
ಪುಟ್ಟ ಪಕ್ಷಿಯನ್ನು ಸುಲಭವಾಗಿ ಕಬಳಿಸಬಲ್ಲದು- ಅದು ಒಬ್ಬಂಟಿಯಾಗಿದ್ದರೆ ಮಾತ್ರ. ಆದರೆ ಸ್ಟಾರ್ಲಿಂಗ್ಸ್ ಎಲ್ಲವೂ ಗುಂಪಿ ನಲ್ಲೇ ಹಾರುವುದರಿಂದ ಗಿಡುಗ ಅವುಗಳ ಕೋಟೆಯನ್ನು ಭೇದಿಸಲಿಕ್ಕೆ ಹೋಗುವುದಿಲ್ಲ.

ಹಾಗಂತ ಗಿಡುಗವೂ ಆಸೆ ಬಿಟ್ಟೇಬಿಡುತ್ತದೆಂದೇನಲ್ಲ. ರೋಮ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗಿಡುಗಗಳೂ ಹೊಂಚುಹಾಕು ತ್ತಿರುತ್ತವೆ, ಕೆಲವಂತೂ ಸ್ಟಾರ್ಲಿಂಗ್ಸ್‌ನಂತೆಯೇ ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದಂಥವೂ ಇವೆಯಂತೆ. ಸ್ಟಾರ್ಲಿಂಗ್ಸ್ ಮರ್ಮರೇಷನ್ ಕಾಣಿಸಿಕೊಂಡಲ್ಲಿ ಅಕ್ಕಪಕ್ಕದಲ್ಲೆಲ್ಲೋ ಗಿಡುಗ ಇದೆಯೆಂದೇ ಅರ್ಥ. ಸಂಖ್ಯಾಬಾಹುಳ್ಯದಿಂದಾಗಿ ಸ್ಟಾರ್ಲಿಂಗ್ಸ್ ಬಚಾವಾಗುತ್ತವೆ ಅಷ್ಟೇ. ಸರಿ, ಸಂಜೆ ಹೊತ್ತು ಸೂರ್ಯಾಸ್ತದ ಆಸುಪಾಸಿನಲ್ಲಿ (ಗೋಧೂಳಿ ಮೂಹೂರ್ತದಲ್ಲಿ) ಸಮೂಹನೃತ್ಯ ಆದ ಬಳಿಕ ಸ್ಟಾರ್ಲಿಂಗ್ಸ್ ಎಲ್ಲಿಗೆ ಹೋಗುತ್ತವೆ? ರೋಮ್ ನಗರದ ದೊಡ್ಡ ದೊಡ್ಡ ಕಟ್ಟಡಗಳ ಮೇಲೆ, ಅಲ್ಲೇ ಪಕ್ಕದ ಮರಗಳ ಮೇಲೆ, ವಿದ್ಯುತ್ ಕಂಬ ಮತ್ತು ತಂತಿಗಳ ಮೇಲೆ ಕುಳಿತುಕೊಂಡು ವಿಶ್ರಮಿಸುತ್ತವೆ.

ಆಗಲೂ ಹಾಗೆಯೇ, ಗುಂಪು ಎಲ್ಲೆಂದರಲ್ಲಿ ಚದುರಿಕೊಂಡಿರುವುದಿಲ್ಲ; ಎಲ್ಲ ಹಕ್ಕಿಗಳೂ ಒಂದಕ್ಕೊಂದು ಕಣ್ಣಿಗೆ ಕಾಣುವಷ್ಟು ಆಸುಪಾಸಿನಲ್ಲೇ ಇರುತ್ತವೆ. ಅವು ರೋಮ್ ನಗರವನ್ನು ಆಯ್ದುಕೊಳ್ಳುವುದೇ ನಗರಪ್ರದೇಶದಲ್ಲಾದರೆ ಸಂಚಾರದಟ್ಟಣೆ,
ಕಾಂಕ್ರೀಟ್ ರಸ್ತೆಗಳು, ಕಟ್ಟಡಗಳು, ವಿದ್ಯುದ್ದೀಪಗಳು ಇತ್ಯಾದಿಯಿಂದಾಗಿ ತಾಪಮಾನ ಹೆಚ್ಚಿರುತ್ತದೆ, ಅರಣ್ಯಪ್ರದೇಶಕ್ಕಿಂತ ಹೆಚ್ಚು ಬೆಚ್ಚಗೆ ಇರಲಿಕ್ಕಾಗುತ್ತದೆಂದು.

ಆದರೆ ಆಹಾರಕ್ಕಾಗಿ ಪ್ರತಿದಿನವೂ ನಗರದಿಂದ ಹೊರವಲಯಕ್ಕೇ ಹೋಗಬೇಕು. ಅಲ್ಲಿ ಧಾನ್ಯ ಬೆಳೆಯುವ ಗದ್ದೆಗಳಲ್ಲಿ ಆಹಾರ ಸಿಗುತ್ತದೆ. ಆಲಿವ್ಸ್ ಅಂದರೆ ಅವುಗಳಿಗೆ ಪಂಚಪ್ರಾಣ. ಆಲಿವ್ಸ್ ಬೆಳೆಯುವ ಗದ್ದೆಗಳತ್ತ ಹಾರಿಕೊಂಡು ಹೋಗಿ ಹೊಟ್ಟೆತುಂಬ ಭಕ್ಷಿಸುತ್ತವೆ. ದಿನವಿಡೀ ಹಾರಾಟದ ದಣಿವು ಮತ್ತು ಪುಷ್ಕಳ ಭೋಜನದಿಂದಾಗಿ ರಾತ್ರಿ ವಿಶ್ರಾಂತಿ ಬೇಕು ತಾನೆ? ಅವು ಸುಮ್ಮನೆ ನಿದ್ದೆಮಾಡಿಕೊಂಡಿದ್ದರೆ ಸಮಸ್ಯೆಯಿರುತ್ತಿರಲಿಲ್ಲ.

ಅಲ್ಲದೇ ಸಂಜೆಹೊತ್ತು ಪುಕ್ಕಟೆಯಾಗಿ ಕೊಡುವ ಸಮೂಹನೃತ್ಯ ಪ್ರದರ್ಶನದ ಮನೋರಂಜನೆಯಿಂದ ರೋಮ್ ಪ್ರಜೆಗಳು ಅವುಗಳ ಬಗ್ಗೆ ಸಂಪ್ರೀತರಾಗೇ ಇರುತ್ತಿದ್ದರು. ಆದರೆ ಉಚಿತವಾಗಿ ಏನು ಸಿಕ್ಕಿದರೂ ಅದಕ್ಕೆ ಬೆಲೆ ತೆರಲೇಬೇಕು. ಸ್ಟಾರ್ಲಿಂಗ್ಸ್ ವಿಚಾರದಲ್ಲಿ ರೋಮನ್ನರಿಗೆ ಅದೇ ಆಗಿರೋದು. ಸ್ಟಾರ್ಲಿಂಗ್ಸ್ ಅಂದರೆ ನಾನ್‌ಸೆನ್ಸ್ ಅಂತನ್ನಿಸೋದು ರಾತ್ರಿಹೊತ್ತು ಅವು
ರೋಮ್ ನಗರದ ಮೇಲೆಲ್ಲ ಹಿಕ್ಕೆಯ ಸುರಿಮಳೆ ಸುರಿಸುವುದರಿಂದ! ಮತ್ತೆ, ದಿನವಿಡೀ ಹೊಟ್ಟೆತುಂಬ ಮುಕ್ಕಿದ್ದೆಲ್ಲ ರಾತ್ರಿ ಹೊರ ಕಡೆ ಹೋಗಲೇಬೇಕಲ್ಲ? ಆ ಹಿಕ್ಕೆಯಾದರೋ ತೀರ ನುಣುಪು. ಮುಖ್ಯವಾಗಿ ಆಲಿವ್ಸ್ ಭಕ್ಷಣದಿಂದಾಗಿ ಅದರಲ್ಲಿ ಸಿಕ್ಕಾಪಟ್ಟೆ ಎಣ್ಣೆಯಂಶ.

ಎಲ್ಲಿಯವರೆಗೆಂದರೆ ರೋಮ್ ನಗರದಲ್ಲಿ ರಾತ್ರಿ ಹೊತ್ತು ರಸ್ತೆ ಮೇಲೆ ಕಾರು-ಮೋಟರ್‌ಬೈಕುಗಳು ಸ್ಕಿಡ್ ಆಗುತ್ತವೆ. ರಸ್ತೆ ಮೇಲೆ
ಅಂತಲ್ಲ, ಪಾರ್ಕ್ ಮಾಡಿದ ಕಾರುಗಳ ಮೇಲೆ, ಬಸ್‌ಸ್ಟಾಪ್‌ಗಳ ಮೇಲೆ, ಪಾರ್ಕಿನ ಬೆಂಚುಗಳ ಮೇಲೆ, ಅಂಗಡಿಮುಂಗಟ್ಟುಗಳ
ಟೆಂಪರರಿ ಚಾವಣಿಯ ಮೇಲೆ, ಕೊನೆಗೆ ಶ್ಮಶಾನದಲ್ಲಿ ಗೋರಿ ಕಲ್ಲುಗಳ ಮೇಲೂ ಸ್ಟಾರ್ಲಿಂಗ್ಸ್ ವಿಸರ್ಜನದ ದಪ್ಪ ಕೋಟಿಂಗ್!
ನಮ್ಮ ವರಕವಿ ಬೇಂದ್ರೆಯವರೇನಾದರೂ ಈ ದೃಶ್ಯಾವಳಿಯನ್ನು ನೋಡಿದ್ದಿದ್ದರೆ ‘ಹಕ್ಕಿ ಹಾರುತಿದೆ ನೋಡಿದಿರಾ…’ ಕವಿತೆಗೆ ‘ಹಿಕ್ಕೆ ಬೀಳುತಿದೆ ನೋಡಿದಿರಾ…’ ಅಂತ ಇನ್ನೊಂದು ಅಣಕವಾಡನ್ನೂ ತಾವೇ ಬರೆದಿರುತ್ತಿದ್ದರು!

ರೋಮ್ ನಗರಾಡಳಿತಕ್ಕೆ ಈ ಸ್ಟಾರ್ಲಿಂಗ್ಸ್ ಮಲಧಾರೆ ಒಂದು ದೊಡ್ಡ ತಲೆನೋವು. ಹಕ್ಕಿಗಳನ್ನು ದೂರ ಓಡಿಸುವ ಪ್ರಯತ್ನ
ಮಾಡಿದಷ್ಟೂ ಅವು ಕೂಡ ರೋಮ್ ನಗರದ ಮೇಲಿನ ತಮ್ಮ ಹಕ್ಕಿಗಾಗಿ ಹೋರಾಡುತ್ತವೆ. ನೂರಿನ್ನೂರು ಹಕ್ಕಿಗಳೆಂದಾದರೆ
ಹೇಗೋ ಓಡಿಸಬಹುದು; ಲಕ್ಷಲಕ್ಷ ಸಂಖ್ಯೆಯಲ್ಲಿ ಬಂದು ಕುಳಿತವನ್ನು ಓಡಿಸುವುದೆಂತು? ರೋಮ್ ನಗರಾಡಳಿತವು ಇತ್ತೀಚಿನ
ಹತ್ತಿಪ್ಪತ್ತು ವರ್ಷಗಳಲ್ಲಿ ಇದಕ್ಕೊಂದು ಉಪಾಯ ಯೋಜಿಸಿದೆ.

ಸ್ಟಾರ್ಲಿಂಗ್ ಹಕ್ಕಿಯದೇ ಆರ್ತನಾದದ ಧ್ವನಿಮುದ್ರಣ ಮಾಡಿರುವುದನ್ನು ನಗರದ ಬೀದಿಗಳಲ್ಲೆಲ್ಲ ಧ್ವನಿವರ್ಧಕದಲ್ಲಿ ಪ್ಲೇ ಮಾಡಿಕೊಂಡು ಹೋಗುವುದು. ಧ್ವನಿವರ್ಧಕದಿಂದ ಹೊರಟ ಸದ್ದು ನಗರದ ಕಟ್ಟಡಗಳಿಗೆ ಅಪ್ಪಳಿಸಿ ಪ್ರತಿಧ್ವನಿಗೊಂಡು ಮತ್ತಷ್ಟು ಕರಾಳತೆಯನ್ನುಂಟುಮಾಡುತ್ತದೆ. ಅದಕ್ಕೋಸ್ಕರವೇ ನೇಮಿಸಲ್ಪಟ್ಟ ಪೌರಕಾರ್ಮಿಕರು ರಾತ್ರಿಯಾಗುತ್ತಿದ್ದಂತೆ ಬುಲ್-ಹಾರ್ನ್ ಧ್ವನಿ ವರ್ಧಕ ಹಿಡಿದುಕೊಂಡು, ಹಿಕ್ಕೆಯಿಂದ ರಕ್ಷಿಸಿಕೊಳ್ಳಲು ‘ಸ್ಪೇಸ್ ಸೂಟ್’ನಂಥ ರಕ್ಷಣಾಕವಚ ಧರಿಸಿಕೊಂಡು, ಬೀದಿಬೀದಿಗಳಲ್ಲಿ ಸಂಚರಿಸುತ್ತಾರೆ. ಆ ಕರ್ಕಶ ಧ್ವನಿ ಕೇಳಿದ ಸ್ಟಾರ್ಲಿಂಗ್ಸ್ ತಮ್ಮ ಬಳಗದ ಸದಸ್ಯನಾರೋ ಅಪಾಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ ಇಲ್ಲಿಂದ ಜಾಗ ಖಾಲಿ ಮಾಡುವುದೊಳ್ಳೆಯದು ಎಂದುಕೊಂಡು ದೂರಕ್ಕೆ ಹಾರಿಹೋಗುತ್ತವೆ.

ಇದರಿಂದ ಸ್ವಲ್ಪಮಟ್ಟಿಗೆ ಸ್ಟಾರ್ಲಿಂಗ್ಸ್ ಹಕ್ಕಿಗಳ ಹಿಕ್ಕೆಯ ಕಾಟ ನಿಯಂತ್ರಿಸುವುದು ಸಾಧ್ಯವಾಗಿದೆಯಂತೆ. ಇದಕ್ಕೆ ಮೊದಲು ಸ್ಟಾರ್ಲಿಂಗ್ಸನ್ನು ಚದುರಿಸಲು ಕಣ್ಣುಗಳಲ್ಲಿ ಉರಿ ಮೂಡಿಸುವ ದ್ರಾವಣವನ್ನು ಗಿಡಮರಗಳ ಮೇಲೆ ಸ್ಪ್ರೇ ಮಾಡುವುದಿತ್ತಂತೆ. ಅದರ ಪರಿಣಾಮ ದೀರ್ಘಕಾಲಿಕ ಅಲ್ಲ, ಏಕೆಂದರೆ ಮೂರುನಾಲ್ಕು ದಿನಗಳೊಳಗೇ ಆ ಕಣ್ಣುರಿ ದ್ರಾವಣಕ್ಕೆ ಹೊಂದಿಕೊಳ್ಳುವ ‘ಎಡಾಪ್ಟೆಬಿಲಿಟಿ’ ಅಥವಾ ಚಾಲಾಕಿತನ ಇದೆ ಸ್ಟಾರ್ಲಿಂಗ್ಸ್‌ಗೆ.

ರೋಮ್ ನಗರ ವ್ಯಾಪ್ತಿಗೆ ಇನ್ನಷ್ಟು ಗಿಡುಗಗಳನ್ನು ತಂದು ಸ್ಟಾರ್ಲಿಂಗ್ಸ್ ಸಂಖ್ಯೆಯನ್ನು ಹದ್ದುಬಸ್ತಿನಲ್ಲಿಡಬಹುದೆಂಬ ಆಲೋ ಚನೆಯೂ ಬಂದಿತ್ತಂತೆ. ಆದರೆ ಒಂದು ಗಿಡುಗ ಒಂದು ದಿನಕ್ಕೆ ಒಂದಕ್ಕಿಂತ ಹೆಚ್ಚು ಹಕ್ಕಿಯನ್ನು ತಿನ್ನುವುದಿಲ್ಲ. ಅಂದಮೇಲೆ ಲಕ್ಷಗಟ್ಟಲೆ ಹಕ್ಕಿಗಳನ್ನು ಮುಗಿಸಲಿಕ್ಕೆ ಎಷ್ಟು ಗಿಡುಗಗಳು ಬೇಕಾದೀತು! ಕೆಲವೆಡೆಗಳಲ್ಲಿ ವಿಷ ಸಿಂಪಡಿಸಿ ಸ್ಟಾರ್ಲಿಂಗ್ಸನ್ನು ಕೊಲ್ಲುವ ಪ್ರಯತ್ನವನ್ನೂ ಮಾಡಿದ್ದುಂಟು. ಅಲ್ಲೂ ಅವುಗಳ ಸಂಖ್ಯಾಬಾಹುಳ್ಯದ್ದೇ ಸವಾಲು. ನೂರಿನ್ನೂರು ಹಕ್ಕಿಗಳನ್ನಾದರೆ ಕೊಲ್ಲಬಹುದು.

ಸಾವಿರದ ಸಂಖ್ಯೆಯಲ್ಲಿದ್ದಾಗ ಅವು ಸಾವಿರದವಾಗುತ್ತವೆ. ಅಲ್ಲದೇ ಒಟ್ಟಾರೆಯಾಗಿಯೂ ಅವುಗಳ ಜೀವಿತಾವಧಿಯೇನೂ ವರ್ಷಗಟ್ಟಲೆಯದಲ್ಲ. ನೈಸರ್ಗಿಕವಾಗಿ ಸಾಯುತ್ತಲೇ ಇರುತ್ತವೆ ಹುಟ್ಟುತ್ತಲೇ ಇರುತ್ತವೆ. ಆದರೆ ಹೀಗೆ ಅವುಗಳನ್ನು ದೈಹಿಕವಾಗಿ ಹಿಂಸಿಸುವುದು ಅಥವಾ ಕೊಲ್ಲುವುದಕ್ಕಿಂತ ಹೆದರಿಸಿ ಓಡಿಸುವುದು ಒಳ್ಳೆಯದೆಂದು ಮನಗಂಡು ರೋಮ್‌ನ ಪರಿಸರಸಂರಕ್ಷಣೆ ಇಲಾಖೆಯಲ್ಲಿ ಕೆಲಸ ಮಾಡುವ ಬ್ರೂನೋ ಸಿಗ್ನಿನಿ ಎಂಬಾತ ಈ ‘ಆರ್ತನಾದ ಧ್ವನಿಮುದ್ರಣ ಪ್ರಸಾರ’ದ ಯೋಜನೆ ರೂಪಿಸಿ ದನು.

ಅದಕ್ಕಾಗಿ, ಗಾಯಗೊಂಡ ಸ್ಟಾರ್ಲಿಂಗ್ ಒಂದನ್ನು ರಿಹ್ಯಾಬಿಲಿಟೇಷನ್ ಸೆಂಟರ್‌ನಿಂದ ತನ್ನ ಆಫೀಸಿಗೆ ತಂದು, ಅದರ ಕೂಗನ್ನು ಧ್ವನಿಮುದ್ರಣ ಮಾಡಿಕೊಂಡನು. ಟ್ರಯಲ್ ಏಂಡ್ ಎರರ್ ಎಂಬಂತೆ ಸತತ ಪ್ರಯತ್ನಗಳ ಬಳಿಕ ಆರ್ತನಾದದ ಯಾವ ಮೊರೆ ಹೆಚ್ಚು ಪರಿಣಾಮಕಾರಿ ಎಂದು ಕಂಡುಕೊಂಡನು. ಈಗ ಪೌರಕಾರ್ಮಿಕರು ಆರ್ತನಾದದ ಆ ಭಾಗವನ್ನೇ ಪ್ಲೇ ಮಾಡುತ್ತಾರಂತೆ. ಒಂದೇ ಜಾಗದಲ್ಲಿ ಎರಡು ಮೂರು ದಿನ ಒಂದೇ ಸಮನೆ ಆರ್ತನಾದ ಕೇಳಿಬಂದಾಗ ನಿಜವಾಗಿಯೂ ಏನೋ ಅಪಾಯವಿದೆ ಯೆಂದು ನಂಬಿ ಸ್ಟಾರ್ಲಿಂಗ್ಸ್ ಅಲ್ಲಿಂದ ಜಾಗ ಖಾಲಿಮಾಡುತ್ತವಂತೆ.

ಪ್ರತಿ ವರ್ಷ ನವೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ರೋಮ್‌ನಲ್ಲಿ ಮತ್ತು ಯುರೋಪ್‌ನ ದಕ್ಷಿಣದಲ್ಲಿರುವ ಇತರ ಪ್ರದೇಶ ಗಳಲ್ಲಿ ಸ್ಟಾರ್ಲಿಂಗ್ಸ್ ಮರ್ಮರೇಷನ್‌ಗಳ ಸುಂದರ ಚಿತ್ರಗಳನ್ನು ಅಂತಾರಾಷ್ಟ್ರೀಯ ಪತ್ರಿಕೆಗಳು ಪ್ರಕಟಿಸುತ್ತಿರುತ್ತವೆ.

2018 ರಲ್ಲಿ ಜರ್ಮನಿಯ ಡೇನಿಯಲ್ ಬೈಬರ್ ಎಂಬ ಫೋಟೊಗ್ರಾಫರನು ಕ್ಲಿಕ್ಕಿಸಿದ ಮರ್ಮರೇಷನ್‌ನ ಆಕಾರವೇ ಒಂದು
ಹಕ್ಕಿಯಂತೆ ಕಾಣುತ್ತಿತ್ತು! ಕಳೆದ ಭಾನುವಾರ ಇಲ್ಲಿಯ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು stunning spectacle and a huge mess ಎಂಬ ತಲೆಬರಹದೊಂದಿಗೆ ಸ್ಟಾರ್ಲಿಂಗ್ಸ್ ನುಡಿಚಿತ್ರವನ್ನು ಮುಖಪುಟದ ಲೀಡ್ ಸ್ಟೋರಿ ಆಗಿ, ಮಧ್ಯದ ಎರಡು ಪುಟಗಳ ತುಂಬ ಆಕರ್ಷಕ ಚಿತ್ರಗಳೊಂದಿಗೆ ಪ್ರಕಟಿಸಿತ್ತು.

ವೆಬ್ ಆವೃತ್ತಿಯಲ್ಲಂತೂ ವಿಡಿಯೊಗಳ ಸಹಿತ ಭರಪೂರ ಮಾಹಿತಿ ತುಂಬಿಸಿತ್ತು. ಕಾಕತಾಳೀಯವಾಗಿ, ಕಳೆದ ವಾರವೇ ಸೋಷಿ ಯಲ್ ಮೀಡಿಯಾದಲ್ಲಿ ಕಮಲ ಹಾಸನ್‌ನದೊಂದು ಫೋಟೊ ವೈರಲ್ ಆಗಿತ್ತು; ಅದರಲ್ಲಿ ಆತನ ಪ್ಯಾಂಟ್ ಶರ್ಟ್ ಮೇಲೆಲ್ಲ ಹಕ್ಕಿಯ ಹಿಕ್ಕೆ ಬಿದ್ದೆದೆಯೇನೋ ಎಂಬಂತೆ ಡಿಸೈನ್ ಇತ್ತು. ಅಥವಾ ಆತನೂ ರೋಮ್‌ಗೆ ಹೋಗಿ Be a roman in Rome ಎಂಬಂತೆ ಮೈಮೇಲೆಲ್ಲ ಸ್ಟಾರ್ಲಿಂಗ್ಸ್ ಹಿಕ್ಕೆ ಉದುರಿಸಿಕೊಂಡನೇನೋ ಎಂದು ಒಮ್ಮೆ ನಾನಂದುಕೊಂಡೆ.

ಒಂದಾನೊಂದು ಕಾಲದಲ್ಲಿ ಅತ್ಯುತ್ತಮ ನಟನಾಗಿದ್ದ, ನನಗೆ ಅತ್ಯಂತ ಫೇವರಿಟ್ ಆಗಿದ್ದ ಕಮಲ್ ಇತ್ತೀಚಿನ ದಿನಗಳಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದರಿಂದ ಅದು ನಿಜವೂ ಇರಬಹುದು!

 
Read E-Paper click here

error: Content is protected !!