Sunday, 10th November 2024

ರಾಯಲ್ ಫ್ಯಾಮಿಲಿಗಳ ರಿಯಲ್ ಮೆಸೇಜ್‌ಗಳು..!

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಸೇಫ್ ಜೋನ್ ಆಚೆಗೆ ಇವರಿಗೆ ಏನೂ ಬೇಕಿಲ್ಲ. ತಮ್ಮನ್ನು, ಈ ದೇಶವನ್ನು ಯಾರು ಆಳಿದರೂ, ಆಳುತ್ತಿದ್ದರೂ ಇವರಿಗೆ ಗೊತ್ತಾಗುವು ದಿಲ್ಲ, ಇವರುಗಳು ಮತವನ್ನೂ ಹಾಕುವುದಿಲ್ಲ, ಮತದಾನ ದಿನದ ರಜೆಯಂದು ಔಟಿಂಗ್ ಎಂದು ಪಿಕ್ನಿಕ್ ಸ್ಪಾಟ್‌ಗೆ ಹೋಗಿ ಉಡಾಯಿಸಿ ಬಿಡುತ್ತಾರೆ.

ವಾಟ್ಸಾಪ್ ಗ್ರೂಪ್‌ಗಳಲ್ಲಿ ಅನೇಕ ವೈವಿಧ್ಯಗಳಿವೆ. ಚಿತ್ರ ವಿಚಿತ್ರ ಹೆಸರಿನ ಗುಂಪುಗಳು ಇವೆ. ಬ್ರಾಡ್‌ಕ್ಯಾಸ್ಟ್ ಎಂಬ ಗುಂಪು, ನಮ್ಮೂರ ವರು ಅಂತ ಒಂದು ಗ್ರೂಪ್, ಓಲ್ಡ್ ಫ್ರೆಂಡ್ಸ್ ಗ್ರೂಪ್, ಹೈಸ್ಕೂಲ್ ಸ್ನೇಹಿತರು, ನಾವು ಬಾಡಿಗೆದಾರರು, ಬಡ್ಡಿ ಮಕ್ಳು, ಪೋಲಿಹೈಕ್ಳು, ಟೈಂಪಾಸ್ ಗ್ರೂಪ್ ಎಂದೆಲ್ಲ ಚಿತ್ರ ವಿಚಿತ್ರ ಗುಂಪುಗಳನ್ನು ಮಾಡಿ ಕೊಂಡು ಸದಾ ಅದರಲ್ಲೆ ಕಾಲ ಕಳೆಯುವವರಿದ್ದಾರೆ. ಬಾರ್ ಮೇಟ್ಸ್, ಡ್ರಿಂಕರ‍್ಸ್, ಚಿಕನ್‌ಚಿಂಟುಗಳು, ಕಟಗರೊಟ್ಟಿ ಗ್ರೂಪ್, ಪಿ.ಪಿ.ಗ್ರೂಪ್ ಅಂತಲೂ ಇದೆ, ಅಂದರೆ ಪತ್ನಿ ಪೀಡಿತರು ಅಂತ ಅರ್ಥ.

ಇನ್ನು ನಮ್ಮ ಸಂಸಾರ, ನಮ್ ಕುಟುಂಬ, ನಮ್ಮ ಪರಿವಾರ ಅಂತೆಲ್ಲ ಗುಂಪುಗಳಿವೆ. ದಶಬಾಧ್ಯರು ಅಂತ ಒಂದು ಗ್ರೂಪ್, ದಶಬಾಧ್ಯರು ಎಂದರೆ ಯಾರಾದರೂ ಸತ್ತರೆ, ಅವರೊಂದಿಗೆ ಬದುಕಿದ್ದಾಗ ಎಷ್ಟೇ ದೂರವಿದ್ದು, ಅವರನ್ನು ತುಚ್ಛವಾಗಿ ಕಂಡಿದ್ದರೂ ಅವರು ಸತ್ತರೆಂದು ಸುದ್ದಿ ಬಂದರೆ ಹತ್ತು ದಿನ ಮೈಲಿಗೆ ಮಾಡುವವರ ಗುಂಪೇ ದಶಬಾಧ್ಯರದು. ಅಂದರೆ ಇವರು ಹತ್ತು ದಿನಕ್ಕೆ ಮಾತ್ರ ಜವಾಬ್ದಾರಿ ಸಂಬಂಧಿಗಳು ಎಂದು ಅರ್ಥ.

ಹೀಗೇ ಸೇಮ್‌ಬ್ಲಡ್ ಎಂಬ ಗುಂಪಿವೆ, ಇನ್ನು ಕೆಲ ಹೈಫೈ ಎಂದು ಅವರೇ ಭಾವಿಸಿ ಕೊಂಡು ಬದುಕುತ್ತಿರುವ ಫ್ಯಾಮಿಲಿ ಪ್‌ಗಳಿವೆ. ಇವರ ಮನೆಗಳಲ್ಲಿ ಡಾಕ್ಟರ್, ಇಂಜಿನೀ ಯರ್, ಕಾಂಟ್ರಾಕ್ಟರ್, ಲಾಯರ್ ಸಂಬಂಧಿಗಳು ಮಾತ್ರ ಈ ಗ್ರೂಪ್‌ನಲ್ಲಿ ಮೆಸೆಜ್‌ಗೆ ಅರ್ಹರು. ಬ್ಯಾಂಕರ‍್ಸ್ ಫ್ಯಾಮಿಲಿ ಗ್ರೂಪ್ ಎಂದು ಇದೆ. ಅಂದರೆ ಇವರು ಬ್ಯಾಂಕ್ ಸ್ಥಾಪನೆ ಮಾಡಿ ಬೆಳೆಸಿ ದೇಶದ ಅನೇಕರಿಗೆ ಉದ್ಯೋಗ ಕೊಟ್ಟವರಲ್ಲ, ಆ ಇಡೀ ಕುಟುಂಬದಲ್ಲಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಕೆಲಸ ಮಾಡುವವರು, ಕೆಲಸ ಮಾಡಿ ರಿಟೈರ‍್ಡ್ ಆದವರು ಅಷ್ಟೆ.

ಹಾಗೆಯೇ ತಮ್ಮದು ರಾಯಲ್ ಫ್ಯಾಮಿಲಿ, ತಮ್ಮ ಮನೆಗೆ ಬಂದಿರುವ ಸೊಸೆಯಂದಿರೂ ರಾಯಲ್ ಫ್ಯಾಮಿಲಿಯ ವರೇ, ತಮ್ಮ ಮಕ್ಕಳನ್ನೂ ರಾಯಲ್ ಫ್ಯಾಮಿಲಿಗಳಿಗೇ ಕೊಟ್ಟಿದ್ದೇವೆ, ಕೊಡುತ್ತೇವೆ ಕೂಡಾ ಎಂದು ಪ್ರತಿಜ್ಞೆ ಮಾಡಿರು ವವರು, ಇವರಿಗೆ ರಾಯಲ್
ಎಂಬುದು ಯಾವಾಗಲೋ ಬ್ರಿಟೀಷರು ಇವರ ಮುತ್ತಜ್ಜರಿಗೆ ಕೊಟ್ಟ ಬಿರುದು. ಇವರಿಗೆ ಯಾರಾದರೂ ತಮ್ಮನ್ನು ಆಳುತ್ತಾ, ತಮಗೆ ಗೌರವ ಕೊಡುತ್ತಾ, ಸರಕಾರಿ ಸೌಲಭ್ಯ ನೀಡುತ್ತಾ, ಇವರು ಬಂದಾಗ ಎದ್ದು ನಿಲ್ಲುತ್ತಾ ನಗು ನಗುತ್ತಾ ಸ್ವಾಗತಿಸಿದರೆ ಸಾಕು. ದೇಶ ಪ್ರೇಮ, ದೇಶಕ್ಕಾಗಿ ಹೋರಾಟ, ಸ್ವದೇಶಿ ಪ್ರೇಮ, ಧರ್ಮ ಸಂಸ್ಕೃತಿಗಳ ರಕ್ಷಣೆ, ಪಾಲನೆ ಇವ್ಯಾವುವೂ ಗೊತ್ತಿಲ್ಲ, ತಾವು ತಮ್ಮ ಊ.. ಮ… ಹೇ….. ದಿನಚರಿಗೆ ಕುಂದು ಬರದಿದ್ದರೆ ಸಾಕು, ಒಂದು ಕೋಣ, ಕತ್ತೆಯನ್ನೂ ಇವರು ಆರಿಸಿ, ಗೆಲ್ಲಿಸಿ ತಮ್ಮನ್ನು ಆಳಲು ಹೇಳು ವಂಥವರು.

ಇಂಥ ರಾಯಲ್ ಫ್ಯಾಮಿಲಿಗಳ ವಾಟ್ಸಾಪ್ ಗ್ರೂಪ್‌ಗಳ ಮೆಸೆಜ್, ಇತ್ಯಾದಿ ನೋಡಬೇಕು. ಅಳು, ನಗು, ರೋಷ, ಆವೇಶ, ಕೋಪ ಉಕ್ಕೇರುತ್ತದೆ. ಇಂಥ ಗುಂಪಿನ ಒಬ್ಬ ವ್ಯಕ್ತಿ ಇದ್ದುದರಲ್ಲಿಯೇ ಸ್ವಲ್ಪ ಹೊತ್ತು ಹೋಗದ್ದಕ್ಕೆ ಹೊಸ ಸಂಪರ್ಕ ಇಟ್ಟುಕೊಂಡು ಆಗಾಗ ನನ್ನ ಕಾರ್ಯಕ್ರಮಗಳಿಗೆ ಬಂದು ನನಗೆ ಪರಿಚಯವಾದವರು, ನನ್ನ ಯೂಟ್ಯೂಬ್‌ನ ವಿಡಿಯೋಗಳನ್ನೂ ಆಗಾಗ ನೋಡುತ್ತಾ ಸ್ಮೈಲಿ, ಥಮ್ಸಪ್, ಚಪ್ಪಾಳೆ ತಟ್ಟುವಿಕೆಯ ಸ್ಟಿಕ್ಕರ್‌ಗಳನ್ನು ಹಾಕುತ್ತಿರುತ್ತಾರೆ.

ಹಾಗೆಯೇ ಹ್ಯಾಪಿ ದಸರಾ, ಹ್ಯಾಪಿ ಹೋಳಿ, ಹ್ಯಾಪಿ ದೀಪಾವಳಿ ಎಂಬೆಲ್ಲಾ ಪಿಕ್ಚರ್ ಮೆಸೆಜ್‌ಗಳನ್ನೂ ಒತ್ತಿ ಕಳಿಸುತ್ತಿದ್ದರು. ಕೊರೋನಾ ಟೈಮಿನಲ್ಲಿ ಒಂದೆರೆಡು ಸಲ “ಈಗ ಪ್ರೋಗ್ರಾಂಗಳಿಲ್ಲ, ಹೇಗೆ ನಡೆಸುತ್ತಿದ್ದೀರಿ?, ಊಟಕ್ಕೆ ತೊಂದರೆ ಇದ್ದರೆ ಒಂದು ದಿನ ನಮ್ಮನೆಗೆ ಊಟಕ್ಕೆ ಬನ್ನಿ ಪಾಪ, ಕಲಾವಿದರ ಕಷ್ಟ ನನಗೆ ನೋಡಲಾಗುವುದಿಲ್ಲ” ಎಂದೆಲ್ಲ ಮೆಸೆಜ್ ಮಾಡಿ, ನನ್ನನ್ನು ಮುಜುಗರಕ್ಕೆ ಈಡು
ಮಾಡಿದ್ದರು.

ಬೇಡ ಬೇಡವೆಂದರೂ ತಮ್ಮ ಕುಟುಂಬದ ರಾಯಲ್ ಗ್ರೂಪ್ ಎಂಬ ವಾಟ್ಸಾಪ್ ಗ್ರೂಪ್‌ಗೆ ನನ್ನನ್ನು ಸೇರಿಸಿಬಿಟ್ಟರು. ಸೇರಿಸಿದ್ದಕ್ಕೆ ಗ್ರೂಪ್‌ನಲ್ಲಿ ಅನೇಕರು ಆಂಗ್ರಿ ಸ್ಮೈಲಿಗಳು, ವ್ಯಾಕ್ ಎಂಬ ವಾಂತಿ ಸ್ಮೈಲಿಗಳು, ಡೌನ್.. ಡೌನ್ ಎಂಬ ಕೆಳಗೆ ಮಾಡಿದ ಹೆಬ್ಬೆಟ್ಟಿನ ಗುರುತು ಹಾಕಿದವರು, ಅಂದವರು ಅನೇಕ ಜನರಿದ್ದರು. ಅನೇಕ ಸದಸ್ಯರು ಹೂ ಇಸ್ ಹಿ?, ವಾಟ್ ಇಸ್ ಹಿ ಎಂದೆಲ್ಲ ಗ್ರೂಪ್‌ನ ಅಡ್ಮಿನ್ ಆಗಿದ್ದ ನನ್ನ ಈ ಹಿರಿಯ ಗೆಳೆಯನನ್ನು ಡ್ಯಾಡ್, ಗ್ರ್ಯಾಂಡ್‌ಪಾ ಎಂದೆಲ್ಲ ಮಕ್ಕಳು, ಮೊಮ್ಮಕ್ಕಳು ಕೇಳಿದ್ದರು.

ಹಿ ಇಸ್ ಮೈ ಫ್ರೆಂಡ್, ಹಿ ಇಸ್ ಟಿ.ವಿ ಕಾಮಿಡಿಯನ್ ಆರ್ಟಿಸ್ಟ್ ಎಂದು ಅವರಿಗೆಲ್ಲ ಪಾಪ, ಈ ಮುದುಕಪ್ಪ ಧೈರ್ಯ ಹೇಳಿದ. ಮುದುಕರ ಹೆಸರು ಗೋಪಾಲರಾವ್ ಎಂದಿಟ್ಟುಕೊಳ್ಳೋಣ. “ದಯವಿಟ್ಟು ನೀವು ಹೋಗುವ ಕಾರ್ಯಕ್ರಮಗಳ ವಿವರ ತಿಳಿಸಿರಿ, ಆಗಾಗ ಫೋಟೊ ಹಾಕುತ್ತೀರಿ, ಜೋಕ್ಸ್ ಇದ್ದರೂ ಗ್ರೂಪ್‌ಗೆ ಕಳಿಸಿ” ಎಂದೆಲ್ಲ ಗೋಪಾಲರಾವ್ ವಿನಂತಿಸಿಕೊಂಡರು.

ಸರಿ ಎಂದು ಆಗಾಗ ಅವರ ರಾಯಲ್ ಗ್ರೂಪ್ಗೆ ಒಂದೆರೆಡು ಮೆಸೇಜ್, ಪಿಕ್ಚರ್ ಮೆಸೇಜ್ ಹಾಕಿದೆ, ಗ್ರೂಪ್‌ನ ನಲ್ವತ್ತಕ್ಕೂ ಹೆಚ್ಚು ಸದಸ್ಯರೂ ಅದರ ಬಗ್ಗೆ ಚಕಾರ ಎತ್ತದೆ, ದಬದಬನೇ ಬೇರೆ ಬೇರೆ ಯಾವುದೋ ವಿಷಯಗಳ ಪಿಕ್ಚರ್ ಮೆಸೇಜ್‌ಗಳನ್ನು ಹಾಕಿ ಗುಡ್ಡೆ ಮಾಡಿ ನನ್ನ ಮೆಸೇಜ್ ಕಾಣದಂತೆ ಮಾಡಿಬಿಟ್ಟರು. ಆದರೂ, ಹಿರಿಯ ಸ್ನೇಹಿತ ಗೋಪಾಲರಾಯರು ನನ್ನ ಸಂದೇಶವನ್ನು ಆ ಗ್ರೂಪ್‌ನಲ್ಲಿ ದುರ್ಬೀನು ಹಾಕಿ ಹುಡುಕಿ, ಚೆನ್ನಾಗಿದೆ ನೀವು ಕಳಿಸಿದ ಸಂದೇಶ, ನಾನು ಎರಡೆರೆಡು ಸಲ ಓದಿದೆ ಎಂದು ನನಗೆ ಉತ್ತರ, ಮೆಚ್ಚುಗೆ ಕಳಿಸಿದರೆಂದರೆ, ಗ್ರೂಪ್‌ನ ಸದಸ್ಯರು ಅದಕ್ಕೆ ಉತ್ತರ, ಮೆಚ್ಚುಗೆ ಹೇಳದೇ, ನನಗೆ ಉತ್ತರಿಸಿದ ತಂದೆಯ ಮೆಚ್ಚುಗಾರಿಕೆಯನ್ನೇ ಪ್ರಶಂಸಿಸಿ ಉತ್ತರ
ಕಳಿಸುತ್ತಿದ್ದರು. ಇಲ್ಲವೇ ಉಗಿಯುತ್ತಿದ್ದರು.

ಉದಾಹರಣೆಗೆ ನಾನೊಂದು ಹಾಸ್ಯ ಪ್ರಸಂಗವನ್ನು ಕಳಿಸಿದರೆ, ಗೋಪಾಲ ರಾಯರು ಅದ್ಭುತ ಅನುಭವ, ಹೃದಯಂಗಮವಾಗಿ ಬರೆದಿದ್ದಿರಿ, ಎಲ್ಲರೂ ಓದಬೇಕಾದ ಪ್ರಸಂಗ ಎಂದು ನನಗೆ ರಿಪ್ಲೈ ಮಾಡಿದರೆ ಅಮೇರಿಕಾದ ಅಳಿಯ, ಹೈದರಾಬಾದಿನ ತಂಗಿಯರು, ಚೈನ್ನೈನ ಅಕ್ಕಂದಿರು ‘ಅಣ್ಣ, ನಿಮ್ಮದೆಂಥ ಉದಾರ ಬುದ್ದಿ, ಸಾಮಾನ್ಯ ಹಾಸ್ಯಗಾರನೊಬ್ಬನ ಜೀವನದ ಕಳಪೆ ಪ್ರಸಂಗವನ್ನು ಅದೆಷ್ಟು ಗಮನವಿಟ್ಟು ಓದಿದ್ದೀರಿ, ಯು. ಆರ್. ಗ್ರೇಟ್’ ಎಂದು ರಾಯರನ್ನೇ ಪ್ರೋತ್ಸಾಹಿಸುತ್ತಿದ್ದರು. ಇನ್ನು ಅಮೇರಿಕಾದ ಅಳಿಯನಂತೂ, ‘ನಮ್ಮ
ರಾಯಲ್ ಫ್ಯಾಮಿಲಿ ಈ ಗ್ರೂಪಿನಲ್ಲಿ ಒಬ್ಬ ಕನ್ನಡ ಕವಿಯನ್ನು ಸೇರಿಸಿಕೊಂಡಿರುವುದು ನಿಮ್ಮ ಸಾಹಿತ್ಯ ಪ್ರೇಮಕ್ಕೆ ಸಾಕ್ಷಿ, ನಮಗಾರಿಗೂ ಅದು ಹಿಡಿಸಿಲ್ಲ, ಬಟ್, ನೀವು ಅಲ್ಪರಿಗೂ ಕೊಡುವ ಗೌರವದ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಉತ್ತರಿಸಿದ್ದರು.

ಹೈದರಾಬಾದ್ ತಂಗಿಯರು, ಅವರ ಮಕ್ಕಳು ‘ಮಾಮಾ, ನೀವು ಹಿಂದೆ ಹೇಳುತ್ತಿದ್ದ ಹಳೆಯ ಜೋಕ್ ನೆನಪಾಯಿತು. ಅದು ನಿಮ್ಮ
ಬಾಯಿಂದಲೇ ಚೆಂದ, ಎಲ್ಲಿ ನಿಮ್ಮ ವಾಯ್ಸ್ ಮೆಸೇಜ್ ಮೂಲಕ ಅದನ್ನು ಕಳಿಸಿ’ ಎಂದೇ ವಿನಂತಿಸುತ್ತಿದ್ದರು. ಸೊಸೆಯಂದಿರೆಲ್ಲ “ಮಾಮ ಯು.. ಆರ್.. ಗ್ರೇಟ್, ನಾವು ಬ್ಲೆಸ್ಡ್ ಎಂದೇ ಮೆಸೆಜ್ ಮಾಡುತ್ತಿದ್ದರಾಗಲಿ, ನನ್ನ ಬಗ್ಗೆಯಾಗಲಿ, ನನ್ನ ಮೆಸೇಜ್ ಬಗ್ಗೆ ಆಗಲಿ ಉತ್ತರ ವಿರುತ್ತಿರಲಿಲ್ಲ. ಇನ್ನು ಅವರ ಬೀಗರುಗಳಂತೂ, ‘ಯಾರದೋ ಮೆಸೇಜ್‌ಗೆ ನೀವು ತುಂಬಾ ಬೆಸ್ಟ್ ರಿಯಾಕ್ಟ್ ಮಾಡಿದ್ದೀರಿ, ನಾನು ಅವರ ಮೆಸೇಜ್ ನೋಡಿಲ್ಲ, ನೋಡುವುದೂ ಬೇಕಿಲ್ಲ’, ನಿಮ್ಮ ಉತ್ತರ ರೂಪದ ಅಭಿಪ್ರಾಯವನ್ನೇ ನಾನು ಗೌರವಿಸುತ್ತೇನೆ.

ನಿಮ್ಮ ಬೀಗರಾಗಿರುವುದು ನಮಗೂ ಗೌರವ, ನಮ್ಮ ಮಗಳು ನಿಮ್ಮ ಮನೆ ಸೊಸೆಯಾಗಿರುವುದು ಅವಳ ಪುಣ್ಯ’ ಎಂದೆಲ್ಲ ಗುಣಗಾನ ಉತ್ತರದ ಸಂದೇಶವಿತ್ತು. ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಗೋಪಾಲರಾಯರು ಬಂದಾಗ ನನ್ನ ಜೊತೆ ಒಂದು ಸೆಲ್ಫಿ ತೆಗೆಸಿ ಕೊಂಡು ಅದನ್ನು ಗ್ರೂಪ್‌ಗೆ ಹಾಕಿದರು ನೋಡಿ, ಇಡೀ ಒಂದು ವಾರ ಅವರ ಮಕ್ಕಳು ‘ಡ್ಯಾಡಿ, ನಿಮಗೆ ಎಪ್ಪತ್ತಾಯಿತು ಎಂದು ಅಂದವರು ಯಾರು? ನೀವು ಲುಕಿಂಗ್ ಸೋ ಯಂಗ್’, ಸೊಸೆಯಂದಿರು ‘ಮಾವಾ, ನಿಮ್ಮ ಆರೋಗ್ಯ ತುಂಬಿದ ದೇಹ, ಹೊಳೆಯುವ ಮುಖ ಸೂಪರ್, ಹೋದ ಜನ್ಮದಲ್ಲಿ ನೀವು ಮಹಾರಾಜರಾಗಿದ್ದಿರೋ ಏನೋ, ಅಂಥ ವರ್ಚಸ್ಸು ಮುಖದಲ್ಲಿ, ನಿಮ್ಮ ಮಗನೂ ನಿಮದೇ
ಪಡಿಯಚ್ಚು, ಅದೇ ತುಂಟ ನಗು’.

ಕೆಲವರಂತೂ ಆ ಫೋಟೊವನ್ನು ಕ್ರಾಪ್ ಮಾಡಿ ನನ್ನನ್ನು ಕಟ್ ಮಾಡಿ ಅವರದೊಂದನ್ನೇ ಪ್ರತ್ಯೇಕಿಸಿದ್ದರು. ಒಬ್ಬರೂ ನಿಮ್ಮ ಜೊತೆ ನಿಂತವರು ಯಾರು? ಅವರ ಜತೆ ಏಕೆ ನಿಂತಿದ್ದೀರಿ? ಎಂದೂ ಕೇಳಿದ್ದಿಲ್ಲ. ಸ್ವಜನ ಪಕ್ಷಪಾತ ಶಬ್ದದ ಅರ್ಥವೇನೆಂದು ನನಗೆ ಳಿದಿದ್ದೇ ಆಗ. ಇಂಥ ಕೇವಲ ಸ್ವಜನ ಪಕ್ಷಪಾತದ ಜನರು ಸಾವಿರಾರು ಇದ್ದಾರೆ. ಇವರಿಗೆ ಇರಲೊಂದು ಮನೆ, ಮಾಡಲೊಂದು ನೌಕರಿ, ಊರು ಸುತ್ತಲು ಒಂದು ಕಾರು ಇದ್ದರೆ ದೇಶದಲ್ಲಿ, ಪ್ರಪಂಚದಲ್ಲಿ ಹೋಗಲಿ ತಾವಿರುವ ಊರಿನಲ್ಲೇ ಯಾರಿದ್ದಾರೆ. ಎಲ್ಲಿ ಏನು ನಡೆದಿದೆ ಎಂಬುದರ ಪರಿವೇ ಇರುವುದಿಲ್ಲ. ನೋಡಿ ಕಲಿಯುವ, ಇನ್ನೊಬ್ಬರೊಂದಿಗೆ ಬೆರೆಯುವ ಮನಸ್ಸಂತೂ ಕೇಳಲೇಬೇಡಿ. ತಮ್ಮ ಸೇಫ್ ಜೋನ್ ಆಚೆಗೆ ಇವರಿಗೆ ಏನೂ ಬೇಕಿಲ್ಲ. ತಮ್ಮನ್ನು, ಈ ದೇಶವನ್ನು ಯಾರು ಆಳಿದರೂ, ಆಳುತ್ತಿದ್ದರೂ ಇವರಿಗೆ ಗೊತ್ತಾಗುವು ದಿಲ್ಲ, ಇವರುಗಳು ಮತವನ್ನೂ ಹಾಕುವುದಿಲ್ಲ, ಮತದಾನ ದಿನದ ರಜೆಯಂದು ಔಟಿಂಗ್ ಎಂದು ಪಿಕ್ನಿಕ್ ಸ್ಪಾಟ್‌ಗೆ ಹೋಗಿ ಉಡಾಯಿಸಿ ಬಿಡುತ್ತಾರೆ.

ತಮ್ಮ ಸುಖವೇ ಸುಖ, ತಾವೇ ಶ್ರೇಷ್ಠರು, ಸುಂದರರು, ಉತ್ತಮ ವಂಶಜರು ಎಂದೇ ಭಾವಿಸಿ, ಜೀವಿಸಿ, ಜೀವನವನ್ನು ಮುಗಿಸಿಯೇ ಬಿಡುತ್ತಾರೆ. ಇವರೆಲ್ಲ ಜೀವನದ ಆಟಕ್ಕುಂಟು ಲೆಕ್ಕಕ್ಕಿಲ್ಲದವರು. ಅದಕ್ಕೆ ನಾನು ಅನಾಥನಂತೆ ನನಗೊಬ್ಬನಿಗೆ ಮೆಸೇಜ್ ಕಳಿಸಿರಿ. ನಿಮ್ಮ ಗ್ರೂಪ್‌ಗಳಲ್ಲಿ ಹಾಕಿ ನನ್ನ ಮರ್ಯಾದೆ ತೆಗೆಯಬೇಡಿ. ಹಾಗೆಯೇ ಗುಂಪಿನಲ್ಲಿ ಗೋವಿಂದ ಆಗುವುದನ್ನು ತಪ್ಪಿಸಿರಿ. ರಸ್ತೆಯಲ್ಲಿ ಹಾದು ಹೋಗುವಾಗ ನಮ್ಮನ್ನು ನೋಡಿಯೂ ನೋಡದಂತೆ ಹೋಗುವವರು ಎಷ್ಟೋ ಗೌರವ ಕೊಟ್ಟಂತೆ. ಆದರೆ ಈ ಗ್ರೂಪ್‌ನಲ್ಲಿ ಇರುತ್ತಾರಲ್ಲ ಇವರು, ನಿಮ್ಮೊಂದಿಗೆ ಮಾತನಾಡುತ್ತ ನಮ್ಮನ್ನು ನೋಡಿ ಕಣ್ಣು ಕೆಕ್ಕರಿಸುವುದನ್ನು ತಪ್ಪಿಸಿ. ನಿಮಗೂ ಇಂತಹ ಅನುಭವ ಆಗಿದ್ದರೆ ಈ ಲೇಖನಕ್ಕೆ ನಿಮ್ಮ ಸಹಮತವಿದೆ ಎಂದು ಭಾವಿಸುತ್ತೇನೆ. ರಾಯಲ್ ಫ್ಯಾಮಿಲಿಗಳ ರಿಯಾಲಿಟಿಯೇ ಇದು.